ಲಾಕ್ಡೌನ್ ಸಮಯದಲ್ಲಿ ನಿಮ್ಮ ರಂಜನೆಗೆ ನಾಟಕಗಳು

ಗೊರೂರು ಶಿವೇಶ್

ಶಿವಮೊಗ್ಗ ಜಿಲ್ಲೆಯ ಸಾಗರದ ಸಮೀಪದ ಹೆಗ್ಗೋಡಿನ ನೀನಾಸಂ ನೀಲಕಂಠೇಶ್ವರ ನಾಟ್ಯಕಲಾ ಸಂಘ ಕರ್ನಾಟಕ ಅಷ್ಟೇ ಏಕೆ ಭಾರತ ಅದನ್ನು ದಾಟಿ ವಿಶ್ವ ರಂಗಭೂಮಿಯಲ್ಲಿ ಹೆಸರು ಮಾಡಿರುವ ಒಂದು ರಂಗ ಸಂಸ್ಥೆ. ಎಪ್ಪತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ರಂಗ ಸಂಸ್ಥೆ ಪ್ರತಿವರ್ಷ ರಂಗಾಸಕ್ತ ವಿದ್ಯಾರ್ಥಿಗಳನ್ನು ತನ್ನಲ್ಲಿ ತರಬೇತುಗೊಳಿಸಿ ರಂಗಶಿಕ್ಷಣ ನೀಡಿ ವೈವಿಧ್ಯಮಯ ನಾಟಕಗಳನ್ನು ಅಭ್ಯಾಸ ಮಾಡಿ ಪ್ರದರ್ಶಿಸುತ್ತದೆ.

19 85ರ ನಂತರ ತಿರುಗಾಟದ ಮೂಲಕ ನೂರಾರು ಕನ್ನಡ, ಭಾರತೀಯ ಮತ್ತು ವಿಶ್ವದ ಪ್ರಸಿದ್ಧ ನಾಟಕಗಳನ್ನು ಕರ್ನಾಟಕದ ನಗರ, ತಾಲೂಕು ಕೇಂದ್ರಗಳಲ್ಲಿ, ಗ್ರಾಮೀಣ ಪ್ರದೇಶಗಳ ರಂಗಾಸಕ್ತರನ್ನು ಕೂಡ ತಲುಪಿದೆ.  ಹಾಸನಕ್ಕೆ ಹಲವಾರು  ಬಾರಿ ರಂಗತಿರುಗಾಟದ ಮೂಲಕ ಬಂದಿದ್ದು ರಂಗಸಿರಿ ಕಲಾತಂಡದವರು ಅವರಿಗೆ ಅನುಕೂಲ ಒದಗಿಸಿ ಸಿಎಸ್ಐ ಶಾಲೆಯ ಆವರಣದಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಟ್ಟಿದ್ದರು.

ಕುವೆಂಪುರವರ ಬಿರುಗಾಳಿ ಹಾಗೂ ಕೇಶಪಾಶ ಪ್ರಪಂಚ ನಾಟಕವನ್ನು ಆ ಆವರಣದಲ್ಲಿ ನೋಡಿದ ನೆನಪು. ತಿರುಗಾಟದ ಮೂಲಕ ಎರಡು ನಂತರ ಮರು ತಿರುಗಾಟದಲ್ಲಿ ಮತ್ತೊಂದು ನಾಟಕವನ್ನು ರಾಜ್ಯಾದ್ಯಂತ ಸಂಚರಿಸಿ ಪ್ರದರ್ಶಿಸುತ್ತವೆ. ಇಲ್ಲಿ ತರಬೇತಿ ಪಡೆದ ಅನೇಕ ನಟರು ನಿರ್ದೇಶಕರು ರಂಗಕರ್ಮಿಗಳು ಸಿನಿಮಾ ದೂರದರ್ಶನ ಮತ್ತು ರಂಗ ನಟರಾಗಿ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ.

ತಿರುಗಾಟದ ಮೂವತ್ತೈದು ವರ್ಷಗಳ ಕಾಲದಲ್ಲಿ ಪ್ರದರ್ಶಿಸಲ್ಪಟ್ಟ ನಾಟಕಗಳ ಸಂಖ್ಯೆ ನೂರಕ್ಕೂ ಹೆಚ್ಚು. ಇವುಗಳಲ್ಲಿ ಈಗ ಬಹುತೇಕ ನಾಟಕಗಳನ್ನು ಸಂಚಿ ಫೌಂಡೇಶನ್ ದಾಖಲೀಕರಿಸಿ, ವಿಡಿಯೋಗಳು ಈಗ ಯೂಟ್ಯೂಬ್ ನಲ್ಲಿ ಲಭ್ಯವಿವೆ. ಕರುಣದ ಸಂದರ್ಭದಲ್ಲಿ ಮನೆಯಲ್ಲಿಯ ಲಾಕ್ಡೌನ್ ಆಗಿರುವ ರಂಗ ಪ್ರೇಮಿಗಳಿಗೆ ಈ ವಿಡಿಯೋಗಳನ್ನು ನೋಡುವ ಸದಾವಕಾಶ. ಅವುಗಳಲ್ಲಿ ನಾನು ನೋಡಿದ ಕೆಲವೊಂದು ಉತ್ತಮ ನಾಟಕಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ತಾರ್ತೂಫ್ 

ಸುಮಾರು ಸುಮಾರು 350 ವರ್ಷಗಳ ಹಿಂದೆ ಫ್ರಾನ್ಸ್ ನ ಪ್ರಖ್ಯಾತ ನಾಟಕಕಾರ ಮೋಲಿಯರ್ ಬರೆದ ನಾಟಕವನ್ನು ಕನ್ನಡಕೆ ಎ ಎನ್ ಮೂರ್ತಿ ರಾಯರು ತಂದಿದ್ದಾರೆ. ತನ್ನ ಕುಟಿಲತೆಯ ಮೂಲಕ ಮನೆ ಯಜಮಾನ ಮತ್ತು ಆಕೆಯ ತಾಯಿಯನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವ ತಾರ್ತೂಫ್ ಎಂಬ ನಯವಂಚಕನ ಕಥೆಯಿದು. ಪ್ರತಿ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ವನ ಚಾಕಚಕ್ಯತೆ  ಕಣ್ತೆರೆದು ನೋಡು ಸಿನಿಮಾದ ಬಾಲಣ್ಣನ್ನನ್ನು ನೆನಪಿಸುತ್ತದೆ. 

ವೆನಿಸಿನ ವ್ಯಾಪಾರ 

ಶೇಕ್ಸ್‌ ಪಿಯರ್‌ ನ ಪ್ರಖ್ಯಾತ ನಾಟಕ ಮರ್ಚೆಂಟ್ ಆಫ್ ವೆನಿಸ್ ನಾಟಕದ ಕನ್ನಡ ಅನುವಾದ ಇದು. ಇದರ ಕಥೆ ಈಗಾಗಲೇ ಜನಜನಿತ. ತನ್ನ ಸ್ನೇಹಿತನಿಗೆ ನೀಡಿದ ಸಾಲಕ್ಕೆ ಜಾಮೀನು ಆಗಿ ತನ್ನ ದೇಹದ ಮಾಂಸವನ್ನು ಕೊಡಲು ಬಡ್ಡಿ ವ್ಯಾಪಾರಿ ಶೈಲಾಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಆಂಟೋನಿಯೋ, ಸಂದಿಗ್ಧ ಸಮಯದಲ್ಲಿ ಅವನ ನೆರವಿಗೆ ಬರುವ ಪೊರ್ಷಿಯಳ ಕಥೆ ಇದು. ಶೈಲಾಕ್ ಮತ್ತು ಆಂಟೋನಿಯೋ ನಡುವಿನ ಸಂಭಾಷಣೆ ಹಾಗೂ ಪೊರ್ಷಿಯಳ ಜಾಣ್ಮೆ ಈ ನಾಟಕದ ಪ್ರಧಾನ ಆಕರ್ಷಣೆ. 

ಊರುಕೇರಿ ದಲಿತ ದಲಿತ ಲೇಖಕ ಸಿದ್ದಲಿಂಗಯ್ಯನವರ ಆತ್ಮಕಥೆ‌. ಹೆಗ್ಗೋಡಿನ ಜನಮನದಾಟ ತಂಡ ಇದನ್ನು ಅಭಿನಯಿಸಿದ್ದು ಗಣೇಶ್ ಇದನ್ನು ನಿರ್ದೇಶಿಸಿದ್ದಾರೆ. ಹಾಸನದಲ್ಲಿ ಬೇರೆಬೇರೆ ತಂಡದವರು ಪ್ರದರ್ಶಿಸಿದ ಉಚಲ್ಯ ಮತ್ತು ಅಕ್ಕರ ಮಾಸಿ ಮರಾಠಿ ನಾಟಕದ ಕನ್ನಡ ರೂಪಾಂತರವನ್ನು ನೋಡಿದ್ದೆ. ಆ ನಾಟಕದಷ್ಟು ಧಾರಣತೆಯ ತೀವ್ರತೆ ಈ ನಾಟಕಕ್ಕೆ ಇಲ್ಲವಾದರೂ ದಲಿತ ಬಾಲಕನೊಬ್ಬ ಹಂತಹಂತವಾಗಿ ಅವಮಾನ, ಅಸಹಾಯಕತೆ, ಹಿಂಜರಿಕೆ, ಶೋಷಣೆಗಳನ್ನು ನುಂಗಿಕೊಳ್ಳುತ್ತಾ ನೀಗಿಕೊಳ್ಳುತ್ತಾ ಬೆಳೆಯುವ ಪರಿ ನಾಟಕದಲ್ಲಿ ಅನನ್ಯವಾಗಿ ಮೂಡಿಬಂದಿದೆ.

ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆಗಳನ್ನು ಲೇವಡಿ ಮಾಡಿರುವ ಪರಿ ವಿಶಿಷ್ಟವಾಗಿದೆ. ಗೋಕಾಕ್ ವರದಿಯ ಅನುಷ್ಠಾನದ ಸಂದರ್ಭದಲ್ಲಿ ಹೋರಾಟದ ಕಥನವನ್ನು ಬಿಂಬಿಸಿರುವುದು ಮನೋಜ್ಞವಾಗಿದೆ. ಹೋರಾಟ ತೀವ್ರವಾಗಿದ್ದಾಗ ರೈಲು ತಡೆ ಮಾಡಲು ಹೊರಟ  ಚಳುವಳಿಗಾರರು ರೈಲು ಕಂಬಿಯ ಮೇಲೆ ಮಲಗಿರುತ್ತಾರೆ. ರೈಲು ಬರುವ ಸದ್ದು ಕೇಳಿಸುತ್ತದೆ. ತೀರ ಹತ್ತಿರ ಬಂದಾಗ ಮಲಗಿದ್ದ ಐವರಲ್ಲಿ ನಾಲ್ವರು ಕನ್ನಡಿಗರು ಪಕ್ಕಕ್ಕೆ ಜಾರುತ್ತಾರೆ. ಒಬ್ಬ ರೈಲಿಗೆ ಸಿಕ್ಕು ಅಸು ನೀಗುತ್ತಾನೆ.

ಆ ರೀತಿ ಅಸುನೀಗಿದವ ತಮಿಳಿಗ, ಗೋವಿಂದರಾಜು. ಆತನ ದೇಹವನ್ನು ಎತ್ತುವಾಗ ಹಿನ್ನೆಲೆಯಲ್ಲಿ ಮೂಡಿಬರುವ ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು.. ಗೀತೆ ಭಾವ ಪರವಶತೆ ಮೂಡಿಸುತ್ತದೆ. ಒಂದು ಕಥೆ ಮತ್ತು ಕಾದಂಬರಿಯನ್ನು ನಾಟಕದ ರೂಪಕ್ಕೆ ತರುವಾಗ ನಿರ್ದೇಶಕರ ಜಾಣ್ಮೆ ಈ ದೃಶ್ಯದಲ್ಲಿ ಎದ್ದು ಕಾಣುತ್ತದೆ..

ಗೋಕುಲ ನಿರ್ಗಮನ 

ಪುತಿನರವರ ಪ್ರಸಿದ್ಧ ಸಂಗೀತ ನಾಟಕ 19 94ರಲ್ಲಿ ಬಿವಿ ಕಾರಂತರು ಆತನ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ರಂಗಭೂಮಿ ಇತಿಹಾಸದಲ್ಲಿ ಇದೊಂದು ವಿನೂತನ ನಾಟಕ. ಕಂಸನ ಪ್ರತಿನಿಧಿಯಾಗಿ ಬಂದ ಅಕ್ರೂರ ಗೋಕುಲದ ಯುವಕರಿಗೆ ಬಿಲ್ಲು ಹಬ್ಬದ ಪಂದ್ಯಕ್ಕೆ ಆಹ್ವಾನ ನೀಡಿದ್ದಾನೆ. ಕೃಷ್ಣ ಮತ್ತು ಬಲರಾಮರನ್ನು ಪಂದ್ಯಕ್ಕೆ ಕರೆದು ಮುಂದಾಗಬಹುದಾದ ಶತ್ರುಗಳನ್ನು ಈಗಲೇ ನಾಶಪಡಿಸಬೇಕೆಂಬುದು ಅವನ ಉದ್ದೇಶ. ಇದರ ಹಿನ್ನಲೆ ಗೋಕುಲದ ಯುವಕರಿಗೆ ತಿಳಿದಿಲ್ಲ. ಅವರೆಲ್ಲ ಉತ್ಸಾಹದಿಂದ ಹೊರಟಿದ್ದಾರೆ.

‘ಬನ್ನಿರೋ ನಾವೆಲ್ಲಾ ಮಧುರೆಗೆ
ಬಿಲ್ಲ ಹಬ್ಬಕೆ ಹೋಗುವ
ಹಳುವ ಹಳ್ಳಿಯ ಬಿಡುತ
ಸೊಗಸಿನ ಹೊಳಲು ಜಾತ್ರೆಗೆ ಹೋಗುವ.
ಹಚ್ಚಚ್ಛಾ ಎಂದು ತುರುಗಳ
ಹಣ್ಣು ಮುದುಕರೆ ಕಾಯಲಿ
ಹಟ್ಟಿಯೋಳೆ ನಿಟ್ಟುಸಿರನಿಡುತ
ಹೆಂಗಳುಲಿಯಲಿ ಊರಲಿ’

ಈ ಕವಿತೆ ಕೇಳಿದಾಗಲೆಲ್ಲಾ ಕವಿಯ ಮುಂಗಾಣ್ಕೆಯ ಬಗ್ಗೆ ಅಪಾರ ಪ್ರೀತಿ ಮೂಡುತ್ತದೆ. ಇದು ನಗರಕ್ಕೆ ವಲಸೆ ಬರುತ್ತಿರುವವರ ಮನೋಭಾವವನ್ನು ಧ್ವನಿಸುತ್ತದೆ ಎನಿಸುತ್ತದೆ. ಅನೇಕ ಸುಂದರ ಗೀತೆಗಳು ನಾಟಕದಲ್ಲಿ ಇದ್ದು ಎಲ್ಲವಳೆಲ್ಲವಳೆಲ್ಲವಳು ಬರುತಿಹನೆ ನೋಡೆ  ಗೀತೆಗಳು ಕರ್ಣಾನಂದವಾಗಿದ್ದು ಮನಕ್ಕೆ ಮುದ ನೀಡುತ್ತದೆ. ಪರಮಪದ ಸೋಪಾನ ಪಟ ವಿಶಿಷ್ಟ ರಂಗಸಜ್ಜಿಕೆ ವಿನೂತನ ಪ್ರಯೋಗದ ಮೂಲಕ ಗಮನಸೆಳೆಯುವ ನಾಟಕ. ಅಪಘಾತವೊಂದರಲ್ಲಿ ತೀರಿಕೊಂಡ ಯುವಕನ ಶವವನ್ನು ಕಾಯುತ್ತಿರುವ ಗಾರ್ಡ್ ಹಾಗೂ ಆಸ್ಪತ್ರೆಯ ನೌಕರ ಇಬ್ಬರು ಸಮಯ ಕಳೆಯಲು ಪಗಡೆ ಯಾಡುತ್ತಾ ಮಾತನಾಡುವುದರಲ್ಲಿ ಅನಾವರಣಗೊಳ್ಳುವ ಈ ನಾಟಕ ಅತ್ಯಂತ ಕುತೂಹಲಕಾರಿಯಾಗಿ ಮುಂದುವರಿಯುತ್ತಾ ಅಪಘಾತಕ್ಕೆ ತುತ್ತಾದ ಯುವಕನ ಬದುಕನ್ನು ಪರಿಶೋಧಿಸುತ್ತ ಮುಂದುವರಿಯುತ್ತದೆ. 

ಮಳ್ಳ ಗಿಂಪಲ್

ನೊಬೆಲ್ ಪ್ರಶಸ್ತಿ ವಿಜೇತ ಇಸಾಕ್ ಬೊಸವಿಶ್ ಸಿಂಗರ್ ನ ಗಿಂಪಲ್ ದ ಪೂಲ್ ಕಥೆಯನ್ನು ನಾಟಕರೂಪಕ್ಕೆ ಜಯಂತ್ ಕಾಯ್ಕಿಣಿ ಮತ್ತುವಿವೇಕ್ ಶಾನುಭಾಗ್ ತಂದಿದ್ದಾರೆ. ಎಲ್ಲರನ್ನೂ ಎಲ್ಲವನ್ನೂ ನಂಬುವ ಅಮಾಯಕ ಮುಗ್ಧ  ಗಿಂಪಲ್ ನ ಕಥೆ ಇದು. ಸ್ನೇಹಿತರು ಅಕ್ಕಪಕ್ಕದವರು ಎಲ್ಲರ  ಛೇಡಿಕೆಗೆ, ಕುಚೇಷ್ಟೆಗೆ ಸ್ವತಃ ಹೆಂಡತಿ ಅವನಿಗೆ ಮೋಸ ಮಾಡಿದರೂ ಅದು ಅವನು ಸ್ವೀಕರಿಸುವ ರೀತಿಯನ್ನು ನಾಟಕ ಕಟ್ಟಿಕೊಡುತ್ತದೆ. ಮನೆ ಮತ್ತು ಬೇಕರಿಯ ನಡುವೆ ಒಂದು ಬೇಲಿಯನ್ನು ಸಂಯೋಜಿಸಿ ಮಾಡಿರುವ ರಂಗಸಜ್ಜಿಕೆ, ಕಥನ ತಂತ್ರ ವಿಶಿಷ್ಟವಾಗಿದ್ದು ಗಮನಸೆಳೆಯುತ್ತದೆ.

ಈ ನಾಟಕಗಳಲ್ಲಿ ಅಭಿನಯಿಸಿರುವ ಅನೇಕ ನಟರು ಇಂದು ದೂರದರ್ಶನ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವುದನ್ನು ಕಾಣಬಹುದು. ಧನಂಜಯ ದಿಡಗ ಮತ್ತು ಇನ್ನೂ ಕೆಲವು ಹಾಸನ ಜಿಲ್ಲೆಯ ಪ್ರತಿಭೆಗಳು ಈ ನಾಟಕಗಳಲ್ಲಿ ನಮ್ಮ ಗಮನ ಸೆಳೆಯುತ್ತಾರೆ. ಯೂಟ್ಯೂಬ್ನಲ್ಲಿ ಸಂಚಿ ಫೌಂಡೇಶನ್ ವಿಡಿಯೋಸ್ ಎಂದು ಟೈಪಿಸಿದರೆ ಈ ನಾಟಕಗಳ ಜೊತೆಗೆ ಇನ್ನೂ ಅನೇಕ ನಾಟಕಗಳು ನಿಮ್ಮದಾಗುತ್ತವೆ.

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: