ತೆಲಂಗಾಣ ಅತ್ಯಾಚಾರ ಪ್ರಕರಣ ಮತ್ತು ನಂತರದ ಎನ್‌ಕೌಂಟರ್‌..

ಇದು ‘ಜುಗಾರಿ ಕ್ರಾಸ್’. ಚರ್ಚೆಗಾಗಿಯೇ ಇರುವ ತಾಣ.

ಹಿರಿಯ ಚಿಂತಕರೂ, ‘ಹೊಸ ಮನುಷ್ಯ’ ಸಂಪಾದಕರೂ ಆದ ಡಿ ಎಸ್ ನಾಗಭೂಷಣ ಅವರು ಎನ್‌ಕೌಂಟರ್‌ ಕುರಿತ ತಮ್ಮ ನೋಟವನ್ನು ಬಿಚ್ಚಿಟ್ಟಿದ್ದಾರೆ.

ನಿಮ್ಮ ನೋಟಕ್ಕೂ ಸ್ವಾಗತ

[email protected] ಗೆ ನಿಮ್ಮ ಅಭಿಪ್ರಾಯ ಕಳಿಸಿಕೊಡಿ

ಯಾಕೋ ಕಾಣೆ ರುದ್ರವೀಣೆ ಮಿಡಿಯುತಿರುವುದು…
___________________________________________________
ತೆಲಂಗಾಣ ಅತ್ಯಾಚಾರ ಪ್ರಕರಣ ಮತ್ತು ನಂತರದ ಎನ್‌ಕೌಂಟರ್‌

ಡಿ..ಎಸ್. ನಾಗಭೂಷಣ

ತೆಲಂಗಾಣದ ಪಶುವೈದ್ಯೆಯೊಬ್ಬರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅವರ ಬರ್ಬರ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳನ್ನು ಸೈದರಾಬಾದ್ ಪೋಲೀಸರು ಡಿಸೆಂಬರ್ ೬ರ ಬೆಳಿಗ್ಗೆ ಎನ್‌ಕೌಂಟರ್‌ವೊಂದರಲ್ಲಿ ಕೊಂದು ಹಾಕಿದ್ದಾರೆ. ಇದಕ್ಕೆ ರಾಷ್ಟ್ರಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇದರಲ್ಲಿ ಎನ್‌ಕೌಂಟರ್ ಮೂಲಕ ಮಾಡಿದ ಹತ್ಯೆಯನ್ನು ಬೆಂಬಲಿಸಿದವರೇ ಹೆಚ್ಚು ಎಂಬುದು ಎದ್ದು ಕಾಣುವಂತಿದೆ. ಹೈದರಾಬಾದ್-ಸಿಕಂದರಾಬಾದ್‌ನ ಜನರಂತೂ ಈ ಹತ್ಯೆಗಳನ್ನು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನು ಮೇನಕಾ ಗಾಂಧಿಯವರ ಹೊರತಾಗಿ ಆಡಳಿತ ಪಕ್ಷದ ಕೆಲ ಸಚಿವರು ಮತ್ತು ಸಂಸತ್ ಸದಸ್ಯರೂ, ಶಾಸಕರೂ ಸೇರಿದಂತೆ ಅದರ ನಾಯಕ ಸಮೂಹ ಈ ಹತ್ಯೆಯನ್ನು ಅನಿವಾರ್ಯ ಕ್ರಮ ಎಂಬಂತೆ ಸಮರ್ಥಿಸಿದ್ದಾರೆ. ವಿರೋಧ ಪಕ್ಷಗಳ ನಾಯಕರು (ಉದಾ: ನಮ್ಮ ಸಿದ್ದರಾಮಯ್ಯನವರು) ಜನರ ಸಮೂಹಸನ್ನಿಗೆ ಶರಣಾದವರಂತೆ ಮಾನಸಿಕ ಅಸ್ಥಿರತೆಗೆ ಒಳಗಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಇದು ನಿಜವಾಗಿಯೂ ಆತಂಕಕಾರಿ ಸಂಗತಿ.

ಪೋಲೀಸರ ಎನ್‌ಕೌಂಟರ್ ವರದಿಯನ್ನು ಅದರ ಸತ್ಯಾಸತ್ಯತೆ ದೃಢಗೊಳ್ಳುವ ಮುನ್ನವೇ ಆಡಳಿತಗಾರರು ಮತ್ತು ರಾಜಕಾರಣಿಗಳು ಬೆಂಬಲಿಸುವುದು, ಸಮರ್ಥಿಸುವುದು ಸಹಜವೇ ಆಗಿದೆ. ಏಕೆಂದರೆ ಇದು ತಂತಮ್ಮ ಸ್ವಹಿತಾಸಕ್ತಿಯ ರಾಜಕಾರಣದಿಂದಾಗಿ ಸಾರ್ವಜನಿಕ ಜನಸಾಮಾನ್ಯರ ಮಾನ-ಪ್ರಾಣಗಳಿಗೆ ರಕ್ಷಣೆಯ ಭರವಸೆ ಕೊಡಲಾಗದ ತಮ್ಮ ಆಡಳಿತದ ಅದಕ್ಷತೆಯನ್ನು ಹೀಗೆ ಮರೆಮಾಚಿಕೊಳ್ಳುವ ಪ್ರಯತ್ನವೇ ಆಗಿದೆ. ಆದರೆ ಜನಸಾಮಾನ್ಯರು ಹೀಗೆ ಮಾಡವುದು ಅವರು ತಮ್ಮ ಕಾಲುಗಳ ಮೇಲೆ ತಾವೇ ಕಲ್ಲು ಎತ್ತಿಹಾಕಿಕೊಂಡಂತೆಯೇ ಸರಿ. ಏಕೆಂದರೆ, ಯಾವುದೇ ಭಯವಿಲ್ಲದೆ ಮುಂದುವರೆದಿರುವ ಬರ್ಬರ ಅತ್ಯಾಚಾರಗಳು ಮತ್ತು ನಮ್ಮ ನ್ಯಾಯಾಂಗದಿಂದ ಅವಕ್ಕೆ ಸಕಾಲದಲ್ಲಿ ಸೂಕ್ತ ಶಿಕ್ಷೆಯಾಗದ ಬಗೆಗಿನ (ಉನ್ನಾಂವ್ ಅತ್ಯಾಚಾರ ಪ್ರಕರಣದ ಇತ್ತೀಚಿನ ಭಯಾನಕ ಬೆಳವಣಿಗೆಯನ್ನು ಗಮನಿಸಿ) ಅಸಹಾಯಕತೆ ಮತ್ತು ಆಕ್ರೋಶ ಸಹಜವಾದರೂ, ಅವು ಪೋಲೀಸ್ ವ್ಯವಸ್ಥೆಯ ಕೈ ಬಲಪಡಿಸುವ ದಾರಿ ಹಿಡಿಯುವುದು ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿಯನ್ನು ಜನರಿಗೆ ಇನ್ನಷ್ಟು ಪ್ರತಿಕೂಲವಾಗುವಂತೆ ಮಾಡುವ ಅಪಾಯದಲ್ಲಿ ಕೊನೆಗೊಳ್ಳುವುದೇ ಸರಿ.

ಅತ್ಯಾಚಾರದಂತಹ ಬರ್ಬರ ಕೃತ್ಯಗಳನ್ನು ಕಾನೂನು ಮತ್ತು ಶಿಸ್ತಿನ ಕ್ರಮಗಳ ಮೂಲಕ ತಡೆಗಟ್ಟುವಲ್ಲಿ ವಿಫಲವಾಗುವ ಪೋಲೀಸ್ ವ್ಯವಸ್ಥೆಯೊಂದು ಜನರ ಆಕ್ರೋಶದ ಕಾರಣದಿಂದಲೋ ರಾಜಕೀಯ ಆಡಳಿತಗಾರರ ಒತ್ತಡಕ್ಕೆ ಒಳಗಾಗಿಯೋ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯಾರೋ ಪಾಪಿ ಪರದೇಶಿಗಳನ್ನು ಅಥವಾ ಇಂತಹ ಸಂದರ್ಭಗಳಿಗೆಂದೇ ತಮ್ಮಿಂದ ಗುರುತಿಸಲ್ಪಟ್ಟ ಜನರನ್ನು ಅಪರಾಧಿಗಳೆಂದು ಎಳೆದುತಂದು ನ್ಯಾಯಾಲಯಗಳ ಮುಂದೆ ಹಾಜರುಪಡಿಸಿ ಪರಿಸ್ಥಿತಿಯನ್ನು ಸದ್ಯಕ್ಕೆ ಶಮನಗೊಳಿಸುವ ಪ್ರಯತ್ನ ಮಾಡುವುದನ್ನು ಎಲ್ಲರೂ ಬಲ್ಲರು.

ಹೀಗಾಗಬಾರದೆಂದೇ ನ್ಯಾಯ ವಿತರಣೆಯ ಜವಾಬ್ದಾರಿಯನ್ನು ಕಾನೂನು ವ್ಯವಸ್ಥೆ ಪೋಲೀಸರಿಗೆ ನೀಡದೆ, ನ್ಯಾಯಾಂಗ ವ್ಯವಸ್ಥೆಯೊಂದನ್ನು ರೂಪಿಸಿ ಪೋಲೀಸ್ ತನಿಖೆಯನ್ನೂ ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಿ ನ್ಯಾಯದಾನ ಅಥವಾ ಶಿಕ್ಷೆ ನೀಡಿಕೆಯ ಕರ್ತವ್ಯವನ್ನು ಅದಕ್ಕೆ ನೀಡಿದೆ. ಹಾಗಾಗಿ ಸದರಿ ಎನ್‌ಕೌಂಟರ್‌ಗೆ ಬಲಿಯಾದವರು ನಿಜವಾದ ಅಪರಾಧಿಗಳೆಂದು ಸಾಬೀತಾದವರಲ್ಲ ಮತ್ತು ಈ ಕಾರಣದಿಂದ ಇದು ಸಾಮೂಹಿಕ ಕೊಲೆಯೆಂದು ಸಾರ್ವಜನಿಕ ಹಿತದೃಷ್ಟಿಯಿಂದಲೂ, ಕಾನೂನಿನ ಪ್ರಕಾರವೂ ಪರಿಗಣಿತವಾಗುವ ಅವಕಾಶವಿದೆ.

ಅವಕಾಶವಿದೆ ಎಂದು ಹೇಳಲು ಕಾರಣ, ಅನಿವಾರ್ಯ ಸಂದರ್ಭಗಳಲ್ಲಿ-ಸ್ವರಕ್ಷಣೆಯ ದೃಷ್ಟಿಯಿಂದ-ಪೋಲೀಸರು ಇಂತಹ ಹತ್ಯೆಗಳನ್ನು ಮಾಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಇಲ್ಲಿ ಸ್ವರಕ್ಷಣೆಯ ಅನಿವಾರ್ಯತೆ ಉಂಟಾಗಿತ್ತೆ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರಕುವವರೆಗೂ ಈ ಹತ್ಯೆಗಳನ್ನು ನ್ಯಾಯ ದಾನವೆಂದು ಸಮರ್ಥಿಸುವುದು, ಸಂಭ್ರ‍್ರಮಿಸುವುದು, ಅಪಾಯಕಾರಿ. ಇದು ಪೋಲೀಸರ ಸರ್ವಾಧಿಕಾರಕ್ಕೆ ಅವಕಾಶ ನೀಡಿ ನಿರಪರಾಧಿ-ಮುಗ್ಧ ಜನರ ಸಂಕಟ ಮತ್ತು ಹತ್ಯೆಗಳಿಗೆ ಕಾರಣವಾಗುವ ಎಲ್ಲ ಅಪಾಯವಿದೆ. ಇದರಲ್ಲಿ ಮುಂದೆ, ಇಂದು ಎನ್‌ಕೌಂಟರ್‌ನ್ನು ಸಂಭ್ರಮಿಸುತ್ತಿರುವ ಮನೆಯವರೂ ಸೇರಬಹುದು

ಅಂದ ಮಾತ್ರಕ್ಕೆ ಸದ್ಯದ ತೆಲಂಗಾಣ ಪ್ರಕರಣವೂ ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಹೀಗಾಗುವುದು ಎಂದು ಹೇಳಲಾಗದಿದ್ದರೂ, ಅದೆಂತಹ ಬರ್ಬರ ಅಪರಾಧವಾಗಿದ್ದರೂ ಪ್ರತಿಯೊಂದು ಪೋಲೀಸ್ ಎನ್‌ಕೌಂಟರ್ ಅಥವಾ ಕಸ್ಟಡಿ ಕಿರುಕುಳ ಮತ್ತು ಸಾವಿನ ಪ್ರಕರಣವನ್ನೂ ನ್ಯಾಯಾಂಗ ಪರಿಶೀಲನೆಗೆ ಒಪ್ಪಿಸದೆ ಮನ್ನಿಸಲಾಗದು. ಏಕೆಂದರೆ ಸದ್ಯದ ಪ್ರಕರಣದ ಉದಾಹರಣೆಯನ್ನೇ ತೆಗೆದುಕೊಂಡರೆ, ಪ್ರಕರಣ ನಡೆದ ಬೆಳಗಿನ ಝಾವದ ಸಮಯ, ಶಸ್ತ್ರಧಾರಿಗಳಾದ ಹತ್ತು ಜನ ಪೋಲೀಸರಿದ್ದರೂ ನಿರಾಯುಧರಾಗಿದ್ದ ಆ ನಾಲ್ವರು ಆರೋಪಿಗಳು ಆ ಪೋಲೀಸರ ಮೇಲೆ ಕಲ್ಲುಗಳಿಂದ ದಾಳಿ ಮಾಡಿ ಬಂದೂಕಗಳನ್ನು ಕಸಿದುಕೊಳ್ಳಲು ಯತ್ನಿಸಿದರೆಂಬ ಪೋಲೀಸರ ಹೇಳಿಕೆ ಮತ್ತು ಯಾವ ಪೋಲೀಸರಿಗೂ ಗುಂಡು ತಗುಲಿಲ್ಲವೆಂಬ ವರದಿ ಮೇಲ್ನೋಟಕ್ಕಾದರೂ ಈ ಎನ್‌ಕೌಂಟರ್‌ನ ಸತ್ಯಾಸತ್ಯತೆಯ ಬಗ್ಗೆ ಸಂದೇಹಗಳನ್ನುಂಟು ಮಾಡುವಂತಿವೆ. ಹಾಗಾಗಿ ಎನ್‌ಕೌಂಟರ್ ಪೋಲೀಸರ ಸ್ವರಕ್ಷಣೆಯ ದೃಷ್ಟಿಯಿಂದ ಅನಿವಾರ್ಯವಾಗಿತ್ತೆಂಬುದು ನಿಷ್ಪಕ್ಷಪಾತ ವಿಚಾರಣೆಯೊಂದರಿಂದ ಸಾಬೀತಾಗುವವರೆಗೂ ಇದನ್ನು ಸಂಭ್ರಮಿಸಿ ಸಮರ್ಥಿಸುವುದು ಸಾರ್ವಜನಿಕ ಬೇಜವಾಬ್ದಾರಿತನವಾಗುವುದಲ್ಲದೆ, ಈಗಾಗಲೇ ಅನಧಿಕೃತವಾಗಿ ಭಾಗಶಃ ಜಾರಿಯಲ್ಲಿರುವ ಪೋಲೀಸ್ ಸರ್ವಾಧಿಕಾರವನ್ನು ಪೋಷಿಸಿದಂತಾಗುತ್ತದೆ.

 

ನಮ್ಮ ರಾಜಕಾರಣಿಗಳ ವಿಕ್ಷಿಪ್ತ ವೀರಾವೇಶದ ಹೇಳಿಕೆಗಳ ಜೊತೆಗೆ ಈ ಕಾರ್ಯಾಚರಣೆ ನಡೆಸಿದ ವರಿಷ್ಠ ಪೋಲೀಸ್ ಅಧಿಕಾರಿ ಕನ್ನಡಿಗನೆಂಬ ಮಾಹಿತಿ ಹರಡಿ ಕರ್ನಾಟಕದ ಮಟ್ಟಿಗಾದರೂ ಈ ಕುರಿತ ಚರ್ಚೆಯನ್ನು ದಿಕ್ಕೆಡಿಸುವ ಪ್ರಯತ್ನ ಮತ್ತು ಆತ ಬಾಲ್ಯದಿಂದಲೂ ಆತ ನ್ಯಾಯಕ್ಕಾಗಿ ಹೋರಾಡುತ್ತಿದ್ದವನು ಎಂಬ ಆತನ ಕುಟುಂಬದ ಹಿರಿಯರ ಮಾತುಗಳ ವರದಿಯ ಮೂಲಕ ನಡೆದಿರುವ ಈ ಇಡೀ ಪ್ರಕರಣದ ವೈಭವೀಕರಣ ನಮ್ಮ ಸಮಾಜ ಅಡಿಯಿಂದ ಮುಡಿಯವರೆಗೆ ಪ್ರಜಾಪ್ರಭುತ್ವದ ವಿಷಯದಲ್ಲಿ ಇನ್ನೂ ಅನಕ್ಷರಸ್ಥವಾಗಿದೆ ಎಂಬುದನ್ನು ಅಥವಾ ಈ ಸಮಾಜಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೋಗಿದೆ ಎಂಬುದನ್ನು ಸೂಚಿಸುತ್ತದೆ,.

ಈ ಇಡೀ ಪ್ರಕರಣದಲ್ಲಿ ಅತ್ಯಾಚಾರದ ಆರೋಪಿಗಳ ಜೊತೆ ಮಹಾ ಆರೋಪಿಗಳಾಗಿ ನಿಲ್ಲುವವರೆಂದರೆ, ಈ ಪ್ರಕರಣವನ್ನು ಸಮೂಹ ಸನ್ನಿಗೆ ಇನ್ನಷ್ಟು ಕುಮ್ಮಕ್ಕು ನೀಡುವ ರೀತಿಯಲ್ಲಿ ವರದಿ ಮಾಡುತ್ತಿರುವ ಸಮೂಹ ಮಾಧ್ಯಮಗಳು ಮತ್ತು ತನ್ನ ನಿಧಾನ ಗತಿಯ ಪರಿಣಾಮಗಳ ಬಗ್ಗೆ ಅರಿವೇ ಇಲ್ಲದಂತೆ ಸಾರ್ವಜನಿಕ ಜೀವನದಿಂದ ಸಂಪೂರ್ಣ ಕತ್ತರಿಸಿಕೊಂಡಂತಿರುವ ನಮ್ಮ ನ್ಯಾಯಾಂಗ. ಆದರೆ ಮಾಧ್ಯಮಗಳಿಗೆ ಲಾಭ-ನಷ್ಟ ಅನುಭವಿಸುವ ಖಚಿತವಾಗಿ ಗುರುತಿಸಲು ಸಾಧ್ಯವಿರುವ ಒಡೆಯರೆಂಬುವವರು ಇದ್ದಾರೆ. ಆದರೆ ನ್ಯಾಯಾಂಗಕ್ಕೆ ಅಂತಹ ಒಡೆಯರಿಲ್ಲ. ಹಾಗೆ ನೋಡಿದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ನಾವು ೧೩೦ ಕೋಟಿ ಜನರೂ ಒಡೆಯರೇ. ಆದರೆ ಆ ಒಡೆತನವನ್ನು ನಮ್ಮ ಪ್ರತಿನಿಧಿಗಳಿಗೆ ಒಪ್ಪಿಸಿ ನಾವು ನಿರಾಳವಾಗಿದ್ದೇವೆ.

ಈ ನಿರಾಳತೆಯಲ್ಲಿನ ಉಡಾಫೆತನದ ಪರಿಣಾಮವೇ ಪೋಲೀಸ್ ಸರ್ವಾಧಿಕಾರದ ಸಂಭ್ರಮಾಚರಣೆಯಾಗಿದೆ. ಇದು ಎಲ್ಲ ಆರೋಪಿಗಳನ್ನೂ ಹೀಗೆ ಹತ್ಯೆ ಮಾಡಿದರೆ ಚೆನ್ನ ಎಂಬ ಹತಾಶ ಅಪೇಕ್ಷೆಗೆ ದಾರಿ ಮಾಡಿಕೊಟ್ಟು ಅದು ಸಮೂಹ ಸನ್ನಿಯಾಗಿ ಉಲ್ಬಣಿಸುವ ಮುನ್ನ ನ್ಯಾಯಾಂಗದ ನಿಧಾನಗತಿಗೆ ಕಾರಣವಾಗಿರುವ ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯಗಳನ್ನು ಸರಿಪಡಿಸುವ ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಬಹು ವರ್ಷಗಳಿಂದಲೂ ಜಾರಿಯಾಗದೆ ಧೂಳು ತಿನ್ನುತ್ತಿರುವ ಪೋಲೀಸ್ ಸುಧಾರಣೆ ವರದಿಯ ಅನುಷ್ಠಾನಕ್ಕಾಗಿ ನಮ್ಮ ಪ್ರತಿನಿಧಿಗಳನ್ನು ಒತ್ತಾಯಿಸಬೇಕಿದೆ.

ಆದರೆ ನಾವು ಒತ್ತಾಯಿಸುವ ಮತ್ತು ಅವರು ನಮ್ಮ ಈ ಒತ್ತಾಯಕ್ಕೆ ಸ್ಪಂದಿಸುವ ವಾತಾವರಣ ಇಂದಿದೆಯೇ? ಇದ್ದಿದ್ದರೆ ಇದು ಎಂದೋ ಆಗಬೇಕಿತ್ತು. ಆದರೆ ಆಗಿಲ್ಲವೆಂದರೆ ಈ ಇಡೀ ಸಮಸ್ಯೆಯ ಹಿಂದೆ, ಈ ಸಮಸ್ಯೆಗೆ ಕಾರಣವಾಗಿರುವ ಎಲ್ಲ ಕಾರಣಗಳನ್ನೂ ನಿಯಂತ್ರಿಸುವ ಮತ್ತೊಂದು ಪ್ರಬಲ-ಕೇಂದ್ರ-ಕಾರಣವಿದೆ ಎಂದೇ ಅರ್ಥ. ಆ ಕಾರಣವೆಂದರೆ ನಮ್ಮನ್ನೊಂದು ಸ್ಥಿಮಿತದಲ್ಲಿರುವ ಸಮಾಜವಾಗಿ ಕಾಪಾಡಿಕೊಂಡು ಬರುತ್ತಿದ್ದ ಸಮುದಾಯ ಪ್ರಜ್ಞೆಯನ್ನು ನಾಶ ಮಾಡಿ ನಾವು ಪ್ರತಿಯೊಬ್ಬರೂ ಯಾವುದೇ ಎಗ್ಗಿಲ್ಲದೆ ಸುಲಭ ಹಣದ ರಾಶಿಯ ಹಿಂದೆ ಹೋಗಲು ಮತ್ತು ಹಲವರು ಅಂತಹ ಸುಲಭ ಹಣರಾಶಿಯ ದಿಢೀರ್ ಒಡೆಯರಾಗಲು ಹಾಗೂ ಈ ಎಲ್ಲದಕ್ಕೆ ಅಧಿಕೃತ ಮಾನ್ಯತೆ ಒದಗಿಸಲು ಅನುವು ಮಾಡಿಕೊಟ್ಟಿರುವ ಮುಕ್ತ ಮಾರುಕಟ್ಟೆ ಆರ್ಥಿಕತೆ.

ಇದು ಸಮಾಜದಲ್ಲಿ ಅಂತರ್ಗತವಾಗಿದ್ದ ನೈತಿಕ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿದೆೆ. ಇದು ಬೇಂದ್ರೆ ಹೇಳುವ ರುದ್ರವೀಣೆಯ ಮಿಡಿತ. (‘ಯಾಕೋ ಕಾಣೆ ರುದ್ರವೀಣೆ ಮಿಡಿಯುತಿರುವುದು…’) ಜಗತ್ತು ಕೆರಳಿದೆ. ಎಲ್ಲ ರೀತಿಯಲ್ಲೂ ಉದ್ರೇಕವಾಸ್ಥೆಯಲ್ಲಿದೆ. ಯಾರೂ ಇದಕ್ಕೆ ಹೊರತಲ್ಲ. ಅದು ಈಗ ಎಲ್ಲರನ್ನೂ ಆಂತರಿಕವಾದ ಎಲ್ಲದರಿಂದ ಮುಕ್ತಗೊಳಿಸಿದೆ. ಹಾಗಾಗಿ ಈಗ ಅದು ನಮ್ಮ ಆರ್ಥಿಕತೆಯನ್ನಷ್ಟೇ ಅಲ್ಲ, ನಮ್ಮ ವಾಸದ ನೆಲೆಗಳನ್ನೂ ಅಲ್ಲೋಲ ಕಲ್ಲೋಲಗೊಳಿಸ ತೊಡಗಿದೆ. ಆದರೂ ಗಾಡ್ಗೀಳ್ ವರದಿ ಇರಲಿ, ಕಸ್ತೂರಿರಂಗನ್ ವರದಿಯ ಅನುಷ್ಠಾನವೂ ಬೇಡವೆನ್ನುವ ‘ಅಜ್ಞಾನ; ನಮ್ಮಲ್ಲಿ ಉಂಟಾಗಿದೆ.

ಹಾಗಾಗಿ ಇದು ಎಲ್ಲ ರೀತಿಯ ಅತ್ಯಾಚಾರಗಳ ಕಾಲ. ಅವುಗಳಲ್ಲಿ ಲೈಂಗಿಕ ಅತ್ಯಾಚಾರ ಮತ್ತು ಅದನ್ನು ಮುಚ್ಚಿಹಾಕಬಲ್ಲ ಕಾನೂನು ಅತ್ಯಾಚಾರಗಳೂ ಸೇರಿವೆಯಷ್ಟೆ. ಇದಕ್ಕೆ ‘ಮುಕ್ತ’ ಪೋಲೀಸ್ ವ್ಯವಸ್ಥೆ ಅಥವಾ ಸರ್ವಾಧಿಕಾರ ಅಗತ್ಯವಾಗಿದೆ. ಹಾಗೆಂದೇ ಸಮಾಜಕ್ಕೆ ಈಗ ಅತ್ತ ತುಡಿತ. ಇದು ಸ್ವಯಂ ನಾಶದ ತುಡಿತವೇ ಹೌದು.

‍ಲೇಖಕರು avadhi

December 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Kiran

    This is proposing a wrong medicine to an old disease!
    If the author feels open market economy is the root of all our problems, then is he proposing we should embrace the other extreme called communism?
    How are the current issues linked to the type of our economy??
    The obvious reasons seems to be our our already massive population exploding at an alarming rate, even though it looks flashy and colorful on the TVs and big cities, the majority population are vastly illiterate and poor and very easily gullible and manipulatable..
    if we were about 40 crores 75 years ago we are more than 3 times that now, but have our resources grown 3 folds too???? For a truly prosperous India the population shouldn’t have been allowed to go beyond 80 crores, but since the people who ruled the country in its initial phases of independence didn’t have this grand vision and instead instilled the same idea that into every mind, which is making money by any means is the right thing to do!!!

    ಪ್ರತಿಕ್ರಿಯೆ
  2. T S SHRAVANA KUMARI

    ಇನ್ನಾದರೂ ನ್ಯಾಯಾಂಗ ವ್ಯವಸ್ಥೆ ತೀರ್ಪುಗಳು ವಿಳಂಬವಾಗುತ್ತಿರುವುದರ ಪರಿಣಾಮಗಳನ್ನು ಮನಗಂಡು ಕಾರ್ಯಪ್ರವೃತ್ತರಾಗಲಿ.

    ಪ್ರತಿಕ್ರಿಯೆ

Trackbacks/Pingbacks

  1. ಎನ್ಕೌಂಟರ್ ಎಂಬುದು ವಿಕೃತ ನ್ಯಾಯ ವ್ಯವಸ್ಥೆ – ಅವಧಿ । AVADHI - […] ಖ್ಯಾತ ಚಿಂತಕರಾದ ಡಿ ಎಸ್ ನಾಗಭೂಷಣ್ ಅವರು ತೆಲೆಗಾಂಣದಲ್ಲಿ ನಡೆದ ಎನ್ ಕೌಂಟರ್ ಕುರಿತು ತಮ್ಮ ನೋಟವನ್ನು ಹಂಚಿಕೊಂಡಿದ್ದರು. ಅದು ಇಲ್ಲಿದೆ. […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: