ಕಾಗೆ ಮುಟ್ಟಿದ ನೀರಿನೊಂದಿಗೆ ಮತ್ತೆ ಹಸಿರಾದ ‘ಮೊರಿಜಿರಿ’

ನಿರುಪಮಾ ಉಚ್ಚಿಲ್

ಅಂದು ಅಡ್ಕ ಶ್ರೀ ಭಗವತೀ ಕ್ಷೇತ್ರದ ಜಾತ್ರೆಯ ಸಂಭ್ರಮ. ದೈವಸ್ಥಾನದ ಪರಿಸರವು ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಝಗಝಗಿಸುತ್ತಿತ್ತು. ಸಂಜೆ ಭಂಡಾರ ಏರಿಭಗವತಿಗಳ ಮೂರ್ತಿಗಳನ್ನು ಕೆಳಗಿನ ಸ್ಥಾನದಿಂದ ತಂದು ಮೇಲಿನ ದೈವಸ್ಥಾನಗಳಲ್ಲಿ ಇರಿಸಲಾಗಿತ್ತು. ಎಲ್ಲೆಲ್ಲೂ ಉತ್ಸಾಹ, ಸಂಭ್ರಮ ಎದ್ದು ಕಾಣುತ್ತಿತ್ತು. ದೈವಸ್ಥಾನದ ಪ್ರಾಂಗಣದಲ್ಲಿ ಊರ, ಪರವೂರ ಭಕ್ತಾದಿಗಳು ಅತ್ತಿತ್ತ ಓಡಾಡುತ್ತಾ ಪರಸ್ಪರ ಮಾತನಾಡುತ್ತಾ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಅವರ ಕೈಯಲ್ಲಿದ್ದ ಭಗವತಿಗಳಿಗೆ ಅರ್ಪಿಸಲು ತಂದಿದ್ದ ಮಲ್ಲಿಗೆಯ ಚೆಂಡುಗಳ ಪರಿಮಳವು ಮಹಿಳೆಯರು ಮುಡಿದ ಮಲ್ಲಿಗೆಯ ಪರಿಮಳದೊಡನೆ ಸ್ಪರ್ಧಿಸುತ್ತಾ ಕಂಪು ಬೀರುತ್ತಿದ್ದವು. 

ನಾನೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾ ನನ್ನ ಚಿಕ್ಕ ಮಗಳನ್ನು ಎತ್ತಿಕೊಂಡು ದೊಡ್ಡವಳೊಡನೆ ಪ್ರಾಂಗಣದಲ್ಲಿ ನಡೆದು ಬರುತ್ತಿದ್ದೆ. ಇದು ಸುಮಾರು ಇಪ್ಪತೈದು ವರ್ಷಗಳ ಹಿಂದಿನ ಘಟನೆ. ಹದಿಮೂರು ವರ್ಷಗಳವರೆಗೆ ಮುಂಬೈಯಲ್ಲಿ ನೆಲಸಿದ್ದ ನಾವು ಒಂದೆರಡು ವರ್ಷಗಳ ಮೊದಲು ಊರಲ್ಲಿ ನೆಲೆಸಲು ಹಿಂದಿರುಗಿದ್ದೆವು.

೧೯೯೫ – ೯೬ ರ ಇಸವಿಯಾಗಿರಬಹುದು. ಅತ್ತಿತ್ತ ನೋಡುತ್ತಾ ನಡೆಯುತ್ತಿರುವಾಗ ನನ್ನ ದೃಷ್ಟಿ ವಿದೇಶಿ ವ್ಯಕ್ತಿಯೊಬ್ಬರ ಮೇಲೆ ಬಿದ್ದಿತು. ಜಪಾನಿಯರಂತೆ ಕಾಣುತ್ತಿದ್ದರು. ಯಾರೋ ಟೂರಿಸ್ಟ್ ಇರಬಹುದೆಂದು ಎಣಿಸಿದೆ. ಸೋಮೇಶ್ವರ ಜಾತ್ರೆಯಲ್ಲಿ, ಅಡ್ಕ ಜಾತ್ರೆಯಲ್ಲಿ ಒಂದಿಬ್ಬರು ವಿದೇಶಿಯರನ್ನು ಹಿಂದೆ ನೋಡಿದ್ದೆ. ಹಾಗೆ ಇವರೂ ಇರಬಹುದು. ಅವರ ಕೈಯಲ್ಲಿದ್ದ ಕ್ಯಾಮರಾದಿಂದ ಫೋಟೋ ಕ್ಲಿಕ್ಕಿಸುತ್ತಿದ್ದರು.

ನಾನು ಪ್ರಾಂಗಣದಲ್ಲಿ ನಡೆಯುತ್ತಾ ಗುಡಿಯ ಬಳಿಗೆ ಮುಂದುವರೆಯುತ್ತಿದ್ದೆ. ಅಷ್ಟರಲ್ಲಿ ಜಪಾನೀ ವ್ಯಕ್ತಿ ಮತ್ತು ನಾವು ತಾಯಿ, ಮಕ್ಕಳು ಮುಖಾವುಖಿಯಾದೆವು. ನನ್ನನ್ನು ನೋಡಿ ಮುಗುಳ್ನಕ್ಕರು. ನಾನೂ ಮುಗುಳ್ನಕ್ಕು ಅವರನ್ನು ದಾಟಿ ಮುಂದುವರಿದೆ. ಮಕ್ಕಳೊಡನೆ ಗುಡಿಗಳಿಗೆ ಪ್ರದಕ್ಷಿಣೆ ಬಂದ ನಾನು ಒಂದು ಗುಡಿಯ ಎದುರಿಗೆ  ನಿಂತು ಮಲ್ಲಿಗೆ, ಅಬ್ಬಲ್ಲಿಗೆಯಿಂದ ಅಲಂಕೃತವಾಗಿ ಕಾಲು ದೀಪದ ಬೆಳಕಿನಲ್ಲಿ ಪ್ರಜ್ವಲಿಸುತ್ತಿರುವ ಮೂರ್ತಿಯ ಎದುರು ಭಕ್ತಿಯಿಂದ ಕಣ್ಮುಚ್ಚಿ ನಿಂತೆ. ಅಷ್ಟರಲ್ಲಿ ಫೋಟೊ ಕ್ಲಿಕ್ ಆದ ಸದ್ದಾಯಿತು. ಕಣ್ಣು ತೆರೆದು ನೋಡುವಾಗ ಅದೇ ಜಪಾನೀ ವ್ಯಕ್ತಿ ನಮ್ಮ, ತಾಯಿ ಮಕ್ಕಳ ಫೋಟೋ ತೆಗೆದು ನಗುತ್ತಾ ನಿಂತಿದ್ದರು. ನಾನೂ ನಕ್ಕು ಮುಂದೆ ನಡೆದು ಪ್ರಸಾದ ಸ್ವೀಕರಿಸಿ  ಪ್ರಾಂಗಣದಲ್ಲಿ ನಡೆದು ಪಾಗಾರ ಹತ್ತಿ ಕುಳಿತು ಉತ್ಸವದ ಮುಂದಿನ ಕಾರ್ಯ ಕಲಾಪಗಳನ್ನು ವೀಕ್ಷಿಸತೊಡಗಿದೆ.

ತಾಯಿ ಮಕ್ಕಳನ್ನು ನೋಡಿ ಅವರಿಗೆ ಏನೋ ವಿಶೇಷ ಅನಿಸಿರಬೇಕು. ಆದ್ದರಿಂದ ಫೋಟೋ ಕ್ಲಿಕ್ಕಿಸಿರಬಹುದು ಎಂದು ಯೋಚಿಸಿದೆ. ಪಾಗಾರದಲ್ಲಿ ಕುಳಿತ ನನ್ನ ಕಣ್ಣುಗಳು ನನ್ನ ನಾದಿನಿ ಸುಲೋಚನಕ್ಕನಿಗಾಗಿ ಹುಡುಕತೊಡಗಿದವು. ನಾನು ಮತ್ತು ಅವರು ಒಟ್ಟಿಗೆ ಮನೆಯಿಂದ ಹೊರಟು ಬಂದಿದ್ದೆವು. ಭಂಡಾರ ಏರಿದ ಮೇಲೆ ಅವರೆಲ್ಲೊ ಜನ ಜಂಗುಳಿಯಲ್ಲಿ ಕಾಣದಾದರು. ನನ್ನ ಪತಿಯವರು ವೃತದಲ್ಲಿದ್ದು ದೈವಸ್ಥಾನದ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು. ಅವರು ಬೆಳಿಗ್ಗೆಯೇ ಹೊರಟು ಬಂದಿದ್ದರು. ಚುರುಕಿನ ವ್ಯಕ್ತಿತ್ವದ ನನ್ನ ನಾದಿನಿ ಮುಂಬಯಿಯಿಂದ ಜಾತ್ರೆಗಾಗಿಯೇ ಬಂದಿದ್ದರು. ಆಚೆ ಈಚೆ ಓಡುತ್ತಾ ಎಲ್ಲರೊಡನೆ ಮಾತನಾಡುತ್ತಾ ಈಗ ಎಲ್ಲೋ ಕಳೆದು ಹೋಗಿದ್ದರು.

ಭಗವತಿಗಳು ಪಟ್ಟ್ ಉಟ್ಟು, ತಲೆ ಮುಡಲ್ ಕಟ್ಟಿ, ಆಭರಣಗಳನ್ನು ಧರಿಸಿ, ಕೊರಳಿಗೆ ಮಲ್ಲಿಗೆಯ ಹಾರ ಧರಿಸಿ ಸೋಮನಾಥನ ಭೇಟಿಗೆ ಹೋಗಲು ಸನ್ನದ್ಧರಾಗುತ್ತಿದ್ದರು. ಅಷ್ಟರಲ್ಲಿ ಗರ್ನಾಲಿನ ಸದ್ದು ಕೇಳಿಸಿತು. ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದ ಮಕ್ಕಳು ಉತ್ಸಾಹದಿಂದ ಓಡಿ ಬಂದು ಗುಡಿಗೆ ಒರಗಿಸಿ ಇಟ್ಟಿದ್ದ ಬಣ್ಣ ಬಣ್ಣದ ಪತಾಕೆಗಳನ್ನು ಕೈಗೆತ್ತಿಕೊಂಡರು ಮುಂದೆ ಹೋಗಿ ನಿಂತರು. ಅವರ ಹಿಂದೆ ಪಲ್ಲಕ್ಕಿಗಳನ್ನು ಹೊತ್ತವರು, ಬೆಳ್ಗೊಡೆಗಳನ್ನು ಹಿಡಿದವರು. ಅದರ ಹಿಂದೆ ಭಗವತಿಗಳ ಪಯಣ ಬ್ಯಾಂಡ್ ವಾದ್ಯಗಳೊಡನೆ ಸೋಮನಾಥನ ಭೇಟಿಗೆ ಹೊರಟಿತು.

ಭೇಟಿಯನ್ನು ನೋಡಲು ಇಚ್ಛಿಸುವ ಭಕ್ತಾದಿಗಳೂ ಅವರೊಂದಿಗೆ ಹೊರಟರು. ನಮಗೂ ಸೋಮೇಶ್ವರಕ್ಕೆ ಹೋಗಲಿಕ್ಕಿದ್ದುದರಿಂದ ಸುಲೋಚನಕ್ಕನಿಗಾಗಿ ಕುಳಿತಲ್ಲಿಂದ ಹುಡುಕತೊಡಗಿದೆ. ಅವರು ಕಾಣಲಿಲ್ಲ. ಮಕ್ಕಳೊಂದಿಗೆ ಪ್ರಾಂಗಣದಿಂದ ಹೊರಗೆ ಬಂದು ಸಂತೆಗಳನ್ನು ಇಟ್ಟಿದ್ದ  ಸ್ಥಳಕ್ಕೆ ಹೋದೆ. ಬಳೆ, ಆಟಿಕೆಗಳನ್ನು ಇಟ್ಟಿದ್ದ ಅಂಗಡಿಯ ಮುಂದೆ ನಿಂತು ಅವುಗಳನ್ನು ನೋಡುತ್ತಾ ಸುಲೋಚನಕ್ಕನಿಗಾಗಿ ಕಾಯುತ್ತಾ ನಿಂತಿದ್ದೆ. ಅಷ್ಟರಲ್ಲಿ ಅದೇ ಜಪಾನೀ ವ್ಯಕ್ತಿ ವಿದ್ವಾನ್ ರಾಮಚಂದ್ರ ಉಚ್ಚಿಲರೊಡನೆ ನಮ್ಮೆಡೆಗೆ ನೋಡಿ ಮುಗುಳ್ನಗುತ್ತಾ ನಮ್ಮ ಬಳಿಯಿಂದ ಹಾದುಹೋದರು.

ತುಸು ಹೊತ್ತಿನಲ್ಲಿ ನಾದಿನಿಯವರು ದಡಬಡಿಸಿ ಬಂದರು. ‘ಸೋಮೇಶ್ವರಕ್ಕೆ ಹೋಗಲಿಕ್ಕೆ ಉಂಟಲ್ಲ? ಮೊದಲು ನಾವು ನರ್ಮದಕ್ಕನವರಲ್ಲಿಗೆ ಹೋಗಿ ಬರುವ. ಅಮೃತಣ್ಣ ಅಲ್ಲಿ ಪ್ರಾಂಗಣದಲ್ಲಿ ಸಿಕ್ಕಿ ಮಾತನಾಡಿರುವರು.’ ‘ಆಗಲಿ’ ಎಂದೆ. ಅಡ್ಕ ಜಾತ್ರೆಯ ಸಮಯದಲ್ಲಿ ನಾವು ಅಲ್ಲೇ ದೈವಸ್ಥಾನದ ಪರಿಸರದಲ್ಲಿರುವ ಅಮೃತ ಸೋಮೇಶ್ವರರ ಮನೆಗೆ ಭೇಟಿ ಕೊಡುವುದು ವಾಡಿಕೆ. ಈಗ ಅವರು ಅಡ್ಕದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಹೊಸತಾಗಿ ಕಟ್ಡಿಸಿದ ಒಲುಮೆ’ಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ನರ್ಮದಾನನಗೆ ಅತ್ತೆಯಾಗಬೇಕು. (ನನ್ನ ತಂದೆಯ ಚಿಕ್ಕಪ್ಪನ ಮಗಳು)  ನಾವು ಓಟದ ನಡಿಗೆಯಲ್ಲಿ ಸಾಗಿ ಹೆದ್ದಾರಿಯ ಪಕ್ಕದಲ್ಲಿರುವ ಅತ್ತೆಯ ಮನೆಗೆ ಹೊಕ್ಕೆವು. 

ಒಳಗೆ ಡ್ರಾಯಿಂಗ್ ರೂಂಲ್ಲಿ ಜಪಾನೀ ವ್ಯಕ್ತಿ ರಾಮಚಂದ್ರ ಉಚ್ಚಿಲರೊಡನೆ ಮಾತನಾಡುತ್ತಾ ಕುಳಿತ್ತಿದ್ದರು! ಮುಗಳುನಗೆಯ ವಿನಿಮಯವಾಯಿತು. ಉಚ್ಚಿಲರು ಅವರು ಜಪಾನಿನಿಂದ ಆಗಮಿಸಿ ಯಕ್ಷಗಾನ ಹಾಗೂ ಭೂತಾರಾಧನೆಯ ಬಗ್ಗೆ ಅಧ್ಯಯನ ನಡೆಸಲು ಬಂದಿರುವುದಾಗಿಯೂ ಪರಿಚಯಿಸಿದರು.

ಅವಸರದಲ್ಲಿದ್ದ ನಾವು ಅವರಿಗೆ ವಂದಿಸಿ ಅಡಿಗೆ ಕೋಣೆಯಲ್ಲಿದ್ದ ನರ್ಮದಾ ಅತ್ತೆಯವರ ಹತ್ತಿರ ಮಾತನಾಡಿ ಅಲ್ಲಿಂದ ಹೊರಗೆ ಬಂದೆವು. ಮರುದಿನ ಭಗವತಿಗಳಿಗೆ ಕೆಂಡ ಸೇವೆ ಮತ್ತು ಬಲಿ ಉತ್ಸವ. ಪಾಗಾರದಲ್ಲಿ ಕುಳಿತು ವೀಕ್ಷಿಸುತ್ತಿರುವಾಗ ಆಜಪಾನೀ ವ್ಯಕ್ತಿಯು ಕ್ಯಾಮರಾ ಹಿಡಿದು ಫೋಟೋ ತೆಗೆಯುತ್ತಿರುವುದನ್ನು ನೋಡಿದೆ. ಅದೇ ಕೊನೆ ಆ ವ್ಯಕ್ತಿಯನ್ನು ನೋಡಿದ್ದು.

ಕೆಲವು ವರ್ಷಗಳ ನಂತರ ನಮ್ಮೂರು ಸೋಮೇಶ್ವರ ಉಚ್ಚಿಲದ ಸಂಕೊಳಿಗೆಯಲ್ಲಿರುವ ಯಕ್ಷಗಾನ ಕೇಂದ್ರ ಕಲಾ ಗಂಗೊತ್ರಿಯಲ್ಲಿ ಹೊಸ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿರುವುದನ್ನು ನೋಡುತ್ತಿದ್ದೆ. ಅದು ಪೂರ್ಣಗೊಂಡು ಸುಮಿಯೋ ಮೊರಿಜಿರಿ ಭವನ ಎಂದು ನಾಮಕರಣ ಗೊಂಡುದನ್ನೂ ನೋಡಿದೆ.

ಆ ಕಟ್ಟಡದ ಎದುರಿನಿಂದ ಹಾದು ಹೋಗುವಾಗ ಅಡ್ಕ ಜಾತ್ರೆಯಲ್ಲಿ ಭೇಟಿಯಾದ ಅದೇ ವ್ಯಕ್ತಿ ಆಗಿರಬಹುದೇ ಎಂಬ ಯೋಚನೆ ನನ್ನ ಮನದಲ್ಲಿ ಮೂಡುತ್ತಿತ್ತು. ನನ್ನ ಮತ್ತು ಮಕ್ಕಳ ಫೋಟೋ ಅವರ ಬಳಿ ಇರಬಹುದೆ? ಕೆಲವು ವರ್ಷಗಳ ನಂತರ ಅವರು ಜಪಾನಿಗೆ ಮರಳಿದ ಬಗ್ಗೆ ಸಮಾಚಾರ ಪತ್ರಿಕೆಯಲ್ಲಿ ಓದಿದ ನೆನಪು.

ಪುರುಷೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಓದಿದ ಮೇಲೆ ಮೊರಿಜಿರಿಯವರ ಬಗ್ಗೆ ಹೆಚ್ಚು ತಿಳಿದು ಕೊಂಡೆ. ಅವರು ಸುಮಾರು ೨೦ ವರ್ಷಗಳ ಕಾಲ ಮಂಗಳೂರಿನಲ್ಲಿ ಇದ್ದು ಯಕ್ಷಗಾನ ಮತ್ತು ಭೂತಾರಾಧನೆಗಳ ಬಗ್ಗೆ  ಜಪಾನೀ ಭಾಷೆಯಲ್ಲಿ ಪುಸ್ತಕ ಬರೆದರು ಎಂಬುದನ್ನು ಓದಿ ಆಶ್ಚರ್ಯಗೊಂಡ.

ಉಚ್ಚಿಲದ ಕಲಾ ಗಂಗೊತ್ರಿಯು ಸ್ವಂತ ಕಟ್ಟಡ ಹೊಂದಲು ಅವರ ಸಹಕಾರವಿತ್ತು ಎಂದು ಓದಿ ಅವರ ಬಗ್ಗೆ ಅಭಿಮಾನವೆನಿಸಿತು. ಜಪಾನಿನ ತುಂಬೆಲ್ಲಾ ಪ್ರಯಾಣಿಸಿ ಅಲ್ಲಿಯ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿ ನಮ್ಮನ್ನೂ ಜಪಾನಿನ ಉದ್ದಗಲಕ್ಕೂ ಕೊಂಡೊಯ್ದು ಬಿಳಿಮಲೆ ಸರ್ ಗೆ ಧನ್ಯವಾದಗಳು.

‍ಲೇಖಕರು Admin

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. km vasundhara

    ಕಾಗೆ ಮುಟ್ಟಿದ ನೀರು ಓದಿರುವುದರಿಂದ ನೀವಿಲ್ಲಿ ಹೇಳಿರುವ ಮೊರಿಜಿರಿ ಅವರ ಬಗ್ಗೆ ತಕ್ಷಣ ಅರ್ಥವಾಯ್ತು..

    ಪ್ರತಿಕ್ರಿಯೆ
  2. Shyamala Madhav

    ನಿರೂ, ಜಾತ್ರೆಯ ಚಿತ್ರಗಳನ್ನು , ಫೋಟೋ ಕ್ಲಿಕ್ಕಿಸಿದ ಮೊರಿಜೆರಿಯವರನ್ನು, ಇಬ್ಬಗೆಯಲ್ಲಿ ವಿನಿಮಯ ವಾದ ಮುಗುಳ್ನಗೆಯನ್ನು, ರಾಮಚಂದ್ರ ಉಚ್ಚಿಲರನ್ನು, ಅಮೃತಣ್ಣ, ನರ್ಮದಕ್ಕನನ್ನು , ಕಣ್ಣಾರೆ ಕಂಡಂತಾಯ್ತು. ಜೊತೆಗೆ ಸುಲೋಚನಕ್ಕನನ್ನೂ.. ಆ ಫೋಟೋ ಸಿಗುವಂತಿದ್ದರೆ …!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: