ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು..

”ಅಂಗೋಲಾದ ಕತ್ತಲ ಕೂಪಗಳಲ್ಲಿ”

”ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು”, ಎಂದು ಅನ್ನುತ್ತಿದ್ದೆ ನಾನು.

ನಾನೇನು ಕೇಳಬಾರದ್ದನ್ನು ಕೇಳುತ್ತಿದ್ದೇನೆ ಎಂಬಂತೆ ನನ್ನ ಸುತ್ತಲಿದ್ದ ಎಲ್ಲರೂ ನನ್ನತ್ತ ಅಚ್ಚರಿಯಿಂದ ನೋಡಿದ್ದರು. ನನ್ನ ದುಭಾಷಿ ಮಹಾಶಯನ ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಮೂಡಿಯಾಗಿತ್ತು. ”ನಿನಗೇನಾದರೂ ಕೆಲಸವನ್ನು ನೀಡುವ ಮುನ್ನವೇ ನೀನು ಸುಸ್ತಾಗಿಬಿಡ್ತೀ ಮಾರಾಯ”, ಎಂದು ಯಾವಾಗಲೂ ಈತನ ಕಾಲೆಳೆಯುವವನು ನಾನು. ಈ ಬಾರಿ ನನ್ನ ನಿಲುವು ದೃಢವಾಗಿರುವ ವಾಸನೆ ಇವರುಗಳ ಮೂಗಿಗೆ ಬಡಿಯಿತೋ ಏನೋ. ಚೌಕಾಶಿ ಶುರುವಾಯಿತು.

”ಇದು ಹೊಸ ವಿಷಯವೇನೂ ಇಲ್ಲ. ಈ ಜಾಗಕ್ಕೆ ನೀವು ಹೊಸಬರೂ ಅಲ್ಲ. ಇಲ್ಲಿಯ ಜಾಗಗಳು ಹೇಗಿವೆಯೆಂದು ನಿಮಗೂ ಗೊತ್ತು. ರಾತ್ರಿಯ ಪ್ರಯಾಣಗಳು ಮಾರಣಾಂತಿಕ ಅಂದೇನೂ ನಾನು ಹೇಳುತ್ತಿಲ್ಲ. ಆದರೆ ಇದೊಂದು ಅಪಾಯಕಾರಿ, ಬೇಜವಾಬ್ದಾರಿಯ ದುಸ್ಸಾಹಸ. ಹೌದು, ಇಲ್ಲೂ ನೂರಾರು ಜನ ರಾತ್ರಿ ಪ್ರಯಾಣಿಸುತ್ತಿರುತ್ತಾರೆ. ಎಲ್ಲೋ ಏನೋ ಆಗುತ್ತದೆ. ಕೆಲವು ಆಕಸ್ಮಿಕವೋ, ಇನ್ನು ಕೆಲವು ಉದ್ದೇಶಪೂರ್ವಕವಾಗಿಯೋ ಆಗಿರುತ್ತವೆ. ಏನೋ ಒಂದು. ಸುಖಾಸುಮ್ಮನೆ ಇಂಥವುಗಳಲ್ಲಿ ಯಾಕೆ ಬೀಳುವುದು ಹೇಳಿ?”, ನನ್ನ ಸಹೋದ್ಯೋಗಿಯ ಕಾರು ಚಾಲಕ, ತಿಂಡಿಪೋತ ಮಾಂಬೋ ಹೇಳುತ್ತಲೇ ಇದ್ದ.

ಅವನ ದನಿಯಲ್ಲಿದ್ದ ಆತಂಕವನ್ನು ಕಂಡರೆ ಆತ ಈ ಮಾತುಗಳನ್ನು ನನಗೆ ಹೇಳುತ್ತಿದ್ದನೋ ಅಥವಾ ತನಗೆ ತಾನೇ ಹೇಳುತ್ತಿದ್ದನೋ ಎಂಬ ಸಂಶಯ ನನಗೆ. ”ಈ ಭಾರತೀಯನ ಹುಚ್ಚು ಬಿಡಿಸಪ್ಪಾ ದೇವರೇ… ಬೇಡ ಅನ್ನುವಂತಾಗಲಿ ದೇವರೇ…”, ಎಂದು ಕಾಣದ ದೇವರಲ್ಲಿ ಪ್ರಾರ್ಥಿಸುತ್ತಿದ್ದವನಂತೆ ಸೊಂಟದ ಮೇಲೆ ತನ್ನೆರಡೂ ಕೈಗಳನ್ನಿರಿಸಿಕೊಂಡು ಆಗಾಗ ಆಕಾಶ ನೋಡುತ್ತಿದ್ದ ದುಭಾಷಿ ನನಗೆ ಕಂಡ. ಇವನ್ನೆಲ್ಲಾ ನೋಡುತ್ತಿದ್ದ ನನಗೆ ಸಹಜವಾಗಿಯೇ ಒಂದು ಮಟ್ಟಿಗೆ ನಿರಾಶೆಯಾಗಿತ್ತು.

ಇದು ಅಂಗೋಲಾ ಅಂತಲ್ಲ. ರಾತ್ರಿಯ ಪ್ರಯಾಣಗಳೆಂದರೆ ಚಾಲಕರು ಸಾಮಾನ್ಯವಾಗಿ ತಪ್ಪಿಸಿಕೊಳ್ಳುವುದು ಆಫ್ರಿಕಾದ ಇತರ ಭಾಗಗಳಲ್ಲೂ ಇದೆ ಎಂಬುದನ್ನು ನಾನು ಕೇಳಿ ತಿಳಿದಿದ್ದೆ. ಎಂಥಾ ಥ್ರಿಲ್ ಆದರೂ ಆ ಕ್ಷಣವನ್ನು ಸವಿಯಲು ಪ್ರಾಣವೊಂದು ಇರಬೇಕಲ್ಲಾ, ಉಸಿರು ನಡೆಯುತ್ತಿರಬೇಕಲ್ಲಾ! ಇವೆಲ್ಲಾ ಕಪಿಚೇಷ್ಟೆಗಳು ಬೇಡವೆಂದು ನನ್ನನ್ನೊಪ್ಪಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದವು.

”ಅಲ್ರಯ್ಯಾ… ನೀವು ಇಲ್ಲಿಯವರಾಗಿ ನನಗೆ ಧೈರ್ಯವನ್ನು ತುಂಬಬೇಕು. ನೀವೇ ಹೀಗೆ ಭಯಪಟ್ಟರೆ ಹೇಗೆ?”, ಎಂದು ತಿರುಗುಬಾಣದ ಪ್ರಶ್ನೆಯನ್ನೆಸೆಯುತ್ತಾ ನಾನು ಮೆತ್ತಗೆ ಇವರೆಲ್ಲರ ಕಾಲೆಳೆಯುತ್ತಿದ್ದೆ. ‘ಆದದ್ದಾಗಲಿ, ಒಂದು ಕೈ ನೋಡೇಬಿಡೋಣ’, ಎಂದು ಯೋಚಿಸುವ ಹಾದಿಗೆ ಇವರನ್ನು ತರಲು ಪ್ರಯತ್ನಿಸುತ್ತಿದ್ದೆ. ಆದರೆ ಪ್ರಾಣಭಯವು ಇವೆಲ್ಲದ್ದಕ್ಕಿಂತಲೂ ಮೇಲಿನದ್ದಾಗಿತ್ತು.

ಚರ್ಚೆಗಳು ನಡೆದಿದ್ದೇ ನಡೆದಿದ್ದು. ನಿಮಿಷಗಳು ಉರುಳಿದವೇ ಹೊರತು ಒಬ್ಬರೂ ನನ್ನ ಮಾತಿಗೆ ಒಪ್ಪುವಂತೆ ಕಾಣಲಿಲ್ಲ. ಯಾರಿಂದಲೂ ಒತ್ತಾಯದಿಂದ ಕೆಲಸವನ್ನು ಮಾಡಿಸುವ ಜಾಯಮಾನವು ನನ್ನದಲ್ಲ. ನಾನು ಒಬ್ಬನೇ ಹೋಗುವಂತಹ ಪ್ರಶ್ನೆಯೇ ಇರಲಿಲ್ಲ. ಇನ್ನು ಇವರನ್ನು ಕರೆದುಕೊಂಡು ಹೋಗಿ ಏನಾದರೂ ಎಡವಟ್ಟಾದರೆ, ಎಡವಟ್ಟಾಗುವುದಕ್ಕಿಂತಲೂ ಹೆಚ್ಚಾಗಿ ನನ್ನ ಒತ್ತಾಯಕ್ಕುತ್ತರವಾಗಿ ಇವರಿಬ್ಬರೂ `ಅಸಹಕಾರ ಚಳುವಳಿ’ಯನ್ನು ಮಾಡಹೊರಟರೆ ನನಗೇ ನಷ್ಟ ಎಂದು ನಾನು ಮನದಲ್ಲೇ ಲೆಕ್ಕಹಾಕಿದೆ. ಆಗಲಪ್ಪಾ ಎಂದು ಒಪ್ಪಿಯೂ ಬಿಟ್ಟೆ. ತಕ್ಷಣವೇ ಎಲ್ಲರ ಮುಖಗಳು ಗೆಲುವಿನ ಖುಷಿಯಿಂದ, ನಿರಾಳತೆಯಿಂದ ಅರಳಿದವು.

ಅಂದರೆ ನನ್ನ ಮಟ್ಟಿಗೆ ಮಾತುಕತೆಯು ಮುರಿದುಬಿದ್ದಿತ್ತು.

********

ರಾತ್ರಿಯ ಈ ಭಯದ ಕಾರಣದಿಂದಲೇ ರಾಜಧಾನಿಗೆ ತೆರಳುವುದಾದರೆ ಮುಂಜಾನೆಯೇ ವೀಜ್ ನಿಂದ ಹೊರಡುವುದೋ, ವೀಜ್ ಗೆ ಮರಳುವುದಾದರೆ ಅಪರಾಹ್ನದೊಳಗೆ ಲುವಾಂಡಾದಿಂದ ಹೊರಡುವುದೋ ನಡೆಯುತ್ತಿತ್ತು. ಆದರೆ ಹೀಗೆಯೇ ಎಷ್ಟು ದಿನವೆಂದು ಕೂರಬಹುದು? ಅಂಥದ್ದೊಂದು ದಿನವು ಕೊನೆಗೂ ಬಂದೇಬಿಟ್ಟಿತ್ತು ನೋಡಿ. ಕಾರ್ಯಾಲಯ ಸಂಬಂಧಿ ಮುಖ್ಯ ಕೆಲಸವೊಂದಕ್ಕಾಗಿ ಲುವಾಂಡಾಗೆ ತೆರಳಿದ್ದ ನನಗೆ ಈಗಲೇ ಹೊರಟು ಬನ್ನಿ ಎಂದು ವೀಜ್ ನಿಂದ ಕರೆ ಬಂದಿತ್ತು.

ಗಡಿಯಾರದತ್ತ ಕಣ್ಣುಹಾಯಿಸಿದರೆ ಆಗಲೇ ಅಪರಾಹ್ನದ ಒಂದು. ‘ಮುಗೀತು ಕಥೆ’, ಎಂದು ಒಳಗೊಳಗೇ ನಾನು ನಕ್ಕುಬಿಟ್ಟೆ. ಚಾಲಕನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ”ಇವತ್ತು ನಮ್ಮೊಂದಿಗೆ ದುಭಾಷಿ ಬೇರೆ ಇಲ್ಲ. ನಾವು ಹೊರಡೋದ್ಯಾವಾಗ, ಹೋಗಿ ಮುಟ್ಟೋದ್ಯಾವಾಗ?”, ಎಂದು ಅಗುಸ್ಟೋ ತಲೆಕೆರೆದುಕೊಂಡ. ”ಈ ಬಾರಿ ನಮ್ಮ ಬಳಿ ಆಯ್ಕೆಯೇ ಇಲ್ಲ. ಹೊರಡಲೇಬೇಕು”, ಅಂದೆ ನಾನು. ತಯಾರಿಗಳನ್ನು ನಡೆಸಿ ಒಂದೂವರೆಗೆ ಹೊರಟರೂ, ದಾರಿ ಮಧ್ಯೆ ಪೋಲೀಸರ ಕಾಟ ಸಿಗಲೇ ಇಲ್ಲ ಎಂದು ಅಂದುಕೊಂಡರೂ ಎಂಟಂತೂ ಆಗೇ ಆಗುತ್ತೆ ಎಂದು ನಾವಿಬ್ಬರೂ ಕೈಗಡಿಯಾರವನ್ನು ನೋಡುತ್ತಾ ನಮ್ಮನಮ್ಮಲ್ಲೇ ಲೆಕ್ಕಹಾಕಿದೆವು.

”ನಾವು ಹೀಗೆ ಯೋಚಿಸುತ್ತಾ ಕೂತರೆ ಇನ್ನೂ ತಡವಾಗಿಬಿಡುತ್ತದೆ. ಬೇಗನೆ ಹೊರಡೋಣ”, ಎಂದು ಅವನನ್ನು ಪುಸಲಾಯಿಸಿದೆ. ಆಯ್ತಾಯ್ತು ಎನ್ನುತ್ತಾ ಅಗುಸ್ಟೋ ಹೊರಡಲು ಅಣಿಯಾದ. ಅದ್ಯಾವ ಕರ್ಮಕ್ಕೆ ಅಷ್ಟು ಚಂದದ ವಿಮಾನ ನಿಲ್ದಾಣವನ್ನು ವೀಜ್ ನಲ್ಲಿ ಕಟ್ಟಿಟ್ಟಿದ್ದಾರೋ ಎಂದು ಹೊರಡುತ್ತಲೇ ಆತ ಗೊಣಗಿದ ಕೂಡ.

ಮಧ್ಯಾಹ್ನದ ಬಿಸಿಲು ಲುವಾಂಡಾದ ಟಾರು ರಸ್ತೆಗಳನ್ನು ಬಿಸಿಕಾವಲಿಗಳಾಗಿ ಮಾಡುತ್ತಿರುವಂತೆಯೇ ನಾವು ಲಗುಬಗೆಯಿಂದ ಹೊರಟೆವು. ಹಿಂದೊಮ್ಮೆ ಪೋರ್ಚುಗೀಸ್ ಸಹೋದ್ಯೋಗಿಯೊಬ್ಬ ನನ್ನನ್ನು ರಾತ್ರಿಯ ಔತಣಕೂಟಕ್ಕೆ ಕರೆದೊಯ್ದಿದ್ದ ಅನ್ನುವುದನ್ನು ಬಿಟ್ಟರೆ ಯಾವತ್ತೂ ನಾನು ಆ ಹೊತ್ತಿನಲ್ಲಿ ಹೊರಗೆ ಹೋದವನೇ ಅಲ್ಲ. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಅಪರಾತ್ರಿಯಲ್ಲೂ ಚಹಾ ಸವಿಯಲು ಹೊರಡುತ್ತಿದ್ದ ನನಗೆ ಇಲ್ಲಿ ಕಟ್ಟಿಹಾಕಿದಂತಾಗಿತ್ತು.

ಇನ್ನು ಪೇಟೆಯಿಂದ ಮನೆಯು ಸಾಕಷ್ಟು ದೂರವಿತ್ತು ಎನ್ನುವುದು ಒಂದು ಮಾತಾದರೆ ಆ ಹೊತ್ತಿನಲ್ಲಿ ಚಾಲಕರ ಅಲಭ್ಯತೆಯಿಂದಲೂ ಹೊರಹೋಗುವುದು ನಮಗೆ ಸಾಧ್ಯವಾಗುತ್ತಿರಲಿಲ್ಲ. ಇಲ್ಲವಾದರೆ ಇಳಿಸಂಜೆಯ ಹೊತ್ತಿನಲ್ಲಿ ಕಾಲ್ನಡಿಗೆಯ ವಿಹಾರಗಳು ಚೆನ್ನ. ಅದರಲ್ಲೂ ಎಲ್ಲೆಲ್ಲೂ ಹಸಿರೇ ಮೇಳೈಸಿರುವ ವೀಜ್ ನಂತಹ ಹಳ್ಳಿಗಾಡಿನ ಪ್ರದೇಶದಲ್ಲಿ ಇದು ಮತ್ತಷ್ಟು ಸೊಗಸು. ಅಂತೂ ನಿಸರ್ಗವು ಎಲ್ಲವನ್ನೂ ನಮಗಾಗಿ ಸಿದ್ಧಪಡಿಸಿಟ್ಟಿದ್ದರೂ ನಮ್ಮ ಸಂದರ್ಭಗಳೇ ಸರಿಯಿರಲಿಲ್ಲ ಎಂಬುದೇ ಸತ್ಯ.

ಲುವಾಂಡಾದಿಂದ ವೀಜ್ ಗಿರುವ ಈ ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ದೂರದ ಬಗ್ಗೆ ಈಗಾಗಲೇ ಅದೆಷ್ಟು ಬರೆದಿದ್ದೇನೆ. ಆದರೆ ಇದರದ್ದೋ ಬರೆದಷ್ಟೂ ಕಥೆಗಳು. ಅಂದಿನ ಪಯಣದಲ್ಲಿ ಕತ್ತಲೂ ಬೇರೆ ನಮ್ಮನ್ನು ಎದುರಾಗಲಿತ್ತು. ಹೀಗಾಗಿ ಮತ್ತಷ್ಟು ಹೊಸ ಅನುಭವಗಳು ಎದುರಾಗುವ ನಿರೀಕ್ಷೆಗಳು ಸಹಜವಾಗಿಯೇ ಇದ್ದವು.

ಸಾಮಾನ್ಯವಾಗಿ ಈ ಆರೇಳು ತಾಸುಗಳ ಪಯಣವನ್ನು ನಿದ್ದೆ, ಬರವಣಿಗೆ ಮತ್ತು ಸಂಗೀತವೆಂದು ವಿಭಾಗಿಸಿ ಹೊರಡುವವನು ನಾನು. ಅಂಕುಡೊಂಕಿನ ರಸ್ತೆಗಳಲ್ಲಿ ಲ್ಯಾಪ್ ಟ್ಯಾಪ್ ಅನ್ನು ಮಡಿಲಿನಲ್ಲಿರಿಸಿ ಬರೆಯುತ್ತಾ, ಸುಸ್ತಾದಾಗ ಸಂಗೀತ ಕೇಳುತ್ತಾ ಸಾಗುವುದು ಕೊಂಚ ಕಷ್ಟವೇ. ಏಕೆಂದರೆ ಮಾಡಬೇಕಿರುವ ಮುಖ್ಯ ಕೆಲಸಕ್ಕಿಂತ ಮಡಿಲಿನಿಂದ ಜಾರುತ್ತಿರುವ ಲ್ಯಾಪ್ ಟ್ಯಾಪ್ ಅನ್ನು ರಕ್ಷಿಸುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. ಒಟ್ಟಾರೆಯಾಗಿ ನಮ್ಮೆಲ್ಲರಿಗೂ ಈ ಪ್ರಯಾಣದ ಬಗ್ಗೆ ಯೋಚಿಸುವಾಗಲೇ ಒಂದು ರೀತಿಯಲ್ಲಿ ಸುಸ್ತಾಗುವಂತಹ ಅನುಭವ.

ಅಂದೂ ಕೂಡ ನಾವು ಸಾಕಷ್ಟು ದೂರ ಸಾಗಿಯಾಗಿತ್ತು. ಲುವಾಂಡಾದಿಂದ ಹೊರಟ ನಾವು ಬೆಂಗು, ಕಶೀತುಗಳನ್ನು ದಾಟಿ ಸಾಕಷ್ಟು ದೂರ ಬಂದಿದ್ದೆವು. ಮುಖ್ಯರಸ್ತೆಯನ್ನು ಬಿಟ್ಟು ವೀಜ್ ನೆಡೆಗೆ ಸಾಗುವ ಎಡರಸ್ತೆಯನ್ನು ಹಿಡಿದು ಒಂದೆರಡು ಚೆಕ್ ಪೋಸ್ಟ್ ಗಳನ್ನೂ ಯಶಸ್ವಿಯಾಗಿ ದಾಟಿದ್ದೆವು. ”ಸರಾಗವಾಗಿ ಸಾಗುತ್ತಿದ್ದೇವೆ ನೋಡು. ಆರಾಮಾಗಿ ಓಡಿಸು”, ಎಂದು ಈ ಬಾರಿ ಅಗುಸ್ಟೋನನ್ನು ನಾನು ಹುರಿದುಂಬಿಸಿದೆ.

”ಆಗಲೇ ಕತ್ತಲಾಗುತ್ತಾ ಬಂದಿದೆ. ಈ ವೇಗವನ್ನು ಕಮ್ಮಿ ಮಾಡುವಂತೆಯೂ ಇಲ್ಲ. ವೇಗ ಕಮ್ಮಿ ಮಾಡಿದರೆ ಮತ್ತಷ್ಟು ತಡವಾಗುವುದು ಖಚಿತ”, ಎಂಬ ಅರ್ಥದಲ್ಲಿ ಅದೇನೋ ಹೇಳಿದ ಆತ (ಒಟ್ಟಿನಲ್ಲಿ ಅವನಂದಿದ್ದರಲ್ಲಿ ನನಗರ್ಥವಾಗಿದ್ದು ಇಷ್ಟು ಎಂದು ಇಲ್ಲಿ ಓದುಗರು ತಿಳಿದುಕೊಳ್ಳಬೇಕು ಅಷ್ಟೇ). ಇಲ್ಲಿಯ ಭಣಗುಡುವ ಖಾಲಿ ರಸ್ತೆಗಳಲ್ಲಿ ತೊಂಭತ್ತರಿಂದ ನೂರಿಪ್ಪತ್ತರ ವೇಗದಲ್ಲಿ ವಾಹನಗಳು ಸಾಗುವುದು ಸಹಜ. ನಾವು ಕೂಡ ಎಂದಿನಂತೆ ಈ ವೇಗದಲ್ಲೇ ಹೋಗುತ್ತಿದ್ದೆವು. ಅಗುಸ್ಟೋ ಅಂದು ಹೇಳುತ್ತಿದ್ದಿದ್ದು ಇದರ ಬಗ್ಗೆಯೇ.

ಆತನ ಅನುಭವದ ಮಾತುಗಳು ನಿಜವೇ ಆಗಿದ್ದವು ಅನ್ನಿ. ಸಂಪೂರ್ಣವಾಗಿ ಸೂರ್ಯಾಸ್ತವಾದ ನಂತರ ಈ ರಾತ್ರಿಗಳು ಎಂಥಾ ಗಟ್ಟಿಗುಂಡಿಗೆಯವರಲ್ಲೂ ಭಯವನ್ನು ಹುಟ್ಟಿಸಬಲ್ಲಷ್ಟು ಭೀಕರವಾಗಿ ಕಾಣುವಂಥವು. ಮೈಲುಗಟ್ಟಲೆ ಹಬ್ಬಿರುವ ಕಾಡನ್ನು ಸೀಳುತ್ತಾ ಈ ವೇಗದಲ್ಲಿ ಸಾಗುವುದೆಂದರೆ ಜೀವವನ್ನು ಮುಷ್ಟಿಯಲ್ಲಿ ಹಿಡಿದು ಎದೆಗವಚಿಕೊಂಡು ಹೋಗುವಂತೆಯೇ. ದಾರಿಯುದ್ದಕ್ಕೂ ಒಂದೇ ಒಂದು ದಾರಿದೀಪಗಳಿಲ್ಲದಿರುವುದೂ ಕೂಡ ಇದಕ್ಕೆ ಮತ್ತೊಂದು ಕಾರಣ.

ಎರಡರಿಂದ ಮೂರು ಕಿಲೋಮೀಟರುಗಳಿಗೊಮ್ಮೆ ಸಿಗುವ ಒಂದೆರಡು ಜೋಪಡಿಗಳಲ್ಲಿ ಚಿಮಣಿಯ ದೀಪಗಳಂತೆ ಏನಾದರೂ ಮಿಣಮಿಣ ದೀಪಗಳು ಕಾಣಸಿಕ್ಕರೆ ಅದೇ ನಮಗೆ ದೊಡ್ಡ ಬೆಳಕು. ಕಾರಿನ ಹೆಡ್ ಲೈಟ್ ರಸ್ತೆಯನ್ನು ತೋರಿಸುವ ಒಂದಿಷ್ಟು ಮೀಟರ್ ಗಳ ಕಣ್ಣುಕುಕ್ಕುವ ಬೆಳಕನ್ನು ಬಿಟ್ಟರೆ ಎಲ್ಲೆಲ್ಲೂ ಕತ್ತಲೆಯದ್ದೇ ತಾಂಡವ. ಇನ್ನು ವಾಹನವನ್ನೊಮ್ಮೆ ನಿಲ್ಲಿಸಿ ಸುಮ್ಮನೆ ಕುಳಿತರಂತೂ ಆ ಕರಾಳಮೌನವೇ ಮನವನ್ನು ವಿಚಲಿತಗೊಳಿಸುವಂಥದ್ದು.

ಇಂಥದ್ದೊಂದು ಕತ್ತಲೆಯಲ್ಲಿ ಅಕಸ್ಮಾತ್ತಾಗಿ ರಸ್ತೆ ಅಪಘಾತವೇನಾದರೂ ಆದರೆ? ವಾಹನವು ಕೆಟ್ಟುಹೋಯಿತೆಂದರೆ? ಕತಾನಾ (ಮಚ್ಚು) ಗಳನ್ನು ಹಿಡಿದುಕೊಂಡ ಪುಂಡರು ಸುಲಿಗೆ ಮಾಡಲು ಮೈಮೇಲೆರಗಿಬಿಟ್ಟರೆ? ಅಂಗೋಲಾದ ದುರ್ಗಮ ದಾರಿಗಳ ಆ ಕತ್ತಲಿನಲ್ಲಿ ಇಂಥಾ ಕಲ್ಪನೆಗಳೇ ತೀವ್ರಭಯವನ್ನು ಹುಟ್ಟಿಸಬಲ್ಲವು. ಇನ್ನು ಗುಂಡಿಗಳು ಇಲ್ಲವೇ ಇಲ್ಲವೆಂಬಷ್ಟು ಕಮ್ಮಿಯಾದರೂ ಕೆಲ ಭಾಗಗಳಲ್ಲಿ ಗುಂಡಿಗಳು ಆಗಾಗ ಸಿಕ್ಕು ಪ್ರಯಾಣಿಕರನ್ನು ಕಂಗೆಡಿಸುವುದೂ ಇದೆ. ಶರವೇಗದಲ್ಲಿ ಸಾಗುತ್ತಿದ್ದ ವಾಹನಗಳು ಆಗ ಬಲವಾದ ಒದೆಯನ್ನು ತಿಂದ ಪ್ರಾಣಿಯಂತೆ ಬೆಚ್ಚಿಬೀಳುತ್ತವೆ. ಒಳಗಿದ್ದವರು ಧಡಾರನೆ ಕುಪ್ಪಳಿಸಿ ಅಲ್ಲಿಲ್ಲಿ ಒಂದಿಷ್ಟು ಏಟು ಮಾಡಿಕೊಳ್ಳುತ್ತಾರೆ.

ಘಂಟೆಗೆ ನೂರು ಕಿಲೋಮೀಟರುಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಸಾಗುವ ವಾಹನಗಳು ನಿಯಂತ್ರಣ ತಪ್ಪಲು ಇಲ್ಲಿ ಮಹಾಕಾರಣಗಳೇನೂ ಬೇಕಾಗಿಲ್ಲ. ಹಾಗೇನಾದರೂ ಆದರೆ ದೂರದೂರಕ್ಕೂ ನೆರವಿನ ಯಾವ ಭರವಸೆಗಳೂ ಇಲ್ಲ. ರಾತ್ರಿಯ ಪ್ರಯಾಣದ ಬಗ್ಗೆ ನನಗೆ ದೊರೆತ ಎಚ್ಚರಿಕೆಗಳು ಸರಿಯಾಗಿಯೇ ಇದ್ದವು ಎಂಬುದನ್ನು ಆ ರಾತ್ರಿಯ ಕತ್ತಲು ನನಗೆ ದೃಢಪಡಿಸಿತು.

ಓದುಗರಿಗೆ ಈ ವಿವರಗಳೆಲ್ಲಾ ಕೊಂಚ ಉತ್ಪ್ರೇಕ್ಷೆಯೆಂಬಂತೆ ಕಂಡರೆ ಅಚ್ಚರಿಯೇನಿಲ್ಲ. ಏಕೆಂದರೆ ಇಂಥಾ ಅನುಭವಗಳು ಸಾಮಾನ್ಯವಾಗಿ ಆಗುವುದು ಕಮ್ಮಿಯೇ. ಎಂಥಾ ಕುಗ್ರಾಮವಾದರೂ ನಮ್ಮಲ್ಲಿ ಬೆರಳೆಣಿಕೆಯ ಲೈಟುಕಂಬಗಳಾದರೂ ಇರುತ್ತವೆ. ಆದರೆ ಇಲ್ಲಿ ಅದೂ ಇಲ್ಲವಲ್ಲಾ! ಇನ್ನು ನೂರಿನ್ನೂರು ಚಿಲ್ಲರೆ ಕಿಲೋಮೀಟರುಗಳಷ್ಟು ಹಬ್ಬಿರುವ ಈ ಖಾಲಿಜಾಗದಲ್ಲೂ ಸಾಕಷ್ಟು ವೈವಿಧ್ಯತೆಯಿದೆ. ಕೆಲ ಭಾಗದ ರಸ್ತೆಗಳಲ್ಲಿ ಪಾದಚಾರಿಗಳು ಸಾಗಲು ಒಂದಿಷ್ಟೂ ಜಾಗವಿಲ್ಲವೆಂಬಷ್ಟು ಬೆಳೆದ ನಾಲ್ಕೈದು ಅಡಿ ಎತ್ತರದ ಹುಲ್ಲುಪೊದೆಗಳು ರಸ್ತೆಯನ್ನಾವರಿಸಿವೆ. ಇದ್ದಲ್ಲೇ ಇದ್ದರೂ ತನ್ನ ಎತ್ತರದಿಂದಾಗಿ ಶರವೇಗದಿಂದ ಸಾಗುವ ವಾಹನಗಳ ಕೆನ್ನೆಗಳಿಗೆ ಅವುಗಳು ರಪರಪನೆ ಬಡಿಯುತ್ತವೆ. ಸ್ಥಳೀಯರ್ಯಾರಾದರೂ ಇಂತಹ ಹಾದಿಗಳಲ್ಲಿ ನಡೆದುಕೊಂಡು ಎಲ್ಲಿಗೋ ಹೋಗುತ್ತಿದ್ದಾರೆಂದರೆ ಮಿಂಚಿನ ವೇಗದಲ್ಲಿ ಸಾಗುವ ವಾಹನಗಳು ಏಕಾಏಕಿ ಬಂದಾಗ ಅವರು ತಬ್ಬಿಬ್ಬಾಗಿ ಪೊದೆಯೊಳಗೆ ನುಸುಳಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ.

ಹೀಗೆ ಕತ್ತಲೆಯಲ್ಲಿ ಪೊದೆಗಳಿಂದ ಹೊರಬರುತ್ತಿರುವ, ಒಳನುಗ್ಗುತ್ತಿರುವ ಮಾನವಾಕೃತಿಗಳನ್ನು ಅಚಾನಕ್ಕಾಗಿ ನೋಡುವ ಚಾಲಕನು ಹೊಸಬನಾಗಿದ್ದರೆ ಆತನೂ ಅವರಂತೆಯೇ ತಬ್ಬಿಬ್ಬಾಗುವುದು ಸಹಜ. ಮಿಲಿಸೆಕೆಂಡುಗಳ ಅಂತರದಲ್ಲಿ ವೇಗದ ವಾಹನವನ್ನು ನಿಯಂತ್ರಿಸುವುದೂ, ಈಗಷ್ಟೇ ತಾನು ನೋಡಿದ ಆಕೃತಿಯೇನು ಎಂಬುದನ್ನು ಲೆಕ್ಕಹಾಕುವುದು, ರಸ್ತೆಯನ್ನು ತೋರಿಸುವ ಹೆಡ್ ಲೈಟುಗಳಿಗೆ ತನ್ನ ಇರುವಿಕೆಯನ್ನೂ ತೋರಿಸುವಂತೆ ಹಟಮಾಡುವ ಪೊದೆಗಳನ್ನು ಸಂಭಾಳಿಸುವುದು… ಹೀಗೆ ಇವೆಲ್ಲಾ ಕಷ್ಟಸಾಧ್ಯವೇ.

ಹಾರರ್ ಚಿತ್ರಗಳನ್ನು ಮಾಡುವವರಿಗೆ ಇಂಥಾ ಜಾಗಗಳಿಗೆ ಕರೆದುಕೊಂಡು ಬಂದರೆ ಹೊಸದೊಂದು ಕಥೆಯೇ ಅವರ ಮನದಲ್ಲಿ ಸೃಷ್ಟಿಯಾಗಬಹುದೇನೋ. ಇವೆಲ್ಲಾ ಒಂದು ರೀತಿಯಲ್ಲಿ ಸಿನೆಮಾಗಳಲ್ಲಿ ನೋಡಲು, ಕಥೆಗಳಲ್ಲಿ ಓದಲಷ್ಟೇ ಚೆಂದ. ನೈಜಜೀವನದಲ್ಲಿ ಭಯ, ಗೊಂದಲಗಳು ಒಮ್ಮಿಂದೊಮ್ಮೆಲೇ ದಾಳಿಯಿಟ್ಟಾಗ ಮನುಷ್ಯನ ಬುದ್ಧಿ ಕೈಕೊಡುವುದು ಸಹಜ. ಆದರೆ ನಮ್ಮೊಂದಿಗೆ ಅದೃಷ್ಟವಶಾತ್ ಅಂಥಾ ಅನಾಹುತಗಳೇನೂ ಆಗಿರಲಿಲ್ಲ. ಬಹುಷಃ ಅಗುಸ್ಟೋನ ಕಣ್ಣುಗಳು ಆ ಕತ್ತಲಿಗೆ ಆಗಲೇ ಬಹುತೇಕ ಹೊಂದಿಕೊಂಡಿದ್ದವು.

ಆದರೆ ಆತ ಕುಳಿತ ಭಂಗಿ ಮಾತ್ರ ಹಿಂದಿನಷ್ಟು ಆರಾಮದಾಯಕವಾಗಿರಲಿಲ್ಲ. ಮುಂದಕ್ಕೆ ಬಾಗಿದ ಬೆನ್ನು, ತಲೆಯು ಆತ ಮತ್ತಷ್ಟು ಜಾಗರೂಕನಾಗಿರುವುದನ್ನು ತೋರಿಸುತ್ತಿತ್ತು. ಅವನ ಪುಟ್ಟ ಕಣ್ಣುಗಳು ನೆರಳು-ಬೆಳಕಿನಾಟವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾ ಪ್ರತೀ ಕ್ಷಣದ, ಪ್ರತೀ ದೃಶ್ಯದೊಂದಿಗೂ ಯುದ್ಧವನ್ನು ಹೂಡಲು ಸನ್ನದ್ಧರಾಗಿರುವಷ್ಟು ಚುರುಕಾಗಿರುವಂತೆ ನನಗಂದು ಭಾಸವಾಯಿತು.

ದುಭಾಷಿಯ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನನ್ನ ಸುರಕ್ಷತೆಯ ಎಲ್ಲಾ ಜವಾಬ್ದಾರಿಯೂ ಆತನ ಹೆಗಲ ಮೇಲಿರುವುದು ಸ್ಪಷ್ಟವಾಗಿತ್ತು. ಎಂದಿನಂತೆ ಯಾವುದೇ ದೂರುದುಮ್ಮಾನಗಳಿಲ್ಲದೆ ಆತ ಇವೆಲ್ಲವನ್ನೂ ನಿಭಾಯಿಸುತ್ತಿದ್ದ ಕೂಡ. ಅಗುಸ್ಟೋ ಒಂದು ಕಾಲದಲ್ಲಿ ಸೈನ್ಯದಲ್ಲೂ ಸೇವೆ ಸಲ್ಲಿಸಿದವನಂತೆ. ಅದೆಷ್ಟೋ ಇಕ್ಕಟ್ಟಿನ ಸಂದರ್ಭಗಳಲ್ಲಿ ಆತನ ಚಾಕಚಕ್ಯತೆಯ ಕೆಲಸಗಳಿಗೆ ನಾನು ಸಾಕ್ಷಿಯಾಗಿದ್ದೆ. ಕಾಲೇಜು ತರುಣನಂತೆ ಮಟ್ಟಸವಾಗಿಯೂ, ಆಧುನಿಕ ಶೈಲಿಯ ಉಡುಗೆಯನ್ನೂ ಧರಿಸುತ್ತಿದ್ದ ಈತ ಇಲ್ಲಿಯ ಅದೆಷ್ಟೋ ಹಿರಿಯ ಅಧಿಕಾರಿಗಳಿಗಿಂತ ಪ್ರೆಸೆಂಟೇಬಲ್ ಆಗಿ ಕಾಣುತ್ತಿದ್ದ. ಅಷ್ಟೇ ಶಿಸ್ತಿನವನೂ, ಹಸನ್ಮುಖಿಯೂ, ಮಿತಭಾಷಿಯೂ ಆಗಿದ್ದ.

ನಾವು ಕಿಪೆಡ್ರೋ, ಅಂಬೂಲಾಗಳಂತಹ ಪ್ರದೇಶಕ್ಕೆ ಹೋದಾಗ ಕೋತಿಯಂತೆ ಚಕಚಕನೆ ಮರಹತ್ತಿ ಗೋಣಿಗಟ್ಟಲೆ ಮೂಸಂಬಿಗಳನ್ನು ಕಿತ್ತುಹಾಕಿದವನು ಈತನೇ. ನಂತರ ಈ ಗೋಣಿಚೀಲಗಳನ್ನು ಕೊಂಡೊಯ್ಯುವುದು ಹೇಗೆಂದು ಎಲ್ಲರೂ ಚಿಂತಿಸುತ್ತಿದ್ದಾಗ ಯಾವ್ಯಾವುದೋ ಎಲೆಗಳನ್ನು ವಿಚಿತ್ರವಾಗಿ ಕಟ್ಟಿ ಹಗ್ಗದಂತೆ ಹೆಣೆದು ಚೀಲದ ಮೂತಿಗಳನ್ನು ಭದ್ರ ಮಾಡಿಸಿ ಸಾಗಿಸಿದವನೂ ಈತನೇ. ಆಗಸ್ಟೋ ನನ್ನಂಥಾ ಎಳಸುಗಳಿಗೆ ಹೇಗೆ ಕಾಣುತ್ತಿದ್ದನೆಂದರೆ ಆಗ ತನ್ನ ಸುತ್ತಮುತ್ತಲಿದ್ದ, ಕೈಗೆ ಸಿಕ್ಕ ಸಂಪನ್ಮೂಲಗಳನ್ನು ಬಳಸಿ ತನಗೆ ಬೇಕಾಗಿರುವುದನ್ನು ಸೃಷ್ಟಿಸಬಲ್ಲವನಾಗಿದ್ದ. ಅದು ಪರಿಪೂರ್ಣವೇನೂ ಅಲ್ಲದಿದ್ದರೂ ಆಗಬೇಕಿರುವ ಕೆಲಸಗಳು ಈತನ ಸಮಯಪ್ರಜ್ಞೆಯಿಂದಾಗಿ ನಿರೀಕ್ಷೆಗಿಂತಲೂ ಸರಾಗವಾಗಿ ನಡೆಯುತ್ತಿದ್ದವು. ಇಂಥಾ ಸಂದರ್ಭಗಳಲ್ಲಿ ಇನ್ನೇನು ಬೇಕು ಹೇಳಿ!

ಇಂತಿಪ್ಪ ಅಗುಸ್ಟೋ ನನ್ನ ಸಾರಥಿಯಾಗಿದ್ದಾಗ ಚಿಂತಿಸುವುದೇನು ಬಂತು? ”ಎಷ್ಟಾಯಿತು ಟೈಮು? ಜೋರು ಹಸಿವಾಗುತ್ತಿದೆ ನಿಕ್”, ತನ್ನಷ್ಟಕ್ಕೇ ಮಾತಾಡಿಕೊಂಡವನಂತೆ ಗೊಣಗಿದ ಅಗುಸ್ಟೋ. ”ಸುಸ್ತಾದರೆ ಕೊಂಚ ನಿಲ್ಲಿಸು. ಚೀಲದಲ್ಲಿ ಒಂದಿಷ್ಟು ಬಿಸ್ಕತ್ತುಗಳಿವೆ. ತಿಂದುಕೊಂಡು ಮುಂದುವರಿಯೋಣ”, ಎಂದೆ ನಾನು. ಅಂತೆಯೇ ಏಳು ಕಳೆದು ಹತ್ತು ನಿಮಿಷಗಳಾಯಿತು ಎಂದು ಅವನ ಪ್ರಶ್ನೆಗೂ ಉತ್ತರಿಸಿದೆ. ”ಅಷ್ಟೇನಾ… ಹೆಚ್ಚೆಂದರೆ ಇನ್ನು ಒಂದೂವರೆ ತಾಸುಗಳ ಪ್ರಯಾಣ ಉಳಿದಿದೆ. ಮುಂದಿನ ವಿಶ್ರಾಂತಿ ವೀಜ್ ತಲುಪಿದ ನಂತರವೇ”, ಅಂದುಬಿಟ್ಟ ಅಗುಸ್ಟೋ. ಆತನ ಉತ್ಸಾಹಕ್ಕೆ ನಾನು ಈ ಬಾರಿಯೂ ಎಂದಿನಂತೆ ತಲೆದೂಗಿದೆ.

ಸಮಯವು ಕೇವಲ ಏಳಾಗಿದ್ದರೂ ಅರ್ಧರಾತ್ರಿಯ ಕತ್ತಲಿನಂತೆ ಕಾಣುತ್ತಿದ್ದ ಆ ನಿರ್ಜನ ಪ್ರದೇಶದಲ್ಲಿ ತನ್ನಿಂದಾದಷ್ಟು ಬೆಳಕು ಚೆಲ್ಲುತ್ತಾ ನಮ್ಮ ವಾಹನವು ಶರವೇಗದಲ್ಲಿ ಮುಂದೆ ಸಾಗಿತು.

‍ಲೇಖಕರು avadhi

June 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ನಿಮ್ಮ ಅಂಕಣಕ್ಕಾಗಿ ಬರೀ ಕಾಯುವುದಿಲ್ಲ..ಕಾತರಿಸುತ್ತೇವೆ ಪ್ರಸಾದ್.ಅಗದೀ ಚಂದ..

    ಪ್ರತಿಕ್ರಿಯೆ
    • Prasad

      ಥ್ಯಾಂಕ್ಯೂ ಸೋ ಮಚ್ ರೇಣುಕಾ ಅವರೇ… 🙂

      ಪ್ರತಿಕ್ರಿಯೆ
  2. Chi na hally kirana

    ಆದ್ಬುತವಾದ ಬರಹ ಸಾರ್, ಓದುತ್ತ ಹೋದಂತೆ ರೋಮಾಂಚನವಾಯಿತು.
    ಧನ್ಯವಾದಗಳು.

    ಪ್ರತಿಕ್ರಿಯೆ
  3. Vijaya S.P.

    ಬಹಳ ಆಸಕ್ತಿದಾಯಕ ಬರವಣಿಗೆ.. ನಾವಂತೂ ಉಸಿರು ಬಿಗಿಹಿಡಿದು ಕೂತಿದ್ದೇವೆ ಮುಂದೇನಾಗುತ್ತೊ ಅಂತ…

    ಪ್ರತಿಕ್ರಿಯೆ
    • Prasad

      ಥ್ಯಾಂಕ್ಯೂ ವಿಜಯಾ ಅವರೇ… ಅಂಕಣವನ್ನು ಖಂಡಿತ ತಪ್ಪದೇ ಓದಿ… 🙂

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: