’ಕಿರಿಯ ಹಂದರದಲ್ಲಿ ಹಿರಿಯದನ್ನು ಹಿಡಿಯುವ ಹಂಬಲ’ – ಎನ್ ಎಸ್ ಶ್ರೀಧರಮೂರ್ತಿ

– ಎನ್ ಎಸ್ ಶ್ರೀಧರ ಮೂರ್ತಿ

ಕೆ.ಸತ್ಯನಾರಾಯಣ ಅವರ ಹೊಸ ಕಥಾ ಸಂಕಲನ ಚಿತ್ರಗುಪ್ತನ ಕಥೆಗಳು ಕಿರಿಯ ಕಥೆಗಳ ಸಂಕಲನ. ಜಗತ್ತಿನೆಲ್ಲೆಡೆ ಹೀಗೆ ಸಣ್ಣ, ಅತಿ ಸಣ್ಣ ಕಥೆಗಳನ್ನು ಬರೆಯುವ ಪ್ರಯೋಗಗಳು ನಡೆದಿವೆ. ಇವು ಸಂರಚನೆಯ ದೃಷ್ಟಿಯಿಂದ ನಡೆಯುವ ಪ್ರಯೋಗಗಳು. ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಪ್ರಯೋಗಗಳು ನಡೆದಿಲ್ಲ. ಇಲ್ಲಿ ಬಂದಿದ್ದೆಲ್ಲವೂ ಕಾಡರ್ಿನಲ್ಲಿ ಕಥೆಗಳು ಮಾದರಿ ಗ್ಯಾಪ್ ಫಿಲ್ಲರ್ ಮಾದರಿ ಪ್ರಯೋಗಗಳು. ಸತ್ಯನಾರಾಯಣ್ ಕಿರುಕಥೆ ಎನ್ನುವಾಗ ಗಾತ್ರಕ್ಕಿಂತಲೂ ಅದರ ಸ್ವರೂಪಕ್ಕೆ ಗಮನ ನೀಡಿದ್ದಾರೆ. ಸರಳವಾಗಿ ವಿಶ್ಲೇಷಿಸಿದರೆ ಕಥೆಯಲ್ಲಿನ ವಾಚ್ಯ ಎನ್ನಿಸುವ ಅಂಶಗಳನ್ನು ಕೈಬಿಟ್ಟು ಧ್ವನ್ಯಾತ್ಮಕ ಅಂಶಗಳಿಗೇ ಮಹತ್ವ ನೀಡಿದ ತಾತ್ವಿಕ ನೆಲೆಗಟ್ಟಿನಲ್ಲಿ ಹುಟ್ಟಿದ ಕಥೆಗಳು ಇವು. ಇಲ್ಲಿ ಮಾತಿಗಿಂತಲೂ ಮೌನ ಮುಖ್ಯವಾಗಿ ಕಾಣಿಸಿಕೊಂಡಿದೆ. ಕಥೆ ಮುಗಿದ ನಂತರವೂ ಓದುಗರಲ್ಲಿ ಅದು ವಿಸ್ತಾರ ಪಡೆಯುತ್ತಾ ಹೋಗುತ್ತದೆ ಎನ್ನುವ ಅರ್ಥದಲ್ಲಿ ನಿಶಬ್ದದ ಗಾಂಭೀರ್ಯತೆಯನ್ನು ಪಡೆದು ಈ ಕಥೆಗಳು ರೂಪುಗೊಂಡಿವೆ. ಇಲ್ಲಿ ಸಂರಚನೆ ಮತ್ತು ಹೂರಣಗಳ ನಡುವೆ ಹೊಂದಾಣಿಕೆ ಇದೆ. ಸಣ್ಣ ಕಥೆ, ಕಾದಂಬರಿ, ಪ್ರಬಂಧ ಹೀಗೆ ಸೃಜನಶೀಲತೆಯ ಪ್ರಮುಖ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸತ್ಯಾರಾಯಣ್ ಅವರ ಬರವಣಿಗೆ ಅಲ್ಲಲ್ಲಿ ಅತಿಮಾತುಗಾರಿಕೆಯ ದೋಷಕ್ಕೂ ಒಳಗಾಗಿತ್ತು. ಅದನ್ನು ಮೀರಲೋ ಎಂಬಂತೆ ರೂಪುಗೊಂಡಿರುವ ಇಲ್ಲಿನ ಕೆಲವು ಕಥೆಗಳಲ್ಲಿ ಕಾದಂಬರಿಯ ತೀವ್ರತೆ, ಪ್ರಬಂಧದ ಸಹೃದಯತೆ ಕಾಣಸಿಗುತ್ತದೆ. ನಿರಂತರತೆ ದೊರಕಿದೆರೆ ಕನ್ನಡದ ಮಟ್ಟಿಗೆ ಹೊಸ ಪ್ರಕಾರವಾಗಿಯೂ ಬೆಳೆಯ ಬಲ್ಲ ಸಾಧ್ಯತೆ ಇಲ್ಲಿ ಗೋಚರವಾಗಿದೆ.
ಸತ್ಯನಾರಾಯಣ್ ಅವರ ಇದುವರೆಗಿನ ಬರಹ ಪರಂಪರೆಯೊಂದಿಗೆ ಸಂಕಲನ ಸಾತತ್ಯವನ್ನು ಕಳೆದು ಕೊಂಡಿದೆ ಎಂದು ಭಾವಿಸುವಂತಿಲ್ಲ. ಇಲ್ಲಿನ ಕಥೆ ಹೇಳುವ ಕ್ರಮ, ನಿರ್ವಹಿಸುತ್ತಿರುವ ವಸ್ತು ಎಲ್ಲವೂ ಇದುವರೆಗೂ ಅವರ ಕಥೆಗಳಲ್ಲಿ ಕಂಡು ಬಂದಿದ್ದೇ ಇಲ್ಲಿ ಕೂಡ ಕಥೆಯನ್ನು ಹೇಳುವುದು ಮಾತ್ರವಲ್ಲದೆ ಅದಕ್ಕೊಂದು ವೈಚಾರಿಕ ನೆಲೆಗಟ್ಟನ್ನು ಕಲ್ಪಿಸುವ ಕೆಲಸವನ್ನು ಅವರು ಪ್ರಜ್ಞಾಪೂರ್ವಕವಾಗಿಯೇ ಮಾಡುತ್ತಾರೆ. ಇಲ್ಲಿ ಕೂಡ ಅವರ ಕಥೆಗಳಲ್ಲಿ ಬರುವ ವ್ಯಕ್ತಿಗಳು ತರುಣರಲ್ಲ. ವಯಸ್ಸಾದವರು. ಹೆಚ್ಚು ಕಡಿಮೆ ನಿವೃತ್ತರು. ತಲ್ಲಣಗಳಿಗೆ ಎದುರಾದವರು. ಹೊಸ ಉದ್ಯೋಗಕಥೆಯಲ್ಲಿ ರಾವ್ ಸಾಹಾಬ್ ಮಾಧವ ಪ್ರಭುಗಳು ಡೆಲ್ಲಿಯಲ್ಲಿ ಸಚಿವರ ಕಾರ್ಯದಶರ್ಿಯಾಗಿ ನಿವೃತ್ತರಾದವರು ಅವರು ತುಮಕೂರು ಜಿಲ್ಲೆ ಪಾವಗಡ ತಾಲ್ಲೋಕ್ ಕಸಬಾ ಹೋಬಳಿಯ ಹೊಸಗಾವಿಗೆ ಬಂದು ಆರಂಭಿಸಿದ್ದು ಅಪರಕರ್ಮದ ಉದ್ಯೋಗವನ್ನು. ಇಲ್ಲಿಯೂ ಈ ಉದ್ಯೋಗ ವಿಸ್ತರಣವನ್ನು ಕಂಡು ಕೊಳ್ಳುವುದು ಕೆಂಜಿರಿವೆಗಳಿಗೆ ಸಕ್ಕರೆ ಭೋಜನ ಮಾಡಿಸುವುದರಲ್ಲಿ. ಅಸಂಗತವಾದ ಎಳೆಯ ಜೊತೆಗೆ ಅವಧೂತಗುಣವೂ ಬೆರೆತಂತಿರುವ ಈ ಕಥೆ ಆಧುನಿಕತೆ ಮತ್ತು ಪರಂಪರೆಯ ಮುಖಾಮುಖಿಯ ನೆಲೆಯನ್ನೂ ಹೊಂದಿ ಗಾಢವಾದ ಜೀವನ ದರ್ಶನವನ್ನು ಮೂಡಿಸುತ್ತದೆ.

ಜೀವಾವಧಿ ಶಿಕ್ಷೆಕಥೆಯಲ್ಲಿ ಇನ್ನಷ್ಟು ವಿವರಗಳು ರೂಪಕಾತ್ಮಕವಾಗುತ್ತವೆ ಮಧ್ಯರಾತ್ರಿ ಎರಡು-ಮೂರು ಘಂಟೆಯ ನಂತರ ಎಚ್ಚರವಾಗಿ ಯಾರೋ ಹಗ್ಗದಿಂದ ಎಳೆಯುತ್ತಿದ್ದಾರೆ ಎನ್ನುವ ಆತಂಕ ಕಥೆಯ ತಿರುಳು ಇದು ಅಮೂರ್ತ ಎನ್ನಿಸ ಬಲ್ಲ ಅಂಶಗಳಲ್ಲಿಯೇ ಬೆಳೆಯುತ್ತಾ ಹೋಗಿ ಅತ್ಯಂತಿಕವಾಗಿ ನಿಲ್ಲುವುದು ಕಾಲದ ಪರಿಕಲ್ಪನೆಯೊಂದಿಗೆ ಮುಖಾಮುಖಿಯಾಗಿ ನನ್ನದಲ್ಲದ ಕಾಲವನ್ನು ನನ್ನಿಂದ ಹೊರದೂಡಿಸಲು ನನ್ನ ಕಾಲವನ್ನು ಮತ್ತೆ ಪಡದೇ ಬಿಡಲು ನಿದ್ದೆಗಾಗಿ ಕಾಯುತ್ತೇನೆ ಎನ್ನುವ ನೆಲೆ ತಲುಪುತ್ತದೆ. ಇಲ್ಲಿರುವ ವ್ಯಕ್ತಿ ಮತ್ತು ಸಮುಷ್ಠಿಯ ಸ್ವರೂಪ ಮತ್ತು ರೂಪಗಳ ವಿಶ್ಲೇಷಣೆ ಹಲವು ಸಾಧ್ಯತೆಯನ್ನು ಪಡೆಯ ಬಲ್ಲದು. ಕಿರಕಥೆಯಲ್ಲಿ ಈ ಸಂಕೀರ್ಣ ವೈಚಾರಿಕತೆಯನ್ನು ಹಿಡಿದಿಟ್ಟಿರುವುದು ಸತ್ಯನಾರಾಯಣ್ ಅವರ ಮಹತ್ವದ ಸಾಧನಯೇ ಸರಿ. ಸಂಕಲನದ ಇನ್ನೊಂದು ಮಹತ್ವದ ಕಥೆ ವೈಶಂಪಾಯನದಲ್ಲಿ ಪಾಲು ಸಂಕಲನದ ಉಳಿದ ಕಥೆಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದು. ಆದರೆ ಅದು ಪುರಾಣದ ಅಗಾಧತೆಗೆ ಸಂವಾದಿಯಾಗಲು ಹೊರಟಿದೆ ಎನ್ನುವ ಅಂಶವನ್ನು ಗಮನಿಸಿದಾಗ ಕಿರಿದು ಎಂದೇ ಹೇಳ ಬೇಕು. ವೈಶಂಪಾಯನದ ಪೌರಾಣಿಕ ವಿವರಗಳನ್ನು ರೂಕ್ಷವಾಗಿ ಹೊಂದಿಸುವ ಕಥೆಗೆ ಮುಖ್ಯವಾಗಿರುವುದು ಆಧುನಿಕತೆಯ ತಲ್ಲಣಗಳೇ!
ಇಲ್ಲಿ ರಂಗನ ಪೆದ್ದುತನವನ್ನು ವ್ಯಾವಹಾರಿಕವಾಗಿ ಸಮೀಕರಿಸುವ ಪ್ರಯತ್ನದಲ್ಲಿಯೇ ವಾಸ್ತವಕ್ಕೆ ಮುಖಾಮುಖಿಯಾಗುವ ಹಂಬಲವಿದೆ. ಕಥೆಯಲ್ಲಿ ಪಾತ್ರಗಳ ಸಂಖ್ಯೆ ಹೆಚ್ಚಿದ್ದರೂ ತಾತ್ವಿಕತೆ ಏಕಸೂತ್ರದಲ್ಲಿ ಪ್ರವಹಿಸಿದೆ. ಅಂತ್ಯದಲ್ಲಿ ದೊರಕುವ ಪಲ್ಲಟದಿಂದ ವೈಶಂಪಾಯನದ ರೂಪಕದಿಂದ ಹಿಡಿದು ಎಲ್ಲ ವಿವರಗಳು ಹೊಸ ಸಾಧ್ಯತೆಯನ್ನು ಹೊಳಹಿಸಿ ಬಹುಮುಖಿ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತವೆ. ದಾಟಿದ ಮೂರುಕಥೆಯಲ್ಲಿ ಇನ್ನಷ್ಟು ಸೂಕ್ಷ್ಮತೆ ಕಾಣಿಸಿಕೊಂಡಿದೆ. ಇಲ್ಲಿ ವಿವರಗಳನ್ನು ಮೂರ್ತನೆಲೆಯಲ್ಲಿ ಕಟ್ಟುತ್ತಲೇ ಅಮೂರ್ತದಲ್ಲಿ ಕಥೆ ಮುಕ್ತಾಯ ಕಾಣುತ್ತದೆ. ಇದರ ತೀವ್ರತೆ ಎಷ್ಟಿದೆ ಎಂದರೆ ಕಥೆಯ ಎಲ್ಲಾ ವಾಕ್ಯಗಳೂ ಮೂರ್ತ ಮತ್ತು ಅಮೂರ್ತಗಳಿಗೆ ತೆಕ್ಕೆ ಹಾಕಿಕೊಂಡು ಹೊಸ ಸಾಧ್ಯತೆಯನ್ನು ಪಡೆದುಕೊಳ್ಳುತ್ತವೆ. ಇಂತಹ ಪ್ರಯೋಗಗಳಿಂದ ಕೆ.ಸತ್ಯನಾರಾಯಣ್ ತಮ್ಮ ಕಥನ ಕ್ರಮ ಇದುವರೆಗೆ ಪಡೆದುಕೊಂಡಿದ್ದ ಹರುಹವನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ ಕನ್ನಡ ಕಥನ ಪರಂಪರೆಗೆ ಕೂಡ ಹೊಸ ಸಾಧ್ಯತೆಯನ್ನು ಒದಗಿಸಿದ್ದಾರೆ.
ಈ ಸಂಕಲನದಲ್ಲಿ ಕೂಡ ಸತ್ಯನಾರಾಯಣ್ ಅವರು ಕೌಟಂಬಿಕ ಚೌಕಟ್ಟಿನಲ್ಲಿಯೇ ಜಗತ್ತಿನ ವಿಶಾಲತೆಯನ್ನು ಕಂಡುಕೊಳ್ಳುತ್ತಾರೆ. ಸತ್ಯನಾರಾಯಣ್ ಪಾತ್ರಗಳನ್ನು ರೂಪಕಗಳ ಮಾದರಿಯಲ್ಲಿ ಬೆಳೆಸಿದ್ದರೂ ಕೂಡ ಅವರಿಗೆ ಇತಿಹಾಸವನ್ನು ಹೇಳುವಲ್ಲಿ ಆಸಕ್ತಿ ಇದೆ, ಸಣ್ಣ ಸಣ್ಣ ವಿವರಗಳನ್ನೂ ಹಿಡಿದಿಡುವ ತಾಳ್ಮೆ ಇದೆ. ನಿಮಗೆ ಮಾತ್ರ ಕಥೆ ಹೇಳೋದಿಲ್ಲ ಕಥೆಯಲ್ಲಿ ದಾಂಪತ್ಯದ ಎರಡು ಸಾಧ್ಯತೆಗಳಿವೆ ಇದು ಗೆರೆ ಹಾಕಿದಷ್ಟು ನಿಖರವಾಗಿ ಭಿನ್ನ ಸಾಧ್ಯತೆಗಳಲ್ಲ ಅಥವಾ ಒಂದು ಸಾಧ್ಯತೆಯ ಎರಡು ಗ್ರಹಿಕೆಗಳೂ ಅಲ್ಲ. ಕಥೆಯ ನೇರ ನಿರೂಪಣೆಯಲ್ಲಿಯೇ ಸಂಕೀರ್ಣತೆ ಇದೆ ಇನ್ನೊಂದು ನೆಲೆಯಲ್ಲಿ ಸಹಜತೆ ಕೂಡ ಇದೆ. ಸಂರಚನೆಗೆ ಸಂಬಂಧಿಸಿದಂತೆ ಹಲವು ಕುತೂಹಲಕರ ಹೊಳಹುಗಳನ್ನು ಹೊಂದಿರುವ ಕಥೆ ಇದು. ಇದರ ಹೃಸ್ವ ಸಾಧ್ಯತೆಯಂತೆ ತೋರುವ ಶೀಲವಂತರ ಆಫಿಡವಿಟ್ ಮೈಮನಸ್ಸುಗಳ ಬಹುಚಚರ್ಿತ ಆಯಾಮವನ್ನೇ ಭಿನ್ನ ಶೈಲಿಯಲ್ಲಿ ಹೇಳ ಹೊರಟಿದೆ. ಇಂತಹ ಕಥೆಗಳಲ್ಲಿ ಸತ್ಯನಾರಾಯಣ್ ಅವರ ಈವರೆಗಿನ ಕಥನ ಪರಂಪರೆ ಕಾಣಿಸಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಇವೆಲ್ಲವೂ ಅದರ ಮುಂದುವರಿಕೆಯಂತೆಯೇ ಭಾಸವಾಗುತ್ತವೆ. ಆದರೆ ಬಹಳ ಭಿನ್ನವಾಗಿ ಕಾಣುವುದು ಮುಟ್ಟುಎನ್ನುವ ಕಥೆ ಇಲ್ಲಿ ನೇರ ನಿರೂಪಣೆ ಇದೆ. ಕಮೀಷನರ್ ಅವರನ್ನು ಬಾಲ್ಯದ ನೆನಪುಗಳ ಮೂಲಕ ಗ್ರಹಿಸುತ್ತಾ ಮುಟ್ಟಲು ಬಂದ ವಿವರಗಳು ಕ್ರಮಬದ್ದವಾಗಿವೆ. ಆದರೆ ಸಂಬಂಧದ ಸ್ವರೂಪದ ಪ್ರಶ್ನೆಗಳು ಗಹನವಾಗುತ್ತಾ ಹೋಗಿವೆ. ಈ ಅಂಶದಿಂದಲೇ ಕಥೆಯಲ್ಲೊಂದು ಅಸಾದೃಶ್ಯ ಅಂಶ ಮೈದಾಳಿದೆ. ಪ್ರಯತ್ನಪೂರ್ವಕವಾಗಿ ಅಸಾದೃಶ್ಯತೆಯನ್ನು ಇಡಲು ಹೋದ ವಾಸನೆಯ ಸುವರ್ಣ ಜಯಂತಿಕಥೆ ಈ ಹಿನ್ನೆಲೆಯಲ್ಲಿ ಕೃತಕ ಎನ್ನಿಸುತ್ತದೆ. ಕಿರಿದರಲ್ಲಿ ನೇರ ನಿರೂಪಣೆ ಬಳಸುವ ಪ್ರಯತ್ನ ಮಾಡಿದಾಗಲೆಲ್ಲಾ ಕಥೆಗಳು ವಿಶಾಲ ವ್ಯಾಪ್ತಿಯನ್ನು ಪಡೆಯುವುದು ಕುತೂಹಲಕರ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂಕಲನದ ಸಂರಚನೆಯ ಕುರಿತು ಹಲವು ನೆಲೆಯ ಚರ್ಚೆಗಳನ್ನು ಮಾಡ ಬಹುದಾಗಿದೆ.
ಸತ್ಯನಾರಾಯಣ್ ಅವರ ಕಥೆಗಳಲ್ಲಿ ಸಾವು ಯಾವಾಗಲೂ ಕೇಂದ್ರ ಪ್ರಜ್ಞೆಯಂತೆ ಪ್ರವಹಿಸಿದೆ. ಇಲ್ಲಿ ಸಾವಿನ ಕುರಿತು ಆತಂಕವಿಲ್ಲ. ನಿಗೂಢತೆಯನ್ನು ಹುಡುಕುವ ಪ್ರಯತ್ನವಿಲ್ಲ. ಸಾವಿನ ಕುರಿತ ಕಥೆಗಳಲ್ಲಿ ಕಾಣುವುದು ಅಪಾರವಾದ ಜೀವನ ಪ್ರೀತಿಯೇ. ಸಾವು ಬಲ್ಲ ನೋಟ ಕಥೆಯಲ್ಲಿ ಜೀವನದ ವಿವಿಧ ನೆಲೆಗಳ ಅಮೂರ್ತ ವಿಸ್ತರಣೆಯಂತೆ ಕಾಣುವ ವಿವರಗಳು ಬಂದಿರುವುದನ್ನು ಈ ಹಿನ್ನೆಲೆಯಲ್ಲಿ ಕುತೂಹಲದಿಂದ ಗಮನಿಸ ಬಹುದು ಈ ಕಥೆಯಲ್ಲಿನ ನನ್ನ ತಿಳುವಳಿಕೆಗೂ ನಾನು ಕೇಳುತ್ತಿರುವ ಮಾತಿಗೂ ತಾಳೆಯಾಗುತ್ತಿರಲಿಲ್ಲ ಎನ್ನುವ ವಾಕ್ಯ ಇಂತಹ ಪ್ರಯತ್ನದ ಉದ್ದೇಶದ ಕುರಿತು ಬೆಳಕು ಚೆಲ್ಲುವಂತಿದೆ. ಸಾವಿನ ಬಣ್ಣದಂತಹ ಸರಳ ಕಥೆ ಕೂಡ ಗಹನವಾದ ನೆಲೆಯನ್ನು ತಲುಪುವುದು ಸಾಧ್ಯವಾಗಿರುವುದು ಇಂತಹ ಕ್ರಿಯಾಶೀಲತೆಯಿಂದಲೇ. ಕಂಡು ಕೇಳದ ಶಬ್ದ ಈ ಹಿನ್ನೆಲೆಯಲ್ಲಿ ವಸ್ತು ಮತ್ತು ವಿನ್ಯಾಸ ಎರಡೂ ದೃಷ್ಟಿಯಿಂದಲೂ ಮಹತ್ವದ್ದು ಎನ್ನಿಸ ಬಲ್ಲ ಕಥೆ. ಇಲ್ಲಿ ನೇರ ನಿರೂಪಣೆಯಲ್ಲಿಯೇ ಭ್ರಮಾತ್ಮಕ ವಿವರಗಳು ಸೇರಿಕೊಳ್ಳುತ್ತಾ ಕ್ರಮೇಣ ಅವುಗಳೇ ವಾಸ್ತವಿಕತೆಯ ಚೌಕಟ್ಟಿಗೆ ಹೊಂದಿಕೊಂಡು ವಾಸ್ತವದ ನೆಲೆಯಲ್ಲಿದ್ದ ವಿವರಗಳು ಭ್ರಮಾತ್ಮಕ ಸಾಧ್ಯತೆಯ ಕಡೆಗೆ ಹೊರಳುತ್ತವೆ. ಇಂತಹ ಸಾಧ್ಯತೆ ದೊರಕಿರುವುದೇ ಸಂರಚನೆಯಲ್ಲಿನ ಪ್ರಯೋಗಶೀಲತೆಯಿಂದ ಸಂಕಲನದ ಮಹತ್ವಾಕಾಂಕ್ಷೆ ಸಾರ್ಥಕವಾಗಿರುವುದು ಇಂತಹ ಕಥೆಗಳಲ್ಲಿಯೇ
ಸತ್ಯನಾರಾಯಣ್ ವಾಸ್ತವವಾದಿ ಮಾರ್ಗದ ಕಥೆಗಾರರು. ವಿವರಗಳ ಮೂಲಕವೇ ಕಥೆಯನ್ನು ಕಟ್ಟುತ್ತಾ ಬಂದವರು. ಸಂಕಲನದ ಹೊಸ ಕಥನಮಾರ್ಗದಲ್ಲಿ ಈ ಅಂಶ ಕಾಣೆಯಾಗಿಲ್ಲ ತಂತ್ರಗಾರಿಕೆ ನಾವಿನ್ಯತೆಯ ಮೂಲಕ ಹೊಸ ಹುಟ್ಟನ್ನು ಪಡೆದಿದೆ. ನವೋದಯದ ಕಥನವನ್ನು ನವ್ಯದ ತಂತ್ರಗಾರಿಕೆಯಲ್ಲಿ ಹೇಳಿದಂತಿರುವ ಇಲ್ಲಿನ ಕಥನಗಳು ಸೂಕ್ಷ್ಮವಾದ ಓದನ್ನು ಬೇಡುತ್ತವೆ. ಸಂವಹನದ ಸಾಧ್ಯತೆಗಳೆಲ್ಲವೂ ಆಧುನಿಕತೆಯ ವಿಕಾರಕ್ಕೆ ತುತ್ತಾಗಿ ಒರಟುತನವನ್ನು ಪಡೆದುಕೊಂಡಿರುವ ಕಾಲದಲ್ಲಿ ಸತ್ಯನಾರಾಯಣ್ ಅವರು ಶೋಧಿಸುತ್ತಿರುವ ಸಂರಚನಾ ಮಾರ್ಗ ದಿಕ್ಕೆಟ್ಟು ನಿಂತಿರುವ ಕನ್ನಡ ಕಥಾ ಪರಂಪರೆಗೂ ಹೊಸ ದಿಕ್ಕನ್ನು ತೋರಿಸ ಬಲ್ಲದಾಗಿದೆ. ಈ ಕಾರಣದಿಂದಲೇ ಸಂಕಲನದ ಕುರಿತು ಇನ್ನಷ್ಟು ಚಚರ್ೆಗಳು ನಡೆಯ ಬೇಕಾದ ಅಗತ್ಯವಿದೆ.
 

‍ಲೇಖಕರು G

June 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: