ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುಹೂವಿನ ಸೊಲ್ಲು : ಚೌಕಟ್ಟಿಲ್ಲದ ಚಿತ್ರ…

ರೇಣುಕಾ ನಿಡಗುಂದಿ

ಸುಮ್ಮನೇ ಇದಿರಾಗುವ ಕ್ಷಣಗಳನ್ನು ಹಾಗೇ ಸ್ವೀಕರಿಸುವ ಮನೋಭಾವನೆಯಿದ್ದರೇನೆ ಬದುಕಲು ಸಾಧ್ಯವಾಗುವುದು. ಶರದೃತುವಿನ ಚೆಲುವೆಲ್ಲ ಕಳೆದು ಫಾಲ್ಗುಣದ ’ಪತಝಡ್’ ನ ಒಣಗಾಳಿ ಸುಡುಬಿಸಿಲಿಗೆ ಎಲೆಗಳೆಲ್ಲಾ ಉದುರಿ ಹೊಸ ಚಿಗುರೆಲೆ ಮೂಡುವ ಮಧುಮಾಸ ಕಾಲ. ಅರಳಿ, ಹೊಂಗೆಯ ಮರದಲ್ಲಿ ಆಗತಾನೆ ಹುಟ್ಟಿದ ಎಳೆಬಿಸಿಲೇ ಎಲೆಗಳಾಗಿ ಹಸಿ ಹಸಿ ಬಿಸಿಲೆಲೆಗಳು ಮುದನೀಡುತ್ತವೆ. ಮಾವು ಹೂ ಬಿಟ್ಟುಕೊಂಡು ನಿಂತಿದೆ. ಬಕೈನಾ ಮರದಲ್ಲಿ ಗಮಗಮಿಸುವ ಹೂಗೊಂಚಲು. ಬಣ್ಣ ಬಣ್ಣದ ಹಕ್ಕಿಗಳ ಚಿಲಿಪಿಲಿಗೆ ಕಿವಿಗೊಡುತ್ತ ಇಂದಿನ ಎಚ್ಟಿಯಲ್ಲಿ ಖುಶವಂತರ ಅಂಕಣದಲ್ಲಿ ದಿಲ್ಲಿಯ ಪತಝಡ್ ನಂತೆಯೇ ಮನುಷ್ಯನ ಬದುಕು ಎನ್ನುವ ಅವರ ಜೀವನಪ್ರೀತಿ ಇಷ್ಟವಾಗುತ್ತದೆ. ಉರ್ದು ಕವಿ ಶಾದ್ ಆಜಿಂ ಬಾದಿಯ ಕೆಲ ಪದ್ಯಗಳನ್ನೂ ಅನುವಾದಿಸಿದ್ದರು.
 
“Suni Hikayat e Hasti to darmiyan se suni,
na ibtida ki khabar na inteha maloom.”
 
What I have heard of the story of life is only about the middle
I know not its beginning; I know not its end.

ದೆಹಲಿಯ ಬೃಹತ್ ಆಲದ ಮರದಂತಿರುವ ಖುಶವಂತರನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರೆ ಈ ಊರಿನಲ್ಲಿ ಪಡೆದ ನೋವು-ನಲಿವುಗಳ ಪರಿಭಾಷೆಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವೆನ್ನುವ ನಿರಾಳತೆ ಆವರಿಸಿಕೊಳ್ಳುತ್ತದೆ. ಥೇಟ್…ಈ ಪತಝಡ್ ನಂತೆಯೇ ಉದುರಿ ಎಲ್ಲ ಕಳಚಿಕೊಳ್ಳುತ್ತಲೇ ಮತ್ತೆ ಹೊಸದನ್ನು ಒಳಗೊಳ್ಳುತ್ತ ಚಿಗುರೊಡೆಯುತ್ತ ಸಾಗುವ ಬದುಕಿನ ಈ ವಿಸ್ಮಯದ ಪರಿಯೆ ಒಂದು ಒಗಟಿನಂತಿದೆ. ನಮ್ಮ ಬದುಕು ನಮ್ಮೊಬ್ಬರನ್ನೇ, ನಮ್ಮೊಬ್ಬರಿಗಾಗೆ ಅವಲಂಬಿಸಿಲ್ಲವಲ್ಲ ! ಅದು ಅನೇಕರ ಸ್ನೇಹ-ಪ್ರೀತಿಗಳನ್ನೊಳಗೊಂಡ ಚೈತ್ರದ ಚಿಗುರಿನಂತೆ. ಸ್ನೇಹ-ಪ್ರೀತಿ- ಸಂಬಂಧಗಳು ಮತ್ತು ಅವುಗಳನ್ನು ನಿಭಾಯಿಸುವ ಋಣಭಾರ, ಅವಲಂಬನೆಗಳಂತ ಮಾತನ್ನು ಯೋಚಿಸಲು ಹೊರಟರೆ ನಾವು ಬದುಕುವುದೇ ಕಷ್ಟವಾಗಿಬಿಡುತ್ತದೆ. ಸಂಬಂಧಗಳೇ ಹೀಗೆ ಪತಝಡ್ ತರಾ ಅಲ್ಲವಾ? ಕೆಲವು ತಾವಾಗಿ ಉದುರಿಹೋಗಿಬಿಡುತ್ತವೆ. ಕೆಲವು ಎಷ್ಟೇ ವೈರುಧ್ಯಗಳಿದ್ದರೂ ಜಗ್ಗದೇ, ಅಲ್ಲಾಡದೇ ಅಚಲವಾಗಿರುತ್ತವೆ. ಪ್ರೀತಿಯನ್ನು ಉಸಿರಾಡಲು ಬಿಡಬೇಕು, ಅದನ್ನು ಸಂಬಂಧದ ಚೌಕಟ್ಟಿನಲ್ಲಿ ಭದ್ರಪಡಿಸಲು ಹೋಗಬಾರದು ಎನ್ನುವ ಅವನ ಮಾತುಗಳು ಎಷ್ಟು ಸತ್ಯ !
ಆದರೆ ದಿನಾ ನಾ ನೋಡುವ ಇವನಿಗೂ ಈ ಋತುಗಳ ಮೋಹಕ್ಕೂ ಯಾವ ಹೆಸರಿಲ್ಲದ, ವ್ಯಾವಹಾರಿಕ, ಭಾವನಾತ್ಮಕ, ಕಾರ್ಯಕಾರಣ ಅನುಬಂಧ. ನಾ ಬಿಟ್ಟೆನೆಂದರೂ ಬಿಡದ ನಂಟು. ಹೆಸರಿಲ್ಲದ ವ್ಯಾಮೋಹ. ಎಳೆತನದ ವ್ಯಾಮೋಹ ಕಾಲಪ್ರವಾಹದಲ್ಲಿ ಅಂತಃಕರಣದಲ್ಲಿ ಅದ್ದಿಹೋಗುವ ಆಪ್ಯಾಯತೆಯ ಚೆಲುವೂ ಪದಗಳಿಗೆ ನಿಲುಕುವುದಿಲ್ಲ. ಆ ಚೆಲುವನ್ನೂ ಚೌಕಟ್ಟಿಗೆ ಸಿಲುಕಿಸದೇ ಒಂದು ಸುಂದರ ಫೋಟೋ ಫ್ರೇಮ್ ಹಾಗೆ ದೂರದಲ್ಲಿ ನಿಂತು ನೋಡಿ ಆನಂದಿಸುವುದು ಹೆಚ್ಚು ಸುಖಕರ. ಪೋಲಿಯೋಟೆಕ್ ಕಾಲಿನಿಂದಾಗಿ ಬ್ಯಾಲನ್ಸ್ ತಪ್ಪಿ ಹೋಗಿ ಎಲ್ಲಾದರೂ ಬಿದ್ದು ನೋವು ಮಾಡಿಕೊಂದಾಗಲು ಮುಜುಗರ ಪಡದೇ ಮಗುವಿನಂತೆ – ’ಇವತ್ತು ನಾ ಬಿದ್ದೆ ’ ಎನ್ನುವ ಅವನ ಮಗುತನಕ್ಕೆ ಸೋಲುತ್ತಾಳೆ. ಕಾಲಿಗೆ ವೊಲಿನಿ ಹಚ್ಚಿ, ಕ್ರೇಪ್ ಬ್ಯಾಂಡ್ ಹಾಕಿ ಸಾಕ್ಸ್ ಏರಿಸಿ ಶೂ ಹಾಕಲು ಸಹಾಯ ಮಾಡುವಾಗಲೂ ಅವಳಿಗೆ ಅವನ ಅಮ್ಮನಂತೆ ಇದೆಲ್ಲ ಮಾಡಲು ಖುಶಿಯಾದದ್ದು ಯಾಕೋ !

ಛೋಟಿ ದಿವಾಲಿಯ ಮಿಠಾಯಿ, ಡ್ರೈ ಫ್ರೂಟ್ ಡಬ್ಬಗಳ ಉಡುಗೊರೆಯೊಂದಿಗೆ ಎಲ್ಲರೂ ಮನೆಗೆ ತೆರಳುತ್ತಿದ್ದರಲ್ಲ. ಅವತ್ತೂ ಆಕೆ ಹೊರಡಬೇಕು ಆಗಲೇ ಅವನು ಮಕ್ಕಳಂತಹ ಶರದೃತುವಿನ ಸಂಭ್ರಮವನ್ನೆಲ್ಲ ತುಂಬಿಕೊಂಡಂತೆ ” ನಂಜೊತೆ ಬಾ ..ಸಂತುಷ್ಟಿಗೆ ಹೋಗೋಣ, ಏನೋ ಖರೀದಿಸಬೇಕೆಂದಾಗ’ ಹೆಜ್ಜೆಗಳು ನವಿಲಾದವು. ಮುಖ ಹೂವಾಗಿ, ನೋಟ ದುಂಬಿಯಾಗಿ ಜೊತೆಯಾದವು. ಆಗಿನ್ನೂ ಚಳಿಗಾಲ ಮೆಲ್ಲನೆ ಹೆಜ್ಜೆಯೂರುವ ಮೋಹಕ ಮುಸುಕಿನ ಇಳಿ ಹಗಲು. ಅದು ಅವನ ಆಜ್ಞೆಯೆನ್ನಬೇಕೋ, ಕರ್ತವ್ಯದ ಭಾಗವೆನ್ನಬೇಕೋ ಗೊತ್ತಾಗಲಿಲ್ಲ ಅವಳಿಗೆ. ಅವನು ಕರೆದ ಕರೆಗೆ ಅವಳು ಓಗೊಟ್ಟಳು ಅಷ್ಟೇ. ಕಾಲೇಜು ತಪ್ಪಿಸಿ ಓಟಕಿತ್ತ ತರುಣ ತರುಣಿಯಂತೆ ಸಂತುಷ್ಠಿಯಲ್ಲಿ ಅವತ್ತು ಇಬ್ಬರೂ ಖರೀದಿಸಿದ್ದೇ ಖುಶವಂತರ ಸಿಂಗರ ಪುಸ್ತಕಗಳನ್ನು. ಇವಳು ಖುಶ್ವಂತರ ಜೋಕ್ ಪುಸ್ತಕ ಹಿಡಿದರೆ ಅವನು ತೆಗೆದಿದ್ದು – ’ದ ಕಂಪನಿ ಆಫ್ ದಿ ವುಮನ್’ ಆಗ ಬಹು ಚರ್ಚೆಯಲ್ಲಿದ್ದ ಪುಸ್ತಕವನ್ನು. ಆ ಬಗ್ಗೆ ಆಕೆ ಯಾವ ರಿವ್ಯೂ ಓದಿದ್ದಿಲ್ಲ, ಚರ್ಚೆಯಲ್ಲಿದ್ದುದು ಅಲ್ಲಲ್ಲಿ ಕೇಳಿದ್ದು. ಅವನ ಹೆಂಡತಿಗೆಂದು ಇಂಟಿರೀಯರ್ ವಿನ್ಯಾಸ, ಯೋಗಾ ಇತ್ಯಾದಿ ಪುಸ್ತಕಗಳನ್ನೂ ಸಂತುಷ್ಠಿಯ ’ಫುಲ್ ಸರ್ಕಲ್ಲಿ’ ನಲ್ಲಿ ಖರೀದಿಸುವಾಗ ಅವನೆದೆಯುದ್ದಕ್ಕೂ ನೀಳವಾಗಿ ಅರಳಿಕೊಂಡು ನಿಂತ ಅವಳಿಗೆ ಪುಸ್ತಕ ಒಪ್ಪಿಸುತ್ತಾ – ನೀನೆ ಮೊದಲು ಓದಿಕೊಡು ಎಂದು ’ದ ಕಂಪನಿ ಆಫ್ ದಿ ವುಮನ್’ ಕೊಟ್ಟಿದ್ದ.
ಆಕೆ ವಿಚಿತ್ರ ಅನುಭೂತಿಯಲ್ಲಿ ಪುಳಕಗೊಳ್ಳುತ್ತಾ ಕದ್ದು ಕದ್ದು ಓದಿ ಮುಗಿಸಿ ಮುಸಿಮುಸಿ ನಗುತ್ತಲೆ ಅದನ್ನು ಅವನಿಗೆ ತಿರುಗಿಸಿದ್ದಳು. ಇಂಥ ಸೆಕ್ಸು ಪಕ್ಸು ಇರೋ ಪೋಲಿ ನಾವೆಲ್ ನ ಆಕೆಗೇಕೆ ಕೊಟ್ಟೆ ಎಂದು ಅವನಾಕೆ ಅಚ್ಚರಿಯಲ್ಲಿ ತಕರಾರು ತೆಗೆದರೂ ಅವ ತಣ್ಣಗೇ ಟೈ ಕಟ್ಟಿಕೊಳ್ಳುತ್ತ -ಏನಾಯಿತೀಗ ? ಅವಳಿಗೂ ಮದುವೆಯಾಗಿದೆ, ಅವಳೇನು ಮಗೂವಲ್ಲವಲ್ಲ ! ಎಂದಿಷ್ಟೇ ಹೇಳಿದ್ದನಂತೆ. ಈ ಗುಟ್ಟನ್ನೂ ಅವ ಬಚ್ಚಿಡಲಾರ. ಇವಳಿಗೆ ಮರುದಿನ ಬಂದು ಪಾಠ ಒಪ್ಪಿಸುವಂತೆ ಒಪ್ಪಿಸಿದಾಗಲೂ ಇವಳು ಅವನ ಟೀಚರಳಂತೆ ಕಣ್ಣು ಕಿಸಿದು ಹುಸಿಮುನಿಸು ತೋರಿದ್ದಳು. ಅವನು ಅವಳೆದುರು ತೆರೆದ ಪುಸ್ತಕದಂತೆ ನಿಚ್ಚಳ.
ಮುಂದೆ ಅದನ್ನು ಆಕೆ ಮರೆತೇಹೋದಳು. ಕಾಲದ ಜೊತೆಗೆ ಅವನೂ. ಅಂದೇ ಇಬ್ಬರೂ ಪಕ್ಕದ ರೆಶ್ಟ್ರುರಾಂ ದಲ್ಲಿ ಥೈಮ್ ಆಂಡ್ ಬೇಸಿಲ್ ಸೂಪ್ ಕುಡಿದಿದ್ದು ತಡವಿಲ್ಲದೇ ಆಗ ತಾನೆ ಅರಳುತ್ತಿದ್ದ ಪಾರಿಜಾತದ ಘಮ್ಮನೆಯ ಗಮದಂತೆ ಮನೆವರೆಗೂ ಹರಡಿದ್ದಕ್ಕೆ ಸುಮ್ಮನೆ ನಕ್ಕಿದ್ದಳು. ಅವನಿಗೂ ಹೊಸ ಪುಳಕ. ಋತು ಬದಲಾಗುವ ಅನಂತ ಬೆರಗಿನಲ್ಲಿ ಅಲ್ಲಿನ ಸದ್ದು ಗದ್ದಲದ ಯಾವ ಪರಿವೆಯೂ ಇದ್ದಿಲ್ಲ. ತಮ್ಮದೇ ಮಾತು, ಮೌನದ ಸಿಹಿಗಾಳಿಯಲ್ಲಿ ಅವನೊಂದಿಗೆ ತಾನು ಬೆಳೆಯುವುದರ ಬಗೆಗೆ ಒಂದು ತೆರನಾದ ಸಮ್ಮೋಹವಿರುವಂತೆ ತೋರುತ್ತಿತ್ತ್ತು ಆಕೆಗೆ. growing with you ಅನ್ನುವುದು ಪದಗಳಿಂದ ಆಚೆ ಬಂದು ಅನುಭವಕ್ಕೆ ಒದಗಿದಾಗ ಆಗುವ ಸಂತಸ , ನೆಮ್ಮದಿಯೆಲ್ಲ ಅವಳಲ್ಲಿ ನೆಲೆಸುತ್ತಿತ್ತು. ತನ್ನ ಬದುಕು, ಬರವಣಿಗೆ, ಓದು, ಆಸಕ್ತಿ, ಎಲ್ಲದರಲ್ಲೂ ಜೊತೆಗೆ ಸಾಥ್ ನೀಡಿದ ಮನಸು ಚೌಕಟ್ಟಿನಿಂದಾಚೆ ನಿಂತು ನಗುತ್ತಿರುವ ಆಭಾಸ.
ಸಂತುಷ್ಟಿಯಲ್ಲಿ ಇವಳೊಂದಿಗೆ ಕೂತ ಇವನನ್ನು ’ ಮಾಮೂ ಎಲ್ಲಿ ಹೋಗಿದ್ದ’ ಎಂದು ತಂಗಿಯ ಮಕ್ಕಳು ಕೇಳಿ ದಿಗಿಲು ಹಿಡಿಸಿದ್ದನ್ನೂ ನಗುತ್ತ ಹೇಳಿದವ. ಅವಳ ಗಾರ್ಲಿಕ್ ಟೋಸ್ಟ್ ಗೆ ಬೆಣ್ಣೆ ಸವರಿಕೊಟ್ಟು ಗೆಳೆಯನಂತೆ ಹತ್ತಿರವಾದವನೊಂದಿಗೆ ಯಾವ ಋಣಭಾರವಿಲ್ಲದ ಬಂಧ. ಯಾವ ಮುಚ್ಚಳಿಕೆಯಿಲ್ಲದ ಸ್ನೇಹ. ಒಂದು ಪ್ರಾಣಿಯನ್ನು ಸಾಕಿದರೂ ಅದರ ಬಗ್ಗೆ ಮೋಹವುಂಟಾಗುತ್ತದೆ. ನಾವು ಮನುಷ್ಯರು ಯಾಕೆ ಸ್ನೇಹಕ್ಕೆ ಪ್ರೀತಿಗೆ ಅಂಜುತ್ತೇವೆ ಗೊತ್ತಿಲ್ಲ. ಅವನೊಂದಿಗೆ ಅವಳಿಗೆ ಅಂಜಿಕೆಯಾದದ್ದೇ ಇಲ್ಲ. ಒಮ್ಮೊಮ್ಮೆ ಅಪ್ಪನಂತೆ ಗದರಿದ್ದಾನೆ. ಮತ್ತೆ ಕರಗಿದ್ದಾನೆ ಯಾತಕೋ…
ಥೇಟ್ ತನ್ನ ಅಪ್ಪನಂತೆ ಅವನು ’ನಿನ್ನ ಇಂಗ್ಲಿಷ್ ಸರಿಮಾಡ್ಕೋ ಹೋಗು’ ಎಂದು ಗದರಿಸಿದ್ದಕ್ಕೆ ಮರುದಿನ ಸಾವಿತ್ರಿ ಸಿಮೇಮಾ ಥಿಯೇಟರಿನ ಎದುರಿನ ’ಇಂಗ್ಲಿಷ್ ಕಲಿಕೆಯ ಬ್ರಿಟಿಷ್ ಸ್ಕೂಲಿಗೆ’ ಮೂರು ತಿಂಗಳ ಕೋರ್ಸಗೆ ಸೇರಿಯೇ ಬಿಟ್ಟಿದ್ದಳು. ಕಾಲು ಮುರಿದುಕೊಂಡು ಮನೆಯಲ್ಲಿ ಕೂತಾಗಲೂ ಕೂರಲಾರದೇ ನಾನು ಆಫೀಸಿಗೆ ಹೋಗ್ಬೇಕು ಎಂದು ಹಠಮಾಡಿ ಪ್ಲಾಸ್ಟರ್ ಹಾಕಿದ ಕಾಲಿನಲ್ಲೇ ಆಟೋ ಹಿಡಿದು ಬರುತ್ತಿದ್ದವಳನ್ನು ಏನೆನ್ನಬೇಕೋ ಅವನಿಗೂ ತಿಳಿಯದ ಭಾವ. ಇನ್ನೊಬ್ಬರಿಗಾಗಿ ಔಷಧಿ ಕೊಂಡುಕೊಂಡು ಹೋಗಿ ಕೊಡುವ , ಇನ್ನೊಬ್ಬರ ಒಳಿತಿಗಾಗಿ ಶಿಫಾರಸ್ಸು ಮಾಡುವ ಇವಳು ಅವನಿಗೆ ಮೆಚ್ಚು.
ಯಾವನೋ ಕಂತ್ರಿ ಇವಳ ಬಗ್ಗೆ ಕಂಪ್ಲೇಟ್ ಮಾಡಿದಾಗ ಅವಳ ಪಕ್ಷ ವಹಿಸಿ ಚೇರಮನ್ ಜೊತೆ ವಾದಿಸಿದ ಇವನನ್ನು ತಲೆಮೇರಿಸಿಕೊಂಡು ಪೂಜಿಸತೊಡಗಿದ್ದಳು. ತನ್ನ ಡಿಪಾರ್ಟಮೆಂಟ್ ಕಿತ್ತುಕೊಂಡು ಹೋಗಿ ಮತ್ತೆಲ್ಲೋ ಬಿದ್ದಾಗ ನಿಮ್ಮ ಮುಖವನ್ನೇ ನೋಡೋದಿಲ್ಲ ಎಂದು ಕೂಗಿದ್ದವಳು ಎಲ್ಲ ಮರೆತು ಬಾಯಿಮುಚ್ಚಿಕೊಂಡು ಕಿತ್ತುಹೋದ ಅವನ ಶರಟಿನ ಬಟನ್ನು ಹಚ್ಚಿಕೊಟ್ಟಿದ್ದಳು. ಸೂಜಿ ದಾರ ಹಿಡಿದು ಅವನು ಹಾಕಿಕೊಂಡಿರುವಂತೆಯೇ ಶರಟು ಬಾಯಿತೆರೆದುಕೊಂಡ ಜಾಗದಲ್ಲಿ ಬೆರಳು ತೂರಿಸಿ ಮೆಲ್ಲಗೆ ಕಣ್ಣು ಕೀಳಿಸಿ ಬಟನ್ ಹಚ್ಚುತ್ತಿದ್ದವಳನ್ನು ಅವನು ಹೇಗೆ ಕಣ್ಣುತುಂಬಿಕೊಳ್ಳುತ್ತಿದ್ದನೋ ಕಾಣಿಸಲಿಲ್ಲ.
ಡಿವಿಜಿಯವರ ’ವನಸುಮ’ದಂತೆಯೇ ಕೆಲವರು ಕೆಲವರ ಬದುಕಿನ ಹಾದಿಗೆ ನೀರೆರೆದು ತಂಪೆರೆಯುತ್ತಾರೆ. ಯಾವ ಡೀಲ್ ಇಲ್ಲದೇ. ಯಾವ ಉದ್ದೇಶಿತ ಬಯಕೆಗಳಿಲ್ಲದೇ. ಹೌಸಿಂಗ್ ಸ್ಕೀಮ್ ನಲ್ಲಿ ಅರ್ಜಿ ಗುಜರಾಯಿಸುವಾಗಲೂ “ಇರು ನಾನು ಎರಿಯಾ ನೋಡಿಕೊಂಡು ಬಂದು ಹೇಳ್ತಿನಿ” ಎಂದವ ಕಂಪನಿಯಿಂದ ಆ ರಕಮನ್ನೂ ಸಾಲವಾಗಿ ನೀಡಿ ತಾನಿಲ್ಲಿ ನೆಲೆಸುವಂತೆ ಮಾಡಿದವನನ್ನೂ, ತನ್ನ ಪುಸ್ತಕ ಪ್ರೀತಿಯನ್ನು ಅಪಾರವಾಗಿ ಪೋಷಿಸಿದ ಅವನನ್ನು ಪ್ರೀತಿಯಿಂದ ನೆನೆಯದೇ ಇರಲು ಆಗುತ್ತದಾ? ಒಳಗೊಳಗೇ ಸೆಲೆಯಂತೆ ಮಧುರವಾಗಿ ಜಿನುಗುತ್ತ ಸುಮ್ಮನೆ ಇದ್ದುಬಿಡುವ ಈ ನೇಹಕ್ಕೂ, ವ್ಯಾಮೋಹಕ್ಕೂ ಯಾವುದಾದರೂ ಚೌಕಟ್ಟು ಬೇಕಾ?….

‍ಲೇಖಕರು avadhi

22 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading