ಕಾಲಿಗೆ ನಮಸ್ಕಾರ..


ಮಣಿಪಾಲದ ಮೆಟ್ಟು ಹೊಲಿಯುವವರು…

ಮಣ್ಣಪಳ್ಳಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಮಣಿಪಾಲವನ್ನು ನಡೆದು ಅಳಿಯೋದಕ್ಕೆ ಎಷ್ಟು ಹೊತ್ತು ತಾಗಬಹುದು? ಇಡೀ ಶಹರವನ್ನು ಪೂರ್ತಿ ನಡೆದು ನೋಡಲು ಸಾಧ್ಯ ಇದೆಯಾ? ಇಲ್ಲಿರುವ ಅತೀ ಕೆಲವು ಮಣಿಪಾಲಿಗರಿಗೆ ಮಾತ್ರ ಇದಕ್ಕೆ ಉತ್ತರ ಕೊಡಬಹುದು. ಈ ಕಾಲದ ಎಲ್ಲ ಸಾಮಾನ್ಯ ಶಹರದ ಹಾಗೆ ಅಲ್ಲಲ್ಲಿ ಆರೋಗ್ಯದ ನೆಪಕ್ಕೆ ನಡೆಯುವ ಕೆಲವರನ್ನು ಬಿಟ್ಟರೆ, ಎಲ್ಲರೂ ಮೂರು ಮಾರಿಗೂ ಗಾಡಿ ಏರುವವರೇ.

ಹೀಗೆ ಓಡುವ ಊರಲ್ಲಿ “ನೀವು ನಡೆಯದಿದ್ದರೆ ನಾವು ಬದುಕುವುದು ಹೇಗೆ?” ಅಂತ ಕೇಳುವವರಿದ್ದರೆ ಅದು ಷಣ್ಮುಗನಂತವರು ಮಾತ್ರ.

“ನಿಮ್ಮ ‘ಶೂ’ಗೆ ಬೇಕಿರೋದು ಒಂದು ಸುತ್ತು ಗಟ್ಟಿ ಹೊಲಿಗೆ. ತಳ ಮತ್ತು ಮೆಟ್ಟು ಎರಡೂ ಬಿಟ್ಟು ಹೋಗದಂತೆಯೂ, ಹಾಕಿದ ದಾರ ಹೊರಗೆ ಕಾಣದಂತೆಯೂ ಹೊಲಿದು ಕೊಡೋದು ಸುಲಭ ಅಲ್ಲವೇ ಅಲ್ಲ” ಅಂತ ‘ಷಣ್ಮುಗ’ ಹೇಳುತ್ತಿರುವಾಗ ಪಕ್ಕದಲ್ಲೇ ಕೂತಿದ್ದ ‘ಉಷಾ’ ಹಳೆ ಶಾಲೆ ಚೀಲವನ್ನು ಅಡಿ ಮೇಲು ಮಾಡಿ ತಾನು ಹಾಕಿದ ಹೊಲಿಗೆ ಎಷ್ಟು ಬಲವಾಯ್ತು ಅನ್ನೋದನ್ನ ನೋಡುತ್ತಿದ್ದಳು. ಗಂಡ ಹೆಂಡತಿಯಿಬ್ಬರೂ ಮಣಿಪಾಲದತ್ತ ಬಂದು ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾದರೂ, ಉಡುಪಿಯ ಒಂದೆರೆಡು ಜಾಗದಲ್ಲಿ ವ್ಯಾಪಾರ ಕೂರಿಸಲು ಸೋತು, ಕಳೆದ ಮೂರು ವರ್ಷದಿಂದ ಈಚೆಗೆ ಮಣಿಪಾಲದ ಬಾಗಿಲಲ್ಲಿ ತಮ್ಮ ಚಪ್ಪಲಿ, ಬ್ಯಾಗ್, ಕೊಡೆ ರಿಪೇರಿ ಅಂಗಡಿಯನ್ನ ತಂದು ನಿಲ್ಲಿಸಿದ್ದಾರೆ.

ಸಂತೆಕಟ್ಟೆಯ ದಾರಿಯಿಂದ ಮಣಿಪಾಲಕ್ಕೆ ಬರುವಾಗ ಬಾಗಿಲಲ್ಲೇ ತಮ್ಮ ರಿಪೇರಿ ಅಂಗಡಿ ಇಟ್ಟಿರುವ ಇವರು ಮಣಿಪಾಲಿಗರಿಗೆ ಮುಖಕೊಟ್ಟು ಮಾತಾಡುವುದಕ್ಕಿಂತ ತಮ್ಮತ್ತ ಬರುವವರ ಕಾಲು ನೋಡಿಯೇ ಮಾತಾಡಿಸುವುದು. ಕಾಲಲ್ಲಿರುವ ಮೆಟ್ಟಿನ ಬಾಳಿಕೆ, ಸವೆತ, ಹೊಲಿಗೆ ಎಲ್ಲವೂ ಇವರ ದೃಷ್ಟಿಯನ್ನು ದಾಟಿ ಹೋಗಿರುವ ಸಾಧ್ಯತೆಯೇ ಇಲ್ಲ. ಷಣ್ಮುಗನ ಅಜ್ಜ ಅಜ್ಜಿಯರೆಲ್ಲ ಮೂಲತಃ ತಮಿಳು ನಾಡಿನವರಂತೆ. ಅಜ್ಜನ ಕಾಲದಲ್ಲಿಯೇ ಕರ್ನಾಟಕದ ತರೀಕೆರೆ ಸೇರಿ ಒಂದಿಷ್ಟು ಭೂಮಿ ಕೊಂಡು ಕೃಷಿಗೆ ಹೊಂದಿಕೊಂಡಿದ್ದರು.

ಗಂಡ ಹೆಂಡತಿ ಇಬ್ಬರೂ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತರೀಕೆರೆಯನ್ನು ಬಿಟ್ಟು, ಹೇಗೋ ಕಲಿತ ಚಪ್ಪಲಿ ಹೊಲಿಗೆಯನ್ನು ನಂಬಿ ಈ ಊರಿಗೆ ಕಾಲಿಟ್ಟವರು. ಈಗ ತಮ್ಮ ಸಣ್ಣ ರಿಪೇರಿ ಅಂಗಡಿಯಲ್ಲಿ ಹರಿದಿರುವ ಮೆಟ್ಟು, ಕೊಡೆ, ಬ್ಯಾಗುಗಳ ಮದ್ಯೆ ಜಾಗ ಮಾಡಿಕೊಂಡು ಕಸರತ್ತು ಮಾಡೋದು ರೂಢಿ ಮಾಡಿಕೊಂಡಿದ್ದಾರೆ.

ಈ ಊರಿನ ಯಾವ ಮೂಲೆಯಲ್ಲಿ ವ್ಯಾಪಾರ ಕೂರುತ್ತದೆ ಎಂಬುದನ್ನ ಅರ್ಥ ಮಾಡಿಕೊಳ್ಳೋದಕ್ಕೇನೆ ಅವರಿಗೆ ವರ್ಷಗಳು ಹಿಡಿದವು. ಸದ್ಯಕ್ಕೆ ಮಣಿಪಾಲದ ಬಾಗಿಲಲ್ಲಿ ಕೂತರೆ ಕೆಲವರ ಕಣ್ಣಿಗಾದರೂ ಬಿದ್ದು ವ್ಯಾಪಾರವಾಗಬಹುದು ಎಂದು ನಂಬಿದ್ದಾರೆ. ಹೀಗೆ ತಮಿಳು ನಾಡಿನಿಂದ ಮಣಿಪಾಲದವರೆಗಿನ ಕಥೆಯನ್ನು ಯಾವುದೇ ಬಣ್ಣಿಕೆಯಿಲ್ಲದೆ ಉಷಾ ಒಂದೇ ಉಸಿರಲ್ಲಿ ಹೇಳಿ ಮುಗಿಸುತ್ತಾಳೆ.

ಇವರು ಬೇರೆ ಯಾವ ದೊಡ್ಡ ಶಹರದ ಬಗ್ಗೆಯೂ ಯೋಚಿಸದೆ ಸೀದಾ ಉಡುಪಿ-ಮಣಿಪಾಲಕ್ಕೆ ಇಲ್ಲಿನ ಜನರನ್ನ ನಂಬಿಯೆ ಬಂದಿದ್ದು. ಇಲ್ಲಿಗೆ ಹೊರಡುವ ಮುನ್ನ ಇದಕ್ಕಿಂತ ದೊಡ್ಡ ಶಹರಗಳಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುವ ರಿಪೇರಿ ಅಂಗಡಿಗಳ ಜೊತೆ ತಮ್ಮ ಸ್ಪರ್ಧೆ ಸಾಧ್ಯವೇ ಇಲ್ಲ, ಜೊತೆಗೆ ಖರ್ಚೂ ಜಾಸ್ತಿ. ಈ ಊರಲ್ಲಿ ಮಾತ್ರ ಹೇಗಾದರೂ ಬದುಕಬಹುದು ಅನ್ನುವ ಲೆಕ್ಕಾಚಾರ ಇವರದ್ದು.

ಚಪ್ಪಲಿಯ ಹೊಲಿಗೆಯಲ್ಲಿ ಹದ ಸಾಧಿಸಿದ್ದರೂ, ಕೊಡೆ ಮತ್ತು ಹಳೆ ಬ್ಯಾಗುಗಳ ರಿಪೇರಿಯನ್ನೂ ಅಷ್ಟೇ ನೀಟಾಗಿ ಮುಗಿಸುವ ಗಂಡ ಹೆಂಡರಿಬ್ಬರೂ “ಈ ಕೆಲಸ ನೋಡಿ ಮುಂದಿನ ಸಾರಿ ಹಳೆ ಮೆಟ್ಟು, ಬ್ಯಾಗು, ಕೊಡೆ ಎಸೆಯುವ ಪರಿಸ್ಥಿತಿಯಲ್ಲೂ ನಮ್ಮ ನೆನಪಿಸಿಕೊಂಡು ಬರಬೇಕು. ಅವರಿಗೂ ಉಳೀತು. ನಮಗೂ ದುಡಿಮೆ” ಎನ್ನುವಾಗ ಅವರ ಮಾತಲ್ಲಿ ಬದುಕಿನ ಕುರಿತ ನಿಷ್ಠೆ ಬಿಟ್ಟರೆ ಮತ್ತೇನು ಸುಳಿಯುವುದಿಲ್ಲ.

ಮಣಿಪಾಲಕ್ಕೆ ಹೆಚ್ಚು ದೂರವಲ್ಲದ ಶಾಂತಿನಗರದಲ್ಲಿ ಇವರಿಗೆ ಜೋಪಡಿಗಿಂತ ಜಾಸ್ತಿಯಲ್ಲದ ಮನೆ ಇದೆ. ಅಲ್ಲಿಂದ ಪ್ರತಿದಿನ ಸೈಕಲ್, ತಪ್ಪಿದರೆ ಬಸ್ಸು ಹಿಡಿದು ಬೆಳಗಾಗುತ್ತಲೇ ಇಬ್ಬರೂ ಮಣಿಪಾಲ ಮುಟ್ಟುತ್ತಾರೆ. ಸಾಮಾನ್ಯವಾಗಿ ಷಣ್ಮುಗನೇ ಬೆಳಿಗ್ಗೆ ಹೊತ್ತು ಒಬ್ಬನೇ ಮತ್ತು ಮದ್ಯಾಹ್ನಕ್ಕೆ ಮನೆ ಕೆಲಸ ಮುಗಿಸಿ ಬರುವ ಹೆಂಡತಿ ಜೊತೆಗೆ ದುಡಿಯುವುದು. ಕಡಿಮೆ ಮಾತಾಡಿ, ನೀಟು ಕೆಲಸ ಮಾಡುವ ಗಂಡ, ತನಗೆ ಬರುವ ಚೂರು ಪಾರು ಕೆಲಸಕ್ಕಿಂತ ಗಿರಾಕಿಗಳು ಒಪ್ಪುವಂತೆ ಮಾತಾಡಿಸಿ ಕಳಿಸುವ ಹೆಂಡತಿ ಕೆಲಸ ಮತ್ತು ವ್ಯಾಪಾರದ ತಕ್ಕಡಿಯನ್ನ ಸಮ ತೂಕದಲ್ಲಿ ಇಟ್ಟಿರುತ್ತಾರೆ.

ಮಣಿಪಾಲದ ಬೇರೆ ಬೇರೆ ಮೂಲೆಯಲ್ಲಿ ತನ್ನಂತೆ ಅಂಗಡಿ ತೆರೆದಿರುವ ಅವರ ಸಂಬಂಧಿಕರ ಉದ್ದ ಪಟ್ಟಿ ಮತ್ತು ಅವರ ಕಥೆಗಳು ಷಣ್ಮುಗನಿಗೆ ಗೊತ್ತು. ಅದೇ ಹಾಸ್ಟೆಲ್ ದಾರಿಯಲ್ಲಿ ಚಪ್ಪಲಿ ಹೊಲಿಯುವ ನಂದ, ಷಣ್ಮುಗನಿಗೆ ದೂರದ ಸಂಬಂಧವಂತೆ. ತನ್ನ ಮಗಳನ್ನ ಪ್ರತಿ ದಿನ ಶಾಲೆಗೆ ಬಿಟ್ಟೆ ಕೆಲಸಕ್ಕೆ ಹಾಜರಾಗುವ ನಂದನಿಗೆ ಅವಳನ್ನ ತುಂಬಾ ಓದಿಸೋ ಆಸೆ ಎಂದು ಹೇಳುವ ಕೊನೆಗೆ “ನಮಗೆ ಹಾಗೆಂತ ಇಲ್ಲ, ನನ್ನ ಮಗಳು ಓದೋದರಲ್ಲಿ ಜಾಣೇನೇ. ಆದರೆ ಅವಳಿಗೆ ನಮ್ಮ ಹಾಗೆ ಹೊಲಿಗೆ ಮಾಡೋದು ಅಂದ್ರೆ ಇಷ್ಟ ಅನ್ನೋದನ್ನ ಸೇರಿಸೋಕೆ ಮರೆಯೋದಿಲ್ಲ.”

ಹತ್ತನೇ ತರಗತಿ ಓದುತ್ತಿರೋ ಮಗಳ ಹೊಲಿಗೆಯ ಚಂದವನ್ನ ಇಬ್ಬರೂ ಹೆಚ್ಚು ಉತ್ಸಾಹದಲ್ಲಿ ಹೇಳುತ್ತಾರೆ. “ನಮಗಿಂತಲೂ ನೀಟು ಕೈ ಅವಳಿಗೆ ಒಲಿದರೆ ಆಯಿತು. ಚಪ್ಪಲಿಯಲ್ಲ, ಬಟ್ಟೆ ಹೊಲಿಗೆ. ಕಲಿಯೋಕೆ ಅವಳು ದಿನಾ ಉಡುಪಿಗೆ ಹೋಗಿ ಬರುತ್ತಾಳೆ. ಒಂದು ಮಷೀನು ಹಾಕಿ ಕೊಟ್ಟರೆ ನಮ್ಮ ಬದುಕಿಗೆ ಅದಕ್ಕಿಂತ ಆಧಾರ ಬೇರೇನು ಬೇಕು” ಅನ್ನುವಾಗ ಉಷಾ ಕೂಡ ಗಂಡನ ಜೊತೆ ಹ್ಞೂಗುಟ್ಟುತ್ತಾಳೆ. “ಹಾಗಂತ ಶಾಲೆ ಬಿಡಿಸೋದಿಲ್ಲ. ಅವಳು ಇಷ್ಟ ಪಡೋವರೆಗೂ ಓದುತ್ತಾಳೆ ಆದ್ರೆ ಹೊಲಿಗೆ ಕೈ ಹತ್ತಿದರೇನೇ ಸಲೀಸಾಲ್ಲವಾ? ಜೊತೆಗೆ ಉಷಾನೂ ಮನೇಲೆ ದುಡಿಮೆ ಮಾಡೋಕೆ ಆಗುತ್ತೆ” ಅನ್ನೋದು ಷಣ್ಮುಗನ ವಾದ.

ಸದ್ಯಕ್ಕಂತೂ ಬೆಳಿಗ್ಗೆ ಎಂಟಕ್ಕೇನೆ ಅಂಗಡಿ ತೆರೆದು ಮಣಿಪಾಲಿಗರ ಬರವನ್ನ ಕಾಯೋರಿಗೆ ಕೊರೊನ ಬಹಳ ದೊಡ್ಡ ಹೊಡೆತ ತಂದಿದೆ. ಈಗೀಗಂತೂ ಏನೂ ದುಡಿಮೆಯಿಲ್ಲದೆ ವಾಪಸ್ಸು ಹೋಗೋದನ್ನ ನೆನಪಿಸಿಕೊಂಡು “ಈ ಊರಲ್ಲಿ ಯಾರೂ ನಡೆಯದೆ ಮೆಟ್ಟು ಹರಿಯುವುದು ಹೇಗೆ? ಮನೆಯ ಮೂಲೆಯಲ್ಲಿಯೇ ಇಟ್ಟರೆ ಬ್ಯಾಗು ರಿಪೇರಿಗೆ ಬರುತ್ತದಾ? ಮಳೆಗಾಲವೂ ಮುಗಿತು ಕೊಡೆಯನ್ನು ಬಳಸಿ ಮುರಿದವರೇ ಇಲ್ಲ. ಹೀಗೆ ನೀವೆಲ್ಲ ನಿಂತರೆ ನಮ್ಮ ಬದುಕು ನಡೆಯುವುದು ಹೇಗೆ? ” ಅನ್ನುತ್ತ ಅರ್ಧ ತಮಾಷೆ ತುಂಬಿಸಿಯೇ ಷಣ್ಮುಗ ವಾಸ್ತವವನ್ನು ಮುಂದಿಟ್ಟ.

ಶಹರಗಳು ಕಲಿಯುತ್ತಿರುವ ಬಳಸಿ ಎಸೆಯುವ ಅಭ್ಯಾಸವೂ ಇವರನ್ನ ತಟ್ಟುತ್ತಿವೆ ಅನ್ನೋದು ಅವರ ಮಾತಲ್ಲಿ ಬಂದು ಹೋಗುತ್ತಿತ್ತು. ಇವರಂತೆ ಮಣಿಪಾಲದ್ದಕ್ಕೂ ಚಪ್ಪಲಿ ಹೊಲಿಗೆ ಕಲಿತು, ಜೊತೆಗೆ ಸಣ್ಣ ಪುಟ್ಟ ರಿಪೇರಿ ಕೆಲಸಗಳನ್ನು ರೂಢಿಸಿಕೊಂಡು ಬದುಕ ನಡೆಸುವವರು ಹಲವರಿದ್ದಾರೆ. ನಮ್ಮ ದಿನಚರಿಯ ಮೇಲೆ ಅವರೂ ಬದುಕನ್ನ ಕಟ್ಟಿಕೊಂಡಿದ್ದಾರೆ. ಓಡುವ ಮಣಿಪಾಲದಲ್ಲಿ ನಮ್ಮ ಕಾಲುಗಳನ್ನೇ ಕಾಣುತ್ತ ಕಾಯುವ ಇವರೂ ಇಲ್ಲಿಯವರೇ.

Cobbler, Cobbler, Mend my shoe
Get it done by half-past two…
ಅನ್ನೋ ಪ್ರಾಸ ಪದ್ಯವನ್ನಷ್ಟೇ ಕಲಿತು ಬೆಳೆದ ನಾವು ಅದೆಲ್ಲೋ ಷಣ್ಮುಗಾ ಮತ್ತು ಉಷಾರನ್ನ ಅವರ ಕಸುಬಿನಿಂದ ಹೊರಗಿಟ್ಟು, ಮಣಿಪಾಲದ ಒಳಗಿಟ್ಟು ನೋಡುವ ಪ್ರಯತ್ನ ಮಾಡಲೇಬೇಕು.

September 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: