ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿದ್ದು ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು.
ಈಗ ಚೈತ್ರಾ ಸರದಿ . ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟಿದ್ದಾರೆ.

ನಿಮ್ಮ ಮನದಾಳದೊಳಗೆ ಉಕ್ಕುತ್ತಿದ್ದರೆ ತಡ ಯಾಕೆ ನೀವೂ ಬರೆದು ಕಳಿಸಿ

ಹೌದು, ಇದು ಜುಗಲ್ ಬಂದಿ.
ಪಾರ್ಲರ್ ಗೂ ನನ್ನ ಹುಡುಗನಿಗೂ ಮಧ್ಯ..
ಚೈತ್ರಾ
ಮೊದಲ ವರ್ಷದ ಪಿ.ಯು ನ ವರೆಗೂ ಪಾರ್ಲರ್ ಮುಖ ಕಂಡವಳಲ್ಲ ನಾನು ! ನಮ್ಮ ಮನೆಯವರೆಲ್ಲರ ಸ್ಪೆಷಾಲಿಟೀ ಎಂದರೆ ಟಿ.ವಿಯಲ್ಲಿ ಬರುವ ಯಾವುದೇ ಕ್ರೀಮ್ ಕೂಡ ಸೋಕದ ಸುಂದರವಾದ ತ್ವಚೆ, ಆದರೆ ಅಷ್ಟೇ ದಪ್ಪವಾದ ಹುಬ್ಬು. ತೆಂಗಿನ ಮರದ ಗರಿಗಳ ರೀತಿ ಪದರಾಗಿ ಒಂದಕ್ಕೊಂದು ಕೂಡಿ ಮುಖದ ಸೌಂದರ್ಯವನ್ನೆಲ್ಲಾ ಹಾಳು ಮಾಡುವ ಈ ಹುಬ್ಬುಗಳನ್ನು ಕಂಡರೆ ಎಲ್ಲಿಲ್ಲದ ಸಿಟ್ಟು ನನಗೆ.
ಮೂರನೇ ತರಗತಿಯಲ್ಲಿದ್ದಾಗ ಮಧ್ಯಾನ ಮನೆಯಲ್ಲಿ ಎಲ್ಲ ಮಲಗಿದ ಹೊತ್ತು. ಆಟವಾಡಲು ಯಾರೂ ಸಿಗದ ಆ ಬೋರಿಂಗ್ ಮಧ್ಯಾಹ್ನ ಅಜ್ಜನ ಕತ್ತರಿ ಸಿಕ್ಕಿತ್ತು. ನನ್ನ ಬದ್ಧ ವೈರಿಯಾದ ನನ್ನ ಹುಬ್ಬು ಅಂದು ನನ್ನ ಕೈಯಲ್ಲಿ ಅಜ್ಜನ ಕತ್ತರಿಯಡಿಯಲ್ಲಿ ಸಿಕ್ಕಿ ನಜ್ಜು-ಗುಜ್ಜಾಗಿತ್ತು. ಅರೆಬರೆ ತಿಂದಂತಾಗಿದ್ದ ನನ್ನ ಹುಬ್ಬನ್ನು ನೋಡಿ ಎಲ್ಲರೂ ಹೌಹಾರಿದ್ದರು. ಆದರೆ ಅಜ್ಜನ ಕತ್ತರಿಯ ರಹಸ್ಯವೆಲ್ಲೂ ಬಯಲಾಗದೆ ಕೊನೆಗೆ ರಾತ್ರಿ ಮಲಗಿರುವಾಗ ಜಿರಳೆ ಬಂದು ಈ ರೀತಿ ಮಾಡಿದೆ ಎಂಬ ನಿರ್ಣಯಕ್ಕೆಲ್ಲರೂ ಬಂದಿದ್ದರು. ಆಗಿನಿಂದಲೂ ನನ್ನ ಬದ್ಧ ದ್ವೇಷಿ ಎಂದರೆ ನನ್ನ ಹುಬ್ಬುಗಳು.
ಎರಡನೇ ಪಿ.ಯುನಲ್ಲಿದ್ದಾಗ ಗಟ್ಟಿ ಧೈರ್ಯ ಮಾಡಿ ಪಾರ್ಲರ್ ಮೆಟ್ಟಿಲು ಹತ್ತಿದ್ದೆ. ನನ್ನ ಹುಬ್ಬುಗಳಿಗೊಂದು ಗತಿ ಕಾಣಿಸಬೇಕಿತ್ತು. ಎಷ್ಟೇ ವೈರತ್ವವಿದ್ದರೂ ನಮ್ಮ ಮಧ್ಯ ಅವುಗಳನ್ನು ಕೀಳಿಸುವಾಗ ಕಣ್ಣಿಂದ ತಾನಾಗೇ ನೀರು ಜಾರಿತ್ತು. ದುಃಖಕ್ಕಲ್ಲ, ನೋವಿನಿಂದ !! ಹೇಗೋ ಮಾಡಿ ಒಂದು ರೂಪ ಸಿಕ್ಕಿತ್ತು ಅವುಗಳಿಗೆ. ಆದರೂ ಇಂಜಿನಿಯರಿಂಗ್ ನ ಕೊನೆಯ ಹಂತದಲ್ಲಿರುವಾಗ ಗೆಳತಿ ಹೇಳಿದ ನೆನಪು, ಏನೇ ಆದ್ರು ನಿನ್ನ ಹುಬ್ಬು ಚನಾಗಿಲ್ವೇ ! ಥೂ, ಯಾಕೆ ಹೀಗೇ ಅನ್ನಿಸಿ ಬಿಟ್ಟಿತ್ತು.
ನೀಟಾಗಿ ತಿದ್ದಿದಂತಿರುವ ಹುಡುಗಿಯರ ಹುಬ್ಬು ನೋಡಿದಾಗಲೆಲ್ಲ ಹೊಟ್ಟೆಯಲ್ಲಿ ಬೆಂಕಿ. ಹಾಗೆ ಪಾರ್ಲರ್ ಮೆಟ್ಟಿಲೇರಿದ್ದ ನಾನಿಂದು ಹೇರ್ ಸ್ಪಾ ಮಾಡಿಸಿಕೊಳ್ಳುತ್ತಾ ಪಾರ್ಲರ್ ಕಿಟಕಿಯಿಂದಾಚೆ ನೋಡಿದೆ. ಕಾಡಿಗೆ ಹಚ್ಚಿದ ಕಣ್ಣುಗಳ ಒಳಗೆ ಮಿಂಚುವ ಬಿಳಿ ಮುಗ್ಧ ಕಣ್ಣುಗಳು ಮರೆಯಾಗಿದ್ದವು. ಫ಼ೇಷಿಯಲ್
ಮಾಡಿಸಿದ ನೋವು ನುಂಗಿದ ತ್ವಚೆಯ ಒಳಗೆ ಮೆತ್ತನೆ ಹೊಳೆಯುವ ರಂಗೇರಿದ ಕೆನ್ನೆಗಳಿದ್ದವು. ಬಣ್ಣ ಹಚ್ಚಿದ ಉಗುರಿನೊಳಗೆ ಶುದ್ಧವಾದ ಬಿಳಿಯ ಪುಟ್ಟ ಉಗುರುಗಳು ನಗುತ್ತಿದ್ದವು. ಕೆಂಪು-ಕಂದು ಬಣ್ಣಗಳಿಂದ ಒಡೆದಿದ್ದ ಕೂದಲುಗಳೊಳಗೆ ರೇಷ್ಮೆಯಂತಹ ಅಮ್ಮನಾರೈಕೆಯಲ್ಲಿ ಬೆಳೆದ ಮಲ್ಲಿಗೆಯೇರಿಸಿಕೊಳ್ಳುತ್ತಿದ್ದ ದಿನಗಳು ಹಾಸ್ಯವಾಡುತ್ತಿದ್ದವು ! ಲಿಪ್ ಕೇರ್ ಗಳ ಮಧ್ಯ ಕೆಂಪಾದ ತುಟಿಗಳು ರಂಗು ಕಳೆದುಕೊಂಡಿದ್ದವು.
ಎಲ್ಲದರ ಮಧ್ಯ ನೆನಪಾಗಿತ್ತು ! ಅಂದು ನಾವಿಬ್ಬರೂ ಜಗಳಾಡಿದ ಆ ದಿನ. ಮದುವೆಯಾದ ಮೇಲೆ ನೀನು ಬ್ಯೂಟಿ ಪಾರ್ಲರ್ ಗೆ ಹೋಗುವ ಹಾಗಿಲ್ಲ ! ನಾನೇನು ವಿಶ್ವ ಸುಂದರಿ ಸ್ಪರ್ಧೆಗೆ ಹೋಗ್ತಾ ಇಲ್ಲ, ಕೊನೇ ಪಕ್ಷ ನನ್ನ ಹುಬ್ಬನಾದ್ರೂ ನೋಡು, ಇದಕ್ಕಾದ್ರೂ ಅಂದ್ರೆ ಮುಖ ತಿರುಗಿಸಿದ ಆತ. ಈಗ ನನ್ನ ಜೀವನದಲ್ಲಿ ಆತನಿಲ್ಲ. ನಾನು ಮಾತ್ರ ಪುನಃ ಪಾರ್ಲರ್ ಕಿಟಕಿಯಾಚೆಗೆ ದಿಟ್ಟಿಸುತ್ತಾ………





Thanks Avadhi 🙂
ಸುಂದರವಾದ ಬರಹ… ನಿರೂಪಣೆ ಇಷ್ಟವಾಯಿತು… ಇನ್ನು ಹೆಚ್ಚು ಬರೆಯಿರಿ…
ಸೌಂದರ್ಯ ಅನ್ನೋದು ದೇವರು ಕೊಟ್ಟಿರೋದು.. ಅದು ಮಾಡ್ಕೊಳ್ಳೋದು (ಕೊಲ್ಲೋದ್) ಅಲ್ಲ !!! ಮನಸ್ಸಿನ ಸೌಂದರ್ಯ ನಾವು ಮಾಡ್ಕೊಳ್ಳೋದು ಅದು ಸುಂದರವಾಗಿದ್ದರೆ ಎಲ್ಲ ಸುಂದರ..Timepass ಗೆ ನಿಮ್ಮ ಲೇಖನ ಚನ್ನಾಗಿದೆ..