ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಹಿ ವಿಷವಿಲ್ಲದ ಹೂವಿಗೆ..

-ಡಾ ವಿದ್ಯಾ ಕುಂದರಗಿ

ಕಲ್ಲು ಮುಳ್ಳಿಲ್ಲದ ಹುಲಕಡ್ಡಿ ನಯತುಪ್ಪಳ ಆಯ್ದು ಗೂಡ ‘ಕಟ್ಟಿದ್ದೇನೆ’
ದ್ವೇಷ ರೋಷವಿಲ್ಲದ ತಪ್ತಭಾವ ಭಾಷೆಗಳಾಯ್ದು ಕವನ ‘ಬರೆದಿದ್ದೇನೆ’

ಕಹಿ ವಿಷವಿಲ್ಲದ ಹೂವಿಗೆ ಮುತ್ತುಕೊಟ್ಟು ಕೂಡಿದ ಜೇನಸಿಹಿ ಇದೆ
ಬೆಂಕಿ ಬಿಸಿಯಿಲ್ಲದ ಆರ್ದ್ರ ಹನಿ ಹನಿಗಳ ಹೆಪ್ಹಾಕಿ ಮೋಡ ‘ಬಿತ್ತಿದ್ದೇನೆ’

ಮಬ್ಬು ಮುಸುಕಿಲ್ಲದ ತೇಜನ ತಡೆಹಿಡಿದು ತಂದ ದೀಪದ ಬೆಳಕಿದೆ
ಬಿಸಿ ಬೆವರಿಲ್ಲದ ಚಂದಮಾಮನ ಸ್ವಲ್ಪ ನಿಲ್ಲಿಸಿ ತಂಪ ‘ತಂದಿದ್ದೇನೆ’

ಕಡು ದುರ್ಗಂಧವಿಲ್ಲದ ಮಂದ ಮಾರುತನ ಕರೆದು ಸೂಸಿದ ಗಂಧವಿದೆ
ಕಲೆ ಕಲಕಿಲ್ಲದ ಕಾಮನಬಿಲ್ಲ ಬಿನ್ನವಿಸಿ ಕಡತಂದು ಬಣ್ಣ ‘ಹಚ್ಚಿದ್ದೇನೆ’

ಭೇದಭಾವವಿರದ ಸಂಬಂಧ ಹೊಸೆದ ಬಾಳಿನ ಭದ್ರ ಬುನಾದಿ ಬದುಕಿದೆ
ಪದರುಗರಸಲ್ಲದ ಕಲ್ಲಕಡೆದು ಗಾರೆ ಗಚ್ಟಿನಲಿ ದುರ್ಗ ‘ನಿರ್ಮಿಸಿದ್ದೇನೆ’

ಭಾಗ ಬಿರುಕಿಲ್ಲದ ಭೂಮಿಯ ತುಂಡೊಂದ ತಂದು ಹಾಸಿದ ಹಾಸಿಗೆಯಿದು
ಕಲ್ಮಶ ಕೊಳೆಯಿರದ ಬಾನಿನ ಚೂರೊಂದ ಕೊರೆದು ಹುದುಗ ‘ಹೊದ್ದಿದ್ದೇನೆ’

ಅಂಧ ಅಳುಕಿಲ್ಲದ ನಕ್ಷತ್ರ ಪುಸಲಾಯಿಸಿ ಶಯನಕೆ ಹರಡಿದೆ ಕಣ್ಮಿಂಚಲಿ
‘ಸಖು’ ದಣಿವುದಾವಂತವಿರದ ಅಲೆಗಳ ಆಹ್ವಾನಿಸಿ ಚಾಮರ ‘ಬೀಸಿದ್ದೇನೆ’

‍ಲೇಖಕರು Admin

12 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading