ಬಿ ಆರ್ ಸತ್ಯ ನಾರಾಯಣ
ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ, ಬೊಂಬೆಮನೆ ಅಥವಾ ಚಂದಮಾಮ ಪುಸ್ತಕದಲ್ಲಿ ಓದಿದ್ದ ಒಂದು ಕಥೆ: ಒಬ್ಬ ಸಾಹುಕಾರ ತನಗೊಬ್ಬ ಸಹಾಯಕನನ್ನು ನೇಮಿಸಿಕೊಳ್ಳಲು ನಿರ್ಧರಿಸಿದ. ಹಲವರನ್ನು ಸಂದರ್ಶಿಸಿದ. ಅದರಲ್ಲಿ ಇಬ್ಬರು ಅವನಿಗೆ ಇಷ್ಟವಾದರು. ವಿದ್ಯೆ, ಅನುಭವ ಎಲ್ಲದರಲ್ಲೂ ಸರಿಸಮಾನರಾಗಿದ್ದ ಅವರಲ್ಲಿ ಯಾರನ್ನು ಆಯ್ದುಕೊಳ್ಳುವುದೆಂದು ಆತನಿಗೆ ಚಿಂತೆಯಾಯಿತು. ಆಗ, ಆತನ ಮಗಳು ಆ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದಳು. ಅಪ್ಪ ಮಗಳು ಇಬ್ಬರೂ ಕಛೇರಿಯಲ್ಲಿ ಕುಳಿತುಕೊಂಡು, ಆ ಇಬ್ಬರೂ ಅಭ್ಯರ್ಥಿಗಳನ್ನು ಒಟ್ಟಿಗೆ ಒಳಗೆ ಕರೆಸಿಕೊಂಡರು. ಮಗಳು, “ನಾವು ಶುಚಿತ್ವಕ್ಕೆ ಹೆಚ್ಚು ಆಧ್ಯತೆ ಕೊಡುತ್ತೇವೆ. ಒಳಗೆ ಬರುವಾಗ ನೀವು ತಮ್ಮ ಕಾಲುಗಳನ್ನು ಕಾಲೊರೆಸಿನಲ್ಲಿ (ಫುಟ್ ರಗ್) ಚೆನ್ನಾಗಿ ಒರೆಸಿಕೊಂಡು ಬಂದಿದ್ದೀರಾ ಅಲ್ಲವೆ?” ಎಂದು ಪ್ರಶ್ನಿಸಿದಳು. ಮೊದಲನೆಯವ “ಹೌದು. ಚೆನ್ನಾಗಿ ಒರೆಸಿಕೊಂಡು ಬಂದೆ” ಎಂದ. ಎರಡನೆಯವನು, “ಇಲ್ಲ” ಎಂದ. ಮಗಳು “ಏಕೆ!?” ಎಂದಾಗ, “ಏಕೆಂದರೆ, ಅಲ್ಲಿ ಕಾಲೊರೆಸು ಇರಲಿಲ್ಲ” ಎಂದ. ಮಗಳು “ಅಪ್ಪ, ಈ ಎರಡನೆಯವನು ಪ್ರಾಮಾಣಿಕನಾಗಿದ್ದಾನೆ. ಅವನನ್ನೇ ಕೆಲಸಕ್ಕೆ ನೇಮಿಸಿಕೊ” ಎಂದಳು. ತಂದೆಗೆ ಸಂತೋಷವಾಯಿತು. ಹಾಗೆಯೇ ಮಾಡಿದ.
***
ಇತ್ತೀಚಿಗೆ, ಪರ್ಸನಾಲಿಟಿ ಡೆವಲಪ್ಮೆಂಟ್ ಪ್ರೋಗ್ರಾಮ್, ಕಾರ್ಯಾಗಾರ ಮೊದಲಾದವುಗಳಲ್ಲಿ ಹಾಗೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಮ್ಯಾನೇಜ್ಮೆಂಟ್ ಕಥೆಗಳನ್ನು ಕೇಳಿದ ಮೇಲೆ ಪುನರ್ಃನಿರೂಪಿತವಾದ ಕಥೆ:
ಕಂಪೆನಿಯೊಂದರ ಮಾರುಕಟ್ಟೆ ಪ್ರತಿನಿಧಿಗಳಿಗೆ ಒಬ್ಬ ಮ್ಯಾನೇಜ್ಮೆಂಟ್ ಗುರು ತರಬೇತಿ ನೀಡುವಾಗ, “ಇಂತಹ ತರಬೇತಿ ಕಾರ್ಯಕ್ರಮ ಅಗತ್ಯವಿದೆಯೇ?” ಎಂದು ಕೇಳಿದ. ಎಲ್ಲರೂ “ಖಂಡಿತಾ ಇಲ್ಲ. ಏಕೆಂದರೆ ನಾವೆಲ್ಲರೂ ನಾಲ್ಕೈದು ವರ್ಷಗಳ ಅನುಭವವಿರುವವರು” ಎಂದರು ಆಗ ತರಬೇತುದಾರ ಕೆಳಗಿನ ಕಥೆ ಹೇಳಿದ.
ಹಲವಾರು ಉತ್ಪನ್ನಗಳನ್ನು ಮಾರುವ ಮಾರುಕಟ್ಟೆ ಸಂಸ್ಥೆಯೊಂದರಲ್ಲಿ, ಮಾರಟಗಾರ ಪ್ರತಿನಿಧಿಯ ಒಂದು ಹುದ್ದೆಗೆ ಸಂದರ್ಶನ ನಡೆಸಿದ್ದರು. ಬಂದಿದ್ದ ಎಲ್ಲಾ ಅಭ್ಯರ್ಥಿಗಳ ಸಂದರ್ಶನ ನಡೆಸಿದ ಮೇಲೆ, ಸಂದರ್ಶಕರು ಇಬ್ಬರ ಹೆಸರನ್ನು ಅಂತಿಮಗೊಳಿಸಿ, ಇವರಿಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳುವ ಹೊಣೆಯನ್ನು ಚತುರನಾಗಿದ್ದ ಮಾನವಸಂಪನ್ಮೂಲ ವಿಭಾಗದ ಅಧಿಕಾರಿಗೆ ಬಿಟ್ಟರು. ಆತ, ಇಬ್ಬರನ್ನು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ತನ್ನ ಚೇಂಬರಿಗೆ ಬನ್ನಿರೆಂದು ಹೇಳಿದ.
ಮಾರನೆಯ ದಿನ ಇಬ್ಬರೂ ಒಟ್ಟಿಗೆ ಆತನ ಚೇಂಬರ್ ಪ್ರವೇಶಿಸಿದರು. ಆಗ ಅಧಿಕಾರಿ “ಒಳಬರುವಾಗ ಬಾಗಿಲಿನಲ್ಲಿದ್ದ ಕಾಲೊರೆಸಿನಲ್ಲಿ ಕಾಲೊರೆಸಿಕೊಂಡು ಬಂದಿರಾ?” ಎಂದು ಪ್ರಶ್ನಿಸಿದ. ಮೊದಲನೆಯವ “ಸರ್, ನಾನು ಕಾಲೊರೆಸಿಕೊಂಡು ಬಂದೆ” ಎಂದ. ಎರಡನೆಯವನು “ಇಲ್ಲ. ನಾನು ಕಾಲೊರೆಸಿಕೊಂಡು ಬರಲಿಲ್ಲ. ಏಕೆಂದರೆ ಅಲ್ಲಿ ಕಾಲೊರೆಸು ಇರಲೇ ಇಲ್ಲ!” ಎಂದ. ಅಧಿಕಾರಿ ಮೊದಲನೆಯವನ ಮುಖ ನೋಡಿದ. ಆಗ ಮೊದಲನೆಯವನು, “ಸರ್ ಅಲ್ಲಿ ಕಾಲೊರೆಸು ಇರಲಿಲ್ಲ ಎಂದು ನನಗೆ ಗೊತ್ತು! ಏಕೆಂದರೆ, ಇಡೀ ಕಟ್ಟಡವೇ ಹವಾ ನಿಯಂತ್ರಿತವಾಗಿದೆ ಹಾಗೂ ಇಲ್ಲಿ ಶೂ ಕೊಳೆಯಾಗುವ ಸಂಭವವೂ ಇಲ್ಲ. ಇಷ್ಟೆಲ್ಲಾ ಇದ್ದರೂ ನಿಮ್ಮ ಪ್ರಶ್ನೆಗೆ ನನ್ನ ಉತ್ತರ, ‘ನಾನು ಕಾಲೊರೆಸಿಕೊಂಡು ಬಂದೆ’ ಎಂಬುದೇ ಆಗಿದೆ” ಎಂದ. ಮೊದಲನೆಯವನಿಗೆ ಕೆಲಸ ಸಿಕ್ಕಿತು. ಪ್ರಾಮಾಣಿಕನಾಗಿದ್ದ ಎರಡನೆಯವನಿಗೆ ಸಿಗಲಿಲ್ಲ!
ಕಥೆ ಹೇಳಿ ಮುಗಿಸಿದ ತರಬೇತುದಾರ, “ಅಧಿಕಾರಿ ಮಾಡಿದ್ದು ಸರಿಯೆ?” ಎಂದು ಪ್ರಶ್ನಿಸಿದ. ಎಲ್ಲರೂ ಒಕ್ಕೊರಲಿನಿಂದ “ಅಧಿಕಾರಿಯದು ತಪ್ಪು ನಿರ್ಧಾರವೆಂದೂ ಅದರಿಂದ ಆತ ಒಬ್ಬ ಪ್ರಾಮಾಣಿಕ ಕೆಲಸಗಾರನನ್ನು ಕಳೆದುಕೊಂಡ” ಎಂದು ಉತ್ತರಿಸಿದರು.
ತಕ್ಷಣ ತರಬೇತುದಾರ “ಹಾಗಾದರೆ ನಿಮಗೆ ಖಂಡಿತಾ ತರಬೇತಿಯ ಅಗತ್ಯವಿದೆ” ಎಂದು ಘೋಷಿಸಿದ! ಅದನ್ನು ಪ್ರಶ್ನಿಸಿದವರಿಗೆ ಆತ ಕೊಟ್ಟ ಉತ್ತರ, “ನೀವು ಮಾರುವ ಉತ್ಪನ್ನಗಳಲ್ಲಿ ಇರುವ ಗುಣಗಳನ್ನಷ್ಟೇ ಹೇಳಿದರೆ ಹೆಚ್ಚು ಮಾರಾಟವಾಗುತ್ತದೆಯೇ? ಅಥವಾ ಇಲ್ಲದಿರುವ ಗುಣಗಳನ್ನು ಹೇಳಿದರೆ ಹೆಚ್ಚು ಮಾರಾಟವಾಗುತ್ತದೆಯೆ?” ಎಂದು ಪ್ರಶ್ನೆಗಳ ಮೂಲಕವೇ ಉತ್ತರಿಸಿದ. ತರಬೇತಿಗೆ ಬಂದವರು ತೆಪ್ಪಗಾದರು!
***
ಇದಕ್ಕೆ ನೀವೇನು ಹೇಳುತ್ತೀರಿ???
1. ಕಾಲ ಬದಲಾಗಿದೆ
2. ಜನ ಬದಲಾಗಿದ್ದಾರೆ
3. ಸರಿ
4. ತಪ್ಪು
5. ಸರಿ ತಪ್ಪೊ ತಿಳಿಯುತ್ತಿಲ್ಲ






ಪ್ರಿಯರೇ, ಮಾರಾಟದ ಜಗತ್ತಿನಲ್ಲಿ ಪ್ರಾಮಾಣಿಕತೆಗೆ ಯಾವಾಗಲೂ ಸ್ಥಳವಿಲ್ಲ.ಅಷ್ಟೇ ಅಲ್ಲ ಪ್ರಾಮಾಣಿಕತೆಯಂಹ ಮೌಲ್ಯಗಳು ಮಾರಾಟಕ್ಕೆ ಅಪಾಯವನ್ನು ತಂದೊಡ್ಡುತ್ತವೆ ಎನ್ನುವ ನಂಬಿಕೆಯನ್ನೂ ಸಹ ಅವರು ಬೆಳೆಸಲೇಬೇಕು. ಹಾಗಾಗಿ ಆ ದೃಷ್ಟಿಯಿಂದ ನೋಡಲಾಗದು. ಆದರೇ ನಾವು ಬರೀ ಕೊಳ್ಳುಬಾಕ ಸಂಸ್ಕೃತಿಯನ್ನೇ ನಂಬುತ್ತೇವಾ, ಮಾರುಕಟ್ಟೆಗೆ ನಮ್ಮನ್ನೇ ನಾವು ಮಾರಿಕೊಳ್ಳುತ್ತೇವಾ? ಈ ಪ್ರಶ್ನೆ ಕೇಳಿಕೊಂಡರೆ ಸಾಕು ಅನ್ನಿಸುತ್ತದೆ. ಜನ ಬದಲಾಗಿದ್ದಾರಾ? ಅನ್ನುವ ಬದಲು ನಾನು? ಅಂದುಕೊಂಡರೆ ಸಾಕೇನೋ- ಗಣಪತಿ
The current moral story is it is not only enough to be straightforward, you should do so by telling others exactly how they want to hear it.