ಈ ದಿನ ಬೆಳಿಗ್ಗೆ ’ಅವಧಿ’ ಅಂತರ್ಜಾಲದ ಮುಖ ಪುಟ ತೆರೆದಾಗ..

ಜಗದೀಶ್ ಕೊಪ್ಪ

ಈ ದಿನ ಬೆಳಿಗ್ಗೆ ’ಅವಧಿ’ ಅಂತರ್ಜಾಲದ ಮುಖ ಪುಟ ತೆರೆದಾಗ ಕಣ್ಣಿಗೆ ಬಿದ್ದ ಸಿ.ಜಿ.ಕೆ,ಯವರ ಈ ಚಿತ್ರ ಬೆಳಿಗ್ಗೆಯಿಂದ ನನ್ನನ್ನು ಕಾಡುತ್ತಲೇ ಇದೆ. ಅವರ ಜೊತೆಗಿನ ಒಡನಾಟ, ಮಾತು, ಸಿಟ್ಟು, ಹಾಸ್ಯ ಪ್ರಸಂಗಗಳು ಎಲ್ಲವೂ ಒಂದೇ ಸಮನೆ ನೆನಪಾಗುತ್ತಿವೆ.

28 ವರ್ಷದ ಹಿಂದೆ ನಾವು ಒಂದಿಷ್ಟು ಗೆಳೆಯರು ಸುದ್ಧಿ ಸಂಗಾತಿ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆವು. ಬೆಂಗಳೂರು ವಿ.ವಿ.ಯಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದ ಸಿ.ಜಿ.ಕೆ. ಪ್ರತಿವಾರ ತಪ್ಪದೇ ಬೆಂಗಳೂರಿನ ವಿಜಯನಗರದಲ್ಲಿದ್ದ ನಮ್ಮ ಕಛೇರಿಗೆ ಬರುತ್ತಿದ್ದರು. ಪತ್ರಿಕೆಗೆ ಕರ್ನಾಟಕದ ರಾಜಕೀಯ ವಿದ್ಯಾಮಾನಗಳ ಜೊತೆಗೆ ಧಾರವಾಹಿ ಬರೆಯುವ ಜವಾಬ್ದಾರಿಯನ್ನು ಎನ್.ಎಸ್,ಶಂಕರ್ ವಹಿಸಿಕೊಂಡಿದ್ದರು. ಮಂಗ್ಳೂರು ವಿಜಯರವರು ರಾಷ್ಟ್ರದ ವಿದ್ಯಾಮಾನ ಕುರಿತಂತೆ ಎರಡು ಪುಟಗಳ ಲೇಖನವನ್ನು ಪ್ರತಿವಾರ ಬರೆಯುತ್ತಿದ್ದರು. ಕೋಟಗಾನಹಳ್ಳಿ ರಾಮಯ್ಯನವರು ಸಿನಿಮಾ ಪುಟಗಳ ಜೊತೆಗೆ ಸ್ವಾರಸ್ಯಕರವಾದ ಅಂತರಾಷ್ಟ್ರೀಯ ವಿದ್ಯಾಮಾನಗಳನ್ನು ಬರೆಯಬೇಕಿತ್ತು. ಪ್ರತಿ ಬುಧವಾರ ಸಂಜೆ ನಾಲ್ಕು ಗಂಟೆಗೆ ಪತ್ರಿಕೆ ಮುದ್ರಣಕ್ಕೆ ಹೋಗುತ್ತಿತ್ತು. ರಾಮಯ್ಯನವರು ಸಿನಿಮಾ ಪುಟಗಳನ್ನು ತುಂಬಿಸಿ, ಅಂತಾರಾಷ್ಟ್ರಿಯ ಸುದ್ಧಿಗಳ ವಿದ್ಯಾಮಾನ ಬರೆಯುವುದಕ್ಕೆ ತಿಣುಕಾಡುತ್ತಿದ್ದರು. ಆವಾಗ ಅವರ ಪುಟಗಳನ್ನು ನಾನು ತುಂಬಿಸಿಕೊಡುತ್ತಿದ್ದೆ.
ಒಂದು ಬುಧವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಕಛೇರಿಗೆ ಬಂದ ಸಿ.ಜಿ.ಕೆ. “ಏನ್ ಮಾಡ್ತಾ ಇದಿರಾ?” ಬನ್ನಿ ಚಹಾ ಕುಡಿಯುವಾ ಅಂತಾ ಹತ್ತಿರದ ಹೋಟೇಲ್ ಗೆ ನನ್ನನ್ನು, ಕೆ.ರಾಮಯ್ಯನವರನ್ನು ಕರೆದುಕೊಂಡು ಹೋದರು. ಆ ದಿನ ರಾಮಯ್ಯನವರ ಎರಡು ಪುಟಕ್ಕೆ ಇಬ್ಬರೂ ಒಂದಕ್ಷರನ್ನೂ ಬರೆದಿರಲಿಲ್ಲ. ರಾಮಯ್ಯ, ಅಂಕಣ ಬರೆಯುವ ಕಷ್ಟವನ್ನು ಸಿ.ಜಿ.ಕೆ.ಗೆ ಒಪ್ಪಿಸುತ್ತಿದ್ದರು. ಚಹಾ ಕುಡಿಯುತ್ತಿದ್ದ ಸಿ.ಜಿ.ಕೆ. ನನ್ನತ್ತ ತಿರುಗಿ “ ಲೇ ಕೊಪ್ಪ, ನೀನು ಮುಂದಿನ ವಾರದಿಂದ ಇವನಿಗೆ ಏನು ಬರೆದು ಕೊಡಬೇಡ” ಎಂದರು. ನಂತರ ರಾಮಯ್ಯನವರತ್ತ ತಿರುಗಿ “ ಲೇ ರಾಮ, ಆ ಎರಡು ಪುಟಕ್ಕೆ ರಾಂಪುಟ ಅಂತಾ ಹೆಡ್ಡಿಂಗ್ ಕೊಟ್ಟು ಹಾಗೇ ಬಿಟ್ಟು ಬಿಡು. ಮನೇಲಿ ಮಕ್ಕಳು ಹೋಂ ವರ್ಕು, ಗಣಿತ ಲೆಕ್ಕ ಮಾಡಕೆ ಆಯ್ತದೆ” ಎಂದರು. ನನಗೆ ಸಿ.ಜಿ.ಕೆ. ಮಾತು ಕೇಳಿ ನಗು ತಡೆಯಲಾರದೆ. ಕುಡಿಯುತ್ತಿದ್ದ ಚಹಾವನ್ನು ಮೈ ಮೇಲೆ ಚೆಲ್ಲಿಕೊಂಡಿದ್ದೆ.

ಅವರು ಸಂಜೆ ವೇಳೆ ರವೀಂದ್ರ ಕಲಾಕ್ಷೇತ್ರದ ಹೊರಗಿನ ಉದ್ಯಾನವನದಲ್ಲಿ ನಾಟಕ ರಿಹರ್ಸಲ್ ನಡೆಸುತ್ತಿದ್ದರು. ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿಗೆ ಹೋಗುತ್ತಿದ್ದೆ. ಅಲ್ಲಿದ್ದ ಭಟ್ಟರ ಕ್ಯಾಂಟಿನ್ ನಲ್ಲಿ ಅವರ ಜೊತೆ ಕಾಫಿ ಅಥವಾ ಚಹಾ ಕುಡಿದು, ಅವರ ನಾಟಕದ ತಾಲೀಮು ನೋಡುತ್ತಾ ಕೂರುತ್ತಿದ್ದೆ. ಹೊರಗೆ ಸದಾ ಹಾಸ್ಯ ಚಟಾಕಿ ಹಾರಿಸುತ್ತಿದ್ದ ಸಿ.ಜಿ.ಕೆಯವರು ನಾಟಕದ ತಾಲೀಮಿನಲ್ಲಿ ಅಪ್ಪಟ ದೂರ್ವಾಸ ಮುನಿಯಾಗಿ ಬಿಡುತ್ತಿದ್ದರು. ನಟರಿಂದ ಸರಿಯಾದ ಸಂಭಾಷಣೆ ಮತ್ತು ನಟನೆ ತೆಗೆಯುವವರಿಗೂ ಬಿಡುತ್ತಿರಲಿಲ್ಲ. ಅವರ ಕಣ್ಣುಗಳು, ಕೆಂಪಾಗಿ, ಮುಖ ಸಿಟ್ಟಿನಿಂದ ಮತ್ತಷ್ಟು ಕೆಂಪಾಗುತ್ತಿದ್ದವು. ರಿಹರ್ಸಲ್ ಮುಗಿದ ತಕ್ಷಣ ಹುಡುಗರನ್ನು ಕ್ಯಾಂಟಿನ್ ಗೆ ಕರೆದೊಯ್ದು ಖಾಲಿ ದೋಸೆ, ಕಾಫಿ ಕುಡಿಸಿ, “ಬೈದುದಕ್ಕೆ ಬೇಜಾರ್ ಮಾಡ್ಕೋಬೇಡಿ ಕಣ್ರಲೇ” ಎಂದು ಸಂತೈಸುತ್ತಿದ್ದರು. ರಾತ್ರಿಯಾದ ಮೇಲೆ ನಾವು ನಾಲ್ಕಾರು ಗೆಳೆಯರು ಟೌನ್ ಹಾಲ್ ಮುಂಭಾಗದ ಕೆನರಾ ಬ್ಯಾಂಕ್ ಮುಖ್ಯ ಕಛೇರಿ ಹಿಂಭಾಗದಲ್ಲಿ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇತ್ತು. ಅಲ್ಲಿ ಸೇರುತ್ತಿದ್ದೆವು. ಅವರಿಗೆ ಆ ಹೋಟೆಲ್ ನಲ್ಲಿ ದೊರೆಯುತ್ತಿದ್ದ ಬೋಟಿ ಮತ್ತು ಕೈಮಾ ಎಂದರೆ, ತುಂಬಾ ಇಷ್ಟ. ನಾವು ಗೆಳೆಯರು ಅವುಗಳ ಜೊತೆಗೆ ಒಂದಿಷ್ಟು ಓಲ್ಡ್ ಮಂಕ್ ರಮ್ ಏರಿಸುತ್ತಿದ್ದೆವು. ಪ್ರತಿ ಸಲವೂ ಕಾಫಿ, ಚಹಾ, ಸಿಗರೇಟ್, ಹಾಗೂ ಬಾರ್ ನ ಬಿಲ್ ಅನ್ನು ಅವರೇ ಪಾವತಿಸುತ್ತಿದ್ದರು. ಅವರ ಈ ಪ್ರವೃತ್ತಿ ಗೊತ್ತಿದ್ದ ನಾವು ಅವರಿಗೆ ಗೊತ್ತಿಲ್ಲದಂತೆ ಮುಂಚಿತವಾಗಿ ಬಿಲ್ ಪಾವತಿಸಿಬಿಟ್ಟರೆ, “ ಥೂ ಬಡ್ಡೆತ್ತವಾ” ಎಂದು ಬೈದು, ಬಾಯಿಗೆ ಸಿಗರೇಟ್ ಇಟ್ಟುಕೊಂಡು, ಹೊಗೆ ಬಿಡುತ್ತಾ ಆಟೊ ಹತ್ತಿ ಮನೆಯತ್ತ ತೆರಳುತ್ತಿದ್ದರು. ಅವರ ಪಾಲಿಗೆ ಪ್ರತಿ ತಿಂಗಳೂ ಬರುತ್ತಿದ್ದ ಸಂಬಳ ಹಣ ಜೇಬಿನಲ್ಲಿದ್ದರೆ, ಅದು ಮಡಿಲಿಗೆ ಕಟ್ಟಿಕೊಂಡ ಕೆಂಡದಂತೆ ಇರುತ್ತಿತ್ತು. ಅದು ಖರ್ಚಾಗುವ ತನಕ ಅವರಿಗೆ ಸಮಾಧಾನ. ಇರುತ್ತಿರಲಿಲ್ಲ. ಅವರ ಬಹತೇಕ ಸಂಪಾದನೆಯ ಹಣ, ಅವರ ಆಟೋ ಓಡಾಟಕ್ಕೆ ಮತ್ತು ಗೆಳೆಯರ ಕಾಫಿ, ಸಿಗರೇಟು ಮತ್ತು ಊಟಕ್ಕೆ ಖರ್ಚಾಗುತ್ತಿತ್ತು. ಅವರು ಯಾವಾಗಲೂ ಒಬ್ಬ ಅಶಾಂತ ಸಂತನಂತೆ ನನಗೆ ಕಂಡು ಬರುತ್ತಿದ್ದರು. ಸದಾ ಪರಿಪೂರ್ಣತೆಗಾಗಿ ತುಡಿಯುವ ಜೀವ ಅವರದಾಗಿತ್ತು. ದೇವನೂರು ಮಹಾದೇವರ ಒಡಲಾಳ ನಾಟಕವನ್ನು ಅವರು ಪ್ರಥಮಬಾರಿಗೆ ಪ್ರದರ್ಶನಕ್ಕೆ ತರುವ ಮುನ್ನ, ಅದರ ರಿಹರ್ಸಲ್ ನಲ್ಲಿ ಸಿ,ಜಿ.ಕೆ. ಯವರಿಗೆ ರಂಗಭೂಮಿಯ ಕುರಿತು ಇರುವ ಬದ್ಧತೆ ಕಂಡು ಬೆರಗಾಗಿದ್ದೆ. ಒಡಲಾಳದ ನಾಟಕದಲ್ಲಿ ಸಾಕವ್ವನ ಪಾತ್ರ ನಿಜಕ್ಕೂ ಸವಾಲಾಗಿತ್ತು.

ಅದನ್ನು ಅವರು ಉಮಾಶ್ರೀಯವರ ಮೂಲಕ ಮಾಡಿಸಿ, ಉಮಾಶ್ರೀಯವರ ಒಳಗಿದ್ದ ಅದ್ಭುತ ಕಲಾವಿದೆಯನ್ನ ಹೊರ ಜಗತ್ತಿಗೆ ಪರಿಚಯಿಸಿದ್ದರು. ಉಮಾಶ್ರಿಯವರು ತಮ್ಮ ಮುವತ್ತರ ವಯಸ್ಸಿನಲ್ಲಿ ಸಾಕವ್ವ ಎಂಬ ದಲಿತ ವೃದ್ದೆಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ನಾಟಕ ಪ್ರದರ್ಶನಕ್ಕೆ ಮುನ್ನ ಕಪ್ಪು ಮಣ್ಣಿನಿಂದ ಕೂಡಿದ ಕೆಸರಿನ ಮಣ್ಣನ್ನು ಮೈ ತುಂಬಾ ಹಚ್ಚಿಕೊಂಡು ಅದು ಒಣಗಿ ಬಿರುಕು ಬಿಡುವವರೆಗೂ ಅವರು ಕಾಯಬೇಕಿತ್ತು. ಆವಾಗ. ಅವರ ಮುಖ, ಕುತ್ತಿಗೆ, ತೋಳು ಇವೆಲ್ಲವೂ ಬಿರುಕು ಬಿಟ್ಟ ವೃದ್ದೆಯ ಮೈ ಚರ್ಮದಂತೆ ಗೋಚರಿಸುತ್ತಿದ್ದವು.
ನಾಟಕದ ಮೊದಲ ಪ್ರದರ್ಶನಕ್ಕೆ ನಾನು ಸಾಕ್ಷಿಯಾಗಿದ್ದೆ. ನಾಟಕದಲ್ಲಿ ಸಾಕವ್ವ ಕಳೆದು ಹೋಗಿರುವ ಕೋಳಿಯನ್ನು ಹುಡುಕಿಕೊಂಡು ಬರುವ ದೃಶ್ಯವನ್ನು ನೋಡುತ್ತಿದ್ದಂತೆ, ನನ್ನ ಕಣ್ಣಲ್ಲಿ ನೀರು ಹರಿದಿದ್ದವು. ಆ ದಿನ ನಾನು ಸಿ.ಜಿ.ಕೆ.ಯವರನ್ನು ಜಾಗತಿಕ ಮಟ್ಟದ ರಂಗಭೂಮಿಯ ನಿರ್ದೇಶಕ ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡೆ.
ಭಾರತೀಯ ಚಿತ್ರ ರಂಗಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇರುವಂತೆ ರಂಗಭೂಮಿಗೆ ಇದ್ದಿದ್ದರೆ, ಅದು ನಮ್ಮ ಸಿ.ಜಿ.ಕೆ. ಮತ್ತು ಉಮಾಶ್ರೀಯವರಿಗೆ ಖಂಡಿತಾ ಸಲ್ಲುತ್ತಿತ್ತು. ಸಿ.ಜಿ.ಕೆ. ಯವರು ಏನು ಮುಟ್ಟಿದರೂ ಅದಕ್ಕೆ ಮಾಂತ್ರಿ ಸ್ಪರ್ಶ ನೀಡುತ್ತಿದ್ದರು. ತಮ್ಮ ಸೇವೆಯ ಕೊನೆಯ ದಿನಗಳಲ್ಲಿ ಬೆಂಗಳೂರು ವಿ.ವಿ.ಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದರು. ಅವರು ಆ ಸಮಯದಲ್ಲಿ ಹಮ್ಮಿಕೊಂಡ ಅನೇಕ ಯೋಜನೆಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಈ ದಿನ ಬೆಂಗಳೂರಿನಲ್ಲಿ ಅವರ ನೆನಪಿನಲ್ಲಿ ಅವರೇ ಹುಟ್ಟು ಹಾಕಿದ ರಂಗನಿರಂತರ ಸಂಸ್ಥೆಯಿಂದ ನಾಟಕೋತ್ಸವ ನಡೆಯುತ್ತಿದೆ. ಅವರ ಗರಡಿಯಲ್ಲಿ ಬೆಳೆದು ಬಂದು ಈಗ ಸಚಿವೆಯಾಗಿರುವ ಉಮಾಶ್ರೀ ಅವರಿಂದ ಉದ್ಘಾಟನೆಯಾಗಿದೆ. ಸಂಜೆ ಗೆಳೆಯ ಹಾಗೂ ಮೈಸೂರು ರಂಗಾಯಣದ ನಿರ್ದೇಶಕ ಜನ್ನಿಗೆ ಫೋನ್ ಮಾಡಿ ಸಿ.ಜಿ.ಕೆ. ನೆನಪುಗಳನ್ನು ಜ್ಞಾಪಿಸಿದೆ. ಆತ ಸುಮಾರು ನಲವತ್ತು ನಿಮಿಷಗಳ ಕಾಲ ಮಾತನಾಡಿ, “ಕನ್ನಡ ಕನ್ನಡ ರಂಗಭೂಮಿಯಲ್ಲಿ ನಾಟಕವನ್ನು ಉಸಿರಾಡಿದ ಮಹನೀಯರಲ್ಲಿ ಬಿ.ವಿ. ಕಾರಂತರು ಮತ್ತು ಸಿ.ಜಿ.ಕೆ ಮುಖ್ಯರಾದವರು” ಎಂದ. ನನ್ನ ಪಾಲಿಗೆ ಅದು ಅರ್ಥಪೂರ್ಣ ವಾಖ್ಯಾನ ಎನಿಸಿತು.
 

‍ಲೇಖಕರು G

April 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಎಚ್.ಎಸ್. ರಾಘವೇಂದ್ರ ರಾವ್

    ಈ ಬರವಣಿಗೆ ಚೆನ್ನಾಗಿದೆ. ಸಿ.ಜಿ.ಕೆ.ಯವರು ಇದ್ದುದು ಹೀಗೆಯೇ. ಬಹಳ ಸಂಕೀರ್ಣ ವ್ಯಕ್ತಿತ್ವ. ಆದರೆ ಅವರ ಬದ್ಧತೆ, ಜನಪರತೆ ಮತ್ತು ಹೆಂಗರುಳುಗಳು ಪ್ರಶ್ನಾತೀತ. ಅವರ ಆತ್ಮಕಥೆಯನ್ನು ಹೊಸ ಪೀಳಿಗೆಯವರು ಹುಡುಕಿಕೊಂಡು ಓದಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: