ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ ಬರೆದದ್ದಕ್ಕೆ ನನ್ನಪ್ಪ ಹೊರಗೆ ಹಾಕಿದ್ದ..

ಸಾಂಸ್ಕೃತಿಕ ಭಯೋತ್ಪಾದನೆಯ ಇರಿತವನ್ನ ಆಹ್ಲಾದಿಸುತ್ತಾ…

ವೀರಣ್ಣ ಮಡಿವಾಳರ

ಹಣ, ಅಧಿಕಾರದ ದುರಾಸೆ ತಂದೊಡ್ಡಿರುವ ಸಾಂಸ್ಕೃತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎಲ್ಲ ಬಿಟ್ಟು ಸುಮ್ಮನಿದ್ದರೂ, ಸುಮ್ಮಾನವೂ ನೆಮ್ಮದಿ ಕೆಡಿಸಲು ಹಟತೊಟ್ಟಿದೆ. ಸ್ವಂತ ಆಲೋಚನೆ, ಸ್ವಂತದ್ದಾದ ಕ್ರಿಯೆ, ಕೊನೆಗೆ ನಮ್ಮದೇ ಆದ ಬದುಕನ್ನೂ ಕಳೆಯದಂತೆ ಇಂದಿನ ವಿದ್ರೋಹಗಳು ಬಹುತೇಕರನ್ನ ಕಟ್ಟಿಹಾಕುತ್ತಿವೆ.

ನಂಬು, ನಂಬದಿರು ಅವು ಮುತ್ತುತ್ತವೆ ನಮಗೆ ಗೊತ್ತಿಲ್ಲದಂತೆ. ಯಾರದೋ ಆಟಕ್ಕೆ ನಾವು ಗೊಂಬೆಗಳು, ನಮ್ಮ ತಿಳುವಳಿಕೆ ಬೇರೆ “ಇಲ್ಲ, ಇದು ನಮ್ಮದೇ ಮತ್ತು ನಮ್ಮ ಒಳಗಿನ ತುಡಿತಕ್ಕೆ, ದುಃಖಕ್ಕೆ, ಸಂಭ್ರಮಕ್ಕೆ ಮಿಡಿಯುತ್ತಿದ್ದೇವೆ “ ಎಂದೇ ತಿಳಿದಿರುತ್ತೇವೆ. ಆದರೆ ನಮ್ಮನ್ನ ಪಾತ್ರಧಾರಿಗಳು ಎಂದು ಜಗತ್ತಿಗೆ ತೋರಿಸಿ “ಛಂದನೆಯ ಮನರಂಜನೆಯ ಆಟ ನಿಮಗೆ ಮತ್ತೆ ಸಿಕ್ಕುವುದಿಲ್ಲ” ಎಂದು ರೇಟು ಏರಿಸಿ ನಮ್ಮನ್ನ ಮಾರಿರುತ್ತಾರೆ, ನಮ್ಮ ಅಭಿವ್ಯಕ್ತಿಯನ್ನ, ನಮ್ಮ ಹೆಸರನ್ನ, ನಮ್ಮತನವನ್ನೂ ಹರಾಜಿಗಿಟ್ಟಿರುತ್ತಾರೆ.

ಇದೆಲ್ಲ ಅರ್ಥವಾಗುವ ಹೊತ್ತಿಗೆ ನಮ್ಮನ್ನು ಕೈಹಿಡಿದು ಕರೆದುಕೊಂಡು ಹೊರಟವರು “ ಇಲ್ಲ, ಇದು ತಪ್ಪು ಹಾದಿ. ನನಗೆ ಗೊತ್ತಿರಲಿಲ್ಲ, ಆದರೆ ಇದು ನನ್ನ ತಪ್ಪಲ್ಲ ಏಕೆಂದರೆ ನಾವು ತಪ್ಪು ಹಾದಿಯಲ್ಲಿದ್ದೇವೆ ಅಂತ ನನಗೆ ತಿಳಿದಿರಲಿಲ್ಲ, ಹಾಗಾಗಿ ಇದು ನನ್ನ ತಪ್ಪಲ್ಲ. ಇನ್ನುಮುಂದೆ ನೀವು ಎಲ್ಲಿಗಾದರೂ ಹೊರಡಿ, ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು “ ಎನ್ನುವ ಹೊತ್ತಿಗೆ ಬಹಳ ದೂರ ಬಂದು ದಣಿದು ಬಿಟ್ಟಿರುವವರಿಗೆ ಈ ಆಘಾತವನ್ನು ತಡೆದುಕೊಳ್ಳಲೂ ಸೈರಣೆ ಇರುವುದಿಲ್ಲ. ಇನ್ನು ಇವರ ವಿರುದ್ಧ ಸೆಟೆದುನಿಲ್ಲುವುದು ಎಲ್ಲಿಂದ ಬಂತು.

ಕವಿತೆ ಬರೆದದ್ದಕ್ಕೆ ನನ್ನಪ್ಪ ಹೊರಗೆ ಹಾಕಿದ್ದ, ಪುಸ್ತಕ ಬಿಡುಗಡೆ ಹಾಳುಮಾಡುವುದಾಗಿ ಬೆದರಿಕೆ ಒಡ್ಡಿದ್ದ, ನಾನು ಬರೆದೆ. ಪುಸ್ತಕ ಪ್ರಕಟಿಸಿದೆ. ಒಂದು ಕವಿತೆಯ ಕಾರಣಕ್ಕೆ ನಮ್ಮೂರು ಸೇರಿದಂತೆ ಸುತ್ತ ಹತ್ತು ಹಳ್ಳಿಗಳ ಜನ ಸೇರಿದ್ದ ಸಮಾರಂಭದಲ್ಲಿ ನಾನು ಕ್ಷಮೆ ಅಪ್ಪನಿಗೆ ಕೋರಿದ್ದೆ, ಮುಂದೆಯೂ ಕವಿತೆ ನನ್ನಿಂದ ಬರೆಯಿಸಿಕೊಂಡಿತು.

ಆದರೆ ಇನ್ನುಮುಂದೆ? … ಗೊತ್ತಿಲ್ಲ.

ನಾನು ಕಂಡಿರದ ಆದರೆ ನನ್ನ ಕವಿತೆಯನ್ನ ಅಪಾರವಾಗಿ ಪ್ರೀತಿಸುವ ಗಡಿಭಾಗದ ಹಳ್ಳಿಯ ನಾಲ್ಕು ಹುಡುಗರು ಫೋನ್ ಮಾಡಿ ಹೇಳುತ್ತಾರೆ “ ಸರ್, ಯುವ ಕವಿ ಸಮ್ಮೇಳನಕ್ಕೆ ಯಾವಾಗ ಹೊರಡ್ತೀರಿ ಸರ್, ನಾವೂ ಟಿಕೆಟ್ ಬುಕ್ ಮಾಡಿಸಿದ್ದೀವಿ, ಒಬ್ಬೊಬ್ಬರು ಒಂದೊಂದು ಕವಿತೆ, ಮೂರುನೂರು ರೂಪಾಯಿ ಕಳುಹಿಸಿದ್ದೇವೆ….ನಿಮ್ಮನ್ನ ನೋಡಬೇಕು, ಮಾತನಾಡಿಸಬೇಕು “ ನನಗೆ ಮಾತು ಹೊರಡದಾಯಿತು.

ಈ ಕುರಿತು ಆ ಸಾಂಸ್ಕೃತಿಕ ಭಯೋತ್ಪಾದಕರೊಬ್ಬರನ್ನ ಪ್ರಶ್ನಿಸಿದರೆ “ಅದು ಪ್ರತಿನಿಧಿ ಶುಲ್ಕ ಸರ್ “ ಎನ್ನುತ್ತಾನೆ.

ನಮಗೆ ಗೊತ್ತಿಲ್ಲದೇ ನಮ್ಮನ್ನ ತುಂಬ ಚೆನ್ನಾಗಿ ವ್ಯಾಪಾರ ಮಾಡಿದ್ದಾರೆ. ರಾಜ್ಯಾದ್ಯಂತ ಹೀಗೆ ಮೋಸ ಹೋದ ಅಮಾಯಕ ಹುಡುಗರಿಗೆ ಈ ಕ್ಷಣ ನನ್ನ ಕಂಬನಿಯ ಕ್ಷಮೆ ಕೋರುತ್ತೇನೆ ಮತ್ತು ಅಭಿವ್ಯಕ್ತಿ ಹೀಗೆ ಯಾರದೋ ಮೋಸಕ್ಕೆ ಸರಕಾಗಿದ್ದಕ್ಕೆ ನನ್ನ ಕುರಿತ ನಾನೇ ಹೇಸಿಗೆ ಪಡುತ್ತೇನೆ.
ನನಗೇ ನನ್ನ ಧಿಕ್ಕಾರವಿದೆ, ನಿಮ್ಮದೂ ಸೇರಿಸಿ…

ಯೋಚಿಸಿಯೇ ಈ ರೀತಿ ಬರೆದಿದ್ದೇನೆ.

‍ಲೇಖಕರು admin

14 December, 2015

1 Comment

  1. Bhagya Chikkanna

    ಲೇಖನ ಭಾವುಕ ಎನಿಸಿತು.. ಪ್ರತಿಭೆ ಸರಕಾಗಿಬಿಟ್ಟಾಗ, ನಮ್ಮತನ ನಮ್ಮಲ್ಲಿ ಉಳಿಯದಾಗ.. ಈ ರೀತಿಯ ಧಿಕ್ಕಾರಗಳು ಒಂದಷ್ಟು ಬಿಟ್ಟಿ ಪಾಠವನ್ನಂತೂ ನೀಡಿರುತ್ತದೆ.. ಪ್ರತಿಭಟಿಸಿ, ಮುನ್ನುಗ್ಗಿ ಕಾಲವಿನ್ನೂ ಇದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading