ಕಾಡುವ ಕವಿತೆಗಳ ಸಂಕಲನ ‘ಕಡೇ ನಾಲ್ಕು ಸಾಲು’

ಡಾ. ಪಾರ್ವತಿ ಜಿ.ಐತಾಳ್

ಮನದಾಳದಲ್ಲಿ ಹೆಪ್ಪುಗಟ್ಟಿರುವ ಸಂಕಟದ ಸಾಗರಕ್ಕೆ ಅಭಿವ್ಯಕ್ತಿ ನೀಡಲು ಹೆಣಗಾಡುವ ಹೆಣ್ಣಿನ ನೋವು ಯಾವಾಗಲೂ ಸಮಾಜದ ಸಂವೇದನಾಶೂನ್ಯ ಕಣ್ಣುಗಳಿಗೆ ಕಾಣಿಸುವಂಥಾದ್ದಲ್ಲ. ಆಕೆ ತನ್ನೊಳಗಿನ ಯಾತನೆಗೆ ಕಾರಣಗಳನ್ನು ನೇರವಾಗಿ ಹೇಳಿಕೊಂಡರೆ ಆಕೆಯ ಆಲೋಚನೆಗಳನ್ನು ಸಂಪ್ರದಾಯ ವಿರುದ್ಧವಾಗಿ ಕಾಣುವ ಸಮಾಜವು ಆಕೆಯನ್ನೇ ತಪ್ಪಿತಸ್ಥಳನ್ನಾಗಿಸುತ್ತದೆ. ಅದಕ್ಕಾಗಿ ಆಕೆ ಸಾಹಿತ್ಯದ ಮೊರೆ ಹೊಗುತ್ತಾಳೆ. ಅದರಲ್ಲೂ ಕಾವ್ಯದ ಮೂಲಕ ಅನೇಕ ವಿಚಾರಗಳನ್ನು ಅಲಂಕಾರಿಕವಾಗಿ, ರೂಪಕ-ಪ್ರತಿಮೆಗಳ ಒಳಗೆ ಆಶಯಗಳನ್ನು ಅಡಗಿಸಿ ಸೂಕ್ಷ್ಮವಾಗಿ ಓದುವವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಹೇಳಿ ಹಗುರಾಗುತ್ತಾಳೆ.

ಉಮಾ ಮುಕುಂದ್ ಅವರ ‘ಕಡೇ ನಾಲ್ಕು ಸಾಲು’ ಇಂಥ ಕವಿತೆಗಳ ಒಂದು ಸುಂದರ ಸಂಕಲನ.

ಮೊದಲ ಓದಿಗೆ ತುಂಬ ಸರಳ ಕವನಗಳೆಂದು ಅನ್ನಿಸುವ ಇಲ್ಲಿನ ಅನೇಕ ಕವಿತೆಗಳು ಕ್ಷಣಗಳು ಸರಿದಂತೆ ನಮ್ಮನ್ನು ಕಾಡತೊಡಗುತ್ತವೆ. ‘ಏನಿದರ ಅರ್ಥ?’ ಎಂದು ಮತ್ತೆ ಮತ್ತೆ ಕೇಳುವಂತೆ ಮಾಡುತ್ತವೆ.

ಕಡೇ ನಾಲ್ಕು ಸಾಲು ‘ಬಹುರೂಪಿ’ಯಿಂದ ಇತ್ತೀಚೆಗೆ ಪ್ರಕಟವಾದ ಉಮಾ ಮುಕುಂದ್ ಅವರ ಮೊದಲ ಕವನ ಸಂಕಲನ. ’ಇಲ್ಲಿನ ಬಹುತೇಕ ರಚನೆಗಳು ನನ್ನ ಬದುಕಿನ ಅನುಭವಗಳನ್ನು ಆಧರಿಸಿದ್ದೇ ಆಗಿವೆ. ಇದು ನನ್ನ ಮಿತಿಯೂ ಇರಬಹುದೇನೋ?’ ಎಂದು ಅಳುಕುತ್ತ ಹೇಳುವ ಕವಯಿತ್ರಿ ಇಲ್ಲಿ ಬರೆದಿರುವುದು ಮಾತ್ರ ಎಲ್ಲ ಹೆಣ್ಣುಮಕ್ಕಳು ಪಿಸುಗುಟ್ಟುವ ಸಾಮಾನ್ಯ ಮತ್ತು ಸಹಜ ಅನುಭವಗಳನ್ನೇ.

ಇಲ್ಲಿರುವ 36 ಕವಿತೆಗಳು ಹೆಣ್ಣಿನ ಸೀಮಿತ ಅವಕಾಶದ ಪರಿಧಿಯೊಳಗೆ ಕಾಣುವ ನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತವೆ. ಅಲಂಕಾರವೇ ಇಲ್ಲದ ಬೋಳು ಕವಿತೆಗಳು ಎಂದು ಹೊರನೋಟಕ್ಕೆ ಅನ್ನಿಸಿದರೂ ಇಲ್ಲಿ ಬಿಡಿಸಲಾಗದ ಒಗಟುಗಳಿವೆ, ಸುಲಭದಲ್ಲಿ ಅರ್ಥಮಾಡಿಕೊಳ್ಳಲಾಗದ ರೂಪಕಗಳೂ ಇವೆ. ಮುಖ್ಯವಾಗಿ ‘ಕಡೇ ನಾಲ್ಕು ಸಾಲು’ ಎಂಬ ಶೀರ್ಷಿಕೆ ಕವನದಲ್ಲಿರುವ ಕೊನೆಯ ಸಾಲುಗಳು ಹಲವು ಪ್ರಶ್ನೆಗಳನ್ನು ಮೂಡಿಸುತ್ತವೆ.

‘ಬರೆದಿಟ್ಟು ಹೋದ ನಾಲ್ಕು ಸಾಲುಗಳು ಮಾಯವಾಗಿದ್ದು ಹೇಗೆ? ಕರೆಗಂಟೆ ಒತ್ತಿದವರು ಯಾರು ? ಅವಸರದಲ್ಲಿ ಆಕೆ ನಾಲ್ಕು ಸಾಲುಗಳನ್ನು ಬರೆಯುವಷ್ಟರಲ್ಲಿ ಅವರೇಕೆ ಹೊರಟು ಹೋದರು? ಕಡೇ ನಾಲ್ಕು ಸಾಲುಗಳು ಅಂದರೇನು?’ ಹೀಗೆ ಪ್ರಶ್ನೆಗಳು ಪುಂಖಾನುಪುಂಖವಾಗಿ ಏಳುತ್ತವೆ. ಇವು ನಮ್ಮನ್ನೊಂದು ಭ್ರಾಮಕ ಜಗತ್ತಿಗೆ ಒಯ್ಯುವಂಥ ಪ್ರಶ್ನೆಗಳು. ಬಂದಿದ್ದು ದೆವ್ವ-ಭೂತಗಳೆ? ಅವು ಆಕೆಯೊಂದಿಗೆ ಆಟವಾಡಿದವೆ? ಅಥವಾ ಯಾರೋ ಬಂದಿದ್ದಾರೆಂಬ ತರಾತುರಿಯಲ್ಲಿ ಕಥೆಯ ಕೊನೆಯ ಸಾಲುಗಳನ್ನು ತಾನು ಬರೆದು ಮುಗಿಸಿದ್ದೇನೆಂದು ಆಕೆ ಭ್ರಮಿಸಿದ್ದಿರಬಹುದೆ?.

‘ಮಹಿಳೆ ಮತ್ತು ಬರವಣಿಗೆ’ ಎಂಬ ವಿಷಯದ ಕುರಿತು ಅನೇಕ ಹಿರಿಯ ಲೇಖಕಿಯರು ತಮ್ಮ ಅನುಭವದಿಂದ ಹೇಳಿದ ಮಾತುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಪುರುಷನಂತೆ ಮಹಿಳೆ ನಿರಾತಂಕವಾಗಿ ಬರೆಯುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಮನೆಯ ಜವಾಬ್ದಾರಿ ಸದಾ ಆಕೆಯ ತಲೆಯ ಮೇಲೆ ಕುಳಿತಿರುತ್ತದೆ. ಬರೆಯಲು ಕುಳಿತಾಗ ಅತಿಥಿಗಳು ಬರುವುದು, ಅವರನ್ನು ಉಪಚರಿಸುವ ಕೆಲಸ, ಗಂಡ ಮಕ್ಕಳ ಚಾಕರಿ ಇವುಗಳ ಮಧ್ಯೆ ಮಾನಸಿಕವಾಗಿ ಮಾಡಿದ ಬರವಣಿಗೆಯ ಸಿದ್ಧತೆಗಳೂ ಮಾಯವಾಗಿ ಬಿಡುತ್ತವೆ. ಕೊನೆಗೂ ಬರೆಯಲುದ್ದೇಶಿಸಿದ ಕವನ ಅಥವಾ ಕಥೆಯ ಕೊನೆಯ ಸಾಲುಗಳು ಆಕೆಯ ಹಿಡಿತಕ್ಕೆ ಸಿಗದೆ ಜಾರಿ ಹೋಗುತ್ತವೆ.. ಮಹಿಳೆ ಯಾವ ಸಾಧನೆಯನ್ನು ಮಾಡ ಹೊರಟರೂ ಎದುರಿಸುವ ಕ್ಷಣಗಳಿವು.

ಬದುಕಿನ ಮತ್ತು ಮನುಷ್ಯ ಸಂಬಂಧಗಳ ಕುರಿತಾದ ಆರ್ಧ್ರ, ವಿಷಾದಪೂರ್ಣ ಮತ್ತು ಕನಸುಗಣ್ಣಿನ ನೋಟಗಳಿರುವ ಹಲವು ಕವನಗಳು ಇಲ್ಲಿವೆ.

ಮೊದಲ ಕವನ ‘ಹಿತ್ತಲು’ ಕಾವ್ಯನಾಯಕಿಯ ಮನಸ್ಸನ್ನಾವರಿಸಿರುವ ಗಂಡಿನೊಂದಿಗಿನ ಪ್ರೀತಿಯ ಕಲ್ಪನೆಗಳ ಅಭಿವ್ಯಕ್ತಿ. ಪ್ರೀತಿಯನ್ನು ನಿರೂಪಿಸಲು ಆಕೆ ಆಯ್ದುಕೊಳ್ಳುವ ರೂಪಕ ಇಬ್ಬರ ಆರೈಕೆಯಲ್ಲಿ, ಎಳೆ ಬಿಸಿಲಲ್ಲಿ ಹುಲುಸಾಗಿ ಬೆಳೆದು ಕಂಪು-ತಂಪುಗಳನ್ನು ಕೊಡುವ ಹಿತ್ತಲ ತೋಟದ ನಿಸರ್ಗದ ಮಡಿಲು. ಅದು ಎಲ್ಲರಿಗೂ ಕಾಣುವ ಮನೆಯ ಮುಂದಿನ ಹೂದೋಟವಲ್ಲ. ಆದ್ದರಿಂದ ಹಿತ್ತಲು ಅನ್ನುವುದು ಮನಸ್ಸೂ ಆಗಿರಬಹುದು. ಪ್ರೀತಿ ಅನ್ನುವುದು ಒಳಗೊಳಗೇ ಬೆಳೆಯಬೇಕಾದ ಮೃದುವಾದ ಭಾವನೆ. ಪ್ರೀತಿಯನ್ನು ಕಂಪು-ತಂಪುಗಳಿಗೂ ಸಿಟ್ಟು- ದುಮ್ಮಾನಗಳನ್ನು ಕಳೆಗೂ ಹೋಲಿಸುವ ಮತ್ತು ಇಬ್ಬರೂ ಸೇರಿ ಕಳೆ ತೆಗೆಯುವ ಚಿತ್ರಣ ಇಲ್ಲಿ ಸುಂದರವಾಗಿ ಬಂದಿದೆ. ಇದೇ ರೀತಿ ಸಂಕಲನದಲ್ಲಿ ಅಲ್ಲಲ್ಲಿರುವ ಗಂಡು-ಹೆಣ್ಣಿನ ನಡುವಣ ಪ್ರೀತಿಯ ಕವಿತೆಗಳಲ್ಲೆಲ್ಲ ಇಬ್ಬರ ಸಮಾನ ಪಾಲ್ಗೊಳ್ಳುವಿಕೆಯ ಧ್ವನಿ ಇದೆ.

‘ಹೀಗೊಂದು ಬೆಳಗು’ನಲ್ಲಿ ಬೆಳಗಿನ ಕೆಲಸಗಳ ಒತ್ತಡದಲ್ಲಿ ಹೈರಾಣಾಗುವ ಹೆಂಡತಿಗೆ ಸಹಾಯ ಮಾಡುವ ಗಂಡನಿದ್ದಾನೆ. ಅಂಟಿಸಿಕೊಂಡು ಆಪ್ತವಾದ ಸಂಬಂಧಗಳ ಬಿಸುಪನ್ನು ಹೇಗಾದರೂ ಉಳಿಸಿಕೊಳ್ಳಬೇಕೆನ್ನುತ್ತ ಸಿಟ್ಟು-ಅಸಹನೆಗಳ ಕಳೆಯನ್ನು ತೆಗೆಯಲು ಚಪಾತಿ ಹಿಟ್ಟನ್ನು ಗುದ್ದಿ ಗುದ್ದಿ ಮಿದುವಾಗಿಸಬೇಕು ಅನ್ನುವಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಲು ಪ್ರತಿಭಟನೆಯ ಕೂಗಾಟ ಬೇಡವೆಂದು ಹೆಣ್ಣನ್ನುದ್ದೇಶಿಸಿಯೇ ಹೇಳುತ್ತ ಅನುಸಂಧಾನದ ಮಾರ್ಗವೇ ಸೂಕ್ತವೆನ್ನುತ್ತಾರೆ ಕವಯಿತ್ರಿ ಕೆ.ಎಸ್.ನರಸಿಂಹಸ್ವಾಮಿಯವರ ಕವನಗಳಲ್ಲಿ ದಾಂಪತ್ಯದ ಆದರ್ಶ ಪರಿಕಲ್ಪನೆಯ ಸೌಂದರ್ಯಕ್ಕೆ ಮೆರುಗು ನೀಡುವುದು ಹೆಂಡತಿಯ ತ್ಯಾಗ ಮನೋಭಾವ, ವಿಧೇಯತೆ, ನಿಸ್ವಾರ್ಥ ಸೇವಾ ಮನೋಭಾವ ಇತ್ಯಾದಿ ಭಾರತೀಯ ಸಾಂಪ್ರದಾಯಿಕ ಚಿತ್ರಗಳಷ್ಟೇ ಆಗಿವೆ. ಅಂದರೆ ತನ್ನ ಎಲ್ಲ ಅಗತ್ಯಗಳನ್ನೂ ಪೂರೈಸುವ ಹೆಂಡತಿಯನ್ನು ಗಂಡ ಹೃದಯದಾಳದಿಂದ ಪ್ರೀತಿಸುತ್ತಾನೆ. (ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.., ಮದುವೆಯಾಗಿ ತಿಂಗಳಿಲ್ಲ..).ಆದರೆ ಉಮಾ ಅವರ ಕವಿತೆಗಳಲ್ಲಿ ಹೆಣ್ಣು-ಗಂಡು ಇಬ್ಬರ ಅಸ್ಮಿತೆಗಳಿಗೂ ಸಮಾನ ಬೆಲೆಯಿರುವುದನ್ನು ಗಮನಿಸಬಹುದು. ‘ನಾನು ನಾನಾಗಿರುವುದು ಎಷ್ಟು ಮುಖ್ಯವೋ/ ನೀನು ನೀನಾಗಿರುವುದೂ ನನಗೆ ಅಷ್ಟೇ ಮುಖ್ಯ’ (ಪು.56),

ಸಮಾಜದಲ್ಲಿ ಅವಜ್ಷೆಗೊಳಗಾದ ಜನರ ಬಗೆಗಿನ ಕಾಳಜಿ ಉಮಾ ಅವರ ಅನೇಕ ಕವಿತೆಗಳ ಬಹಳ ಮುಖ್ಯ ಅಂಶ. ವೈಯಕ್ತಿಕ ಬದುಕಿನಲ್ಲಿ ಬಡತನ-ಅವಗಣನೆಗಳ ಬವಣೆಯನ್ನು ಅನುಭವಿಸುತ್ತ, ತನ್ನೆಲ್ಲ ನೋವನ್ನೂ ಒಳಗಿಟ್ಟುಕೊಂಡು ನಗುವ ಸೊಪ್ಪಿನವಳು, ಮಗುವಿನ ಪಾಲನೆಗಾಗಿ ಹಸಿವನ್ನು ಸಹಿಸಿಕೊಂಡು ನೀರು ಕುಡಿದು ಮಲಗುವ ಮತ್ತು ಮೈಮಾರಲು ಹೋಗುವ ತಾಯಿ ( ಹಸಿವು ) ಶ್ರಮಜೀವಿ ರೈತನ ಬೊಕ್ಕೆಯೆದ್ದ ಪಾದಗಳು (ಪಾದಕಾರಣ ), ನಾಗರ ಪಂಚಮಿಯಂದು ನಾಗನಿಗೆ ಭರಪೂರ ಹಾಲು ಕೊಡುವ ಜನರ ಮಧ್ಯೆ ಬಡ ಮಗುವಿಗೂ ಬಡ ಕರುವಿಗೂ ಹಾಲಿಲ್ಲದ ಸ್ಥಿತಿ (ನಾಗರಪಂಚಮಿ), ಎಳೆಯ ಕಂದಮ್ಮಗಳು ಘೋರ ಅತ್ಯಾಚಾರಕ್ಕೆ ಬಲಿಯಾಗಿ ನೂರು ಹೆರಿಗೆಗಳ ನೋವುಂಡು ಕಣ್ಣು ಮುಚ್ಚುವುದರ ಬಗ್ಗೆ ವಿಷಾದಿಸುವ ( ಅಳಲು) ಕವಿತೆಗಳು ಮನಸ್ಸನ್ನು ಆದ್ರ್ರವಾಗಿಸುತ್ತವೆ.

ಮತೀಯ ಭೇದಗಳ ಅರಿವೇ ಇಲ್ಲದೆ ಜತೆಗೆ ಆಡುವ ಮಕ್ಕಳ ಮುಗ್ಧತೆ (ಇರಲಿ ಎಲ್ಲ ಹೀಗೆ ) ಇಂದು ಬೆಳೆದವರ ಜಗತ್ತನ್ನಾವರಿಸಿಕೊಳ್ಳುತ್ತಿರುವ ಜಾತಿ-ಜನಾಂಗ ದ್ವೇಷದ ಬಗ್ಗೆ ಭಯ ಹುಟ್ಟಿಸುತ್ತದೆ. ಉಗಾದಿ ಹಬ್ಬದ ಸಂಭ್ರಮದಲ್ಲಿ ಊರಿಗೆ ಊರೇ ಮುಳುಗಿರುವಾಗ ಕೊಳೆಗೇರಿಯ ಹುಡುಗನೊಬ್ಬನ ಕುಟುಂಬದ ದುಸ್ಥಿತಿ ( ಹಕ್ಕಿ ಮತ್ತು ಹುಡುಗ) ಗಂಡ ಬಿಟ್ಟುಹೋಗಿ ಕಷ್ಟದಲ್ಲಿ ಬೀಳುವ ಪುಟ್ಟಕ್ಕ ಮಕ್ಕಳಿಗಾಗಿ ಪಡುವ ಪಾಡು (ಪುಟ್ಟಕ್ಕನ ಓಲೆ), ಮಕ್ಕಳಿಗಾಗಿ ವಿವಿಧ ಬಗೆಯ ತಿಂಡಿಗಳನ್ನು ಮಾಡುವ ಅಮ್ಮನ ಬಗ್ಗೆ ಚಿಕ್ಕವಳಿದ್ದಾಗ ಗಮನ ಕೊಡದೇ ಇದ್ದದ್ದು ನೆನಪಾಗಿ ಕೊರಗುವ ಮಗಳು (ಅಮ್ಮ), ಹಾಗೆಯೇ ಇನ್ನೊಬ್ಬರ ವಿಚಾರದಲ್ಲಿ ಅನಗತ್ಯ ಕುತೂಹಲ ತಾಳುವ ಪಕ್ಕದ ಮನೆಯ ಹೆಂಗಸು ( ಅವಳು-ಇವಳು) ಎಲ್ಲವೂ ಅತ್ಯಂತ ಸಹಜವಾಗಿ ಮೂಡಿ ಬಂದ ನಮ್ಮ ಸುತ್ತಮುತ್ತಲ ಚಿತ್ರಗಳು.

ಕವಯಿತ್ರಿ ಸದಾ ಸರಳವಾಗಿ ಮತ್ತು ನಿಸರ್ಗಕ್ಕೆ ಹತ್ತಿರವಾಗಿ ಇರಬಯಸುವವಳು. ತನ್ನದೇ ಅಭಿರುಚಿಯಿದ್ವವರನ್ನು ಕಂಡಾಗಲೆಲ್ಲ ಥಟ್ಟನೆ ಗುರುತಿಸುವ ಆಕೆಗೆ ಆಧುನಿಕತೆಯ ಹೆಸರಿನಲ್ಲಿ ಅಸಹಜವಾಗಿರುವವರನ್ನು ಅನುಕರಿಸುವುದು ಸಾಧ್ಯವಾಗುವುದೇ ಇಲ್ಲ.( ಬದಲಾಗುವುದೆಂದರೆ..). ಆಧುನಿಕರು ಬಳಸುವ ತರತರದ ಪೆನ್ನುಗಳು ಆಕೆಗೆ ಬೇಡ. ರೀಫಿಲ್ಲೇ ಬೇಕು-ಅದು ಅಂಗಡಿಯಲ್ಲಿ ಸಿಗುವುದು ಕಷ್ಟವಾದರೂ ಪರವಾಗಿಲ್ಲ,( ರೀಫಿಲ್ ), ಹಳತರಲ್ಲೂ ಹೊಸತನ್ನು ಕಾಣುವ ಜೀವನದೃಷ್ಟಿಯನ್ನು ಬೆಳೆಸಿಕೊಳ್ಳಬೇಕೆನ್ನುವ ಚಿಂತನೆ, ( ಬೇರೆ ಬೇರೆ) ಹಂತ ಹಂತವಾಗಿ ಬದುಕಿನುದ್ದಕ್ಕೂ ವಾಸನೆಗಳು ಬದಲಾದರೂ ಕೊನೆಯಲ್ಲಿ ವ್ಯಕ್ತಿಗತ ವಾಸನೆಯ ಮೂಲಕ ತನ್ನತನವನ್ನು ಉಳಿಸಿಕೊಳ್ಳುವ ಆಶಯ (ವಾಸನೆ) ಮಲ್ಲಿಗೆಯ ಸಹಜ ಪರಿಮಳಕ್ಕೆ ವಿರುದ್ಧವಾಗಿ ನಿಲ್ಲುವ ಅತ್ತರಿನ ವಾಸನೆ (ಗಂಧ ಗಾಳಿ)) ನಾನ್ ಸ್ಟಿಕ್ ತವದ ದೋಸೆಗಿಂತ ಕಬ್ಬಿಣದ ತವದ ದೋಸೆ ಹೆಚ್ಚು ಆಪ್ತ.. ಮತ್ತು ಬೇಕಾದ್ದು ಬೇಡದ್ದು ಎಲ್ಲ ಮುಚ್ಚಿಬಿಡುವ ಕಪಾಟಿನ ಅಡುಗೆಮನೆಗಿಂತ/ಇಟ್ಟದ್ದು ಕೆಟ್ಟದ್ದು ಕಾಣುವ ಅಡುಗೆಮನೆ ಇರಲಿ..(ಅಡುಗೆಮನೆ ಜಗತ್ತು )-ಇವು ಕೆಲವು ಉದಾಹರಣೆಗಳು.

ಉಮಾ ಅವರ ಭಾಷೆ ಮತ್ತು ಶೈಲಿಯ ಬಗ್ಗೆ ಒಂದು ಮಾತು ಹೇಳಲೇ ಬೇಕು. ರೂಪಕ-ಪ್ರತಿಮೆಗಳ ಜತೆಗೆ ಪ್ರಾಸಾನುಪ್ರಾಸಗಳನ್ನು ಕೂಡಾ ಬಹಳ ಸುಂದರವಾಗಿ ಅವರು ಹೆಣೆಯಬಲ್ಲರು ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಡಬಹುದು.

ಬಿಟ್ಟುಹೋದ ಗಂಡನ ಬಗ್ಗೆ/ ಕೆಟ್ಟ ಮಾತಾಡದೆ/ ಹುಟ್ಟಿದೆರಡು ಮಕ್ಕಳಿಗಾಗಿ/ ಎಂಟು ಮನೆ ಕೆಲಸ ಮಾಡಿ/ಕೊಟ್ಟ ತಿನಿಸ ಕಟ್ಟಿಕೊಂಡು.. ( ಪುಟ್ಟಕ್ಕನ ಓಲೆ )

ಮನೆಯೊಳಗೆ ಪಸರಿಸಲಿ/ ಬೆಂದ ಅನ್ನದ ಘಮಲು/ಹಸಿದವರಿಗೆ ಸಿಗಲಿ/ತುತ್ತು ಕೂಳು
ತರಕಾರಿ ಇಲ್ಲೆಂದು ತಕರಾರು ತೆಗೆಯದಿರಿ/ಹಿತ್ತಲಲಿರಲಿ/ಹಸಿರು ಬಸಳೆ ( ಹಾರೈಕೆ )

ಉಮಾ ಅವರು ಅನುದಿನದ ಅನುಭವಗಳನ್ನು ತಮ್ಮ ಕವನಗಳ ವಸ್ತುಗಳಾಗಿ ಆಯ್ದುಕೊಳ್ಳುತ್ತಾರೆ. ಕವನಗಳು ದೀರ್ಘವಾಗಿಲ್ಲ, ಮುಂದೆ ಅವರಿಂದ ದೀರ್ಘ ಕವನಗಳನ್ನು ನಿರೀಕ್ಷಿಸೋಣ ಎಂದು ಮುನ್ನುಡಿಯಲ್ಲಿ ಹಿರಿಯ ವಿಮರ್ಶಕರಾದ ಡಾ.ಹೆಚ್.ಎಸ್.ರಾಘವೇಂದ್ರ ರಾವ್ ಹೇಳಿದ್ದಾರೆ.. ಆದರೆ ಚಿಕ್ಕದಾದರೂ ಸತ್ವಯುತವಾದ ಕವಿತೆಗಳ ಮೂಲಕ ಕಾವ್ಯ ಕ್ಷೇತ್ರದಲ್ಲಿ ಅಜರಾಮರರಾಗಿ ಉಳಿದಿರುವ ಇಂಗ್ಲಿಷ್ ಕವಯಿತ್ರಿಯರಾದ ಎಮಿಲಿ ಡಿಕೆನ್ಸನ್, ಮಾರ್ಗರೆಟ್ ಆಟ್‍ವುಡ್ ಮತ್ತು ಸಿಲ್ವಿಯಾ ಪ್ಲಾಥ್ ನಮ್ಮ ಮುಂದೆ ಇದ್ದಾರೆ.

ಹೆಣ್ಣಿನ ನಿತ್ಯಜೀವನದ ಅನುಭವಗಳನ್ನು ಸರಳವಾಗಿ ಕಂಡರೂ ನಿಗೂಢ ಸಾಲುಗಳ ಮೂಲಕ ಕವಿತೆಯಾಗಿಸುವ ಉಮಾ ಫಕ್ಕನೆ ಆ ಕವಯಿತ್ರಿಯರನ್ನು ನೆನಪಿಸಿದರೆ ಆಶ್ಚರ್ಯವಿಲ್ಲ.

ಈ ಕೃತಿಯನ್ನು ಕೊಳ್ಳಲು 

‍ಲೇಖಕರು avadhi

January 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: