ಕಾಲದಾ ಕನ್ನಡಿ

ವಿಜಯಾ ಮೋಹನ್

ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ ನಿಂತುಕೊಳ್ಳಲು ಕಾರಣಗಳಿದ್ದವು, ಅಣ್ಣಯ್ಯನ ಎದೆಯೊಳಗೆ, ಅತ್ತಿಗೆಯ ಬೆರಳು ಸುತ್ತಿದ ಚಿತ್ತಾರದ ನೆರಿಗೆಗಳು. ಅವು ಸುಕ್ಕು ಗಟ್ಟುತ್ತಿಲ್ಲ, ಸುರಿದು ಹೋಗುತ್ತಿಲ್ಲ, ಅವನು ಪ್ರೀತಿಯಿಂದ ಎಡ ಬಲವೆನ್ನದೆ, ತಿರುವಿದಷ್ಟು ರಂಗು ರಂಗಾಗಿ ಗರಿ ಗೆದರುತ್ತಲೆ ಇದ್ದವು. ಕಳೆದ ಕಾರ್ತಿಕ ಮಾಸದವರೆಗು, ಸುಮ ಸುಮನೆಂದು ಸುರಿದ ಇಬ್ಬನಿಯ ಅರಳುಗಳ ಮದ್ಯೆ ತಬ್ಬಿ ಮುದ್ದಾಡಿದ್ದ ಅಣ್ಣಯ್ಯನಿಗೆ.

ಈ ವರ್ಷದ ಸರಸವೆಂಬ ಜೀವನ ಪ್ರೀತಿಯೆನ್ನುವುದು. ಜಿಟಿ ಜಿಟಿ ಹನಿಯುತ್ತಿರುವ ಜಡಿ ಮಳೆಯಲ್ಲಿ. ಎಂಗು ತಪ್ಪಿಸಿಕೊಳ್ಳಲಾರದ. ಹಸಿಯಾಗಿ ತೊಪ್ಪೆಯಾಗಿ, ನೆನೆದು ನೆನೆದು ಮುಗ್ಗಿಡಿದಿದ್ದ, ಎಂಟು ಕುಂಟೇಲಿ ಹೆಮ್ಮಾರಿಯಾಗಿ ಬೆಳೆದಿದ್ದ, ಕಡಲೆ ಬಳ್ಳಿಯ ಕಡು ಬಿರುಸಾದ ದುಖಃ. ಅಂತಹ ಸಂಕಟದ ಸಾಲಿನೊಳಗೆ ನಾವು ಎಂಗಿರಬೇಕೆಂಬೊ ನಿಗಂಟುಗಳೆಲ್ಲ ಮರತೇ ಹೋಗಿದ್ದವು.

ಮುದ್ದು ಮಡದಿಯ ಮುಖ ಸುಕ್ಕು ಗಟ್ಟುವ ಮುಂಚೆಯೆ, ಹುಟ್ಟಿದ್ದ ತಂದೆಗೆ ತಲೆ ಮಗಳಾದ ಯಶೋದಳೆಂಬ ಹೆಣ್ಣುಡುಗಿಯು. ಎದೆ ಮಟ್ಟ ಬೆಳೆದು ಅಣ್ಣಯ್ಯನ ಉಂಡಿಟ್ಟೆಲ್ಲಾ, ಅವನ ಎದೆಯೊಳಗೆ ಒತ್ತುತಾ ಇತ್ತು, ಹಿಟ್ಟು ಒಳಕ್ಕು ಹೋದಂಗಲ್ಲ, ಹೊರಕ್ಕು ಬಂದಂಗಲ್ಲ, ಮೊಳಕೆ ಬಂದಿದ್ದ ಕಡಲೆ ಕಾಯಿ, ಮುಗ್ಗು ಮುಗ್ಗಿಡಿದಿರುವ ಬಳ್ಳಿಗಳ ಮದ್ಯೆ ಮೂಗು ಮುರಿಯುತ್ತಿರುವ ಮೋಹದಾ ದುಡ್ಡುಅಣ್ಣಯ್ಯನ ಮಗಳು ಋತುವಾಗಿ ರುಜುವಿಲ್ಲದ ವರ್ಷಗಳು. ಲೋಕದಾ ಕಣ್ಣಿಗೆ ಹೋಕುಳಿಯ ನೀರು ಚಿಮ್ಮುತ್ತಿವೆ. ಅಲ್ಲಲ್ಲಿ ಹೆಣ್ಣೆಂಬ ಎದೆಯ ಮೇಲೆ, ಗಂಡೆಂಬ ಅತ್ಯಾಚಾರಗಳು, ಲೆಕ್ಕಕ್ಕೆ ದಿಕ್ಕು ತಪ್ಪುತ್ತಿರುವ ಈ ಹೊತ್ತಿನೊಳಗೆ, ಮನೆ ಮಠ, ಮಡದಿ ಮಕ್ಕಳೆನ್ನುವ ತಪಸ್ಸಿಗೆ ಬಿದ್ದಿರುವ ಪುರುಷನನ್ನುಡುಕಿ, ಮದುವೆ ಮಾಡ ಬೇಕು. ಅವಳು ಗೋದಿ ಬಣ್ಣದವಳು, ಬೊಂಬೆ ಮುಖದವಳು, ಕಣ್ಣಿ ನಾಳದ ಕಣಿವೆಗಳಲ್ಲಿ ಬಣ್ಣಬಣ್ಣದ ಕನಸುಗಳ ಕುಪ್ಪೆಗಟ್ಟಿರುವವಳು.

ಮುಕ್ಕು ಮಕವೆನ್ನುವ ಮುದ್ದು ಗಲ್ಲದ ಮೇಲೆ, ಹುಣ್ಣಿಮೆಯ ಚಂದಿರನ ತುಟಿ ಕಚ್ಚುತ್ತಿರುವವಳು. ವಯಸ್ಸಿಗೆ ತಗ್ಗಾಟ್ಟಾದ ಮದುವೆಯೊಂದಾಗ ಬೇಕು. ಇಲ್ಲವೆಂದರವಳು ರಾಮ ಲಕ್ಷ್ಮಣರೆಂಬೋರ ಮದ್ಯೆ ಶೂರ್ಪನಖಿಯಾಗಬಾರದು, ಇಲ್ಲವೆಂದರವಳು ಅಲ್ಲಲ್ಲಿ ಹಬ್ಬರಿಸುತ್ತಿರುವ ಅತ್ಯಾಚಾರಿಗಳ ಕೀಚಕರಿಗೆ ಹಬಲೆಯಾಗಬಾರದು. ಗುರು ಹಿರಿಯರೆಂಬ ಹೆಣ್ಣು ಗಂಡಿನ ಸಾಕ್ಷಿಗಳ ಸಾಲಿನೊಳಗೆ. ಸಟ್ಟಾದ ಮದುವೆಗಾಗಿ, ಅಣ್ಣಯ್ಯನ ಮೊಳಕೆಯೊಡೆದ ಕಡಲೆಕಾಯಿ. ಅದು ಮಂಡಿಯೊಳಗೆ ರೇಟಿಲ್ಲದ ರೇಟಾಗಿ ಕುಂತು, ಎಪ್ಪಾತ್ತಾರು ಸಲ ತ್ರಿವಿಕ್ರಮನಂತೆ ತಾರಾಡಿ ಬಂದಿದ್ದ, ಕೊನೆಗೆ ಶೆಟ್ಟರ ಡಿಬ್ಬಯ್ಯನಂಗಡೀಲಿ ಬಡ್ಡಿ ಕಟ್ಟುವ ದುಡ್ಡು ತಂದಾಗ. ರೇಟೆನ್ನುವುದು ಗಗನಕ್ಕೆ ರೆಕ್ಕೆ ಬಿಚ್ಚಿ, ಗರಿಯು ಉದುರದ ಬಂಗಾರದ ವಾಲೆ ಜುಮುಕಿ. ಬೆಳ್ಳಿ ಕಾಲು ಚೈನು, ಹುಡುಗನಿಗೆ ಉಂಗುರ ವಾಚು, ಉಟ್ಟು ಬಿಚ್ಚುವ ಬಟ್ಟೆಯ ಲೆಕ್ಕ ಕೇಳದ ಮದುವೇಲಿ.

ನಾನು ನೀನೆಂಬೋರು, ಬಂದು ಬಳಗದೋರು, ಉಂಡು ತಿಂದೋಗುವವರ ಮದ್ಯೆ, ನೂಕು ನುಗ್ಗಲಿನ ಟೇಬಲ್ಲಿನೂಟ, ಉಣ್ಣುವುದೊಂದಕ್ಕೆ ಒದ್ದಾಡುವ ಹಗ್ಗ ಜಗ್ಗಾಟದ ಸೈನಿಕರು. ಸರತಿ ಸಾಲೊಳಗೆ ಸವೆದು ನಿಲ್ಲಲಾರದೆ, ಹಸಿವು ನೀರಡಿಕೆಯೆಂಬ ಪೈಪೋಟಿಯ ಪತಂಗಗಳಾಗಿ. ಪಲ್ಲಟದ ರೆಕ್ಕೆ ಬಿಚ್ಚಿ ಉಣ್ಣುವಾಗ, ಅತ್ತಿಗೆಯ ಕಡೆಯ ಅತಿ ಮುಖ್ಯವಾದವರು. ಎಲ್ಲಿ ಕುದುರೆ ನಿಲ್ಲಿಸಿ ಬಂದಿದ್ದರೋ ಏನೊ? ಉಣ್ಣಲೆ ಬೇಕೆಂಬ ಬಯಕೆಯ ಬೆನ್ನು ಕಟ್ಟಿದ್ದವರಿಗಾಗಿ. ಆ ನೂಕು ನುಗ್ಗಲಿನ ಚೇರಿನೊಳಗಿದ್ದ ಎರಡು ಸಣ್ಣ ಗಂಡುಡುಗರನ್ನ. ಲೇ ಅಪ್ಪಯ್ಯ ಎದ್ದೋಳ್ರಪ್ಪ. ನೀವು ಆಮೇಲೆ ಉಣ್ಣೀವರಂತೆ. ಇವರಿಗೆ ಜಾಗ ಬಿಡ್ರಪ್ಪ, ಎಂಬ ಅತ್ತಿಗೆಯ ನುಡಿಗೆ ಕಟ್ಟು ಬಿದ್ದು. ಎದ್ದು ನಿಂತ ಹುಡುಗರ ತಂದೆಯೆಂಬೋನು ನೋಡಿ. ಲೇ ಯಾರು ಉಣ್ಣು ಬ್ಯಾಡ್ರಿ ಎದ್ದೋಳ್ರಲೆ, ಏನು ಇವಳ ವೈಬೋಗದೂಟ ಎಲ್ಲು ನೋಡಿಲ್ಲವೇನ್ರಲೆ? ಇವರಗ್ ಬೇಕಾದವರೆ ಉಣ್ಣುಲಿ.

ನಾವೆಲ್ಲ ಬೇವಾರ್ಸಿಗಳು ಕಣ್ರಲ. ಊಟದ ಹಾಲೆಂಬೋದು ಮಾತು ಕಳಕೊಂಡ ಮೌನದ ಸೆರಗೊದ್ದುಕೊಂಡಿತು. ಲೇ ಲೇಸ್ ರಾಂಡ್ರ, ಯಾಡ ಕೂಡು ಸ್ರೂಡ್ಲೇದೆಮಂಡ್ರ? ಬ್ರೆಸ್ಟನಾ ಕೊಡುಕುಲಾ, ಎಂದು ಕೆಂಡಾ ಮಂಡಲದಕಿಡಿ ಹೊತ್ತಿಸಿದ ಅಣ್ಣಯ್ಯನ ಅಳಿಯನ ಕಡೆಯವರು. ಹತ್ತಾರು ಜನ ಉಣ್ಣದೆ ಉರಿದುರಿದು ಹೋದ. ಆವತ್ತಿನ ಬೊಬ್ಬೆಗಳು, ಕಾಲಾ ನಂತರದ ಮಚ್ಚೆಗಳಾಗಿ ಇವತ್ತಿಗು ಅಣ್ಣ ಅತ್ತಿಗೆಯ ಎದೆಯೊಳಗೆ. ನಂಜೆಂಬ ಹೊಗೆ ರವಳುತ್ತಲೆ ಇದೆ.

ಇವತ್ತು ಕಾಲವೆನ್ನುವುದು ಕರಗಿ ಕರಗಿ ಸೋತೈತೆ, ಇದರ ನಡುವೆ ಇದ್ಯಾವುದೊ ತಬ್ಬಲಿ ನನ ಮಗನ ಕಾಯಿಲೆ ಹುಟ್ಟುಕೊಂಡು. ಏಸೊ ಜನರು ಕೂಡಿಟ್ಟಿದ್ದ ಕನಸುಗಳ ಮೆದೆಯೆಲ್ಲ ಬಿಚ್ಚಿಕೊಂಡು ಬೆತ್ತಲಾಗುತ್ತಿವೆ. ಇಂದ್ರಾ ಚಂದ್ರಾ ಲೋಕುಕ್ಕೆಲ್ಲಾ ಜಾಣತನದ ಏಣಿ ಹಾಕೋವರಿದ್ದರು. ಹೆಣ್ಣು ಗಂಡಾಗಿ, ಗಂಡು ಹೆಣ್ಣಾಗಿ, ಲೋಕದ ಕಣ್ಣಿಗೆ ಕ್ರಾಪು ತೀಡೋವರಿದ್ದರು. ಕೋಟಿ ಕೋಟಿ ಕೊಳ್ಳೆಯೊಡೆದು ಕಾವು ಗಟ್ಟಿರುವವರೆಲ್ಲಾ. ಏಸು, ಬುದ್ದ, ಗಾಂದಿ, ಅಂಬೇಡ್ಕರ್ ರವರ ಆದರ್ಶಗಳ ಲೇಪನಕ್ಕೆ ಒದ್ದಾಡುವವರಿದ್ದಾರೆ.

ದೇಶದ ಮೂಲೆ ಮೂಲೆಯ ಡಾಕ್ಟ್ರಗಳೆಲ್ಲ. ಕೊರೋನವೆಂಬ ಕಾಯಿಲೆಗೆ ಬ್ರಹ್ಮಾಸ್ತ್ರವನ್ನು ಬೀಸುತ್ತಿದ್ದಾರೆ. ಯಾರನ್ಯಾರು ಮುಟ್ಟಂಗಿಲ್ಲ, ನೋಡಂಗಿಲ್ಲ, ಗುರ್ತಿಡಿಯಂಗಿಲ್ಲ, ಅಳ್ಳಿ ಮರ್‌ದಲ್ಲಿ ಗುಮ್ಮ ಬರ್‌ತೈತೆ ಪಚ್ಚಳಪ್ಪಯ್ಯ, ಅಮ್ಮನ ತೊಡೆಯ ಮೇಲಿನ ಕಣ್ಣು ಮುಚ್ಚಿಸಿದ ಹಾಡು. ಇದ್ಯಾವುದೊ ಬರ್ ಬಾರದ ಖಾಯಿಲೆಯ ಗುಮ್ಮಕ್ಕೆ.

ದೇಶಕ್ಕೆ ದೇಶಾನೆ ಬಚ್ಚಿಟ್ಟುಕೊಂಡುಬಿಡತು, ತಿಂಗಳಾನುಗಟ್ಟಲೆ ಕಾಲುವೆಯೊಳಗಿನ ಕೆನ್ನೊಲದ ನೀರಿನಂತೆ ಲೊಳ ಲೊಳನೆ ಸುರಿಯುತ್ತಿದ್ದ. ಅಪ್ಪನ ಕಾಲದ ನೆಗಡೆಗೆ, ಆವತ್ತು ಯಾವ ಡಾಕ್ಟರ್‌ಗಳು ದಿಕ್ಕೇ ಇರಲಿಲ್ಲ. ಇವತ್ತು ನೆಗಡೇನು ಇಲ್ಲ, ಕೆಮ್ಮು ಇಲ್ಲಾ ಅಂದ್ರು ಬಾಡಿ ಟೆಂಪರೆಚರ್‌ನ ಚೆಕ್ಕ ಮಾಡ್‌ತೀವ್ ಕಣ್ರಿ, ಅನ್ನುವ ನಿಪುಣರಿಗೇನು ಕಮ್ಮಿಯಿಲ್ಲ. ಕಣ್ಣಿಗೆ ಕಾಣದಿರೊ ಕೊರೋನಕ್ಕೋಸ್ಕರ ಜನ ಸೇರಂಗಿಲ್ಲ.

ಜಾತ್ರೆ ಜಂಗುಳಿಗಳಿಲ್ಲ, ಸಂತೆ ಸರುಕುಗಳಿಲ್ಲ. ಮದುವೆ ದಿಬ್ಬಣಗಳಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆಡೆಸಿ ಕೊಡಬೇಕೆಂದು. ಕೂಗುತ್ತಿದ್ದ ಮೈಕುಗಳನ್ನೆಲ್ಲ ಯಾರು ರಿಪೇರಿ ಮಾಡುತ್ತಿದ್ದಾರೊಏನೊ? ಇವೆಲ್ಲಕ್ಕಿಂತ ಬಹಳ ಬಹಳ ಮುಖ್ಯವಾಗಿ, ಕಮಲ ನೀರಿಗೆ ಹೋಗುತ್ತಿದ್ದಾಳೆ, ಬಸವ ಆಟವಾಡುತ್ತಿದ್ದಾನೆ, ಅಲ್ಲ ಅಲ್ಲ ಅಲ್ಲ, ಬಸವ ನೀರಿಗೋಗುತ್ತಿದ್ದಾನೆ, ಕಮಲ ಆಟವಾಡುತ್ತಿದ್ದಾಳೆ, ಎಂದು ಪೈಪೋಟಿಯ ರೆಕ್ಕೆ ಬಿಚ್ಚಿ ಕಲರವದೊಳಗೆ ಕಲಿಯ ಬೇಕಿದ್ದ.

ನಮ್ಮೂರಿನ ಮಕ್ಕಳನ್ನ ನೋಡುತ್ತಿದ್ದರೆ, ಎಂತವರಿಗು ಕರಳು  ನುಳಿಚಿದಂತಾಗಿರುವ ಸಂಕಟದ, ಈಕಾಯಿಲೆಯ ಮದ್ಯೆ. ಶ್ರಾವಣ ಮಾಸದ ಮೊದಲನೆ ವಾರ, ಗಂಡು ಹೆಣ್ಣಿನ ಕಡೆಯವರು ನಿಶ್ಚಯಿಸಿದ, ಅಣ್ಣಯ್ಯನ ಮಗಳು ಸಣ್ಣುಡುಗಿಯ ಮದುವೆ, ಊರು ಮೊಗ್ಗುಲಲ್ಲೆ ಇರುವ ಮಲೆಯ ರಂಗನಾಥನ ಬೆಟ್ಟದ ತಪ್ಪಲಿನಲ್ಲಿ ಸಟ್ಟಾಯಿತು. ಕುಚ್ಚಿ ಕುಚ್ಚಿ ಬೆಳೆದ ಕನಕಾಂಬರದ ಹೂವೆಲ್ಲಾ, ಉದುರಿ ಉದುರಿ ಭೂಮಿ ತಬ್ಬಿಕೊಂಡ ಹೊಟ್ಟೆ ಉರಿಯ ಮದ್ಯೆ ಹಸಿರುಗರಿಯ ಚಪ್ಪರದ ಕೆಳಗೆ, ಅಳಿಯ ಮುದ್ದಾದ ಹುಡುಗ, ಗಿಣಿ ಮೂಗಿನವನು, ಕೆಂಪು ಬಣ್ಣದವನು, ಗುಂಗುರು ಕೂದಲ ಚಪ್ಪರದ ಕೆಳಗೆ  ಕಪ್ಪು ದ್ರಾಕ್ಷಿ ಕಣ್ಣಿನವನು. ನಕ್ಕಾಗ ಬಿಳಿಯ ಮುತ್ತಿನ ಸಾಲು ಹಲ್ಲಿನವನು. ನೋಡುತ್ತಿದ್ದರೆ ಇನ್ನೊಂದು ಗಳಿಗೆ ಅಂಗೆ ನೋಡಾನೆಂಬ ವೈಭೋಗದುಡುಗ.

ಈ ಮದುವೆಗೆ  ಜನ ಜಾಸ್ತಿ ಸೇರಂಗಿಲ್ಲ, ಪೋಲೀಸಿನವರ ಪರ್‌ಮೀಷನ್ ಬೇಕು, ಇರಲಿ ಬಿಡು ನೂರು ಜನ ಸಾಕು, ಮನಸ್ಸೆಂಬ ಲೆಕ್ಕಾಚಾರದ ಬುಕ್ಕಿನೊಳಗೆ ಸಿದ್ದತೆಯಾಯಿತು. ಮದುವೆ ಹೆಣ್ಣಿನ ಮೇಂದಿ ಹಚ್ಚಿಕೊಂಡ ಚಿತ್ತಾರದ ಕೈ ಬೆರೆಳುಗಳು. ನಿಗಿ ನಿಗಿಯೆಂಬ ನಕ್ಷತ್ರಗಳಿಗೆ ಸವಾಲೊಡ್ಡಿದ್ದವು, ಮುಂಗೈಯಿಂದ ಮೊಣಕಯಿಯ ವರೆಗು ಪೇರಿಸಿಕೊಂಡಿದ್ದ. ಹಸಿರು ಸಾಣೆ ಬಳೆ, ಗಂಡೆಂಬ ಕುಡಿ ನೋಟಕ್ಕೆ ಗಲ ಗಲನೆಂದು ನಗುತ್ತಿದ್ದವು. ಇದ್ದ ಹತ್ತು ಜನ ಹೆಂಗಸರ ಗುಂಪಲ್ಲಿ, ರಾತ್ರೆಲ್ಲಾ ರವ ರವನೆಂದ ಕತ್ತಲೆಗೆ, ಪುರುಸೊತ್ತಿಲ್ಲದ ಕತ್ತಿ ಬೀಸಿ.

ಹೆಣ್ಣು ಗಂಡಿಗೆ ಅಚ್ಚಿದ ಎಣ್ಣೆ ಅರಿಶಿನಕ್ಕೆದರಿ. ಮೂತಿ ಮುಖದಲ್ಲಿದ್ದ ಮಾಸ್ಕಗಳು ಕಾಣಲೆ ಇಲ್ಲ. ಇಂತ ಕೊರೋನವೆಂಬ ಕಾರು ಬಾರಿನ ನಡುವೆ. ಗುಂಪು ಗುಂಪಾಗಿ, ಇವಳುಸಿರು ಅವಳಿಗು ತಾಕಿ, ಅವಳುಸಿರು ಇವಳಿಗು ಬೀಸಿ, ಹೆಣ್ಣೆಂಬೋಳಿಗೆ ಉಡಿಸಿದ ಬಿಳಿ ಬಣ್ಣದ ಮ್ಯಾಲೆ ಜರಿ ಬುಟ್ಟವಿರುವ ದಾರೆ ಮೂರ್ತದ ಸೀರೆ. ಗರಿ ಗರಿಯಾಗಿ ಅವಳು ಪುಟ್ಟ ಗೌಡತಿಯೆಂಬೋ ಗೊಂಬೆಯಂಗಿದ್ದಳು.

 ಲೇ ಯಾಕಲಾ ಈ ನೆಗಡಿ ಕೆಮ್ಮೆಂಬೊ ಕೊರೋನಾದ ನಡುವೆ. ಇಷ್ಟೊಂದು ಚೇರು ಟೇಬಲ್ಲು ತರ್‌ಸಿದ್ದೀಯಾ? ಯಾರ್ ಬರ್‌ತ್ತಾರೋ, ನಮ್ಮ ಅಣ್ಣ ತಮ್ಮನೆ ಆಗ್ ಬೇಕಿದ್ದ ಸಿದ್ದಲಿಂನೆಂಬೋನ ಮಾತು. ಏ ಕೊರೋನ್‌ವೆ ಅಲ್ಲ ಕಣಲ, ತಲೆ ಕೆಳಕ್ಕ ಬೀಳತೈತೆ ಅಂದ್ರು, ನಾನೇಳಿರೊ ಜನವೆಲ್ಲ ಬಂದೇ ಬರ್‌ತ್ತಾರೆ ಎಂದ. ಅಣ್ಣಯ್ಯನ ಲೆಕ್ಕಾಚಾರವನ್ನ, ಆ ಕೆಂಪು ಮತ್ತು ನೀಲಿ ಬಣ್ಣದ ಚೇರುಗಳೆ ನುಂಗುತ್ತಿದ್ದವು.

ಬೆಳಗಿನ ಜಾವ ಐದು ಮೂವತ್ತರಿಂದ, ಆರು ಮೂವತ್ತರೊಳಗೆ ತಾಳಿ ಕಟ್ಟುವ, ತರಾವರಿ ಪೂಜೆ ಮಂತ್ರಗಳೆಲ್ಲ ಮುಗಿದು, ನೆಟ್ಟಗಿನ್ನು ಸೂರ್ಯನೆಂಬೋನು ಕಣ್ಣೆ ಉಜ್ಜಿರಲಿಲ್ಲ. ರಾತ್ರಿ ಸರುವೊತ್ತಿನೊಳಗೆ ಮಾಡ್ಸಿರೊ, ಉಳಿ, ಪಲ್ಯ, ಅನ್ನ ಕೋಸಂಬರಿ, ಸಾರು ಕೀರು, ಕರ್ಚೆ ಆಗ್‌ಲಿಲ್ಲವಲ್ಲ? ಈಗ್ ಯಾರ್ ತಲಿಗ್ ಕಟ್ಟಬೇಕು, ಆವತ್ತು ದೊಡ್ಡುಡುಗಿಯ ಮದುವೇಲಿ ನೂಕು ನುಗ್ಗಲಿನ ಜನ. ಇವತ್ತು ಚಿಕ್ಕುಡುಗಿಯ ಮದುವೇಲಿ ನೊಣ ಹೊಡಿಯವರು ಇಲ್ಲದಂಗಾದ್ರು. ಇಂಗೆ ಇರ್‌ತ್ತೀವೇನೊ ಎಂಬ ಭ್ರಮೇಲಿದ್ದ ಕಾಲದಾ ಕನ್ನಡಿಯೆನ್ನುವುದನ್ನ.

ಯಾವ್ ಭಗವಂತ ಉಲ್‌ಟಾ ತಿರುಗಿಸಿ ಬಿಟ್ನೊ? ಅಣ್ಣಯ್ಯನ ಎದೆ ತುಂಬ ಬುಸುಗರಿದ ಬಿಸಿಯುಸಿರು. ಅತ್ತಿಗೆಯ ಕುತ್ತಿಗೆ ಸೋಕಿ, ನಾನು ಮಾಡಿದ್ದು ತಪ್ಪಾಯಿತು ಉಣ್ಣುದೇ ಹೋಗ್ ಬ್ಯಾಡ್ರಿ ಅನ್ನುತ್ತ, ಕೈಯ್ಯಿಡುಕೊಂಡು ಬೇಡ್ ಕೊಂಡೆ, ಕೇಳಿಸಿಕೊಳ್ಳದೆ ದೌಲ್ಲತ್ತಿನ ದಿಬ್ಬ ಹತ್ತಿ ಹೋದರು. ಇವತ್ತು ನೋಡು ಕರಿಯವರು ಇಲ್ಲದಂಗಾದರು. ಉಣ್ಣೋವರು ಇಲ್ಲದಂಗಾದ್ರು, ಕಾಲದಾ ಕನ್ನಡಿಯೆಂಬೋದು ಇನ್ಯಾರ್ ಕಡಿಕ್ಕೆ ತಿರುಗತೈತೊ, ಕಾದು ನೋಡ್‌ಬೇಕು. ಅಣ್ಣಯ್ಯ ಉಣ್ಣು ಬೇಕಿದ್ದ ಬಾಳೆ ಎಲೆಯ ಮೇಲೆ ಸೂರ್ಯ ಪರಮಾತುಮನೆಂಬೋನು, ಕಣ್ಣು ಹಿಗ್ಗಲಿಸಿ ಕಾವೆಂಬ ದಿಮಾಕಿನ ತುಪಾಕೆಯನ್ನಾರಿಸುತ್ತಿದ್ದ. ಅತ್ತಿಗೆ ಮಾತ್ರ ಅಂಗೆ ಚಿಂತೆಗಳ ಕಂತೆ ಹೊತ್ತುಕೊಂಡು. ಕಂಬ ನಿಂತಂಗೆ ನಿಂತೇ ಇದ್ದಳು.            

‍ಲೇಖಕರು Avadhi

March 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: