ಕಾವ್ಯ ಮತ್ತು ರಂಗಭೂಮಿಯ ‘ಕೂಡುಗೆರೆ’ಯ ಶೋಧದಲ್ಲಿ‌

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

। ಕಳೆದ ವಾರದಿಂದ ।

ತುಂಬು ಪ್ರೇಮದಂತಿರುವ ಕಾವ್ಯವನ್ನೂ ಮತ್ತು ಸೌಂದರ್ಯ ಜ್ಞಾನದಿಂದ ತುಂಬಿರುವ ರಂಗಭೂಮಿಯನ್ನೂ ಸಮಾಸಗೊಳಿಸುವ ರಸಾಸ್ವಾದನೀಯ ಸಂಗತಿಯ ಕುರಿತು ತಾರ್ಕಿಕವಾಗಿ, ಅದೂ ಶುಷ್ಕ ಗದ್ಯದಲ್ಲಿ, ಅಂದರೆ ಪಕ್ಕಾ ಪುರುಷ ದನಿಯಲ್ಲಿ ಮಾತನಾಡುತ್ತಿರುವುದಕ್ಕಾಗಿ ನನ್ನ ಕುರಿತು ನನಗೇ ವಿಷಾಧವಿದೆ.

ಆದರೆ ನೀರಸವಾದರೂ ಸರಿಯೇ, ಇದರ ಕುರಿತು ಹೇಳಲೇ ಬೇಕಿದೆ ನನಗೆ. ಏಕೆಂದರೆ ರಂಗಭೂಮಿಯಲ್ಲಿ ನಿರಂತರವಾಗಿ ಕಾವ್ಯ ಮತ್ತು ಚಿತ್ರಗಳನ್ನು ಹುಡುಕುತ್ತಲೇ ಇರುವ ನನಗೆ ಆ ಎಂದಿಗೂ ಬತ್ತದ ತೊರೆಗಳ ಬಗ್ಗೆ, ವಿಪರೀತ ದಾಹವಿದೆ. ಹೀಗಾಗಿ ಕಾವ್ಯವನ್ನು ಅಭ್ಯಾಸಕ್ಕೆ ಎಂತೋ ಅಂತೇ ಪ್ರಯೋಗಕ್ಕಾಗಿಯೂ ಆರಿಸಿಕೊಂಡು ಅದನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರೂಪಿಸಿದ ಹಲವು ಪ್ರಯತ್ನಗಳನ್ನು ಅನೇಕ ವರ್ಷಗಳಿಂದ ಮಾಡುತ್ತಲೇ ಬಂದಿದ್ದೇನೆ.

ಕಡಿಮೆ ವೇಳೆಯಲ್ಲಿ ಹೆಚ್ಚು ಸಂಗತಿಗಳನ್ನು ಚರ್ಚಿಸುವ, ನಮ್ಮ ನಡುವಿನ ಹಲವು ತಲ್ಲಣಗಳನ್ನು ಮತ್ತು ಅನೂಹ್ಯವಾದ ಹಲವು ಸಂಗತಿಗಳನ್ನು ನಟರ ಮೂಲಕ ಮಾತನಾಡಲು ಸಾಧ್ಯವಾಗುವ ಇಂತಹ ಹಲವು ಪ್ರಯೋಗಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇದೆ.  ನನ್ನ ಅಂತಹ ಕೆಲವು ಪ್ರಯೋಗಗಳು ಆ ಅಂತಹ ಪ್ರಯತ್ನಗಳ ಅಡಿಯ ಹುಡಿಯಾಗುವ ಯತ್ನದ್ದು.

ನಾಟಕವೂ ಒಂದು ಕಾವ್ಯವೇ. ಕಾವ್ಯದ ವಿಶಾಲ ವ್ಯಾಪ್ತಿಯೊಳಗೆ ನಾಟಕವೂ ಇದೆ. ಹಿಂದೆಲ್ಲ ಮಹಾಕಾವ್ಯಗಳನ್ನು ನಾಟಕವಾಗಿ ಅಭಿನಯಿಸುತ್ತಿದ್ದುದರಿಂದ ‘ಕಾವ್ಯೇಶು ನಾಟಕಂ ರಮ್ಯಂ’ ಎಂದೂ ಅನ್ನುತ್ತಿದ್ದರು. ಮಹಾಕಾವ್ಯಗಳ ಕತ್ತರಿಸಿದ ಭಾಗಗಳನ್ನು ನಾಟಕವಾಗಿ ಅಭಿನಯಿಸುತ್ತಿದ್ದುದರಿಂದ ಆ ಮಾತು ಪ್ರಚಲಿತದಲ್ಲಿತ್ತು.

ಸೂತ್ರದಾರ, ನಟ, ಚೇಟ ಇತ್ಯಾದಿ ಮಹಾಕಾವ್ಯದಲ್ಲಿ ಇಲ್ಲದ ಪಾತ್ರಗಳು ನಾಟಕದಲ್ಲಿ ಸೇರಿಕೊಂಡಿದ್ದು ಈ ತುಂಡರಿಸಿದ ಕಾವ್ಯ ಕಥಾಭಾಗದ ಸಂವಹಿಸುವಿಕೆಗಾಗಿ ಆಗಿತ್ತು. ಅಲ್ಲಿ ಬಳೆಕೆಯಾದ ‘ಕಾವ್ಯ’ ಅನ್ನುವ ಪದ ಇದೆಯಲ್ಲಾ ಅದು ಈಗ ನಾವು ಯಾವ ಅರ್ಥದಲ್ಲಿ ಉಪಯೋಗಿಸುತ್ತಿದ್ದೇವೆಯೋ ಆ ಅರ್ಥದ್ದಲ್ಲ.  ಆದರೆ ಈಗ ನಾವು ಬಳಸುತ್ತಿರುವ ‘ಕಾವ್ಯ’ ಅನ್ನುವ ‘ಗುಣ’ ಇದೆಯಲ್ಲಾ ಇದು ಅವೆಲ್ಲದರಿಂದಲೂ ಉನ್ನತವಾದುದು.

ಕಾವ್ಯಾತ್ಮಕ ಸ್ಥಿತಿ ಅಂದರೆ ಮನುಷ್ಯ ತಲುಪಬಹುದಾದ ಆತ್ಯಂತಿಕ ಸ್ಥಿತಿ ಅನ್ನುವ ಅರ್ಥದಲ್ಲಿ ನಾವದನ್ನು ಪರಿಭಾವಿಸುತ್ತಿದ್ದೇವೆ. ದೃಶ್ಯದ ಮಾತುಗಳ ಮೂಲಕ ಅದೃಶ್ಯವನ್ನು ಕಾಣಿಸುವ, ಮೂರ್ತ ಸಂಗತಿಗಳ ಮೂಲಕ ಸಾಗುತ್ತ ಅಮೂರ್ತವನ್ನೂ ಕಾಣಿಸುವ, ಪರಿಚಿತ ಜಗತ್ತಿನ ಮೂಲಕ ಸಾಗುತ್ತ ಅಪರಿಚಿತ ಜಗತ್ತನ್ನು ಪರಿಚಿತಗೊಳಿಸುವ ಅದರ ಮರ್ಮ ಅರಿಯುವುದು ಎಲ್ಲ ಕಲೆಗಳಿಗೂ ಒಂದು ಸವಾಲು.

ಮಾತಿಗೆ ನಿಲುಕದೊಂದನ್ನು ವರ್ಣಿಸುವಾಗ “ಓಹ್ ಅದು ಕಾವ್ಯದಂತಿದೆ” ಎಂದರೆ ಮತ್ತೆ ವಿವರ ಬೇಕೆನಿಸುವದಿಲ್ಲ. ಅದರ ಅನಿರ್ವರ್ಣನೀಯ ಲಾವಣ್ಯ ಅನುಭವಕ್ಕೆ ಬರತೊಡಗುತ್ತದೆ. ಅಲ್ಲಿಯ ಪ್ರತಿ ಮಾತೂ ಮಂತ್ರವೇ. ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಹೇಳಿಕೊಳ್ಳುತ್ತಾನಲ್ಲ ತನ್ನ ಕಾವ್ಯವೆಂದರೆ ಅದು “ಬರಿಯ ತುಳಸಿಯ ಉದಕದಂತಿರೆ” ಎಂದು, ಹಾಗೆ ಬರಿಯ ನೀರು ತೀರ್ಥವಾಗುವ ಆ ಮ್ಯಾಜಿಕ್ ಏನಿದೆ,  ಅದನ್ನು ತನ್ನ ರಂಗದ ಬದುಕಿನಲ್ಲಿ ಸಾಧಿಸಿಕೊಳ್ಳುವುದೇ ನಟರ ಸಾಧನೆ.

ಮಾತನ್ನು ಮಂತ್ರವಾಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಅವರಿಗೆ. ಏಕೆಂದರೆ ರಂಗದ ಮೇಲೆ ಅವರು ಆಡುವ ಮಾತು ಎಂದರೆ ಅಲ್ಲಿ ಅದು ಅವರ ಸಾವು ಬದುಕಿನ ಪ್ರಶ್ನೆಯಂತೆ. ಒಮ್ಮೆ ಆಡಿದ ಮಾತನ್ನು ಅವರು, ಅಯ್ಯೋ! ತಪ್ಪಿತು ಎಂದು ಮತ್ತೊಮ್ಮೆ ಆಡಲು ಸಾಧ್ಯವಿಲ್ಲ. ಅದು ಅವರ ಅಥವಾ ಪಾತ್ರದ ಸಾವು. ಮಾತಿನ ಈ ವಿಷಯದಲ್ಲಂತೂ ‘ತೊಟ್ಟಂಬನ್ನು ಮರಳಿ ತೊಡದಿರುವ ಶಪಥ’ವನ್ನೇ ಧರಿಸಬೇಕಾದ ನಟರಿಗಂತೂ ಕಾವ್ಯದ ಜಾಗರೂಕ, ಜಾಗೃತ ಸ್ಥಿತಿ ಬಹುದೊಡ್ಡಪಾಠವಾಗಬಲ್ಲದು. ನಟರ ತರಬೇತಿಯಲ್ಲಿಯಂತೂ ಕಾವ್ಯದ ಅಭ್ಯಾಸ ಅವರ ದೇಹಭಾಷೆಯನ್ನೂ ಅಸಾಧಾರಣವಾಗಿ ತಿದ್ದಬಲ್ಲದು.

ಮೀಮಾಂಸಕರ ಪ್ರಕಾರ ‘ಶಬ್ಧ’ದ ಉಗಮವೇ ಕಾವ್ಯ. ಹಾಗೆ ನೋಡಿದರೆ ಪ್ರತಿ ಶಬ್ಧವೂ ಕಾವ್ಯವೇ. ಕಾಲಾಂತರದಲ್ಲಿ ಅದನ್ನು ಬಳಸಿ ಬಳಸಿ ಅದರಲ್ಲಿಯ ಕಾವ್ಯತ್ವವು ಸಾಯತೊಡಗುತ್ತದೆ. ಆಗ ನಾವು ವಿಶೇಷಣಗಳ ಮೊರೆ ಹೋಗುತ್ತೇವೆ. ವಿಶೇಷಣಗಳು ಶಬ್ಧಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತವೆ. ಮುಂದೆ ಅತಿ ಬಳಕೆಯಿಂದ ವಿಶೇಷಣಗಳೂ ಶಕ್ತಿಕಳೆದುಕೊಳ್ಳುತ್ತವೆ. ಆಗ ಒತ್ತು ಕೊಟ್ಟು ಹೇಳಲು ಆರಂಭಿಸುತ್ತೇವೆ.

ಅದೂ ಪರಿಣಾಮ ಬೀರದಂತಹ ಸ್ಥಿತಿಯಲ್ಲಿ ಆ ಶಬ್ಧಗಳು ಮರೆಯಾಗಿಹೋಗುತ್ತವೆ. ಅದರ ಪುನರ್ಜನ್ಮ ಆಗೋದು ಕಾವ್ಯದಲ್ಲಿ. ಏಕೆಂದರೆ ಕಾವ್ಯದಲ್ಲಿ ಬಳಕೆ ಆದಾಗ ಅದು ಅದರ ಸ್ವಾಭಾವಿಕ ಪರಿಸರದಿಂದ ತಪ್ಪಿಸಿಕೊಂಡು ಬೇರೆಯದೇ ಪರಿಸರದಲ್ಲಿ ಕಾಣುತ್ತದೆ. ಅದು ಹೊಸತಾಗಿ ಗೋಚರಿಸುತ್ತದೆ. ಹಳೆಯ ನೆನಪುಗಳು ನಮಗೆ ಇರುವುದರಿಂದ ಈ ಪದಗಳು ಬೇರೆಯದೇ ಸಂದರ್ಭದಲ್ಲಿ ನಮಗೆ ಕೇಳಲ್ಪಟ್ಟು ಹೊಸ ಅನುಭವವನ್ನು ನಮಗೆ ತಂದುಕೊಡುತ್ತದೆ.

ಭಾಷೆಯು ಭಾವವನ್ನು ಅಭಿನಯಿಸಿದಾಗಲಷ್ಟೇ ಸಾಹಿತ್ಯವು ಸಾಹಿತ್ಯವೆನಿಸಿಕೊಳ್ಳುತ್ತದೆ ಅಷ್ಟೆ. ಇಲ್ಲಿ ಭಾಷೆಯು ರಂಗಭೂಮಿಯ ಒಸಗೆಗಳನ್ನು ಬಳಸಿಕೊಳ್ಳುತ್ತದೆ. ರಂಗಭೂಮಿಯಲ್ಲಿಯೂ ಅಷ್ಟೆ. ಹಲವು ರಂಗಸಮಯಗಳು, ರಂಗಭಾಷೆಗಳು ಮತ್ತೆ ಮತ್ತೆ ಬಳಸಲ್ಪಟ್ಟು ಅದೂ ನಿಶ್ಚಿತ ಪರಿಣಾಮ ಉಂಟುಮಾಡುವಲ್ಲಿ ಸೋಲತೊಡಗಿದಾಗ ಕಾವ್ಯದ ಸಾಂಗತ್ಯ ಅದಕ್ಕೆ ಹೊಸ ಉಸಿರು ತುಂಬ ಬಲ್ಲದು. ಅಲ್ಲಿಯ ಪ್ರತಿಮೆಗಳು, ಸಂಕೇತಗಳು, ಚಿತ್ರಗಳು ರಂಗಭೂಮಿಯ ಭಾಷಾ ಪ್ರಯೋಗಕ್ಕೆ ಹೊಸ ಶಕ್ತಿಯನ್ನೂ, ಅರ್ಥವನ್ನೂ, ಅನುಭವವನ್ನೂ ತಂದುಕೊಡುತ್ತ ಕಾವ್ಯವು ರಂಗಭೂಮಿಗೆ ಪ್ರಾಣದಾಯಿನಿಯಾಗಿಯೂ ಒದಗಲ್ಲದು.

ಇನ್ನು, ಕಾವ್ಯವನ್ನೇ ರಂಗಮಾಧ್ಯಮಕ್ಕೆ ತರುವುದು ಭಾಷೆಗೂ ನೆರವು ನೀಡುವ ಸಂಗತಿಯೇ ಆಗಿದೆ. ನಮ್ಮ ಸಹಜ ಓದಿಗೆ ಭಾವವನ್ನು ತುಂಬಿಕೊಳ್ಳುವ ಶಕ್ತಿ ಕಡಿಮೆ. ಆದರೆ ಅದರ ಭಾವವನ್ನು ಅಭಿನಯಿಸಿದಾಗ ಭಾಷೆಯ ವಿಭಿನ್ನ ಬಳಕೆಯ ‘ದನಿ’ ಕಾಣಸಿಗುತ್ತದೆ. ಏಕೆಂದರೆ ಕಾವ್ಯವು ತನ್ನ ಎಲ್ಲ ಬಗೆಯ ಅರ್ಥಗಳನ್ನೂ ದೈನಂದಿನ ವ್ಯವಹಾರದಲ್ಲಿರುವ ಶಾಬ್ದಿಕ ಭಾಷೆಯ ಮೂಲಕವೇ ಕಂಡುಕೊಳ್ಳಬೇಕು.

ಆದರೆ ರಂಗಭೂಮಿಯಲ್ಲಿ ‘ಭಾಷೆ’ ಎಂದರೆ ಅದು ಒಂದು ಸಂಕೀರ್ಣ ಘಟಕ.  ಇಲ್ಲಿ ಶಾಬ್ದಿಕ ಭಾಷೆಯ ಜತೆಗೆ ಸಂಗೀತ, ಸನ್ನೆ, ದೃಶ್ಯ, ಸಂಕೇತ ಮುಂತಾದ ಶಬ್ದೇತರವಾದ ಸಂಕೀರ್ಣ ಭಾಷೆಯೂ ಸೇರಿಕೊಳ್ಳುತ್ತದೆ. ಶಬ್ಧ, ದೃಶ್ಯ, ಶ್ರವ್ಯ ಸೇರಿದ ಭಾಷೆ ಅದು. ಹೀಗಾಗಿ ಸಪ್ಪೆ ಎನಿಸಿದ ಹಲವು ಕಾವ್ಯಗಳು ಜೀವ ಪಡೆಯುವುದು ಹೀಗೆ; ಅದರ ಶಬ್ಧಗಳ ಚಿತ್ರಗಳು ಕಾಣಸಿಕ್ಕಾಗ.

ಬರೆವಣಿಗೆಗೆ ಕೆಲಮಿತಿಗಳಿರುತ್ತವೆ. ಅದು ಭಾವವನ್ನು ಜತೆಗೆ ಕೊಂಡೊಯ್ಯುವಲ್ಲಿ ಬಹಳ ಕಡಿಮೆ ಶಕ್ತಿಯುತವಾದುದು. ‘ಹೂಂ’ ಕಾರದ ಹಲವು ಸಾಧ್ಯತೆಗಳನ್ನು ಆಡುಮಾತಿನಂತೆ ಬರವಣಿಗೆಯಲ್ಲಿ ತೋರಿಸೋಕೆ ಕಷ್ಟ. ಕಾವ್ಯವು ಯಾವ ಭಾವವನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತದೆ ಎಂಬುದನ್ನು ಅದರ ಸಂದರ್ಭ ವಿವರಗಳಿಂದ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಹೀಗೆ ಭಾಷೆಯ ಮಿತಿ ಹಾಗೂ ಬರವಣಿಗೆಯ ಮಿತಿಯನ್ನು ದಾಟಲು ಯತ್ನಿಸುವ ಒಂದು ಪ್ರಯತ್ನವೂ ಕಾವ್ಯ ಮತ್ತು ರಂಗಭೂಮಿಯ ಸಮಾಸದ ಹಿಂದಿರುತ್ತದೆ. ಇಲ್ಲಿ ರಂಗಭೂಮಿಯು ಭಾಷೆ ಅಭಿನಯಿಸಿದ ಭಾವವನ್ನು ಮತ್ತೆ ಅತಿ ಕಡಿಮೆ ರಂಗಪರಿಕರಗಳ ಸಹಾಯದಿಂದ ರಂಗಕ್ಕೆ ತರುವುದು.

ಹೀಗೆ ‘ರಂಗ’ ಮತ್ತು ‘ಭಾಷೆ’ ಯಾವತ್ತೂ ತನ್ನ ಪರಿಕರಗಳನ್ನು ಬಳಸಿಕೊಂಡು ಉದ್ದೇಶಿತ ಸಂವಹನ ಸಾಧಿಸುವಂತೆ ಮಾಡುವುದು ಈ ‘ಕೂಡುಗೆರೆ’ಯ ಉದ್ದೇಶ. ಇದನ್ನು ರಂಗ ಮತ್ತು ಭಾಷೆಯ ಅಂತರ್ ಸಂಬಂಧವುಳ್ಳ  ಪ್ರತ್ಯೇಕ ಪರಿಕಲ್ಪನೆಯೆಂದು ಕರೆಯಬಹುದು. ಅದನ್ನು ‘ಕಾವ್ಯರಂಗ’ ಎಂದು ಹೆಸರಿಸೋಣ.

ಇಲ್ಲಿ ಇನ್ನೊಂದು ಗ್ರಹಿಕೆಯೂ ಕೆಲಸ ಮಾಡುತ್ತದೆ. ಸ್ವಭಾವತಹ ಸಾಮಾಜಿಕವಾದ ಸಾಹಿತ್ಯ, ಬಹುತೇಕವಾಗಿ ಸಮಾಜವನ್ನೇ ತನ್ನ ಅನ್ವೇಷಣೆಯ ಗುರಿಯಾಗಿಸಿಕೊಂಡಿದೆ. ಸಾಹಿತ್ಯದ ಸ್ವರೂಪವೇ ಸಾಮಾಜಿಕವಾದದ್ದು. ಸಮಾಜ ಹೇಳಿಕೇಳಿ ಮುಖಹೀನವಾದ ಅಮೂರ್ತ ಪರಿಕಲ್ಪನೆ. ಆದರೆ ವ್ಯಕ್ತಿ, ವ್ಯಕ್ತಿತ್ವವುಳ್ಳ ಮೂರ್ತ ಸಂಗತಿ. ಮೂರ್ತವಾದ ವ್ಯಕ್ತಿಗಳೆಲ್ಲ ಸೇರಿ ಅಮೂರ್ತ ಸಮಾಜವಾಗುತ್ತದೆ. ವಿಪರ್ಯಾಸವೆಂದರೆ ವ್ಯಕ್ತಿಯ ವ್ಯಕ್ತಿತ್ವ ಸಮಾಜದಲ್ಲಿ ನಿರಸನವಾಗುತ್ತದೆ. ಅಲ್ಲಿ ಕರಗತೊಡಗಿದ್ದ ವ್ಯಕ್ತಿಯ ಹುಡುಕಾಟ ಮತ್ತು ವ್ಯಕ್ತಿ ಮತ್ತು ಸಮಾಜದ ಸಂಬಂಧದ ಸ್ವರೂಪದ ಅನ್ವೇಷಣೆಯೇ ಸಾಹಿತ್ಯದ ಜೀವಾಳ. ‘ಕಾವ್ಯರಂಗ’ದ ಉದ್ದೇಶವೂ ಈ ತಾತ್ವಿಕ ಸಂಗತಿಗಳನ್ನಾಧರಿಸಿದ್ದು.

ನಿಜ. ಆಂತರ್ಯ ಶೋಧದ ಆಧ್ಯಾತ್ಮಿಕ ಅನುಭೂತಿಯ ಕಾವ್ಯವನ್ನು ತನ್ನ ಗಟ್ಟಿಯಾದ ಉಚ್ಛಾರಗಳ ಮೂಲಕ, ‘ವಾಚ್ಯ’ಗೊಳ್ಳುವ ಅಭಿನಯದ ಮೂಲಕ, ಅದರ ಒಳಬಂಧವನ್ನು ತನ್ನ ವಿವರಣೆಯ ಮೂಲಕ ರಂಗಭೂಮಿ ಕೆಡಿಸಲೂ ಬಲ್ಲದು. ಕಾವ್ಯವು ಅಭಿನೀತಗೊಳ್ಳಲು ಬಳಕೆಯಾಗುವ ರಂಗದ ಹಲವು ಪರಿಕರಗಳು, ಪರಿಸರಗಳು ಎಲ್ಲಿಯಾದರೂ ಅಲಂಕರಣಗಳಾಗಿ ಮುನ್ನೆಲೆಗೆ ಬಂದುಬಿಟ್ಟರೆ ಆಗ ಕಾವ್ಯದ ದನಿ ಉಡುಗಿ ಹೋಗುತ್ತದೆ.

ಅಲ್ಲದೇ ರಂಗದ ಓದಿನಲ್ಲಿ ಕಾವ್ಯದ ‘ಒಂದು’ ಬಗೆಯ ಅರ್ಥಮಾತ್ರ ಗೋಚರವಾಗಿ ಅದರ ಹಲವು, ನಾನಾರ್ಥಗಳು ಮರೆಯಾಗಿ ಹೋಗಲೂಬಹುದು. ತುಂಬ ಜಾಗರೂಕತೆಯಿಂದ, ಪ್ರೀತಿಯನ್ನು ಸಂಬಾಳಿಸುವಷ್ಟು ಸೂಕ್ಷ್ಮತೆಯಿಂದ ವ್ಯವಹರಿಸದಿದ್ದರೆ ರಂಗದ ಸೋಕಿನಿಂದ ಕಾವ್ಯ ಮಲೀನಗೊಳ್ಳಲೂಬಲ್ಲದು.

ಎಲ್ಲ ಕಾವ್ಯವನ್ನೂ ರಂಗಕ್ಕೆ ತರಬೇಕಿಲ್ಲ, ರಂಗದ ಓದೂ ಸಹ ಕಾವ್ಯದ ಒಂದು ಬಗೆಯ ಓದು ಮಾತ್ರ, ನಾಟಕ ಎಂಬ ಸಾಹಿತ್ಯ ಪ್ರಕಾರವನ್ನೇ ಇದು ಪಲ್ಲಟಗೊಳಿಸ ಬಂದಿಲ್ಲ, ಇದಕ್ಕೊಂದು ಸ್ಪಷ್ಟವಾದ ಶೈಕ್ಷಣಿಕ ಉದ್ದೇಶವಿದೆ – ಎಂಬಿತ್ಯಾದಿ ಸಂಗತಿಗಳನ್ನು ಗಮನದಲ್ಲಿಟ್ಟೇ ಈ ಪ್ರಕಾರದ ಪ್ರಯೋಗಗಳಲ್ಲಿ ಮುಂದರಿಯಬೇಕಾಗುವುದು.

ನಾನದರ ಬೆನ್ನು ಬಿದ್ದಿದ್ದು ಹೀಗೆ. ಕವಿಗೋಷ್ಠಿಗಳಲ್ಲಿ ‘ನಟರು’ ಓದುವ ಕವನ ಸಹಜವಾಗಿಯೇ ಕವನಗಳನ್ನು ಕೇಳುಗರಿಗೆ ಪರಿಣಾಮಕಾರಿಯಾಗಿ ತಲುಪುವುದಷ್ಟೇ. ಅಂತೆಯೇ ಕತೆ, ಆತ್ಮಕತೆ, ವಿಚಾರ ಪ್ರಬಂಧಗಳನ್ನೂ ನಟರಿಂದ ಓದಿಸಿ ಅದನ್ನು ಆಗಾಗ ಸಾಹಿತ್ಯಗೋಷ್ಠಿಗಳಲ್ಲಿ ಮಂಡಿಸುತ್ತಿದ್ದೆ.

ಮೈಸೂರು ರಂಗಾಯಣದಲ್ಲಿ ಪ್ರಸನ್ನರು ರಾಷ್ಟ್ರಮಟ್ಟದ ನಿರ್ದೇಶಕರ ತರಬೇತಿಯನ್ನು ಎನ್.ಎಸ್.ಡಿ. ಸಹಯೋಗದಲ್ಲಿ ನಡೆಸಿದಾಗ ನಾನು ಅಭ್ಯರ್ಥಿಯಾಗಿ ಪಾಲ್ಗೊಂಡ ಸಮಯದಲ್ಲಿ ಅವರು ರಂಗಾಯಣದ ನಟರ ಮೂಲಕ ‘ಕಾವ್ಯ ಸಂಚಯ’ ಎಂಬ ಪ್ರಯೋಗವನ್ನು ಮಾಡಿದಾಗ ಅದುವರೆಗಿನ ಬಹುತೇಕ ಚಿಕ್ಕ ಚಿಕ್ಕ ಪ್ರಯತ್ನಗಳಿಗೆಲ್ಲ ಒಂದು ಸ್ಪಷ್ಟರೂಪ ಸಿಕ್ಕಂತಾಯಿತು. ನಿಜಕ್ಕೂ ನನ್ನ ಮುಖ್ಯವಾದ ಅಭಿವ್ಯಕ್ತಿಯ ಮಾರ್ಗವಿದು ಅನಿಸಿಬಿಟ್ಟಿತು.

ಮುಂದೆ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ನಿರ್ದಿಷ್ಟ ‘ಆಶಯ’ ಗಳನ್ನು ಆಧರಿಸಿದ ಕವನಗಳನ್ನು, ಕತೆಗಳನ್ನೂ, ಪ್ರಬಂಧದ ಸಾಲುಗಳನ್ನೂ ಒಂದೆಡೆ ಸೇರಿಸಿ ನಟರ ಮೂಲಕ ಅದನ್ನು ಪ್ರಸ್ತುತ ಪಡಿಸತೊಡಗಿದೆ. ಅದು ಹಲವು ಭಾಷಣಗಳಿಗಿಂತ ಹೆಚ್ಚು ಪರಿಣಾಮ ಉಂಟುಮಾಡುವುದೆಂಬ ಸತ್ಯವನ್ನು ಅನೇಕರು ಮನಗಾಣುತ್ತ ಹೋದಂತೆ ಈ ಬಗೆಯ ಪ್ರಸ್ತುತಿಗೆ ಮಾನ್ಯತೆ ಒದಗತೊಡಗಿತು.

ಕವನಗಳ ವಾಚಿಕವನ್ನು ನಟರ ತಯಾರಿಯಲ್ಲಿ ಇದನ್ನು ಹಲವು ಕಾಲದಿಂದ ಬಳಸುತ್ತ ಬಂದ ನಾನು ಮುಂದೊಮ್ಮೆ ಬೆಂಗಳೂರಿನಲ್ಲಿ ಸಮುದಾಯ ಸಂಘಟಿಸಿದ ನಿರ್ದೇಶಕರ ತರಬೇತಿ ಕಮ್ಮಟದಲ್ಲಿ ಮೊದಲಬಾರಿಗೆ ‘ಕಾವ್ಯ ರಂಗ’ ಎಂಬ ಹೆಸರಿನ ಪ್ರಯೋಗವನ್ನು ಅಭ್ಯಾಸ ಮಾಲಿಕೆಗಾಗಿ ರೂಢಿಸಿದ್ದೆ. ಮುಂದೆ ಕಾವ್ಯ ರಂಗದ ಬೇರೆ ಬೇರೆ ಬಗೆಯ ಪ್ರಯೋಗಗಳು ನಡೆಯತೊಡಗಿದವು.

ಚಿಂತನ ಉತ್ತರಕನ್ನಡದ ನಮ್ಮ ಬಳಗದಲ್ಲಿ ಸಾಹಿತ್ಯ ಮತ್ತು ರಂಗಭೂಮಿಯ ಸಮಾನ ಆಸಕ್ತರಿದ್ದುದರಿಂದ ಅಲ್ಲಿ ರೂಪುಗೊಂಡ ‘ಕಾವ್ಯರಂಗ’ ದಲ್ಲಿ ಉತ್ತರಕನ್ನಡ ಸಾಹಿತ್ಯದ ಹಲವು ಪ್ರಕಾರಗಳು ಮತ್ತು ಸಾಹಿತ್ಯಗಳೂ ಸೇರಿಕೊಂಡವು. ಅಂಕೋಲಾದ ಹಿರಿಯ ಸಾಹಿತಿ, ಸಂಘಟಕ ವಿಷ್ಣು ನಾಯ್ಕರು ಯುವ ಬರಹಗಾರರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಈ ‘ಕಾವ್ಯರಂಗ’ವನ್ನು ಸಂಘಟಿಸಿ ಅದರ ಚರ್ಚೆಯನ್ನು ಮಾಡಿಸಿದ್ದರು.

ಉತ್ತರಕನ್ನಡದ ಜಿಲ್ಲಾ ಸಾಹಿತ್ಯ ಸಮ್ಮೇಳನವು ಜಯಂತ್ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆದಾಗ ಆ ಸಮ್ಮೇಳನದಲ್ಲಿ ‘ಕಾವ್ಯರಂಗ’ದ ಪ್ರಸ್ತುತಿಯನ್ನೇ ಒಂದು ಗೋಷ್ಠಿಯನ್ನಾಗಿ ಪರಿಗಣಿಸಲಾಗಿತ್ತು. ಬೈಂದೂರಿನ ಶಿಕ್ಷಕರೇ ಹೆಚ್ಚಿಗೆ ಇರುವ ಅಲ್ಲಿಯ ಸುರಭಿ ತಂಡಕ್ಕಾಗಿಯೂ ಶೈಕ್ಷಣಿಕ ಉದ್ದೇಶದ ‘ಕಾವ್ಯರಂಗ’ವನ್ನು ನಿರ್ದೇಶಿಸಿದ್ದೆ.  ಸಾಹಿತ್ಯ ಅಕಾಡೆಮಿಯ ಕೋರಿಕೆಯಂತೆ ಮಂಡ್ಯ ರಮೇಶರ ನೇತೃತ್ವದ ನಟನಾ ಮೈಸೂರಿನ ತಂಡಕ್ಕೆ ಕುವೆಂಪು ಬರಹಗಳನ್ನು ಆಧರಿಸಿದ್ದ ‘ಕಾವ್ಯರಂಗ’ವನ್ನು ಆಂಗಿಕ ಅಭಿನಯವನ್ನೂ ವಾಚಿಕದೊಡನೆ ಸರಿ‌ ಬೆರಸಿಕಟ್ಟಿದ್ದೆ.

ಶಿವಮೊಗ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಮಹಿಳಾಭಾರತ ಎಂಬ ಕಾವ್ಯರಂಗ ನಿರ್ದೇಶಿಸಿದಾಗ ಅದರಲ್ಲಿ ಪಂಪ, ರನ್ನ, ಕುಮಾರವ್ಯಾಸರಿಂದ ಹಿಡಿದು ಕುವೆಂಪುವರೆಗಿನ ಕವಿಗಳ ಕಾವ್ಯದಲ್ಲಿಯ ‘ಯುದ್ಧ ಮತ್ತು ಹೆಣ್ಣು’ ಎಂಬ ವಸ್ತು ವಿಷಯದ ಸ್ತ್ರೀಭಾರತ ನಿರೂಪಿತವಾಗಿತ್ತು. ಇಲ್ಲೆಲ್ಲ ಕೇವಲ ವಾಚಿಕಾಭಿನಯ ಮಾತ್ರವಲ್ಲದೇ ಅಗತ್ಯ ರಂಗಪರಿಕರ ಮತ್ತು ರಂಗಪರಿಸರಗಳು ಸೇರುತ್ತ ಸೇರುತ್ತ ಪೂರ್ಣ ಪ್ರಮಾಣದ ರಂಗ ನಾಟಕವಾಗಿಯೂ ಅದು ಬೆಳೆಯುತ್ತಿತ್ತು.        

ʼಕಾವ್ಯರಂಗ’ವನ್ನು ಪ್ರಮುಖ ಪ್ರದರ್ಶನಾ ನಾಟಕವಾಗಿ ರಾಜ್ಯದ ನೂರಾರು ಕಾಲೇಜುಗಳಲ್ಲಿ ಪ್ರಯೋಗಿಸಿದ್ದು ಸಮುದಾಯದ ರೆಪರ್ಟರಿ ಸಂದರ್ಭದಲ್ಲಿ. ಆಗ ಪಠ್ಯ ಸಂಗ್ರಹದಲ್ಲಿ ನನ್ನೊಂದಿಗೆ ಕೈಜೋಡಿಸಿದ್ದು ಕುಮಟಾ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರೂ, ನನ್ನ ಸಂಶೋಧನೆಯ ಮಾರ್ಗದರ್ಶಕರೂ ಆಗಿದ್ದ ಡಾ.ಎಂ.ಜಿ.ಹೆಗಡೆ. ರಂಗದಲ್ಲಿ ಮಂಡಿತವಾಗುವ ವಸ್ತು ಮತ್ತು ಆಶಯದ ಆಯ್ಕೆಯ ಹಿಂದಿನ ಗ್ರಹಿಕೆಗಳ ಗುರುತ್ವವೂ ಅರಿವೆಗೆ ಬಂದ ಗಳಿಗೆಗಳವು.

ನುಡಿಯೊಳಗೆ ಸಲುವುದು ನಾಡಿನಾ ರೂಪಕ. ಕನ್ನಡವು ರೂಪಿಸಿಕೊಂಡು ಬಂದ ಲೋಕಗೃಹಿಕೆಯನ್ನು ನಾಡು ನುಡಿಯ ರೂಪಕಗಳ ಮೂಲಕ ಮಂಡಿಸುವ ಪ್ರಯತ್ನವಿದಾಗಿತ್ತು. ಅಪಾರ ಕಾವ್ಯ ಸಂಸಾರದ ನಡುವೆ ಹಚ್ಚಿದ ಕಿರುಹಣತೆಯಾಗಿತ್ತಿದು. ಈ ಬೆಳಕಿನಲ್ಲಿ ನಾಡು ರೂಢಿಸಿಕೊಂಡು ಬಂದ ಸಂಬಂಧಗಳ ಜಾಲವನ್ನು ಹೆಣೆಯಲು ಇಲ್ಲಿ ಪ್ರಯತ್ನಿಸಲಾಯಿತು. ಇದನ್ನ ‘ಕಾವ್ಯ ಪ್ರಯೋಗ’ದ ಮೂಲಕ ಮನಗಾಣಿಸಲು ಯತ್ನಿಸಿದೆವು.

‘ಕಾವ್ಯ ಪ್ರಯೋಗ’ದ ಈ ಪರಿಕಲ್ಪನೆಯನ್ನು ನಾವು ದೊರಕಿಸಿಕೊಂಡಿರುವುದು ಕನ್ನಡದ ಆದ್ಯಗ್ರಂಥ ಮತ್ತು ಆದ್ಯಲಕ್ಷಣಗ್ರಂಥ ಕವಿರಾಜಮಾರ್ಗದಿಂದ. ‘ಕಾವ್ಯಪ್ರಯೋಗ’ ಎಂದರೆ – ನಾಟ್ಯಪ್ರಯೋಗ, ಶಾಸ್ತ್ರ ಪ್ರಯೋಗ, ಪದ ಪ್ರಯೋಗಗಳಂತೆ ಕಾವ್ಯದ ವಿಶಿಷ್ಟ ವಿನಿಯೋಗ, ಅನುಸಂಧಾನ, ಪ್ರಸ್ತುತಿ ಎಂತಲೂ ಅರ್ಥೈಸಲಾಗುತ್ತದೆ. ಹೀಗಾಗಿ ನಾವು ಮಂಡಿಸಿದ ಕಾವ್ಯ ಪ್ರಸ್ತುತಿ, ಪಾರಿಭಾಷಿಕವಾಗಿ ‘ಕಾವ್ಯಪ್ರಯೋಗ’. 

ಕನ್ನಡವು ಭಾವಿಸಿಕೊಂಡ ಜನಪದರು ಹೇಗಿದ್ದರೆಂದು ಕೀರ್ತಿಸುವ ಬಾದಾಮಿ ಶಾಸನದಿಂದ ಮೊದಲುಗೊಂಡು ದೇವನೂರರ ಸಾಹಿತ್ಯದವರೆಗಿನ ಸಾವಿರ ವರ್ಷದ ಪದಗತಿಯನ್ನು ಅನುಸರಿಸುತ್ತ, ಅಲ್ಲಿಂದ ಅಗತ್ಯ ಮಾತುಗಳನ್ನು ಹೆಕ್ಕಿಕೊಳ್ಳುತ್ತ ಸಾಗುತ್ತದೆ ಈ ಪ್ರಯೋಗ. ಈ ಮಾತುಗಳನ್ನು ಹೆಕ್ಕಿಕೊಳ್ಳುವ ಉದ್ದೇಶದ ಹಿಂದೆ ಅದು ಸಾಮಾಜಿಕವಾದುದು ಎಂಬುದಾದರೆ  ಮನುಷ್ಯನ ವಿವೇಕ ಪಡೆಯಬೇಕಾದ ಲೋಕದೃಷ್ಟಿಯನ್ನು ಕಂಡುಕೊಳ್ಳುವ ಒಂದು ಶೈಕ್ಷಣಿಕ ಉದ್ದೇಶವೂ ಇದಕ್ಕೆ ಇತ್ತು.

ಉದಾಹರಣೆಗೆ, ನಾವು ಎತ್ತಿಕೊಂಡ ಪಂಚತಂತ್ರದ ಕತೆಯನ್ನೇ ನೋಡಿ. ಇದರಲ್ಲಿ ಬರುವ ಬ್ರಾಹ್ಮಣ ಒಬ್ಬ ವ್ಯಕ್ತಿ. ಅವನಿಗೆ ಹೆಸರು ವಿಳಾಸ ಇದೆ. ಇದು ಅವನ ವ್ಯಕ್ತಿತ್ವದ ಒಂದು ಮುಖ. ಸಾವಿರ ಗದ್ಯಾಣ ನೀಡಿಯಾದರೂ ಅವನು ‘ಕತೆʼ ಕೇಳಲೇ ಬೇಕು. ‘ಕತೆ’ ಎಂದರೆ ಸಾಮಾಜಿಕ ಕ್ರಿಯೆ. ಈ ಎರಡನೇ ಮುಖ ಇಲ್ಲದಿದ್ದರೆ ಬ್ರಾಹ್ಮಣನಿಗೂ ಬ್ರಹ್ಮರಾಕ್ಷಸನಿಗೂ ವ್ಯತ್ಯಾಸವೇ ಇರುವುದಿಲ್ಲ. ಇನ್ನು, ಕಥೆಯ ಹಂಗಿನಿಂದ ಬ್ರಹ್ಮರಾಕ್ಷಸನೂ ಸಾಮಾಜಿಕನಾಗುತ್ತಾನೆ; ಮತ್ತು ಆಕಾರಣದಿಂದಲೇ ಬ್ರಾಹ್ಮಣನಿಗೂ ನಂಟನಾಗುತ್ತಾನೆ.

‘ಒಮ್ಮೆ ಭೇಟಿಯಾದವನು ಮತ್ತೊಮ್ಮೆ ಭೇಟಿಯಾದರೆ ಅವನೇ ನಿನ್ನ ನೆಂಟ’ ಎಂಬ ತಾತ್ಪರ್ಯಉಳ್ಳ ಕತೆ ಇದು. ಇನ್ನು ಪಂಪನ ‘ನೆನೆವುದೆನ್ನ ಮನಂ’ ಎಂಬ ಕವನ. ಸಮಗ್ರ ಸೃಷ್ಟಿಯೊಂದಿಗೆ  ನಾಡಿನ ಬಣ್ಣ ರುಚಿ, ವಾಸನೆ ಮುಂತಾದ ಪಂಚೇಂದ್ರಿಯವನ್ನೂ ಆವರಿಸಿಕೊಂಡಿರುವುದನ್ನು ಅದು ಅಭಿನಯಿಸಿ ತೋರಿಸುತ್ತದೆ. ಆತ ಅನುಭವಿಸಿದ ನಿಸರ್ಗವೇ  ಅವನ ವ್ಯಕ್ತಿತ್ವವನ್ನೂ ರೂಪಿಸಿರುವದರಿಂದ ದೈಹಿಕವಾಗಿ ಬನವಾಸಿಯಲ್ಲಿಲ್ಲದಿದ್ದರೂ ಮಾನಸಿಕವಾಗಿ ಆತ ಬನವಾಸಿಯಲಿದ್ದಾನೆ. ಹೀಗಾಗಿ ಅದರಲ್ಲಿ ಬಿರುಕಿಲ್ಲ. ಈ  ಐಕ್ಯತೆ ಸಾಧ್ಯವಾಗಿರುವದರಿಂದ ಅವನಲ್ಲಿ ‘ಮಧುಮಹೋತ್ಸವʼ ಜರುಗುತ್ತದೆ.

ಇಂತಹ ಈ ಐಕ್ಯತೆಗೆ ಭಂಗ ಬಂದಾಗಲೆಲ್ಲ ದುರಂತ ಎದುರಾಗುತ್ತದೆ. ಉದಾಹರಣೆಗೆ ಕರ್ಣ. ಆತ ಕುಟುಂಬದ ವಿಘಟನೆಯ ದುರ್ವಿಪಾಕವನ್ನು ಅನುಭವಿಸುತ್ತಿರುವವನು. ಕುಟುಂಬದ ದುರ್ವಿಪಾಕ ಸಮಾಜದ್ದೂ, ರಾಷ್ಟ್ರದ್ದೂ ಹೌದು. ಅನಾಮಿಕ ಮತ್ತು ಅಮಾಯಕ ವ್ಯಕ್ತಿಗಳೇ ಹೆಚ್ಚಾಗಿ ಈ ದುರ್ವಿಪಾಕವನ್ನು ಅನುಭವಿಸಬೇಕಾಗುತ್ತದೆ; ರಾಜನ ಕಾಯಿಲೆ ರಾಷ್ಟ್ರದ ಕಾಯಿಲೆಯೂ ಆಗುವ ಹಾಗೆ. ಅದಕ್ಕೆಂದೇ ಪಂಪ ಚಿತ್ರಿಸುವ ಕರ್ಣ ಹೀಗೆ ಹುಟ್ಟಿನ ಸೂತಕವನ್ನು ಕಿತ್ತೊಗೆದು ಹೊಸ ಸಂಬಂಧವನ್ನು ಸೃಷ್ಟಿಸಲು ಯತ್ನಿಸುತ್ತಾನೆ. ಕುಲಮನೇ ಮುನ್ನ ಉಗ್ಗಡಿಸುವವರನ್ನು, ಕುಲಕ್ರಮವನ್ನು ಧಿಕ್ಕರಿಸಿ ಕುಲಕ್ಕೇ ಹೊಸ ಭಾಷ್ಯ ಬರೆಯುತ್ತಾನೆ. ‘ಕುಲಂ ಕುಲಮಲ್ತು’ ಪಠ್ಯವನ್ನು ಕಾವ್ಯರಂಗ ಒಳಗೊಂಡಿದ್ದು ಈ ಕಾರಣಕ್ಕೆ.

ಶಬ್ದ ಶಬ್ದಗಳ ಸಂಬಂಧದಲ್ಲಿ ವಾಕ್ಯದ ಅರ್ಥ ಹುಟ್ಟುವಂತೆ ವ್ಯಕ್ತಿ ವ್ಯಕ್ತಿಗಳ ಸಂಬಂಧದಲ್ಲಿ ಬಾಳಿನ ಅರ್ಥಪ್ರತೀತಿ ಆಗುತ್ತದೆ.  ಬಿಜ್ಜಳನ ರಾಜ್ಯದಲ್ಲಿ ಕಲ್ಯಾಣ ಸೃಷ್ಟಿಸಲು ಹೊರಟ ಶರಣರು ಮನುಷ್ಯರ ನಡುವಿನ ಜಾತಿ ಸೂತಕವನ್ನು, ಕರ್ಮ ಸೂತಕವನ್ನೂ ಕಿತ್ತು ಅವರೆಲ್ಲರನ್ನೂ ಒಂದು ಮಾಡುವ ಕಾಯಕವನ್ನು ಹೊಸ ಸಂಬಂಧದ ಪರಿಭಾಷೆಯನ್ನಾಗಿಸಿದರು. ಕರ್ಮದ ವಿರುದ್ದ ಕಾಯಕವನ್ನೂ, ಮಹಿಳೆಯರ ಅನುಚರ ಬಾವದ ವಿರುದ್ಧ ಸಹಚರ ಭಾವವನ್ನೂ, ಸಂಬಂಧಗಳನ್ನು ಹಾಳುಗೆಡಹುವ ದೇಗುಲವನ್ನು ಬಿಟ್ಟು ದೇಹವನ್ನೂ ಪರಿಕಲ್ಪಿಸಿದರು.  ಈ ಸಂಗತಿಗಳನ್ನು ಪ್ರತಿಬಿಂಬಿಸುವ ಹಲವು ವಚನಗಳು ರಂಗಕ್ಕೆ ಸೇರಿದವು.

ಮನವನ್ನಾಳಲು ಬರದವ ಮನೆಯನ್ನೂ ಆಳ. ಮನೆ ಒಡೆದಾಗ ಮನವೂ ಒಡೆಯುತ್ತದೆ. ಕೋಮು ಕೋಮುಗಳ ನಡುವೆ, ಹೆಣ್ಣು ಗಂಡುಗಳ ನಡುವೆ ಉಂಟಾಗುವ ಇಂಥ ವಿಘಟನೆಯ ಸಮಸ್ಯೆಯಿಂದಾಗಿ ಹಿಂಸೆ ಇನ್ನೂ ಹೆಚ್ಚು ಸೂಕ್ಷ್ಮವಾಗುತ್ತ ಹೋಗುತ್ತದೆ. ಮತ್ತು ಅದು ಅನಾಮಿಕ ಅಮಾಯಕರನ್ನೇ ತನ್ನ ಗುರಿಯಾಗಿಸಿಕೊಳ್ಳುತ್ತದೆ. ಹೀಗಾಗಿ ವಚನಕಾರರು ಈ ಸಾಂಸ್ಥಿಕ ಚೌಕಟ್ಟನ್ನೇ ವಿರೋಧಿಸಿತೊಡಗಿದ್ದು.

ವಚನಕಾರರ ಸಾಂಸ್ಥಿಕ ಚೌಕಟ್ಟುಗಳ ನಿರಾಕರಣೆ ಮಾರ್ಗದ ಮಾರ್ಗದಲ್ಲೂ ಅನುರಣಿಸಿತೆಂಬುದಕ್ಕೆ ಲಕ್ಷ್ಮೀಶ, ಕುಮಾರವ್ಯಾಸರಲ್ಲೂ ನಿದರ್ಶನಗಳಿವೆ. ಹುಟ್ಟಿಗೆ ಕಾರಣವಾಗುವ ಹೆಣ್ಣನ್ನೂ, ಮಣ್ಣನ್ನೂ ಅವಮಾನಿಸುವ, ಮೇಧಿನಿ ಮತ್ತು ಮಾನಿನಿಯರ ಮೇಲಿನ ಆಕ್ರಮಣವನ್ನು ಪ್ರಶ್ನಿಸಿದ ಕುಮಾರವ್ಯಾಸನ ದ್ರೌಪದಿ ಮತ್ತು ಲಕ್ಷ್ಮೀಶನ ಸೀತೆಯರೂ ನಮ್ಮ ರಂಗಕ್ಕೆ ಬಂದುದು ಈ ಕಾರಣದಿಂದ.

ಸಮಾಜದ ಸಾಂಸ್ಥಿಕ ಸಂಬಂಧವನ್ನು ಒಡೆದ ವರ್ಗ ಅಸಮಾನತೆಯನ್ನು ವಿರೋಧಿಸಿದ ಜನಪದ ತ್ರಿಪದಿಗಳನ್ನು ಮತ್ತು ಕತೆಗಳನ್ನೂ ಧರ್ಮದ ಹೆಸರಿನಲ್ಲಿ ನಡೆವ ಡೋಂಗಿತನಕ್ಕೆ ಬಲಿಯಾದವರ ಕುರಿತ ಜಗದ ಕಥೆ ಹೇಳುವ ಕಥೆಯನ್ನು ಎ.ಕೆ.ರಾಮಾನುಜನ್ ಅವರ ಸಂಗ್ರಹದಿಂದ ಆಯ್ದುಕೊಂಡೆವು.

ಅಸಮಾನತೆಯಲ್ಲಿಯೇ ಸಂಬಂಧಗಳು ಕಹಿಯಾಗತೊಡಗುವವು. ಗಂಡು ಹೆಣ್ಣುಗಳ ಈ ಅಸಮಾನ ಸಂಬಂಧದಲ್ಲಿ ಗಂಡಿನ ಅಸಹನೆಗೆ ಆಕೆ ತುತ್ತಾಗಿರುವ ಬಗೆಯನ್ನು ಪ್ರಶ್ನಿಸುವ, ಆಕೆಗೆ ನಿಯಮಿಸಿರುವ  ವಿಧಿ ನಿಷೇಧಗಳ ಸರಮಾಲೆಯನ್ನು ವಿಮರ್ಶಿಸುವ, ಇಂತ ಅಸಮಾನ ಸಂಬಂಧವನ್ನು ಗಟ್ಟಿಗೊಳಿಸಿದ ವಿವಾಹದಂತಹ ಸಾಂಸ್ಥಿಕ ಕ್ರಿಯಾಚರಣೆಗಳ ಪೊಳ್ಳುತನವನ್ನು ವಿಡಂಬಿಸುವ ಪ್ರತಿಭಾನಂದಕುಮಾರ್, ವೈದೇಹಿ, ಮಾಲತಿ ಪಟ್ಟಣಶೆಟ್ಟಿ ಅವರ ಕವನಗಳು ಇಲ್ಲಿ ನಮಗೆ ಒದಗಿದವು.

ಗಂಡು ಹೆಣ್ಣಿನ ಸಂಬಂಧಕ್ಕೆ ಇನ್ನೂ ಹಲವು ನೆಲೆಗಳಿವೆ. ಅದು ವಿಶ್ವಾತ್ಮಕವಾದುದೂ ಹೌದು. ಸೀತೆಯನ್ನು ಮೋಹಿಸುವ ಮತ್ತು ಅದಕ್ಕಾಗಿ ಯುದ್ದಗಂಟಿಕ್ಕುವ ರಾವಣನ ಕಣ್ಣನ್ನು ತೆರೆಯಿಸುವ ಕುವೆಂಪು, ಸೀತೆಯನ್ನು ‘ತಾಯಾಗಿ’ ಮೋಹಿಸಲೂ ಸಾಧ್ಯ ಅನ್ನುತ್ತಾರೆ. ‘ಕ್ಷಾತ್ರ’ ಮೌಲ್ಯಗಳನ್ನು ಬುಡಮೇಲು ಮಾಡಿ ಜೀವಪೋಷಕವಾದ ಮೌಲ್ಯಗಳನ್ನು ಪುನಃಸ್ಥಾಪಿಸುತ್ತಾರೆ. ಅದಕ್ಕಾಗಿ ಪುರಾಣಕತೆಯನ್ನು ಪುನರ್ಲೇಖಿಸುತ್ತಾರೆ. ‘ರಾಮಾಯಣ ದರ್ಶನಂ’ ಅಂತಹ ಹಲವು ದರ್ಶನಗಳನ್ನು ಕಾಣಿಸುತ್ತದೆ. ಈ ದರ್ಶನದ ಉಚ್ಛಾಂಕವಾದ  ‘ದಶಾನನನ ಸ್ವಪ್ನಸಿದ್ಧಿ ಪ್ರಕರಣವನ್ನು ಒಳಗೊಂಡೆವು.

ದಶಾನನನ ಸ್ವಪ್ನಸಿದ್ದಿಯ ಒಂದು ಮಾತು ವೇದಕವಾದದ್ದು. ಅದೆಂದರೆ ’ಕಣ್ಣಂತೆ ಕಾಣ್ಕೆಯೈ’. ಕಣ್ಣು ಕಡೆಗೂ ಕಾಣುವುದು ತಾನೇನನ್ನು ನೋಡಬೇಕೆಂದು ಬಯಸುತ್ತದೆಯೋ ಅದನ್ನೇ! ಅಂದರೆ ಕಣ್ಣಿಗೂ ಒಂದು ರುಚಿ, ಅಭಿರುಚಿ ಇದೆ  ಕನ್ನಡದ ಕಣ್ಣಿನ ಅಭಿರುಚಿಯಲ್ಲಿ ಸಮಗ್ರಪಲ್ಲಟ ಉಂಟಾದದ್ದು ಶತಮಾನದ ಆದಿಯಲ್ಲಿ.

ವಸಂತದ ಆ ಬೆಳಗಿನಲ್ಲಿ ಹಾಡಿದ ಹಕ್ಕಿಗಳಿಗೆ ಲೆಕ್ಕವೇ ಇಲ್ಲ; ಅದು ಏರಬಯಸಿದ ಎತ್ತರಕ್ಕೂ ಅಳತೆ ಇಲ್ಲ. ಹಾಗಾಗಿಯೇ ಅದು ‘ಬರಿ ಬೆಳಗಾಗಿರಲಿಲ್ಲ’. ಹಕ್ಕಿಗಳು ಬರೀ ಹಕ್ಕಿಗಳಾಗಿಯೂ ಇರಲಿಲ್ಲ. ನಿದರ್ಶನಕ್ಕೆ ಬೇಂದ್ರೆಯವರ ಭೃಂಗ. ಅದು ಬೆನ್ನ ಮೇಲೆ ಕಲ್ಪನಾ ವಿಲಾಸವನ್ನೇ ಹೊತ್ತು ತರುತ್ತದೆ. ಇಲ್ಲಿ ಮನುಷ್ಯ ದೇವರ ಸಂಬಂಧ, ಪ್ರಕೃತಿಯೊಂದಿಗಿನ ಮನುಷ್ಯ ಸಂಬಂಧ, ಭಾಷೆಯ ಮೂಲಕ ಬೆಳೆಯುತ್ತ ಬಂದ ಕಲ್ಪನಾ ಸಂಬಂಧ ಎಲ್ಲವೂ ಒಣಗಿದ್ದ ನೆಲಕ್ಕೆ ಹೊಸ ಸೃಷ್ಟಿ ಹೊಸ ಆಯಾಮ ಸಿಗುವಂತೆ ಮಾಡಿದೆ. ಈ ಪಠ್ಯಗಳನ್ನು ಆಯ್ದುಕೊಂಡಿದ್ದು ಇದಕ್ಕಾಗಿ.

 ವಸಂತಕಾಲದ ನವಪಲ್ಲವದೊಂದಿಗೆ ಭೃಂಗದ ಬೆನ್ನೇರಿಬಂದ ಕಲ್ಪನಾವಿಲಾಸ ಕನ್ನಡ ಕಾವ್ಯವನ್ನು ಇನ್ನಿಲ್ಲದ ಎತ್ತರಕ್ಕೆ ಕೊಂಡೊಯ್ದದ್ದು ಸರಿಯೇ. ಆದರೆ ನೆಲದ ಸಂಬಂಧ ಮರೆತು ಎತ್ತರಕ್ಕೇರಿದ ಕಾವ್ಯವನ್ನು ನಿಸಾರರ  ‘ಕುರಿಗಳು’, ಮತ್ತು ಕೆ.ವಿ.ತಿರುಮಲೇಶರ ‘ಪೆಂಟಯ್ಯನ ಅಂಗಿ’ ಕವನಗಳು ಈ ನೆಲದ ಕಠೋರ ವಾಸ್ತವಕ್ಕೆ ಎಳೆಯುವ ಒತ್ತಾಸೆಯಲ್ಲಿ ಮೂಡಿತ್ತು. ಉಳ್ಳವರ ಲೋಲುಪತೆಗೆ ಶರಣಾಗಿ, ಅರಿವು ಮರೆಯಾದವರಿಗಾಗಿ ರಚನೆಯಾದಂತಿರುವ ಇವುಗಳನ್ನು ಮರೆಯಲುಂಟೆ.

ಮನುಷ್ಯಕುಲದ ಸಂಬಂಧಗಳ ಬೇನೆ, ಸಂಕಟಗಳಿಗೆ ಕಾರಣ ಹುಡುಕುವುದು ಸುಲಭವೇನಲ್ಲ. ಈ ಸಂಬಂಧದ ಬಹುದೊಡ್ಡ ಪ್ರಶ್ನೆ ‘ನೋಡುವುದು ಅರಿಯುವುದು’. ಒಂದು, ನಮ್ಮನ್ನು ಸಾಕ್ಷಿಯಾಗಿಸಿದರೆ ಇನ್ನೊಂದು ಅನುಭಾವಿಯಾಗಿಸುತ್ತದೆ. ಇವುಗಳ ನಡುವಿನ ಭಿನ್ನಾಭಿಪ್ರಾಯವೂ ಬಗೆಹರಿಯಲಾರದ್ದು. ಹಾಗೆಂದೇ ಅದನ್ನೇ ರಗಳೆಯಗಿಸಿಕೊಂಡು ಕಹಿಯಾಗುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಸೂಚಿಸುವ ಅನಂತಮೂರ್ತಿಯವರ ಕವನವೂ ನಮ್ಮ ಜತೆಯಾಯ್ತು. 

ಮನುಷ್ಯನಿಗೆ ಸಹಜವಾಗಿಯೇ ಇರುವ ಭೂಮಿಯ ಸಂಬಂಧವನ್ನೂ ಕೆಲವರಿಗೆ ನಿರಾಕರಿಸುವ ಈ ವ್ಯವಸ್ಥೆಯ ವಿರುದ್ದ ತುಂಬ ಹಿಂದೆಯೇ ಕಾರಂತರ ‘ಚೋಮ’ ಪ್ರತಿಭಟಿಸಿದ್ದ. ಖಾಸಗಿಯಾಗಿ, ವೈಯಕ್ತಿಕ ನೆಲೆಯಲ್ಲಿ. ಅವನ ದುರಂತ ಮನಕಲಕುವಂತದ್ದು. ಅದರ ಕೆಲಭಾಗವನ್ನೂ ನಾವು ಇಲ್ಲಿ ಕಥಿಸಿದೆವು. ಇಂತಹ ವ್ಯವಸ್ಥೆಯ ಬದಲಾವಣೆಗೆ ಪ್ರಯತ್ನಿಸುತ್ತಿರುವವರ ಚರಿತ್ರೆಯೂ ನಮ್ಮ ಮುಂದಿದೆ. 

ಇಂತಹ ಚರಿತ್ರೆಯ ಸಂಗತಿಯನ್ನು ಮಂಡಿಸುವ ‘ಅದಲ್ ಬದಲ್’ ಸಾಧ್ಯವಾಗಿಸಿದ ಒಂದು ತಾತ್ತ್ವಿಕತೆಯ ನೋಟ ನಮಗೆ ಕನ್ನಡಕ್ಕೆ ಅನುವಾದವಾಗಿ ಬಂದ ಅಯ್ಯಪ್ಪ ಫಣಿಕ್ಕರರ ‘ಲೆನಿನ್ ಕಲಿಸಿದ ಪಾಠ’ ಕವನದ ಮೂಲಕ ಸಿಕ್ಕಿತು. ಇದರ ಇನ್ನೊಂದು ತಾತ್ತ್ವಿಕ ನೆಲೆಯನ್ನು, ದಲಿತರ ಬದುಕಿನ ಲೋಕದೃಷ್ಟಿಯಿಂದ ಪಡೆಯಬೇಕಿದ್ದರಿಂದ ಮಹದೇವರ ‘ಒಡಲಾಳ’ ಕಥಾಭಾಗ ಮತ್ತು ಸಿದ್ದಲಿಂಗಯ್ಯನವರ ‘ನಿನ್ನೆ ದಿನ’ ಕವನ ನಮ್ಮ ಜತೆಯಾಯಿತು.

ಇಂಥ ನೋವಿನ ಕಥನಗಳು ತಾಳಿಕೆ-ಬಾಳಿಕೆಯ ಕಥನವೂ ಆಗುವದು ಈ ಲೋಕದೃಷ್ಟಿಗಳ ಒಳಗೊಳ್ಳುವಿಕೆಯ ಮೂಲಕವೇ ಅಲ್ಲವೇ.  ಹೀಗಾಗಿ ಸರಿ ಸುಮಾರು 32 ಪಠ್ಯಗಳ ಕೌದಿ ಇಲ್ಲಿ ನೇಯಲ್ಪಟ್ಟಿತ್ತು.  ಸಮುದಾಯದ ಈ ಕಾವ್ಯರಂಗದ ತಿರುಗಾಟಕ್ಕೆ ನನಗೆ ಸಹಯೋಗಿಯಾದ ಯತೀಶ ಕೊಳ್ಳೇಗಾಲ ಮತ್ತು ಲಕ್ಷ್ಮಣ ಕೆ.ಪಿ.ಯಂತಹ ಯುವಕರೂ ತುಂಬ ಉಲ್ಲಾಸ ಒದಗಿಸಿದ್ದರು. ಪದಗಳ ಬಂಧಗಳಿಗೆ ಆಂಗಿಕವನ್ನು ಪೋಣಿಸುವಲ್ಲಿ ಅವರು ಹುಡುಕಾಟ ನಡೆಸುತ್ತಿದ್ದುದು, ಅಮೂರ್ತದ ಚಿತ್ರಗಳನ್ನು ಕಾಣಲು ಯತ್ನಿಸುತ್ತ ಶೇಷಗಿರಿ ರಂಗಮಂದಿರದ ತುಂಬೆಲ್ಲ ತಾಲೀಮಿನ ಸಂದರ್ಭದಲ್ಲಿ ಓಡಾಡುತ್ತಿರುವುದು ನನಗೆ ಯಾವತ್ತೂ ನೆನಪುಳಿಯುವ ಪ್ರಿಯವಾದ ನೋಟವಾಗಿದೆ.

ಕೊಂಡೊಯ್ಯಬಹುದಾದ ಚಿಕ್ಕ ಖುರ್ಚಿಗಳು, ಸರಳ ಪರಿಕರಗಳ ಮೂಲಕ ನಟರ ದೇಹ ಮತ್ತು ದನಿಯನ್ನೇ ಆಧರಿಸಿ ಕಟ್ಟಿದ ಈ ಪ್ರಯೋಗ ನಾಡಿನ ಹಲವು ಕಾಲೇಜು ವಿದ್ಯಾರ್ಥಿಗಳ ಶಿಕ್ಷಕರ ಗಮನ ಸೆಳೆಯಿತು. ಸಾಹಿತ್ಯ ಅಕಾಡೆಮಿ ಇದರ ಕೆಲ ಪ್ರದರ್ಶನಗಳನ್ನು ಸಂಘಟಿಸಿತು.

ಶಾಲಾ ವರಾಂಡಗಳ ಮೇಲೆಯೂ, ಚಿಕ್ಕ ಕೋಣೆಗಳ ನಡುವೆಯೂ ನಡೆಯುವ ಸಾವಿರದೈನೂರು ವರ್ಷ ಕಾಲದ ಕಥನವನ್ನು ಒಂದುವರೆಗಂಟೆಗಳ ಕಾಲ ನೋಡಬಹುದು ಇಷ್ಟು ಸರಳವಾಗಿ ಅಂತನಿಸಿದ್ದರಿಂದ ಅನೇಕ ಕಡೆ ಕಾಲೇಜು ಹುಡುಗರು, ಕಲಾವಿದರು, ರಂಗಸಂಘಟನೆಗಳು ಇಂತದೇ ರೂಪವನ್ನಾಧರಿಸಿ ತಮ್ಮ ತಮ್ಮ ಸ್ಥಳಗಳಲ್ಲಿ ಪ್ರಯೋಗ ಕಟ್ಟಿಕೊಂಡವು; ಇದು ನಮಗೆ ಒದಗಿದ ಸಾರ್ಥಕ್ಯವಾಗಿತ್ತು. ಆಡುಗರನ್ನೂ ಮತ್ತು ನೋಡುಗರನ್ನು ಮಾಗಿಸುವ ಪ್ರಯತ್ನದ ಅಂಗವಾಗಿ ಕಾವ್ಯರಂಗ ನಿರೂಪಿಸಲ್ಪಟ್ಟಿತು.

ಕಾವ್ಯರಂಗದ ಪ್ರಯೋಗಗಳನ್ನು ವಿಮರ್ಶಿಸುತ್ತ ಭಾಷಾ ಶಾಸ್ತ್ರಜ್ಞರಾದ ಮೇಟಿ ಮಲ್ಲಿಕಾರ್ಜುನ ಅವರು “ಕಾವ್ಯರಂಗ ಪ್ರಯೋಗವು ನಮ್ಮನ್ನು ನಿಯಂತ್ರಿಸುತ್ತ ಬಂದ ಪ್ರಭುತ್ವ ಮತ್ತು ಪ್ರಬಲ ಶಕ್ತಿಗಳ ರಾಜಕೀಯ ಹುನ್ನಾರವನ್ನು ವೀರೋಧಿಸಲು ಬೇಕಾದ ಕಸುವನ್ನು ಸಾಹಿತ್ಯ – ನಾಟಕ – ರಂಗಭೂಮಿಗಳ ನಡುವಿನ ಒಪ್ಪಂದದಿಂದ ಪಡೆದುಕೊಂಡಿದೆ.  ಮತ್ತು ಇಲ್ಲಿ ಅದಕ್ಕಾಗಿ ನಾಟಕ ಪ್ರದರ್ಶನದ ವ್ಯಾಕರಣವನ್ನೂ, ವಿಳಾಸವನ್ನೂ ಬದಲಾಯಿಸ ಹೊರಟಿದೆ” ಎಂದರೆ  ಸಾಹಿತ್ಯ ಚಿಂತಕರಾದ ಸಬಿತಾ ಬನ್ನಾಡಿಯವರು “ಲೋಕದಿಂದ ಕನ್ನಡ ಪಡೆದುಕೊಂಡದ್ದಕ್ಕಿಂತ ಹೆಚ್ಚಾಗಿ ಕನ್ನಡವೇ ಲೋಕಕ್ಕೆ ನೀಡಬಲ್ಲದು ಎಂಬ ಚಂದದ ಆತ್ಮ ವಿಶ್ವಾಸ ಈ ಪ್ರಯೋದಲ್ಲಿ ಕಾಣುವುದು” ಎಂದಿದ್ದರು.

ಕಾವ್ಯ ಮತ್ತು ರಂಗಭೂಮಿಯ ಈ ಕೂಡುಗೆರೆಯ ಶೋಧದಲ್ಲಿ ನಾನಿನ್ನೂ ಆರಂಭಿಕ ಹೆಜ್ಜೆಯಲಿದ್ದೇನೆ.

। ಮುಂದಿನ ವಾರಕ್ಕೆ ।

‍ಲೇಖಕರು ಶ್ರೀಪಾದ್ ಭಟ್

November 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಪ್ರೀತಿಯನ್ನು ನಿಭಾಯಿಸಿದಷ್ಟು ಸೂಕ್ಷ್ಮವಾಗಿ ಕಾವ್ಯವನ್ನು ನಿಭಾಯಿಸಬೇಕು
    ಕಣ್ಣಂತೆ ಕಾಣ್ಕೆಯೈ
    ………
    ಕನ್ನಡದ ಒಂದಿಷ್ಟು ಕವನಗಳನ್ನು ಪರಿಣಾಮಕಾರಿಯಾಗಿ ಓದಿದ್ದಾರೆ ಎಂದಷ್ಟೇ ಗ್ರಹಿಸಿಕೊಂಡಿದ್ದ ಕಾವ್ಯರಂಗ ಈ ಲೇಖನ ಓದಿದ ಮೇಲೆ ಮತ್ತೆ ಚಿತ್ತಭಿತ್ತಿಯಲ್ಲಿ ಪಲ್ಲಟವಾದ ದೃಶ್ಯಚಿತ್ರಗಳನ್ನು ಸೃಜಿಸುತ್ತಿದೆ. ಆವೇಶ, ಆಕ್ರೋಶ, ದನಿಯೇರಿಕೆಯೇ ಅಭಿನಯವಾದಷ್ಟೂ ಕಾವ್ಯ ನಾಚಿ ದೂರ ಸರಿಯುತ್ತಲೇ ಇರುತ್ತದೆ. ಮತ್ತೊಮ್ಮೆ ಕಾವ್ಯರಂಗವನ್ನು ಇವೆಲ್ಲ ನೆಲೆಗಳಲ್ಲಿ ನೋಡಬೇಕೆನಿಸುತ್ತಿದೆ.

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಕಾವ್ಯ ಮೀಮಾಂಸೆಯ ಲಕ್ಷಣಗಳು ಕಾಣಿಸಿದವು……ಕ್ರಿಯೈಕ್ಯ,ಕಾಲೈಕ್ಯ ಸ್ಥಳೈಕ್ಯ ಎಲ್ಲಾ ಬಂದು ಹೋದವು.. ಪ್ರತಿ ವಾರದ ನಿಮ್ಮ ಅಂಕಣದಲ್ಲಿ ಚೆಂದದ ಕಾವ್ಯ ಪ್ರಜ್ಞೆಯು ರಂಗಶಕುತಿಯು ಸಿಗುತ್ತದೆ ಸರ್. ಹೆಚ್ಚೆಚ್ಚು ರಂಗವಿಶಾಲತೆಗೆ ಕರ್ಕಂಡೋಗ್ತಾ ಇದೀರಿ. ಧನ್ಯವಾದಗಳು,

    ಪ್ರತಿಕ್ರಿಯೆ
  3. Kavya Kadame

    ಈ ಲೇಖನ ಎಷ್ಟೊಂದು ವಿಚಾರಗಳ ಗುಚ್ಛ. ಬರಹದುದ್ದಕ್ಕೂ ಕಾವ್ಯ ಎನ್ನುವ ಗುಣದ ಬಗ್ಗೆ ಮಾತನಾಡಿದ್ದು ಇಷ್ಟವಾಯಿತು. ಉತ್ತರ ಕನ್ನಡದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ನಿಮ್ಮ ವಿದ್ಯಾರ್ಥಿಗಳ ಕಾವ್ಯ ಪ್ರಸ್ತುತಿ ಕೇಳಿದ್ದೆ. ಇನ್ನು ಕಾವ್ಯ ರಂಗ ಎನ್ನುವ ಕಾವ್ಯ ಕೌದಿಯ ಹೆಣಿಗೆಯನ್ನು ವಿವರಿಸಲು ಪದಗಳೇ ಸಿಗಲಾರವು, ಅಷ್ಟು ಚೆನ್ನಾಗಿದೆ.
    ಆಸಕ್ತರಿಗಾಗಿ ಕಾವ್ಯರಂಗದ ಯೂಟ್ಯೂಬ್ ಲಿಂಕ್ ಇಲ್ಲಿದೆ: https://www.youtube.com/watch?v=DUrr13-pAZ4&t=1s 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: