ಕುಣಿತ

ಗೋವಿಂದ ಹೆಗಡೆ
ಎದೆಯೊಳಗೆ ಕೈಬಿಟ್ಟು ಕಡೆಯುವದೇನನ್ನು
ಹೀಗೆ ಕೆಂಡವನೂದಿ ಕಿಡಿಯೆಬ್ಬಿಸಿ
ಕನ್ನಡಿಯಲಿ ಕಂಡ ಬಿಂಬವೇ ನಿಜವೇನು
ಕಾಣದ ಬಿಂಬಗಳ ಹೇಗೆಣಿಸಲಿ
ಒಳಗಡಲು ಮೊರೆಮೊರೆದು ಹುಯ್ಲಿಟ್ಟಿದೆ
ಆವರಣ ಗೋಡೆಯನು ಮೀರದೇನೆ
ಮನದ ಮರ್ಕಟಕೆ ಮುಗಿಲ ಹೂವಿನ ಬಯಕೆ
ಮನೆಯೆದುರ ಮಂಕೇನು ಮಂದಾರವೇ
ಹೆಜ್ಜೆಮೂಡದ ಹಾದಿ ನಡೆದೆ ಹಗಲಿರುಳು
ದಿಕ್ಸೂಚಿ ಯಾಮಾರಿ ಹುಶ್ಶೆಂದಿದೆ
ದಡವ ಸೇರುವ ಮೊದಲೆ ಕೈಚೆಲ್ಲಿ ಚುಕ್ಕಾಣಿ
ಅಲೆಗಳಿಗೆ ಹುಟ್ಟಿತ್ತು ಕೈಮುಗಿದಿದೆ
ಬಗೆದಂತೆ ಸೀಳಿ ಸಿಗಿದಂತೆ ಗೋಜಲು ಬಲ್ಲೆ
ಸಾವಿರದ ಸಾಸಿವೆಗೆ ಇದೆಯೆ ಎಲ್ಲೆ
ಮೀರಲೇ ಹೋರುತ್ತ ಹುದುಲಲ್ಲೆ ತಡಕುತ್ತ
ಕೀಲು ಕುದುರೆಯ ಕುಣಿತ-ನಿಲ್ಲೆ ನಿಲ್ಲೆ





kavite chennagide
sangeeta raviraj