ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Told by My Mother…

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

‘ರಂಗ ಕೈರಳಿ’ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

3

Told by My Mother

Director: Ali Chahrour

ನಾನೀಗ ಹೇಳಹೊರಟಿದ್ದು ಇಡಿಯ ಇಟ್ಫಾಕ್ ನಾಟಕದ ಹಬ್ಬವನ್ನು ಕಾಡಿದ ಲೆಬನಾನ್ ನ ನಾಟಕ Told by My Mother ಕುರಿತು.

ಆ ನಾಟಕದ ಪ್ರದರ್ಶನ ಇದ್ದಿದ್ದು Actor ಮುರಳಿ’ ಥಿಯೇಟರ್ ನಲ್ಲಿ. ‘ಭರತ್ ಮುರಳಿ’ ಎಂದೇ ಕರೆಸಿಕೊಳ್ಳುತ್ತಿದ್ದ ಮುರಳಿ ರಂಗಭೂಮಿ, ಸಿನಿಮಾ ದ ಪ್ರತೆಭಾವಂತ ನಟ. ತನ್ನ ಕೊನೆಯ ದಿನಗಳಲ್ಲಿ ಕೇರಳ ಸಂಗೀತ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದ ಮುರಳಿ ಯವರ ಕನಸಿನ ಕೂಸು ಈ ‘ಇಟ್ಫಾಕ್’. ಈಗ ನಾವೇನಾದರೂ ಜಗತ್ತಿನಾದ್ಯಂತ ನಡೆವ ನಾಟ್ಕಗಳನ್ನ ಇಲ್ಲಿ ಕೂತು ನೋಡ್ತಿದ್ರೆ ಅದಕ್ಕೆ ಅವರೇ ಕಾರಣ. ಈಗ ಅವರ ಹೆಸರಿನಲ್ಲೇ ಕ್ಯಾಂಪಸ್ ನಲ್ಲಿ ಒಂದು ದೊಡ್ಡ ರಂಗಮಂದಿರವಿದೆ. ಸುಮಾರು ಎರಡು ಸಾವಿರ ಜನ ಕುಳಿತುಕೊಳ್ಳಬಹುದಾದ್ದು. ಗ್ಯಾಲರಿಯ ಮಾದರಿಯದ್ದು. ಮುರಳಿ ಅಭಿನಯಿಸಿದ ಶ್ರೀಕಂಠನ್ ನಾಯರ್ ರ ‘ಲಂಕಾಲಕ್ಷ್ಮಿ’ ನಾಟಕ ನೋಡಿದ ನೆನಪು.

ನಮ್ಮಲ್ಲಿಗೂ ಬಂದಿದ್ರು ಭರತ್ ಮುರಳಿ. ಆಗ ಕರ್ನಾಟಕ ನಾಟಕ ಅಕಾಡಮಿಗೆ ಆರ್ ನಾಗೇಶ್ ಆಧ್ಯಕ್ಷರಾಗಿದ್ರು. ನಾನು ಸದಸ್ಯನಾಗಿದ್ದೆ ಆಗ. ನಾಟಕ ಅಕಾಡಮಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅತಿಥಿಗಳನ್ನಾಗಿ ಅವರನ್ನು ಕರೆಸಿದ್ದೆವು. ನಾನು, ಕಾಸರಗೋಡು ಚಿನ್ನ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡು ಅವರ ಜೊತೆ ತುಂಬ ಹೊತ್ತು ಕಳೆದಿದ್ದೆವು.

ಇಂಥ ಮಹಾನ್ನಟ ಮುತಳಿಯವರ ನೆನಪಿನ ರಂಗಸ್ಥಳದಲ್ಲಿ ನಾನಿವತ್ತು ಲೆಬನಾನ್ ನ ನಾಟ್ಕ ನೋಡೋಕೆ ಕುಳಿತಿದ್ದೆ.

ಲೆಬನಾನ್ ನದು ಒಂಥರಾ ನಿಲ್ಲದ ಸಂಘರ್ಷ. ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಮನೆಗಳು ಅಳಿದಿವೆ. ಎಷ್ಟೋ ಜನ ಕಳೆದು ಹೋಗಿದ್ದಾರೆ. ಲೆಬನಾನ್ ನಿಂದ ಸಿರಿಯಾಕ್ಕೆ ಮಲಿಟರಿ ಟ್ರೇನಿಂಗಿಗೆಂದು ಹೋದ ಎಷ್ಟೋ ಯುವಕರು ಮರಳಿ ಮನೆಗೇ ಬಂದಿಲ್ಲ. ಅವರ ಸುದ್ದಿಯೂ ಇಲ್ಲ. ಎಷ್ಟೋ ತಾಯಂದಿರು ಸಿರಿಯಾಕ್ಕೆ ಹೋಗಿ ಮರಳಿ ಬಾರದ ಮಕ್ಕಳಿಗಾಗಿ ಕಾಯುತ್ತಲೇ ಇದ್ದಾರೆ. ಇಂಥ ಎರಡು ತಾಯಂದಿರ ನೋವಿನ ಬದುಕಿನೊಳಗಿಂದ ಬಂದ ರಂಗಕೃತಿಯಿದು.

ನಿರ್ದೇಶಕ, ನೃತ್ಯಪಟು Ali Chahrour  ಹರಿದು ಹೋದ ಲೆಬನಾನ್ ನಲ್ಲಿ ತನ್ನದೇ ಕುಟುಂಬ ಅನುಭವಿಸಿದ ಯಾತನೆಯ ನೋವುಗಳೊಂದಿಗೆ ‘ಪ್ರೀತಿ’ಯ ಭಾವದ ಈ ಕಥನ ಕಟ್ಟುತ್ತಾರೆ. ಇಲ್ಲಿ ಇಬ್ಬರು ತಾಯಂದಿರಿದ್ದಾರೆ. ಒಬ್ಬಳು ಲೀಲಾ. ತನ್ನ ಮಗ ಅಬ್ಬಾಸ್ ಸಿರಿಯಾ ಕ್ಕೆ ಹೋಗಿ ಎಲ್ಲಿ ಹುತಾತ್ಮನಾದಾನೋ ಎನ್ನೋ ಭಯದೊಂದಿಗೆ, ಹೇಗಾದರೂ ಮಾಡಿ ಮಗನನ್ನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಇನ್ನೊಬ್ಬ ತಾಯಿ ಫಾತ್ಮಾ ಕಳೆದು ಹೋದ ತನ್ನ ಮಗ ಹಸನ್ ಗಾಗಿ ಊರೂರು ಅಲೆಯುತ್ತ ಹುಡುಕುತ್ತಿದ್ದಾಳೆ.

ನಾಟಕ ಶುರುವಾಗೋದೇ ಕವನ ವಾಚನದೊಂದಿಗೆ. ಒಡಲಲ್ಲಿ ನೋವನ್ನೇ ಹೊತ್ತ ಕವನವದು. ಕವನ ಅರಳುತ್ತಿದ್ದ ಹಾಗೆ ತೆರೆದುಕೊಳ್ಳುತ್ತ ಹೋಗುವ ಭಾವತೀವ್ರತೆಯ ನಾದಗಳು, ಚಲನೆಗಳು, ನರ್ತನ ತಾಯ ಪ್ರೀತಿಯ ಸ್ಥಾಯೀಭಾವವನ್ನು ನಿಧಾನ ಎದೆಗಳಲ್ಲಿ ಇಳಿಸುತ್ತ ಸಾಗುತ್ತವೆ. ಜನಸಾಮಾನ್ಯರ ನಡುವಿನಿಂದ ಬಂದ ಈ ಇಬ್ಬರು ತಾಯಂದಿರು ಇಡಿಯ ದೇಶದ ದುರಂತವನ್ನೇ ತೆರೆದಿಟ್ಟುಬಿಡುತ್ತಾರೆ.

ಇಲ್ಲ. ಇಲ್ಲಿ ಕಥಾಭಿನಯವೇ ಇಲ್ಲ. ರಂಗಕೃತಿಗೆ ಪ್ರವೇಶಿಕೆ ದೊರಕಿಸುವ ಮೊದಲ ಕವನದೊಳಗೆ ಹೊಕ್ಕುಬಿಟ್ಟರೆ ತೆರೆದುಕೊಳ್ಳುವದೇ ಪ್ರೀತಿಯ, ನೋವಿನ ಭಾವಲೋಕ. ಉದ್ದಕ್ಕೂ ಹರಿಯುವ ಅರೇಬಿಯನ್ ವಾದ್ಯಗಳ ಸಂಗೀತ. ಅಬ್ಬಾ! ಒಂದು ಪಿಟೀಲಿನಂಥ ವಾದ್ಯಕ್ಕೂ ಅದೆಷ್ಟು ಸಾಧ್ಯತೆಗಳು! ಕೆಲವೊಮ್ಮೆಯಂತೂ ಮೀಟಿದ ವಾದ್ಯದ ತಂತಿ ಹೃದಯದಾಳಕ್ಕೇ ಹೊಕ್ಕು ಝಲ್ ಎನಿಸಿಬಿಡುತ್ತದೆ. ಇರುವ ಒಂದೆರಡೇ ವಾದ್ಯಗಳು ಮಾಡುವ ಪ್ರಭಾವ ಮಾತ್ರ ಅಗಾಧ. ಅದ್ಭುತವಾದ ಹಾಡುಗಾರಿಕೆ, ನವಿರಾದ, ಸರಳವಾದ ಆದರೆ ಭಾವ ತುಂಬಿದ ರಂಗಚಲನೆಗಳು.

ಸುಮ್ಮನೆ ಕೂತು ಅನುಭವಿಸುತ್ತ ಹೋಗಬೇಕು ಅಷ್ಟೆ.

ಕಳೆದು ಹೋದ ಹಸನ್ ನನ್ನು ಹುಡುಕುತ್ತ ತಿರುಗುತ್ತಿರುವ ತಾಯಿ ಫಾತ್ಮಾ ಹೇಳುತ್ತಾಳೆ.

‘ನಾವು ಎಲ್ಲ ಕಡೆಗೂ ಹೋಗಿ ನಾಟಕ ಆಡ್ತೇವೆ. ಒಂದಲ್ಲಾ ಒಂದು ದಿನ ಪ್ರೇಕ್ಷಕರ ನಡುವಿನಿಂದ ಕಳೆದು ಹೋಗಿರುವ ನನ್ನ ಹಸನ್ ಎದ್ದು ಬಂದಾನು’ ಎಂಬ ಆಸೆಯಿಂದನಮ್ಮ ಕಣ್ಣುಗಳು ತೇವಗೊಂಡಿರುತ್ತವೆ.

। ನಾಳೆಗೆ ಇನ್ನೊಂದು ನಾಟಕ ।

‍ಲೇಖಕರು avadhi

March 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: