ಕಾಡುವ 'ಹಾಯ್ ಅಂಗೋಲಾ..!'

ಜಯಶ್ರೀ ಕಾಸರವಳ್ಳಿ

ಇತಿಹಾಸದ ಪುಟಗಳಲ್ಲಿ ಗತಕಾಲದ ವರ್ಣರಂಜಿತ ಚರಿತ್ರೆಗಳನ್ನು ದಾಖಲಿಸಿಕೊಂಡು ವರ್ತಮಾನದಲ್ಲಿ ಮೈದುಂಬಿ ಬೀಗುವ ಹಲವು ದೇಶಗಳ ಪುಣ್ಯ ಈ ನೆಲದಲ್ಲಿ ಜನಿಸಿದರಿಗಿಲ್ಲ. ಇವರದ್ದೇನಿದ್ದರೂ ಶತಮಾನಗಳ ನೋವು, ಕೀಳರಿಮೆ, ಅವಮಾನ, ಶೋಷಣೆ, ಗುಲಾಮಗಿರಿಯ ಕತೆ ಮತ್ತು ವ್ಯಥೆ ಹೊತ್ತ ಇತಿಹಾಸ. ಡೊಮಿನಿಕಾ ರಿಪಬ್ಲೆಕ್ ನ ಆಫ್ರಿಕನ್ ಅಮೆರಿಕನ್ ಲೇಖಕಿ, ಜಮೈಕಾ ಕಿಂಕೀಡ್ ನ ಒಂದು ಕತೆಯನ್ನು “ರೂಸೋದಲ್ಲಿ..” ಎಂದು ಬಹಳ ಹಿಂದೆ ನಾನು ಅನುವಾದಿಸಿದ್ದೆ. ” ನೋಡಲು ನಮ್ಮಂತೆಯೇ ಇರುವ, ನೋವಿನ, ಅವಮಾನದ ಅದೇ ಶತಮಾನದ ಇತಿಹಾಸವನ್ನು ಹೊಂದಿದ ಇವರನ್ನು ಎಂದೂ ನಂಬಬಾರದೆಂದು ಎಲ್ಲರ ಮನೆಗಳಲ್ಲೂ ಇದೇ ಸಮಯಕ್ಕೆ, ಇದಿದೇ ಮಾತುಗಳನ್ನು ಹೇಳುತ್ತಿದ್ದರಿಂದ ನಾವು ಒಬ್ಬರನ್ನೊಬ್ಬರು ಎಂದೂ ನಂಬದೆ ಅನುಮಾನದಿಂದಲೇ ನೋಡುತ್ತಿದ್ದೆವು..” ಎಂದು ಶುರುವಾಗುವ ಕತೆ ಆಫ್ರಿಕನ್ ಜನಾಂಗಕ್ಕೆ ಶಾಶ್ವತವಾಗಿ ಅಂಟಿಕೊಂಡ ಅಗಾಧ ಭೂತದ ಕರಾಳ ಪ್ರಜ್ಞೆಯಿಂದ, ಹೇಗೆ ಮನುಕುಲದ ಮೇಲಿನ ನಂಬಿಕೆಯನ್ನೇ ಅವರು ಕಳೆದುಕೊಂಡಿದ್ದಾರೆಯೆನ್ನುವುದನ್ನು ಬಿಂಬಿಸುತ್ತದೆ.
ಆಫ್ರಿಕಾ ಖಂಡವೆಂದರೆ, ಇತಿಹಾಸದುದ್ದಕ್ಕೂ ಹಾಸಿ ಹೊದ್ದಿರುವ ಇಂತಹ ಕಪ್ಪು ಚರಿತ್ರೆಯ ಪುಟಗಳಿಂದ ಪುಟಿದೆದ್ದು ವರ್ತಮಾನದಲ್ಲಿ ಬದುಕು ಚಿಗಿರಿಸಿಕೊಳ್ಳುವುದು ಹಾಗೆ ನೋಡಿದರೆ ಸುಲಭದ ವಿಷಯವಲ್ಲ. ಮತ್ತು ಈ ಕಪ್ಪು ಖಂಡದ ಬಗ್ಗೆ ಬರೆಯುವುದೂ ಅಷ್ಟೇನೂ ಸುಲಭವಲ್ಲ. ಆಫ್ರಿಕಾ ಕುರಿತು ತನ್ನ ಅನುಭವವನ್ನು ” Shadow of the sun” ( ಸೂರ್ಯನ ನೆರಳು ಎಂದು ಸಹನಾ ಹೆಗಡೆ ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ)ಕೃತಿಯಲ್ಲಿ ದಾಖಲಿಸುತ್ತಾ, ರೈಷಾಡ್ ಕಪುಶಿನ್ ಸ್ಕಿ ಒಂದು ಮಾತು ಹೇಳಿದ್ದಾನೆ: ಯುರೋಪ್ ಮತ್ತಿತರ ದೇಶಗಳ ಬಗ್ಗೆ ಬರೆಯಬೇಕಾದೆಲ್ಲವನ್ನೂ ಇತಿಹಾಸವೇ ಬರೆದುಬಿಟ್ಟಿದೆ. ಅಲ್ಲಿಯ ನಾಗರಿಕತೆ, ಅದ್ಬುತ ಕಲೆ, ಅಗಾಧ ಸೃಷ್ಟಿ ಮತ್ತು ಪ್ರತಿಭೆಗಳ ಬಗ್ಗೆ ಪುಟಗಟ್ಟಲೆ ವರ್ಣನೆ ಸಿಗುವುದರಿಂದ ತಾನು ನೋಡಿದ್ದನ್ನು ಅವುಗಳೊಂದಿಗೆ ಸಮೀಕರಿಸಿಬಿಟ್ಟರಾಯಿತಷ್ಟೇ. ಆದರೆ ಅಫ್ರಿಕಾ ಬಗ್ಗೆ ಬರೆಯುವುದು ಅಷ್ಟು ಸುಲಭವಲ್ಲ..!”
ಹಾಗಾಗಿ ಗತವೈಭವವನ್ನು ಮೆರೆಯುವ ಪುಟ ಪುರಾಣಗಳಿಲ್ಲದ ಅಫ್ರಿಕಾ ನಮಗೆ ಸಿಗುವುದು ಸದಾ “ಕಗ್ಗತ್ತಲ ಖಂಡ” ವಾಗಿಯೇ. ಭರಪೂರ ಮಾಹಿತಿಗಳ ಸೋರಿಕೆಯಿರದ ಈ ಖಂಡಕ್ಕೆ ಪ್ರವಾಸ ಹೋಗುವವರ ಸಂಖ್ಯೆಯೂ ಹಾಗೆ ನೋಡಿದರೆ ಕಡಿಮೆಯೇ.

ಬಹುಶಃ ಈ ಎಲ್ಲಾ ಕಾರಣಕ್ಕೆ ಪ್ರಸಾದ್ ನಾಯ್ಕ್ ಅವರು ಅವಧಿಯಲ್ಲಿ ಅಂಗೋಲಾ ಬಗ್ಗೆ ಅಂಕಣ ಶುರು ಮಾಡಿದಾಗ ಸಹಜವಾಗಿಯೇ ನನ್ನ ಕುತೂಹಲಕ್ಕೆ ಕಾರಣವಾಗಿತ್ತು. “ಹಾಯ್.. ಅಂಗೋಲಾ” ದ ಎಲ್ಲಾ ಭಾಗವನ್ನೂ ಅವಧಿಯಲ್ಲೆ ನಾನು ಓದಿದ್ದೆಯೆನ್ನುವುದು ನಿಜ. ಆದರೆ ಪುಸ್ತಕ ರೂಪದಲ್ಲಿ ಓದುವುದಕ್ಕೂ, ಬಿಡಿಯಾಗಿ ಓದುವುದಕ್ಕೂ ವ್ಯತ್ಯಾಸವಿದೆ.
ನಮ್ಮ ಪ್ರಜ್ಞೆಯಾಚೆಯೆ ಉಳಿದು ಬಿಟ್ಟು, ಶತಮಾನಗಳಿಂದ ಒಂದು ನಾಗರಿಕ ಪ್ರಪಂಚದ ಅವಜ್ಞೆಗೆ ಒಳಗಾದ ಒಂದು ಅಗೋಚರ ಖಂಡವನ್ನು, ಅಲ್ಲಿನ ಜನ ಸಾಮಾನ್ಯರ ಬದುಕನ್ನು ಅರಿಯುವುದು ಹೇಗೆ? ಜಗತ್ತಿನ ದೃಷ್ಟಿಯಲ್ಲಿ ಕತ್ತಲ ಕೂಪವೆನ್ನಿಸಿದ ಅಫ್ರಿಕಾದ ಅಖಂಡತೆಯನ್ನು, ತನ್ನೊಡಲೊಳಗೆ ಬಚ್ಚಿಟ್ಟುಕೊಂಡ ಹಲವು ನಿಗೂಢವನ್ನು, ದೊಗೆದಷ್ಟೂ ಅಳ ಕಂದರವಾಗಿ ಮತ್ತಷ್ಟು ಅಸ್ವಷ್ಟವಾಗುತ್ತಾ ಸೋಜಿಗಕ್ಕೆ ದೂಡುವ ಅದರ ಅಗಾಧತೆಯನ್ನು ಕಪುಶಿನ್ ಸ್ಕಿ ಏನೋ ತನ್ನ ಕೃತಿಯಲ್ಲಿ ತೋರಿದ್ದಾನೆ ನಿಜ. ಆದರೆ ಪ್ರತಿಯೊಬ್ಬರ ಅನುಭವವೂ ಭಿನ್ನವೇ ತಾನೇ.
ಈ ನಿಟ್ಟಿನಲ್ಲಿ ನೋಡಿದಾಗ ಪ್ರಸಾದ್ ತೋರಿಸುವ ಅಫ್ರಿಕಾ ಕೂಡಾ ಒಂದು ಅಜ್ಞಾತ ಖಂಡಕ್ಕೆ ಬೇಕಾದ ಪ್ರವೇಶಿಕೆಯಾಗಿ ಒಂದು ಪ್ರಮುಖ ದಾಖಲಾತಿಯಾಗಿ ನಮಗೆ ದೊರೆಯುತ್ತದೆ. ಅಫ್ರಿಕಾದ ಒಂದು ದೇಶವಾದ ಅಂಗೋಲಾವನ್ನು ತಮಗೆ ದಕ್ಕಿದಷ್ಟು ಪ್ರಾಮಾಣಿಕವಾಗಿ ಪ್ರಸಾದ್ ಅವರು ನಮ್ಮ ಮುಂದೆ ಇಡುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರತಿ ದೇಶಕ್ಕೂ ತನ್ನದೆಯಾದ ಒಂದು ಅಂತರೀಕ ಸತ್ಯವೆನ್ನುವುದು ಇರುತ್ತೆ. ಒಂದು ದೇಶಕ್ಕೆ ಹೊಟ್ಟೆಪಾಡಿಗಾಗಿ ಹೊಕ್ಕಾಗ ಅಲ್ಲಿನ ಅಂತರೀಕ ಬದುಕಿನೊಡನೆ ಒಡನಾಡುವುದು ಅನಿವಾರ್ಯವಾಗುತ್ತೆ. ಎರಡು ವರುಷ ಅಂಗೋಲಾದ ವೀಜ್ ಗೆ ತೆರಳಿದ ಪ್ರಸಾದ್ ಅವರು ಅಲ್ಲಿನ ಅಂತರೀಕ ಬದುಕಿನ ಶೋಧಕ್ಕೆ ಇಳಿಯುತ್ತಾರೆ. ಜಗತ್ತನ್ನು ಆಮೂಲಾಗ್ರವಾಗಿ ನೋಡುವುದು ಅಂದರೇನು? ತಾಂತ್ರಿಕವಾಗಿ ಇಷ್ಟು ಮುಂದುವರೆದ ನಂತರವೂ ನಾವು ಅಮೆರಿಕಾದ ಏಕಚಕ್ರಾಧಿಪತ್ಯದ ದಾಸ್ಯದಿಂದ ಬಿಡಿಸಿಕೊಂಡು ಮುಕ್ತವಾಗಿ ಜಗತ್ತನ್ನು ಪರಿಭಾವಿಸುವ ಕ್ರಮವನ್ನು ರೂಢಿಸಿಕೊಂಡಿಲ್ಲವೆನ್ನುವುದು ಪರಮ ಸತ್ಯ. ನಮಗೆ ಅಮೆರಿಕದ ಕಪ್ಪು ಕನ್ನಡಕವೆಂದರೆ ಎಲ್ಲಿಲ್ಲದ ವ್ಯಾಮೋಹ. ಆ ಕನ್ನಡಕದ ಮೂಲಕ ನಯನ ಮನೋಹರವಾಗಿ ಕಾಣುವ ಜಗತ್ತು ಬರಿಗಣ್ಣಿಗೆ ಸುಟ್ಟು ಕರಕಲಾಗಿ ಕಂಡು ಬಿಡಬಹುದೆನ್ನುವ ಭಯ. ಢಾಳಾಗಿ ಮುಖಕ್ಕೆ ರಪ್ಪೆಂದು ಗೋಚರಿಸುವ ಸತ್ಯಕ್ಕಿಂತ ಅಗೋಚರ ಸತ್ಯದ ಮೇಲೆ ನಂಬಿಕೆ. ಆದರೆ ಈ ಪರದೆ ಕಿತ್ತು , ತಾವು ಕಂಡ ಜಗತ್ತನ್ನು ತಮ್ಮಒಳಗಣ್ಣಿನ ಮೂಲಕ ತೆರೆದಿಡುವ ಕಾರ್ಯವನ್ನು ಅನೇಕರು ಮಾಡುತ್ತಿದ್ದಾರೆನ್ನುವುದೇ ಸಮಾಧಾನದ ವಿಷಯ.
 

ಉದಯ್ ಇಟಗಿ ಅವರ “ಲಿಬಿಯಾ ಡೈರಿ” ಓದುವಾಲೇ ಈ ಸ್ಪಷ್ಟ ಗೆರೆಯ ಅರಿವಾಗಿತ್ತು. ಪ್ರಸಾದ್ ನಾಯ್ಕ್ ಅವರ ” ಹಾಯ್.. ಅಂಗೋಲಾ” ಅದನ್ನು ಮತ್ತಷ್ಟು ನಿಖರವಾಗಿ ಕೊರೆದು ತೋರಿಸುತ್ತಿದೆ.
ಪ್ರಸಾದ್ ಅವರೇ ಹೇಳುವಂತೆ ಕ್ರೈಮ್ ಇಂಡೆಕ್ಸ್ ಪ್ರಕಾರ ಅಂಗೋಲಾದ ರಾಜಧಾನಿ ಲುವಾಂಡ ಅಫ್ರಿಕಾದ ಅತೀ ಅಪಾಯಕಾರಿ ಮಹಾ ನಗರಗಳಲ್ಲಿ ಒಂದು. ಪೋರ್ಚುಗೀಸ್ ರ ವಸಾಹತು ಆಗಿದ್ದ ಅಂಗೋಲಾ ಸ್ವತಂತ್ರ ಗಣರಾಜ್ಯವಾಗಿದ್ದು ಹಾಗೆ ನೋಡಿದರೆ ತೀರಾ ಇತ್ತೀಚೆಗೆ -1975ರಲ್ಲಿ. 1979ರಲ್ಲಿ ದೇಶದ ಚುಕ್ಕಾಣಿ ಹಿಡಿದ ಜೋಸ್ ಸಾಂತುಸ್ 2017ರವರೆಗೆ ಬರೋಬ್ಬರಿ ಮೂವತ್ತೆಂಟು ವರುಷ ಕಾಲ ದೇಶವಾಳಿದವನು. ಸರ್ವಾಧಿಕಾರಿ ಆಡಳಿತಕ್ಕೆ ಒಳಗಾದ ಅಫ್ರಿಕಾದ ಹಲವು ರಾಷ್ಟ್ರಗಳ ಇತಿಹಾಸಕ್ಕಿಂತ ಭಿನ್ನ ಇತಿಹಾಸ ಅಂಗೋಲಾಕ್ಕೆ ಇಲ್ಲ. ಜೊತೆಗೆ ಆಂತರಿಕ ಯುದ್ಧ, ಭಯಂಕರ ಹಿಂಸಾಚಾರ, ಭೀಕರ ಮಾರಣ ಹೋಮಗಳ ಕತೆಗಳಲ್ಲಿ ದೇಶಕ್ಕೆ ದೇಶವೇ ನಲುಗಿ ಹೋಗಿರುವಾಗ ಆರ್ಥಿಕವಾಗಿ ಸುಧಾರಿತ ಸದೃಢ ರಾಷ್ಟ್ರವಾಗಲು ಇನ್ನೂ ಅನೇಕ ಕಾಲಾವಕಾಶ ಬೇಕಿದೆ. ಅಫ್ರಿಕಾದ ಹಲವು ರಾಷ್ಟ್ರಗಳಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದ್ದರೂ ಅಸಮರ್ಪಕ ರಾಜ್ಯಡಳಿತದ ಫಲವಾಗಿ ಎಲ್ಲೆಲ್ಲೂ ಅರಾಜಕತೆ ತಾಂಡವವಾಡುತ್ತಿದೆ. ಜೀವನ ಮಟ್ಟ ವಿಪರೀತ ಕುಸಿದು, ಬಡತನ ಗರಿಷ್ಠ ಮಟ್ಟ ತಲುಪಿ, ದಟ್ಟ ದಾರಿದ್ರ್ಯ ದಿನ ನಿತ್ಯದ ಬದುಕಾಗಿದೆ.
ಹೆಚ್ಚುಕಮ್ಮಿ ಇಂತಹದ್ದೇ ಸ್ಥಿತಿಯಲ್ಲಿರುವ ಅಂಗೋಲಾಕ್ಕೆ ಕಾಲಿಟ್ಟ ಪ್ರಸಾದ್ ಅವರು, ಚರಿತ್ರೆಯ ಪುಟಗಳನ್ನು ಹೆಚ್ಚು ಸ್ಪರ್ಶಿಸದೆ, ಬ್ಲಡ್ ಡೈಮಂಡ್ ಕತೆಯನ್ನು ಕೊನೆ ಪುಟಕ್ಕೆ ಮೀಸಲಿಟ್ಟು, ಅಂಗೋಲಾದ ತಾಜಾತನವನ್ನು, ಲುವಾಂಡ ಮತ್ತು ವೀಜ್ ನಡುವಿನ ಮುನ್ನೂರವತೈದು ಕಿಲೋ ಮೀಟರ್ ದೂರದ ಪಯಣದುದ್ದಕ್ಕೂ ತಮ್ಮೊಡನೆ ಸಂವಾಹಿಸುವ ಅಲ್ಲಿನ ದಟ್ಟ ವನ್ಯ ಪ್ರದೇಶದ ಗುಯ್ಯಿಗುಡುವ ನಿಗೂಢ ಮೌನವನ್ನು, ಬೆಚ್ಚಿ ಬೀಳಿಸುವ ಬುಷ್ ಮೀಟ್ ಕತೆಗಳನ್ನು, ಒಬ್ಬ ಕ್ಷೌರಿಕ, ದಕ್ಷ ಡಾಕ್ಟರ್ ಇಲ್ಲದ ಅಸಹಾಯಕ ಸ್ಥಿತಿಯನ್ನು, ಭ್ರಷ್ಟಾಚಾರದ ಪರಮಾವಧಿಯನ್ನು, ಲಂಚದ ಅಪರಾವತಾರಗಳನ್ನು, ಕುಡಿಯುವ ನೀರಿರಲಿ, ಒಂದು ಬೊಗಸೆ ನೀರಿಗಾಗಿ ಮೈಲುಗಟ್ಟಲೇ ಅಲೆಯುವ ಕಡು ಬಡತನದ ಬದುಕನ್ನು, ಕುಸಿದ ಕೌಟುಂಬಿಕ ವ್ಯವಸ್ಥೆಯನ್ನು, ಹೆಚ್ಚುತ್ತಿರುವ ಏಡ್ಸ್ ಸಮಸ್ಯೆಯನ್ನು, ವಿಲಾಸಿ ಜೀವನಕ್ಕೆ ಒಗ್ಗಿ ಹೋಗಿ ಬೇಜವಾಬ್ದಾರಿ ಮತ್ತು ಸೊಂಭೇರಿ ಹರೆಯದ ಯುವಕರನ್ನು, ಸಂಸಾರದ ನೊಗ ಹೊತ್ತು ಕಷ್ಟಪಟ್ಟು ದುಡಿದು ಪ್ರಯಾಸದಿಂದ ಜೀವನ ಸಾಗಿಸುತ್ತಿರುವ ಹೆಂಗಳೆಯರನ್ನು ನಮಗೆ ಪರಿಚಯಿಸುತ್ತಾ ಹೋಗುತ್ತಾರೆ. ಇಷ್ಟೆಲ್ಲದರ ನಡುವೆಯೂ ಪ್ರತಿಯೊಬ್ಬರಲ್ಲೂ ಪುಟಿಯುವ ಮಾಸದ ಜೀವನೋತ್ಸಾಹ.. ಜೊತೆಗೆ ನಮೀಬಿಯನ್ ನೀರೆಯರು..ಝಂಬಾ ಕುಣಿತ… ಲುವಾಂಡದ ದುಬಾರಿ ಐಷಾರಾಮಿ ಹೋಟೆಲ್ ವರ್ಣನೆ..
ಎಲ್ಲವೂ ಮೊದಲ ಬಾರಿ ಜಗತ್ತನ್ನು ಕಂಡ ಮಗು ಮನಸ್ಸಿನ ಉತ್ಸಾಹದಿಂದ ಮೂಡಿ ಬಂದಿದೆ. ಸಾಮಾನ್ಯವಾಗಿ ಬೇರೆ ದೇಶಕ್ಕೆ ಹೋದವರು ಪ್ರತಿ ಹಂತದಲ್ಲೂ ನಮ್ಮ ದೇಶದೊಡನೆ ಹೋಲಿಸಿಕೊಂಡು ನೋಡುವುದು ಸಾಮಾನ್ಯ. ಪ್ರಸಾದ್ ಆ ಕೆಲಸ ಮಾಡಿಲ್ಲವಾದ್ದರಿಂದ ತಾವು ಕಂಡ ಅಂಗೋಲಾವನ್ನು ತನ್ನೆಲ್ಲಾ ಬೆರಗಿನೊಂದಿಗೆ ಅಖಂಡವಾಗಿ ನಮ್ಮೆದುರು ಇರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಬಹುರೂಪಿ ಪ್ರಕಾಶನದವರು ಬಹಳ ಚಂದವಾಗಿ ಪುಸ್ತಕವನ್ನು ತಂದಿರುವುದರಿಂದ ಓದಲು ಇನ್ನಷ್ಟು ಹಿತವೆನ್ನಿಸುತ್ತೆ. ಮತ್ತೊಮ್ಮೆ ಅಭಿನಂದನೆ,

‍ಲೇಖಕರು Avadhi

December 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: