ಕಾಸ್ಮೆಟಿಕ್ ಜಗತ್ತಿನ ಅನಭಿಷಿಕ್ತ ರಾಣಿ!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

1896ರಲ್ಲಿ ಹೀಗೆ ಶುರುವಾದ ಅವಳ ಬಿಸಿನೆಸ್‌ನಿಂದ ಅವಳು ಸಾಕಷ್ಟು ಹಣ ಸಂಪಾದಿಸುತ್ತಾಳೆ, ಆ ನಂತರ ಬಿಸಿನೆಸ್ ಮೆಲ್ಬೋರ್ನ್‌ಗೆ ಶಿಫ಼್ಟ್ ಆಗುತ್ತದೆ. ಅಲ್ಲಿಯೂ ಅವಳ ಕ್ರೀಮ್ ಸಾಕಷ್ಟು ಜನಪ್ರಿಯವಾಗಿ 1908ನೇ ಇಸವಿಯ ಹೊತ್ತಿಗೆ ಅವಳ ಬಳಿ ಒಂದು ಲಕ್ಷ ಪೌಂಡ್‌ ಸೇರಿರುತ್ತದೆ!

ಇಲ್ಲಿಗೆ ಸುಮಾರು 110 ವರ್ಷಗಳ ಹಿಂದೆ ಲಕ್ಷ ಪೌಂಡ್ ಅಂದರೆ ಲೆಕ್ಕ ಹಾಕಿ! ನನ್ನ ಮುತ್ತಜ್ಜನ ಪುಸ್ತಕಗಳು ಸುಮಾರು 1920ರಲ್ಲಿ ಪ್ರಕಟವಾದವುಗಳ ಬೆಲೆ 2 ಆಣೆ, 3 ಆಣೆ… ಅಂದರೆ 10-20 ಪೈಸೆಗಳು!

ಅಂಥ ಕಾಲದಲ್ಲಿ ಲಕ್ಷ ಪೌಂಡ್ ಸಂಪಾದನೆ ಮಾಡಿದ ಹೆಲೆನಾ ಲಂಡನ್, ಪ್ಯಾರಿಸ್ ನಗರಗಳಲ್ಲೆಲ್ಲ ಅವಳ ಪ್ರಸಾದನಗಳನ್ನು ಮಾರಾಟ ಮಾಡುವುದಲ್ಲದೇ, ಅವುಗಳನ್ನು ಅಂಗಡಿಗಳಲ್ಲಿ ಮಾರುವುದಕ್ಕಿಂತ ಸಲೂನ್‌ಗಳಲ್ಲಿ ನೇರವಾಗಿ ಉಪಯೋಗಿಸಿದರೆ ಹೆಚ್ಚು ಮಾರಾಟವಾಗುತ್ತದೆ ಎಂಬ ಲೆಕ್ಕಾಚಾರ ಹಾಕಿ, ಸಲೂನ್‌ಗಳನ್ನು ತೆರೆದು ಆ ಬಿಸಿನೆಸ್‌ನಲ್ಲೂ ಯಶಸ್ವಿಯಾಗುತ್ತಾಳೆ.

ಆ ನಂತರ ಅವಳ ಗಮನ ಅಮೆರಿಕಾದತ್ತ ಸಾಗುತ್ತದೆ! ಅಲ್ಲಿ ಸಲೂನ್‌ಗಳ ಬಗ್ಗೆ ಅಂಥ ಒಳ್ಳೆಯ ಅಭಿಪ್ರಾಯ ಇಲ್ಲದ ಆ ಕಾಲದಲ್ಲಿ, ಆ ಅಭಿಪ್ರಾಯ ಬದಲಿಸಲು ಅವಳು ತನ್ನ ಸಲೂನ್‌ಗಳಲ್ಲಿ ಪ್ರಮುಖ ಚಿತ್ರಕಾರರ ಪೇಂಟಿಂಗ್‌ಗಳನ್ನು ತೂಗು ಹಾಕುತ್ತಾಳೆ, ಅತ್ಯಂತ ಶ್ರೀಮಂತವಾಗಿ ಅಲಂಕರಿಸುತ್ತಾಳೆ. ಒಟ್ಟಿನಲ್ಲಿ ಜನರಿಗೆ ಅಲ್ಲಿಗೆ ಬಂದು ಹೋಗುವುದೇ ಒಂದು ರೀತಿಯ ಹೆಗ್ಗಳಿಕೆ ಎನ್ನುವ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾಳೆ.

ಆ ನಂತರ ಅವಳ ಸಲೂನ್‌ಗಳಿಗೆ ಬಂದು ಕೂರುವುದು, ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಆ ಕಾಲದ ಶ್ರೀಮಂತ ಮಹಿಳೆಯರಿಗೆ ಒಂದು status symbol ಆಗಿ ಹೋಗುತ್ತದೆ.

ಹೀಗೆ ಯಶಸ್ಸಿನ ರುಚಿ ಕಾಣುತ್ತಲೇ ಹೋದ ಹೆಲೆನಾ, ಆ ನಂತರ ಹಾಲಿವುಡ್ ತಾರೆಯರಿಗೆ ಮೇಕಪ್‌ ಹೇಗೆ ಮಾಡಿಕೊಳ್ಳಬೇಕೆನ್ನುವ ತರಬೇತಿ ಕೊಡಲು ಪ್ರಾರಂಭಿಸುತ್ತಾಳೆ! ವಾಟರ್ ಪ್ರೂಫ್ ಮಸ್ಕಾರಾ, ಮಾಯಿಶ್ಚರೈಜ಼ಿಂಗ್ ಕ್ರೀಮ್, anti ageing cream ಮುಂತಾದವನ್ನು ಕಂಡು ಹಿಡಿಯುತ್ತಾಳೆ.

ದೇಶದಿಂದ ದೇಶಕ್ಕೆ ಚರ್ಮದ ರೀತಿ ಕೂಡಾ ಬದಲಾಗುತ್ತದೆ ಎಂದು ಹೇಳಿ ಅದಕ್ಕೆ ತಕ್ಕನಾದ ಪ್ರಸಾದನಗಳನ್ನು ರೂಪಿಸುತ್ತಾಳೆ. ಅವಳು ಹೇಳಿದಷ್ಟು ಬೆಲೆ ನೀಡಲು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಆ ಕಾಲಕ್ಕೆ ಅವಳ ಕಂಪನಿಯ ಉತ್ಪನ್ನಗಳು ಶ್ರೀಮಂತಿಕೆಯ ಬ್ರಾಂಡ್ ಎಂದು ಹೆಸರು ಪಡೆಯುತ್ತದೆ.

ಅವಳಿಗೆ ಶ್ರೀಮಂತ ಹೆಂಗಸರ ನಾಡಿಮಿಡಿತ ಗೊತ್ತಿರುತ್ತದೆ. ಬೆಲೆ ಹೆಚ್ಚಿದಷ್ಟೂ ಆ ಉತ್ಪನ್ನ ಒಳ್ಳೆಯದು ಎನ್ನುವ ನಂಬಿಕೆ ಅವರದ್ದು ಎನ್ನುವುದನ್ನು ಅರಿತು ಅದಕ್ಕೆ ತಕ್ಕನಾಗಿ ಅವರ ಉತ್ಪನ್ನಗಳ ಬೆಲೆಯನ್ನು ಏರಿಸುತ್ತಾಳೆ. ಅವಳ ‘there are no ugly women, there are only lazy ones’ ಎನ್ನುವ ಕೋಟ್ ಅತ್ಯಂತ ಜನಪ್ರಿಯವಾಗುತ್ತದೆ.

ಹೀಗೆ ಮಿಲಿಯನ್‌ ಗಟ್ಟಳೆ ವ್ಯವಹಾರ ನಡೆಸಿ ಅನಭಿಷಿಕ್ತ ರಾಣಿಯಾಗಿ ಮೆರೆವ ಹೆಲೆನಾ 1928 ರಲ್ಲಿ ಇದ್ದಕ್ಕಿದ್ದಂತೆ ಲೆಹ್ಮನ್ ಬ್ರದರ್ಸ್‌ಗೆ ತನ್ನ ಅಮೆರಿಕಾದ ವಹಿವಾಟನ್ನು 7.3 ಮಿಲಿಯನ್‌ ಡಾಲರ್‌ಗೆ ಮಾರಿಬಿಡುತ್ತಾಳೆ! ಕಾಸ್ಮೆಟಿಕ್ ಬಿಸಿನೆಸ್‌ನ ತಲೆಬುಡ ಗೊತ್ತಿಲ್ಲದ ಲೆಹ್ಮನ್ ಬ್ರದರ್ಸ್ ಈ ವ್ಯಾಪಾರದಲ್ಲಿ ಸೋಲುಣ್ಣುತ್ತಾರೆ. ಕಂಪನಿಯ ಕಾಸ್ಮೆಟಿಕ್‌ಗಳ ಗುಣಮಟ್ಟ ಕುಸಿಯಲಾರಂಭಿಸುತ್ತದೆ.

ಅದೇ ಸಮಯಕ್ಕೆ ಆರ್ಥಿಕ ಕುಸಿತ ಶುರುವಾಗುತ್ತದೆ… the great depression! ಅವಳ ಕಂಪನಿಯ ಶೇರುಗಳ ದರ ಕುಸಿಯಲು ಶುರುವಾಗುತ್ತದೆ. ಆಗ ಮತ್ತೆ ಕಣಕ್ಕಿಳಿವ ಹೆಲೆನಾ, ತನ್ನ ಕಂಪನಿಯ ಶೇರ್‌ಗಳನ್ನು ಕುಸಿದ ಬೆಲೆಗೆ ಖರೀದಿಸಲು ಪ್ರಾರಂಭಿಸುತ್ತಾಳೆ. ಆ ವ್ಯವಹಾರದಲ್ಲೇ ಅವಳು ಸುಮಾರು 100 ಮಿಲಿಯನ್ ಡಾಲರ್ ಲಾಭ ಮಾಡಿರಬಹುದೆಂದು ಆರ್ಥಿಕ ತಜ್ಞರು ಅಂದಾಜು ಮಾಡುತ್ತಾರೆ! ಆಗಿನಿಂದ ಅವಳು 1965ರಲ್ಲಿ ಅವಳು ಸಾಯುವವರೆಗೆ ಕಾಸ್ಮೆಟಿಕ್ ಜಗತ್ತಿನ ಅನಭಿಷಿಕ್ತ ರಾಣಿಯಾಗಿ ಮೆರೆಯುತ್ತಾಳೆ.

ನಂತರ ಎಂದು ನೀವು ಪ್ರಶ್ನೆ ಮಾಡಿದರೆ ಹೇಳಲು ಏನೂ ಇರುವುದಿಲ್ಲ. ಈ Rags to riches ಕಥೆಯಲ್ಲಿ ಆ ನಂತರದ ಕಥೆ ಹೇಳಬೇಕೆಂದರೆ ಮತ್ತಿಷ್ಟು ಯಶಸ್ವಿಯಾದಳು, ಮತ್ತಿಷ್ಟು ಹಣ ಸಂಪಾದಿಸಿದಳು ಎಂದಷ್ಟೇ ಹೇಳಬಹುದು. ಯಶಸ್ಸು ಅನ್ನುವುದು ಒಮ್ಮೆ ಅವಳ ಮುಷ್ಠಿಯಲ್ಲಿ ಬಂಧಿಯಾದ ನಂತರ ಬಿಡಿಸಿಕೊಳ್ಳಲು ಯತ್ನಿಸದೇ ಅಲ್ಲಿಯೇ ವಿರಾಜಮಾನವಾಗಿ ಬಿಡುತ್ತದೆ. ಅಲ್ಲಿಂದ ಮುಂದೆ ಅವಳು 1965ರಲ್ಲಿ ಇಲ್ಲವಾಗುವವರೆಗೆ ರುಬೆನ್‌ಸ್ಟೆನ್ ಕಂಪನಿ ಕಾಸ್ಮೆಟಿಕ್ ಜಗತ್ತನ್ನು ಆಳುತ್ತದೆ.

ಅವಳ ಚಾಣಾಕ್ಷ ನಡೆಗಳು ಬಿಸಿನೆಸ್ ಜಗತ್ತಿನಲ್ಲಿ ಇವತ್ತಿಗೂ ಎಂಥ ಕುತೂಹಲಕಾರಿ ಎಂದರೆ, ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ಅವಳ ವಿಷಯ ಕೇಸ್ ಸ್ಟಡಿ ಆಗಿದೆಯಂತೆ! 19ನೇ ಶತಮಾನದಲ್ಲಿ ಮಧ್ಯವರ್ಗದವರು ಪ್ರಸಾದನಗಳು ಉಪಯೋಗಿಸುವುದೇ ನಿಷಿದ್ಧವಾಗಿತ್ತಂತೆ.

ಅದನ್ನೆಲ್ಲ ಬಳಸುತ್ತಿದ್ದುದು ವೇಶ್ಯೆಯರು ಮಾತ್ರ ಎಂದು ಸಮಾಜ ಪರಿಗಣಿಸುತ್ತಿತ್ತಂತೆ. ಕಾಸ್ಮೆಟಿಕ್ ವ್ಯವಹಾರ 19ನೇ ಶತಮಾನದ ಆ ಕಾಲಘಟ್ಟದಿಂದ ಹೊರಟು, 21ನೇ ಶತಮಾನದಲ್ಲಿ 530 ಬಿಲಿಯನ್ ವಹಿವಾಟು ನಡೆಸುವ ಹಂತಕ್ಕೆ ತಲುಪುವುದರಲ್ಲಿ ಹೆಲೆನಾ ಪ್ರಮುಖ ಪಾತ್ರ ವಹಿಸಿದವಳು ಎಂದು ಗುರುತಿಸಿದ್ದಾರಂತೆ!!

ಈಗ ಹೇಳಿ, ನಮ್ಮ ದೇಶದಲ್ಲಿ ಅಂಥದ್ದೊಂದು ಹೆಣ್ಣುಮಗಳು ಹುಟ್ಟಿದ್ದಳು ಅಂದರೆ ನಮಗೆ ಆ ಬಗ್ಗೆ ಜಗತ್ತಿಗೇ ಕೂಗಿ ಹೇಳಬೇಕು ಅನ್ನಿಸುವುದಿಲ್ಲವೇ? ಎದೆ ಬೀಗುವುದಿಲ್ಲವೇ? ಅಂಥದ್ದೊಂದು ಪ್ರತಿಕೂಲ ಪರಿಸ್ಥಿತಿಯಲ್ಲಿ ಈ ರೀತಿ ಮಿಲಿಯನ್‌ಗಳನ್ನು ಕಳ್ಳಮಳ್ಳ ಸಿನೆಮಾದಲ್ಲಿ ಜಗ್ಗೇಶ್ ನೋಟ್ ಮೆಷಿನ್‌ನಲ್ಲಿ ಪ್ರಿಂಟ್ ಹಾಕಿದಂತೆ ನ್ಯಾಯಯುತವಾಗಿಯೇ ಸಂಪಾದಿಸುತ್ತಾಳೆಂದರೆ, ಅದರ ಬಗ್ಗೆ ಹೆಮ್ಮೆಯೆನಿಸುವುದಿಲ್ಲವೇ?

1896ರಲ್ಲಿ ಪೋಲೆಂಡ್‌ನಿಂದ 15 ಸಾವಿರ ಕಿಲೋಮೀಟರ್ ದೂರದಲ್ಲಿದ್ದ ಆಸ್ಟ್ರೇಲಿಯಾಗೆ ಒಬ್ಬಳೇ ಪಯಣಿಸುತ್ತಾಳೆ ಎಂದರೆ ಅಂಥದ್ದೊಂದು ಎದೆಗಾರಿಕೆಯ ಬಗ್ಗೆ ಪಾಡಿ ಕೊಂಡಾಡಬೇಕು ಎನ್ನಿಸುವುದಿಲ್ಲವೇ? ಹೋಗಲಿ ನಮ್ಮ ದೇಶದವಳು ಅಂತಲ್ಲದಿದ್ದರೂ, ಒಬ್ಬಳು ಹೆಣ್ಣು ಇದನ್ನೆಲ್ಲ ಸಾಧಿಸಿದ ಯಶೋಗಾಥೆ ಮೈ ನವಿರೇಳಿಸುವುದಿಲ್ಲವೇ? ನಾನೇನಾದರೂ ಪೊಲೋನಿಯ ಥರ ಗೈಡ್ ಆಗಿದ್ದರೆ ಪ್ರವಾಸಕ್ಕೆ ಬಂದವರು ಸಾಕು ನಿಲ್ಲಿಸು ಅನ್ನುವವರೆಗೆ ಇದನ್ನೆಲ್ಲ ಹೇಳಿ ಹೇಳಿ ದಣಿಯುತ್ತಿದ್ದೆ.

ಗೈಡ್ ಅತ್ತ ಕಡೆ ಇರಲಿ, ಈಗ ಸುಮ್ಮನೆ ಕುತೂಹಲಕ್ಕಾಗಿ ಓದಿದ್ದನ್ನೇ ನಿಮಗೆ ಪೂರ್ತಿ ಹೇಳದೇ ಮುಂದಿನ ಚಾಪ್ಟರ್‌ಗೆ ಹೋಗಲು ನನ್ನಿಂದಾಗುತ್ತಿಲ್ಲ ಎಂದು ಕತೆ ಪೂರಾ ಹೇಳಲು ಹೊರಟೆ ನಾನು. ಅಂಥದ್ದರಲ್ಲಿ ಅದನ್ನೆಲ್ಲ ಹೇಳುವುದು ಬಿಟ್ಟು ‘ಇವಳು ಹೆಲೆನಾ ರೂಬೆನ್‌ಸ್ಟೆನ್, ಇವಳ ರೂಬೆನ್‌ಸ್ಟೆನ್ ಕಂಪನಿಯನ್ನು ಲಾರಿಯಲ್ ಕಂಪನಿ ಟೇಕ್ ಓವರ್ ಮಾಡಿತು’ ಎಂದರೆ ಅದೇನು ಹೇಳಿದಂತಾಯಿತು ನೀವೇ ಹೇಳಿ! ನನಗೆ ಜನರು ahead of their times ಯೋಚಿಸುತ್ತಾರಲ್ಲ, ಅಂತಹವರನ್ನು ಕಂಡರೆ ಅತ್ಯಂತ ಮೋಹ.

ಹಾಗಾಗಿಯೇ ಇಷ್ಟನ್ನೂ ಹೇಳಿ ಮುಗಿಸದ ಹೊರತು ನನ್ನ ಆತ್ಮಕ್ಕೆ ಶಾಂತಿಯಿಲ್ಲ ಅನ್ನುವಂತಾಗಿ ಬಿಟ್ಟಿತು! ಇನ್ನು ಜಾನ್ ಕರ್ಸ್ಕಿಯ ಅಸಾಧಾರಣ ಕತೆಯೊಂದನ್ನು ನಿಮಗೆ ಹೇಳಿಬಿಟ್ಟರೆ my soul will rest in peace! ಅವರದ್ದೊಂದು ಎರಡನೆಯ ಮಹಾಯುದ್ದದ ಸಮಯದಲ್ಲಿನ ಅದ್ಭುತ, ನಿಗೂಢ, ಮಾನವೀಯತೆಯ ಕಥೆ. ಪೋಲೆಂಡನ್ನು ನಾಜ಼ಿಗಳು ಆಕ್ರಮಿಸಿದ ನಂತರ ಅಲ್ಲಿನ ಯಹೂದೀಯರ ಸ್ಥಿತಿ ಗತಿಗಳನ್ನು, ಗೆಟ್ಟೋಗಳ ಒಳಗೇನು ನಡೆಯುತ್ತಿದೆ ಎಂಬುದನ್ನು ಹೊರಜಗತ್ತಿಗೆ ತಿಳಿಸಲು ತೆಗೆದುಕೊಂಡ ರಿಸ್ಕ್, ಪಟ್ಟ ಕಷ್ಟ ಎಲ್ಲದರ ಬಗ್ಗೆ ವಿವರವಾಗಿ ಹೇಳದಿದ್ದರೆ ಇಡೀ ಕಥಾನಕವೇ ಅಪೂರ್ಣ ಎಂದೆನಿಸೀತು.

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

November 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: