ಕುಂ ವೀ ಕಂಡ ಇಂಥವರು..

kum vi1

ಕುಂ ವೀರಭದ್ರಪ್ಪ 

ಇಂಥವರು ಇರುವರು ಎಂದು ತಿಳಿದದ್ದು ಕೆಲವು ತಿಂಗಳ ಹಿಂದೆ,

ಇಂಥಲ್ಲಿಗೆ ಬರಬೇಕೆಂದು ಯಾರೋ ಕರೆದರು, ಪ್ರಿಯಮಿತ್ರ ಆಥಣಿಯ ಪ್ರೊ ಸಿದ್ದಣ್ಣ ಉತ್ನಾಳ ಫೋನಿನಲ್ಲಿ ಒತ್ತಡ ಹೇರಿದರು, ಸುರಪುರದಂಥ ಐತಿಹಾಸಿಕ ಸ್ಥಳಗಳು ಮೊದಲಿನಿಂದ ಇಷ್ಟ, ‘ಅರಮನೆ’ ಕಾದಂಬರಿ ಬರೆಯುವ ಪೂರ್ವದಲ್ಲಿ ಅಲ್ಲಿ ಮೂರ್ನಾಲ್ಕು ದಿವಸಗಳ ಕಾಲ ಕ್ಷೇತ್ರಕಾರ್ಯ ಕೈಗೊಂಡಿದ್ದೆ. ಅರಮನೆ ಹಾಗು ಕೋಟೆಕೊತ್ತಳ ಗುಡ್ಡಗಾಡು ಅಲೆದಿದ್ದೆ.

ಡಾ ಹೆಚ್. ಜಿ. ದಡ್ಡಿ

ಡಾ ಹೆಚ್. ಜಿ. ದಡ್ಡಿ

ಹತ್ತೊಂಭತ್ತನೆ ಶತಮಾನದ ಆರಂಭದಲ್ಲಿ ಸುರುಪುರ ಸಂಸ್ಥಾನದ ಆಡಳಿತಗಾರ ಅಲ್ಲಿನ ಸ್ಥಳೀಯರಿಂದ ಮಹಾದೇವಸ್ವಾಮಿ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದ ಮೆಡೋಸ್ ಟೇಲರ್ ನ ಬಹುಮುಖ ಪ್ರತಿಭೆ ನನ್ನನ್ನು ಬೆರಗುಗೊಳಿಸಿತ್ತು. ಆತನ ‘Confession of a thug’  ನನಗೆ ಹಿಡಿಸಿತ್ತು, ಆತ ಕಟ್ಟಿಸಿದ್ದ ಬಂಗಲೆ! ಒಂದು ಬಾಗಿಲು ತೆರೆದರೆ ಉಳಿದೆಲ್ಲ ಬಾಗಿಲುಗಳು ತೆರೆದುಕೊಳ್ಳುವ ವಿಶಿಷ್ಟ ವಾಸ್ತು ನಿಗೂಢ ತಾಂತ್ರಿಕತೆಯ ಅದು ಟೇಲರ್ ಮಂಜಿಲ್ ಎಂದೆ ಹೆಸರಾಗಿದೆ.

ಕೇಳಿದ ಪ್ರವಾಸಿಗರಿಗೆಲ್ಲ ತೆರೆದೂ ತೆರೆದು ಅಲ್ಲಿನ ಬಾಗಿಲುಗಳ ಕಾರ್ಯಕ್ಷಮತೆ ಕ್ಷೀಣಿಸಿದೆ, ಆದೊಂದು ಪುಳಕಗೊಳಿಸುವ ಕಟ್ಟಡ.. ಸಗರನಾಡೆಂದೆ ಹೆಸರಾಗಿರುವ ಅದು ನಯನಮನೋಹರ ಗುಡ್ಡಗಾಡು ಪ್ರದೇಶ. ಕೀಳರಿಮೆಯ ನಿರುಪದ್ರವಿ ಪ್ರಜಾನಿಕವಿರುವ ಕಲ್ಯಾಣ ಕರ್ನಾಟಕ.

ನಮ್ಮನ್ನು ಆಮಂತ್ರಿಸಿದ್ದ ಪ್ರಾಯೋಜಕ ಯುವಕ ಆ ಪ್ರದೇಶದ ಪ್ರತಿರೂಪದಂತಿದ್ದ. ಕಾರ್ಯಕ್ರಮವಿದ್ದದ್ದು ಕೆಂಭಾವಿ ಸಮೀಪದ ಹಳ್ಳಿಯಲ್ಲಿ. ಆ ಹಳ್ಳಿ ಸಹ ದಾರಿದ್ರ್ಯದ ಪ್ರಸಾಧನ ಲೇಪಿಸಿಕೊಂಡಿತ್ತು. ವಿದ್ಯುತ್ ತಾಪತ್ರಯದಿಂದ ಕಾರ್ಯಕ್ರಮ ಎರಡು ತಾಸು ತಡವಾಗಿ ಆರಂಭವಾಯಿತು, ಸ್ಥಿರಚಿತ್ರಗಳ ಪ್ರದರ್ಶನ ಉದ್ಘಾಟಿಸುವ ಸರದಿ ನನ್ನದಿತ್ತು, ಅರೆಬರೆ ಬೆಳಕಿನಲ್ಲಿ ಛಾಯಾ ಚಿತ್ರಗಳನ್ನು ನಿಖರವಾಗಿಯು, ಛಾಯಾಗಾಹಕರನ್ನು ಸ್ಪಷ್ಟವಾಗಿಯು ನೋಡುವುದಾಗಲಿಲ್ಲ.

ಆದರು..
ನಯಾಗಾರದಿಂದ ಹಿಡಿದು ಗೋಕಾಕ್ ಜಲಪಾತದವರೆಗೆ, ವಾಷಿಂಗ್ಟನ್ ನ ಶ್ವೇತಭವನದಿಂದ ಹಿಡಿದು ಬಾಗಲಕೋಟೆಯ ಸಣ್ಣ ವಾಡೆವರೆಗೆ ನೂರಾರು ವೈವಿದ್ಯಮಯ ಹಾಗು ಅರ್ಥಪೂರ್ಣ ಛಾಯಾಚಿತ್ರಗಳನ್ನು ಅಲ್ಲಿ ಪ್ರದರ್ಶಿಸಲಾಗಿತ್ತು. ಛಾಯಾಗ್ರಾಹಕ ದಡ್ಡಿ ತಜ್ಞ ವೈದ್ಯರೆಂದು ಬಳಿಕ ತಿಳಿಯಿತು. ಅವರ ಮಾತುಗಳಲ್ಲಿನ ಗ್ರಾಮೀಣ ಕಳಕಳಿ ಹಿಡಿಸಿತು. ನಮ್ಮ ಹಿಂದುಳಿದ ಗ್ರಾಮೀಣ ಜನತೆಯ ಅನುಭವ ಜಗದಗಲ ವಿಸ್ತಾರಗೊಳ್ಳಬೇಕೆಂಬ ಆಸೆಯಿಂದ ಇಂಥ ಪ್ರದರ್ಶನಗಳನ್ನು ಅವಕಾಶವಿದ್ದೆಡೆ ಏರ್ಪಡಿಸುವೆನೆಂದು ಅವರು ವಿವರಿಸಿದರು.

ಇಂಥವರು ಇರುತ್ತಾರೆಯೆ ಎನ್ನುವ ಪ್ರಶ್ನೆಗೆ ಡಾ ಹೆಚ್. ಜಿ. ದಡ್ಡಿ ಅತ್ಯುತ್ತಮ ನಿದರ್ಶನ. ನನ್ನ ಸಂದೇಹಕ್ಕೆ ಉತ್ತರವಾಗಿ ತಮ್ಮೆರಡು ಕೃತಿಗಳನ್ನು ಮತ್ತಿತರ ಪರಿಕರಗಳನ್ನು ಕಳಿಸಿದರು. ಅವುಗಳಲ್ಲಿ ಪ್ರಮುಖವಾಗಿ ಹಿಡಿಸಿದ್ದು Glimpses of Adil Shahi and other Monuments of Bijapur District’ಎಂಬ ಕೃತಿ.

dr daddi exhibitionಇದರಲ್ಲಿ ಐತಿಹಾಸಿಕ ನಗರ ವಿಜಯಪುರದ ಸಂಪೂರ್ಣ ಮಾಹಿತಿ ಕಿಕ್ಕಿರಿದಿದೆ, ಅಲ್ಲದೆ ಆದಿಲ್ಶಾಹಿ ಆಡಳಿತಾವಧಿಯ ಸಹಸ್ರಾರು ಭಗ್ನಾವಶೇಷಗಳ, ಮೌನಭಾಷೆಯ ಹೃದಯವಿದ್ರವಾಕ ಕಥೆಯ ಕುರುಹುಗಳಂತಿರುವ ಸ್ಮಾರಕಗಳ ಛಾಯಾಚಿತ್ರಗಳಿವೆ. ವಿಶೇಷವೆಂದರೆ ಪರಿಚಯಾತ್ಮಕ ಟಿಪ್ಪಣಿ ಪ್ರತಿ ಸ್ಥಿರ ಚಿತ್ರಕ್ಕೆ ಅಂಟಿಕೊಂಡಿರುವುದು.

ಡಾ ದಡ್ಡಿ ಈ ಕಾರ್ಯಕ್ಕೆ ಹಲವು ತಿಂಗಳು ಕಾಲ ಜಿಲ್ಲೆಯಾದ್ಯಂತ ಅಲೆದಿರುವರು, ಕಿಮ್ಮತ್ತಿನ ಕೆಮೆರಾಗಳ ವಿವಿಧ ಲೆನ್ಸುಗಳನ್ನು ಬಳಿಸಿರುವರು, ಪ್ರತಿ ಸ್ಮಾರಕಕ್ಕೆ ಕಾವ್ಯಾತ್ಮಕ ಪ್ರಭಾವಳಿ ಮುಡಿಸಿರುವರು. ಇದಕ್ಕೆ ಹಲವು ಲಕ್ಷಗಳನ್ನು ವ್ಯಯಿಸಿರುವರು. ಹೀಗಾಗಿ ಈ ಕೃತಿ ವಿಜಯಪುರ ಸಂದರ್ಶಿಸುವ ಪ್ರವಾಸಿಗರಿಗೆ ಅಭಿಮಾನಿಗಳಿಗೆ ಅತ್ಯಮೂಲ್ಯ ಮಾಹಿತಿ ಕಣಜ.

ಇದರ ಹಾಗೆ ಡಾ ಹನುಮಂತಪ್ಪ ಗೋವಿಂದಪ್ಪ ದಡ್ಡಿಯವರ ಇನ್ನೊಂದು ಮೌಲಿಕ ಕೃತಿ Glimpses of  Heritege  Monuments of Bagalakota District!   ಇದರಲ್ಲಿ ಈ ಸಿಮೆಂಟ್ ಜಿಲ್ಲೆಯ ಸಚಿತ್ರ ಸಮಗ್ರ ಮಾಹಿತಿ ಇದೆ. ಇವುಗಳನ್ನು ಹೊರತುಪಡಿಸಿ ಅರವತ್ತೈದರ ಹರೆಯದ ಡಾ ದಡ್ಡಿ ಅದಿಲ್ಶಾಹಿ ಸ್ಮಾರಕಗಳು ಒಂದು ಇಣುಕು ನೋಟ, ಬಿಜಾಪುರ ಪರಂಪರೆ ಎಂಬೆರಡು ಕೃತಿಗಳನ್ನು ಕನ್ನಡದಲ್ಲು ರಚಿಸಿದ್ದಾರೆ.

ನಿಸ್ಸಂದೇಹವಾಗಿ ಕರ್ನಾಟಕ ಪಂಜಾಬ್ ಎಂದು ಕರೆಸಿಕೊಳ್ಳುವ ವಿಜಯಪುರ ಹಾಗು ಬಾಗಲಕೋಟ ಇವೆರಡು ಭೂಪ್ರದೇಶಗಳ ಬಗ್ಗೆ ಸಮಗ್ರ ಮಾಹಿತಿ ಇರುವ ಅಪೂರ್ವ ಕೃತಿಗಳು. ಪ್ರಾಚ್ಯವಸ್ತು ಇಲಾಖೆ ಗಂಭೀರವಾಗಿ ಪರಿಗಣಿಸಿ ಗೌರವಿಸಬೇಕಾದ ಮೌಲಿಕ ಸಚಿತ್ರ ಗ್ರಂಥಗಳು. ಆದರೆ ದುರಂತವೆಂದರೆ ಕರ್ನಾಟಕ ಗ್ರಂಥಾಲಯ ಇಲಾಖೆ ಇವುಗಳ ಕಡೆ ಕಣ್ಣೊರಳಿಸಿಲ್ಲ. ಇದರಿಂದ ಡಾ ದಡ್ಡಿಯವರ ಕೃತಿಗಳು ಅವರ ದವಾಖಾನೆಯ ಮೂಲೆಯಲ್ಲಿ ಅನಾಥವಾಗಿ ಬಿದ್ದಿವೆ. ಅಹರ್ನಿಶಿ ಒಂದಲ್ಲಾ ಒಂದು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ ದಡ್ಡಿ ಆಪೇಕ್ಷಿಸಿದವರಿಗೆ ಪುಸ್ತಕ ದಾಸೋಹ ನಡೆಸುತ್ತಿರುವುದು ವಿಶೇಷ.

ಡಾ ದಡ್ಡಿ ಕೇವಲ ಲೇಖಕರು ಇತಿಹಾಸತಜ್ಞರು ಮಾತ್ರವಲ್ಲದೆ ಸಮಾಜಮುಖಿ ಸಂಘ ಸಂಸ್ಥೆಗಳ ಸಂಗಡ ನಿಕಟ ಸಂಬಂಧವಿರಿಸಿಕೊಂಡಿರುವರು. ಜಮಖಂಡಿಯಲ್ಲಿರುವ ಅವರ ದಡ್ಡಿ ಆಸ್ಪತ್ರೆ ಹೆಚ್ ಐ ವಿ ಸೋಂಕಿತರ ಸಾಂತ್ವನ ಕೇಂದ್ರ. ದಡ್ಡಿ ಏಡ್ಸ್ ತರಭೇತುದಾರರಾಗಿ ನಾಲ್ಕುನೂರಕ್ಕು ಹೆಚ್ಚು ವೈದ್ಯರನ್ನು ಸನ್ನದ್ಧಗೊಳಿಸಿರುವರು. ಏಡ್ಸ್ ಬಾಧಿತರಿರುವಲ್ಲಿಗೆ ದಾವಿಸಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ವಿಜಯಪುರ ಆದಿಲ್ಶಾಹಿ ಇತಿಹಾಸ ಕುರಿತ ಸಂಶೋಧನಾ ಕೃತಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಿಲಿಟ್ ಗೌರವಕ್ಕೆ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜಮಖಂಡಿಯ ಯುತ್ ಸ್ಪೋರ್ಟ್ಸ್  ಕ್ಲಬ್ ನ ಅಧ್ಯಕ್ಷರಾಗಿ ಸ್ಥಳೀಯ ಉದಯೋನ್ಮುಖ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇತಿಹಾಸ ಹಾಗು ಸಮಾಜದ ಸ್ವಾಸ್ಥ್ಯ ರಕ್ಷಣೆಗೆ ಶ್ರಮಿಸುತ್ತಿರುವ ಡಾ ಹನುಮಂತಪ್ಪ ಗೋವಿಂದಪ್ಪ ದಡ್ಡಿಯಂಥವರು ಪ್ರತಿ ಜಿಲ್ಲೆಯಲ್ಲಿದ್ದರೆ?

‍ಲೇಖಕರು Admin

June 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: