(ಇಲ್ಲಿಯವರೆಗೆ..)
ನಾನು ಇಲ್ಲಿ ಬಂದು ಹಾಸನದ ಬಳಿ ಜಮೀನು ಮಾಡಿದ್ದರೂ ಹುಟ್ಟಿದ ಊರಾದ ಹಾಡ್ಲಹಳ್ಳಿಯ ಸಂಬಂಧ ಏನನ್ನೂ ಕಡಿದುಕೊಂಡಿಲ್ಲ. ಹುಟ್ಟಿ ಬೆಳೆದು ಬಾಲ್ಯದಲ್ಲಿ ಒಡನಾಡಿದ ಮಲೆನಾಡಿನ ಪರಿಸರ ಎಲ್ಲಿದ್ದರೂ ಕಾಡುತ್ತಿರುತ್ತದೆ. ಮಲೆನಾಡಿಗೆ ನೆಗೆದು ಬಿಡಲು ನೆಪಕ್ಕಾಗಿ ಮನಸ್ಸು ಕಾತರಿಸುತ್ತಿರುತ್ತದೆ. ಆಸೆಯಿಂದ ಹೋಗುವುದೇನೋ ಸರಿ. ಅದರೆ ಬದಲಾದ ಮನೋಭಾವನೆಯ ನಮ್ಮ ಸಹಪಾಠಿಗಳನ್ನು, ಓರಗೆಯವರನ್ನು ಕಂಡರೆ ನಿರಾಸೆಯೇ ಉಂಟಾಗುತ್ತದೆ. ‘ಎಷ್ಟು ಸಂಬಳ, ಗಿಂಬಳ ಬರುತ್ತಾ, ಇದುವರೆಗೂ ಏನು ಆಸ್ತಿ ಮಾಡಿದಿಯಾ? ಹಾಸನದಲ್ಲಿ ಸೈಟು? ಮನೆ?……… ದೇವೇಗೌಡರ ಪರಿಚಯ ಇದೆಯಾ? ಕುಮಾರಸ್ವಾಮಿ ಹತ್ರ ನಿನ್ನ ಮಾತು ನಡೆಯತ್ತಾ? ಹೀಗೆ ವ್ಯಕ್ತಿಯ ಅಂತಸ್ತನ್ನು ಕೇವಲ ಹಣ ಹಾಗೂ ರಾಜಕೀಯ ಪ್ರಭಾವದ ಮೇಲೆ ಅಳೆಯುವ ಜನರನ್ನು ಕಂಡಾಗ ಜಿಗುಪ್ಸೆ ಉಂಟಾಗುತ್ತದೆ.
ನಾಡಿಗಿಂತ ಕಾಡೇ ಮೇಲು ಎನ್ನಿಸಿ ನನ್ನ ಕೆಲಸ ಮುಗಿದ ಕೂಡಲೇ ಉಳಿದ ಸಮಯವನ್ನು ಕಾಡಿನ ನಡುವೆ ಕಳೆದು ಬರುತ್ತೇನೆ. ಅಲ್ಲಿನ ಪರಿಸರ, ಪ್ರಾಣಿ ಪಕ್ಷಿಗಳು ಹಾಗೂ ಮರಗಿಡಗಳೇ ಮುಂತಾದ ಜೀವರಾಶಿಗಳೊಂದಿಗಿನ ಒಡನಾಟ ಮನಸ್ಸಿಗೆ ಮುದನೀಡುತ್ತದೆ. ಅಲ್ಲಿನ ಜೀವರಾಶಿಗಳ ಎದುರು ಹಣದ ಹಿಂದೆ ಬಿದ್ದಿರುವ ಹುಲುಮಾನವರಾದ ನಾವು ನಿಕೃಷ್ಟರೆನಿಸಿಬಿಡುತ್ತೇವೆ. ಹಿಂದಿರುವಾಗ ಹೊಸ ಮನುಷ್ಯನಾಗಿದ್ದಂತೆನಿಸುತ್ತದೆ. ನಾನು ಇಲ್ಲಿ ಬಂದಾಗ ತಿರುಗಾಟಕ್ಕೆ ಆಯ್ದುಕೊಳ್ಳುವ ಮುಖ್ಯ ಜಾಗಗಳು ಎರಡು: ಒಂದು, ಬೆಟ್ಟ ಗುಡ್ಡ, ಕಾಡುಮೇಡು, ಹೊಳೆ ಅಬ್ಬಿಗಳು ವಿಭಿನ್ನ ಪ್ರಭೇಧದ ಪ್ರಾಣಿ ಪಕ್ಷಿಗಳು ಇವುಗಳಿಂದ ಸಂಪದ್ಭರಿತವಾದ ನಮ್ಮ ‘ಕಾರೇಕಾಯಿ ಹಡ್ಲು’ ತೋಟ.
ಎರಡನೆಯದು ಬಿಸಿಲೆ ಅರಣ್ಯ. ಆ ಬಾರಿ ಭಾನುವಾರ ಇಡೀ ದಿನ ಬಿಡುವಿದ್ದುದರಿಂದ ಹಾಗೂ ಜೊತೆಗೆ ಸ್ಕೂಟರ್ ಸಹಾ ತಂದಿದ್ದರಿಂದ ಪಯಣ ಆಯ್ದುಕೊಂಡಿದ್ದು ಬಿಸಿಲೆ ಅರಣ್ಯಕ್ಕೆ. ಜೊತೆಗಿದ್ದಗವನು ಇಂತವಕ್ಕೆಲ್ಲಾ ನನಗೆ ಸಾಥ್ ಕೊಡುತ್ತಿದ್ದ ದೇವರಾಜು. ಅವನಿದ್ದರೆ ನನ್ನ ಪ್ರಯಾಣಕ್ಕೆ ಬಹಳ ಅನುಕೂಲ. ಅರಣ್ಯದ ಆ ಭಾಗದಲ್ಲೆಲ್ಲಾ ತಿರುಗಾಡಿ ಅನುಭವವಿರುವ ಅವನು ಆ ನಿಭಿಡ ಅರಣ್ಯ ಗರ್ಭದ ಆಳಕ್ಕೆ ಇಳಿದು ಅಲ್ಲಿನ ಪ್ರಾಣಿ ಪಕ್ಷಿಗಳು, ಜೀವ ವೈವಿಧ್ಯವನ್ನೆಲ್ಲಾ ಪರಿಚಯಿಸಿ ನದೀ ತಟದಲ್ಲೆಲ್ಲಾ ತಿರುಗಾಡಿಸಿ ಕೊನೆಗೆ ಆ ಪ್ರದೇಶದ ಪ್ರಬಲ ದೇವತೆಯೆಂದು ಎಲ್ಲರೂ ನಂಬುವ ‘ಬೂದಿ ಚೌಡಿ’ಯನ್ನು ಸಂದರ್ಶಿಸಿ ಬರುವುದು ವಾಡಿಕೆ.
ಎಷ್ಟೇ ಅವಸರಿಸಿ ತಿರುಗಾಡಿದರೂ ಇಷ್ಟಕ್ಕೆಲ್ಲಾ ಒಂದು ಇಡೀದಿನ ಇದ್ದರೂ ಸಾಲದು. ಹೆತ್ತೂರಿನ ಗುಂಡಿಗೆರೆ ಹೋಟಲಿನಲ್ಲಿ ಚಪಾತಿ ಹಾಗೂ ಫೋರ್ಕ್ ಫ್ರೈ ಪಾರ್ಸಲ್ ಮಾಡಿಸಿಕೊಂಡದ್ದಾಯಿತು. ಇನ್ನು ಇಪ್ಪತೈದು ಕಿಲೋ ಮೀಟರ್ ತಿರುಗಾಡಿಸಿಕೊಂಡು ಹಿಂತಿರುಗಿ ಬರುವ ಕೆಲಸ ನನ್ನ ಸ್ಕೂಟರಿನದು. ಗುಂಡಿಗೋಟರುಗಳನ್ನು ಏರಿಳಿಯುತ್ತಾ ಏಳೆಂಟು ಕಿಲೋಮೀಟರ್ ಕ್ರಮಿಸಿ ವಣಗೂರು ಕೂಡುರಸ್ತೆ ತಲುಪಲು ನನ್ನ ಸ್ಕೋಟರ್ ಅರ್ಧಗಂಟೆ ತೆಗೆದುಕೊಂಡಿತ್ತು. ಸ್ಕೂಟರ್ ಕುಲುಕಾಟಕ್ಕೆ ಆಗಲೇ ನಮಗೆ ಮೈ ನೋವು ಬಂದಿತ್ತು. ಕೂಡುರಸ್ತೆಯಲ್ಲಿ ಇಳಿದ ದೇವರಾಜು ‘ಬನ್ನಿ ಒಂದಿಷ್ಟು ಟೀ ಕುಡಿದು ಒಂದು ಸಿಗರೇಟು ಸೇದಿ ಬರೋಣ. ಸುಧಾರಿಸಿಕೊಂಡಂತ್ತಾಗುತ್ತೆ. ಮುಂದೆ ಸುಬ್ರಹ್ಮಣ್ಯರಸ್ತೆ ಚನ್ನಾಗಿದೆ ಪರ್ವಾಗಿಲ್ಲ’ ಎನ್ನುತ್ತಾ ಕ್ಯಾಂಟೀನ್ ಕಡೆ ಹೆಜ್ಜೆಹಾಕತೊಡಗಿದ. ನಾನು ಸ್ಕೂಟರ್ ಸ್ಟ್ಯಾಂಡ್ ಹಾಕಿ ದೇವರಾಜ್ ಹೋದ ಕಡೆ ತಿರುಗಿ ನೋಡುವಷ್ಟರಲ್ಲಿ ಮಿತ್ರ ರಾಜುಗೌಡ ಅದೆಲ್ಲಿ ಕುಳಿತಿದ್ದನೊ ನನ್ನನ್ನು ನೋಡಿ ನನ್ನ ಕಡೆಯೇ ನಡೆದು ಬರತೊಡಗಿದ್ದನು. ಒಂದೇ ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದ ದೇವರಾಜು ಹಾಗೂ ಅವನ ಮದ್ಯೆ ಈಚೆಗೆ ಅದೇಕೋ ಸಂಬಂದ ಹಳಸಿಕೊಂಡಿತ್ತು.
‘ಏನ್ ಸಾಹಿತಿಗಳೇ, ಆ ಪಿರ್ಕನ ಕಟ್ಟಿಕೊಂಡು ಎಲ್ಲಿಗೋ ಹೊರಟಿದ್ದೀರಿ’ ಎಂದ ತನ್ನ ಮಾಮೂಲಿನ ಕೆಣಕುವ ಧಾಟಿಯಲ್ಲಿ. ನನಗೆ ತಬ್ಬಿಬ್ಬಾಯಿತು. ಇಬ್ಬರೂ ನನಗೆ ಸಮಾನ ಸ್ನೇಹಿತರು. ಯಾರನ್ನೂ ಬಿಟ್ಟುಕೊಡುವಂತಿಲ್ಲ. ‘ಬಿಸಿಲೆಗೆ ಹೋಗಿ ಬರೋಣ ಅಂತಾ ಹೊರಟಿದ್ದೀವಿ’ ಎಂದೆ. ದೇವರಾಜು ಕ್ಯಾಂಟೀನಿನ ಒಳಹೊಕ್ಕು ನಮ್ಮಿಂದ ಮರೆಯಾದದ್ದು ರಾಜುಗೌಡನಿಗೆ ಅನುಕೂಲವೇ ಆಗಿತ್ತು. ‘ಅಲ್ಲಾ ಕಣ್ರೀ, ಬಿಸಿಲೆಯಂತಾ ಗೊಂಡಾರಣ್ಯಕ್ಕೆ ಅವನಂತ ಪುಕ್ಕುಲನನ್ನು ಕಟ್ಟಿಕೊಂಡು ಈ ಸ್ಕೂಟರಿನಲ್ಲಿ ಹೊರಟಿದ್ದೀರಲ್ರಿ… ನಿಮಗೆ ಏನ್ ಹೇಳ್ ಬೇಕಂತ. . .’ ರಾಜುಗೌಡ ಅಸಡ್ಡೆಯ ಮಾತನಾಡತೊಡಗಿದ. ಹಳೆಯ ಸ್ನೇಹಿತನ ಮೇಲಿನ ಯಾವುದೋ ಸಿಟ್ಟು ತೀರಿಸಿಕೊಳ್ಳಲು ಅವಕಾಶ ಉಪಯೋಗಿಸಿಕೊಳ್ಳುತ್ತಿರುವ ಇವನಿಗೆ ಹೇಗೆ ಹೇಳಲಿ ದೇವರಾಜನೊಂದಿಗೆ ನಾನು ಎಷ್ಟುಬಾರಿ ಇದೇ ಸ್ಹೂಟರಿನಲ್ಲಿ ಜೇಡಗದ್ದೆ, ಮೂರನೇಮನೆ ಅಬ್ಬಿ. ಹೊಸಳ್ಳಿ ದೇವರ ಬೆಟ್ಟ ಎಲ್ಲಾ ಅಲೆದಾಡಿದ್ದೆ. ಈ ಸ್ಕೂಟರ್ ಪಯಣದ ಮಜ ಇನ್ಯಾವ ವಾಹನದಲ್ಲಿ ಸಿಕ್ಕಿದೆ? ಅವನ ಮಾತಿಗೆ ಏನು ಉತ್ತರ ಹೇಳ ಬೇಕೆಂದು ಯೋಚಿಸುತ್ತಿದ್ದೆ.
‘ನಿಮ್ಮ ಹಳೆಯ ಸ್ಕೂಟರ್ ಆ ಕಡೆ ಎಲ್ಲಾದ್ರು ನೆರಳಿಗೆ ನಿಲ್ಲಿಸ್ರಿ. ನೋಡಿ ಆ ಕಡೆ ನನ್ನ ಎರಡು ಲಕ್ಷದ ಜೀಪ್ ನಿಂತಿದೆ. ಅದರಲ್ಲಿ ಹೋಗಿ ಬಿಸಿಲೆ ಬ್ಯೂಟಿ ಸ್ಪಾಟ್ನಲ್ಲಿ ಸ್ವಲ್ಪ ಕಾಲ ಕೂತಿದ್ದು ನಂತರ ಕೆಳಗೆಲ್ಲಾ ತಿರುಗಾಡಿ ಬರೋಣ. ಬೇಕಾದ್ರೆ ಒಂದು ಬಾಟ್ಲಿ ಬ್ರಾಂಡಿ ಹಿಡ್ಕಂಡ್ ಹೋಗೋಣ’ ಎಂದ. ನಾನು ತಬ್ಬಿಬ್ಬಾದವನಂತೆ ನೋಡಿದಾಗ ‘ ಆ ನಿಮ್ಮ ಫ್ರೆಂಡೂ ಬೇಕಾದ್ರೆ ಹಿಂದ್ಗಡೆ ಕೂತ್ಗಳಲಿ’ ಎಂದ. ಆತ ನನ್ನ ಪಯಣದ ಯೋಜನೆಯನ್ನೇ ಬುಡಮೇಲು ಮಾಡಿಬಿಡಬಹುದು ಎನ್ನಿಸಿತು. ನನ್ನಂತಹಾ ಮೆದುಸ್ವಭಾವದ ಮಿತಭಾಷಿಯನ್ನು ತನ್ನ ಮಾತಿನ ಜಾಲದಲ್ಲಿ ಬಂದಿಸುವುದು ಆತನಿಗೆ ಕರಗತವಾಗಿತ್ತು. ಅಷ್ಟರಲ್ಲಿ ದೇವರಾಜು ಕ್ಯಾಂಟೀನಿನಿಂದ ಹೊರಬರುತ್ತಿರುವುದು ಕಾಣಿಸಿತು. ಈ ರಾಜೇಗೌಡನ ಜಾಲದಿಂದ ಹೇಗೆ ತಪ್ಪಿಸಿಕೊಳ್ಳುವುದೆಂದು ಯೋಚಿಸುತ್ತಿದ್ದೆ. ‘ಹುಂ ಏನ್ ಯೋಚ್ನೆ ಮಾಡ್ತಾ ನಿಂತ್ ಬಿಟ್ರಿ. ಇಲ್ಲೆ ಟೀಗೀ ಕುಡ್ಕೊಂಡು ಕೂತಿರಿ. ಶನಿವಾರ ಸಂತೆಯಲ್ಲಿ ಒಂದು ಸಾವು ಇದೆ ಹೋಗಿ ಒಂದು ಅರ್ಧ ಮುಕ್ಕಾಲು ಗಂಟೆಯಲ್ಲಿ ಬಂದು ಬಿಡ್ತೀನಿ’ ರಾಜುಗೌಡ ನನ್ನ ಯೋಜನೆಯ ಜಾಡು ಬದಲಿಸುವ ನಿರ್ಧಾರ ಹೊರಡಿಸುವವನಂತೆ ಹೇಳಿದ.
‘ಸರಿ ನೀವ್ ಶನಿವಾರ ಸಂತೆಗೆ ಹೋಗಿಬನ್ನಿ. ನಾನ್ ಒಂದ್ ಅರ್ಧ ಗಂಟೆ ಕಾಯ್ತೀನಿ. . . ಲೇಟಾದ್ರೆ ಹೋಗಿರ್ತೀನಿ. ಬೇಜಾರ್ ಮಾಡ್ಕೋಬೇಡಿ. ನಾನು ಬೇಗ ವಾಪಾಸ್ ಬಂದು ಹಾಸನಕ್ಕೆ ಹೋಗಬೇಕು’ ಎಂದೆ. ತಪ್ಪಿಸಿಕೊಳ್ಳುವ ನನ್ನ ಹುನ್ನಾರ ಆತನಿಗೆ ತಿಳಿಯಿತೋ ಇಲ್ಲವೋ ಗೊತ್ತಿಲ್ಲ ಜೀಪ್ ಹತ್ತಿ ಅವಸರವಾಗಿ ಹೊರಟೇಬಿಟ್ಟ. ಆದುವರೆಗಿನ ಕೆಟ್ಟ ರಸ್ತೆ ಕೊನೆಗೊಂಡು ಸಾಕಷ್ಟು ಚನ್ನಾಗಿದ್ದ ಸುಬ್ರಹ್ಮಣ್ಯ ರಸ್ತೆಗೆ ಇಳಿದ ನನ್ನ ಸ್ಕೋಟರ್ ಕುಲುಕುತ್ತಾ ಬಳುಕುತ್ತಾ ಓದುವ ಮಕ್ಕಳಂತೆ ತಿರುವು ರಸ್ತೆಗಳಲ್ಲಿ ಖುಷಿಯಿಂದ ಓಡತೊಡಗಿತು. ವಣಗೂರು ದಾಟಿ ಪಟ್ಲ ಗ್ರಾಮ ಸಮೀಪಿಸುವವರೆಗೂ ನಮ್ಮ ಪಯಣ ಮೌನವಾಗಿ ಸಾಗಿತ್ತು. ಸೋಮವಾರಪೇಟೆ ರಸ್ತೆಯನ್ನು ಎಡಕ್ಕೆ ಬಿಟ್ಟು ನಮ್ಮ ಸ್ಕೂಟರ್ ಮುಂದೆ ಸಾಗತೊಡಗಿತು. ‘ಎಷ್ಟು ಸಾರಿ ನಾವು ಇಲ್ಲೆಲ್ಲಾ ತಿರುಗಾಡಿದಿವಲ್ಲ, ಎಲ್ಲೂ ಹುಲಿ, ಚಿರತೆ, ಕರಡಿಗಳ ಸುಳಿವೇ ಇಲ್ಲವಲ್ಲ. ಇಲ್ಲಿನ ಬೆಟ್ಟಗುಡ್ಡ ಕಾಡುಗಳು ಇರಲಿ. ಬಿಸಿಲೆಯ ಬೃಹತ್ ಅರಣ್ಯದಲ್ಲೂ ಅವುಗಳ ದರ್ಶನವಾಗಲಿಲ್ಲವಲ್ಲ. ಅವುಗಳ ಸಂತಾನವೇ ನಶಿಸಿ ಹೋಗಿದೆಯೇ ಇಲ್ಲ, ಹಿಂದಿನಿಂದಲೂ ಈ ಪ್ರದೇಶದಲ್ಲಿ ಅಂತಹಾ ಕ್ರೂರ ಪ್ರಾಣಿಗಳು ಇರಲೇ ಇಲ್ಲವೋ’ ಮೌನಮುರಿದ ದೇವರಾಜು ನಮ್ಮಿಬ್ಬರ ನಡುವೆ ಮಾತಿಗೆ ಚಾಲನೆ ಕೊಟ್ಟ.
ಹಾಗಲ್ಲ ದೇವರಾಜು, ನಮಗೆ ಶತಮಾನಗಳ ಹಿಂದಿನ ನಮ್ಮ ಮಲೆನಾಡಿನ ಇತಿಹಾಸವೇ ಗೊತ್ತಿಲ್ಲ. ಆಗೆಲ್ಲಾ ಬಹಳ ನಿಬಿಡವಾದ ಗೋಂಡಾರಣ್ಯವೇ ಇತ್ತಂತೆ. ಎಲ್ಲಾ ತರಹದ ಪ್ರಭೇದದ ಪ್ರಾಣಿ ಪಕ್ಷಿಗಳ ಕಾಡು ತಮ್ಮದೇ ಸಾಮ್ರಾಜ್ಯವೇ ಎಂಬಂತೆ ನಿರಾತಂಕವಾಗಿ ತಿರುಗಾಡಿಕೊಂಡಿದ್ದವಂತೆ ಮನುಷ್ಯನ ದುರಾಸೆಗೆ ಯಾವಾಗ ಕಾಡು ಬಲಿಯಾಗತೊಡಗಿತೊ ಆಗಲೇ ಕಾಡುಪ್ರಾಣಿಗಳ ಬದುಕಿನ ದುರಂತವೂ ಆರಂಭವಾಗಿರಬಹುದು. ನಾವು ನಮ್ಮ ಚಿಕ್ಕಂದಿನಲ್ಲಿ ನೋಡುತ್ತಿದ್ದ ಬೃಹದಾಕಾರದ ನಂದೀಹೊನ್ನೆ ಬೊಬ್ಬೀ ಅನಾಲುಕಾರಿ ಮರಗಳನ್ನು ಈಗ ಎಲ್ಲಿ ನೋಡಲುಸಾದ್ಯ? ಈಗ ನಮ್ಮ ಸುತ್ತ ಉಳಿದಿರುವುದು ಕುರುಚಲು ಕಾಡು ಅಷ್ಟೆ. ಮನುಷ್ಯರು ಅಷ್ಟೆ ಅಪ್ಪಟ ಮಲೆನಾಡಿನ ಹಳೆಯ ತಲೆಮಾರಿನ ಜನ ಬಲಿಷ್ಠವಾದ ಶರೀರವನ್ನು ಹೊಂದಿದ್ದರು. ಆಗೆಲ್ಲಾ ಕಾಡಿನಲ್ಲಿ ಹುಲಿ ಚಿರತೆ ಕರಡಿಗಳು ಹೇರಳವಾಗಿರುತ್ತಿದ್ದವಂತೆ. ಒಮ್ಮೊಮ್ಮೆ ಕೊಟ್ಟಿಗೆಗೆ ನುಗ್ಗಿ ದನ ಕರುಗಳನ್ನು ಹೊತ್ತೊಯ್ಯುವುದು ಇತ್ತಂತೆ. ನಮ್ಮ ಪೂರ್ವಿಕರು ಸಹ ಕೈಯಲ್ಲಿ ಕೇವಲ ಕತ್ತಿ ದೊಣ್ಣೆ ಹಿಡಿದು ಹೋರಾಡಿ ಹಿಮ್ಮೆಟ್ಟಿಸಿದ ಕಥೆಗಳೂ ಇವೆ.
ಕಾಡಿನ ಮಧ್ಯೆ ಆ ಸಂತತಿ ಅಲ್ಲಲ್ಲಿ ಇತ್ತೀಚಿನವರೆಗೂ ಉಳಿದುಕೊಂಡಿತ್ತು. ಮೂಕನಮನೆ, ಜೇಡಗದ್ದೆಯಕಡೆ ಕಾಡಿನ ಮಧ್ಯೆವಾಸವಿದ್ದ ಅಪ್ಪಟ ಮಲೆನಾಡಿಗರನ್ನು ನಾನು ಚಿಕ್ಕಂದಿನಲ್ಲಿ ನನ್ನ ಅಪ್ಪನೊಂದಿಗೆ ಹೋದಾಗ ನೋಡಿ ಆಶ್ಚರ್ಯಪಟ್ಟಿದ್ದೆ. ಅವರ ರಟ್ಟೆ, ಮೀನಿನ ಖಂಡಗಳನ್ನು ನೋಡಬೇಕಿತ್ತು. ಪಾದಗಳೇ ಮೊಳದುದ್ದಿರುತ್ತಿದ್ದವು. ಕಾಡುಪ್ರಾಣಿಗಳೊಂದಿಗೆ ಬರಿಗೈಯಲ್ಲಿ ಹೋರಾಡಿ ಹಿಮ್ಮೆಟ್ಟಿಸುವ ಸಾಮರ್ಥ್ಯ ಆ ಜನಗಳಿಗೆ ಇತ್ತೆಂದು ನಂಬಲು ಯಾವುದೇ ಪುರಾವೆಯೂ ಬೇಕಿರಲಿಲ್ಲ ಸ್ಕೂಟರು ಕಾಡು ಮಧ್ಯದ ಅಂಕುಡೊಂಕಿನ ರಸ್ತೆಯಲ್ಲಿ ನಿರಾತಂಕವಾಗಿ ಸಾಗುತ್ತಿತ್ತು. ನಾನು ಅರಿತಿದ್ದ ಮಲೆನಾಡ ಇತಿಹಾಸವನ್ನು ದೇವರಾಜನಿಗೆ ದಾಟಿಸುತ್ತಿದ್ದೆ ಓತ ಪರ್ವತವಾಗಿ ಹರಿಯುತ್ತಿದ್ದ ಮಾತಿನ ನಡುವೆ ನನ್ನ ಸ್ಕೋಟರಿನ ಚಲನೆಗೆ ನಿರ್ದೇಶನ ಯಾಂತ್ರಿಕವಾಗಿ ದೊರೆಯುತ್ತಿತ್ತು.
ಕರಡಿಯೊಂದಿಗೆ ಮುಖಾಮುಖಿ
ನಮ್ಮ ಅಜ್ಜ ನನ್ನ ಚಿಕ್ಕಂದಿನಲ್ಲಿ ಒಂದು ಘಟನೆ ಹೇಳಿದ್ದರು. ಅದನ್ನು ಅದು ನಡೆದ ಸೀಕ್ವೆನ್ಸ್ನಲ್ಲೇ ಹೇಳುತ್ತೇನೆ. ಆ ಕಾಲದ ಕಾಡು ಪ್ರಾಣಿಗಳ ಹಾಗು ಮನುಷ್ಯರ ಬದುಕಿನ ಸಂಬಂಧ ಹೇಗಿತ್ತು ಎಂಬ ಸಣ್ಣ ಝಲಕ್ ಸಿಗಬಹುದು. ಈಕಡೆ ಪಟ್ಲದ ಕಡೆಯ ಒಬ್ಬ ರೈತನ ಮನೆಯ ಹಿಂಬಾಗ ಒಂದು ಒಳ್ಳೆಯ ಕರಿಬಾಳೆಕಾಯಿಯ ಗೊನೆ ಬಂದಿತ್ತು. ರಟ್ಟೆಗಾತ್ರದ ಸುಮಾರು ಎಪ್ಪತ್ತು ಎಂಬತ್ತು ಕಾಯಿಗಳು ಇದ್ದವು ಅಂತಹ ದೊಡ್ಡಗೊನೆಯನ್ನು ಈಗಿನವರಾದರೆ ಎತ್ತಿ ತಲೆಮೇಲೆ ಇಟ್ಟುಕೊಳ್ಳುವುದು ಇರಲಿ, ಇಟ್ಟಜಾಗದಿಂದ ಅಲುಗಾಡಿಸಲೂ ಆಗುವಂತಿರಲಿಲ್ಲ. ಆ ಬಲಿಷ್ಟ ಆಳು, ಕೋಳಿ ಕೂಗುವ ಮುನ್ನ ಎದ್ದು ಆ ಗೊನೆಯನ್ನು ಹೊತ್ತು ಹೆತ್ತೂರು ಸಂತೆಯಲಿ ಮಾರುವ ಉದ್ದೇಶದಿಂದ ಕಾಡುಹಾದಿಯಲ್ಲಿ ನಡೆದಿದ್ದ. ಹೆತ್ತೂರು ತಲುಪಲು ಇನ್ನೇನು ಅರ್ಧ ಮೈಲಿ ಇರುವಾಗ ಚುಮುಚುಮು ಬೆಳಕಾಗತೊಡಗಿತು. ಕಾಡುಹಾದಿಯಿಂದ ಹೊಸದಾಗಿ ಬೆಟ್ಟ ಗೋರಿ ಮಾಡಿದ ರಸ್ತೆಗೆ ಇಳಿದ ಆತನಿಗೆ ತುಸು ದೂರದಲ್ಲೇ ಏನೋ ಕಪ್ಪು ಆಕೃತಿ ಕಂಡಿದೆ. ಗೆರೆಯನ್ನು ಅಪ್ಪಿ ಹಿಡಿದ ಸ್ಥಿತಿಯಲ್ಲಿರುವ ಆ ಪ್ರಾಣಿಯ ಹಿಂದಿನ ಕಾಲುಗಳು ಮಾತ್ರ ಹಿಡಿತ ಸಿಕ್ಕದೆ ಹಿಂದೆ ಮುಂದೆ ಚಲಿಸುತ್ತಿವೆ.
ನಾಲ್ಕು ಹೆಜ್ಜೆ ಮುಂದೆ ಬಂದು ಕುತೂಹಲದಿಂದ ನೋಡಿದ್ದಾನೆ. ಹೌದು ಅದೊಂದು ಬೃಹದಾಕಾರದ ಕರಡಿ. ಗೆರೆಯಲ್ಲಿ ದೊಡ್ಡದಾದ ಗೆದ್ದಲು ಹುತ್ತ ಅದರೊಳಗೆ ತಲೆಹಾಕಿ ತಿನ್ನುತ್ತಿದೆ. ಹುತ್ತವನ್ನು ಬಗೆದು ಗೆದ್ದಲನ್ನು ತಿನ್ನುತ್ತಾ ತಿನ್ನುತ್ತಾ ಅದರ ತಲೆ ಕುತ್ತಿಗೆ ಭಾಗವನ್ನು ದಾಟಿ ಹುತ್ತದ ಒಳ ಹೋಗಿದೆ. ಆತ ಕ್ಷಣ ನಿಂತು ಯೋಚಿಸಿದ ಈಗ ಏನು ಮಾಡುವುದು? ಗೊನೆಯನ್ನು ಬಿಸಕಿ ಓಡೋಣವೆಂದರೆ ಶಬ್ಧವಾಗಿ ಕರಡಿ ತಲೆಯನ್ನು ಹೊರತೆಗೆದು ಮೈಮೇಲೆ ಬೀಳದೇ ಇರದು. ಧೈರ್ಯಗೆಟ್ಟರೆ ಮೃತ್ಯು ಮೂರೆ ಮಾರು. ಧೈರ್ಯ ತಂದುಕೊಂಡು ಸದ್ದಾಗದಂತೆ ಗೊನೆಯನ್ನು ಇಳಿಸಿ ಹಿಂದಿನ ಚಿಪ್ಪಿನಿಂದ ಒಂದು ದಪ್ಪಕಾಯಿಯನ್ನು ಮುರಿದು ಕೈಯಲ್ಲಿ ಹಿಡಿದು ಕರಡಿಯ ಬಳಿ ಹೋದ. ಅದಕ್ಕೆ ಹೊರಗಿನ ಪರಿವೇ ಇಲ್ಲ. ತಿನ್ನುವುದರಲ್ಲೇ ನಿರತವಾಗಿದೆ. ಆತ ಅನಾಮತ್ತು ಕರಡಿಯ ಮೇಲೆ ಬಿದ್ದು ಅದರ ಶರೀರವನ್ನು ಗೆರೆಗೆ ಒತ್ತಿ ಹಿಡಿದ. ಬಲಗೈಯಲ್ಲಿದ್ದ ಬಾಳೆಕಾಯನ್ನು ಶಕ್ತಿಕೊಟ್ಟು ಒಂದೇ ಬಾರಿಗೆ ನುಸುಳಿ ಹೋಗುವಂತೆ ಅದರ ಗುದದ್ವಾರಕ್ಕ ತುರುಕಿದ. ತನ್ನದೇ ಪ್ರಪಂಚದಲ್ಲಿದ್ದ ಆಕರಡಿಗೆ ಈ ಅನಿರೀಕ್ಷಿತ ಪ್ರಹಾರದಿಂದ ಆಘಾತವಾಗಿ ಕ್ಷಣಕಾಲ ಏನಾಗುತ್ತಿದೆ ಎಂಬುದೇ ತಿಳಿಯದಾಗಿತ್ತು.
ಅದು ಏನಾದರಾಗಲಿ ಎಂದುಕೊಳ್ಳುತ್ತಾ ಪ್ರತಿದಾಳಿಗೆ ಸಿದ್ದವಾಗತೊಡಗಿತು. ಶರೀರವನ್ನೊಮ್ಮೆ ಗಟ್ಟಿಯಾಗಿ ಒದರಿತು. ತಲೆಯನ್ನು ಭೂಮಿಯೊಳಗಿನಿಂದ ಹೊರತೆಗೆಯಲು ಹವಣಿಸಿತು.ಉಹುಂ ಸಾದ್ಯವಾಗಲಿಲ್ಲ.ಯಾವುದೇ ಕಾರಣಕ್ಕೂ ತಲೆ ಹೊರಬರಲು ಬಿಡಬಾರದು ಎಂದು ನಿರ್ದರಿಸಿದ ಆತ ಬಲವನ್ನೆಲ್ಲಾ ಬಿಟ್ಟು ಒತ್ತಿ ಹಿಡಿದಿದ್ದಾನೆ.ಆ ಯಮಹಿಡಿತದಿಂದ ತಪ್ಪಿಸಿಕೊಳ್ಳಲು ಕರಡಿಯ ಕೊಸರಾಟ ನಡೆದೇ ಇದೆ.ಈ ಹೋರಾಟದ ಮದ್ಯೆ ಚನ್ನಾಗಿ ಬೆಳಕಾಗಿದೆ. ಯಾರೋ ಒಬ್ಬ ಕರಡಿಯೊಂದನ್ನು ಗೋಡೆಗೆ ಒರಗಿಸಿ ಹೋರಾಡುತ್ತಿದ್ದಾನೆ ಎಂಬ ಸುದ್ದಿಯಾಗಿದೆ.ಜನ ಸೇರಿ ಕತ್ತಿ ದೊಣ್ಣೆ ಹಿಡಿದು ಘಟನೆಯ ಸ್ಥಳಕ್ಕೆ ಬಂದಿದ್ದಾರೆ.ಆಗಲೇ ಸುಸ್ತಾಗಿದ್ದ ಆ ಮನುಷ್ಯನನ್ನು ಒಂದಿಬ್ಬರು ಎತ್ತಿ ತಂದು ಒಂದೆಡೆ ಮಲಗಿಸಿದ್ದಾರೆ.ಕರಡಿಯ ಮೇಲೆ ಪ್ರಹಾರಕ್ಕೆಂದು ದೊಣ್ಣೆ ಕತ್ತಿ ಎತ್ತಿ ಹಿಡಿದ ಜನ ನೋಡುತ್ತಾರೆ.ಕರಡಿ ಮಿಸುಕಾಡುವಂತೆ ತೋರುತ್ತಿಲ್ಲ.ಅಲುಗಾಡಿಸಿ ಹುತ್ತದೊಳಗಿಂದ ಅದರ ತಲೆಯನ್ನು ಹೊರತೆಗೆಯುತ್ತಾರೆ. ಕರಡಿ ಆಗಲೇ ಉಸಿರು ಕಟ್ಟಿ ಸತ್ತು ಹೋಗಿರುತ್ತದೆ.
ಪೂರ್ವಿಕರ ಶೌರ್ಯದ ಕತೆಯನ್ನು ಮೆಲುಕು ಹಾಕುತ್ತಾ ದಾರಿ ಸಾಗಿದ ನಮಗೆ ‘ಬಿಸಿಲೆ’ ಬ್ಯೂಟಿ ಸ್ಪಾಟಿಗೆ ಬಂದಿದ್ದೇ ತಿಳಿಯಲಿಲ್ಲ. ಅಲ್ಲಿನ ವೀಕ್ಷಣಾ ಗೋಪುರದ ಬೆಂಚಿನ ಮೇಲೆ ಕುಳಿತ ನಾವು ಎದುರಿನ ಭವ್ಯವಾದ ಅರಣ್ಯ ಸಾಗರವನ್ನು ನೋಡುತ್ತಾ ಅರ್ದ ಗಂಟೆ ಅಕ್ಷರಷಃ ಮೈಮರೆತದ್ದು ಸುಳ್ಳಲ್ಲ. ಅಲ್ಲಿಂದ ಅರಣ್ಯದೊಳಗಿನ ರಸ್ತಯಲ್ಲಿ ಹೊರಟ ನಮ್ಮ ಸ್ಕೂಟರ್ ಐದು ಕಿಲೋಮೀಟರ್ ಕ್ರಮಿಸಿ ತಲುಪಿದ್ದು ಹೊಳೆಯ ತಟಕ್ಕೆ.ಅಲ್ಲಿ ಪಕ್ಷಿಗಳ ಸಂಗೀತ ಸಮ್ಮೇಳನವೇ ನಡೆದಿತ್ತು.ಅದರ ಸುಖ ಅನುಭವಿಸಿದ ನಾವು ನಂತರ ಇಳಿದಿದ್ದು ಹೊಳೆಯೊಳಕ್ಕೆ. ಕೆಲಕಾಲ ಈಜಾಟದ ನಂತರ ಸವಿದ ಗುಂಡಿಗೇರಿ ಹೋಟೆಲಿನ ಚಪಾತಿ ಪೋರ್ಕ್ ಪ್ರೈ ಯಾವುದೇ ಫೈವ್ ಸ್ಟಾರ್ ಹೊಟೆಲಿನ ರುಚಿಗಿಂತ ಮಿಗಿಲಾಗಿತ್ತು.
ಹೊಳೆಯ ದಡದಲ್ಲಿ ಮೈಮರೆತು ನಿದ್ದೆ ಮಾಡಿದ ನಾವು ಎದ್ದಾಗ ಆಗಲೇ ಸಂಜೆ ನಾಲ್ಕು ಗಂಟೆಯಾಗಿತ್ತು. ಅಲ್ಲಿಂದ ನಮ್ಮ ಪಯಣ “ಬೂದಿಚೌಡಿ”ಯ ಗಿಡಿಯ ಕಡೆಗೆ. ದೇವರಾಜು ಎಂದಿಗಿಂತಾ ಈ ಬಾರಿ ಬಹಳ ಉಲ್ಲಾಸದಿಂದಿದ್ದ. ಇನ್ನೇನು ಹತ್ತು ಕಿಲೋಮೀಟರ್ ದೂರವಷ್ಟೇ. ಘಟ್ಟ ಇಳಿದು ಸುಬ್ರಮಣ್ಯ ಹೋಗಿ ಬಂದು ಬಿಡೋಣ”ಎಂದ. ಸಮಯ ನೋಡಿಕೊಂಡೆ. ಐದು ಘಂಟೆಯಾಗಿತ್ತು. ಆರು ಘಂಟೆಯ ಒಳಗೆ ಅರಣ್ಯದಿಂದ ಹೊರಬಂದುಬಿಡಬೇಕು. ಆಗ ಹಿಂಸ್ರಪಶುಗಳೆಲ್ಲಾ ತಮ್ಮ ಅಡಗುದಾಣ ಬಿಟ್ಟು ಹೊರಬರುವ ಸಮಯ. ನಂತರ ಅರಣ್ಯವೆಲ್ಲಾ ಅವುಗಳದ್ದೇ:.ಮಿತ್ರ ರೇಂಜ್ ಅಧಿಕಾರಿ ಹೇಳಿದ ಮಾತು ನೆನಪಾಯಿತು. ಈ ಸಲ ಬೇಡ ನಡೀ ಮಾರಾಯ. ಸಾಕಷ್ಟು ಕೆಳಗಿಳಿದು ಬಂದಿದೀವಿ.ಏರುದಾರಿಯಲ್ಲಿ ಅಪಾರ ಹೇರ್ ಪಿನ್ ಕವರ್ ಗಳನ್ನು ಬೇರೆ ದಾಟಬೇಕು ನಮ್ಮ ಸ್ಕೂಟರ್. ಇನ್ನೊಂದು ಅರ್ದಗಂಟೆಯಲ್ಲಿ ಅರಣ್ಯದಿಂದ ಆಚೆ ಬಂದುಬಿಡೋಣ. ಎನ್ನುತ್ತಾ ಸ್ಕೂಟರ್ ಸ್ಟಾರ್ಟ ಮಾಡಿದೆ.
ಸ್ಕೂಟರ್ ಸಹಾ ನಮ್ಮಂತೆಯೇ ದಣಿದಿದ್ದಂತೆ ತೋರಿತು. ನಮ್ಮಿಬ್ಬರನ್ನು ಎಳೆದುಕೊಂಡು ನಿದಾನವಾಗಿ ಏರುದಾರಿಯಲ್ಲಿ ಸಾಗತೊಡಗಿತು. ಐದಾರು ಹೇರ್ ಪಿನ್ ಕವರ್ ಗಳನ್ನು ಹಿಂದೆ ಬಿಟ್ಟು ಬರುವಷ್ಟರಲ್ಲಾಗಲೇ ಅರಣ್ಯದಲ್ಲಿ ಮಬ್ಬುಗತ್ತಲೆ ಕವಿಯತೊಡಗಿತು. ಸ್ಕೂಟರಿನ ಆಕ್ಸಿಲೇಟರ್ ಎಷ್ಟು ಒತ್ತಿದರೂ ವೇಗವೇನೂ ಹೆಚ್ಚಾದಂತೆ ತೋರುತ್ತಿಲ್ಲ. ಮನಸ್ಸಿನಲ್ಲಿ ಯಾಕೋ ಸಣ್ಣಗೆ ಆತಂಕ ಶುರುವಾಯಿತು. ಇರಲಿ, ಕತ್ತಲಾಗುವ ವೇಳೆಗೆ ಹೇಗೋ ಅರಣ್ಯದ ನೆತ್ತಿ ತಲುಪುತ್ತೇವೆ ಎಂದು ಧೈರ್ಯ ತಂದುಕೊಳ್ಳುತ್ತಾ ಮುಂದುವರೆಯತೊಡಗಿದೆವು. ಮತ್ತೊಂದು ಹೇರ್ ಪಿನ್ ಕವರ್ ಎದುರಾಯಿತು. ರಸ್ತೆಯ ಎಡಬಾಗಕ್ಕೆ ಮೇಲಕ್ಕೂ, ಬಲಬಾಗಕ್ಕೂ, ಹೊಳೆಯ ಕಡೆಗೆ ಪ್ರಪಾತದ ಕಡೆಗೂ ಹಬ್ಬಿಕೊಂಡಿರುವ ದಟ್ಟಕಾಡು. ಎದುರಿಗೆ ಎಡಕ್ಕೆ ತಿರುವು ಪಡೆದ ಹೇರ್ ಪಿನ್ ಕರ್ವ. ಸದ್ದು ಮಾಡುತ್ತಾ ಪ್ರಯಾಸದಿಂದ ದಾರಿ ಕ್ರಮಿಸುತ್ತಿತ್ತು ಸ್ಕೂಟರ್.
ತಿರುವನ್ನು ಬಳಸಿ ಎಡಕ್ಕೆ ಏರುದಾರಿಯ ಕಡೆಗೆ ತಿರುಗಿದೆವು. ಎದುರಿಗೆ ಹತ್ತು ಮಾರು ದೂರದಲ್ಲಿ ರಸ್ತೆಯ ಸಮೀಪವೇ ಏನೋ ಚಲನೆ. ನೋಡ ನೋಡುತ್ತಿದ್ದಂತೆಯೆ ಆ ಮಬ್ಬು ಬೆಳಕಿನಲ್ಲಿ ಪ್ರಾಣಿಯೊಂದು ರಸ್ತೆಗಿಳಿಯುವುದು ಕಾಣಿಸುತ್ತದೆ. ಚಲಿಸುತ್ತಿದ್ದ ವಾಹನದ ವೇಗ ತಗ್ಗಿತು. ಒಂದು ಮಾರುದ್ದದ ನಮ್ಮ ಸೊಂಟದಷ್ಟು ಎತ್ತರದ ಕಪ್ಪು ಬಣ್ಣದ ಚಿರತೆಯೊಂದು ನಮ್ಮೆದುರಿಗೆ ಸಮೀಪದಲ್ಲಿಯೇ ಪ್ರಕಟವಾಗತೊಡಗಿತು. ನಿದಾನಕ್ಕೆ ರಸ್ತೆಗೆ ನೆಗೆದ ಆ ಪ್ರಾಣಿ “ಜರ್ಕ್” ಹೊಡೆದಂತೆ ದೇಹವನ್ನು ಹಿಂದೆಮುಂದೆ ತೂಗಿಸಿ, ವಾಹನದ ಸದ್ದು ಕೇಳಿ ಹಾಗೆಯೇ ನಿಂತುಕೊಂಡಿತು. ಅದರ ನೀಳವಾದ ಬಾಲ ಮೇಲಕ್ಕೆ ಸುರುಳಿ ಸುತ್ತಿಕೊಂಡಿತ್ತು.
ಅರಣ್ಯದ ಮದ್ಯೆ ಚಿರತೆಯೊಂದು “ಮೆಜೆಸ್ಟಿಕ್” ಆಗಿ ನಿಂತುಬಿಟ್ಟಿದೆ. ಭಯ ರೋಮಾಂಚನ ಒಟ್ಟಿಗೆ ಆಗತೊಡಗಿತು. ಪರಿಸ್ಥಿತಿ ನಮ್ಮ ಕೈಯಲ್ಲೇನೂ ಇರಲಿಲ್ಲ. ಮುಂದೆ ಏನಾಗಬಹುದು? ನಮ್ಮೆಡೆಗೆ ತಿರುಗಿ ಮೈಮೇಲೆ ನೆಗೆದರೆ ಏನು ಗತಿ? ಕಾತುರದಿಂದ ನಿರೀಕ್ಷಿಸತೊಡಗಿದೆವು. ನಿಂತ ನಿಲುವಿನಲ್ಲೇ ಆ ಚಿರತೆ ಬಲಕ್ಕೆ ಕತ್ತು ಹೊರಳಿಸಿ ನಮ್ಮನ್ನು ದೃಷ್ಟಿಸಿತು. ಮುಂದಿನ ಕ್ಷಣ ಏನಾಗಬಹುದು? ಮೇಲೆ ನೆಗೆದರೆ ಪಾರಾಗಲು ಸಾದ್ಯವೇ? ತೀರಾ ಸನಿಹದಲ್ಲೇ ಇದ್ದ ಆ ಪ್ರಾಣಿ ಅಸಡ್ಡೆಯಿಂದ ಒಮ್ಮೆ ನಮ್ಮನ್ನು ನೋಡಿತು. ಒಂದು ಕ್ಷಣವೂ ತಡಮಾಡದೆ ಹೆಜ್ಜೆಕಿತ್ತು ಅಷ್ಟೇ “ಮೆಜೆಸ್ಟಿಕ್” ಆಗಿ ಬಲಗಡೆ ಕಾಡಿಗೆ ಇಳಿದು ಸಾವಕಾಶವಾಗಿ ಹೊರಟು ಹೋಯಿತು. ಇದುವರೆಗೂ ಉಸಿರು ಬಿಗಿಹಿಡಿದು ಕುಳಿತ್ತಿದ್ದ ನಾವು ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು.
ಮೇಲೆ ನೆಗೆದು ಬಿಡಬಹುದು ಅಂದುಕೊಂಡಿದ್ದೆ. ಆದರೆ ಅಷ್ಟು ಅಸಡ್ಡೆಯಾಗಿ ನಮ್ಮ ಕಡೆ ನೋಡಿ ಹೊರಟು ಹೋಯಿತ್ತಲ್ಲ. ನಮ್ಮ ಬಗ್ಗೆ ಅದು ಏನು ಅಂದುಕೊಂಡಿರಬಹುದು ಎಂದ ದೇವರಾಜು. ನೀವು ಯಾವ ಲೆಕ್ಕ ನನಗೆ! ಹೋಗಿ ಬದುಕಿಕೊಳ್ಳಿ ಕುನ್ನಿಗಳಾ! ಎನುತಾ ಹೊರಟು ಹೋಗಿರಬಹುದು ಎನುತ್ತಾ ಚಾಲನೆಯಲ್ಲೇ ಇದ್ದ ಸ್ಕೂಟರ್ನ ವೇಗ ಹೆಚ್ಚಿಸಿದೆ.







‘bisile’ takshana horadbeku anstide.. nanna malenadina prayana odta odta oorige hogi banda anubhava..
kutohalakaariyaagide…