ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಷ್ಟಕಾಲದಲ್ಲೊಂದು  ಗಪದ್ಯ..

ಕು.ಸ.ಮದುಸೂದನ, ರಂಗೇನಹಳ್ಳಿ

ಎಲ್ಲರೂ ಸರಿಯಿದೆ ಎನ್ನುವಾಗ
ನಾನೊಬ್ಬ
ಸರಿಯಿಲ್ಲವೆಂದು ಕೊಂಕೊಂದ ತೆಗೆದಾಗ
ಒರೆಯಿಂದ ಹೊರಬರುತ್ತವೆ ಕತ್ತಿಗಳು
ಗೊಂದಲವಾಗೋದು ಆಗಲೇನೆ
ಯಾವುದನ್ನು ಉಳಿಸಿಕೊಳ್ಳೋದು
ಸತ್ಯವನ್ನ ಇಲ್ಲ ತಲೆಯನ್ನಾ?
ತಲೆ ಇರುವ ಯಾರೂ ಇಂತ ಪ್ರಶ್ನೆ ಕೇಳುವುದಿಲ್ಲವೆಂಬುದು
ಸಮಾಜದ ಸಭ್ಯಸ್ಥರ ಅನಿಸಿಕೆ!

 

—–1

ಸತ್ಯ ಹೇಳಿದವರು ಅಮರರಾಗುತ್ತಾರೆಂಬ
ಅಮರಕಥಾಕೋಶದ ಕತೆಗಳಗೀಗ ಅಂತ ಮಾನ್ಯತೆಯೇನಿಲ್ಲ
ಸುಳ್ಳು ಹೇಳುವವರ ರಾಜ್ಯದೊಳಗೆ
ಬಟ್ಟೆ ಹಾಕಿಕೊಂಡು ಬಡಿಸಿಕೊಳ್ಳುವುದು ಅಚ್ಚರಿಯ ವಿಷಯವೇನಲ್ಲ
ಬದುಕಿರುವ ಗೆಳೆಯರ ಪ್ರಕಾರ ನಾವ್ಯಾರು ಸತ್ಯ ಹೇಳಿ
ಉಳಕೊಂಡವರಲ್ಲ
ಹಾಗಂತ ಸತ್ತವರೆಲ್ಲ ಸತ್ಯ ಹೇಳಿದವರೇ ಎನ್ನುವುದಕ್ಕೂ
ಪುರಾವೆಯಿಲ್ಲ!

——2

ಸುಖವಾಗಿದ್ದವನಿಗೆ ಕಷ್ಟಬಂದರೆ

ಅದೇ ದೊಡ್ಡದೆನಿಸುತ್ತೆ

ಜನರೂ ಸಹ  ಆ ನತದೃಷ್ಠ ಶ್ರೀಮಂತನಿಗಾಗಿ

ಹಲ್ಲಿಯಂತೆ ಲೊಚಗುಟ್ಟುತ್ತಾರೆ

ಹುಟ್ಟಿದಾಗಿಂದ ಸಂಕಷ್ಟದಲ್ಲೇ  ಬೆಳೆದ ಜನರಿಗೆ

ಬಡತನ ಎಷ್ಟು ರೂಢಿಯಾಗಿ ಬಿಡುತ್ತದೆಯೆಂದರೆ

ಅವರು ತಮ್ಮಕಷ್ಟದ ಬಗ್ಗೆಹೇಳಿಕೊಳ್ಳುವುದಕ್ಕಿಂತ

ಸಿರಿವಂತನ ಅರಮನೆಯ ವೈಭೋಗವನ್ನು ವರ್ಣಿಸುವುದರಲ್ಲಿಯೇ

ಮಗ್ನರಾಗಿ ಬಿಡುತ್ತಾರೆ

ಇಂತಹ ಸನ್ನಿವೇಶದಲ್ಲಿ ಸಮಾನತೆಯ   ಕೂಗುಗಳು

ಕೇಳಲಾಗದಂತೆ

ಜನ ಕಿವುಡರಾಗುತ್ತಾರೆ

——3

ಸಂಖ್ಯಾಬಲ ಉಳ್ಳವರು ಹೇಳಿದ್ದೇ ಸರಿ

ಅಂತ ಒಪ್ಪೋಕೆ ಸಿದ್ದವಿರದೆ ಇದ್ದಾಗ

ಅದನ್ನು ನಿರಾಕರಿಸೋದೇನೊ ನಮ್ಮ ಹಕ್ಕು,ನಿಜ

ಆದರೆ ಅವರು ಅಷ್ಟಕ್ಕೆ ತಮ್ಮ ಅನಿಸಿಕೆಯನ್ನು

ಹಿಂದಕ್ಕೆ ಪಡೆಯಲ್ಲ, ಬದಲಿಗೆ ಅದನ್ನೇ ಮತ್ತೆ ಮತ್ತೆ

ಪುನರುಚ್ಚಾರ ಮಾಡ್ತಾಹೋಗುವಾಗ

ಸರಿಯಲ್ಲ ಅಂತ ವಾದಿಸಿದ ಮನಸುಗಳಿಗೂ

ಗೊಂದಲ ಶುರುವಾಗುತ್ತೆ ಅದೇ ಸತ್ಯ

ಇದ್ದರೂ ಇರಬಹುದೇನೊ ಅಂತ

ಹೀಗೆ ಶುರುವಾಗಿದ್ದರ ಪರಿಣಾಮ

ಬೆಳೆಗಿಂತ ಕಳೆಯೇ ಜಾಸ್ತಿಯಾಗುತ್ತ ಹೋಗುತ್ತೆ!

 

——4

ಬದಲಿಸಿಬಿಡ್ತೀನಿ ಅಂತಾ ಹೊರಟವರೇ ಬದಲಾಗಿ

ಹೋಗಿರುವುದಕ್ಕೆ ಇತಿಹಾಸದ ಸಾಕ್ಷಿಗಳೇನು ಬೇಡ

ದುರ್ಬಲರಿಗೆ ಶಕ್ತಿ ತುಂಬುವ ಮಾತಾಡುತ್ತಲೇ

ತಾವು ಬಲಿಷ್ಠರಾಗಿ ಬಿಡುವುದನ್ನುಕಾಣುತ್ತಲೇ ಇದ್ದೇವೆ.

ಯಾವುದನ್ನುಬದಲಾಯಿಸ್ತೀವಿ ಅಂತ ಹೊರಟಿರುತ್ತಾರೊ

ಅದನ್ನೇ ತಾವು ಮತ್ತೆ ಸೃಷ್ಠಿಸುತ್ತಾ ಹೋಗುವುದು

ನಿಸರ್ಗದ ಸಹಜ ಕ್ರಿಯೆ ಅಂತ ನಮ್ಮನ್ನು ನಂಬಿಸಲಾಗಿದೆ

ನಾವೋ ಪ್ರಶ್ನೆ ಮಾಡದೇಲೆ ಒಪ್ಪಿಕೊಳ್ಳುವುದಕ್ಕೆ

ಒಗ್ಗಿಹೋದ ಜನ

 

——-5

ಕೊನೆಯದಾಗಿ,

ಕಾಲ ಹೇಗಿದೆ ಅಂದರೆ,

ಸೀಬೇಹಣ್ಣ್ನು ತೋರಿಸಿ ಸೇಬುಹಣ್ಣು

ಅಂತ ಹೇಳಿದಾಗಲು

ಜನ ತಪ್ಪು  ಅಂತ ಹೇಳಿ

ನಿಷ್ಠೂರ ಆಗೋಕೆ ತಯಾರಿರದ ಮಟ್ಟಿಗೆಜನ ಸ್ವಾರ್ಥಿಗಳಾಗುತ್ತಿದ್ದಾರೆ!

ಇಲಿಬಾಲ ತೋರಿಸಿ ಆನೆ ಬಾಲ ಅಂದರೂ

ನಮಗೇನು ತಕರಾರಿಲ್ಲ ಅನ್ನೋವಷ್ಟರ ಮಟ್ಟಿಗೆ!

‍ಲೇಖಕರು avadhi

3 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading