ಮಳೆ ಜೊತೆಗೆ ಡೀಲಿಂಗ್ ಮಾಡಿದ್ದಾರೋ ಏನೋ..?

ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಎರಡು ವಿಧ. ಮೊದಲ ಗುಂಪು ಬುದ್ದಿವಂತ ವಿದ್ಯಾರ್ಥಿಗಳು. ಅಂಥವರು ಅನಾವಶ್ಯಕ ಗೊಂದಲಗಳಲ್ಲಿ ತಲೆ ಹಾಕುವವರೇ ಅಲ್ಲ. ಕ್ಲಾಸ್ ನಲ್ಲೂ, ಪರೀಕ್ಷೆಗಳಲ್ಲೂ ಯಾವತ್ತೂ ಅಪ್ ಡೇಟ್. ಇವರಿಗೆಲ್ಲ ತನ್ನಿಂದ ಸಾಧ್ಯವಿಲ್ಲ ಅನ್ನೋ ಮಾತೆ ಇಲ್ಲ. ಎರಡನೆಯವರು ಸಾಧಾರಣ ಅರಿವುಳ್ಳವರು. ಹಾಗಂತ ದಡ್ಡರಲ್ಲ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯವಿದೆ. ಆದರೆ ಇಂತವರಿಗೆಲ್ಲಾ ಸಮಾಜದ ಚಿಂತೆ. ಅವರು – ಇವರು ಹೇಳ್ತಾ ಕಾಲ ಕಳೆಯೋದೇ ಹೆಚ್ಚು. ತಾವು ಉದ್ದಾರ ಆಗೋ ವಿಚಾರಕ್ಕಿಂತಲೂ, ಉಳಿದವರ ಬಗೆಗಿನ ವದಂತಿಗಳಲ್ಲೇ ಆಸಕ್ತಿ.

ಈ ದೇಶ – ದೇಶಗಳ ನಡುವೆ ಶಾಲಾ ಕಾಲೇಜು ಎಂಬ ರೀತಿಯ ಹಂತಗಳಿರುತ್ತಿದ್ದರೆ, ಸಿಂಗಾಪುರ ಕೂಡ ಮೊದಲ ಗುಂಪಿಗೆ ಸೇರುತಿತ್ತೋ ಏನೋ. ವಿಭಿನ್ನ ಆಲೋಚನೆಗಳು, ವರ್ತನೆಗಳು, ಸಮಸ್ಯೆಗಳನ್ನು ಎದುರಿಸುವ ಶೈಲಿ ಎಲ್ಲವೂ ಸೇಮ್ ಟು ಸೇಮ್. ಸಾಧನೆ ಮಾಡಿದ ವಿದ್ಯಾರ್ಥಿಗಳು ಹೇಗೆ ಬೇರೆಯವರಿಗೆ ಮಾದರಿ ಆಗ್ತಾರೋ, ಹಾಗೆ ಸಿಂಗಾಪುರ. ಯಾವುದೇ ಒಂದು ಸಾಧನೆಗೆ ಗ್ರೌಂಡ್ ವರ್ಕ್ ಎಷ್ಟೊಂದು ಅಗತ್ಯ ಅನ್ನೋದಕ್ಕೆ ಸಿಂಗಾಪುರದಲ್ಲೂ ಅನೇಕ ಉದಾಹರಣೆಗಳಿವೆ.

ಮೊದಲೇ ಹೇಳಿರುವ ಹಾಗೆ ಈ ದೇಶ, ಉಷ್ಣವಲಯದ ಹವಾಮಾನದಿಂದ ಕೂಡಿದೆ. ಬಿಸಿಲ ನಾಡು ಕೂಡ ಹೌದು. ವರ್ಷ ಪೂರ್ತಿ ಧಾರಾಕಾರ ಮಳೆ ಸುರಿಯುವ ಊರು ಹೌದು. ಕರಾವಳಿಯಲ್ಲಿ ಬೆಳೆದ ನನಗೆ ಬಿಸಿಲು ಅಂದ್ರೆ ಅಚ್ಚುಮೆಚ್ಚು. ಹಾಗಾಗಿ ನನ್ನ ಹಾಗೂ ಇಲ್ಲಿನ ಹವಾಮಾನದ ಜೊತೆಗೆ ಅದೇನೋ ಫ್ರೆಂಡ್ಶಿಪ್.

ತಿಂಗಳು ಉದ್ದಕ್ಕೂ ಮಳೆ ಆಗುವ ಈ ದೇಶದಲ್ಲಿ ಚಳಿಗಾಲಕ್ಕೆ ಎಂಟ್ರಿ ಇಲ್ಲ. ನಮ್ಮಲ್ಲಿ ಮಳೆಗಾಲದಲ್ಲಿ ಮಾತ್ರ ಸುರಿಯುವ ಮಳೆ ನೀರಿಗೆ ನಿಯಂತ್ರಣ ಇಲ್ಲ. ಇನ್ನೂ ಸಿಂಗಾಪುರದ ಗತಿ ಏನು ಆಗಬೇಕು ಅಲ್ವಾ. ಬತ್ತಿ ಹೋದ ಕೆರೆಗಳ ಮೇಲೆ ಕಟ್ಟಡಗಳನ್ನು ಕಟ್ಟುವಷ್ಟರ ಮಟ್ಟಿಗೆ ನಾವು ಮುಂದುವರಿ ದಿದ್ದೇವೆ. ಇನ್ನೂ ಒಳಚರಂಡಿಗಳ ಕಥೆ ಕೇಳೋದೇ ಬೇಡ. ಈಗಂತೂ ನಗರಗಳಲ್ಲಿ ಚರಂಡಿಗಳು ಇದೀಯಾ ಇಲ್ವೋ ಅನ್ನೋದೆ ಸಂಶಯ. ರಸ್ತೆ ಬದಿ ಉದ್ದಕ್ಕೂ ಅಗೆಯುವ ಕೆಲಸಗಳು ಮಾತ್ರ ನಿರಂತರ ನಡೀತಾನೇ ಇರುತ್ತದೆ. ಎಷ್ಟೇ ಅಗೆದರೂ ಮಳೆ ನೀರು ಮಾತ್ರ ರಸ್ತೆಗಳಲ್ಲೇ ಹರಿಯುವುದು. ಇದು ನಮ್ಮ ಊರಿನ ಸ್ಪೆಶ್ಯಾಲಿಟೀ. ಮಳೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ನಮ್ಮ ರಾಜಕಾರಣಿಗಳು, ಸಮಸ್ಯೆಗಳನ್ನು ಮುಂದಿನ ವರ್ಷಕ್ಕೆ ದೂಡಿ ದೂಡಿ ಅದೆಷ್ಟೋ ಮಳೆಗಾಲಗಳು ಸರಿದವೋ ಏನೋ. ಹೇಳಿ ಪ್ರಯೋಜನ ಇಲ್ಲ ಬಿಡಿ.

ನನಗೆ ಅಚ್ಚರಿ ಅನಿಸೋದು ಈ ದೇಶದ ವ್ಯವಸ್ಥೆಯ ಬಗ್ಗೆ. ಬೆಂಗಳೂರಿಗಿಂತಲೂ ಚಿಕ್ಕದಾಗಿರುವ ಸಿಂಗಾಪುರದ ಜನಸಂಖ್ಯೆ ಸುಮಾರು ಐದುವರೆ ಮಿಲಿಯನ್. ಪ್ರತಿ ದಿನ ಮಳೆಯ ಆರ್ಭಟ. ಸಿಂಗಾಪುರದ ಸುತ್ತಲೂ ಸಮುದ್ರ ಬೇರೆ. ಎಲ್ಲಿ ನೋಡಿದ್ರು ನೀರೇ ನೀರು. ಹೀಗಾಗಿ ತನ್ನ ದೇಶ ಹಾಗೂ ಜನತೆಯ ಬಗ್ಗೆ ಒಂದು ಪಟ್ಟು ಹೆಚ್ಚೇ ರಕ್ಷಣೆಯ ಅಗತ್ಯ ಇಲ್ಲಿನ ಸರ್ಕಾರದ್ದಾಗಿದೆ. ಮಳೆ ನೀರು ನೇರ ಚರಂಡಿಗೆ ಸೇರುವಂತೆ ಮಳೆ ಜೊತೆಗೆ ಡೀಲಿಂಗ್ ಮಾಡಿದ್ದಾರೋ ಅನ್ನೋ ಪರಿಸ್ಥಿತಿ ಇಲ್ಲಿಯದ್ದು.

ಕಟ್ಟಡಗಳ ನಿರ್ಮಾಣದ ಜೊತೆಗೆ ಒಳಚರಂಡಿಗಳಿಗೂ ಅಷ್ಟೇ ಮಹತ್ವ ನೀಡೋದು ಇವರ ಗುಟ್ಟು. ಚರಂಡಿಗಳ ನಿರ್ಮಾಣ ಆದ್ರೆ ಮುಗೀತಾ. ನೀರಿನ ಸಂಚಾರವು ಸುಗಮವಾಗಿರಬೇಕು ತಾನೇ. ಮಳೆನೀರು ಮಾದರಿಗಳು, ಒಳಚರಂಡಿ ಮೂಲಸೌಕರ್ಯ, ಪ್ರಸಕ್ತ ಮತ್ತು ಭವಿಷ್ಯದ ಒಳಚರಂಡಿ ಸುಧಾರಣೆ ಯೋಜನೆಗಳು, ಪ್ರವಾಹ ಮೇಲ್ವಿಚಾರಣೆಗಳಂತಹ ಕಾರ್ಯಗಳು ಸರ್ಕಾರದ ಕಡೆಯಿಂದ ನಡೆಯುತ್ತಿರುತ್ತವೆ. ಇದಕ್ಕೆ ಬೇಕಾದ ಹಣ ಮಂಜೂರತಿಯು ಸರ್ಕಾರ , ಯಾವುದೇ ಮುಲಾಜಿಲ್ಲದೆ ಬಿಡುಗಡೆ ಮಾಡುತ್ತದೆ. ಒಂದು ಯೋಜನೆಗೆ ಹಣ ಸ್ಯಾಂಕ್ಶನ್ ಆಯಿತು ಅಂದ್ರೆ, ಆ ಕೆಲಸ ಕೂಡ ಪೂರ್ಣಗೊಂಡಿತು ಅಂತಾನೆ ಅರ್ಥ.

ಇನ್ನೊಂದು ವಿಶೇಷತೆ ಏನೆಂದರೆ, ಇಲ್ಲಿನ ಎಲ್ಲ ಚರಂಡಿಗಳ ಸ್ವಚ್ಛತೆಯ ಬಗ್ಗೆ ನಿರಂತರ ಪರಿಶೀಲನೆ ನಡೆಸಲಾಗುತ್ತಿರುತ್ತದೆ. ಕ್ಯಾಮರ ಅಳವಡಿಸಿದ ಪೈಪ್ ಗಳನ್ನು ಚರಂಡಿಗಳಿಗೆ ಇಳಿಸಿ ಅವುಗಳ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಅಧಿಕ ಒತ್ತಡವನ್ನು ಹೊಂದಿರುವ ವಾಟರ್ ಜೆಟ್ ಗಳನ್ನು ಚರಂಡಿಗಳ ಒಳಭಾಗದಲ್ಲಿ ಅಳವಡಿಸಿ, ಈ ಮೂಲಕ ನಿಯಮಿತವಾಗಿ ಸ್ವಚ್ಛ ಮಾಡಲಾಗುತ್ತದೆ. ಬಳಿಕ ಬಿರಡೆ ತಿರುಪಿನಂಥಹ ಸಾಧನದಿಂದ ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡ ಕಸಕಡ್ಡಿಗಳನ್ನು ಪುಡಿ ಮಾಡುವುದರ ಜೊತೆಗೆ ಬ್ಲಾಕ್ ಗಳನ್ನು ತೆರವುಗೊಳಿಸಲಾಗುತ್ತದೆ. ಈ ಸ್ವಚ್ಚತಾ ವ್ಯವಸ್ಥೆ ಕಡ್ಡಾಯವಾಗಿ ಎಲ್ಲ ವಿಧದ ಚರಂಡಿಗಳಿಗೂ ಅನುಸರಿಸಲಾಗುತ್ತದೆ. ಕ್ರಮ ಪ್ರಕಾರ ಕ್ಲೀನಿಂಗ್ ಇಲ್ಲಿ ನಡೆಯುತ್ತದೆ. ಮಳೆ ನೀರು ಕೂಡ ಸರಾಗವಾಗಿ ಪ್ರಯಾಣವನ್ನು ಕೈಗೊಳ್ಳುತ್ತದೆ. ಹಾಗಾದ್ರೆ ಎಲ್ಲಿ ಹೋಗಿ ಸೇರುತ್ತದೆ. ಇಲ್ಲೂ ಒಂದಷ್ಟು ಹಂತಗಳು ದಾಟಲೇ ಬೇಕು.

ಪ್ರಾರಂಭದ ಮಳೆ ನೀರು ಅಲ್ಲಲ್ಲಿರುವ ಜಲಾಶಗಳಲ್ಲಿ ತುಂಬಿ ಹೋಗುತ್ತವೆ. ಆದರೆ ನೀರಿನ ಪ್ರಮಾಣ ಅಧಿಕವಾದರೆ ಪ್ರವಾಹದ್ದೇ ಭೀತಿ. ಈ ವಿಚಾರದಲ್ಲಿ ನಮ್ಮಲ್ಲಿನ ಕಥೆ ಕೇಳೋದೇ ಬೇಡ. ನಮಗೆ ಸಾಮಾನ್ಯ ಮಳೆ ಬಂದರೂ ಸಾಕು ಪ್ರವಾಹ ತಲೆದೋರಲು. ರಸ್ತೆ ತುಂಬಾ ನೀರು ಆವರಿಸುವ ಸನ್ನಿವೇಶಗಳಂತೂ ಸಾಮಾನ್ಯ. ಜನತೆಯ ಸುರಕ್ಷತೆಯನ್ನು ಜನರೇ ನೋಡಿಕೊಳ್ಳಲಿ ಅನ್ನುವ ಗೊಡ್ಡು ಧೋರಣೆ ಅಧಿಕಾರಿಗಳದ್ದು. ಜನಪ್ರತಿನಿಧಿಗಳು ಏನಿದ್ರೂ ಅವರಿವರ ಪಕ್ಷಗಳ ಕಾಲು ಎಳೆಯುವುದರಲ್ಲಿ ಸಮಯ ಕಳೆಯೋದೇ ಆಗಿದೆ.
ಅಂದ ಹಾಗೆ ಸಿಂಗಾಪುರದಲ್ಲಿ ಮರೀನಾ ಎಂಬ ಹೆಸರಿನ ಜಲಾಶಯವಿದೆ. ೧೫ನೇ ಜಲಾಶಯವಾಗಿರುವ ಇದು, ನಗರದ ಮಧ್ಯಭಾಗದಲ್ಲಿ ನಿರ್ಮಾಣಗೊಂಡಿದೆ. ಸಮುದ್ರಕ್ಕೆ ಹೊಂದಿಕೊಂಡೇ ಅಣೆಕಟ್ಟು ಇಲ್ಲಿ ಕಟ್ಟಲಾಗಿದೆ. ಇಂತಹ ವ್ಯವಸ್ಥೆ ಇಲ್ಲಿನ ಇತರೆ ಕೆಲವು ಜಲಾಶಗಳಲ್ಲೂ ಕಾಣಬಹುದು. ಆದರೆ ಈ ಮರೀನಾ ಜಲಾಶಯ ಮಾತ್ರ ಇದ್ದುದ್ದರಲ್ಲೇ ಅತಿ ದೊಡ್ಡದು. ಇದರ ಕ್ಯಾಚ್ ಮೆಂಟ್ ಏರಿಯಾ 10,000 ಹೆಕ್ಟೇರ್ ಗಳಷ್ಟು. ೨೦೦೮ರಲ್ಲಿ ಉದ್ಘಾಟನೆಗೊಂಡ ಈ ಮರೀನಾ ಅಣೆಕಟ್ಟು ಮೂರು ಪ್ರಯೋಜನೆಗಳಿಂದ ಹೆಸರು ಪಡೆದಿದೆ. ದೇಶಕ್ಕೆ ಬೇಕಾದ ನೀರಿನ ಸರಬರಾಜು, ಪ್ರವಾಹ ನಿಯಂತ್ರಣದ ವ್ಯವಸ್ಥೆ ಮತ್ತು ಆಕರ್ಷಣೆಯ ಸ್ಥಳವೂ ಹೌದು.

ಸಮುದ್ರದ ನೀರಿನ ಮಟ್ಟ ಇಳಿಮುಖವಾಗಿದ್ದಾಗ ಜಲಾಶಯದ ಹೆಚ್ಚುವರಿ ನೀರನ್ನು ಇಲ್ಲಿರುವ 9 ಕ್ರೆಸ್ಟ್ ಗೇಟ್ ಗಳನ್ನು ತೆರೆಯುವ ಮೂಲಕ ಸಮುದ್ರಕ್ಕೆ ಬಿಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಸಮುದ್ರದಲ್ಲಿನ ನೀರಿನ ಮಟ್ಟ ಅಧಿಕವಾಗಿದ್ದಾಗ ಕೂಡ ಜಲಾಶಯದ ಹೆಚ್ಚುವರಿ ನೀರು ಸಮುದ್ರಕ್ಕೆ ಸೇರುತ್ತದೆ. ಆದರೆ ಈ ವ್ಯವಸ್ಥೆಗೆ ಇಲ್ಲಿದೆ ಅತ್ಯಾಧುನಿಕ ಯಂತ್ರಗಳು.

ಇಲ್ಲಿ ಉಪಯೋಗಿಸಲ್ಪಡುತ್ತಿರುವ ಯಂತ್ರಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಹೈ ಟೈಡ್ ಇರುವ ಸಂದರ್ಭದಲ್ಲಿ ಈ ಜಲಾಶಯದ ಕೆಳಭಾಗದಲ್ಲಿ ಅಳವಡಿಸಲಾಗಿರುವ ಪಂಪ್ ಗಳ ಮೂಲಕ ನೀರನ್ನು ಸಾಗರಕ್ಕೆ ಬಿಡಲಾಗುತ್ತದೆ. ಇದು ಅಂತಿಂಥ ಸಾಮಾನ್ಯದ್ದಲ್ಲ. ಪ್ರತಿ ಪಂಪ್ ೨೮ ಟ ನ್ ಗಳಷ್ಟು ತೂಕವಿದ್ದು, 7.5 ಮೀಟರ್ ಎತ್ತರವಿದೆ. ಪ್ರಪಂಚದಲ್ಲೇ ಅತೀ ದೊಡ್ಡ ಪಂಪ್ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಈ ಒಂದು ಪಂಪ್ ನ ಸಾಮರ್ಥ್ಯ ಎಷ್ಟಿದೆ ಅಂದರೆ, ಒಲಂಪಿಕ್ ಗಾತ್ರದ ಈಜುಕೊಳದ ನೀರನ್ನು ಕೇವಲ ೧ ನಿಮಿಷದಲ್ಲಿ ಖಾಲಿ ಮಾಡುವ ಕೆಪಾಸಿಟಿ ಹೊಂದಿದೆ. ಅಂತಹ ೭ ಪಂಪ್ ಗಳು ಈ ಜಲಾಶಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿ ನೀರನ್ನು ಸಮುದ್ರಕ್ಕೆ ಬಿಡುವ ಯೋಜನೆ ಇಲ್ಲಿನ ಬಹುತೇಕ ಜಲಾಶಯಗಳಲ್ಲಿ ಇದೆ. ಆದರೆ ಅತ್ಯಾಧುನಿಕ ಯಂತ್ರಗಳೊಂದಿಗೆ ಕೆಲಸ ಮಾಡುತ್ತಿರೋದು ಈ ಜಲಾಶಯ. ಈ ಮೂಲಕ ಸಿಂಗಾಪುರದಲ್ಲಿ ಪ್ರವಾಹ ನಿಯಂತ್ರಣ ಕಾರ್ಯ ನಡೆಯುತ್ತದೆ.

ಇಷ್ಟೇ ಅಲ್ಲದೆ ಈ ಜಲಾಶಯದ ಸುತ್ತ ಸಾರ್ವಜನಿಕರಿಗೂ ಪ್ರವೇಶ ನೀಡಲಾಗುತ್ತದೆ. ಪಾರ್ಟೀ, ಬಿಸ್ನೆಸ್ ಮೀಟಿಂಗ್ ನಡೆಯುವ ರೀತಿಯಲ್ಲೂ ಇಲ್ಲಿ ಕಟ್ಟಡಗಳು ನಿರ್ಮಾಣಗೊಂಡಿದೆ. ಇತರೇ ಜಲಾಶಗಳಂತೆ ಇಲ್ಲೂ ಕೂಡ ನೀರಿನ ಚಟುವಟಿಕೆಗಳಿಗೆ ಅವಕಾಶವಿದೆ.
ನಾವು ನಮ್ಮ ಮನೆಯ ಸುರಕ್ಷತೆ, ಬೇಕಾದ ಸೌಕರ್ಯಗಳನ್ನು ಮಾಡಿಕೊಂಡ ಹಾಗೆ ಸಿಂಗಾಪುರ, ತನ್ನ ದೇಶಕ್ಕೆ ಮಾಡುತ್ತಿದೆ. ಮೂಲಭೂತ ವ್ಯವಸ್ಥೆಗಳಿಂದ ಹಿಡಿದು, ಅತ್ಯಾಧುನಿಕ ತಂತ್ರಜ್ಞಾನಗಳವರೆಗೂ ಗಮನಹರಿಸುತ್ತಿದೆ. ಏನಿದ್ದರೂ ಮೊದಲು ತನ್ನ ಉದ್ಧಾರ, ಆಮೇಲೆ ಉಳಿದ ವಿಚಾರ ಎನ್ನುವಂತಿದೆ ಇದರ ಧೋರಣೆ. ಆಂತರಿಕ ಕಚ್ಚಾಟಗಳು ಅದೇನೇ ಇರಲಿ, ಸಾರ್ವಜನಿಕವಾಗಿಯಾದರೂ ತನ್ನ ರಾಷ್ಟ್ರ, ತನ್ನ ಜನರು ಎನ್ನುವ ಒಗ್ಗಟ್ಟಿನ ಭಾವನೆಯೊಂದಿಗೆ ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡು ತ್ತಿರುವ ಸಿಂಗಾಪುರ ದೇಶದ ಬಗ್ಗೆ ಮೆಚ್ಚುಗೆ ಇದೆ.

ಇಲ್ಲಿ ತಲೆಯೆತ್ತಿರುವ ಮಹತ್ತರ ಯೋಜನೆಗಳೇ ಸಾಕ್ಷಿ.

‍ಲೇಖಕರು Avadhi

December 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: