ಕಾಮರೂಪಿ ಬರಹಗಳು…

 

ಸುರೇಶ್ ನಾಗಲಮಡಿಕೆ

ಕಾಮರೂಪಿಯವರು ಭಿನ್ನ ಸಾಂಸ್ಕೃತಿಕ ಪರಿಸ್ಥಿತಿ ಮತ್ತು ಪ್ರದೇಶಗಳಲ್ಲಿ ಬದುಕನ್ನು ಸಾಗಿಸಿದವರು. ಅವರ ಒಟ್ಟು ಬರಹಗಳನ್ನು ಗಮನಿಸಿದಾಗ ಈ ಅಂಶ ಮೇಲುನೋಟಕ್ಕೆ ತಿಳಿಯುತ್ತದೆ. ಕಾಮರೂಪಿಯವರ ಬರಹಗಳನ್ನು ಕನ್ನಡ ವಿಮರ್ಶೆ ಗಂಭೀರವಾಗಿ ಸ್ಡೀಕರಿಸದೇ ಇರಬಹುದು. ಆದರೆ ಅವರ ಸಮಗ್ರ ಬರಹಗಳ ಆಲೋಚನಾ ಕ್ರಮ, ಭಾಷೆ, ಕಥನಗಳು ನಡೆಯುವ ಜಾಗ ಇತ್ಯಾದಿ ಅಂಶಗಳನ್ನು ಗ್ರಹಿಕೆಗೆ ತೆಗೆದುಕೊಂಡಾಗ ಕನ್ನಡದಲ್ಲಿ ವಿಚಿತ್ರವಾದ ಸಂವೇದನೆಯನ್ನು ಈ ಬರಹಗಳು ಗರ್ಭೀಕರಿಸಿಕೊಂಡಿವೆ. ಆರಂಭದಲ್ಲಿ ಇವು ನವ್ಯದ ಸಿದ್ಧಾಂತಗಳನ್ನು ಮೇಳ್ಯೆಸಿಕೊಂಡು ಬಂದಂತೆ ಗೋಚರಿಸಿದರೂ ಆಳದಲ್ಲಿ ಈ ನೆಲದ ಬದುಕನ್ನೇ ಹೇಳುತ್ತವೆ. ಪರಕೀಯ ಭಾವನೆ, ಏಕಾಂಗಿತನ, ಸಾವು ಪಲಾಯನ ಇತ್ಯಾದಿ ಅಂಶಗಳು ಇದ್ದರೆ ಅಂತಹ ಬರಹಗಳನ್ನು ‘ನವ್ಯ’ ಎಂದು ಹಣೆಪಟ್ಟಿ ಕಟ್ಟಿ ಮೂಲೆಗೆ ತಳ್ಳುವ ಅಪಾಯಗಳನ್ನು ನಾವು ಈಗಾಗಲೇ ಎದುರಿಸಿದ್ದೇವೆ. ಈ ಬಗೆಯ ಅಂಶಗಳು ಎಲ್ಲಾ ಕಾಲದಲ್ಲಿ ಇರುವುದಿಲ್ಲವೇ? ಅವುಗಳನ್ನು ಕೇವಲ ಪಾಶ್ಚಾತ್ಯ ಪಠ್ಯಗಳ ಪ್ರಭಾವದಿಂದ ಮಾತ್ರ ಸ್ವೀಕರಿಸಬೇಕೇ? ಎಂಬ ಪ್ರಶ್ನೆಗಳು ಕೇಳಿಕೊಂಡಾಗ ಕಾಮರೂಪಿ ಅವರ ಬರಹಗಳು ಇವೆಲ್ಲವನ್ನೂ ಪ್ರಜ್ಞಾಪೂರ್ವಕವಾಗಿಯೇ ತಿರಸ್ಕರಿಸಿದಂತೆ ಕಾಣುತ್ತದೆ.

ಯಾವುದೇ ಸಿದ್ಧಾಂತಗಳ ಪ್ರಭಾವಗಳ ಬೀಸಿನಿಂದ ಹಾಗು ಅಕಡಮಿಕ್ ಶ್ಯೆಲಿಯ ಕಕ್ಷೆಯಿಂದ ಇವರ ಕಥನಗಳು ಹೊರಬರುವುದನ್ನು ಕಾಣಬಹುದು. ಹಾಗೆ ನೋಡಿದರೆ ಇವರ ಒಟ್ಟು ಬರವಣಿಗೆಯು ಮನುಷ್ಯನ ಕಾಮ ಮತ್ತು ಸಾವು ಇವುಗಳ ನಡುವಿನ ಸಂಘರ್ಷಗಳನ್ನು ಕಾಣಬಹುದು. ಅವರ ಈಚಿನ ಬ್ಲಾಗ ಬರಹಗಳಲ್ಲಿ ಇದನ್ನು ಗಮನಿಸಬಹುದು. ಮನುಷ್ಯನ ಸಹಜ ಭಾವನೆಗಳ ಕಡೆಗೆ ಇವು ಹೆಚ್ಚು ಒತ್ತು ನೀಡುತ್ತವೆ. ಅವನಲ್ಲಿನ ವ್ಯೆಯುಕ್ತಿಕ ಅನ್ಯೆತಿಕ ಪ್ರಜ್ಞೆಗಳನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಇವರ ಪಾತ್ರಗಳು ನ್ಯೆತಿಕ – ಅನ್ಯೆತಿಕ ಎಂಬ ಶಬ್ದಗಳನ್ನು ತಮ್ಮ ಬದುಕಿನೊಳಗೆ ಬಹಳ ಅರ್ಥವಿದೆ ಎಂದು ಭಾವಿಸುವಂತೆ ಕಾಣುವುದಿಲ್ಲ. ಮಾನಸಿಕ ಪ್ರಜ್ಞೆಯ ವಿಕಾಸದಲ್ಲೇ ಕಾಮರೂಪಿಯವರು ಸಿದ್ಧಮಾದರಿಗಳನ್ನು ಒಡೆಯುತ್ತಾರೆ. ಯಾವುದೇ ಒಂದು ಸಿದ್ಧಾಂತವನ್ನು ಆಯ್ದುಕೊಂಡರೆ ಅದು ರೂಪಿಸಿಕೊಂಡ ಪರಿಭಾಷೆಯ ವರ್ತಲದಲ್ಲೇ ನಾವು ಇರಬೇಕಾಗುತ್ತದೆ. ಅಲ್ಲಿ ಮುಕ್ತತೆ / ಬಿಡುಗಡೆಗೆ ಜಾಗಸಿಗದೇ ಇರಬಹುದು. ಈ ಅರಿವು ಇವರ ಕಥನಗಳ ಹಿಂದೆ ಕೆಲಸ ಮಾಡಿದೆ. ತಂತ್ರಕ್ಕೆ ಇವರು ತಲೆಕೊಡಿಸಿಕೊಳ್ಳುವುದಿಲ್ಲ. ಇಲ್ಲಿನ ಭಾಷೆಯ ಒಟ್ಟು ಪಾತ್ರಗಳ ಚಲನೆ ಇಚ್ಚೆ ಬಂದಂತೆ ರೂಪಾಂತರಗೊಳ್ಳುತ್ತವೆ. ಕಲೆಗಳು ಯಾವುದೇ ನಿರೀಕ್ಷಿತ ರೂಪವನ್ನು ಪಡೆದುಕೊಂಡಿಲ್ಲ. ಅದು ಇವರಿಗೆ ಬೇಕಾಗಿಯೂ ಇಲ್ಲ. ಇವರ ಬರಹಗಳಲ್ಲಿ ಕಾಣುವ ಇತರ ಅಂಶ. ಮನುಷ್ಯನ ಮಾನಸಿಕ ದುರಂತ ಮತ್ತು ನಿರ್ಲಿಪ್ತತೆಗಳು.

ಇವು ಕಥನದಿಂದ ಕಥನಕ್ಕೆ ಭಿನ್ನವಾಗುತ್ತಾ ಬೆಳೆಯುತ್ತಾ ಹೋಗುತ್ತವೆ. ಈ ದುರಂತವನ್ನು ನಾವು ಕೇವಲ ಅಳುವುದು ದು:ಖ ಎಂದು ಭಾವಿಸಿಕೊಂಡರೆ ಅದರಿಂದ ದಕ್ಕುವುದು ಕಡಿಮೆ. ಬದಲಾಗಿ ದುರಂತದ ಪರಿಣಾಮ ಮತ್ತು ನಂತರದ ಮಾನಸಿಕ ಸ್ಥಿತಿ ಇವನ್ನು ಗಮನಿಸಬೇಕು. ಇವರ ಬರೆಹಗಳಲ್ಲೂ ಹೆಸರುಗಳು ಬರುವುದು ಕಡಿಮೆ. ಬದಲಾಗಿ ‘ಪ್ರಜ್ಞೆಗಳು’ ಜಾಗ ಪಡೆದುಕೊಳ್ಳುತ್ತವೆ. ಪ್ರಾರಂಬದ ಕಥೆಗಳಲ್ಲಿ ಬರುವ ಕೆಲವು ಪಾತ್ರಗಳು ರ್ಯೆಲು ಕೆಳಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಪರಿಯನ್ನು ಭಿನ್ನವಾಗಿ ನೋಡಬಹುದು. ನಾವು ದುರಂತದಲ್ಲಿ ಅಂತ್ಯವನ್ನೂ ಕಾಣಬಹುದು. ಆ ದುರಂತವನ್ನು ಅರ್ಥೈಸಿಕೊಳ್ಳುವ ಬಗೆ ಬೇರೆಯಾದರೂ ಉಳಿದವರು ಅದರಿಂದ ತಪ್ಪಿಸಿಕೊಂಡು ಹೋಗುವ ಕ್ರಿಯೆಯನ್ನು ಕಾಣಬಹುದು. ಪಂಡಿತ, ಹೆಂಡತಿ, ವಿದ್ಯಾರ್ಥಿ ಮೂವರು ಬರುವ ಒಂದು ಕಥೆಯಲ್ಲಿ ಅಲ್ಲಿ ದುರಂತಕ್ಕೆ ಈಡಾಗುವುದು ನಂಬಿಕೆ ಮತ್ತು ಮಾನಸಿಕ ಸ್ಥಿತಿ. ಓದುಗನಿಗೆ ಇದು ಅಸಹನೀಯ ಎಂದು ಅನಿಸಬಹುದು. ಆದರೆ ಅವು ಅಂತರಂಗದ ವಾಸ್ತವಗಳು, ಮಾಮೂಲಿ ತತ್ವದಿಂದ ಇವರು ಭಿನ್ನರಾಗುವುದು ಇಲ್ಲಿನ ಕಥನ ಲೋಕ ಹಿರಿತಲೆಮಾರು, ಕಿರಿತಲೆಮಾರು ಇವೆರಡೂ ಅದ್ಯ್ವೆತ ವಾಗುವುದರಲ್ಲಿ ಪಾತ್ರಗಳು ಒಂದು ಕಡೆ ನೆಲೆ ನಿಂತವಲ್ಲ.

ಹಾಗೆಯೇ ಇವರ ಭಾಷೆಯ ಶ್ಯೆಲಿಯೂ ಕೂಡಾ ಏರಿಸಿ ಹೇರಿಸಿ ಮಯ್ ಸುರೀನ ಬಾವುಟ ಎಂಬ ಕಥೆಯ ಉದ್ದಕ್ಕೂ ಕಾಣಿಸಿಕೊಳ್ಳುವುದು ಪ್ರಶ್ನಾರ್ಥಕ ಚಿಹ್ನೆ. ಮತ್ತು ಆಶ್ಚರ್ಯತರ ಚಿಹ್ನೆಗಳು. ಇವು ಮಾನಸಿಕ ಪಲ್ಲಟಗಳು ಯಾನವನ್ನೇ ಹೇಳುತ್ತವೆ. ಇವರ ‘ಕುದುರೆಮೊಟ್ಟೆ’ ‘ಅಂಜಿಕಿನ್ಯಾತಕಯ್ಯ’ ಕಾದಂಬರಿಗಳು ಕನ್ನಡದ ಮಟ್ಟಿಗಂತೂ ವಿಚಿತ್ರ ಬರವಣಿಗೆಗಳು ಕುದುರೆಮೊಟ್ಟೆ ಕಾದಂಬರಿಯ ವಸ್ತು ಅಪರೂಪದ್ದು. ಇಲ್ಲಿ ಎರಡು ದೊಡ್ಡ ಸಮುದಾಯಗಳ ಸಂಬಂಧಗಳು ಆಂತರ್ಯವನ್ನು ಅನಾವರಣಗೊಳಿಸುತ್ತವೆ. ಮನುಷ್ಯನ ಭಿನ್ನ ಆಲೋಚನೆ, ಅನುಭವಗಳು ಭಿತ್ತರಿಸಿಕೊಂಡು ಬರುತ್ತವೆ. ಒಕ್ಕಲುತನಗಳ ಪಲ್ಲಟವೂ ಇಲ್ಲಿ ಕಾಣಬಹುದು. ಅದರ ಮುಖೇನ ನಮ್ಮ ಪರಂಪರೆಯ ಜಮೀನ್ದಾರಿ ಪದ್ಧತಿಯ ಒಳ ಸತ್ಯಗಳನ್ನು ಇಲ್ಲಿ ಕಾಣಸಿಗುತ್ತದೆ. ಜಮೀನ್ದಾರಿಗಳು ಇತರ ಕೆಳಸಮುದಾಯಗಳನ್ನೂ ಶೋಷಿಸುವ ಕ್ರಮ ಉದ್ದಕ್ಕೂ ಬಂದಿದೆ. ಆದರೆ ಒಂದು ಕಾಲಕ್ಕೆ ಬ್ರಾಹ್ಮಣ ಜಮೀನ್ದಾರಿಗಳು ಮತ್ತು ಒಕ್ಕಲಿಗ ಸಮುದಾಯದ ಜಮೀನ್ದಾರಿಗಳು ಘರ್ಷಣೆಯಂತು ಇದ್ದೇ ಇತ್ತು. ಆದರೆ ಇಲ್ಲಿನ ವಸ್ತು ತಿರುಗುವುದು ಆ ಸಮುದಾಯಗಳ ನಡುವಿನ ದ್ಯೆಹಿಕ ಸಂಭಂಧಗಳಲ್ಲಿ. ಇಲ್ಲಿನ ವಾಸ್ತವ ಪ್ರಜ್ಞೆ ನಾಟುವಂತೆ ಕಾಣಿಸಿಕೊಂಢಿದೆ.
ಶೇಕರನ ಮುಖೇನ ಸಾಗುವ ಕಥನ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಗ್ರಾಮವನ್ನು ಬಲಿಷ್ಠವಾಗಿ ಹಿಡಿದಿಟ್ಟುಕೊಂಡಿದ್ದ ಎರಡು ಸಮುದಾಯಗಳ ಒಳಸತ್ಯವನ್ನು ಹೇಳುತ್ತದೆ. ವಟ್ಯಪ್ಪನ ವ್ಯಕ್ತಿತ್ವ ಕ್ರೌರ್ಯವಲ್ಲದಿದ್ದರೂ ಶಂಕರಯ್ಯನ ಮಾನಸಿಕ ಪಟಲದಲ್ಲಿ ಆತ ಕ್ರೂರಿ. ಈ ಶಂಕರಯ್ಯ ಕಾಮುಕನಂತೆ ಕಂಡರೂ ಬದುಕಿನ ಸತ್ಯಗಳ ಕಡೆಗೆ ತನ್ನ ಗಮನ ಸೆಳೆಯುತ್ತಾನೆ. ಇಲ್ಲಿಯೂ ಕೂಡಾ ದುರಂತವಾಗುವುದು ಶೇಕರನ ನಂಬಿಕೆಯೇ ಆಗಿದೆ. ಇವರ ಕಥನಗಳು ನಂಬಿಕೆಯನ್ನೇ ಹೆಚ್ಚು ಶೋಧಿಸುತ್ತಾ ಹೋಗುತ್ತವೆ. ಪ್ರಾರಂಭದಲ್ಲಿ ಜಾತಿ ವರ್ಣ ಅಷ್ಟಾಗಿ ಕೆಲಸ ಮಾಡದೆ ಹೋದರೂ ಕುದುರೆಮೊಟ್ಟೆಯಿಂದ ಜಾತಿ ಮತ್ತು ವರ್ಣಗಳು ಜಾಗ ಪಡೆದುಕೊಂಡಿವೆ. ಹಾಗೆಬಂದರೂ ನೆಲದ ಬದುಕನ್ನು ಮ್ಯೆಗೂಡಿಸಿಕೊಂಡೇ ಬರುತ್ತಿವೆ. ಎಲ್ಲಿಯೂ ಸುಳ್ಳನ್ನು ಅವು ಹೇಳುವುದಿಲ್ಲ. ಅಂಜಿಕಿನ್ಯಾತಕಯ್ಯ ಕಾದಂಬರಿ ಕೂಡಾ ಇದೇ ತರಹದ ನಿಲುವನ್ನು ವ್ಯಕ್ತಪಡಿಸುತ್ತದೆ. ಕೇವಲ ಮಾನಸಿಕ ವಿಕ್ಷಿಪ್ತತೆಯನ್ನು ಮಾತ್ರ ನೋಡದೆ ಗ್ರಾಮಗಳ ವಿಕ್ಷಿಪ್ತತೆ ಪಲ್ಲಟಗಳನ್ನು ಒಳಗು ಮಾಡಿಕೊಂಡಿದೆ. ಈ ಕಾದಂಬರಿಯಲ್ಲೂ ರಾಮಕೃಷ್ಣನ ಸಾವು ಕೂಡಾ ಅವರ ಇಚ್ಚಿತ ಅನುಭವಲೋಕವನ್ನು ತಿಳಿಸುತ್ತದೆ. ಇಲ್ಲಿ ಮಾಗುವ ಕ್ರಿಯೆಯೂ ಇದೆ ಮತ್ತು ಅಪ್ರಬುದ್ಧ ಸ್ಥಿತಿಯೂ ಇದೆ.

ಅವರ ಈಚಿನ ಬ್ಲಾಗ್ ಬರಹಗಳಲ್ಲಿ ನಾವು ಗಮನಿಸಬೇಕಾದ್ದು ನೆನಪುಗಳನ್ನು ಮಾತ್ರವಸ್ಟೇ ಅಲ್ಲ ಬದಲಾಗಿ ಭೂತ ಮತ್ತು ವರ್ತಮಾನಗಳ ಮುಖಾಮುಖಿಯನ್ನು. ನೆನಪುಗಳಾಚೆಗೆ ಇವು ಅನುಭವ ಕಥನಗಳಂತೆ ಗೋಚರಿಸುತ್ತವೆ. ಕಾಮರೂಪಿಯವರ ಆಸಕ್ತಿಗಳು ಈ ಬರಹದಲ್ಲಿ ವಿಚಿತಗಳಾಗಿ ಕಾಣಿಸಿದರೂ ಹಳೆಯ ಜಾಡನ್ನು ಸಂಪೂರ್ಣವಾಗಿ ತೊರೆಯುವುದಿಲ್ಲ. ಮೋಟ್ನಹಳ್ಳಿ ಎಂಬ ಸ್ಥಳನಾಮವನ್ನು ಬೆನ್ನು ಹತ್ತುವಾಗಲೂ ನಿರಾಸೆಯ ಕಡೆಗೆ ಆ ಬರಹ ಚಾಚಿಕೊಳ್ಳುತ್ತದೆ. ಯಾವುದನ್ನು ಭಾರತೀಯ ಸಂಸ್ಕೃತಿಯ ಮೌಲ್ಯಗಳೆಂದು ನಾವು ಕರೆಯುತ್ತೇವೋ ಅವುಗಳ ಅಂತರಂಗದಲ್ಲಿ ಅಡಗಿದ ಕ್ರೌರ್ಯಗಳನ್ನು ಇವರ ಒಟ್ಟು ಬರಹಗಳು ಅನಾವರಣಗೊಳ್ಳುತ್ತವೆ. ಆ ಬಗೆಯ ಮೌಲ್ಯಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡುತ್ತಾರೆ, ಬೋಳೀಮಗನ ಕಥೆಯಲ್ಲಿ ಬರುವ ವಿವರಗಳನ್ನು ನೋಡಿದರೆ ತಿಳಿಯುತ್ತದೆ. ಅದು ಏಕಕಾಲದಲ್ಲಿ ಹೆಣ್ಣಿನ ಮಾನಸಿಕ ಕ್ರೌರ್ಯ ಮತ್ತು ಒಂದು ಸಂಸ್ಕ್ರತಿಯು ಆಕೆಯ ಮೇಲೆ ಮಾಡಿರುವ ಆಕ್ರಮಣವನ್ನು ನಿರಾಕರಿಸುತ್ತದೆ.
ಆ ಬರಹದ ಕೆಲವು ಸಾಲುಗಳು ಹೀಗಿವೆ. ‘ಬೆಳಗಿನ ಜಾವ ನಮ್ಮನ್ನು ಎಬ್ಬಿಸಲು ಅಮ್ಮ ಬಂದಾಗ ಎರಡು ಲೋಟ ಹಾಲು ತಂದಳು ಆ ಬ್ರಾಹ್ಮಣ ಗೆಳೆಯ ಹಾಲನ್ನು ಕುಡಿಯಲಿಲ್ಲ. ಅಮ್ಮ ಕೆಳಗೆ ಹೋಗುತ್ತಲೂ ನಾನು ಇವತ್ತು ರಾತ್ರಿ ಬರೋಲ್ಲ. ಬೆಳಿಗ್ಗೆ ಎದ್ದು ಮೊದಲು ನಿಮ್ಮಮ್ಮನ ಮುಖ ನೋಡುವುದು ಒಳ್ಳೆ ಶಕುನವಲ್ಲ. ಅಂತ ಹೊರಟುಹೋದ. ನಾನು ಮೆಟ್ರಿಕ್ ಫಸ್ಟ್ ಕ್ಲಾಸಲ್ಲಿ ಪಾಸ್ ಮಾಡಿದೆ. ಅವನು ಇ.ಪಿ.ಎಸ್. ಕಾಮರೂಪಿಯವರ ಆಲೋಚನಾ ಕ್ರಮ ಎಷ್ಟೇ ಅಲೆಮಾರಿಯಾದರೂ ನೆನಪುಗಳ ಮುಖೇನ ಅವರ ಮನಸ್ಸು ಮೂಲ ಬೇರುಗಳ ಕಡೆಗೆ ತಿರುಗುತ್ತಲೇ ಇರುತ್ತದೆ. ಅಲೆಮಾರಿತನ ಮತ್ತು ನೆನಪುಗಳ ಮಧ್ಯೆ ಅವರ ಈಚಿನ ಬರಹಗಳು ರೂಪು ತಾಳಿವೆ ಎನ್ನಬಹುದು. ವಿಚಿತ್ರವೆಂದರೆ ಇವರು ಭೇಟಿಯಾಗುವ / ಇವರನ್ನು ನೋಡಲು ಬರುವ ಇತರರು ಕೂಡಾ ಒಂದೇ ಬಗೆಯ ಮಾನಸಿಕ ಪರಿಸ್ಥಿತಿಯನ್ನು ಪಡೆದುಕೊಂಡವರೇ ಆಗಿದ್ದಾರೆ.
 

‍ಲೇಖಕರು G

December 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: