ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂತಿ ಮಕ್ಕಳಿಗೆ ರಾಜ್ಯವಿಲ್ಲ, ವೃಂದಾನ ಕಾಲಿಗೆ ಚಪ್ಪಲಿಯಿಲ್ಲ..

‘ಅವಧಿ’ಯಲ್ಲಿ ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ ಬರಹವನ್ನು ಪ್ರಕಟಿಸಿದ್ದೆವು. ಅದು ಎಷ್ಟು ಮನ ಕಲಕುವಂತಿತ್ತು ಎಂದರೆ ಸೀತಾರಾಂ ಅವರು ಬಯಸಿದ ಆ ಕೆಂಪು ಪಟ್ಟಿ ಇರುವ ಚಪ್ಪಲಿಯನ್ನು ಈಗ ನಾವೂ ಹುಡುಕುತ್ತಿದ್ದೇವೆ..

ಈ ಬರಹ ಅನೇಕರನ್ನು ಕಾಡಿದೆ. ಇದರ ಪರಿಣಾಮವಾಗಿ ಬಂದ ಇನ್ನೆರಡು ಕಥನಗಳನ್ನೂ ಪ್ರಕಟಿಸಿದ್ದೆವು .

ರಾಜಕುಮಾರ್ ಮಡಿವಾಳರ ತಮ್ಮ ನೆನಪಿನಾಳದಿಂದ ನೋವಿನ ಕಥನವೊಂದನ್ನು ಹೊರ ತೆಗೆದರು

ಶಿರಸಿಯ ಹಳ್ಳಿಯೊಳಗಿನ ಅನುಭವ ಕಟ್ಟಿಕೊಟ್ಟದ್ದು ಗೀತಾ ಹೆಗ್ಡೆ ಕಲ್ಮನೆ

ನಂತರ ಎಂಟ್ರಿ ಕೊಟ್ಟದ್ದು ದೂರ ನಾಡಿನ ಅಂಗೋಲಾದಿಂದ ಕೆ ಪ್ರಸಾದ್

ಈಗ ವೃಂದಾ ಸಂಗಮ ಹೊಸ ಕಥೆಗಳನ್ನು ಬಿಚ್ಚಿಟ್ಟಿದ್ದಾರೆ

chappal

 

ಜಯಂತ ಕಾಯ್ಕಿಣಿ ಅವರ ಪಾರ್ಲರ್ ಗೆ ಬಂದ ಪ್ರತಿಕ್ರಿಯೆಯ ಸುರಿಮಳೆ ಹೇಗಿತ್ತು ಎನ್ನುವುದು ನಿಮಗೆ ಗೊತ್ತು. 

ಈಗ ಟಿ ಎನ್ ಸೀತಾರಾಂ ಅವರ ಚಪ್ಪಲಿ ಅನುಭವ ಇದೆ.

ಬನ್ನಿ ನಿಮ್ಮೊಳಗೆ ಇರುವ ಚಪ್ಪಲಿ ಕುರಿತ ಅನುಭವಗಳನ್ನು ಬರೆಯಿರಿ

 avadhimag@gmail.com ಗೆ ಕಳಿಸಿಕೊಡಿ

                                                                 

ವೃಂದಾ ಸಂಗಮ

ಎಲ್ಲರ ಬಳಿಯೂ ಚಪ್ಪಲಿಗೆ ಆಸೆ ಪಟ್ಟ, ಕದ್ದ ಕಳೆದು ಕೊಂಡ ಕಥೆಗಳಿದ್ದರೆ, ನನ್ನ ಬಳಿ ಇನ್ನೂ ವಿಶೇಷ ಅನುಭವಗಳಿವೆ. ಎಲ್ಲರಂತೆ ನಾನೂ ಹಳ್ಳಿಯಲ್ಲಿಯೇ ಓದಿದವಳಾದ್ದರಿಂದ, 7 ನೇ ಕ್ಲಾಸಿನವರೆಗೂ ಚಪ್ಪಲಿ ಎನ್ನುವ ಸುದ್ದಿಯೇಯಿಲ್ಲ. ಸಪಾಟಾದ ಎರಡು ಕಟಗದ ಕಲ್ಲುಗಳನ್ನು ಕೂಡಿಸಿ ಪಾದದಾಕಾರದಲ್ಲಿ ಕಟೆದು, ಕಾಲಿಗೆ ಸಗಣಿ ಹಚ್ಚಿಕೊಂಡು ಅದಕ್ಕೆ ಕಟೆದ  ಕಟಗದ ಕಲ್ಲನ್ನು ಹಚ್ಚಿಕೊಂಡು 5 ನಿಮಿಷ ಓಡಾಡಿದರೆ ಅದೇ ಚಪ್ಪಲಿಯ ಅನುಭವ.

ಆದರೆ,  ಹೈಸ್ಕೂಲಿಗೆ, ಬೇರೆ ಊರಿಗೆ , ದಿನವೂ ಬಸ್ಸಿನಲ್ಲಿ ಓಡಾಡುವಾಗ, ಇತರೆ ಕೆಲವರು ಚಪ್ಪಲಿಗಳನ್ನು ಧರಿಸಿದರೂ, ನನ್ನ ಪಾದಗಳಿಗೆ ಮಾತ್ರ ಚಪ್ಪಲಿಯ ಭಾಗ್ಯ ಬಂದಿರಲಿಲ್ಲ. ನಮಗೂ ಚಪ್ಪಲಿ ಕೊಡಿಸಬೇಕೆಂಬ ಕಲ್ಪನೆಯೇ ಹಿರಿಯರಿಗೆ ಬಂದಿರಲಿಲ್ಲ. ನನಗೆ ಅದು ಬೇಕು, ಇದು ಬೇಕು ಎಂದು ಕೇಳುವ ಬುದ್ಧಿಯೂ ನನಗಿರಲಿಲ್ಲ. ಕೇಳಿದ್ದರೆ ಕೊಡಿಸುತ್ತಿದ್ದರೇನೋ?

chappal ladiesಹೈಸ್ಕೂಲಿನಲ್ಲಿದ್ದಾಗಲೇ, ಹೈದರಾಬಾದಿಗೆ ಟ್ರಿಪ್ ಗೆ ಹೋಗಿದ್ದೆವು. ಅಲ್ಲಿ, ರಾತ್ರಿ ಚಾರ್ ಮಿನಾರ್ ಕೆಳಗೆ, ರಸ್ತೆ ಬದಿಯಲ್ಲಿ ಎಲ್ಲರೂ ತಮಗಿಷ್ಟದ ವಸ್ತುಗಳನ್ನು ಖರೀದಿಸಿದರೆ, ನಾನು 10/- ರೂಪಾಯಿಯ ಚಪ್ಪಲಿ ಖರೀದಿಸಿದ್ದೆ. ಆದರೆ ಅವು ಗಂಡಸರು ಧರಿಸುವ ಚಪ್ಪಲಿಗಳಂತೆ. ನನ್ನ ಪಾದಗಳೇನೂ ಇಂತಹದೇ ಚಪ್ಪಲಿ ಬೇಕೆಂದು ಕೇಳಿರಲಿಲ್ಲ. ಅದಕ್ಕೇ ನನಗೇನೂ ಬೇಜಾರಾಗಿರಲಿಲ್ಲ. ಬಂದ ತೊಂದರೆಯೇನೆಂದರೆ, ನಾನು ಆಸೆ ಪಟ್ಟು ರಾತ್ರಿ ಖರೀದಿಸಿ ತಂದ ಚಪ್ಪಲಿಗಳು ಎರಡೂ ಒಂದೇ ಕಾಲಿನ ಚಪ್ಪಲಿಗಳಾಗಿದ್ದವು. ಎಲ್ಲಾ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳೂ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ, ವೃಂದಾನ ಕಾಲಿಗೆ ಚಪ್ಪಲಿಯಿಲ್ಲ ಎಂದು ರಾಗವಾಗಿ ತುಂಬಾ ದಿನ ಹಾಡುತ್ತಿದ್ದರು.

ಪಿಯುಸಿಗೆ ಸೇರಿದಾಗ, ಹದಿನೈದು ದಿನ ಜ್ವರ ಬಂದು ಮಲಗಿ, ಡಾಕ್ಟರ್ ಗೆ ತೋರಿಸಿಕೊಂಡು, ಇಂಜೆಕ್ಷನ್ ಗುಳಿಗೆ ತೆಗೆದುಕೊಂಡು ಬರುವಾಗ, ಹಾವೇರಿಯ ಪೇಟೆಯಲ್ಲಿ ಅಪ್ಪ, ನಿನಗೇನಾದರೂ ಬೇಕಾ? ಎಂದು ಕೇಳಿದಾಗ, ನನಗೆ ಚಪ್ಪಲಿ  ಬೇಕು ಎಂದಿದ್ದೆ. 98 ರೂ 95 ಪೈಸೆಯ ಬಾಟಾ – ಬೆಲ್ಟಿನ (ಸ್ಯಾಂಡಲ್ಸ) ಬಂದಿದ್ದವು. ಕೆಲವು ದಿನ ಮಳೆಗಾಲ, ಮಣ್ಣಿನ ರಸ್ತೆ ಎಂದು ಹಾಗೇ ಇಟ್ಟಿದ್ದೆ.

ಮುಂದೆ ಒಂದು ದಿನ, ನಮ್ಮ ಕಾಲೇಜಿಗೆ ಧಾರವಾಡ ಆಕಾಶವಾಣಿಯವರು ಒಂದು ಕಾರ್ಯಕ್ರಮದ ರೆಕಾರ್ಡಿಂಗ್ ಗೆ ಬಂದಿದ್ದರು. ಆ ದಿನ ಯುವವಾಣಿಯಲ್ಲಿ, ಶಾಲಾ ಕಾರ್ಯಕ್ರಮದ ಜೊತೆಗೆ ನನ್ನದೊಂದು  ಪ್ರತ್ಯೇಕ ಪ್ರಸಾರವಾಗುವ ಹರಟೆಯ ರೆಕಾರ್ಡಿಂಗ್ ಕೂಡಾ ಇತ್ತು. ನಾನು, ಅಪ್ಪ ಪಂಚಮಿಗೆ ಹೊಲಿಸಿದ್ದ, ಬಣ್ಣದ  ಪರಕಾರ ಪೋಲಕಾದ ಜೊತೆಗೆ ಬಾಟಾ ಚಪ್ಪಲಿ ಧರಿಸಿ, ಟ್ರಿಮ್ ಆಗಿ ಹೋಗಿದ್ದೆ. ನೆಲದ ಮೇಲೆ ಮೈಕ್ ಇಟ್ಟಿದ್ದರು. ಅಲ್ಲಿ ಕೂಡಲು ಚಪ್ಪಲಿಯ ಬೆಲ್ಟ್ ಒತ್ತುತ್ತಿದ್ದರಿಂದ, ಹೊರಗೆ ಚಪ್ಪಲಿ ಬಿಚ್ಚಿಟ್ಟಿದ್ದೆ. ರೆಕಾರ್ಡಿಂಗ್ ಮುಗಿಸಿ, ಹೊರಗೆ ಬಂದಾಗ ಎಲ್ಲರ ಹಳೆಯ ಚಪ್ಪಲಿಗಳು ಅಲ್ಲಿಯೇ ಇದ್ದು, ನನ್ನ ಹೊಸ ಬಾಟ ಚಪ್ಪಲಿ ಮಾಯವಾಗಿದ್ದವು. ನನಗೆ ತುಂಬಾ ದುಃಖವಾಗಿದ್ದೇಕೆಂದರೆ, ಪ್ರತಿ ದಿನ ಬರಿ ಕಾಲಲ್ಲಿ ಬರುತ್ತಿದ್ದ ನಾನು ಆ ದಿನ ಬಾಟ ಚಪ್ಪಲಿ ಧರಿಸಿ ಬಂದಿದ್ದೆ ಎಂದರೆ ಯಾರೂ ನಂಬಿರಲೇ ಇಲ್ಲ.

ಬಿ ಕಾಂ ಓದುವಾಗ, ಮತ್ತೊಮ್ಮೆ, ರೇಡಿಯೋ ಪ್ರೊಗ್ರಾಂ ರೆಕಾರ್ಡಿಂಗ್ ಇತ್ತು. ಆ ದಿನ ಚಪ್ಪಲಿ ಕಳೆದು ಕೊಂಡವರ ಬಗ್ಗೆಯೇ ಒಂದು ಏಕಪಾತ್ರಾಭಿನಯ ಮಾಡಿದ್ದೆ. ಎಲ್ಲರಿಗೂ ಅದು ತುಂಬಾ ಮೆಚ್ಚುಗೆಯಾಗಿತ್ತು. ಮರುದಿನ ಪ್ರಿನ್ಸಿಪಾಲ್ ಇದರ ಬಗ್ಗೆ ನಾಲ್ಕು ಪ್ರೋತ್ಸಾಹದಾಯಕ ಮಾತುಗಳನ್ನೂ ಹೇಳಿದ್ದರೂಂತ ನೆನಪು. ಆದರೆ ಮುಂದಾಲೋಚನೆಯಿಂದ ಆ ದಿನ ಚಪ್ಪಲಿ ಧರಿಸಿಯೇ ರೆಕಾರ್ಡಿಂಗ್ ಗೆ ಬಂದಿದ್ದೆ ಮತ್ತೂ ಅವರು ನೀಡಿದ್ದ, 24/- ರೂಪಾಯಿಗಳಲ್ಲಿ ಮತ್ತೊಂದು ಜೊತೆ ಹವಾಯಿ ಚಪ್ಪಲಿ ಖರೀದಿಸಿದ್ದೆ.

‍ಲೇಖಕರು Admin

16 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading