ಮನವೆಂಬ ಮೃಗಜಲ
ಪೋಲೇನಹಳ್ಳಿ ರಮೇಶ್
ಮಹಡಿ ಮನೆ
ಗೋಡೆ ಚಿನ್ನದಿಟ್ಟಿಗೆ
ತುತ್ತ ತುದಿ ಕೋಣೆ
ಸಿರಿತನದ ಸೂರೆ
ಸ್ವಯಂಚಾಲಿತ ಬಾಗಿಲುಗಳ
ನಡುವೆ ತೇಲುತಾ
ಹೋಗುವ ಅವನು
ನೆಡೆದೆಡೆ ಬೆಳಕು
ಹೆಜ್ಜೆ ಇಟ್ಟೆಡೆ ರೆಡ್ ಕಾರ್ಪೆಟ್ಟು
ಸುಖದ ಮದವಪ್ಪಿ
ರೇಶಿಮೆ ಮೆತ್ತನೆಯ ಮೇಲೆ
ಒರಗಿದವನ ಕೈಯಲ್ಲೆ
ಎಲ್ಲವನು ನಿಯಂತ್ರಿಸುವ
ಕಿರು ಯಂತ್ರ!
ಒತ್ತಿದರೆ
ಜಗಮಗಿಸುವ ಬೆಳಕು
ಹರಿದು ಬರುವ ತಂಗಾಳಿಯಲಿ
ಮಂದ್ರ ಸಂಗೀತ.
ಗೋಡೆ ಮೇಲೆಲ್ಲ ರಂಭೆ ನರ್ತನ
ಸೇಬು, ದಾಳಿಂಬೆ, ದ್ರಾಕ್ಷಿ,
ಪಾನೀಯ ಬರಿದಾಗದ ಖಜಾನೆ

ಮೆತ್ತನೆಯ ರೇಶಿಮೆಯ
ಗಾದಿ
ನಿದ್ದೆ ಬಾರದು ಸನಿಹ
ಕಾಡುವುದು
ಧನಮದ ಸೋಂಕು
ಕನ್ನಡಿಯ ಪ್ರತಿ ಬಿಂಬದಲು
ಕಾಣುತಿಹ ತನ್ನನ್ನೆ ತಾನು!
ಎತ್ತಿ ಆ ಯಂತ್ರವನೊಗೆದ
ಅಲಕ್ಕು ನಡೆದ.
ಪರದೆ ಮೆಲ್ಲನೆ ಸರಿದು
ದೂರದಲ್ಲೊಂದು ಮಿಂಚು
ಅವನ ಅರಿವಿನ ಕೊಳಕೆ
ಒಳ ಹರಿದ ತೊರೆ
ದೂರದಲಿ ಸುತ್ತ ಮರಗಳ
ನಡುವೆ ಪುಟ್ಟಮನೆ
ಅಂಗಳದ ಹೊಂಗೆಮರದಾ
ಜೋಲಿಯಲಿ ಸುಖಿಸಿ ಮಲಗಿದ ಕಂದ
ಹೂ ಬುಟ್ಟದ ಅಗಸದ ಹೊದಿಕೆ
ಹಾಡಿ ತೂಗುತ್ತಿರುವ
ಅಕ್ಕ
ಕುಸುಮ ಮಾಲೆಗೂ ಚಂದ!
ಎಲ್ಲವಿದ್ದೂ ಶೂನ್ಯವಾಗಿಹ ನಾನು ಅಲ್ಲಿರಬಾರದೇ
ಆ ತಿಳಿಗಾಳಿ ಜೋಲಿಯಲ್ಲಿ!






ತುಂಬಾ ತುಂಬಾ ಇಷ್ಟವಾಯಿತು.