ʻಪಿಂಕಿ ಎಲ್ಲಿʼ ಚಲನಚಿತ್ರವನ್ನು ನೋಡಿ

ಶ್ರೀನಿಧಿ ಎಚ್ ವಿ 

ನೀವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಮ್ಮೆಯಾದರೂ ಹೋಗಿದ್ದೀರಾದರೆ ಹೆಬ್ಬಾಳ ಮೇಲ್ಸೇತುವೆ ನಿಮಗೆ ಗೊತ್ತಿರುತ್ತದೆ. ಮೇಲ್ಸೇತುವೆಯ ಮೇಲೆ ಅಥವಾ ಕೆಳಗೆ ನಿಂತ ವಾಹನಸಂದಣಿಯಲ್ಲಿ ಎಂದೋ ಸಿಲುಕಿದ ಅನುಭವ ನಿಮಗೂ ಆಗಿರಬಹುದು. ಮೊದಲೇ ಇದು ಷಟ್ಪಥ, ದಶಪಥ ಎಂಬ ಎಕ್ಸ್‌ಪ್ರೆಸ್‌ವೇಗಳ ಕಾಲ. ಬೆಳಕಿನ ವೇಗದಲ್ಲಿ ದೊಡ್ಡ ದೊಡ್ಡ ನಗರಗಳನ್ನೇ ಬೈಪಾಸ್ ಮಾಡಿ ಮೇಲ್ಸೇತುವೆಯ ಮೇಲೆ ಸವಾರಿ ಮಾಡುತ್ತಿರುವ ಹೊತ್ತಿಗೆ, ನಮಗೆ ತಲುಪುವ ಗುರಿ ಮುಖ್ಯವೇ ಹೊರತು ದಾರಿಯಲ್ಲ. ಅವಸರದಲ್ಲಿ ಮೇಲ್ಸೇತುವೆ ದಾಟಿಹೋಗುವ ನಮ್ಮನ್ನು, ʻಪಿಂಕಿ ಎಲ್ಲಿʼ ಸಿನಿಮಾ ಕೆಳಗಿಳಿಯುವಂತೆ ಮಾಡುತ್ತದೆ. ನಾವು ನೋಡಿರದ, ನೋಡಿಯೂ ಗಮನಿಸದ ನಮ್ಮ ನಡುವಿನ ಲೋಕಕ್ಕೆ ಕರೆದೊಯ್ಯುತ್ತದೆ. ಈ ಚಿತ್ರದಲ್ಲಿ ನಯನಾಜೂಕಿನ, ಮಿನುಗುದೀಪದ ಚರ್ಚ್‌ಸ್ಟ್ರೀಟ್, ಎಂಜಿ ರಸ್ತೆಯ ಬೆಂಗಳೂರಿಲ್ಲ. ಸ್ವಾರ್ಥ, ಕ್ರೌರ್ಯವೇ ಮೈದಳೆದ ಬೆಂಗಳೂರಿದೆ. 

ಪಿಂಕಿ ಎಲ್ಲಿ ಕಾಣೆಯಾದ ಮಗುವಿನ ಹುಡುಕಾಟದ ಕತೆಯೆಲ್ಲ. ಅದೊಂದು ನೆಪಮಾತ್ರ. ಆ ನೆಪದಲ್ಲಿ ನಿರ್ದೇಶಕರು ನಮಗೆ ಮಕ್ಕಳ ಕಳ್ಳತನ, ಭಿಕ್ಷಾಟನೆಯ ಜಾಲ, ಚರಂಡಿ ನೀರಲ್ಲಿ ಚಿನ್ನ ಹುಡುಕುವ ಜನ, ವಿನಾಕಾರಣ ಮಂಗಳಮುಖಿಯರನ್ನು ಪೀಡಿಸುವ ಪೊಲೀಸ್, ತಾನೆ ಹೆಣೆದ ಬಲೆಯಲ್ಲಿ ಸಿಲುಕಿ ನಲುಗುತ್ತಿರುವ ನಗರದ ಮಹಿಳೆ, ಹೀಗೆ ನಾನಾ ಪಾತ್ರವರ್ಗವನ್ನು ಪರಿಚಯಿಸುತ್ತಾರೆ.

ಈ ಚಿತ್ರ ನೋಡುವಾಗ ಅನುರಾಗ್ ಕಶ್ಯಪರ ಹಿಂದಿ ಚಿತ್ರ ʻಅಗ್ಲಿʼ, ಹೇಮಂತ್ ರಾವ್ ಅವರ ಕನ್ನಡ ಚಿತ್ರ ʻಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ನೆನಪಾಗುತ್ತದೆ. ಕಳೆದುಹೋದ ವ್ಯಕ್ತಿಯ ಹುಡುಕಾಟವೇ ಇವೆರಡೂ ಚಿತ್ರಗಳ ಮೂಲ ಎಳೆಯಾಗಿದ್ದರೂ ಪಾತ್ರಗಳ ಹಿನ್ನಲೆ ಬೇರೆ. ಮೊದಲ ಚಿತ್ರದಲ್ಲಿ ಕಳೆದುಹೋದ ಮಗುವಿದ್ದರೆ, ಎರಡನೆಯ ಚಿತ್ರದಲ್ಲಿ ಕಾಣೆಯಾದ ತಂದೆ. ಅಗ್ಲಿಯ ಮುಂಬೈ, ಗೋಧಿ ಬಣ್ಣದ ಬೆಂಗಳೂರು ತಣ್ಣಗಿನ ಕ್ರೌರ್ಯದ ತಾಣಗಳಾಗಿಯೇ ಚಿತ್ರಿತಗೊಂಡಿವೆ. ಮಗು ಸಾಯುವುದರೊಟ್ಟಿಗೆ, ತಂದೆ ಸಿಗುವುದರೊಟ್ಟಿಗೆ ಆ ಎರಡು ಚಿತ್ರಗಳು ಕೊನೆಗಾಣುತ್ತವಷ್ಟೆ. ಪೃಥ್ವಿ ಆ ಎಳೆಯನ್ನು ಅಲ್ಲಿಗೆ ಮುಗಿಸುವುದಿಲ್ಲ, ಚಿತ್ರ ವಿಭಿನ್ನವಾಗಿ ನಿಲ್ಲುವುದೇ ಅಲ್ಲಿ. ಪಿಂಕಿ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿದ್ದಂತೆ ಪಿಂಕಿ ಎಲ್ಲಿರಬೇಕು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆ ಪ್ರಶ್ನೆ ಹುಟ್ಟುಹಾಕುವ ಗದ್ದಲವೇ ಸುಖಾಂತ್ಯದ ನಿರೀಕ್ಷೆಯ ನಮ್ಮನ್ನು ನಾಚಿಕೆಗೀಡು ಮಾಡುತ್ತದೆ. ಸೂತ್ರಗಳಿಂದ ಬಿಡಿಸಿಕೊಂಡಾಗ ಮಾತ್ರ ಈ ರೀತಿಯ ಕತೆ ಹೆಣೆಯಬಹುದೇನೊ. 

ʻಪಿಂಕಿ ಎಲ್ಲಿʼ ಚಿತ್ರದಲ್ಲಿ ಎರಡು ಮುಖ್ಯ ಎಳೆಗಳಿವೆ. ನಿರ್ದೇಶಕರ ಇನ್ನೊಂದು ಚಿತ್ರ ʻಹದಿನೇಳೆಂಟುʼ ಕೂಡ ಎರಡು ಮುಖ್ಯಧಾರೆಯನ್ನು ಹೊಂದಿದೆ, ಹದಿಹರೆಯದ ಕಾಮ ಮತ್ತು ಜಾತಿ, ವರ್ಗ ಸಂಘರ್ಷ. ಪಿಂಕಿ ಎಲ್ಲಿಯಲ್ಲಿ ಮಕ್ಕಳ ಕಳ್ಳತನ ಒಂದು ಎಳೆಯಾದರೆ, ಕವಲುದಾರಿಯಲ್ಲಿರುವ ದಾಂಪತ್ಯ ಇನ್ನೊಂದು ಎಳೆ. ಈ ಚಿತ್ರದಲ್ಲಿ ನಮಗೆ ಸತ್ತು ಹೋದ ಮಗುವಿನ ಹೆಸರಲ್ಲಿ ಪಿಂಕಿ ಸಾಕುವ ಆಸೆ ತೋರುವ ಪಾತಮ್ಮ, ಅರಿವಿದ್ದೂ ಎಡವಿ ಪಿಂಕಿಗಾಗಿ ಗೋಳಾಡುವ ಸಣ್ಣಮ್ಮ, ದ್ವೇಷವೇ ಮೈದುಂಬಿಕೊಂಡ ಮಂಜುನಾಥ, ಸಮಸ್ಯೆಯಿಂದ ಸಮಾನ ಅಂತರ ಕಾಯ್ದುಕೊಳ್ಳುವ ಗಿರೀಶ, ಮುದ್ದಾದ ಕೂಸನ್ನು ಕಸದ ನಡುವೆ ಬಿಟ್ಟು ಕುಡಿಯಲು ಹೋಗುವ ಅನಸೂಯ, ಕೂಸು ಮಾರಾದರೂ ಕಾಸು ಮಾಡಬೇಕೆನ್ನುವ ಸೂಪರ್‌ವೈಜರ್‌ ಸಿಗುತ್ತಾರೆ.

ಈ ಎಲ್ಲಾ ಪಾತ್ರಧಾರಿಗಳ ರಂಗಮಂಚವಾಗಿ ಬೆಂಗಳೂರಿದೆ. ಗಗನಚುಂಬಿ ಕಟ್ಟಡಗಳ ಹಿಂದಿನ ವಿಶಾಲ ಬಯಲು, ಅಲ್ಲಿನ ಕಸದ ರಾಶಿ, ಮೇಲ್ಸೇತುವೆ ಕೆಳಗಿನ ಸಂತೆ, ಸೈಯದ್ ಪಾಳ್ಯದ ಮಾರಿಯಮ್ಮ ದೇವಸ್ಥಾನ ನಮ್ಮನ್ನು ಹೊಸ ಲೋಕಕ್ಕೆ ಪರಿಚಯಿಸುತ್ತವೆ. ಹಾಗೆಯೆ ಪಾತ್ರಪೋಷಣೆ ನಿಷ್ಪಕ್ಷಪಾತವಾಗಿರುವುದು, ನಿರ್ಣಯಾತ್ಮಕವಾಗಿ ಇದು ಹೀಗೇ ಅಂತ ಹೇಳದೆ ಇರುವುದು ನಿರ್ದೇಶಕರ ಗೆಲುವು. ಗಿರೀಶ್ ಕಾರ್ನಾಡರ, ʻಬೆಂದಕಾಳು ಆನ್ ಟೋಸ್ಟ್ʼ ನಾಟಕದಲ್ಲಿ ಮನೆಗೆಲಸದವಳ ಮನೆಯನ್ನು ಹುಡುಕುವ ದೃಶ್ಯವೊಂದು ಬರುತ್ತದೆ. ಅನುದಿನದ ಸಂಗಾತಿಗಳಾದರೂ ಅವರೆಷ್ಟು ಅಪರಿಚಿತರು ಅನ್ನಿಸುವ ಅದೇ ಭಾವ ಈ ಚಿತ್ರದಲ್ಲಿ ಉಂಟಾಗುತ್ತದೆ. ಸಣ್ಣಮ್ಮನ ಮಗನ ಪರಿಸ್ಥಿತಿ ನೋಡಿ ಬಿಂದು ಒಟ್ಟಿಗೆ ನಾವು ಆಶ್ಚರ್ಯಕೊಳಗಾಗುತ್ತೇವೆ. ನಮಗೆ ಅವರ ಬಗ್ಗೆ ಏನೂ ಗೊತ್ತಿಲ್ಲವೆಂದಾಗ ಭಯ, ನಾಚಿಕೆ ಒಟ್ಟೊಟ್ಟಿಗೆ ಆಗುತ್ತದೆ. 

“ಈ ಊರು ನಮಗೆ ಏನು ಕೊಟ್ಟಿದೆ, ಬಿಟ್ಟು ಹೋಗಣ”

“ನನ್ನ ಗಂಡ ಹೇಳಿದ್ರೂ ಕೇಳಲ್ಲ ಸಾರ್, ಸೂಳೇಮಗ”

“ಮಗೂಗೆ ಏಡ್ಸ್ ಇದೇನಾ”

“ಮಗೂನ ಗುಂಡಿಗೆ ಹಾಕ್ತಿಯಾ”

“ಮಗೂಗೆ ಎಷ್ಟು ಬ್ರ್ಯಾಂಡಿ ಕುಡಿಸ್ತಿದ್ದೆ”

“ಪೊಲೀಸ್ ಹಿಡ್ಕೊಂಡ್ ಹೋದ್ರೆ ನನ್ ೩ ಜನ ತಮ್ಮಂದಿರನ್ನ ನೀನು ನೋಡ್ಕೋತೀಯ”

ಹೀಗೆ ಎಗ್ಗಿಲ್ಲದ, ತೀರಾ ಒರಟು ಎನ್ನಿಸಬಹುದಾದಂತ ಸಂಭಾಷಣೆ ಸಿನಿಮಾದ ತುಂಬಾ ಇದೆ. ಆಯಾ ಪಾತ್ರಗಳ ಬಾಯಲ್ಲಿ ಅದು ತೀರಾ ಸಹಜವೆಂಬಂತೆ ಕೇಳಿಸಿದರೂ ಮನಸ್ಸಿಗೆ ಒಪ್ಪಿಕೊಳ್ಳಲೂ ಏನೋ ಕಿರಿಕಿರಿ. ಚಂದದ ಚಂದಿರನಂತೆ ಮಲಗಿರುವ ಆ ಮಗವನ್ನು ಅದ್ಯಾವುದೊ ಮಾಸಲು ಚೀಲದಲ್ಲಿ ತುಂಬಿಕೊಂಡು ಪಾತು ಪಾತ್ರದಾರಿ ಎತ್ತಿಕೊಂಡಾಗೆಲ್ಲ ಅಸಹಾಯಕತೆಯಲ್ಲಿ ಕೈ ಹಿಸುಕಿಕೊಳ್ಳುವಂತೆ ಆಗುತ್ತದೆ. ಸಹಜ ಸಂಭಾಷಣೆಯೇ ಚಿತ್ರವನ್ನು  ಹೆಚ್ಚೆಚ್ಚು ವಾಸ್ತವವಾದಿ ಅನ್ನಿಸುವಂತೆ ಮಾಡಿದೆ.  

ಯಾರಾದರೂ ನಟಿಸುತ್ತಿದ್ದಾರೆ ಅಂತನ್ನಿಸದೆ ಇರುವುದೇ ನಟರ ಹೆಗ್ಗಳಿಕೆ. ಇನ್ನು ನಿರ್ದೇಶಕರು ಸೃಷ್ಟಿಸಿರುವ ಬಿಂದು (ಪಿಂಕಿಯ ಅಮ್ಮ) ಪಾತ್ರವನ್ನು ಅದರ ಎಲ್ಲ ಪೂರ್ವಾಪರಗಳ ಕಾರಣದಿಂದ ನಾವು ಸಿಟ್ಟಿನಲ್ಲಿ ಜಡ್ಜ್ ಮಾಡಬಹುದಾದ ಅವಕಾಶವನ್ನು ಅಕ್ಷತಾ ಪಾಂಡವಪುರ ತಮ್ಮ ನುರಿತ ನಟನಾ ಕೌಶಲದಿಂದ ತಪ್ಪಿಸುತ್ತಾರೆ. ತನ್ನ ತಪ್ಪು ಒಪ್ಪಿಕೊಳ್ಳುವಾಗ ಆಕೆ ತೋರುವ ಘನತೆ, ತಾನು ತೆಗೆದುಕೊಂಡ ನಿರ್ಧಾರದ ಬಗೆಗಿನ ಖಾಚಿತ್ಯ ಎರಡರಲ್ಲೂ ಅವರದು  ಅದ್ಭುತ ಅಭಿನಯ.  ಯಾವುದೇ ಹಿನ್ನಲೆ ಸಂಗೀತವಿಲ್ಲದ ಈ ಚಿತ್ರದಲ್ಲಿ ಸಣ್ಣಪುಟ್ಟ ಸಂಗತಿಗಳ ಮೂಲಕವೇ ನಿರ್ದೇಶಕರು ಬಹಳಷ್ಟು ವಿಷಯವನ್ನು ದಾಟಿಸಿ ಬಿಡುತ್ತಾರೆ. ಗಂಡನನ್ನು ಹುಡುಕಿಕೊಂಡು ಪೊಲೀಸ್ ಸ್ಟೇಷನ್ನಿಗೆ ಬರುವ ಪಾತಮ್ಮನನ್ನು ಕಾನ್‌ಸ್ಟೆಬಲ್‌ ನಡೆಸಿಕೊಳ್ಳುವ ರೀತಿ, ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುವ ಮೊದಲು ಲಿಪ್‌ಸ್ಟಿಕ್‌ ಹಚ್ಚಿ ಮತ್ತೆ ಅಳಿಸಿಕೊಳ್ಳುವ, ತಾಳಿ ಹಾಕಿ ತಕ್ಷಣ  ತೆಗೆದಿಡುವ  ಬಿಂದು ಹೀಗೆ ವಾಚ್ಯವಾಗಿಸದೆ ನಿರ್ದೇಶಕರು ಕತೆ ಕಟ್ಟುವುದನ್ನು ನೋಡುವುದೇ ಚಂದ.

ಮಗು ಸಿಗುವವರೆಗೆ ಒಂದೇ ಗುಂಪಿನವರಂತೆ ಇರುವ ಬಿಂದು, ಮಂಜುನಾಥ ಆಸ್ಪತ್ರೆಯಲ್ಲಿ ಮಗು ಸುರಕ್ಷಿತವಾಗಿದೆ ಎಂದು ಗೊತ್ತಾಗುತ್ತಿದಂತೆ ನಿಂತ ಜಾಗದಲ್ಲೇ ಜಗಳ ಕಾಯುವುದು ಮನುಷ್ಯನ ಸ್ವಾರ್ಥ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಚಿತ್ರದ ಅಂತ್ಯವಂತೂ ವ್ಯಕ್ತಿಯೊಬ್ಬ ಆಯ್ಕೆ ಮಾಡಲೇಬೇಕಾದ ಬಿಕ್ಕಟ್ಟಿನ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಗಿರೀಶ, ಪಿಂಕಿ, ಮಂಜುನಾಥನ ನಡುವೆ ಸಿಕ್ಕು ಬಿಂದು ಒದ್ದಾಡುತ್ತಾಳೆ. ಎಲ್ಲ ತನ್ನಿಷ್ಟಕ್ಕೆ ತಕ್ಕಂತೆ ಆದ ಮೇಲೆ ಮನೆಗೆ ಬಿಡಲಾ ಅಂತ ಕಾಳಜಿ ತೋರುವ ಗಂಡ, ನನ್ನ ಬಿಟ್ಟು ಇನ್ನೆಲ್ಲಿ ಹೋಗ್ತಾಳೆ ಅಂತ ಕಾದಿರುವ ಗೆಳೆಯ, ಇವರಿಬ್ಬರನ್ನೂ ಬಿಟ್ಟು ಒಬ್ಬಳೇ ಆಟೋ ಹತ್ತಿ ಹೋಗುವ ಬಿಂದುವಿನ ಆಯ್ಕೆ ಸರಿಯೆನಿಸಿದರೂ, ಕೊನೆಗೂ ಸ್ವೇಚ್ಛೆಯ ಬದುಕನ್ನು ಆಯ್ದುಕೊಂಡ ಈ ಜೀವಿಗಳಲ್ಲಿ ಯಾರು ಖುಷಿಯಾಗಿಲ್ಲವಲ್ಲ ಎಂದು ಬೇಸರವಾಗುತ್ತದೆ. 

ಇಷ್ಟೆಲ್ಲಾ ಬರೆದ ಮೇಲೂ ಹೇಳದೆ ಉಳಿಯುವ ಒಂದು ವಿಷಯವೆಂದರೆ, ದೊಡ್ಡ ಸಂಖ್ಯೆಯಲ್ಲಿ ಹೋಗಿ ʻಪಿಂಕಿ ಎಲ್ಲಿʼ ಮಾದರಿಯ ಚಿತ್ರ ನೋಡುವ ತನಕ, ನಮ್ಮ ನೆಲದ ನಿರ್ದೇಶಕರು ಈ ರೀತಿಯ ಚಿತ್ರಗಳನ್ನು ಮುಂದೆಯೂ ಮಾಡಲಿ ಅಂತ ಹೇಳುವ ಅಧಿಕಾರ ನಮಗಿರುವುದಿಲ್ಲವಷ್ಟೆ. ಸಾಧ್ಯವಾದರೆ ʻಪಿಂಕಿ ಎಲ್ಲಿʼ ಚಲನಚಿತ್ರವನ್ನು ನೋಡಿ ಎಂಬುದಷ್ಟೇ ನನ್ನ ಮನವಿ.  

‍ಲೇಖಕರು avadhi

June 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: