ಕಾಡಿದ ‘ಒಂದು ಬದಿ ಕಡಲು’

ಒಂದು ದಿನ ಹಿರಿಯ ವಿಮರ್ಶಕರಾದ ಜಿ ಎಚ್ ನಾಯಕರ ಹತ್ತಿರ ‘ಸರ್, ನಿಮ್ಮ ಉತ್ತರ ಕನ್ನಡ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ತುಂಬಾ ಜನ ಸಾಹಿತಿಗಳನ್ನ ಕೊಟ್ಟಿದೆ’ ಎಂದು ಹೇಳಿದೆ. ಅದಕ್ಕೆ ಅವರು ‘ನಿಮ್ಮ ಶಿವಮೊಗ್ಗ ಜಿಲ್ಲೆ ಅತೀ ಹೆಚ್ಚು ಸಾಹಿತಿಗಳನ್ನ ಕೊಟ್ಟಿದೆ ಅದರಲ್ಲೂ ಅವಿಭಜಿತ ಶಿವಮೊಗ್ಗ ಜಿಲ್ಲೆಯ ಸಾಹಿತಿಗಳು ಹೆಚ್ಚು’ ಅಂದರು.

ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗಳಾದ ಗೌರೀಶ್ ಕಾಯ್ಕಿಣಿ, ಗಂಗಾಧರ ಚಿತ್ತಾಲ, ದಿನಕರ ದೇಸಾಯಿ, ವಿ ಜಿ ಭಟ್ಟ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಜಿ ಎಚ್ ನಾಯಕ್, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗ, ಶ್ರೀಧರ ಬಳಿಗಾರ, ಪ್ರಕಾಶ್ ನಾಯಕ್, ವಿನಯಾ ಒಕ್ಕುಂದ, ಗೀತಾ ವಸಂತ್, ರಾಜೀವ್ ನಾಯಕ್, ಸುನಂದಾ ಕಡಮೆ, ಪ್ರಕಾಶ್ ಕಡಮೆ, ಕರ್ಕಿ ಕೃಷ್ಣಮೂರ್ತಿ, ಭಾರತಿ ಹೆಗಡೆ, ಕಿರಣ್ ಭಟ್, ರಾಜು ಹೆಗಡೆ, ಶ್ರೀದೇವಿ ಕೆರೆಮನೆ, ದೀಪಾ ಹಿರೇಗುತ್ತಿ, ಪ್ರಜ್ಞಾ ಮತ್ತಿಹಳ್ಳಿ, ಶ್ರೀಧರ್ ಬನವಾಸಿ, ರೇಣುಕಾ ರಮಾನಂದ, ಸಿಂಧುಚಂದ್ರ, ಪ್ರಜ್ಞಾ ಶಾಸ್ತ್ರಿ, ಛಾಯಾ ಭಟ್ ಈ ಪಟ್ಟಿ ಇನ್ನು ಬೆಳೆಯುತ್ತಲೇ ಹೋಗುತ್ತದೆ. ಇವು ಸದ್ಯಕ್ಕೆ ನನಗೆ  ಜ್ಞಾಪಕಕ್ಕೆ ಬಂದ ಹೆಸರುಗಳು.

ಈ ಲೇಖಕರ ಸಾಹಿತ್ಯದಲ್ಲಿ ಕಡಲು, ದಣಪೆ, ಅಘನಾಶಿನಿ, ಬೇಡ್ತಿ, ಗಂಗವಳ್ಳಿ, ಶರಾವತಿ, ಶಾಲ್ಮಲಾ, ಗೋಕರ್ಣ, ಅಂಕೋಲ,ಕುಮಟಾ, ಹೊನ್ನಾವರ, ಶಿರಸಿ, ಕೋಟಿತೀರ್ಥ, ಮೀನು, ಗಂಜಿ ಸಾಮಾನ್ಯವಾಗಿ ಬಂದು ಹೋಗುತ್ತವೆ. ವಿಚಿತ್ರ ಎಂದರೆ ಜಿಲ್ಲಾ ಕೇಂದ್ರವಾದ ಕಾರವಾರದ ಪ್ರಸ್ತಾಪ ಬರುವುದು ತೀರಾ ಕಡಿಮೆ ಎಂದು ಹೇಳಬಹುದು. 

ಕನ್ನಡಿಗರಿಗೆ ವಿವೇಕ ಶಾನಭಾಗರ ಹೆಸರನ್ನು ಅದರಲ್ಲೂ ಸಾಹಿತ್ಯಾಭಿಮಾನಿಗಳಿಗೆ ಇವರನ್ನು ಹೊಸದಾಗಿ ಪರಿಚಯ ಮಾಡಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ಇವರು ತಮ್ಮ ಕತೆ ಕಾದಂಬರಿಗಳಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ವಿವೇಕ ಶಾನಭಾಗರ ಹೆಸರನ್ನು ನಾನು ಬಹಳ ಹಿಂದೆಯೇ ಕೇಳಿದ್ದರೂ ಅವರ ಕತೆಗಳನ್ನಾಗಲಿ ಕಾದಂಬರಿಗಳನ್ನಾಗಲಿ ಓದಲು ನನಗೆ ಅವಕಾಶ ಸಿಕ್ಕಿರಲಿಲ್ಲ.

೨೦೧೩ರಲ್ಲಿ ನಾನು ಆಲನಹಳ್ಳಿ ಶ್ರೀಕೃಷ್ಣರ ಸಾಹಿತ್ಯವನ್ನು ಸಮಗ್ರವಾಗಿ ಓದಲು ಹುಡುಕುತ್ತಿದ್ದಾಗ ವಿವೇಕರು ಸಂಪಾದಿಸಿದ್ದ  ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ ಸಿಕ್ಕಿತು. ಆ ನಂತರ ವಿವೇಕರ ಹಲವು ಕತೆಗಳನ್ನು ಮತ್ತು ‘ಘಾಚರ್ ಘೋಚರ್’ ಕಾದಂಬರಿಯನ್ನು ಓದಿ ಮುಗಿಸಿದೆ.  ಅವರು ಅಮೆರಿಕಾಗೆ ಬಂದಾಗ ಕೆಲವು ಸಲ ಅವರ ಜೊತೆ ಫೋನಿನಲ್ಲಿ ಮಾತನಾಡಿದ್ದೆ. ಜೊತೆಗೆ ಅವರ ‘ಘಾಚರ್ ಘೋಚರ್’ ಕಾದಂಬರಿ ಇಂಗ್ಲಿಷಿಗೆ ಅನುವಾದವಾಗಿ ಅಂತಾರಾಷ್ಟ್ರೀಯ ಮನ್ನಣೆ ಪಡೆದು ಅಮೆರಿಕಾದ ಗ್ರಂಥಾಲಯಗಳಲ್ಲಿ ಆ ಪುಸ್ತಕ ಕಂಡು ಅಚ್ಚರಿಯ ಜೊತೆ ಕನ್ನಡದ ಕಾದಂಬರಿ ಇಂಗ್ಲಿಷ್ ಭಾಷೆಯಲ್ಲಿ ಅಲ್ಲಿ ಕಂಡಾಗ ಹೆಮ್ಮೆಯೂ ಆಗಿತ್ತು.

ಇನ್ನು ಈ ‘ಒಂದು ಬದಿ ಕಡಲು’ ಕಾದಂಬರಿಯ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಆಂಗ್ಲ ಭಾಷೆಯ ಅಂತರ್ಜಾಲ ಪತ್ರಿಕೆ ಸ್ಕ್ರಾಲ್ ಇನ್ ನಲ್ಲಿ  Why Vivek Shanbhag’s Kannada novel ‘Ondu Badi Kadalu’ must be translated into other languages ಎಂಬ ಲೇಖನವನ್ನು ಭಾರತೀಯ ಆಂಗ್ಲ ಭಾಷೆಯ ಕಾದಂಬರಿಗಾರ್ತಿ ಗಾಯತ್ರಿ ಪ್ರಭು ಬರೆದಿದ್ದರು. ಅದರಲ್ಲಿ ಅವರು ಈ ಕಾದಂಬರಿ ಆಂಗ್ಲ ಭಾಷೆಯೂ ಸೇರಿ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗುವುದು ತುಂಬಾ ಒಳ್ಳೆಯದು ಎಂಬ ಭಾವನೆ ವ್ಯಕ್ತ ಪಡಿಸಿದ್ದರು. ಅದು ನನಗೆ ಈ ಕಾದಂಬರಿಯ ಬಗ್ಗೆ ಹೆಚ್ಚು ಕುತೂಹಲ ಮೂಡುವಂತೆ ಮಾಡಿತು.

ಅದೇ ಸಮಯದಲ್ಲಿ ಅಂಕಣಕಾರ ಬೇಳೂರು ಸುದರ್ಶನರು ಈ ಕಾದಂಬರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ತಮ್ಮ ಹಳೆಯ ಲೇಖನವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಅದನ್ನು ಓದಿದ ಮೇಲೆ ಕಾದಂಬರಿಯನ್ನು ಓದಲೇ ಬೇಕು ಎಂದು ಹೆಚ್ಚು ಅನಿಸಿತು. ತಕ್ಷಣವೇ ಮೈಸೂರಿನ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಕೊಂಡುಕೊಂಡು ಬಂದೆ. ಆದರೆ, ಅದು ಯಾವುದೋ ಪುಸ್ತಕಗಳ ಮಧ್ಯ ಸೇರಿಕೊಂಡು ನನ್ನ ಕೈಗೆ ಸಿಗುವುದು ನಿಧಾನವಾಯಿತು.

ನಾನು ಯಾವುದೇ ಕಾದಂಬರಿಯ ಅಥವಾ ಕಥಾಸಂಕಲನದಲ್ಲಿನ ಆರಂಭದಲ್ಲಿ ಕೊಡುವ ಉದ್ಧರಣಗಳನ್ನು, ಕವನಗಳನ್ನೋ ಅಥವಾ ವಚನಗಳನ್ನೋ ಮೊದಲೇ ಓದುತ್ತೇನೆ. ಅದು ಇಡೀ ಪುಸ್ತಕವನ್ನು ಓದಿ ಅರ್ಥಮಾಡಿಕೊಳ್ಳಲು ದಾರಿ ದೀಪವಾಗುತ್ತದೆ. ಇಲ್ಲಿಯೂ ಅದನ್ನೇ ಮಾಡಿದೆ. ವಿವೇಕರು ಕಾದಂಬರಿಯ ಮೊದಲಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಒಂದು ಚೌಪದಿಯನ್ನು ಕೊಟ್ಟಿದ್ದಾರೆ. ಅದು ಈ ಕೆಳಗಿನಂತಿದೆ.   

“ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ”

ಇದು ಉತ್ತರ ಕನ್ನಡ ಜಿಲ್ಲೆಯ ವರ್ಣನೆಯ ಜೊತೆಗೆ ಪ್ರತಿಯೊಬ್ಬ ಲೇಖಕನಿಗೂ ತಾನು ಹುಟ್ಟಿ ಬೆಳೆದ ಊರು ಮತ್ತು ಜಿಲ್ಲೆಯ ಬಗ್ಗೆ ಇರುವ ಅಭಿಮಾನದಂತೆ ವಿವೇಕರಿಗೆ ತಮ್ಮ ಜಿಲ್ಲೆಯ ಬಗ್ಗೆ ಇರುವ ಅಭಿಮಾನವನ್ನು ತೋರಿಸುತ್ತದೆ. ಜೊತೆಗೆ ಕಾದಂಬರಿ ಸಾಗುವ ಭೂ ಭಾಗದ ಹಿನ್ನೆಲೆಯನ್ನು ಓದುಗನಿಗೆ ಮೊದಲೇ ಕೊಡುತ್ತದೆ. ಇಲ್ಲಿ ಓದುಗ ಸ್ವಲ್ಪ ಕಲ್ಪನೆಯನ್ನು ಮಾಡಿಕೊಂಡರೆ ಅವನ ಕಣ್ಣಿಗೆ ಪೂರ್ವಕ್ಕೆ ನಿತ್ಯ ಹರಿದ್ವರ್ಣದ ಕಾಡಿನ ಸಹ್ಯಾದ್ರಿ ಪರ್ವತ ಶ್ರೇಣಿಗಳು ಪಶ್ಚಿಮಕ್ಕೆ ನೀಲಿ ಅರಬ್ಬೀ ಸಮುದ್ರ ಮಧ್ಯದಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳು ಕಾಣುತ್ತವೆ. ಇದು ಕಾದಂಬರಿಯ ಹಿನ್ನೆಲೆ ಮತ್ತು ಅರ್ಥೈಸಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. 

ಈ ಕತೆ ನಡೆಯುವುದು ಮಧ್ಯಮ ವರ್ಗದ ಗೌಡ ಸಾರಸ್ವತ ಬ್ರಾಹ್ಮಣರ ಕುಟುಂಬಗಳಲ್ಲಿ. ಆಗಿನ್ನೂ ಮೊಬೈಲ್ ಫೋನ್, ಎಲ್ ಪಿ ಜಿ ಅನಿಲವಿಲ್ಲದ, ಟಿವಿಯೂ ಇಲ್ಲದ ಅರವತ್ತು ಅಥವಾ ಎಪ್ಪತ್ತರ ದಶಕದಲ್ಲಿ ಎಂದು ಹೇಳಬಹುದು. ಇಲ್ಲಿ ಒಬ್ಬ ಕಥಾನಾಯಕ ಅಥವಾ ಕಥಾನಾಯಕಿ ಎಂದು ಹುಡುಕಿದರೆ ಇವರೇ ಅದು ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ವಿಧವೆಯರ ಸಂಕಷ್ಟ, ಹೆಣ್ಣು ಗಂಡಿನ ಸಂಬಂಧ, ಮನೆ ಮನೆ ರಾಮಾಯಣ, ಸಂಬಂಧಗಳ ನಡುವೆ ನಡೆಯುವ ಪ್ರತಿನಿತ್ಯದ ವ್ಯವಹಾರ, ಮದುವೆ ಎಂಬುದು ಮನುಷ್ಯನ ಬದುಕನ್ನ ಹೇಗೆಲ್ಲ ನಿರ್ಧರಿಸುತ್ತದೆ ಮತ್ತು ಭಾರತೀಯ ಪರಂಪರೆಯಲ್ಲಿ ಅದೆಷ್ಟು ಸಂಕೀರ್ಣ ವ್ಯವಸ್ಥೆ ಎಂದು ಇಲ್ಲಿ ಕಾಣಬಹುದು.

ಇಲ್ಲಿ ಪುರಂದರ ಎಂಬ ಮುಖ್ಯ ಪಾತ್ರವಿದೆ. ಈ ಕಾದಂಬರಿ ಅವನ ಬದುಕಿನ ಸುತ್ತಲೇ ಸುತ್ತುತ್ತಿದ್ದರೂ ಅವನೇ ಕಾದಂಬರಿಯ ನಾಯಕ ಎಂದು ಹೇಳಲು ಆಗುವುದಿಲ್ಲ. ಚಿಕ್ಕ ವಯ್ಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಕಷ್ಟಪಡಬೇಕಾದ ಪರಿಸ್ಥಿತಿ ಅವನದು. ಕಷ್ಟದ ನಡುವೆಯೇ ಅವನ ಓದು ನಂತರ ಕಾಲೇಜು ಆನಂತರ ಬ್ಯಾಂಕಿನ ಉದ್ಯೋಗ. ಅವನಿಗೆ ಹೆಣ್ಣು ಕೊಡಲು ಬರುವ ಎರಡು ಸಂಬಂಧಗಳು (ಒಬ್ಬಳು ಅವನ ಸೋದರ ಮಾವನ ಮಗಳು ಮತ್ತೊಬ್ಬಳು ಸೋದರ ಮಾವನ ನಾದಿನಿಯ ಮಗಳು). ಜೊತೆಗೆ ಹುಬ್ಬಳ್ಳಿಯಲ್ಲಿ ಅವನನ್ನು ಕಾಡುವ ಮೋಹಿನಿಯ ಮೋಹಕ ರೂಪ.

ಇನ್ನೊಂದು ಕಡೆ ಫಂಡರಿ ಮತ್ತು ಅವಳ ಸೊಸೆ ಯಮುನೆ ಇಬ್ಬರೂ ವಿಧವೆಯರು. ಯಮುನೆಯಲ್ಲಿನ ವಯೋಸಹಜ ಕಾಮನೆಗಳು. ಕಾದಂಬರಿಯ ಕೊನೆಗೆ ಅವಳು ತೆಗೆದುಕೊಳ್ಳುವ ದಿಟ್ಟ ನಿರ್ಧಾರ. ರಮಾಕಾಂತ ವಿಧವೆಯಾದ ಅವಳನ್ನು ವಿವಾಹವಾಗಲು ತೆಗೆದುಕೊಳ್ಳುವ ಕ್ರಾಂತಿಕಾರಕ ಹೆಜ್ಜೆ. ಫಂಡರಿ ತನ್ನ ಸೊಸೆಯ ಮರುವಿವಾಹವನ್ನು ಮೊದಲೇ ಬಯಸಿದವಳ ಹಾಗೆ ಎಲ್ಲವನ್ನೂ ಅವಳಿಗೆ ಕೊಟ್ಟು ತಾನು ಯಾತ್ರೆಗೆ ಹೊರಟು ಹೋಗುವುದು ಕೂಡ ಮತ್ತೊಂದು ದಿಟ್ಟ ಹೆಜ್ಜೆ.

ಅತ್ತೆಯೊಬ್ಬಳು ತನ್ನ ಸೊಸೆ ಕೊನೆಯವರೆಗೂ ತನ್ನ ಹಾಗೆ ವಿಧವೆಯಾಗಿರುವುದು ಬೇಡ. ಅವಳು ಹೊಸ ಜೀವನವನ್ನು ಕಟ್ಟಿಕೊಳ್ಳಲಿ ಎಂದು ನಿರ್ಧರಿಸುವುದೂ ಕೂಡ ಮಧ್ಯಮ ವರ್ಗದ ಕುಟುಂಬಗಳಲ್ಲಿ ಅಪರೂಪದಲ್ಲಿ ಅಪರೂಪವೇ ಸರಿ. ಇಲ್ಲಿ ಫಂಡರಿ ತನ್ನಿಂದ ಮಾಡಲು ಆಗದ ಕೆಲಸವನ್ನು ತನ್ನ ಸೊಸೆ ಮಾಡುವಾಗ ತೆರೆಮರೆಯಲ್ಲಿಯೇ ಹೆಮ್ಮೆ ಪಡುವ ಹಾಗೆ ಕಾಣುತ್ತದೆ. ಅವಳ ಕಾಲದ ಕಟ್ಟಲೆಗಳು ಸೊಸೆಯ ಕಾಲಕ್ಕೆ ಬೇಡ ಎಂಬುದು ಅವಳ ಆಶಯ ಕೂಡ ಆಗಿರಬಹುದು. ಇಲ್ಲಿ ಸಾಮಾಜಿಕವಾಗಿ ಆಗುವ ಸ್ಥಿತ್ಯಂತರವನ್ನು ನಾವು ಕಾಣಬಹುದು.

ಇಲ್ಲಿ ನಮಗೆ ತಿಳಿದ ಹಾಗೆ ವಿವೇಕರು ನವ್ಯೋತ್ತರ ಲೇಖಕರು. ಆದರೆ ಈ ಕಾದಂಬರಿ ಕಾರಂತರ ‘ಅಳಿದ ಮೇಲೆ’ ರೀತಿ ವಾಸ್ತವವಾದದ ಕಾದಂಬರಿ ಎಂದು ಹೇಳಬಹುದು. ಕಾರಾಂತರ ‘ಅಳಿದ ಮೇಲೆ’ ಕಾದಂಬರಿಯ ಅರ್ಧ ಭಾಗ ಸಾಗುವುದು ಒಂದು ಬದಿ ಕಡಲಿನ ಭೂಭಾಗದ ಹಿನ್ನೆಲೆಯಲ್ಲಿಯೇ. ಆ ಕಾರಣದಿಂದ ಇದು ನವ್ಯ ಲೇಖಕರ ಹಾಗೆ ವ್ಯಕ್ತಿ ಕೇಂದ್ರಿತ ಕಾದಂಬರಿಯಾಗದೇ ನವೋದಯ ಕಾಲದ ಲೇಖಕರ ಸಮಾಜ ಕೇಂದ್ರಿತ ಕಾದಂಬರಿಯಾಗಿ ಕಾಣುತ್ತದೆ.  

ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ, ಕಾಳಿ, ಅಘನಾಶಿನಿ, ಗಂಗವಳ್ಳಿ ನದಿಗಳು ಸಮುದ್ರ ಸೇರುತ್ತವೆ. ನದಿ ಸಮುದ್ರವನ್ನು ಸೇರುವ ಆ ಸುಂದರ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿ ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಕಾಲಚಕ್ರದಿಂದ ಆಗಿರುವ ಬದಲಾವಣೆಯೊಡನೆ ಸೆಣಸುತ್ತಿರುವ ಅಲ್ಲಿನ ಜನರ ಜೀವನವೂ ಕೂಡ ಎಂದು ಈ ಕಾದಂಬರಿಯ ಹಿಂಬದಿಯ ಮುಖಪುಟದಲ್ಲಿ ಕೊಟ್ಟಿರುವ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ.

ವಿವೇಕ ಶಾನಭಾಗರು ತಮ್ಮ ‘ಘಾಚರ್ ಘೋಚರ್’ ಕಾದಂಬರಿಯ ಮೂಲಕ ಭಾರತದ ಹಲವು ರಾಜ್ಯಗಳಲ್ಲದೆ ವಿಶ್ವಾದ್ಯಂತ ಓದುಗರನ್ನು ಪಡೆದುಕೊಂಡಿದ್ದಾರೆ. ಅವರ ಇನ್ನು ಹಲವು ಕತೆ ಕಾದಂಬರಿಗಳು ಇಂಗ್ಲಿಷ್ ಭಾಷೆಗೆ ಅನುವಾದವಾದರೆ ಇನ್ನು ಹೆಚ್ಚು ಓದುಗರನ್ನು ಅವರು ತಲುಪಬಹುದು. ಅವರಿಂದ ಇನ್ನು ಹೆಚ್ಚು ಹೆಚ್ಚು ಕತೆಗಳು, ಕಾದಂಬರಿಗಳು ಮೂಡಿಬರಲಿ ಜೊತೆಗೆ ಕನ್ನಡದ ಸಾಹಿತ್ಯ ಕೃತಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿಶ್ವಾದ್ಯಂತ ಪಸರಿಸಲಿ ಎಂದು ಆಶಿಸುತ್ತಿದ್ದೇನೆ.

January 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: