ಕಿರಣ ಭಟ್ ಕುಡಿದ ‘ಮಾಲ್ಗುಡಿ ಚಹಾ’

ಕಿರಣ ಭಟ್

ಸಂಜೆ ಐದರ ಹೊತ್ತು

ಜಿಟಿ ಜಿಟಿ ಮಳೆ

ಕೊಡೆ ಬಿಡಿಸಿ ಮಗನ ಮನೆಯ ಕಡೆ ನಡೆಯತ್ತಿದ್ದೆ. ಹಿತವೆನಿಸುವ ತಂಪು. ʻಇಷ್ಟು ಹೊತ್ತಿಗೆ ಒಂದು ಬಿಸಿ ಬಿಸಿ ಚಹಾ ಸಿಕ್ಕಿದ್ರೆ!? ಅದರ  ಮಜವೇ ಬೇರೆʼ ಅಂದ್ಕೊಳ್ತಾ ನಡೀತಿದ್ರೆ, ಎದುರಿನ ತಿರುವಿನಲ್ಲಿ ಒಂದು ಕೈಲಿ ಚಹಾ ಕಿಟ್ಲಿ ಹಿಡಿದು, ಇನ್ನೊಂದು ಕೈಲಿ ಕಪ್ ಹಿಡಿದ, ʻಮಾಲ್ಗುಡಿʼಯ ಟೋಪಿಯ ಹುಡುಗ ʻಸ್ವಾಮಿʼ ಎದುರಾಗ್ಬೇಕೇ? ಸ್ವರ್ಗವೇ ಬೀದಿ ಬದಿಗೆ ಬಂದಂತೆ. ತಣ್ಣಗಿನ ಹವೆಗೆ ಬಿಸಿ ಬಿಸಿ ಚಹಾ. ಜೊತೆಗೆ, ʻಮಾಲ್ಗುಡಿ ಡೇಸ್ʼನ ಬೆಚ್ಚನೆಯ ನೆನಪು. ನನ್ನಂಥಹ ಚಹಾದ ಹುಚ್ಚರಿಗೋ… ಕೇಳೋದೇ ಬೇಡ.

ಇದೆಲ್ಲ ನಡೆದದ್ದು ನಿನ್ನೆ ಸಂಜೆ. ಮಗನ ಮನೆಗೆ ಹೋಗೋ ತಿರುವಿನಲ್ಲಿ. ʻಮಾಲ್ಗುಡಿʼ ಚಹಾದ ಅಂಗಡಿಯೆದುರು. ಅಂಗಡಿಯ ಸ್ಪೆಷಲ್ ʻಮಾಲ್ಗುಡಿ ಅಮೃತ ಚಹಾʼದ ಕಪ್ ಕೈಯಲ್ಲಿ ಹಿಡಿದು ಗುಟುಕೇರಿಸಬೇಕು ಅಂತಿದ್ದಂತೆ ಕಪ್‌ನಿಂದ ಮೇಲೆ ಮೇಲೆ ಸಾಗುತ್ತಿದ್ದ ಹಬೆಯ ಜಾಡು ಹಿಡಿದು ಹೊರಟ ಮಾಲ್ಗುಡಿಯ ನೆನಪುಗಳು…

ಸುಮಾರು ೧೯೮೫ರ ಹೊತ್ತಿಗೆ, ಕಾಲೇಜಿನ ದಿನಗಳಲ್ಲಿ ಡಿಗ್ರಿ ಓದುವಾಗ ನೋಡಿದ್ದ ʻಆಟೋ ರಾಜಾʼ ಸಿನಿಮಾದ ನಾಯಕ ಶಂಕರನಾಗ್ ಹೀರೋ ಆಗಿ, ನಮಗೂ ಒಂಥರಾ ರೋಲ್ ಮಾಡಲ್ ಆಗಿ ತಲೇಲಿ ಕುಳಿತು ಕೆಲವು ವರ್ಷಗಳಾಗಿದ್ದವು ಅನಿಸ್ತದೆ. ದೂರದರ್ಶನದಲ್ಲಿ ಬಂದ, ತುಂಬ ವಿಭಿನ್ನ ಧಾರಾವಾಹಿ ʻಮಾಲ್ಗುಡಿ ಡೇಸ್ʼ. ಆರ್.ಕೆ. ನಾರಾಯಣ್‌ರ ಶ್ರೇಷ್ಠ ಕೃತಿಯ ಸಿನಿಮಾ ರೂಪ. ಮಲೆನಾಡ ಮಡಿಲಿನ ಕಾಲ್ಪನಿಕ ಊರು ʻಮಾಲ್ಗುಡಿʼಯ ಸರಳವಾದ ಬದುಕನ್ನ ಶಂಕರನಾಗ್ ಅದೆಷ್ಟು ಚಂದಕ್ಕೆ ತೆರೆದಿಟ್ಟಿದ್ರು! ಆ ಪಾತ್ರಗಳೇ ನಮ್ಮ ಜೊತೆಗೆ ಬದುಕುತ್ತಿವೆಯೇನೋ ಅನ್ನೋ ಹಾಗೆ? ಅನಂತನಾಗ್, ಮಂಜುನಾಥ್ ಎಲ್ಲ ಒಂಥರಾ ನಮ್ಮೂರಿನವ್ರೇ ಆಗ್ಬಿಟ್ಟಿದ್ರು. ಆ ಧಾರಾವಾಹಿ ಅದೆಂಥ ಛಾಪು ಮೂಡಿಸಿತ್ತು ಅಂದ್ರೆ, ಒಳ್ಳೆಯ ಚಿತ್ತಗಳಿಗೆ ಅದೊಂದು ಮಾಡೆಲ್ ಅನ್ನೋ ಹಾಗೆ.

ಅಂಥ ಧಾರಾವಾಹಿಯ ಸ್ವಾಮಿ ಇವತ್ತು ನನ್ನೆದುರು ಬಂಗಾರದ ಬಣ್ಣದ ಚಹಾ ಕಿಟ್ಲಿ ಹಿಡಿದು ನಿಂತಿದ್ದ. ತುಂಬ ಕುತೂಹಲದಿಂದ್ಲೇ ಒಳಹೊಕ್ಕೆ. ಎದುರಿಗೇ ನಸುನಗುತ್ತಿರೋ ಶಂಕರನಾಗ್‌ರ ಚಿತ್ರ.

“ಸತ್ತ ಮೇಲೆ ಮಲಗೋದು ಇದ್ದೇ ಇದೆ. ಎಚ್ಚರಿದ್ದಾಗ ಏನನ್ನಾದರೂ ಸಾಧಿಸು” ಎನ್ನೋ ಬರಹ. ಇನ್ನೊಂದು ಬದಿ ಮಾಲ್ಗುಡಿಯ ರೈಲು ನಿಲ್ದಾಣ. ಟೀ ಕಪ್‌ಗಳ ಮೇಲೂ ʻಮಾಲ್ಗುಡಿʼ. ಒಟ್ಟಾರೆ ಮಾಲ್ಗುಡಿಯ ವಾತಾವರಣ ಹಿಡಿದಿಡೋ ಪ್ರಯತ್ನ.

ಅಲ್ಲಿ ಸಿಗೋ ಚಹಾವನ್ನ ಅವರು ʻಮಾಲ್ಗುಡಿ ಅಮೃತ ಚಹಾʼ ಅಂತ ಕರ್ಕೋತಾರೆ. ನಿಜಕ್ಕೂ ತುಂಬ ಒಳ್ಳೇ ಚಹಾ. ನಾನು ಇದುವರೆಗೂ ರುಚಿ ನೋಡಿದ ಶ್ರೇಷ್ಠ ಚಹಾಗಳಲ್ಲೊಂದು. ತಯಾರಿಸುವ ರೀತಿಯೂ ವಿಶಿಷ್ಟವೇ. ನಿಖರವಾದ ಹದ, ನಿಖರವಾದ ಕಾಲದ ಲೆಕ್ಕಾಚಾರ. ಹತ್ತಾರು ಬಗೆಯ ಪರಿಮಳದ ಚಹಾಗಳು. ಇವತ್ತು ಬೆಳಿಗ್ಗೆ ʻಪಾನ್ ಮಸಾಲಾʼ ಚಹಾ ಕುಡಿದೆ. ಮಸ್ತ್ ಆಗಿತ್ತು. ಚಹಾಮಳ್ಳರಿಗಂತೂ ಇದು ಹೇಳಿ ಮಾಡಿಸಿದ ಜಾಗ. ಬೆಂಗಳೂರಲ್ಲಿ ಹತ್ತಾರು ಕಡೆ ಇವೆಯಂತೆ. ನಾನು ಹೇಳಿದ್ದು ಜಾಲಹಳ್ಳಿ ಶಾಖೆ. ಇನ್ನೇನು, ಚಹಾ ಪ್ರೇಮಿಗಳೇ, ಹೊರಡಿ…

‍ಲೇಖಕರು avadhi

June 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: