ಸಹಿ ಬೀಳಲೇ ಇಲ್ಲ!
– ಸೌಮ್ಯಶ್ರೀ ಎ.ಎಸ್.
ಕನಸುಗಳ ಕಟ್ಟಿ
ನಿರೀಕ್ಷೆಯ ಹೊಂಗನಸನು
ಹೊಸೆದು ಬರೆದ ಟಿಪ್ಪಣಿ
ಟಪಾಲುಗಳಿಗೆ ಮುದ್ರೆ ಬೀಳಲೇ ಇಲ್ಲ!
ಕಾತರಿಸಿ ಅಚ್ಚಾಗಿಸಿದ ಅಕ್ಷರಗಳು
ಅಳಿಸಿ ಹೋಗುತ್ತಿವೆ
ಕೂಡಿಟ್ಟ ಕನಸುಗಳು
ಧೂಳಿಡದ ಕಡತದಲಿ
ಕರಗಿ ಹೋಗುತ್ತಿವೆ!
ಸಹಿಗಾಗಿ ಕಾದು ಕೂತ
ಕಡತಕೂ ಬೇಸರದ ಆಕಳಿಕೆ
ಧೂಳು ಕೊಡವಿ ಒಪ್ಪಿಗೆಯ
ಕಿರುಸಹಿ ಹಾಕುತ್ತಾರೆಂದು ಕೊಂಡರೆ
ಒಂದಿಷ್ಟು ಕನಿಕರಿಸದೆ
ಹರಿದು ಕಸದ ಬುಟ್ಟಿಗೆ ಎಸೆದರು!

ಮತ್ತೆ ಅಕ್ಷರಗಳ ಹೆಣೆದು
ಟಿಪ್ಪಣಿ ಟಪಾಲುಗಳನು
ಕಡತದಲಿ ಜೋಡಿಸಿ
ಸತ್ತ ಗಿಡಕೆ ನೀರುಣಿಸುವಂತೆ
ಮತ್ತೆ ಸತ್ತ ಕಡತವೊಂದು
ಮರುಹುಟ್ಟು ಪಡೆಯಿತು!
ಬಣ್ಣ ಬಣ್ಣಗಳಿಂದ ವಿನ್ಯಾಸಗೊಂಡ
ಕಡತಕೆ ನಗುವಿನ ಸಂಭ್ರಮ
ಕೆಳಗಿದ್ದ ಕಸದ ಬುಟ್ಟಿಯ
ನೋಡಿ ಸೊಕ್ಕಿನ ನಗೆ ಬೀರಿತು!
ಕಿಲ ಕಿಲ ನಗುತ್ತಿದ್ದ ಕಡತ
ಧೂಳಿಡಿದು ಬಣ್ಣ ಮಾಸಿತು
ಕೈಯಿಂದ ಕೈಗೆ ಓಡಾಡಿದಷ್ಟೇ!
ಕಡತವ ಅನುಮೋದಿಸಲೇ ಇಲ್ಲ
ವಿಲೇವಾರಿಯಾಗದ ಕಡತವೆಂದು
ಮತ್ತೆ ಕಸದ ಬುಟ್ಟಿಗೆ ಎಸೆದರು!






ಅಯ್ಯೋ ಕಡತದ ಪಾಡೇ…