ಕಾಯ್ಕಿಣಿ ಕಲರವ ಮತ್ತು ನೀರವ ಮೌನ..

 

ದಕ್ಷಿಣ ಮುಂಬೈನ ತುದಿಭಾಗದಲ್ಲಿರುವ ಕಾಲಾಘೋಡಾ ಮುಂಬೈನ ಕಲೆ ಸಾಹಿತ್ಯ ಸಂಸ್ಕೃತಿಯ ಹೃದಯವಿದ್ದಂತೆ.

ಒಂದು ಬದಿ ವಿಟಿ ಸ್ಟೇಶನ್, ಫ್ಲೋರಾ ಪೌಂಟನ್, ಟೌನ್ ಹಾಲ್ ಮತ್ತು ಇನ್ನೊಂದು ಬದಿ ಓವಲ್ ಗ್ರೌಂಡ್, ಗೇಟ್ ವೇ, ತಾಜ್ ನಂಥ ಮುಂಬೈ ಲ್ಯಾಂಡ್ ಮಾರ್ಕ್‌ಗಳ ನಡುವೆ ಇರುವ ಪುಟ್ಟ ಪ್ರದೇಶವಿದು.

ಪ್ರಿನ್ಸ್ ಆಫ್ ವೇಲ್ಸ್ ಕೂತ ಕಪ್ಪು ಕುದುರೆಯ ಕಲ್ಲಿನ ವಿಗ್ರಹವು ಅಲ್ಲಿದ್ದ ಕಾರಣ ಈ ಪ್ರದೇಶಕ್ಕೆ ಕಾಲಾ ಘೋಡಾ ಹೆಸರು ಬಂದದ್ದು. ಆ ವಿಗ್ರಹವನ್ನು ಐವತ್ತು ವರ್ಷ ಹಿಂದೆಯೇ ಅಲ್ಲಿಂದ ಸ್ಥಳಾಂತರಿಸಲಾಯಿತಾದರೂ ಆ ಹೆಸರು ಮಾತ್ರ ಹಾಗೇ ಉಳಿದಿತ್ತು. ಕಳೆದ ವರ್ಷ ಸವಾರನಿಲ್ಲದ ಬೇರೊಂದು ಕಪ್ಪು ಕುದುರೆಯನ್ನು ಮರುಸ್ಥಾಪಿಸಿ ಕಾಲಾಘೋಡಾ ಹೆಸರನ್ನು ಅನ್ವರ್ಥಗೊಳಿಸಲಾಗಿದೆ.

ಪ್ರಾಚೀನ ಇಮಾರತುಗಳು, ಆರ್ಟ್ ಗ್ಯಾಲರಿಗಳು, ಮ್ಯೂಸಿಯಮ್‌ಗಳಿಂದ ಸುತ್ತುವರಿದಿರುವ ಕಾಲಾಘೋಡಾ ಏರಿಯಾ ಎಲ್ಲ ಕಲಾವಿದರ ಸಾಹಿತ್ಯಾಸಕ್ತರ, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿಯ ಪ್ರಸಿದ್ಧ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ವರ್ಷವಿಡೀ ಕಲಾವಿದರ ಕಲಾಪ್ರದರ್ಶನ ನಡೆಯುತ್ತಿರುತ್ತದೆ.

ಖ್ಯಾತನಾಮರೂ, ಕಣ್ಣುಗಳಲ್ಲಿ ಕನಸುಗಳು ಮಿಂಚುವ ತರುಣತರುಣಿಯರೂ ಇಲ್ಲಿ ಕಾಣಸಿಗುತ್ತಾರೆ. ವಿಶ್ವವಿಖ್ಯಾತ ಕಲಾವಿದ ಎಮ್ ಎಫ್ ಹುಸೇನ್ ಇದೇ ಏರಿಯಾದಲ್ಲಿ ಬರಿಗಾಲಲ್ಲಿ ನಡೆಯುತ್ತಾ ಹೋಗುತ್ತಿದ್ದದನ್ನು ನಾನು ಕಂಡಿದ್ದೇನೆ. ಸಭ್ಯ ಕ್ರಿಕೆಟರ್ ಎಂದು ಖ್ಯಾತಿ ಪಡೆದಿದ್ದ ಕ್ರಿಕೆಟರ್ ವೆಂಗಸರ್ಕಾರ್ ಕೈ ಕುಲುಕಿದ್ದು ಇದೇ ಕಾಲಾಘೋಡಾ ಏರಿಯಾದಲ್ಲೇ.

ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್ ನಡೆಯುತ್ತಿದ್ದು ಅದೊಂದು ಆಧುನಿಕ ಜಾನಪದದ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ಒಂಬತ್ತು ದಿನಗಳ ವರೆಗೆ ಕಲೆ ಸಂಗೀತ ಸಾಹಿತ್ಯ ನಾಟಕ ಸಿನಿಮಾಗಳಿಂದ ಜನರ, ವಿಶೇಷವಾಗಿ ಯುವಜನರ ಮನಸ್ಸಿನಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತದೆ.

ಫೆಸ್ಟಿವಲ್ಲಿನ ಭಾಗವಾದ ಲಿಟರರಿ ಉತ್ಸವದಲ್ಲಿ ಈ ಬಾರಿ ಜಯಂತ ಕಾಯ್ಕಿಣಿಯವರೊಂದಿಗೆ ಸಂವಾದವಿತ್ತು. ಡೇವಿಡ್ ಸಾಸೂನ್ ಲೈಬ್ರರಿಯ ಚಿಕ್ಕ ಹಿತ್ತಲಿನಲ್ಲಿ ಮುಸ್ಸಂಜೆ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮವದು. ಜಯಂತರ ಕಥೆಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿ ಹೊರಬಂದಿರುವ “ನೋ ಪ್ರೆಸೆಂಟ್ಸ್ ಪ್ಲೀಸ್ ” ಪುಸ್ತಕದ ಬಗ್ಗೆ ಇನ್ನೋರ್ವ ಆಂಗ್ಲ ಭಾಷೆಯ ಲೇಖಕಿ ಇಂದಿರಾ ಚಂದ್ರಶೇಖರ್ ನಡೆಸಿದ ಚರ್ಚೆಯಲ್ಲಿ ಜಯಂತ ಎಂದಿನ ಲವಲವಿಕೆಯಿಂದ ಪಾಲ್ಗೊಂಡಿದ್ದರು.

ವಿಶಿಷ್ಟ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ತಮ್ಮ ಸುತ್ತಲೂ ಉಲ್ಲಾಸವನ್ನು, ಜೀವಂತಿಕೆಯನ್ನು ಸೃಷ್ಟಿಸುವುದು ಜಯಂತರ ಗುಣ. ಮುಂಬೈ ತನ್ನನ್ನು ಬೆರಗುಗೊಳಿಸಿದ್ದನ್ನೂ, ಯಾಂತ್ರಿಕವಾದ ಮುಂಬೈನಂಥ ಮುಂಬೈನಲ್ಲಿ ಸಂವೇದನಾಶೀಲ ಮನಸ್ಸೊಂದು ಉಸಿರಾಡುತ್ತಿರುವುದನ್ನೂ ತಮ್ಮ ನವಿರು ಶೈಲಿಯಲ್ಲಿ ನಿರೂಪಿಸಿದರು. ಮುಂಬೈನ ಕ್ಷಣಕ್ಷಣವೂ ಚಲಿಸುವ ಬದುಕು ಏಕಾಕಿತನದ ಭಾವಕ್ಕೆ ಎಡೆಕೊಡದ್ದನ್ನು ಅರ್ಥಪೂರ್ಣವಾಗಿ ತೆರೆದಿಟ್ಟರು.

“ವರ್ಶಿಪ್ ಈಸ್ ವರ್ಕ್” ಆಗಿದ್ದ ಗೋಕರ್ಣದಿಂದ “ವರ್ಕ್ ಈಸ್ ವರ್ಶಿಪ್” ಆಗಿರುವ ಮುಂಬೈಗೆ ಬಂದಾಗ ಮುಂಬೈ ಹೇಗೆ ತಮ್ಮನ್ನು ಲಿಬರೇಟ್ ಮಾಡಿತು ಎಂಬುದನ್ನು ಎಂದಿನ ತಿಳಿಹಾಸ್ಯದಲ್ಲಿ ಮತ್ತು ಮನಸ್ಪರ್ಶಿಸುವ ಮಾತಿನಲ್ಲಿ ಹಿಡಿದಿಟ್ಟರು. ಇಡೀ ಸಂವಾದ ಇಂಗ್ಲೀಷಿನಲ್ಲಿ ನಡೆದರೂ ಅವರು ಸ್ಪಂದಿಸಿದ್ದು ಅಪ್ಪಟ ಕನ್ನಡ ಮನಸ್ಸಿನಲ್ಲೇ. ಅಕ್ಸೆಂಟುಗಳ ಭಿಡೆಯಿಲ್ಲದೇ ಸಾಫಿಸ್ಟಿಕೇಡೆಡ್ ಲೈನುಗಳ ಹಂಗಿಲ್ಲದೇ ಅನುಭವಗಳನ್ನು ಸಹಜ ಮಾತುಗಳಲ್ಲಿ ನಿವೇದಿಸಿದ್ದು ಆಂಗ್ಲ ಶ್ರೋತೃಗಳಿಗೂ ಫ್ರೆಶ್ ಅನಿಸಿತ್ತು.

ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ಯುವಮನಸ್ಸುಗಳಿಂದ ಕಿಕ್ಕಿರಿದಿದ್ದ ಈ ಏರಿಯಾ ಜಾತ್ರೆ ಮುಗಿಯುತ್ತಿದ್ದಂತೆಯೇ ರಾತ್ರಿಬೆಳಗಾಗುವುದರ ಒಳಗೆ ಮತ್ತೆ ಸುದ್ದಿಕೇಂದ್ರವಾಗಿದೆ. ನೀರವ್  ಮೋದಿ ಎಂಬ ವಜ್ರದ ವ್ಯಾಪಾರಿಯ ಶೋರೂಮ್ ಇದೇ ಕಾಲಾಘೋಡಾ ಏರಿಯಾದಲ್ಲಿ ಇರುವುದೇ ಇದಕ್ಕೆ ಕಾರಣ.

ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಪಂಗನಾಮ ಹಾಕಿದ ಆತನ ಜಾತಕ ಜಾಲಾಡಲು ಬೀಡುಬಿಟ್ಟಿರುವ ತನಿಖಾ ಸಂಸ್ಥೆಗಳೂ, ಮೀಡಿಯಾದವರು ತಮ್ಮಕ್ಯಾಮರಾ ಸಜ್ಜಾಗಿಟ್ಟು ಕ್ಷಣಕ್ಷಣದ ಸುದ್ದಿಗಾಗಿ ಕಾದು ಕೂತಿದ್ದಾರೆ. ನಾನು ಈಗ ಬರೆಯಲು ಹೊರಟಿದ್ದು ಈ ನೀರವ್ ಮೋದಿಯ ಲಫಡಾ ಬಗ್ಗೆ ಅಲ್ಲ. ಆದರೆ ಈ ದೋಖಾ ವಜ್ರ ವ್ಯಾಪಾರಿಯ ಶೋರೂಮಿನ ಪಕ್ಕದಲ್ಲೇ ಇದ್ದ, ಸಂಗೀತ ಪ್ರೇಮಿಗಳ ಹೃದಯವಾಗಿದ್ದ ರಿದಂ ಹೌಸ್ ತನ್ನ ಲಬ್ ಡಬ್ ಸ್ಥಗಿತಗೊಳಿಸಿದ ನೋವು ಮತ್ತೆ ಮರುಕಳಿಸಿದ ಬಗ್ಗೆ!

ಹತ್ತಾರು ವರ್ಷಗಳ ಹಿಂದೆ ಕನ್ನಡದ ಖ್ಯಾತ ಲೇಖಕರಾದ ಪ್ರೊ. ರಹಮತ್ ತರೀಕೆರೆಯವರು ಕಳೆದ ಶತಮಾನದ ನಲವತ್ತರ ದಶಕದ ಹಾಡುನಟಿ ಅಮೀರಬಾಯಿ ಕರ್ನಾಟಕಿ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಸಮಯವದು. ಬಿಜಾಪುರ ಬೀಳಗಿಯಿಂದ ಮುಂಬಯಿಗೆ ಬಂದ ಸಹೋದರಿಯರಾದ ಅಮೀರಬಾಯಿ ಮತ್ತು ಗೋರಾಬಾಯಿ ತಮ್ಮ ಸಂಗೀತ ಮತ್ತು ಅಭಿನಯದಿಂದ ಆ ಕಾಲದಲ್ಲಿ ಬಾಲಿವುಡ್ಡಿನಲ್ಲಿ ಗಳಿಸಿದ ಯಶಸ್ಸು, ಎದುರಿಸಿದ ಸವಾಲುಗಳ ಬಗ್ಗೆ ಅವರು ಪುಸ್ತಕ ಬರೆಯುತ್ತಿದ್ದ ಸಂದರ್ಭ. ರಹಮತರ ಸೂಕ್ಷ್ಮತೆ, ನವಿರು ಭಾಷೆ ಮತ್ತು ಪ್ರೀತಿಯ ವ್ಯಕ್ತಿತ್ವದಿಂದಾಗಿ ಅವರ ಅಭಿಮಾನಿಯಾಗಿದ್ದ ನಾನು ಅವರನ್ನು ಮುಂಬಯಿಗೆ ಬಂದಾಗ ಭೇಟಿಮಾಡಿ ಸ್ನೇಹ ಗಳಿಸಿಕೊಂಡಿದ್ದೆ.

ಆ ಸ್ನೇಹದಲ್ಲೇ ಒಮ್ಮೆ ಅವರು ಅಮೀರಬಾಯಿ ಕರ್ನಾಟಕಿ ಹಾಡುಗಳು ಸಿಕ್ಕಿದರೆ ಕಳಿಸು ಎಂದು ಪತ್ರ ಬರೆದರು. ನಾನೇನು ಸಂಗೀತದಲ್ಲಿ ಹೆಚ್ಚಿನ ತಿಳುವಳಿಕೆಯಿದ್ದವನಲ್ಲ. ನಮ್ಮ ಅಣ್ಣಾವ್ರ ಹಾಡುಗಳೇ ಪರಮ ಸಂಗೀತವೆಂದು ತಿಳಿದುಕೊಂಡಿದ್ದವನು.  ಅಮೀರಬಾಯಿ ಹಾಡುಗಳ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ಗುರುಗಳು ದೂರದ ಹಂಪಿಯಿಂದ ಕೇಳಿದ್ದಾರೆ ಎಂದು ಪರಿಚಯದ ಸಂಗೀತಪ್ರೇಮಿಗಳನ್ನು ಆ ಬಗ್ಗೆ ವಿಚಾರಿಸುತ್ತಾ ಹೋದೆ. ಮುಂಬಯಿಯಲ್ಲಿ ಸಾಹಿತ್ಯ ಹಾಗೂ ಸಂಗೀತ ಎರಡೂ ಕ್ಷೇತ್ರಗಳಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ವಿದುಷಿ ಡಾ. ಶ್ಯಾಮಲಾ ಪ್ರಕಾಶ್ ರಿದಂ ಹೌಸ್ ನಲ್ಲಿ ಟ್ರೈ ಮಾಡು ಅಲ್ಲಿ ನಿನಗೆ ಆಕೆಯ ಹಾಡುಗಳು ಸಿಗಬಹುದು ಎಂದರು. “ರಿದಂ ಹೌಸ್” ಎಂಬ ಹೆಸರೇ ನನ್ನಲ್ಲಿ ನವಿರು ಕಂಪನ ಉಂಟುಮಾಡಿತ್ತು!

ರಿದಂ ಹೌಸ್ ದೂರವೇನೂ ಇರಲಿಲ್ಲ. ಕಾಲಾಘೋಡಾದಲ್ಲಿ ಮೊದಲು ಕಣ್ಣಿಗೆ ಬೀಳುವುದೇ ಈ ರಿದಂ ಹೌಸ್.   ರಸ್ತೆಯೊಂದು ಸೀಳಿ ಎರಡಾಗುವಲ್ಲಿ ಅರ್ಧವೃತ್ತಾಕಾರದ ಮುಂಭಾಗವನ್ನು ಹೊಂದಿರುವ ಚಿಕ್ಕ ಕಟ್ಟಡ ಅದು. ಒಳಗೂ ಹೆಚ್ಚು ವಿಸ್ತಾರವಾಗಿಲ್ಲ. ಒಂದು ಚಿಕ್ಕ ಮಂದಿರವನ್ನು ಪ್ರವೇಶಿಸಿದ ಅನುಭವಾಗುತ್ತದೆ. ಆದರೆ ಅಷ್ಟು ಕಿರಿದಾದ  ಜಾಗದಲ್ಲೇ   ಅಪರೂಪದ ಹಾಡುಗಳ ಸಿನಿಮಾಗಳ ಸಿಡಿಗಳು, ಡಿವಿಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರು. ಗಜಲ್‌ಗಳು, ಭಜನೆಗಳು, ಕವ್ವಾಲಿಗಳು, ಕ್ಲಾಸಿಕಲ್‌ಗಳು, ಸುಗಮ ಸಂಗೀತ ಎಲ್ಲವೂ ಇದ್ದವು.

ಸುರೈಯ್ಯಾ, ಸಂಶದ್ ಬೇಗಂ, ಲತಾ ಮಂಗೇಶ್ಕರ್, ಮಹಮದ್ ರಫಿ ಎಲ್ಲರ ಧ್ವನಿಮುದ್ರಿಕೆಗಳೂ ಅಲ್ಲಿ ರಿಂಗುಣಿಸುತ್ತಿದ್ದವು. ಸಾವಿರಾರು ಹಾಡುಗಳನ್ನು ಸ್ಟೋರ್ ಮಾಡಿಟ್ಟಿರುವ ಮ್ಯೂಸಿಕಲ್ ಬೂತ್ ಕೂಡ ಇತ್ತು. ನಮ್ಮಿಷ್ಟದ ಹಾಡುಗಳನ್ನು ಹುಡುಕಿ ಹೆಡ್ ಫೋನ್ ಬಳಸಿ ಅಲ್ಲೇ ಕೇಳಿ ಆನಂದಿಸಬಹುದಿತ್ತು. ಹಳಬರು ಹಳೆಯ ಮಧುರ ಹಾಡುಗಳನ್ನೂ, ಹತ್ತಿರದ ಕಾಲೇಜಿನ ಯುವಕ ಯುವತಿಯರು ಹೊಸ ಹಾಡುಗಳನ್ನೂ ಕೇಳಿಸಿಕೊಂಡು ನಲಿಯುತ್ತಿದ್ದ ಜೀವಂತಿಕೆ ತುಂಬಿರುತ್ತಿದ್ದ ಜಾಗವದು.

ಸುಮಾರು ಎಪ್ಪತ್ತು ವರ್ಷಗಳ ಹಿಂದಿನಿಂದಲೂ ಈ ರಿದಂ ಹೌಸ್ ಸಾವಿರಾರು ಸಂಗೀತ ಪ್ರೇಮಿಗಳ ಸ್ವರ ನಲ್ದಾಣವಾಗಿತ್ತು.  ಒಂದು ಕಾಲದಲ್ಲಿ  ಖ್ಯಾತ ಸಂಗೀತ ನಿರ್ದೇಶಕರಾದ ಕಲ್ಯಾಣಜಿ ಆನಂದಜಿ, ಶಮ್ಮಿ ಕಪೂರ್, ಪಂಡಿತ ರವಿಶಂಕರ್ ಇವರೆಲ್ಲ ಖಾಯಂ ಆಗಿ ಭೇಟಿ ನೀಡುತ್ತಿದ್ದರಂತೆ. ಪೀಟರ್ ಆಂಡ್ರೆ , ಜಕೀರ್ ಹುಸೈನ್, ಏ ಆರ್ ರಹಮಾನ್ ಕೂಡ ರಿದಂ ಹೌಸ್‌ಗೆ ಬಂದು ಹೋಗಿದ್ದಾರೆ. ಇಲ್ಲಿ ಸಿಹಿ ಹಂಚುವ ಮೂಲಕ ಲತಾ, ಮೊಹಮ್ಮದ್ ರಫಿ, ಕಿಶೋರಕುಮಾರರಂಥ ತಮ್ಮ ನೆಚ್ಚಿನ ಹಾಡುಗಾರರ ಅಥವಾ ದಿಲೀಪಕುಮಾರ, ದೇವಾನಂದರಂಥ ಸ್ಟಾ‌ರ್‌ಗಳ ಜನುಮದಿನವನ್ನು ಆಚರಿಸುವ ಸಿನಿಮಾ-ಸಂಗೀತ ಪ್ರೇಮಿಗಳೂ ಇದ್ದರಂತೆ!

ಇಂಥ ಸಂಗೀತ ಕಾಶಿಯೆನಿಸಿದ್ದ ರಿದಂ ಹೌಸ್ ಇತ್ತೀಚೆಗೆ ತನ್ನ ಮಧುರ ಧ್ವನಿಯನ್ನು ಕಳೆದುಕೊಂಡಿತು.   ಸಂಗೀತ ಪ್ರೇಮಿಗಳ ಸಂಖ್ಯೆ ಅದೆಷ್ಟೋ ಪಟ್ಟು ಹೆಚ್ಚಾಗಿದ್ದರೂ  ಇಂಟರ್ನೆಟ್ ಜಮಾನಾದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಾಡುಗಳನ್ನು ಸುಲಭವಾಗಿ ಡೌನಲೋಡ್ ಮಾಡಿಕೊಂಡು ಆಲಿಸುವ ಸೌಲಭ್ಯದಿಂದಾಗಿ ಈಗ ಮ್ಯೂಸಿಕ್ ಸ್ಟೋರ್‌ಗೆ  ಹೋಗುವ ಪ್ರಮೇಯವೇ ಇಲ್ಲವಾಗಿದೆ. ಹೀಗಾಗಿ ಮುಂಬೈನ ಹಲವಾರು ಮ್ಯೂಸಿಕ್ ಸ್ಟೋರ್‌ಗಳು ಮುಚ್ಚಿದವು.

ರಿದಂ ಹೌಸ್ ಭಾವನಾತ್ಮಕ ಕಾರಣಗಳಿಗಾಗಿ ಒಂದಷ್ಟು ದಿನ ಜೀವ ಉಳಿಸಿಕೊಂಡಿತಾದರೂ ಅಂತಿಮವಾಗಿ ಅದೂ ಕೂಡ ಬಾಗಿಲು ಮುಚ್ಚಿತು. ಮುಂಬೈನ ಮಧುರ ಸ್ವರವೊಂದು ಧ್ವನಿ ಕಳೆದುಕೊಂಡಂತಾಯಿತು. ಸಾಮಾನ್ಯರೂ ಮತ್ತು ದಿಗ್ಗಜರೂ ಎನ್ನುವ ಭೇದವೆಣಿಸದೆ ಭಿನ್ನ ಭಾಷೆ, ದೇಶ, ಜಾತಿ, ಧರ್ಮಗಳನ್ನು ಸಂಗೀತದ ಎರಕದಲ್ಲಿ ಬೆಸೆಯುತ್ತಿದ್ದ ಈ ಪುಟ್ಟ ತಾಣವೀಗ ಮುಚ್ಚಿದ ಬಾಗಿಲ ಹಿಂದೆ ಮೌನದಲ್ಲಿ ಸ್ತಬ್ದವಾಗಿದೆ.

ರಹಮತ್ ತರೀಕೆರೆ ಸರ್‌ಗೆ ಅಮೀರಬಾಯಿ ಕರ್ನಾಟಕಿ ಹಾಡಿದ ಕೆಲವು ಹಾಡುಗಳನ್ನು ಹುಡುಕಿ ಕಳಿಸಿದ್ದೆನಾದರೂ ಅವೆಲ್ಲ ಆಗಲೇ ಅವರ ಬಳಿ ಇದ್ದ ಪ್ರಖ್ಯಾತ ಹಾಡುಗಳಾಗಿದ್ದವು; ಅವರು ಸುಲಭದಲ್ಲಿ ಸಿಗದ ಅಥವಾ ಅಪರೂಪದ ಹಾಡುಗಳ ಹುಡುಕಾಟದಲ್ಲಿದ್ದರು ಎನ್ನುವುದು ಆಮೇಲೆ ತಿಳಿಯಿತು. ಆದರೆ ಅಮೀರಬಾಯಿ ನೆಪದಲ್ಲಿ ಪ್ರವೇಶಿಸಿದ್ದ ರಿದಂ ಹೌಸ್ ಮುಂದೆ ನನ್ನ ನೆಚ್ಚಿನ ತಾಣಗಳಲ್ಲಿ ಒಂದಾಗಿ ಬಿಟ್ಟಿತ್ತು. ಈಗ ಕಾಲಾಘೋಡಾದಲ್ಲಿಯೂ ನನ್ನ ಮನಸಿನಲ್ಲಿಯೂ  ನಿರ್ವಾತವೊಂದು ನಿರ್ಮಾಣವಾಗಿದೆ. ರಿದಂ ಹೌಸ್‌ನಲ್ಲಿ  ಕೇಳಿದ್ದ ಅಮೀರಬಾಯಿ ಕನ್ನಡದಲ್ಲಿ ಹಾಡಿದ “ಯಾರ ಮುಂದ ಹೇಳಬೇಕ ಮರುಗುವುದ ಜೀವ…” ಹಾಡೇ ಈಗಿನ ಭಾವಕ್ಕೆ ಧ್ವನಿಯಾಗಿದೆ!

ಜೀವ ವಿಕಾಸದ ಪಳೆಯುಳಿಕೆಗಳನ್ನು ಶೋಧಿಸಿ ಕಾದಿಡುವ ನಾವು ಭಾವ ವಿಕಾಸದ ಭಾಗವಾದ ಇಂಥ  ಹೆಗ್ಗುರುತುಗಳನ್ನು ಅಳಿದು ಹೋಗಲು ಬಿಡಬಾರದಿತ್ತು ಅನಿಸುತ್ತದೆ. ಕಾಲಾಘೋಡಾ ಅಸೋಸಿಯೇಶನ್‌ಗೂ, ಇತರ ಸಾಂಸ್ಕೃತಿಕ ಕಾಳಜಿಯ ಸಂಘ ಸಂಸ್ಥೆಗಳಿಗೂ ಅಥವಾ ಸರಕಾರಕ್ಕೂ “ರಿದಂ ಹೌಸ್” ಅನ್ನು ಒಂದು ಹೆರಿಟೇಜ್ ಸ್ಮಾರಕವಾಗಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ!

ಒಂದು ತಲೆಮಾರಿನವರ ಹೃದಯ ಮಿಡಿತಕ್ಕೆ ಧ್ವನಿಯಾದ ರಿದಂ ಹೌಸ್‌ನ್ನು ವಜ್ರದ ವ್ಯಾಪಾರಿಗಳು ಖರೀದಿಸಿದ್ದಾರಂತೆ!  ಇದೇ ಜಾಗದಲ್ಲಿ ಸಧ್ಯದಲ್ಲಿ ಝಗಮಗಿಸುವ ಆಭರಣಗಳ ಶೋರೂಮ್ ತೆರೆಯಬಹುದು. ಮೇಲ್ವರ್ಗದವರ, ಶ್ರೀಮಂತರ ಪ್ರತಿಷ್ಠೆಯ ಒಣಜಂಬದ ಕೋಳಿಯಾಗಿ ಧ್ವನಿಗೈಯಬಹುದು. ಪಕ್ಕದ ನೀರವ್ ಮೋದಿಯ ಜ್ಯುವೆಲ್ಲರಿ ಶೋರೂಮಿನ ದೋಖಾ ಪ್ರಕರಣದ ಗೌಜಿಯಲ್ಲಿ ರಿದಂ ಹೌಸ್ ಒಂಟಿಯಾಗಿ ಬಿಕ್ಕಳಿಸುತ್ತಿರುವಂತೆ ಅನಿಸುತ್ತಿದೆ.

‍ಲೇಖಕರು Avadhi GK

February 24, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

    • ರಾಜೀವ ನಾಯಕ

      ನಾದಾಲಯದ ಲಯ..ಸರಿಯಾಗಿ ಹೇಳಿದಿರಿ ಸರ್

      ಪ್ರತಿಕ್ರಿಯೆ
  1. Girijashastry

    ಬಹಳ ಆಪ್ತವಾದ ಬರಹ. ಒಮ್ಮೆ ರಿದಂಹೌಸ್ ಹೊಕ್ಕ ನಾನು ಅದರೊಳಗೆ ಕಳೆದು ಹೋಗಿದ್ದೆ.

    ಪ್ರತಿಕ್ರಿಯೆ
    • ರಾಜೀವ ನಾಯಕ

      ಥ್ಯಾಂಕ್ಸ್ ಗಿರಿಜಾ ಮ್ಯಾಡಮ್ ಓದಿದ್ದಕ್ಕೆ…ನಿಜ, ಈಗ ರಿದಂ ಹೌಸೇ ಕಳೆದುಹೋಗಿದೆ

      ಪ್ರತಿಕ್ರಿಯೆ
  2. Rahamath tarikere

    ನನಗೆ ಬೇಕಾದ ಹಾಡು ಸಿಕ್ಕಿರಲಿಕ್ಕಿಲ್ಲ. ಆದರೆ ರಾಜೀವ್ ಅವರಂಥ ಸುಂದರ ಮನಸಿನ ಕತೆಗಾರ ಸಿಕ್ಕರು. ಮುಂಬೈ ಲೋಕದ ಇಂಥ ಸಾಂಸ್ಕ್ರುತಿಕ ತಾಣಗಳ ಬಗ್ಗೆ ಬರೆಯುವ ತಿಳಿವು ಸಂವೇದನೆ ದಿ. ಪ್ರಕಾಶ ಬುರ್ಡೆ ಅವರಿಗಿತ್ತು. ಅದನ್ನು ಈಗ ರಾಜೀವ್ ಮಾಡುತ್ತಿದ್ದಾರೆ.

    ಪ್ರತಿಕ್ರಿಯೆ
    • ರಾಜೀವ ನಾಯಕ

      ಸರ್..ತುಂಬಾ ಥ್ಯಾಂಕ್ಸ್ ಓದಿ ಪ್ರತಿಕ್ರಿಯಿದ್ದಕ್ಕೆ…ನಿಜ ಪ್ರಕಾಶ್ ಬುರ್ಡೆ ಸಾಂಸ್ಕೃತಿಕ ಮನಸ್ಸಿನ ಮನುಷ್ಯರಾಗಿದ್ದರು. ಕನ್ನಡ ಮರಾಠಿ ಹಿಂದಿ ಭಾಷೆಗಳ ಕಲೆ ಮತ್ತು ಕಲಾವಿದರ ಬಗ್ಗೆ ಅವರು ಅಧಿಕೃತವಾಗಿ ಮಾತಾಡಬಲ್ಲವರಾಗಿದ್ದರು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: