ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿಟಕಿಯ ಅಂಚಿಗಂಟಿ ಒಂದೆರೆಡು ಹನಿ ಜೋಳಿಗೆ ಸೇರಿದಾಗ..

ಅನಾಥ

ವಿಜಯ್ ಹೂಗಾರ್

ರೈಲಿನ ತೆಕ್ಕೆಯಲಿ ತೂಗುವ ಅರ್ದಂಬರ್ದ ನಿದ್ದೆ
ಕೆಟ್ಟದಾಗಿ ಕೂಗಿತು,
ಸಂಭೋಗದರ್ದಲ್ಲೇ ಶ್ವಾನಕ್ಕೆ ಕಲ್ಲುತೂರಿ ಬಂದಂಗೆ.
ಇನ್ನೇನು ಸ್ವಲ್ಪದರಲ್ಲೇ ಕಚ್ಚಿ ಪಾರಾದ ನಿದ್ದೆಯ ಮುಂದೆ
ನಿನ್ನೆನಾಳೆಗಳ ಭರ್ಪೂರ್ಕನಸುಗಳ ರಾಶಿ
ಕಣ್ಣೆದುರು ಎದ್ದು ಕೂತಿದ್ದವು.
ಪೂರ್ತಿಯಾಗಿ ದಕ್ಕಿಸಿ ಕೊಂಡವರ
ಹಸಿಕಣ್ಣಿನ ಪಿಚ್ಚು, ಆಕಳಿಸಿ ಬಿಟ್ಟ ಹಬೆ
ಕಚ್ಚಿತು ಎಲ್ಲರ ಮೂಗು .
 
ಕಿಟಕಿಯ ಸೀಟಿನಿಂದ,
ಕನಸಿಗೆ ಇನ್ನು ಹತ್ತಿರದಿಂದ ಇಣುಕಬಹುದು,
ಕೆಣಕಬಹುದು, ಕೈಬೀಸಿ ಮುದ್ದಾಡಬಹುದು.
ಮಳೆ ನಿಂತ ಮೇಲೆ
ಕಿಟಕಿಯ ಅಂಚಿಗಂಟಿ ಒಂದೆರೆಡು ಹನಿ ಜೋಳಿಗೆ
ಸೇರಿದಾಗ, ಸಾರ್ಥಕ ಪಯಣ
ಪುಟ್ಟ ಪೋರನ ಪಾಲಿಗೆ.

ನಾಜೂಕು ಹೆಜ್ಜೆಯ ಕುರುಡು ಅಣ್ಣನ
ಕೈಹಿಡಿದ ಪೋರಿಯ
ಹಳೆಯ ಹಿಂದಿ ಹಾಡಿಗೆ, ಹೊಚ್ಚ ಹೊಸ ಧಾಟಿ
ಸೇರಿದರು,
ಅಪಸ್ವರವಾಯಿತು ಯಾರ ಎದೆಗು ನಾಟದೇ.
 
ಅರೆನಿದ್ದೆಗೆ ಜಾರಿದವಳ ಎದೆಯ ಮೇಲೆ
ಜನ ಕಣ್ಣುರಿ ಹೆಕ್ಕಿ,ಕುಕ್ಕಿತಿನ್ನುವಾಗ
ಪಿಳಿಪಿಳಿ ಕಣ್ಣು ಬಿಡುವ ದೀಪವೊಂದೇ ಸಾಕ್ಷಿಯಾಗಿ ನಿಂತಿತ್ತು .
 
ಪಾಪುವೊಂದು ಗಡಿಬಿಡಿಯ ಅನ್ನತಿಂದು
ಬಿಕ್ಕಳಿಸಿ ನಿಂತಾಗ,
ನೀರಿಗಾಗಿ ಚಾಚುವ ಕೈಗಳೇ ಕಾಣಲಿಲ್ಲ ಅವಳಿಗೆ.
ಮಣ್ಣಿಗೆ ಹೊರಟು ನಿಂತ ಆಕೆ, ಬಾಟಲಿಗೆ ನೀರು ತುಂಬಿ
ಅವಸರದಲ್ಲಿ ಮರೆತು ಬಂದಾಗ
ಹೊರಗಡೆ ಮಳೆಯಾಗುತ್ತಿತ್ತು
ಕುರುಡು ಕಣ್ಣಿನಿಂದ ತೂಗಿ ಬೀಳುವ ಕಣ್ಣ ಹನಿಯಂತೆ.
 
ಜೋರು ಜೋರಾಗಿ ಓಡುವ ರೈಲಿಗೆ
ಒಮ್ಮೆಯಾದರು ಕಾಡಿದಿಯೇ?
ಸಾಲು ಸಾಲಾಗಿ ಇಟ್ಟ ಲಗೆಜುಗಳಿಗೆ
ಕೆಲಕಾಲ ಅನಾಥ ಪ್ರಜ್ಞೆ ಕಾಡಿದಂತೆ.
 

‍ಲೇಖಕರು G

30 May, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading