ಕಾವೇರಮ್ಮಂಗಿನ್ನು ಪಾರ್ಲಿಮೆಂಟೇ ಗತಿ

rajaram tallur low res profile

ರಾಜಾರಾಂ ತಲ್ಲೂರು

ಪಕ್ಷ, ರಾಜಕೀಯ, ವಕೀಲರು, ವಾದಗಳು ಎಲ್ಲವನ್ನೂ ಒಂದು ಕ್ಷಣ ದೂರ ಇಟ್ಟು ಕಾವೇರಿ ನೀರಿನ ಹಂಚಿಕೆ ವಿವಾದದ ಕಡೆ ನೋಡಿದರೆ ಢಾಳಾಗಿ ಕಾಣುವುದು ಅಂತರ್-ರಾಜ್ಯ ನದಿ ನೀರು ವಿವಾದಗಳ ಕಾಯಿದೆ -1956 (2002ರ ತಿದ್ದುಪಡಿ ಸಹಿತ)ಯಲ್ಲಿರುವ ದೊಡ್ಡದೊಡ್ಡ ಹುಳುಕುಗಳು.

ಕಾವೇರಿ ಟ್ರಿಬ್ಯುನಲ್ ತನ್ನ ಅಂತಿಮ ತೀರ್ಪನ್ನು 2007 ಫೆಬ್ರವರಿ 5 ರಂದು ನೀಡಿದೆ. ತೀರ್ಪಿನ ಅನುಷ್ಠಾನಕ್ಕಾಗಿ 1998ರಲ್ಲೇ ಕಾವೇರಿ ರಿವರ್ ಅಥಾರಿಟಿಯನ್ನು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. 2013, ಫೆಬ್ರವರಿ 29 ಕೇಂದ್ರ ಸರಕಾರವು avadhi-column-tallur-verti- low res- cropಟ್ರಿಬ್ಯುನಲ್ ಅಂತಿಮ ತೀರ್ಪನ್ನು ಗಜೆಟ್ ಪ್ರಕಟಣೆ ಮಾಡಿದ್ದಲ್ಲದೇ, ನೀರಿನ ಹಂಚಿಕೆಯನ್ನು ಕಾರ್ಯರೂಪಕ್ಕೆ ತರಲು 2013, ಮೇ 24ಕ್ಕೆ ಕಾವೇರಿ ನೀರು ಹಂಚಿಕೆಗೆ ಸ್ಕೀಮನ್ನು ಪ್ರಕಟಿಸಿದೆ. ಇವಿಷ್ಟು ಅಂತರ್-ರಾಜ್ಯ ನದಿ ನೀರು ವಿವಾದಗಳ ಕಾಯಿದೆ ತನ್ನ ವ್ಯಾಪ್ತಿಯಲ್ಲಿ ವಿವಾದ ಪರಿಹಾರಕ್ಕೆ ಅವಕಾಶ ಮಾಡಿಕೊಟ್ಟಂತಹ ಬೆಳವಣಿಗೆಗಳು.

ಕಾಯಿದೆಯ ಆಶಯದಂತೆ, ಈ ಹಂತದ ವೇಳೆಗೆ ಸುಖಾಂತ್ಯ ಕಾಣಬೇಕಾಗಿದ್ದ ವಿವಾದ, ವಾಸ್ತದಲ್ಲಿ ಎಳ್ಳಷ್ಟೂ ಪರಿಹಾರ ಕಂಡಿಲ್ಲ. ಬದಲಾಗಿ, ಪ್ರಕಟಿಸಿದ ಸ್ಕೀಮಿನಂತೆ ತನ್ನ ಪಾಲಿನ ನೀರು ತನಗೆ ಸಿಗಬೇಕೆಂದು ತಮಿಳುನಾಡು ವರಾತ ಮುಂದುವರಿಸಿದ್ದರೆ, ಕರ್ನಾಟಕವು ನೀರಿದ್ದರೆ ತಾನೇ ಕೊಡುವುದು ಎಂದು ವಾದಿಸುತ್ತಾ ಬಂದಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಕಾಯಿದೆಯನ್ನು ರೂಪಿಸಿದವರು, ವಿವಾದ ಈ ಹಂತದಲ್ಲೂ ಬಗೆಹರಿಯದಿದ್ದರೆ ಏನು ಮಾಡಬೇಕೆಂಬ ಬಗ್ಗೆ ಏನನ್ನೂ ಹೇಳಿಲ್ಲ; ಈ ಗೊಂದಲದ ಸ್ಥಿತಿಗೆ ಪೂರ್ವೋದಾಹರಣೆಗಳೂ ಲಭ್ಯವಿಲ್ಲ; ಆಗಿರಬಹುದಾದ ಅನ್ಯಾಯಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಈ ಕಾಯಿದೆಯಲ್ಲಿ ಇಲ್ಲ.

ಈ ಕಾಯಿದೆಯ ವ್ಯಾಪ್ತಿಯಲ್ಲಿ ಟ್ರಿಬ್ಯುನಲ್ಲಿಗೆ ಸಲ್ಲಿಸಬಹುದಾದ ಯಾವುದೇ ವಿವಾದಗಳು ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾಯಿದೆ ಸ್ಪಷ್ಟವಾಗಿ ಹೇಳುತ್ತದೆ (ಸೆಕ್ಷನ್ 11). ಹಾಗಾಗಿ ಸುಪ್ರೀಂ ಕೋರ್ಟು ಟ್ರಿಬ್ಯುನಲ್ ತನ್ನ ಅಂತಿಮ ಆದೇಶದಲ್ಲಿ ಮಾಡಿರುವ ಹಂಚಿಕೆಯನ್ನು ಪಾಲಿಸುವ ಕುರಿತು ಮಾತನಾಡಬಹುದೇ ಹೊರತು, ವಿವಾದವನ್ನು ಮೂಲಭೂತ ಸ್ವರೂಪದಲ್ಲಿ ಮರುಪರಿಶೀಲಿಸುವಂತಿಲ್ಲ (ಈ ಕಾರಣಕ್ಕಾಗಿಯೇ ಮೊನ್ನೆ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟಿನ ಆದೇಶ ನೀರು ಬಿಡಿ ಎಂದು ಬಂದದ್ದು.)

ಹಾಗಾಗಿ, ಇಡಿಯ ಪ್ರಕರಣ ಈಗ ಆರಂಭದಲ್ಲೆಲ್ಲಿತ್ತೋ ಅಲ್ಲಿಗೇ ಹಿಂದಿರುಗಿ ಬಂದು ಕುಳಿತಂತಾಗಿದೆ. ಇದೊಂದು ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಹೋಗಲಾಗದೆ ಅಟಕಾಯಿಸಿಕೊಂಡು ನಿಂತ ಸ್ಥಿತಿ.

 ಕೇಂದ್ರ ಸರಕಾರದ ಅಂಗಣದಲ್ಲಿ ಚೆಂಡು

ಈಗ ಚೆಂಡು ನೇರವಾಗಿ ಸರಕಾರದ ಅಂಗಳದಲ್ಲಿ ಬಂದು ಕುಳಿತಿದೆ. ಹೀಗೆ ಅಟಕಾಯಿಸಿಕೊಂಡಿರುವ ಕಾವೇರಿ ನದಿಯ ವಿವಾದವನ್ನು ತಿಳಿಗೊಳಿಸುವ ಅಧಿಕಾರ ಇರುವುದು ಕೇವಲ ಸಂಸತ್ತಿನ ಬಳಿ ಮಾತ್ರ. ಸಂಸತ್ತಿನ ನಾಯಕರಾಗಿ ಪ್ರಧಾನಿ ನೇರವಾಗಿ ಈ ವಿವಾದ ಬಗೆಹರಿಸಲು ಬಾಧ್ಯಸ್ಥರು ಎಂಬುದರಲ್ಲಿ ಅನುಮಾನಗಳೇ ಬೇಡ.

voilence ನನ್ನ ಪ್ರಕಾರ, ಸಂಸತ್ತಿಗಿರುವ ಆಯ್ಕೆಗಳು 3.

1.  ನೀರು ಬಿಡಬೇಕಾಗಿರುವ ಕರ್ನಾಟಕ, ಟ್ರಿಬ್ಯುನಲ್ಲಿನ ತೀರ್ಮಾನವನ್ನು ಪಾಲಿಸುವಂತೆ ಮಾತುಕತೆಗಳ ಮೂಲಕ ಅಥವಾ ಕಟ್ಟುನಿಟ್ಟಾಗಿ ಹೇಳಿ/ಉಗ್ರಕ್ರಮ ಕೈಗೊಂಡು, ಅದರ ಪರಿಣಾಮವಾಗಿ ಬರಬಹುದಾದ ಸನ್ನಿವೇಶಗಳನ್ನು ಎದುರಿಸುವುದು.

2. ಬದಲಾಗಿರುವ ಪರಿಸ್ಥಿತಿಯಲ್ಲಿ (ಅಂದರೆ, ಮಳೆಯ ಪ್ರಮಾಣ, ನೀರಿನ ಹರಿವು ಇತ್ಯಾದಿ ಅಂಶಗಳನ್ನು ಪರಿಗಣಿಸಿಕೊಂಡು) ಈ ವಿವಾದವನ್ನು ಹೊಸ ವಿವಾದವೆಂದು ಪರಿಗಣಿಸಿ, ಮತ್ತೆ ಹೊಸ ಟ್ರಿಬ್ಯೂನಲ್ ಒಂದನ್ನು ರಚಿಸುವುದು. ಸೆಕ್ಷನ್ 3,4 ಇದಕ್ಕೆ ಅವಕಾಶ ಮಾಡಿಕೊಡುತ್ತವೆ.

3. ಮೂಲ ಅಂತರ್-ರಾಜ್ಯ ನದಿ ನೀರು ವಿವಾದಗಳ ಕಾಯಿದೆ -1956 (2002ರ ತಿದ್ದುಪಡಿ ಸಹಿತ)ಯಲ್ಲಿರುವ ಲೋಪದೋಷಗಳನ್ನು ಪರಿಹರಿಸಲು ಅದಕ್ಕೆ ತಿದ್ದುಪಡಿಗಳನ್ನು ತರುವುದು ಮತ್ತು, ವಿವಾದವು ಅದರ ತಾರ್ಕಿಕ ಅಂತ್ಯವನ್ನು ತಲುಪಲು ಅಗತ್ಯವಿರುವ ‘ಅಪೀಲು ಅವಕಾಶ’ ಮತ್ತಿತರ ಸೌಕರ್ಯಗಳನ್ನು  ಕಾಯಿದೆಗೆ ಒದಗಿಸುವುದು.

ಈ ಮೂರು ಹಾದಿಗಳನ್ನು ಬಿಟ್ಟು ಬೇರಾವುದೇ ಹಾದಿಯಲ್ಲಿ ಕಾವೇರಿ ವಿವಾದದ ಕಾವಿಳಿಯುವುದು ಕಷ್ಟ.

ಇಡಿಯ ವಿವಾದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಇಲ್ಲಿವೆ ನೋಡಿ:

* ಅಂತರ್-ರಾಜ್ಯ ನದಿ ನೀರು ವಿವಾದಗಳ ಕಾಯಿದೆ -1956 (2002ರ ತಿದ್ದುಪಡಿ ಸಹಿತ):  ಇಲ್ಲಿ ಕ್ಲಿಕ್ಕಿಸಿ 

* ಟ್ರಿಬ್ಯುನಲ್ ನೀಡಿರುವ ಅಂತಿಮ ತೀರ್ಪಿನ ಪ್ರತಿ: ಇಲ್ಲಿ ಕ್ಲಿಕ್ಕಿಸಿ 

* ತೀರ್ಪಿನ ಅನುಷ್ಠಾನಕ್ಕೆ ರಚಿಸಲಾಗಿರುವ ಸಮಿತಿಯ ಕುರಿತು ಗಜೆಟ್ ಪ್ರಕಟಣೆ: ಇಲ್ಲಿ ಕ್ಲಿಕ್ಕಿಸಿ 

* ಇಡಿಯ ವಿವಾದದ ಕುರಿತು “ದಿ ಹಿಂದೂ”ಪತ್ರಿಕೆಯಲ್ಲಿ ಪ್ರಕಟಗೊಂಡ ಟೈಮ್ ಲೈನ್: ಇಲ್ಲಿ ಕ್ಲಿಕ್ಕಿಸಿ 

 

‍ಲೇಖಕರು Admin

September 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    ಈ ಲೇಖನದಲ್ಲಿ ಬಿಟ್ಟುಹೋಗಿರುವ ಕೆಲವು ಅಂಶಗಳು:
    1. NDA ಸರಕಾರ ಬಂದಮೇಲೆ ಪ್ರಧಾನಿ ಅಧ್ಯಕ್ಷತೆಯ ಸಮಿತಿ ಬರ್ಕಾಸ್ತಾಗಿ, ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾವೇರಿ ರಿವರ್ ಅಥಾರಿಟಿ ನಿರ್ಮಾಣ ಆಗಿತ್ತು. ಈಗ ಅದನ್ನೂ ಸುಪರ್ ಸೀಡ್ ಮಾಡಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟು 30-09-2016ರಂದು ಆದೇಶಿಸಿದೆ.
    2. ಸುಪ್ರೀಂ ಕೋರ್ಟ್ ಈಗ ವಿಚಾರಣೆ ಮಾಡುತ್ತಿರುವುದು ತಮಿಳುನಾಡು ಸಲ್ಲಿಸಿದ ಅರ್ಜಿಗಳ ಮೇಲೆ. ಆ ಅರ್ಜಿಗಳಲ್ಲಿ ಅಂತಿಮ ತೀರ್ಪಿನ ಪ್ರಕಾರ ನೀರು ಬಿಡುವಂತೆ ಕರ್ನಾಟಕಕ್ಕೆ ಹೇಳಬೇಕು ಮತ್ತು ಕಾಯಿದೆಯಲ್ಲಿ ಹೇಳಲಾಗಿರುವಂತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಕೇಳಲಾಗಿದೆ. ಹಾಗಾಗಿ ಸುಪ್ರೀಂ ಕೋರ್ಟಿನ ವ್ಯಾಪ್ತಿಯೊಳಗೆ ಬೇರೆ ವಿಚಾರಗಳು ಸದ್ಯ ಇಲ್ಲ. ಕರ್ನಾಟಕ ನೀರು ಕಡಿಮೆ ಇರುವ /ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ರಿವಿಷನ್ ಪಿಟಿಷನ್ ಹಾಕಿದೆಯಾದರೂ, ಈ ರಿವಿಷನ್ ಕೂಡ ನಡೆಯುವುದು ಅಂತಿಮ ತೀರ್ಪನ್ನೇ ಆಧಾರವಾಗಿಟ್ಟುಕೊಂಡು.
    Rajaram Tallur

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: