ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ ಮತ್ತು ಉಪ್ಪಿನಕಾಯಿ

ಗಾಯತ್ರೀ ರಾಘವೇಂದ್ರ

ಉಪ್ಪಿನಕಾಯಿ

ತಯಾರಿಸುವುದೂ

ಒಂದು ಧ್ಯಾನವೇ

ತುಸು ಭಂಗವಾದರೂ

 

ಓಟೆಗಟ್ಟದ ಪುಟ್ಟ

ಎಳೆಮಾವು

ಉಪ್ಪಿನಲಿ ಒತ್ತಿ ನೀರಿಳಿಸಿ

ಚಿರುಟಿಕೊಂಡ ಮಿಡಿಗಳ

ನೀರಿಲ್ಲದಂತೆ ಒಣ ಒಣ

ಒರೆಸುತ್ತ

 

ಸಾಸಿವೆ ,ಜೀರಿಗೆ , ಮೆಣಸು

ಹದವಾಗಿ

ಮಸಾಲೆಗಳೊಂದಿಗೆ ಹುರಿದು

ನುಣ್ಣಗೆ ಅರೆದರೆದು

ಮನೆಯೆಲ್ಲ ಘಮ ಘಮ

 

ಕೊಡಗಟ್ಟಲೆ ನೀರು ಸುರಿದು

ಸಿದ್ದೆಯಳತೆಯಲಿ ಉಪ್ಪು

ಕುದಿ ಕುದಿದು ಹೆರೆಗಟ್ಟಿ

ತಣ್ಣ ತಣಿದ ಉಪ್ಪು ನೀರು

 

ಮಕ್ಕಳಿಗೆ ,ಹಿರಿಯರಿಗೆ ,ನೀರಿಗೆ

ಉಪ್ಪಿನಕಾಯಿ ಮಾಡುವಲ್ಲಿ

ಪ್ರವೇಶವೇ ಇಲ್ಲ

ಮಾಡುವ ಗ್ರಹಿಣಿಯದ್ದೂ

ಮೌನ ವೃತ

ನುಡಿವ ಎಂಜಲೂ

ಸೋಕುವಂತಿಲ್ಲ

 

ಬೀಸಿಟ್ಟ ಮಸಾಲೆಗೆ ತಣಿದ

ಉಪ್ಪುನೀರ ಬೆರೆಸುತ್ತ

ಹದವಾಗಿ ಕಲೆಸಿ ಮಿಡಿಗಳ

ಹಾಕಿ

ಬಿಸಿಲಲಿ ಒಣಹಾಕಿ

ಸಿದ್ದಪಡಿಸಿದ ಭರಣಿಯೊಳಗೆ

ತುಂಬ ತುಂಬಿಸಿದ ಕೆಂಪು

ಉಪ್ಪಿನಕಾಯಿ

 

ಹದ ತಪ್ಪಿ ರುಚಿ ಕೆಟ್ಟಂತೆಯೇ

ಭರಣಿಯೊಳಗೆ

ಹುದಿಗಟ್ಟದಂತೆ ಬಿಳಿಬಟ್ಟೆ

ಹಾಕಿ

ಮುಚ್ಚಳ ಮುಚ್ಚಿ ಅದರಮೇಲೊಂದು ಹೊದಿಕೆ

ಸೊಣಬೆದಾರದಲಿ ಕಟ್ಟಿ

ಬೆಚ್ಚ ಬೆಚ್ಚಗಿಟ್ಟು

ಮಳೆ ಚಳಿ ಬೇಸಿಗೆಗೆ ಕೆಡದಂತೆ

ಸದಾ ಜೋಪಾನ

 

ವರ್ಷವಿಡೀ ಊಟಕ್ಕೆ

ಅಷ್ಟಷ್ಟೇ ತೆಗೆಯುತ್ತ

ಅದರ ಸ್ವಾದ ಮೆಲ್ಲುತ್ತ

ಮೆಲ್ಲುತ್ತ

ಎಷ್ಟು ತಿಂದರೂ

ಕಡಿಮೆಯಾಗದ ರುಚಿ

ಉಪ್ಪಿನಕಾಯಿಗೆ

ಉಪ್ಪಿನಕಾಯಿಯೇ ಸಾಟಿ

 

ರುಚಿಯಾದ ಉಪ್ಪಿನಕಾಯಿ

ಮಾಡುವುದು

ಎಲ್ಲರಿಗೂ ಒಲಿಯುವುದಿಲ್ಲ

ಕವಿತೆಯೂ

ಉಪ್ಪಿನಕಾಯಿಯ ಹಾಗೇ

ವೃತನಿಷ್ಠರ ಧ್ಯಾನದಂತೆ

‍ಲೇಖಕರು avadhi

22 June, 2017

5 Comments

  1. Raghavendra

    ತಾಂಕ್ಯೂ

  2. Vasudev nadig

    ಕಾವ್ಯದ ಕುರಿತ ಬದ್ದತೆಯು ಉಪ್ಪಿನಕಾಯಿ ತಯಾರಿಯ ಶೃದ್ಧೆಯ ಜೊತೆ ಬೆರೆತು ಹದಗೊಂಡ ರುಚಿ ಇಲ್ಲಿ ಕಂಪು ಬೀರಿದೆ..

  3. CanTHeeRava

    Sogasaada kavite gaayatree raghavendra. abhinandanegaLu. heegE bareyuttaa iri.

  4. .ಮಹೇಶ್ವರಿ.ಯು

    .ಉಪ್ಪಿನಕಾಯಿ ತಯಾರಿಸುವುದು ಒಂದು ವ್ರತವೇ ಸರಿ. ಓದುತ್ತ ಓದುತ್ತ ಹೋದಂತೆ ನನಗೆ ಲಲಿತಾಸಿದ್ಧಬಸವಯ್ಯನವರು ಹಿದಕವರೆಯ ಪದಾರ್ಥವನ್ನು ತಯಾರಿಸುವುದರ ಸಂಭ್ರಮವನ್ನು ಲವಾಜಮೆ ಎಂಬ ಕವಿತೆಯಲ್ಲಿ ವರ್ಣಿಸಿ ಕವಿತೆಕಟ್ಟುವ ಕ್ರಿಯೆಯ ಜೊತೆಗೆ ಅದನ್ನು ನಾಜೂಕಾಗಿ ಬೆಸೆದ ಬಗೆ ನೆನಪಿಗೆ ಬಂತು.

  5. Anonymous

    ವ್ಹಾವ್‌..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading