ಜೋಗಿ ಬರೆದ ಅರಣ್ಯ ಪರ್ವ : ಕಾಡೆಲ್ಲ ಒಂದೇ, ಕಾಡು ಬೇರೆಬೇರೆ, ಕಣ್ಣೇ ಪ್ರಮಾಣ

ಜೋಗಿ

ಪುರುಸೊತ್ತಾದಾಗಲೆಲ್ಲ ಗುರುಗಳ ಜೊತೆ ಅಂಡಲೆಯುತ್ತಾ, ಕಾಡು ಸುತ್ತುತ್ತಾ, ಅವರು ಊರಿಗೆ ಬಂದಾಗ ಹೇಳುವ ಕಾಡಿನ ಪ್ರಸಂಗಗಳನ್ನು ಕೇಳಿಸಿಕೊಳ್ಳುತ್ತಾ ಕಾಲ ಕಳೆಯುವ ದಿನಗಳು ಮತ್ತೆ ಶುರುವಾಗಿವೆ. ಮೊನ್ನೆ ಮೊನ್ನೆ ದಿಂಡಿಗಲ್ ಆಸುಪಾಸಿನ ಕಾಡುಗಳಲ್ಲಿ ಅಲೆದಾಡಿ ಬಂದಿದ್ದ ಗುರುಗಳು ಕಿನ್ನಿವಾಡಿ, ಪಳನಿ ಬೆಟ್ಟ, ಆನಮುಡಿ ಮುಂತಾದ ಊರುಗಳನ್ನೂ ಅಲ್ಲಿಯ ಹಸುರುಕ್ಕುವ ಕಾಡನ್ನೂ ವರ್ಣಿಸುತ್ತಾ ಕೂತಿದ್ದರು. ಪ್ರತಿಸಲ ಕಾಡಿಗೆ ಹೋಗಿ ಬಂದಾಗಲೂ ಅದೇ ಮೊದಲ ಸಲ ಕಾಡು ನೋಡಿದವರಂತೆ ವರ್ಣಿಸುವ ಅವರ ರೀತಿ ಬೆರಗುಗೊಳಿಸುತ್ತಿತ್ತು. ನಮಗೆ ಎಲ್ಲಾ ಕಾಡುಗಳೂ ಒಂದೇ ಥರ ಕಾಣಿಸುತ್ತಿದ್ದರೆ, ಅವರು ಆ ಕಾಡೇ ಬೇರೆ, ಈ ಕಾಡೇ ಬೇರೆ. ಒಂದೊಂದು ಕಾಡೂ ಬೇರೆಯೇ ಥರ ಇರುತ್ತೆ. ಅದು ನಿಮಗೇ ಗೊತ್ತಾಗಬೇಕು. ಅಲ್ಲೂ ಇಲ್ಲೂ ಎಲ್ಲೂ ಮಹಾಗನಿ, ಪೈನ್ ಮರಗಳು, ಲೆಮನ್ ಗ್ರಾಸೂ, ಹೂಬಿಡುವ ಮುತ್ತುಗವೂ, ಹೂಬಿಡದ ಆಲವೂ, ಹೊಳೆಯುವ ಕಾಯಿಗಳನ್ನು ಹೊತ್ತು ನಿಂತ ನೆಲ್ಲಿಯೂ ಕಾಣಲಿಕ್ಕೆ ಸಿಗುತ್ತದೆ. ನಾಲಗೆಗೆ ರುಚಿ ಸಿಗುವ ಹಾಗೆ ಕಣ್ಣಿಗೂ ರುಚಿ ಹತ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀವು ಪಳನಿಯ ಕಾಡುಗಳ ನೆಲ್ಲಿಕಾಯಿಯ ರುಚಿ, ತಿರುಚ್ಚಿ ಕಾಡಿನ ನೆಲ್ಲಿಕಾಯಿಗಿಂತ ಬೇರೆಯೇ ಆಗಿರುತ್ತದೆ ಅನ್ನುವುದನ್ನು ಒಪ್ಪಿಕೊಳ್ಳುವುದಾದರೆ, ಆ ನೆಲ್ಲಿಕಾಯಿ ಮರವೂ ಬೇರೆ ಅಂತ ಒಪ್ಪಿಕೊಳ್ಳಬೇಕು ಅಂದರು.

ಗುರುಗಳು ಹೀಗೆ ಕಂಗೆಡಿಸುತ್ತಿರುತ್ತಾರೆ. ಕಿವಿ ದನಿಯನ್ನು ಗುರುತು ಹಿಡಿಯುವ ಹಾಗೆ, ನಾಲಗೆ ರುಚಿಯನ್ನು ಗ್ರಹಿಸುವ ಹಾಗೆ, ಮೂಗು ಪರಿಮಳವನ್ನು ಕಂಡುಹಿಡಿಯುವ ಹಾಗೆ ಕಣ್ಣು ಕೂಡ ಥಟ್ಟನೆ ಯಾಕೆ ಗುರುತು ಹಿಡಿಯುವುದಿಲ್ಲ. ಅದು ಕೇವಲ ಮನುಷ್ಯ ಮತ್ತು ಪರಿಸರ ಅಂತಷ್ಟೇ ವ್ಯತ್ಯಾಸ ಕಾಣುವುದೇಕೆ? ಕಾಡಿನೊಳಗಿನ ಅಸಂಖ್ಯಾತ ಪ್ರಭೇದಗಳನ್ನೂ ವಿಂಗಡಿಸಿ ನೋಡುವುದಕ್ಕೆ ಯಾಕಾಗುವುದಿಲ್ಲ. ಯಾಕೆ ಆಗುವುದಿಲ್ಲ ಅಂದರೆ ನಾವು ನೋಡುವುದೇ ಇಲ್ಲ. ನೋಡಿದ್ದೇವೆ ಅಂತ ತಿಳಿದುಕೊಳ್ಳುತ್ತೇವೆ. ತಿಳಿದುಕೊಳ್ಳುವುದು ತಪ್ಪು, ನೋಡುತ್ತಿರಬೇಕು ಅಷ್ಟೇ. ನೋಡನೋಡುತ್ತಿದ್ದ ಹಾಗೇ ಒಂದು ಕಾಡು, ಕಾಡಿನ ಒಂದೊಂದು ಮರ, ಒಂದೊಂದೂ ಮರದ ಕಾಂಡ, ಒಂದೊಂದೂ ಕಾಂಡಕ್ಕೆ ಕುಡಿಯೊಡೆದ ಗೆಲ್ಲು, ಗೆಲ್ಲು ಅರಳಿಸಿದ ಎಲೆ, ಎಲೆಯ ತುದಿಯ ಚಿಗುರು, ಚಿಗುರಿನ ತುದಿಯ ರೇಶಿಮೆಯಂಥ ಕುಡಿ- ಎಲ್ಲವೂ ಕಣ್ಣಿಗೆ ಕಾಣಬೇಕು. ನೋಡಿದರೆ ಕಾಣಿಸುವುದಿಲ್ಲ, ನೋಡಿದರೆ ಮಾತ್ರ ಕಾಣುತ್ತದೆ. ಕಿವಿಗೆ ಬಿದ್ದದ್ದು ಕೇಳುವುದಿಲ್ಲ. ಕೇಳಿಸಿಕೊಂಡದ್ದು ಮಾತ್ರ ಕಿವಿಗೆ ಬೀಳುತ್ತದೆ.

ಕಾಡಿನೊಳಗೆ ಮೂರು ಹಗಲು ಮೂರು ರಾತ್ರಿ ಕಳೆದು ಬಂದ ಗುರುಗಳು ಅದೇ ಗುಂಗಿನಲ್ಲಿದ್ದರು. ಸಂಸಾರ ಬಿಡಬಹುದು. ಪರಿಸರದಿಂದ ಬಿಡುಗಡೆ ಇಲ್ಲ. ಪರಿಸರದ ಜೊತೆ ಸಂಬಂಧವೂ ಇಲ್ಲ. ಈ ಜಗತ್ತಲ್ಲಿ ನಾವು ಇರಬೇಕಾದ್ದೆ ಹಾಗೆ ಅನ್ನಿಸುತ್ತದೆ. ಕಾಡಿಗೆ ಸಿಟ್ಟು ಬರುವುದಿಲ್ಲ. ಕಾಡು ಪ್ರಾಣಿಗಳಿಗೂ ರೋಷ ಉಕ್ಕುವುದಿಲ್ಲ. ಅವಕ್ಕೆ ಭಯವಾಗುತ್ತದೆ ಅಷ್ಟೇ. ಅದು ಪ್ರಾಣ ಭಯ. ನಮಗೆ ಪ್ರಾಣ ಭಯ ಇಲ್ಲ. ನಾವು ಸಾಯುವುದಕ್ಕೆ ಏನೆಲ್ಲ ಮಾಡುತ್ತಿರುತ್ತೇವೆ. ನಮಗೆ ಬದುಕುವ ಭಯ. ಬದುಕುವ ಭಯ ಇರುವವನಿಗೆ ಸಿಟ್ಟು, ಮತ್ಸರ, ಅಸಹ್ಯ, ಅಸಹನೆ. ಪ್ರಾಣಭಯ ಇರುವ ಪಕ್ಷಿಗಳು, ಜಿಂಕೆಗಳು ಪ್ರಾಣ ಉಳಿಸಿಕೊಳ್ಳುವುದಕ್ಕೆ ಮಾತ್ರ ಓಡುತ್ತವೆ. ಪಕ್ಕದ ಜಿಂಕೆಯನ್ನು ಚಿರತೆ ಪಂಜಾದಿಂದ ಅಪ್ಪಳಿಸಿ ಕೊಂದಾಗ ಮತ್ತೊಂದು ಜಿಂಕೆಗೆ ಸಂತೋಷ ಆಗುವುದಿಲ್ಲ. ದುಃಖವೂ ಆಗುವುದಿಲ್ಲ. ಅದು ಸಾವನ್ನು ನಿರ್ವಿಕಾರವಾಗಿ ನೋಡುತ್ತಾ ನಿಂತಿರುತ್ತದೆ. ಸಾವು ಚಿರತೆಯ ಏಟಲ್ಲಿದೆಯೋ, ಜಿಂಕೆಯ ನಾಗಾಲೋಟದಲ್ಲಿದೆಯೋ ಸ್ತಬ್ಧವಾದ ಕಾಡಲ್ಲಿದೆಯೋ, ನಿಲ್ಲದ ಕಾಲದಲ್ಲಿದೆಯೋ ಅಂತ ನಮಗೆ ಗೊತ್ತಾಗುವುದೇ ಇಲ್ಲ.

ನಾವು ಮತ್ತೊಬ್ಬನ ಸಾವಿಗೆ ದುಃಖಿಸಿದಂತೆ ನಟಿಸುತ್ತೇವೆ, ಒಳಗೊಳಗೇ ಸಂತೋಷಪಡುತ್ತೇವೆ. ನಾವು ಸತ್ತಿಲ್ಲವಲ್ಲ ಅಂತ ಆನಂದವಾಗುತ್ತದೆ. ನಾವೂ ಸಾಯಬಹುದೆಂದು ಗೊತ್ತಿದ್ದೂ ಸಂತೋಷವಾಗುತ್ತದೆ. ಸಾಯುತ್ತೇನೆ ಅಂತ ಗೊತ್ತಾದ ಮೇಲೆ ಬದುಕುವುದಕ್ಕೆ ಅರ್ಥ ಬರುತ್ತದೆ ಎಂದು ನಾನು ತಿಳಿದಿದ್ದೆ. ಈಗ ಬದುಕಬಲ್ಲೆ ಅಂತ ಗೊತ್ತಾಗಿರುವುದರಿಂದಲೇ ಸಾವು ಶ್ರೇಷ್ಠ ಅನ್ನಿಸುವುದಕ್ಕೆ ಶುರುವಾಗಿದೆ.


ಹೇಳುತ್ತಾ ಹೇಳುತ್ತಾ ಗುರುಗಳ ದನಿ ಕ್ಷೀಣವಾಗುತ್ತಾ ಹೋಯಿತು. ನಮಗೇನೂ ಕೇಳಿಸದಂತಾಯಿತು. ನಾವು ನಿಧಾನಕ್ಕೆ ಅವರ ಹತ್ತಿರ ಸರಿಯತೊಡಗಿದೆವು. ಕೇಳುತ್ತಾ ಕೇಳುತ್ತಾ ಅವರಿಗೆ ತಾಗುವಷ್ಟು ಹತ್ತಿರ ಬಂದು ಕೂತುಬಿಟ್ಟಿದ್ದೆವು. ಅಷ್ಟು ಹತ್ತಿರ ಬಂದದ್ದು ನೋಡಿ ಗುರುಗಳು ಏನಿದು ಎಂಬಂತೆ ನೋಡಿದರು.

ನಿಮ್ಮ ಮಾತೇ ಕೇಳಿಸುತ್ತಿರಲಿಲ್ಲ ಅಂದೆವು.

ಮಾತು ಕೇಳಿಸಲಿ ಅಂತ ಆಡಬಾರದು. ಆಡಿದ್ದನ್ನು ಕೇಳಿಸಿಕೊಳ್ಳಬೇಕು. ನವಿಲು ಕೂಗಿದ್ದು ಎಲ್ಲರಿಗೂ ಕೇಳಿಸುತ್ತದೆ. ಕೇಳಿಯೂ ಪ್ರಯೋಜನ ಇಲ್ಲ. ಕೋಗಿಲೆ ವಸಂತದಲ್ಲಿ ತೆಳ್ಳಗಿನ ದನಿಯಲ್ಲಿ ಕೂಗುತ್ತದೆ. ನಾವು ಎಲ್ಲ ಶಬ್ದಗಳನ್ನು ಬದಿಗೆ ಸರಿಸಿ, ಆ ಕೂಜನಕ್ಕೆ ಕಿವಿಯಾಗುತ್ತೇವೆ. ಎತ್ತರದ ದನಿ ಬೇಕಾಗುವುದು ಸುಳ್ಳು ಹೇಳುವವನಿಗೆ. ಅನ್ನಿಸಿದ್ದನ್ನು ಹೇಳುವವನಿಗೆ ಸಣ್ಣ ಸ್ವರವೇ ಸಾಕು. ಕೇಳಿಸಿಕೊಳ್ಳುವವನು ಇದ್ದಾನೆ ಅಂತಾದರೆ ಧ್ವನಿ ಮುಖ್ಯ ಅಲ್ಲವೇ ಅಲ್ಲ. ಕಿವಿಯಿದ್ದವನು ತಗ್ಗಿಸಿ ಹೇಳಿದರೂ ಕೇಳಿಸಿಕೊಳ್ಳುತ್ತಾನೆ. ಕೇಳಿಸದೇ ಇದ್ದವನಿಗೆ ಏರಿಸಿ ಹೇಳಿದರೂ ಕೇಳಿಸುವುದಿಲ್ಲ.

ನಾವು ಕೇಳಿಸಿಕೊಳ್ಳುವವರಂತೆ ನಟಿಸಿದೆವು.

‍ಲೇಖಕರು avadhi

June 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. G Venkatesha

    ಮಾತು ಕೇಳಿಸಲಿ ಅಂತ ಆಡಬಾರದು. ಆಡಿದ್ದನ್ನು ಕೇಳಿಸಿಕೊಳ್ಳಬೇಕು. ನವಿಲು ಕೂಗಿದ್ದು ಎಲ್ಲರಿಗೂ ಕೇಳಿಸುತ್ತದೆ. ಕೇಳಿಯೂ ಪ್ರಯೋಜನ ಇಲ್ಲ. ಕೋಗಿಲೆ ವಸಂತದಲ್ಲಿ ತೆಳ್ಳಗಿನ ದನಿಯಲ್ಲಿ ಕೂಗುತ್ತದೆ. ನಾವು ಎಲ್ಲ ಶಬ್ದಗಳನ್ನು ಬದಿಗೆ ಸರಿಸಿ, ಆ ಕೂಜನಕ್ಕೆ ಕಿವಿಯಾಗುತ್ತೇವೆ. ಎತ್ತರದ ದನಿ ಬೇಕಾಗುವುದು ಸುಳ್ಳು ಹೇಳುವವನಿಗೆ. ಅನ್ನಿಸಿದ್ದನ್ನು ಹೇಳುವವನಿಗೆ ಸಣ್ಣ ಸ್ವರವೇ ಸಾಕು. ಕೇಳಿಸಿಕೊಳ್ಳುವವನು ಇದ್ದಾನೆ ಅಂತಾದರೆ ಧ್ವನಿ ಮುಖ್ಯ ಅಲ್ಲವೇ ಅಲ್ಲ. ಕಿವಿಯಿದ್ದವನು ತಗ್ಗಿಸಿ ಹೇಳಿದರೂ ಕೇಳಿಸಿಕೊಳ್ಳುತ್ತಾನೆ. ಕೇಳಿಸದೇ ಇದ್ದವನಿಗೆ ಏರಿಸಿ ಹೇಳಿದರೂ ಕೇಳಿಸುವುದಿಲ್ಲ. – Idu Thumba Ishta Aythu:-):-):-)

    ಪ್ರತಿಕ್ರಿಯೆ
  2. Pranav.k.r

    Chaaku choorigalige maathra kolluva thaakatthu ide antha gotthitthu…..aksharakku ,,shabdakku kooda antha shakthi ide antha gottirlilla…kollovantha aksharagalu jogi avre tamdu…onthara k(o)alegaararu neevu…..Pranav

    ಪ್ರತಿಕ್ರಿಯೆ
  3. Sudha ChidanandaGowda

    ಕಾಡು,
    ಕಾಡಿನ ಸೂಕ್ಷ್ಮಗಳನ್ನು ಗಮನಿಸುತ್ತಾ ಮನುಷ್ಯ ಬೆಳೆಯುತ್ತಾ ಹೋಗುವುದು,
    ಗುರುಗಳೊಂದಿಗಿನ ಯಾನ,
    ಗೈಡ್ ಇದ್ದಾಗಲೇ ಪ್ರವಾಸ ಚಂದ ಎಂಬಂತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: