ಕೈಜಾರಿದ ಕರವಸ್ತ್ರ
ಏಕಾಂತದ ನಿಮಿಷನಿಮಿಷವನ್ನೂ
ತಬ್ಬುತ್ತಿದ್ದಂತೆಯೇ ಮೌನ
ಉಕ್ಕುಕ್ಕಿ ಹರಿಯುತ್ತಿದೆ ನೆನಪುಗಳ ಪ್ರವಾಹ
ಸುತ್ತಮುತ್ತೆಲ್ಲ
ಹಬ್ಬುತ್ತಿದ್ದಂತೆಯೇ ಕತ್ತಲು
ಗಹಗಹಿಸಿ ನಗುತ್ತಿದೆ ಬಡಪಾಯಿ ಹೃದಯ
ತುಟಿಪಿಟಿಕ್ಕೆನ್ನದ ವ್ರತಸ್ಥ ಮೌನ
ಶ್ರದ್ಧಾಂಜಲಿ ಸಲ್ಲಿಸಲಿ
ನೆಲಕ್ಕುರುಳಿದ ಪ್ರೇಮಪತಾಕೆಗೆ
ಬದುಕಿರುವಾಗಲೇ
ನನ್ನೀ ಬದುಕೆಂಬ ಬದುಕು ಸ್ತಬ್ಧವಾಗಲಿ
ಕವಿಯಲಿ ಮಡಿದೊಲವ ಸೂತಕ
ಸುರಿವ ಕಣ್ಣೀರ ಹೊಳೆವ ಬೆಳಕು
ಎದೆಗನ್ನಡಿಯ ಸೀಳುಗೆರೆಯ ಬಳುವಳಿ
ಗುಳಿಬಿದ್ದ ಕಣ್ಣುಗಳೊಳಗೆ
ಹುಸಿಗನಸುಗಳ ಕುಹಕನಗೆ
ಜಡಧಮನಿಗಳಲ್ಲಿ ಹೆಪ್ಪುಗಟ್ಟುತ್ತಿದೆ ರುಧಿರ
ದೂರಿ ಅವಳನ್ನೇ ಬಾರಿ ಬಾರಿ
ಪಲಾಯನವಾಗುವುದಿಲ್ಲಿ ಸುಲಭವಲ್ಲ
ಪ್ರೀತಿಯ ಜೊತೆ ತಳುಕುಹಾಕಲಾರೆ
ಮೋಸವೆಂಬ ಪದ
ಕಾಲದ ನೆಪಹೂಡಿ ತರಲಾರೆನಿಲ್ಲಿ
ನಸೀಬೆಂಬ ಹಸಿಸುಳ್ಳು
ಈ ದುಗುಡ ನಾ ದುಡಿದ ದ್ರವ್ಯ
ಕೈಜಾರಿದ ಕರವಸ್ತ್ರ ಬೇಕಾಗಬಹುದು
ಅವಳಿಗೊಮ್ಮೆ
ಆ ಕ್ಷಣ ಬಾರದಿರಲಿ ನಾನೀಗ ಚಿಂದಿ ಚಿಂದಿ







ತುಂಬಾ ಚನ್ನಾಗಿದೆ……. 🙂 ನನ್ನೀ ಬದುಕೆಂಬ ಬದುಕು ಸ್ತಬ್ಧವಾಗಲಿ
ಕವಿಯಲಿ ಮಡಿದೊಲವ ಸೂತಕ
ಸುರಿವ ಕಣ್ಣೀರ ಹೊಳೆವ ಬೆಳಕು… ಈ ಸಾಲಗಳು ತುಂಬ ಹಿಡಿಸಿತು
koneya saalugaLu mana tattidavu..!
ಈ ದುಗುಡ ನಾ ದುಡಿದ ದ್ರವ್ಯ …. Shiva entha chendakke heldi maraya