ಜೋಯ್ಡಾದ ಒಡಲಿಗೊಂದು ಮುನ್ನುಡಿ..

ಡಾ. ವಿಠ್ಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್  ಅವರ  ‘ಜೋಯ್ಡಾ- ಕಾಡೊಳಗಿನ ಒಡಲು’ ಪುಸ್ತಕಕ್ಕೆ ವಿಶ್ರಾಂತ ನ್ಯಾಯಮೂರ್ತಿ  ಹೆಚ್.ಎನ್. ನಾಗಮೋಹನದಾಸ್ ಅವರು ಬರೆದ ಮುನ್ನುಡಿ ಇಲ್ಲಿದೆ..

 

ಹೆಚ್ ಎನ್ ನಾಗಮೋಹನದಾಸ್

ಭಾರತ ದೇಶದ ಒಟ್ಟು ಭೂಪ್ರದೇಶದ ಶೇ. 24.16 ರಷ್ಟು ಪ್ರದೇಶದಲ್ಲಿ ಅರಣ್ಯವಿದೆ. ಈ ಅರಣ್ಯ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಸರಿಸುಮಾರು 250 ಮಿಲಿಯನ್ ಜನರು ವಾಸವಾಗಿದ್ದಾರೆ. ಇವರ ಪೈಕಿ ಸುಮಾರು 100 ಮಿಲಿಯನ್‍ನಷ್ಟು ಗಿರಿಜನರು ಉಳಿದ 150 ಮಿಲಿಯನ್‍ನಷ್ಟು ಅರಣ್ಯ ವಾಸಿಗಳು. ಕೆಲವು ವರ್ಷಗಳ ಹಿಂದೆ ಗಿರಿಜನರು ಮತ್ತು ಅರಣ್ಯವಾಸಿಗಳು ಸ್ವಾವಲಂಬಿಗಳಾಗಿ, ಸ್ವಾಭಿಮಾನದಿಂದ ಮತ್ತು ಸಂತೋಷದಿಂದ ಜೀವಿಸುತ್ತಿದ್ದರು.

ಆದರೆ ಇತ್ತೀಚಿನ ಸರ್ಕಾರದ ನೀತಿಗಳಿಂದ ಇವರು ದಿನೇದಿನೇ ಅರಣ್ಯ ಉತ್ಪಾದನೆಯ ಮೇಲೆ ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ಅಭಿವೃದ್ದಿ ಮತ್ತು ಅರಣ್ಯದಲ್ಲಿ ಗಣಿಗಾರಿಕೆಯಿಂದ ಇವರನ್ನು ಬಲವಂತವಾಗಿ ಸ್ಥಳಾಂತಗೊಳಿಸಲಾಗಿದೆ ಮತ್ತು ಗೊಳಿಸಲಾಗುತ್ತಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಸರಿಯಾದ ಪುನರ್ ವಸತಿ ಕಲ್ಪಿಸಿಲ್ಲ. ತಮ್ಮ ಭಾಷೆ, ಸಂಸ್ಕೃತಿ, ಕಲೆ ಇತ್ಯಾದಿಗಳು ನಶಿಸುತ್ತಿವೆ ಮತ್ತು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದರ ಜೊತೆಗೆ ದಿನನಿತ್ಯ ಸಮಸ್ಯೆಗಳಾದ ಹಸಿವು, ಬಡತನ, ಅನಾರೋಗ್ಯ, ವಸತಿಹೀನತೆ, ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆ ಇತ್ಯಾದಿಗಳಿಂದ ನರಳುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಯೆಂದರೆ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯ ಸುಮಾರು ಶೇ. 75 ರಷ್ಟು ಪ್ರದೇಶದಲ್ಲಿ ಅರಣ್ಯವಿದೆ. ಈ ಅರಣ್ಯದಲ್ಲಿ ಸಿದ್ಧಿ, ಕುಣಬಿ, ಗೊಂಡ, ಗೌಳಿ, ಹಾಲಕ್ಕಿ ವಕ್ಕಲಿಗರು ಇತ್ಯಾದಿಯಾಗಿ ಹಲವು ಪಂಗಡಗಳ ಗಿರಿಜನರು ಮತ್ತು ಅರಣ್ಯವಾಸಿಗಳು ಜೀವಿಸುತ್ತಿದ್ದಾರೆ. ದೇಶದ ಬೇರೆ ಪ್ರದೇಶದಲ್ಲಿರುವ ಗಿರಿಜನರು ಮತ್ತು ಅರಣ್ಯವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಉತ್ತರ ಕನ್ನಡ ಜಿಲ್ಲೆಯ ಗಿರಿಜನರು ಮತ್ತು ಅರಣ್ಯ ವಾಸಿಗಳು ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳು ಇವರ ಸಮಸ್ಯೆಗಳನ್ನು ಪರಿಹರಿಸಲೆಂದು ಕೆಲವು ಕಾನೂನುಗಳನ್ನು ಮತ್ತು ಕಾರ್ಯಕ್ರಮಗಳನ್ನು ತಂದಿದ್ದಾರೆ.

ಆದರೆ ಅನುಭವದಿಂದ ನಾವು ಕಂಡುಕೊಂಡ ಸತ್ಯವೆಂದರೆ ಶಾಸಕಾಂಗ ತಂದ ಕಾನೂನುಗಳನ್ನು ಮತ್ತು ಕಾರ್ಯಾಂಗ ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದಿಲ್ಲ, ಕೆಲವುಗಳನ್ನು ಅರ್ಧಮನಸ್ಸಿನಿಂದ ಅನುಷ್ಟಾನ ಗೊಳಿಸಲಾಗುತ್ತದೆ ಮತ್ತು ಅನೇಕ ಸಲ ತಂದ ಕಾನೂನುಗಳನ್ನು ಉಲ್ಲಂಘಿಸ ಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಜನರು ರಚಿಸಲಾದ ಕಾನೂನಿನ ಫಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಾನು ಉತ್ತರ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಯಾಗಿದ್ದಾಗ ಜೋಯ್ಡಾದಲ್ಲಿ ಕಾನೂನು ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.

ಇದರ ಉದ್ದೇಶ ಜೋಯ್ಡಾ ಅರಣ್ಯವಾಸಿಗಳ ಮತ್ತು ಗಿರಿಜನರಲ್ಲಿ ಕಾನೂನು ಸಾಕ್ಷರತೆಯನ್ನುಂಟು ಮಾಡುವುದು ಮತ್ತು ಸರ್ಕಾರದಿಂದ ಇವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ತಿಳಿಸಿ ಅವುಗಳನ್ನು ಅವರು ಪಡೆದುಕೊಳ್ಳುವಲ್ಲಿ ನೆರವಾಗುವುದು. ಈ ಕಾರ್ಯಕ್ರಮದಲ್ಲಿ ಜೋಯ್ಡಾದ ಗಿರಿಜನರು ಮತ್ತು ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಟ್ಟಾರೆ ಇಡೀ ದಿವಸದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮ ಯಶಸ್ಸಿಗೆ ಸಾಥ್ ನೀಡಿದ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಶ್ರೀ ಶ್ರೀಶಾನಂದ, ಜಿಲ್ಲಾಧಿಕಾರಿಗಳಾದ ಶ್ರೀ ಬಿ.ಎಸ್. ಕೃಷ್ಣಯ್ಯ, ಲೇಖಕರಾದ ಡಾ. ವಿಠ್ಠಲ ಭಂಡಾರಿ, ಶ್ರೀಮತಿ ಯಮುನಾ ಗಾಂವ್ಕರ್ ಮತ್ತು ವಕೀಲರಾದ ಶ್ರೀ ರವೀಂದ್ರ ನಾಯಕ್‍ರವರನ್ನು ನೆನಪಿಸಿಕೊಳ್ಳಲೇಬೇಕು. ಉತ್ತರ ಕನ್ನಡ ಜಿಲ್ಲೆಯ ಗಿರಿಜನರ ಮತ್ತು ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಶ್ರಮಿಸುತ್ತಿರುವ ಡಾ. ವಿಠ್ಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್ ರವರು “ಜೋಯ್ಡಾ: ಕಾಡೊಳಗಿನ ಒಡಲು” ಎಂಬ ಕೃತಿಯನ್ನು ರಚಿಸಿ ನಾನು ಮುನ್ನುಡಿ ಬರೆದುಕೊಡಬೇಕೆಂಬ ಅಪೇಕ್ಷೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ.

ಇವರು ವಿದ್ಯಾರ್ಥಿಗಳಾಗಿದ್ದಾಗಿನಿಂದ ಹತ್ತಿರದಿಂದ ಅವರನ್ನು ಬಲ್ಲೆ. ಇಡೀ ಜೀವನವನ್ನೇ ಸಮಾಜದ ಸೇವೆಗಾಗಿ
ಸಮರ್ಪಿಸಿಕೊಂಡು ಬದುಕುತ್ತಿರುವವರು. ಈ ಕೃತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗಿರಿಜನರ ಮತ್ತು ಅರಣ್ಯವಾಸಿಗಳ ಜೀವನದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದಾರೆ. ವಿಶೇಷವಾಗಿ ಕುಣಬಿ-ಗೌಳಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಬಗ್ಗೆ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.

ಲೇಖಕರು ಕೇವಲ ಗಿರಿಜನರ ಮತ್ತು ಅರಣ್ಯವಾಸಿಗಳ ಸಮಸ್ಯೆಗಳನ್ನು ಅಧ್ಯಯನ ಮಾಡಿ ಒಂದು ಕೃತಿಯನ್ನು ರಚಿಸಿ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನಾದವರಲ್ಲ, ಬದಲಿಗೆ ಅವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದ್ದಾರೆ. ಎಚ್ಚೆತ್ತ ಜನರನ್ನು ಸಂಘಟಿಸಿ ಒಗ್ಗಟ್ಟಿನಿಂದ ಹೋರಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಅವರ ಹೋರಾಟಗಳಲ್ಲಿ ಭಾಗಿಯಾಗಿ ಕೈಹಿಡಿದು ಅವರನ್ನು ನಡೆಸುತ್ತಾ ಅವರ ಪಾಲಿಗೆ ಬೆಳಕಾಗಿದ್ದಾರೆ.

ಬದುಕು, ಬರಹ ಮತ್ತು ಹೋರಾಟ, ಜೀವನದ ಅವಿಭಾಜ್ಯ ಭಾಗವೆಂದು ನಂಬಿದ ದಾರಿಯಲ್ಲಿ ಮುನ್ನಡೆಯುತ್ತಿರುವ ಡಾ. ವಿಠ್ಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್ ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ಇಂಥಹ ಅನೇಕ ಕೃತಿಗಳನ್ನು ರಚಿಸುವ ಕಾಯಕ ಅವರದಾಗಲಿ. ಈ ಪ್ರಯತ್ನದಲ್ಲಿ ಅವರಿಗೆ ಯಶಸ್ಸುಲಭಿಸಲೆಂದು ಹಾರೈಸುತ್ತೇನೆ.

‍ಲೇಖಕರು Avadhi GK

February 24, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: