ಕಿಟಕಿಯೊಳಗಿಂದ..

ಧೀರಜ್ ಬೆಳ್ಳಾರೆ

ಕಿರುಗತೆಗಳು

ಕಿಟಕಿಯೊಳಗಿಂದ

ಎಚ್ಚರವಾದಾಗ 8.50 ದಿನನಿತ್ಯದಂತೆ ರೂಮಿನ ಕಿಟಕಿಯಿಂದ ಹೊರನೋಡುತ್ತಾ ಕೂರುವುದು ರೇವಂತನ ಅಭ್ಯಾಸ. ಹೆಚ್ಚಾಗಿ ಹುಡುಗೀರನ್ನ ನೋಡೋ ಅವನು ಲಾಕ್ ಡೌನ್ ಆದ್ರಿಂದ ಯಾರೂ ಸಿಗದೆ ಸುತ್ತ ಮುತ್ತ ಗಮನಿಸಲಾರಂಭಿಸಿದ. ಹೊಸತೊಂದು ಜಗತ್ತು ಕಣ್ಣಮುಂದೆ ಬಂದಿಳಿಯಿತು.

ರಸ್ತೆಯ ಬದಿಯಲ್ಲೊಂದು ಗೂಡಿನಂಥ ಅಂಗಡಿ  ,ಪಕ್ಕದಲ್ಲಿ ಕೊಳಚೆ ನೀರಿನ ರಾಜಮಾರ್ಗ, ಮಳೆಗಾಲವೋ ಜಲಾಶಯದ ಮಧ್ಯದ ನಡುಗುಡ್ಡೆಯಂತಾಗುತ್ತದೆ. ದಿನವೋ ಹಾಗೆ ಓದೋ ರೇವಂತನಿಗೆ ಲಾಕ್ ಡೌನ್ ಹೊಸತೆನಿಸುತ್ತಿಲ್ಲ.

“ಆದ್ರೆ ಕಣ್ಣಿಗೆ?”

ಆಲೋಚನೆಯೊಂದು ಕದ ತಟ್ಟಲಾರಂಭಿಸಿತು ಬದುಕು ಹೇಗೆ‌ ಸಾಧ್ಯ ಸಣ್ಣ ಗೂಡಿನಿಂದ? ಅಲ್ಲೊಬ್ಬ ನಡು  ವಯಸ್ಸಿನ ವ್ಯಕ್ತಿ ,ಕಡು ಕಪ್ಪು ಬಣ್ಣ. ದಿನವೂ ಅಂಗಡಿ ತೆರೆದು ಕಾಲುಗಳೆರಡರ ಮಧ್ಯ ಒಂದು ಚಪ್ಪಲಿ. ಸೂಜಿಗೆ ಕಪ್ಪು ದಾರ ಪೋಣಿಸಿ ಹೊಲಿಯೋಕೆ ಶುರು ಮಾಡುತ್ತಾನೆ .ದಿನವೂ ಅದೇ ಚಪ್ಪಲಿ!. “ನಡೆದಾಡುವವರಿಲ್ಲದೆ ಚಪ್ಪಲಿ ಹರಿಯುವುದೆಂತು!” ಕಣ್ಣಲಿ ದಿನವೂ ಕಾತುರತೆ. ಮದ್ಯಾಹ್ನ ಮುಚ್ಚಿದ ಬಾಗಿಲು ತೆರೆಯುವುದು ಮರುದಿನ ಬೆಳಗ್ಗೆ. ನೀರೊಂದು ಬಿಟ್ಟರೆ ಹೊಟ್ಟೆಯೊಳಗೆ ಏನೂ ಇಳಿಯೋದು ಕಂಡಿಲ್ಲ .

ದಿನವೂ ನಮಸ್ಕರಿಸುತ್ತಾನೆ, ಕಣ್ಣು ಮುಚ್ಚಿ ಪ್ರಾರ್ಥಿಸುತ್ತಾನೆ. ಆದರೆ ಫಲ? ಛಲ ಬಿಟ್ಟಿಲ್ಲಾ. ಇಂದಿಲ್ಲವಾದರೆ ನಾಳೆ. ಮಾತಿಗೂ ಯಾರೂ ಸಿಗುತಿಲ್ಲ ಸಾಮಾಜಿಕ ಅಂತರವಲ್ಲವೇ ಅದು ಮನಸ್ಸಿಗೂ ತಟ್ಟಿದೆ. ಮುಖದಲ್ಲಿ ನೋವಿದ್ದರೂ ಉತ್ಸಾಹವಿಳಿದಿಲ್ಲ. ನಗು ಮೂಡೋದನ್ನ ರೇವಂತ ಕಾಯುತ್ತಿದ್ದಾನೆ. ಆ ದಿನ ಜೋರು ಮಳೆ. ಮೂಲೆಯಲ್ಲಿ ಮುದುರಿ ಕೂತಿರುವಾಗ ರಿಂಗಣಿಸಿದ  ಪೋನನ್ನು ಸ್ವೀಕರಿಸಿದ.

ಮಾತು‌ ಕೇಳಿಸುತ್ತಿಲ್ಲ. ಕೈ ಹೊರ ಹಾಕಿ ಮಳೆ‌ ಹನಿಗಳ ಹಿಡಿದ , ಹರಿಯುತ್ತಿರೋ ಕಣ್ಣೀರ ಒರೆಸಿ ಮುಖದಲ್ಲಿ ‌ಗೆಲುವಿನ‌ ನಗೆ ತುಂಬಿಕೊಂಡ  ತನ್ನ ಚೀಲ ಹಿಡಿದು ಬಾಗಿಲೆಳೆದುಕೊಂಡು ಹೊರಟ. ನಗುವಿಗೆ ಕಾರಣ? ಗೊತ್ತಿಲ್ಲ. ಇತ್ತ ರೂಮಿನಲ್ಲಿ‌ ರೇವಂತ ಪೋನಿಗೆ ಕೈ ಹಾಕಿದ. ಹರಿದಿರೋ ಸಂಬಂಧಗಳ ಜೋಡಿಸಲೋಸುಗ…

 ಆಯುವವನು

ಕತ್ತಲೆಯನ್ನು ತುಂಡರಿಸುವ ಬೆಳಕು ಇನ್ನೇನು ಹರಿಯುವ ಸಮಯ, ಬೀದಿ ದೀಪಗಳ ಬೆಳಕು ನೆಲಕ್ಕೆ ಬಡಿದು ಚದುರಿದೆ. ಅನುದಿನ ಇದೇ ಸಮಯಕ್ಕೆ ಆತ ಊರಿನ ಮೂಲೆಯಿಂದ ಆರಂಭಿಸುತ್ತಾನೆ. ಅವನ ಬಂಧುಗಳ ಹಾಗೆ ಮೈಗಂಟಿರೋ ಬಟ್ಟೆ ಒಂದಿನವೂ ತೊರೆದಿಲ್ಲ. ಮೋಡದ ಕಣ್ಣೀರಿಂದ ಮಾತ್ರ ಅವನ ದಿರಿಸು ನೆನೆಯುತ್ತದೆ. ಕಾಲ್ನಡಿಗೆಯ ಪಯಣ, ಪಾದದಡಿ ಚುಚ್ಚಿ ರಕ್ತ ಬಂದರೂ ಮನಸ್ಸಿಗಾದ ಗಾಯದ ಮುಂದೆ ಅದೇನು ದೊಡ್ಡದಲ್ಲ.

ಹೆಗಲ ಮೇಲೊಂದು ಚೀಲ ಆತ್ಮೀಯನ ತರಹ. ಸಾರಾಯಿ ಬಾಟಲಿಗಳು, ಕಬ್ಬಿಣ, ಪ್ಲಾಸ್ಟಿಕ್ ಹೀಗೆ ಎಲ್ಲವೂ ಆತನ ಚೀಲದೊಳಗೆ ಸೇರುತ್ತದೆ. ಅದ್ಯಾವತ್ತೂ ಖಾಲಿಯಾಗಿಲ್ಲ, ಒಳಗೇನಿದೆಯೋ ಗೊತ್ತಿಲ್ಲ? ಮನಸ್ಸಿನ ತರಹ. ಗಾಡಿಗಳನ್ನ ನೋಡಿದ್ದಾನೆ ಒಂದಿನವೂ ಅದರೊಳಗೆ ಏರಿಲ್ಲ.

ಎಲ್ಲವನ್ನೂ ಗಮನಿಸುತ್ತಾನೆ.

ಕೈ ಕೈ ಹಿಡಿದು ನಡೆಯೋ ಪ್ರೇಮಿ, ಮಗುವಿಗೆ ಬೈಯ್ಯೋ ತಾಯಿ, ಉದ್ಯಮಿಯ ಚಿಂತೆ, ನಿರುದ್ಯೋಗಿಯ ಅಳಲು, ಕೆಲಸಕ್ಕೆ ದೂರದ ಊರಿಗೆ ಹೊರಟ ಮಗಳು, ಜೊತೆಗಾರನೊಬ್ಬ ಬಿದ್ದಾಗ ಕದ್ದು ನಗೋ ಜನ, ಕ್ರೌರ್ಯವನ್ನು ಪ್ರೀತಿಸುವ ಮನಸ್ಸು, ಸಾಧಿಸುವವನ ಕಾಲೆಳೆಯುವವರು, ಎಲ್ಲರನ್ನೂ ಕುಣಿಸೋ ದುಡ್ಡು, ಪೋಲಿ ಮಾತುಗಳು, ಹೊಸದಾಗಿ ಆರಂಭವಾದ ಅಂಗಡಿ, ಬಿಕೋ ಎನ್ನುತ್ತಿರುವ ಹೋಟೇಲ್, ಎತ್ತರದ ಮತ್ತು ಅಂದವಾದ ಗೋಡೆಗಳನ್ನು ಕಟ್ಟಿಸಿಕೊಳ್ಳುತ್ತಿರುವ ಸ್ಮಶಾನಗಳು,  ಜಾತಿ ಧರ್ಮಗಳಿಗೆ ಸೀಮಿತವಾದ ಬಣ್ಣಗಳು, ಮಾರ್ಗ ಬದಿಯಲ್ಲಿ ತರಕಾರಿ, ಎ.ಸಿ ರೂಮಲ್ಲಿ ಚಪ್ಪಲಿ.

ತಮ್ಮದೇ ತಪ್ಪಿಗೆ ಮುಖ ತೋರಿಸಲಾಗದೇ ಧರಿಸಿರೋ ಮಾಸ್ಕ್ ಗಳು…. ಹೀಗೆ ಎಲ್ಲವನ್ನು ನೋಡಿ ನಕ್ಕು ಮುಂದೆ ಸಾಗುತ್ತಾನೆ. ಮತ್ತೆ ಆಯುತ್ತಾನೆ ತನ್ನ ಆಸೆ, ಕನಸು ಜೊತೆಗೆ ತಾನು ಕಳೆದುಕೊಂಡಿರುವುದು ಮರಳಿ ಸಿಗಬಹುದೇನೋ ಎಂಬಂತೆ.  ತನ್ನ ಚೀಲದಿಂದ ಅಗತ್ಯಗಳನ್ನು ಸುರುವಿ ಸಿಕ್ಕ ಚಿಲ್ಲರೆಯಿಂದ ಆ ದಿನವನ್ನು ಮುಗಿಸಿ ಊರಿನ ಮೂಲೆಯಲ್ಲಿ ಕಣ್ಣು ಮುಚ್ಚುತ್ತಾನೆ. ಮುಂದಿನ ಆಲೋಚನೆಗಳಿಲ್ಲದೆ.

ದೊಡ್ಡ ದೊಡ್ಡ ಕನಸುಗಳು ಗುಡಿಸಲೊಳಗೆ ಮುದುರಿ ತನ್ನ ದಿನಗಳಿಗಾಗಿ ಎದುರು ನೋಡುತ್ತಲೇ ಇರುತ್ತವೆ.

ನನ್ನ ಮಾತು ಕೇಳ್ತಿದ್ದೀಯಾ?

ನಾನು ಲಕ್ಷ, ಲಕ್ಷ ಮಂದಿಯ ಸ್ಪರ್ಧೆಯಲ್ಲಿ ಎಲ್ಲರನ್ನು ಹಿಂದಿಕ್ಕಿ ನನ್ನ ಗರ್ಭಗುಡಿಗೆ ಕಾಲಿಟ್ಟೆ. ಪ್ರತಿದಿನವೂ ನನ್ನ ಅಮ್ಮನ ಕನಸು ಆಸೆಗಳನ್ನು ಆಲಿಸುತ್ತಾ ಹೊರಬರಲು ತವಕಿಸಿದ.

ನವಮಾಸದ ನಂತರ ಅಮ್ಮನ ಪಕ್ಕದಲ್ಲಿ.

ಅಮ್ಮನ ಕಣ್ಣಲ್ಲಿ ಸಂತಸದ ಕಣ್ಣೀರು. ಪಾಪ ತುಂಬಾ ನೋವಾಗಿತ್ತು ಅಂತ ಕಾಣುತ್ತೆ. ಆಗ  ಅನ್ಕೊಂಡೆ ನಾನ್ಯಾವತ್ತೂ  ಅಮ್ಮನಿಗೆ ನೋವು ಮಾಡೋದಿಲ್ಲ ಅಂತ. ಅಪ್ಪನೋ ನನ್ನ ಎತ್ತಿ ಆಡಿಸಿ ಮುದ್ದಾಡುತ್ತಿದ‍್ದ. ದಿನವೂ ಎಣ್ಣೆ ಸ್ನಾನ, ಜೋಗುಳ, ಅಮೃತದಂತಹ ಹಾಲು ,ಅಪ್ಪನ ಹೆಗಲು, ಅಜ್ಜಿಯ ಮಡಿಲು, ಅಜ್ಜನ ಕತೆ.

ನಾನತ್ತರೆ ಅಮ್ಮನಿಗೂ ಅಳು, ಅಪ್ಪನಿಗೆ ಸಂಕಟ. ಬಣ್ಣ ಬಣ್ಣದ ಬಟ್ಟೆಗಳು, ಆಟದ ಸಾಮಾನುಗಳು, ತುಂಬಾ ಖುಷಿ.

ಕೆಲವು ದಿನಗಳಿಂದ ಅಪ್ಪ ಮನೇಲಿ ಇದ್ದಾರೆ, ಕೆಲಸಕ್ಕೂ ಹೋಗ್ತಿಲ್ಲ. ನಂಜೊತೆನೆ ಆಟ. ಆ ದಿನ ಏನಾಯಿತೊ? ನನಗೆ ಉಸಿರು ಕಟ್ಟಿದ ಅನುಭವ. ಕಣ್ಣಲ್ಲಿ ನೀರಿಳಿಯುತ್ತಿದೆ, ಗಂಟಲು ಕಟ್ಟಿದ ಅನುಭವ. ಕಣ್ಣಲ್ಲಿ ನೀರಿಳಿಯುತ್ತಿದೆ. ಗಂಟಲು ಕಟ್ಟಿದೆ. ಇಬ್ಬರ ಮುಖದಲ್ಲೂ ಗಾಬರಿ. ಅಪ್ಪ ಯಾರ್ಯಾರಿಗೋ ಫೋನ್ ಮಾಡಿದರೂ ಯಾರೂ ಉತ್ತರಿಸುತ್ತಿಲ್ಲ.. . ಕೊನೆಗೆ ಅಪ್ಪನ ಬೈಕ್, ಯಾರದ್ದೋ ಆಟೋ ಹೀಗೆ ಊರೂರು ಸುತ್ತಿದರೂ ಯಾರೂ ನನ್ನ ಆಸ್ಪತ್ರೆಗೆ  ಸೇರಿಸ್ತಿಲ್ಲ.  

ಅಪ್ಪ ಬೇಡುತ್ತಿದ್ದಾನೆ, ಅಮ್ಮ ಕಾಲಿಗೆ ಬಿದ್ದು ಗೋಗರೆಯುತ್ತಿದ್ದಾಳೆ. ನಾನು ಹುಟ್ಟಿ ಒಂದು ತಿಂಗಳಷ್ಟೇ ಆಗಿದೆ. ನನಗೋ ಬದುಕುವ ಆಸೆ. ಆದರೆ ಉಸಿರಾಡೋಕೂ ಆಗುತ್ತಿಲ್ಲ. ಆಸ್ಪತ್ರೆ ಒಳಗೂ ಹೊರಗೂ ಹೋಗಲಾರದೆ ಗೇಟಿನ ಬಳಿಯೇ ಅಪ್ಪ ಅಮ್ಮನನ್ನು ಬಿಟ್ಟು ದೂರ ಹೋಗ್ತಿದ್ದೇನೆ. ಯಾರಿಗೂ ನಮ್ಮ ಮೂರು ಜನರ ಕೂಗು ಕೇಳಿಲ್ವಾ? ನನ್ನ  ಅಪ್ಪ ಅಮ್ಮನ್ನ ಯಾವಾಗಲೂ ಕಣ್ಣೀರು ಹಾಕಿಸಲ್ಲ ಅಂದುಕೊಂಡಿದ್ದೆ.

ಆದರೆ ಈಗ  ಅವರ ಕಣ್ಣೀರು ಹೇಗೆ ಒರೆಸಲಿ? ನಿಮಗ್ಯಾರಿಗೂ ನಾನು ಬೇಡವಾದೆನಾ? ನಿಮ್ಮಂತೆ ನಾನೂ ದೊಡ್ಡವಳಾಗುತ್ತಿದ್ದೆ. ಈಗ ಏನೋ ಬದಲಾಯಿಸುತ್ತೇವೆಂದು ಮೀಟಿಂಗ್ ಮಾಡ್ತಿದ್ದಾರೆ. ನಾನಿಲ್ಲದಾಗ ಎಲ್ಲಾ ಕಡೆ ನನ್ನದೇ ಮಾತು. ನನ್ನನ್ನು ವಾಪಾಸು ಕರಕೊಳ್ಳಿ. ನಂಗೆ ಅಪ್ಪ ಅಮ್ಮ ಬೇಕು.

ಜೋಗುಳ , ಹಾಲು, ಮಡಿಲು, ಹೆಗಲು ಎಲ್ಲವೂ.
ನಿಮಗ್ಯಾರಿಗಾದರೂ ನನ್ನ ಕೂಗು ಕೇಳಿಸುತ್ತಿದೆಯಾ?…….

ಧೀರಜ್ ಬೆಳ್ಳಾರೆ: ಉಪನ್ಯಾಸಕರು, ರಂಗಭೂಮಿ ನಟ ಹಾಗೂ ನಿರ್ದೇಶಕ. ಸಾಹಿತ್ಯದಲ್ಲಿ ಆಸಕ್ತಿ. ಬರವಣಿಗೆ ಹವ್ಯಾಸ.

                                                                                                         

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: