ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಳೇಗೌಡ ನಾಗವಾರರ ಹಿಂದೆ ನಾವೆಲ್ಲಾ..

ಸರಳ ಮದುವೆಗಳ ಹಾದಿಯಲ್ಲಿ..

prakash abbur

ಪ್ರಕಾಶ ಅಬ್ಬೂರು

ದಶವಾರದ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು. ಬಹುಶ: ಆರನೇ ತರಗತಿಯಲ್ಲಿದ್ದೆ. ದಶವಾರದ ಸಂತೆಯಲ್ಲಿ ಅಂದು ಹಂಚಿದ್ದ ಕರಪತ್ರದ ಸದ್ದು, ಆ ಕಾಲಕ್ಕೆ ಸಂತೆಯ ಸದ್ದನ್ನೂ ಮೀರಿಸಿತ್ತು.

ಯಾರೂ ಕಲ್ಪನೆಯನ್ನು ಮಾಡಿಕೊಳ್ಳದ ಸಂಗತಿಯಾಗಿತ್ತು ಅದು. ಮೂಢನಂಬಿಕೆ ವಿರೋಧಿ ಸಮ್ಮೇಳನ ಹಾಗೂ ಸರಳ ಮದುವೆ. 08-06-1972. ಚನ್ನಪಟ್ಟಣ ತಾಲ್ಲೂಕು, ನಾಗವಾರ ಹಾಗೂ ಅಬ್ಬೂರಿನ ಇತಿಹಾಸದಲ್ಲಿ ನೆನಪಿಡಲೇಬೇಕಾದ ದಿನ. ಸರಳ ಮದುವೆಗಳಿಗೆ ನಾಂದಿ ಹಾಡಿದ ದಿನ.

kalegowda nagavara2ವರ ಕಾಳೇಗೌಡ ನಾಗವಾರ, ಮೈಸೂರಿನಲ್ಲಿ ಓದುತ್ತಿದ್ದ ಸಮಾಜವಾದಿ ಗೆಳೆಯರ ಸಹವಾಸದಲ್ಲಿದ್ದ ಕಾಳೇಗೌಡ ಅವರಿಗೆ ಸಂಪ್ರದಾಯ ವಿರೋಧಿ ಮದುವೆಯ ಬಗ್ಗೆ ಆಲೋಚಿಸುವುದು ಸಹಜವಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿರಲಿಲ್ಲ. ಆದರೆ ಇತರರಿಗೆ ಈ ರೀತಿಯ ಆಲೋಚನೆ ಸ್ವಲ್ಪ ಕಷ್ಟವೇ ಆಗಿತ್ತು.
ಇನ್ನು ವಧು ಕೆಂಪಮ್ಮ, ನಾಗವಾರದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಫಸ್ಟ್ ಕ್ಲಾಸಲ್ಲಿ ಫೇಲಾಗಿದ್ದವಳು ಅಂದರೆ ಫೇಲಾಗಿದ್ದ ಒಂದು ಸಬ್ಜೆಕ್ಟ್ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ತೆಗೆದುಕೊಂಡಿದ್ದವಳು, ನಮ್ಮ ಅಕ್ಕ ಜಯಮ್ಮನ ಮಗಳು.

ನಾವು 12 ಜನ ಮಕ್ಕಳ ಪೈಕಿ ಜಯಮ್ಮ ಮೊದಲನೆಯವಳು. ನಾನು ಕೊನೆಯವನು. ಒಂದೇ ಊರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಸಣ್ಣ ವಯಸ್ಸಿಗೇ ಮದುವೆಯಾಗಿ ತಾಯಿ ಮಗಳು ಒಟ್ಟೊಟ್ಟಿಗೆ ಬಾಣಂತನ ಮಾಡಿಕೊಂಡು 6 ಜನ ಮಕ್ಕಳಿಗೆ ತಾಯಿಯಾಗಿದ್ದಳು. ನಮ್ಮಕ್ಕ ಜಯಮ್ಮ ಚಿಕ್ಕವಯಸ್ಸಿಗೇ ಗಂಡನನ್ನು ಕಳೆದುಕೊಂಡಿದ್ದರಿಂದ ಒಟ್ಟು ಕುಟುಂಬದಲ್ಲಿ ಹಲವು ಪಡಿಪಾಟಲುಗಳ ಮಧ್ಯೆ ಮಕ್ಕಳನ್ನು ಬೆಳೆಸಿದವಳು. ಕಾಳೇಗೌಡ ಅವರು ಕ್ರಾಂತಿಕಾರಿ ಮದುವೆಯ ಪ್ರಸ್ತಾಪ ಇಡುವ ವೇಳೆಗಾಗಲೇ ಜಯಮ್ಮನ ಹಿರಿಯ ಮಗಳಿಗೆ ಸಾಂಪ್ರದಾಯಿಕವಾಗಿ ಮದುವೆಯಾಗಿತ್ತು. ಅಳಿಯ ಸರ್ಕಾರಿ ಶಾಲೆಯ ಮಾಸ್ಟರು. ಇನ್ನೊಬ್ಬ ಮಗಳನ್ನು ನಮ್ಮ ಅಣ್ಣ ರಾಜುವಿಗೆ ತಂದುಕೊಳ್ಳಲಾಗಿತ್ತು.

ಮೂರನೇ ಮಗಳೇ ಸರಳ ಮದುವೆಯ ವಧು ಕೆಂಪಮ್ಮ. ಒಟ್ಟು ಕುಟುಂಬದ ಮನೆಯಲ್ಲಿ ನಮ್ಮ ಅಕ್ಕ ಜಯಮ್ಮನಿಗೆ ಯಾವ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವೂ ಇರಲಿಲ್ಲ. ಖರ್ಚು ಉಳಿಯುತ್ತದೆಂದು ಭಾವಿಸಿದ ಅಣ್ಣತಮ್ಮಂದಿರು, ಮದುವೆಯ ವಿಷಯದಲ್ಲಿ ತಲೆ ಹಾಕದ ತಂದೆ ರಂಗೇಗೌಡ, ಹೀಗೆ ಜಯಮ್ಮನಿಗೆ ಇಷ್ಟವಿತ್ತೋ ಇಲ್ಲವೋ, ಅಂತೂ ಆ ಸರಳ ಮದುವೆ ನಡೆದುಹೋಯಿತು. ವಧುವಿನ ಅಣ್ಣ ರಾಜಶೇಖರನ ಪ್ರಯತ್ನ ಹಾಗು ಏಕೈಕ ಮನ:ಪೂರ್ವಕ ಬೆಂಬಲದೊಂದಿಗೆ.

ನಾಗವಾರದ ಊರ ಮುಂದಿನ ಮಾರಿಗುಡಿಯ ಎದುರು ಉಟ್ಟ ಬಟ್ಟೆಯಲ್ಲಿಯೇ ವರ ಕಾಳೇಗೌಡ, ಸಾಧಾರಣವಾಗಿ ಅಲಂಕೃತವಾಗಿದ್ದ ವಧು ಕೆಂಪಮ್ಮ. ಪ್ರಮಾಣವಚನ ಬೋಧಿಸಿದವರು ಮುತ್ಸದ್ಧಿ ರಾಜಕಾರಣಿ ಕೆ.ಎಚ್.ರಂಗನಾಥ್. ಊಟವಿರಲಿ, ತಿಂಡಿಯೂ ಸಿಗುವುದಿಲ್ಲ ಎಂದು ತಿಳಿದಿದ್ದರು. ಕುತೂಹಲಕ್ಕೆ ಸೇರಿದ್ದ ಸಾವಿರಾರು ಮಂದಿ ಬೆಂಗಳೂರಿನಿಂದಲೂ ಬಂದಿದ್ದ ಮಾಧ್ಯಮ ಪ್ರತಿನಿಧಿಗಳು. ಪ್ರಜಾವಾಣಿಗೆ ಈ ವರದಿ ಮಾಡಿದವರು ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲ ರಾವ್. ಮುಖಪುಟದಲ್ಲಿ ಪ್ರಮುಖ ಸುದ್ಧಿಯಾಗಿತ್ತು ಈ ಮದುವೆ.  ಡೆಕ್ಕನ್ ಹೆರಾಲ್ಡ್ ಸಹಾ ಸುದ್ದಿ ಮಾಡಿತ್ತು. ಇಂತಹ ಮದುವೆಗೆ ಸಂಭ್ರಮದಿಂದ ನಮ್ಮನ್ನು ಕರೆದುಕೊಂಡು ಹೋಗುವವರು ಇರಲಿಲ್ಲ.

ಆದರೂ ಜಯಮ್ಮನ ಕುಟುಂಬದಲ್ಲಿ ಅಂದು ಆರಂಭವಾದ ಸರಳ ಮದುವೆಯ ಈ ಪರಂಪರೆ ಇಂದಿಗೂ ಮುಂದುವರೆದಿದೆ. ಹಲವು ಬದಲಾವಣೆಗಳನ್ನು ಕಾಣುತ್ತಾ. ಜಯಮ್ಮನ ಕುಟುಂಬದ ಆಚೆ ಇದು ವಿಸ್ತರಿಸಿದೆ. ಕಾಳೇಗೌಡರು ಅವರ ತಂಗಿ ಕಮಲ ಅವರ ಮದುವೆಯನ್ನು ಇದೇ ರೀತಿ ನಡೆಸಿಕೊಟ್ಟರು. ಕೆಂಪಮ್ಮನ ಅಣ್ಣ ರಾಜಶೇಖರ ಈ ಪರಂಪರೆಯನ್ನು ಮುಂದುವರಿಸಿದವರಲ್ಲಿ ಮೊದಲಿಗ. ಚನ್ನಪಟ್ಟಣದ ವೆಂಕಟಪ್ಪನವರ ಛತ್ರದಲ್ಲಿ ಮದುವೆ ನಡೆಯಿತಾದರೂ, ಮದುವೆಗೆಂದು ಯಾವುದೇ ಆಮಂತ್ರಣ ಪತ್ರ ಮುದ್ರಿಸಿರಲಿಲ್ಲ. ಆಪ್ತರಿಗೆ ಅಂಚೆ ಕಾರ್ಡ್ ಬರೆದು ಆಮಂತ್ರಣ. ಆ ವೇಳೆಗಾಗಲೆ ಪದವಿ ಓದುತಿದ್ದ ನನಗೆ ಅಂಚೆ ಕಾರ್ಡ್‍ನಲ್ಲಿ ಆಮಂತ್ರಣ ಬರೆಯುವ ಅವಕಾಶ ಸಿಕ್ಕಿತ್ತು. ಬಂದವರಿಗೆ ಉಪ್ಪಿಟ್ಟು, ಕಾಫಿ, ಪುರೋಹಿತರನ್ನು ದೂರವಿಟ್ಟು ಪ್ರಮಾಣವಚನ ಸ್ವೀಕರಿಸುವ ಮೂಲಕ ಮದುವೆ.

mantra mangalyaಕೆಂಪಮ್ಮನ ತಂಗಿ ಕುಸುಮ ಹಾಗೂ ತಮ್ಮ ಚಂದ್ರಕಾಂತನಿಗೆ ಮಾತ್ರ ಇಂತಹ ಮದುವೆಯ ಅವಕಾಶ ದೊರೆಯಲಿಲ್ಲ. ಕೆಂಪಮ್ಮನ ಮದುವೆಯಲ್ಲಿ ಅನಿವಾರ್ಯಕ್ಕೆ ಸಿಕ್ಕಿಬಿದ್ದಿದ್ದ ಜಯಮ್ಮ, ರಾಜಶೇಖರನ, ಮದುವೆಯನ್ನು ಆತನ ಗಟ್ಟಿ ನಿಲುವಿನಿಂದಾಗಿ ವಿರೋಧಿಸಲು ಸಾಧ್ಯವಾಗದೇ ಒಪ್ಪಿಗೆ ನೀಡಿದ್ದಳು. ಕುಸುಮ ಹಾಗೂ ಚಂದ್ರಕಾಂತ ಅವರ ಮದುವೆಯಲ್ಲಿ ಮಾತ್ರ ತನ್ನ ಹಟವನ್ನೇ ಸಾಧಿಸಿ, ಇವರಿಬ್ಬರ ಮದುವೆಯನ್ನು ಮಾಮೂಲಿಯಾಗಿಯೇ ನೆರವೇರಿಸಿಬಿಟ್ಟಳು. ಕುಸುಮಾಳನ್ನು ಮದುವೆಯಾದ ಕರೀಗೌಡ ಬೀಚನಹಳ್ಳಿ ಅವರಿಗೆ ಈ ಸಾಂಪ್ರದಾಯಿಕ ಮದುವೆ ಇಷ್ಟವಿಲ್ಲದಿದ್ದರೂ ಕುಸುಮಾಳನ್ನು ಬಿಡಲಾಗದೆ, ಬಂದಾನಕ್ಕೆ ಪುರೋಹಿತರ ಮುಂದೆ ಕುಳಿತು ಮದುವೆಯ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು.

ಈ ಪುರೋಹಿತರಿಲ್ಲದ, ಆಡಂಬರರಹಿತ ಮದುವೆಯ ಸಂಪ್ರದಾಯ ಜಯಮ್ಮನ ಮನೆ ಹೊಸ್ತಿಲು ದಾಟಿ ನಮ್ಮ ಮನೆಗೆ ಕಾಲಿರಿಸಿದ್ದು ನನ್ನ ಮದುವೆಯ ಮೂಲಕ. ಚಿಕ್ಕಂದಿನಲ್ಲೇ ಇಂತಹ ವಿಚಾರಗಳ ಪ್ರಭಾವಕ್ಕೆ ಒಳಗಾಗಿದ್ದ ನನಗೆ ಅರ್ಥವಿಲ್ಲದ ಆಚರಣೆಗಳಲ್ಲಿ ಅಂತಹ ನಂಬಿಕೆಯೇನೂ ಇರಲಿಲ್ಲ. ನನ್ನ ಮದುವೆಯ ವೇಳೆ ಹೆಣ್ಣಿನ ಮನೆಯವರನ್ನು ಒಪ್ಪಿಸುವುದು ತುಸು ಕಷ್ಟವೇ ಆಯಿತು. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಾದ ಮೇಲೆ ಅನಿವಾರ್ಯಕ್ಕೆ ಎಂಬಂತೆ ಅವರು ಒಪ್ಪಿಗೆ ಸೂಚಿಸಿದ್ದರು. ಆದರೆ ಇಂತಹ ಮದುವೆಯಿಂದ ನಿಜಕ್ಕೂ ಸಂತೋಷ ಪಟ್ಟಿರುವುದು, ಮತ್ತು ಈಗಲೂ ಆ ಬಗ್ಗೆ ಹೆಮ್ಮೆ ಇರುವುದು ನನ್ನ ಹೆಂಡತಿ ಸುಧಾಳಿಗೆ.

ಚನ್ನಪಟ್ಟಣದ ಗರುಡಗಂಬದ ಬೀದಿ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮದುವೆ. ದೇವರ ಸನ್ನಿಧಿಯಲ್ಲಿ ಮದುವೆ ಆಗಬೇಕು ಎಂದು ನಡೆದದ್ದಲ್ಲ. 250/- ರೂ ಗಳಿಗೆ ಜಾಗ ಸಿಗುತ್ತದೆಂದು ಆಯ್ಕೆಯಾದ ಸ್ಥಳ ಅದು. ಆದರೆ ಅದರಿಂದ ಹೆಣ್ಣಿನ ಮನೆಯವರಿಗೆ ಅಷ್ಟಾದರೂ ಸಮಾಧಾನ ದೊರೆತಿತ್ತು. ಪ್ರಮಾಣವಚನವೂ ಇಲ್ಲದೆ ನಡೆದ ಮದುವೆ ನನ್ನದು. ತಾಳಿ ಕಟ್ಟುವುದಷ್ಟೇ ನಡೆದ ಶಾಸ್ತ್ರ. ಇದನ್ನು ಕೂಡ ವಿರೋಧಿಸುವ ಮನಸ್ಥಿತಿ ನನಗಿತ್ತು. ಆದರೆ ಒಪ್ಪುವ ಸ್ಥಿತಿಯಲ್ಲಿ ಹೆಣ್ಣಾಗಲೀ, ಅವರ ಮನೆಯವರಾಗಲೀ ಇರಲಿಲ್ಲ.

ನಂತರದ ತಲೆಮಾರಿನವರು ಈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಕಾಳೇಗೌಡರ ಮೂರೂ ಜನ ಮಕ್ಕಳ ಮದುವೆಯೂ ಸರಳವಾಗಿಯೇ ನೆರವೇರಿದೆ. ಇಬ್ಬರು ಗಂಡು ಮಕ್ಕಳು ನಿಶಾಂತ್ ಮತ್ತು ಅಪೂರ್ವ ಜಾತಿಯ ಎಲ್ಲೆಯನ್ನೂ ಮೀರಿದ್ದಾರೆ. ರಾಧಾ-ರಾಜಶೇಖರ ಅವರ ಮಗ ಅಮೋಘ, ಕುಸುಮಾ-ಕರಿಗೌಡ ಬೀಚನಳ್ಳಿ ಅವರ ಮಕ್ಕಳು ವರುಣ್ ಮತ್ತು ಅಜಂತಾ, ನಮ್ಮ ಅಣ್ಣ ರಾಜು ಅವರ ಮಗ ಅಂದರೆ ಜಯಮ್ಮನ ಮೊಮ್ಮಗ ಡಾ|| ಪ್ರಸನ್ನ ಸಂಪ್ರದಾಯಗಳನ್ನು ಬದಿಗೊತ್ತಿ ಕುವೆಂಪು ವಿಚಾರಧಾರೆಯ ಮಂತ್ರ ಮಾಂಗಲ್ಯದ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಮದುವೆಯಾಗಿದ್ದಾರೆ. ಹಾಗೆಯೇ ನಮ್ಮ ಅಕ್ಕ ತಾಯಮ್ಮನ ಮಗಳು ನಂದಿತಾ, ಕೆಂಪಮ್ಮನ ಚಿಕ್ಕಪ್ಪನ ಮಗ ಡಾ|| ವಿನೋದ್.

ತನ್ನ ಮದುವೆಯನ್ನು ಈ ರೀತಿ ಮಾಡಿಕೊಳ್ಳಲಾಗಲಿಲ್ಲವಲ್ಲ ಎಂಬ ಕೊರಗನ್ನು ಕೆಂಪಮ್ಮನ ತಮ್ಮ ಚಂದ್ರಕಾಂತ ಮಗಳ ಮದುವೆಯ ಮೂಲಕ ನಿವಾರಿಸಿಕೊಂಡಿದ್ದಾನೆ. ಚಂದ್ರಕಾಂತನ ಮಗಳು ಮಾನಸ ಕೂಡ ಜಾತಿಯನ್ನು ಮೀರಿದ್ದಾಳೆ. ಸರಳವಾಗಿ ಮದುವೆಯಾಗಿದ್ದಾಳೆ. ಅಚ್ಯುತನ ಜತೆ ಸೇರಿ ಈಗ ಕತಾರ್‍ನ ಪಾಲಾಗಿದ್ದಾಳೆ.

ಕಾಳೇಗೌಡರು ಬಿತ್ತಿದ ಸರಳಮದುವೆಯ ಬೀಜ ವಿರೋಧದ ನಡುವೆಯೂ ಅಲ್ಲಲ್ಲಿ ಮೊಳಕೆಯೊಡೆದು ಫಲ ನೀಡಿತಾದರೂ, ಈ ಮದುವೆಗಳು ಕುಟುಂಬದ ಎಲ್ಲರನ್ನು ಪ್ರಭಾವಿಸಲು ಸಾಧ್ಯವಾಗಲಿಲ್ಲ. ರಾಜಶೇಖರನಿಗೆ ರಾಧಾಳನ್ನು ಸರಳವಾಗಿ ಮದುವೆ ಮಾಡಿಕೊಟ್ಟರಾದರೂ, ರಾಧಾ ಅವರ ಕುಟುಂಬದ ಬೇರಾರೂ ಇಂತಹ ಮದುವೆಗ ಮನಸ್ಸು ಮಾಡಲಿಲ್ಲ. ಸುಧಾಳನ್ನು ನನಗೆ ಈ ರೀತಿ ಮದುವೆ ಮಾಡಿಕೊಟ್ಟರಾದರೂ ಅವರ ಮನೆಯಲ್ಲಿ ನಡೆದ ಮೂರು ಮದುವೆಗಳ ಸ್ಥಿತಿ ಯಥಾಸ್ಥಿತಿಯೇ ! ಬಹುತೇಕ ಎಲ್ಲಾ ಬೀಗರ ಕುಟುಂಬಗಳ ಮದುವೆಗಳದ್ದು ಇದೇ ಕಥೆ.

abbur marriageನಮ್ಮ ಕುಟುಂಬದಾಚೆ ಇಂತಹ ಮದುವೆಯಾದದ್ದು ನಮ್ಮೂರಿನ ಲಾಯರ್ ಕೃಷ್ಣದಾಸ್ ಹಾಗೂ ನಾರಾಯಣಗೌಡ. ಉಳಿದಂತೆ ನಮ್ಮ ಊರಿನವರೂ ಇದರಿಂದೇನೂ ಪ್ರಭಾವಿತರಾಗಲಿಲ್ಲ.

ಆರಂಭದಲ್ಲಿ ನಿಜಕ್ಕೂ ಆದರ್ಶದ ಬೆನ್ನುಹತ್ತಿ ಪುರೋಹಿತಶಾಹಿಯನ್ನು ವಿರೋಧಿಸಬೇಕೆಂದು ಮಂತ್ರಮಾಂಗಲ್ಯದ ಮದುವೆ ಆದರೂ, ಇವು ಆಡಂಬರ ವಿರೋಧಿ ಮದುವೆಗಳೂ ಕೂಡ ಆಗಿದ್ದವು. ಆದರೆ ಮಕ್ಕಳ ಕಾಲಕ್ಕೆ ಸಂಪ್ರದಾಯ ವಿರೋಧಿ ಮದುವೆಗಳಾಗಿ, ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಶಾಸ್ತ್ರಗಳಿಗೆ, ಮೌಢ್ಯಗಳಿಗೆ ತಿಲಾಂಜಲಿ ನೀಡಿದರೂ, ಕೆಲವರಿಗೆ ಆಡಂಬರದ ಚಪಲವನ್ನು ಹತ್ತಿಕ್ಕಲಾಗಲಿಲ್ಲ. ಅಪ್ಪಂದಿರಿಗೆ ಸಾಧ್ಯವಾದದ್ದು ಕೆಲವು ಮಕ್ಕಳಿಗೆ ಸಾಧ್ಯವಾಗಲಿಲ್ಲ. ಆದರೂ ನಮ್ಮ ಕುಟುಂಬದಲ್ಲಿ ನೋಡಿದಷ್ಟು ಸರಳ ಮದುವೆಗಳನ್ನು ನನ್ನ ಪರಿಚಯಸ್ಥ ಕುಟುಂಬದಲ್ಲಿ ನೋಡಿಲ್ಲ. ಶಾಸ್ತ್ರವಿಲ್ಲದ ಮದುವೆಗಾಗಿ ಹೆಣ್ಣು ಹುಡುಕುವುದು, ಗಂಡು ಹುಡುಕುವುದು ತುಂಬಾ ಕಷ್ಟದ ಕೆಲಸವೇ. ಗಂಡಿಗೆ, ಏನೋ ಐಬು ಇರಬೇಕು, ಅದಕ್ಕೆ ವರದಕ್ಷಿಣೆ ಅದು-ಇದೂ ಏನೂ ಬೇಡ, ಸರಳ ಮದುವೆ ಸಾಕು ಎನ್ನುತ್ತಿದ್ದಾನೆ ಎಂದು, ಅನುಮಾನಿಸಿದವರೂ ಇದ್ದಾರೆ. ಇನ್ನು ಹೆಣ್ಣು ಮಕ್ಕಳ ಮದುವೆ ಇನ್ನೂ ಕಷ್ಟ. ನಿರ್ಧಾರ ತೆಗೆದುಕೊಳ್ಳುವವರು ಬಹುಪಾಲು ಗಂಡಿನ ಮನೆಯವರು.

ಸರಳ ಮದುವೆಗಳ ಪರಂಪರೆ ನಮ್ಮ ಮನೆಗಳಲ್ಲಿ ಇಂದಿಗೂ ಮುಂದುವರೆದಿದೆ. ಇದರಲ್ಲಿ ಜಯಮ್ಮನ ಮಕ್ಕಳು ಮೊಮ್ಮಕ್ಕಳ ಸಂಖ್ಯೆಯೆ ಹೆಚ್ಚಾಗಿದೆ. ದೇವರು ದಿಂಡಿರ ಮೇಲೆ ಅಪಾರ ಶ್ರದ್ಧೆ ಹೊಂದಿದ್ದ, ಅಷ್ಟೇಕೆ ತನ್ನ ಮೈಮೇಲೆಯೇ ದೇವರು ಬರುತ್ತದೆ ಎಂದು ಭಾವಿಸಿದ್ದವಳು ನಮ್ಮಕ್ಕ ಜಯಮ್ಮ. ಕುಟುಂಬವೊಂದರಲ್ಲಿ ಅತೀ ಹೆಚ್ಚು ಸಂಪ್ರದಾಯ ವಿರೋಧಿ ಸರಳ ಮದುವೆಗಳ ದಾಖಲೆಯು ಬಹುಷ: ಆಕೆಗೇ ಸಲ್ಲುತ್ತದೆ. ನಮಗೆಲ್ಲ ಇದು ಅತ್ಯಂತ ಹೆಮ್ಮೆಯ ವಿಷಯವೇ ಆಗಿದೆ.

‍ಲೇಖಕರು admin

9 March, 2016

1 Comment

  1. Kiran

    Way to go…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading