ಕಾಡುವ 'ವಿರಹಿ ದಂಡೆ'

ಮೋಹನ‌ ಕಳಸದ
ಕಡಲು ,ಮುಗಿಲು , ನೀರು, ಅಲೆ ಮತ್ತು‌ ದಂಡೆ‌ ಇವುಗಳ ಮೊತ್ತ ಇಲ್ಲಿನ‌ ಕವಿತೆಗಳು. ಇವಕ್ಕೆ ಸಂಕೇತ, ಸಂಕೀರ್ಣ ರೂಪಕ, ಹಾಗೂ ಪ್ರತಿಮೆಗಳು ಆಧಾರ ಸ್ತಂಭವಾಗಿವೆ.ಪತ್ರಕರ್ತರು ನಿರಂತರ ಬರಹಗಾರರು. ವ್ಯಾಪ್ತಿ; ವರದಿ ಬರಹದವರೆಗೆ ಮಾತ್ರ.ನಿತ್ಯ ಜನನ, ನಿತ್ಯ ಮರಣ. ಅದನ್ನು ಮೀರಿದವರು ಕೆಲವರು. ಅಕ್ಷರಗಳನ್ನು ಶಬ್ದವಾಗಿಸಿ ಸದ್ದು ಮಾಡುವವರು .ಅಂಥವರು ಕವಿ,ಕತೆಗಾರ ಇತ್ಯಾದಿ. ನೀವು ಇದರಲ್ಲಿ ಗುರುತಿಸಿ ಕೊಂಡದ್ದು ನಿಮ್ಮ ಸೃಜನಶೀಲತ್ವ. ಎದೆಗೆ ಬಿದ್ದ ಅಕ್ಷರಗಳನ್ನು ಇಲ್ಲಿ ದುಡಿಸಿದ್ದೀರಿ. ಕ್ರಿಯಾಶಕ್ತಿ‌ ಮೆರೆದಿದೆ. ಓದುತ್ತ ಓದುತ್ತ ಪ್ರವೇಶ ಪಡೆದಾಗ ಬೆಳಕು ಗೋಚರ. ಒಮ್ಮೆ ಮಂದ ಬೆಳಕು ; ಮತ್ತೊಮ್ಮೆ ಝಗ್ ಎನ್ನುವ ಉಲ್ಲಸಿತ ಬೆಳಕು.
ಕಣ್ಣು ಕಣ್ಣುಗಳು
ದೂರದಿಂದಲೂ
ಬೆಸೆಯಬಲ್ಲವು ಎಂದು
ಇಂದೇ ತಿಳಿದದ್ದು
ಇಲ್ಲಿ ನವಿರು  ಭಾವನೆ ಬೆಳಕು‌ ಚೆಲ್ಲಿದೆ              (ಪ್ರೇಮದ ಹನಿಗಳು)
ಜಗತ್ತು ಹರಾಮಿ| ಹಗಲು ದುಡಿಯುತ್ತದೆ|
ರಾತ್ರಿ ಕಾಮಿಸುತ್ತದೆ| (ಹನಿಗಳು)

ಮನುಷ್ಯನ ಬದುಕು ,ಪ್ರಕೃತಿ‌ ನಿಯಮ ಇಲ್ಲಿ ಹಿಡಿದಿಟ್ಟಿದೆ. ಒರಟಾಗಿ‌ ಕಂಡರೂ ಹೃದ್ಯವಾಗಿದೆ. ಸುಳಿದು ಬೀಸುವ ಗಾಳಿ | ಬಳಸುತ್ತಾ|
ಬಳಕುತ್ತಾ| ಏನನ್ನೋ‌ ನೆನಪಿಸಿತು|
ಪಕ್ಕದಲ್ಲಿ | ಹೂ ಮುಡಿದ ಮರ‌ ನಗುತ್ತಿತ್ತು
(ಆಕಾಶ ಎದೆಗೆ ತುಂಬಿಕೊಂಡು)
ಇಲ್ಲಿ‌ ಹೂ ಕೊಡುವ ಗಿಡವೇ ಹೂ ಮುಡಿದಿದೆ , ಇಲ್ಲಿಯೂ ನಿಸರ್ಗ ಪ್ರೇಮದ ರಾಯಭಾರಿ ಬದುಕು ಮುದ ಕಾಣಲು ಚೇತನದ ರೂಪ ಅಕ್ಷರಗಳು .
ಶೀಲ , ಆಶ್ಲೀಲ ಎನ್ನುವ‌ ಚಳವಳಿಯೇ ಸಾಹಿತ್ಯದಲ್ಲಿ ಸಂದು‌ ಹೋಯಿತು. ಶೃಂಗಾರ ವಿವರ ನೀಡುವಾಗ ಆಶ್ಲೀಲ ಎನ್ನುವ‌ ಶೀಲ ಕಾಲು ಹಾಕೇ ತೀರುತ್ತದೆ. ಶೀಲ ಬತ್ತಲೆಯಾಗಿ ಬಂದು ನಶೆಯ ಮುಸುಕು‌ ಹೊದಿಸುತ್ತದೆ ! ಮುಸುಕಿನ‌ ಒಳಗಿರುವ   ಸತ್ಯವನ್ನು‌ ಶಬ್ದಗಳನ್ನು‌ ಮೌನವಾಗಿ ಕೂಗುತ್ತವೆ; ಚೀರುತ್ತವೆ. ನಿಜ ಸ್ಥಿತಿ ಅರುಹಲು‌ ಸಂಕೋಚವೇಕೆ…..
ಎದೆಯ ಸೀಳಿಗೆ‌ ಹದವಾದ ನಿನ್ನ‌ |
ಮೂಗಿನ ತಿವಿತ ಬೇಕಿದೆ |
ದುಂಡನೆಯ‌ ಮೊಲೆಗಳಿಗೆ |
ಬಿಗಿ ಹಿಡಿತ ಬೇಕಾಗಿದೆ
ನಿನಗೆ ಮರೆವು‌ ಜಾಸ್ತಿ |
(ಕೆನ್ನೆಗಳು‌ ಏಕಾಂತ ಅನುಭವಿಸುತ್ತವೆ)
ಹೊಟ್ಟೆಗೆ ಬಿದ್ದಾಗ ಹೆರಿಗೆ ; ಎದೆಗೆ ಬಿದ್ದಾಗ ಅಕ್ಷರ ಬಾಲಗ್ರಹ ಪೀಡೆ ಕಾಡದಂತೆ ಎರಡನ್ನೂ ಕಾಪಾಡಬೇಕು. ಒಂದು  ವಂಶದ ಕುಡಿ ; ಮತ್ತೊಂದು ಸಾರಸತ್ವ ಸಿರಿ.

ಅಕ್ಷರಗಳನ್ನು‌‌ ಎದೆಗೆ ಹಾಕಿಕೊಂಡೆ |
ಬೆಳಕಿನಂತಹ ಕವಿತೆ ಹುಟ್ಟಿತು |
ಹೃದಯಕ್ಕೆ ತೆಗೆದುಕೊಂಡೆ |
ಪ್ರೇಮ ಪಲ್ಲವಿಸಿತು |
( ಎದೆಗೆ ಬಿದ್ದ ಅಕ್ಷರ ಹೊತ್ತು)
ನೀನು ಕಡಲು | ನಾನು ದಂಡೆ|
ಯುಗ ಯುಗಗಳ ಪ್ರೇಮಕ್ಕೆ |
ಸಾಕ್ಷಿಯಾಗಿದೆ ‌ಶರಧಿ | (ಶರಧಿ‌ ಸಾಕ್ಷಿ)
ದಂಡೆ ಹರಿಯುವುದಿಲ್ಲ ; ಕಡಲು‌ ನಿಲ್ಲುವುದಿಲ್ಲ. ಆದರೆ ಅವೆರಡು ಸಂಗಾತಿ, ‘ಕವಿ’ತೆಗೆ‌ ಕವಿ ಆಶ್ರಯ‌ ನೀಡಿದಂತೆ ಬೆಚ್ಚನೆಯ ಪ್ರೇಮ, ಮೋಹ ಅಂದರೇ ಹಾಗೆ !
ಕಾವ್ತತ್ವ ಸುಲಭ ಹಿಡಿತಕ್ಕೆ ನಿಲುಕದ್ದು , ಸನಿಹ‌ ಬಂದಂತೆ ಮಾಡಿ‌ ಓಡಿ ಹೋಗುತ್ತದೆ. ಅದರ ಶಿಕಾರಿಗೆ ಬೆವರಿಳಿಸಬೇಕು.ಅದಾಗದಿದ್ದರೆ ಕಲ್ಲು ತೆಗೆದುಕೊಂಡು‌ ತಲೆಗೆ ಹೊಡೆದುಕೊಳ್ಳಬೇಕು.(ಕವಿತೆ ಒಲಿಯದೆ ಹಣೆ ಹಣೆ ಗಟ್ಟಿಸಿಕೊಂಡವರಿದ್ದಾರೆ )
ಅಕ್ಷರ ಕೀಟ ಕಿರ್ ಕಿರ್ ಎಂದು ತಲೆಯಲ್ಲಿ‌ ಕೊರೆಯಬೇಕು. ಅದರ ನೋವು ಅನುಭವಿಸಿ ಸಂತೋಷ ಪಡಬೇಕು.ಮೊದಲ ಶಬ್ದದ ಭಾವ , ತೂಕ, ಮತ್ತು ಇರುವಿಕೆ ಹೊಂದುವ ಮತ್ತೊಂದು ಶಬ್ದವ ಕೆಚ್ಚಬೇಕು. ಸಾಲುಗಳು ಸಾವಾಗಿ‌ ಕಾಡಬೇಕು. ದಿನ ತುಂಬಬೇಕು. ಕವಿತೆ ಜನನ….
ಈ ಕೃತಿಯನ್ನು ಕೊಳ್ಳಲು – ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

December 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nagraj Harapanahalli.karwar

    ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಮೋಹನ ಕಳಸದ ಲೇಖಕರು ಹೌದು. ಬೆಳಗಾವಿಯಲ್ಲಿ ನೆಲಸಿದ್ದಾರೆ. ಅವರ ಸಹೃದಯತೆ ದೊಡ್ಡದು. ಅವಧಿ ಬ್ಲಾಗ್ ಬಗ್ಗೆ ಹೊಸದಾಗಿ ತಿಳಿದುಕೊಂಡರು. ಇದು ಅವರು ಅವಧಿಗೆ ಬರೆದ ಮೊದಲ ಬರಹ. ಅವರ ಕಾವ್ಯ ಪ್ರೀತಿ ದೊಡ್ಡದು. ಅವರು ವಿರಹಿದಂಡೆ ಮೊದಲ ಓದಿಗೆ ಪ್ರತಿಕ್ರಿಯಿಸಿ ಬರೆದ ಬರಹ ಎಷ್ಟು ಪ್ರಬುದ್ದ ಮತ್ತು ಗಟ್ಟಿಯಾಗಿದೆ. ಭಾಷೆಯ ಬಳಕೆ ಚೆಲುವಿನಿಂದ ಕೂಡಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: