ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಸ…

ಸುಧನ್ವ ದೇರಾಜೆ

ಅಪ್ಪ ಎಸೆದ ಮಗಳ ಆಟಿಕೆಯೊಂದು
ಕಸದ ಬುಟ್ಟಿ ಸೇರಿ,
ಬೆಂಗಳೂರಿನ ಮನೆ ಮನೆ
ಕಸ ಸಂಗ್ರಹಿಸೋ ರಿಕ್ಷಾ ಸೇರಿ
ಅಲ್ಲಿಂದ ಲಾರಿ ಏರಿ
ಕಸದ ಮಹಾ ಪರ್ವತ ರಾಶಿಯಲ್ಲಿ
ಎಲ್ಲಿ ಹೋಯಿತೋ.
ಅದು ಅಲ್ಲಿ ಕರಗದಿದ್ದರೂ ಸೇರಿತು
ಮತ್ತೆಂದೂ ಮರಳದ ಲೋಕಕೆ.
ಮರುಗಿದಳು ಮಗಳು ಕಣ್ಣೀರ ಮಾಲೆ ಮಾಡಿ
ಕಣ್ಣಲ್ಲೇ ಕಸವ ಇಟ್ಟುಕೊಂಡಂತೆ.
ತನ್ನನ್ನೇ ಅಪ್ಪನೆಸೆದನೋ ಎಂಬಂತೆ.

ಅಪ್ಪನಿಗದು ಪ್ಲಾಸ್ಟಿಕ್ ಚೂರು
ಮಗಳಿಗದು ತನ್ನ ಎದೆಗೂಡ ತುಂಡು.
ತಾನು ಸೀರೆಯುಡಿಸಿದ ಬಾರ್ಬಿ ಮಗಳು
ತಾನು ಬಳಿದ ಪೌಡರ್, ಹಚ್ಚಿದ ಲಿಪ್ ಸ್ಟಿಕ್
ಅವಳಿಗಾಗಿ ಕಟ್ಟಿದ ರಟ್ಟಿನ ಮನೆ
ಪುಟಾಣಿ ಟೇಬಲ್ ಕುರ್ಚಿ
ಸ್ವಿಮ್ಮಿಂಗ್ ಪೂಲ್ !
ಎಲ್ಲವೂ ಇದ್ದವು, ಆದರೆ ಈಗ ಅವಳಿಲ್ಲ.
ಎದೆಗೂಡು ಹಿಗ್ಗಿಸಿ ಕುಗ್ಗಿಸಿ
ಅತ್ತ ಮಗಳಂದಳು-
‘ಅಪ್ಪಾ
ಮಗಳ ಕಳಕೊಂಡ ದುಃಖ ನಿನಗೆ ಗೊತ್ತಿಲ್ಲ
ನನಗೆ ಗೊತ್ತಾಯಿತು’.
ಅಪ್ಪ ಕಸವಾದ.

‍ಲೇಖಕರು Admin

7 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading