ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯುತ್ತಾನೆ ಕಡಲು ನನಗಾಗಿ..

ನಗೆಯ ಹಾಯಿ ದೋಣಿ

ಜಮುನಾ ರಾಣಿ ಹೆಚ್.ಎಸ್.

ದಿಕ್ಕು ತಪ್ಪಿಸುವ
ಸಂಜೆಗತ್ತಲು
ಮಿನುಗಿ ಸರಿಯುವ ಅಲೆಗಳ
ಒರೆತ
ಭೇಟಿ ಮಾಡಲೇಬೇಕು
ಕ್ಷಣ ಹೊತ್ತಿಗಾದರೂ ಪ್ರತಿದಿನ
ನನ್ನೊಳಗಿನ  ನಿನಗೆ
ಮೂರ್ತ ರೂಪ ನೀಡಿ
ಹನಿಯಾಗಿಸಿ ಕಡಲ ಸೇರಿಸಲು

ಬಿಂಕಬಿಗುಮಾನಗಳ ಬದಿಗೆ
ಸರಿಸಿ
ಅಲೆಗಳ ಉಪಟಳವ ಸಹಿಸಿಕೊಂಡು
ಕಾಯುತ್ತಾನೆ ಕಡಲು ನನಗಾಗಿ
ನಿನ್ನಂತೆಯೇ ಚಡಪಡಿಸುತ್ತಾ
ಮೊದಲರಾತ್ರಿಯಲಿ ಅವಳ
ಎದುರು ನೋಡುವ ಕಾತರದಿ
ಏದುಸಿರು ಬಿಡುವ ಅವನಂತೆ

ದಡದ ಮರಳಿಗೂ ಸುಡುವ ಶಾಖ
ಬಿಸಿಗೆ ಸಹಿಸದ
ಕಪ್ಪೆಚಿಪ್ಪು ಮರಿಯಾಕಿದೆ
ಯಾರೋ ಕಟ್ಟಿದ ಮರಳ
ಮನೆಯ ತುಂಬೆಲ್ಲಾ
ಪ್ರವಾಹದ ಭೀತಿ
ನನ್ನೊಳಗೂ ಸುನಾಮಿ
ನಿನ್ನಯ ನೆನಪುಗಳದ್ದು


ನಿಧಾನವಾಗಿ ಇಳೆಗೆ ಕತ್ತಲ ಅಪ್ಪುಗೆ
ಚಂದಿರನ ಹುಣ್ಣಿಮೆಯ ಬೆಳಕಿಗೆ
ಅಲೆಗಳ ಭೋರ್ಗರೆತ
ಮಲ್ಲೆ, ಜಾಜಿ, ಪಾರಿಜಾತ
ಬಿರಿಯುತಿರುವ ಘಮ
ಸಂಗಮಕ್ಕೆ ಹೊರಟು ನಿಂತಿವೆ
ದಾರಿಗುಂಟ ಉರಗಗಳು
ಜೋಂಪು ಹಿಡಿದ ಕಾಲುಗಳ
ಕಿತ್ತು
ನೆನೆದ ದಾವಣಿ, ಮನಸುಗಳ
ಹೊತ್ತು ಮತ್ತೆ ಅದೇ ಮನೆ
ಬಂದ ದಾರಿಗೆ
ಸುಂಕದ ಹಂಗಿಲ್ಲ

ಮತ್ತೆ ಸಿಗುವ ಆಣೆಭಾಷೆ
ಇತ್ತರೂ
ತಬ್ಬಿ ಬರಸೆಳೆಯುತಿದೆ ಕಡಲು
ಹೀಗೇ ಇರಬಾರದಿತ್ತೇ ನೀನೂ ?
ಕಾಡುವ ಪ್ರಶ್ನೆಯ
ಹಪಹಪಿಯೂ ತೋಯ್ಯುವುದು
ಕಡಲ ಸೇರಿದ
ಕಣ್ಣ ಬಿಂದುಗಳ ನಿಟ್ಟುಸಿರಿನೊಳಗೆ
ಕುಹಕದ
ನಗೆಯ ಹಾಯಿ ದೋಣಿ

‍ಲೇಖಕರು avadhi

26 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading