ಕಾಡುವ ಸಾಲುಗಳು

ಅಕ್ಷಯ ಆರ್ ಶೆಟ್ಟಿ

ಕಾಯುವುದು ಈಗೀಗ ನಿತ್ಯದ ಕಾಯಕ
ಯಶೋಧರೆ, ಊರ್ಮಿಳೆ, ಮಡಿಲಾಗುತ್ತಾರೆ ಹತಾಶೆಗೆ ಆಸರೆಯಾಗಿ

ಓ ನನ್ನ ಚಿಂತೆಗಳೆ ಕೊಂಚ ಸರಿದು ನಿಲ್ಲಿ
ಕನಸೊಂದು ಹೊಂಚು ಹಾಕಿದೆ, ಮನಸನಾಳಲು!

ತಿದ್ದಿಕೋ… ಎಂದ ಎರಡು ಮಾತುಗಳೇ… ತಿರುಗಿ ಬನ್ನಿ
ಒಳ ಸೇರಿ ಹುದುಗಿ ಬಿಡಿ, ಸಂ-ಬಂಧ ಬೇಕಿದೆ ನನಗೆ

ಕಣ್ಣಿಗೆ ಕಣ್ಣು ಸೇರಿಸಲಾಗದಷ್ಟು ಅಸಹನೆಯ
ನಾ ಕೊಟ್ಟೆನಾ?
ಅಲ್ಲ, ಉಣ ಬಡಿಸಿದ್ದು ಪ್ರೀತಿಯ ಬುತ್ತಿಯನ್ನಲ್ಲವೇ?
ಹಸಿವು-ಪ್ರೀತಿ-ಅಸಹನೆ
ಕಲಸು ಮೇಲೊ ಗರವಾದದ್ದೆಲ್ಲಿ?

ನೀಕೊಟ್ಟ ಉಡುಗೊರೆಗಳೆಲ್ಲ ಪ್ರೀತಿಯ ಭಾಷ್ಯ ಬರೆದಿದ್ದವು ನನ್ನೆದೆಯೊಳಗೆ
ನೀ ಹೊರ ನಡೆದ ಕ್ಷಣ, ಎಲ್ಲವ ಮನಸೇ ಅಳಿಸಿ ಹಾಕಿದೆ, ನನ್ನ ಕೇಳದೆಯೇ

ನಾನಿನ್ನೊಳಗೆ ನೀನನ್ನೊಳಗೆ ಇಳಿದಾಗಿದೆ, ಮಧುಪಾನ ಸವಿದಾಗಿದೆ
ಮತ್ತೆಮತ್ತೆ ಬೇಕೆನಿಸುವ ಕ್ಷಣ ಹೊಸ ಸೀಸೆಗೆ ತುಟಿಯೊತ್ತಲಾಗುತ್ತಿಲ್ಲ.
ನಿನ್ನ ಅಂಗಳದಿ ಬಿದ್ದಿರುವ ಖಾಲಿ ಸೀಸೆಗಳು, ಮಾತ್ರ ಅಣಕಿಸುತಿರುವ ಭಾವ…

ಗಂಡನಾಗಿ ರಾಮನೇ ಬೇಕೆಂದು ಬಯಸಿದ್ದೆ
ಸೀತೆಯ ಬದುಕಲ್ಲ!
ಆದರದೇ ತಳಕು ಹಾಕಿಕೊಂಡಾಗ ನೆನಪಿಗೆ ಬಂದವ ಕೃಷ್ಣಾ…
ಹರಸೆಂದು ಹರಕೆ ಹೊತ್ತಗಲೂ ರಾಧೆ ಬೇಕಿರಲಿಲ್ಲ!

ಅವನು ಪ್ರೀತಿಬೇಕೆಂದ
ನಾನೂ ಹಸಿದಿದ್ದೆ.
ನಿಧಾನಕೆ ಅವನು ಅಮಲೇರಿದ
ಮನಸಿನ ಪ್ರೀತಿಯೇ ಎಂದುಕೊಂಡೆ
ನಾನು ಭಾವದೊಳಗೆ ಬಿತ್ತಿದ್ದನ್ನು ಆತ ಭೌತಿಕವಾಗಿ ಹುಡುಕಿದ
ಕಳಚಿದ ಒಂದೊಂದರೊಳಗೂ ಹುದುಗಿದ್ದ ನನ್ನ ತಿನ್ನುವ ಬಯಕೆ ಅವನದು
ಹಸಿದ ಕಂಗಳ, ಮಗು ಮನಸು ಅಂದುಕೊಂಡೆ.
ಮಾತೃತ್ವ ಹುಟ್ಟುವಾಗಲೇ ಕಸಿಯಾಗಿರುತ್ತದೋ ಏನೋ ಹೆಣ್ಣೊಳಗೆ!
ಪ್ರೀತಿ ಕುರುಡೆಂದು ಮತ್ತೆ ರುಜುವಾತಾಗಿತ್ತು, ನನ್ನಲ್ಲೂ

ಎಲ್ಲದಕೂ ಕೊನೆಯಿರುವಂತೆ,
ಒಂದು ಕೊನೆಯಲ್ಲಿ ಅವನು ಬಲತ್ಕರಿಸದೆಯೇ ಸಾಚನಾಗಿ ಉಳಿದ!
ಕಳೆದುಕೊಂಡ ಎಲ್ಲವ ತೊರೆದು ನಾನು ಅಕ್ಕನಾದೆ…

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: