‘ಕವಿತೆ ಬಂಚ್‌’ನಲ್ಲಿ ಸದಾಶಿವ್ ಸೊರಟೂರು

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಸದಾಶಿವ್ ಸೊರಟೂರು
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ  ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪಾಠ ಹೇಳುವ ಮೇಷ್ಟ್ರು.

ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ. ಹಲವು ಕಥೆಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. 

1. ನೆನಪುಗಳ ಹತ್ಯೆ ನಡೆದಿದೆ..

ನನ್ನದೇ ಊರಿನಲ್ಲಿ
ಹೆಜ್ಜೆ ಹಾದಿ ತಪ್ಪುತ್ತದೆ
ಡಾಮರು ರಸ್ತೆಗಳೆಲ್ಲಾ
ನೆನಪ ಹೂತು ಹಾಕಿದ
ಗೋರಿಗಳು

ಇನ್ನಷ್ಟು ನೆನಪುಗಳನು ಕೊಲೆ
ಮಾಡುವ ಹುನ್ನಾರ
ನಡೆದಿರಬಹುದು!
ಯಾಕೊ ಯಾವುದೂ ತಿಳಿಯುತ್ತಿಲ್ಲ
ನನ್ನ ನೆನೆಪುಗಳಿಗೆ ನಾನೇ
ನೇಣು ಹಾಕಿ ಬಿಗಿದು
ಈಗ ಅದರ ಕೊಳೆತ ವಾಸನೆಗೆ
ಮೂಗು ಮುಚ್ಚಿಕೊಂಡು
ನಡೆಯುತ್ತಿದ್ದೇನೆಯೇ?

ನನ್ನ ಮೇಲೆ ದೂರು‌ ಕೊಡುವವರು
ಯಾರೂ ಇಲ್ಲದಿರಬಹುದು
ಊರಲ್ಲಿ,
ಅವರು ಅವರದೇ ನೆನಪುಗಳ
ಹತ್ಯೆಗೆ ತೊಡಗಿರಬಹುದು
ರಾತ್ರಿ ಪಾಳಿಯಲ್ಲಿ ಇಲ್ಲವೆ
ಮೆಟ್ರೊದ ಎಸಿಯ ನಡುವೆ

ಕೂತು ದಿಟ್ಟಿಸುತ್ತಿರುವ
ನೋಟಗಳೆಲ್ಲವೂ
ನನ್ನ ನೆನಪಿನ ಹೆಣದ ಮಣ್ಣಿಗೆ
ಬಂದಂತಿವೆ
ಪಾಪ, ಅವರಿಗೆ ಬೇಗ ಮಣ್ಣು ಕೊಡುವ
ಆತುರವೆನಿಲ್ಲ!

ಪ್ರತಿ ಹೆಜ್ಜಿಗೂ ಅದೆಷ್ಟು ಗೋರಿಗಳನ್ನು
ತುಳಿಯುತ್ತಿದ್ದೇನೊ ಏನೊ!,
ಊರು ಬದಲಾಗಿದೆ.
ಹೌದು, ಅದೀಗ ನೆನಪುಗಳ ಸ್ಮಶಾನ
ಕಾಯಲು ಕೂತವರು ಬರೀ
ಸುಕ್ಕು ಚರ್ಮದ ಮಂದಿ..
ಈಗ ಊರೆಂದರೆ ಬರೀ
ಇಷ್ಟೇ!

2. ಎತ್ತುವ ಹೆಣಕ್ಕೆ ಸಾವಿರ ನೆಂಟರು

ಗಾಳಿಗೆ ದೀಪ ಪಕ್ ಎಂದು
ನಂದಿದಂತಹ ಕತ್ತಲು; ವಿಷಾದ
ಯಾರಿಗೆ ಮೈಲಿಗೆ? ಎಲ್ಲೆಲ್ಲಿ?
ಎತ್ತುವ ಹೆಣಕ್ಕೆ ಸಾವಿರ ನೆಂಟರು

ಶವದ ಮನೆಯ ಮುಂದೆ ಸಾಲು ಕೊಯ್ಯಿಸಿಕೊಳ್ಳಲು ಕೈಯಲ್ಲೊಂದು ಚೀಟಿ
ಹೋದ ಜೀವದ ಬಾಯಲ್ಲಿ ಪಕಪಕ ನಗು

ಒಳಗೊಳಗೆ ನಗುತ್ತವೆ
ಶವಗಾರದ ಗೋಡೆಗಳು;
ಹೊರಗೆ ಕೂತು ಅಳುವವರ ಕಂಡು.
ಕೊಯ್ಯಲು ತಂದ ಕೋಳಿ
ಸುಮ್ಮನೆ ಕಾಳು ಮುಕ್ಕುವುದಿಲ್ಲವೇ?

ವೈದ್ಯನು,
ಮಾಂಸದಂಗಡಿಯ ಏಕನು
ಇಬ್ಬರೂ ಒಂದೇ
ಮಾಂಸ, ರಕ್ತ, ಬೋಟಿ, ಕಲೀಜ
ಇವುಗಳದ್ದೇ ವಿಲೇವಾರಿ
ಒಮ್ಮೊಮ್ಮೆ ಎಲ್ಲರೂ ಕಟುಕರೆ

ಬಗೆದ ಎದೆಯೊಳಗೆ
ನೆಟ್ಟ ಗುಲಾಬಿಯ ಗಿಡ
ಗೆರೆ ದಾಟಿದ್ದಕ್ಕೆ ಮುರಿದ ಮುಳ್ಳು
ಮಗುವಿನ ಪಾದ
ದುಡ್ಡು ಹೆಸರು ಆಸೆ ಹೀಗೆ
ಏನೇನೋ ಸಿಗುತ್ತಲೇ ಇರುತ್ತವೆ
ಎಣಿಸಲು ನಿಂತ ಕೊಯ್ಯುವವನ ಕೈಗಳು ನಡುಗುತ್ತವೆ

ಮೂರೇ ಮೂರು ಹೊಲಿಗೆ
ಮೀಟರು ಬಟ್ಟೆ
ಸುಡಲು ಒಂದು ಪಾವು ಬೆಂಕಿ
ಮುಗಿಸುವ ಅವಸರಕ್ಕೆ ಲೆಕ್ಕಗಳು ಕಡಿಮೆ

ಮನೆಗೆ ಹೊರಟವರ ಮನಸ್ಸಿನಲ್ಲಿ
ಸ್ನಾನ ಮಡಿಯ ಯೋಚನೆಗಳು
ಸತ್ತವರ ಮನೆಯಲ್ಲಿ
ದೀಪ ಉರಿಯುತ್ತದೆ
ಕತ್ತಲೆ ಕಳೆಯಿತೆಂಬ ಲೆಕ್ಕಕ್ಕೂ?
ಬದುಕಿದ್ದನ್ನು ಮರೆಮಾಚುವ ಆತುರಕ್ಕೊ?
ಇದು ಬರೀ ಬದುಕಿದವರ ದುನಿಯಾ.

3. ಪಾಪದ ತುದಿ ಗುರುತುಗಳು

ಆಸ್ಪತ್ರೆಯ ಮುಂದಿನ
ಕಸದ ಬುಟ್ಟಿಯಲ್ಲಿ
ಎಳೆಮಾಂಸದ ತುಂಡಗಳ
ಕೊನೆಯ ಉಸಿರು

ಶಾಲೆ ಹೆಸರಿನ
ದೊಡ್ಡ ಕಟ್ಟಡಗಳಿಂದ
ಮೊಗ್ಗು ಜಗಿಯುವ
ಅಮಾನವೀಯ ಸದ್ದು

ಘಮ್ಮೆನ್ನುವ ಬಟ್ಟೆ ತೊಟ್ಟವನು
ಆಫೀಸಿನಲ್ಲೇ
ರವಿಕೆ ಮೇಲಿನ ಕಸೂತಿ ಹರಿಯುತ್ತಾನೆ
ಹಲ್ಲು ಕಚ್ಚಿದ ಸದ್ದು ಆಚೆಗೆ!

ಅಡುಗೆ ಮನೆಗೆ
ಅವಳ ಬೂದಿ ನೋಡುವ ಸಂಕಟ
ಹೊರಹೋದ ಆತನ
ಕೈಯಲ್ಲಿ ಸೀಮೆಎಣ್ಣೆ ವಾಸನೆ

ಅವಳೆಂದರೆ ಇಲ್ಲಿ
ಹೊಕ್ಕುಳ, ತುಂಬಿದೆದೆ
ಉಳಿದಿದ್ದು ಬರೀ ಮಾತಿಗೆ
ಸುಲಿದು ತಿನ್ನುವ ಮೋಸಕೆ

ಬಿಡಿ, ಸುಳ್ಳೆ ನಟಿಸಬೇಡಿ
ಆಕೆ ಪ್ರತಿ ಉಸಿರೂ ಓದಬಲ್ಲಳು
ಪಾಪದ ಭರ್ತಿಗೆ ಚಿಟಿಕೆಯಷ್ಟು ಬಾಕಿ
ನಮಗೆ ನಾಳೆಗಳಿಲ್ಲ..

4. ನಮ್ಮ ನಿಮ್ಮ ನಡುವೆ..

ಬೇಲಿಗಳನ್ನು ನೆಟ್ಟುಕೊಂಡು
ಬದುಕುತಿದ್ದ ದಿನಗಳು
ಎಂದೊ ಮುಗಿದು ಹೋಗಿವೆ

ಬೇಲಿಯಾಚೆ ಕನಿಷ್ಠವಾದರೂ
ಕಾಣಬಹುದಿತ್ತು
ಒಂದು ಪರಿಚಿತ ಕಾಳಜಿ
ಇಲ್ಲವೇ
ಅಪರಿಚಿತ ನಗುವನ್ನು..

ಬೇಲಿ ಕೆಡವಿ
ಕಟ್ಟಲಾಗಿದೆ ಗೋಡೆ
ಬಳಸಲಾಗಿದೆ ಗಟ್ಟಿ ಕಬ್ಬಿಣ ಸಿಮೆಂಟು
ಬಳಿಯಲಾಗಿದೆ ಬಣ್ಣ

ಗೋಡೆಗಳೂ ಕೂಡ ಇವೆ
ಈಗ ನಮ್ಮ ಸಾಧನೆಗಳ ಲೆಕ್ಕಕ್ಕೆ!

ಬದುಕೊಂದು ಜೈಲು
ಸದಾ ಬೆನ್ನಹಿಂದೆ ಬಿಗಬಾಸ್ ನ
ಕ್ಯಾಮೆರಾಗಳ ಕಾವಲು
ಒಂದು ನಗು ಹಂಚಲು ಕೂಡಾ
ಆಧಾರ್ ಕಾರ್ಡಿನ ಅಂಥೆಟಿಕೆಷನು

ಯಾರೊ ರೂಮಿನಲ್ಲಿ
ಕೂಡಿಹಾಕಿದಂತಹ ಬದುಕು
ಉಸಿರುಗಟ್ಟಿಸಿಕೊಂಡು
ಬದುಕುವುದು ಒಂದು ಫ್ಯಾಷನ್ನು

ಗೋಡೆ ಕೆಡಿವಿಕೊಳ್ಳುವುದನು
ಭಾವಿಸಲಾಗಿದೆ
ನಮ್ಮತನದ ಸೋಲು

ಗೆಳೆಯ
ಇರಲೊಂದು ಚೆಂದದ ಕಿಟಕಿ
ನೀನೆ ಕಟ್ಟಿಕೊಂಡ ಗೋಡೆಗಾದರೂ

ಬೀಸಲಿ ತಂಗಾಳಿ
ಕಾಣಲಿ
ಅರಳಿದ ರಂಜೆಯ ಹೂವು
ಚಿಗುರು ಹಕ್ಕಿಗಳ ಹಾಡು ಮಳೆ
ನಡು ಮಧ್ಯಾಹ್ನದ ಬಿಸಿಲು…

5. ಬೋನ್ಸಯ್ ಮಕ್ಕಳು

ಗಾಜಿನ ಪರದೆಯ ಆಚೆ
ಗೇಣುದ್ದುದ ತೆರೆದ
ನಾಜೂಕಿನ ಕಪಾಟುಗಳಲ್ಲಿ
ಕೂತಿದ್ದವು, ಅವು!
ಒಮ್ಮೊಮ್ಮೆ ನಕ್ಕಂತೆ,
ಬಿಕ್ಕಳಿಸಿದಂತೆ
ವ್ಯಂಗ್ಯದ ಕೇಕೆ
ಮತ್ತೆ ಮೂದಲಿಕೆಯು!

ಊರಿನ ಅಗಸಿಯ
ದೊಡ್ಡ ಆಲದ ಮರ,
ತೋಟದ ಪೇರಲ;
ಹೂವಿನ ಕಂಟಿ
ಕೆಲವುದರ ಹೆಸರೆ ಗೊತ್ತಿಲ್ಲ!
ಆಕಾರಗಳು ಅದರವೇ;
ಗಾತ್ರ ಇಷ್ಟಿಷ್ಟೇ
ಕಪಾಟು ಬಯಸಿದಷ್ಟೇ!

ಬೇರಿಗೆ ಕತ್ತರಿಯಂತೆ
ಮತ್ತೆ ಬಿಗಿದ ತಂತಿ,
ನಿತ್ಯ ಕತ್ತಲೆಯ ವಾಸ
ಎಂದಾದರು ಹನಿ ನೀರು;
ಬಿಸಿಲ ಬದಲಿಗೆ
ವಿದ್ಯುತ್ ಬಿಸಿಯ ಜೋರು!
ಇರಲೊಲ್ಲದೆ
ಬೆಳೆಯಲೊಲ್ಲದೆ
ಮುರುಟಿದವು ಕೈ ಕಾಲು;
ಚೋಟು ಗೇಣಿನಷ್ಟೇ ದೇಹ
ಹೊತ್ತುಕೊಂಡ ಬಾಳು!

ಗೇಣು ಕಪಾಟಿನಲ್ಲಿ
ಮುದುರಿಕೊಂಡ ಪ್ರಕೃತಿ;
ಮತ್ತೆ ನೆನಪಾಗಿದ್ದು
ನನ್ನದೇ ಮಕ್ಕಳ ಸ್ಥಿತಿ.
ಬ್ಯಾಗು ಹೊರುತ್ತಾ
ಹೋಂ ವರ್ಕ್ ತಿದ್ದುವ;
ಆಟ ಮರೆಯುತ್ತಾ
ಅಂಕ ನೆಕ್ಕುವ;
ಜಗತ್ತು ಮರೆತು
ಗೂಡು ಸೇರುವ
ಬೋನ್ಸಾಯ್ ಮಕ್ಕಳು.

6. ನೆನಪುಗಳನ್ನು ಕೊಲ್ಲಬಹುದೇ?

ಈಗೀಗ ಅನಿಸುತ್ತಿದೆ
ಏಸೊಂದು ದಿನಗಳಾಯ್ತು
ಮನಸೋ ಇಚ್ಚೆ ಬೆಳೆದರೂ
ಈ ಹಾಳು ನೆನಪುಗಳನ್ನು
ನಾನೇಕೆ ಮಟ್ಟಸಗೊಳಿಸಲಿಲ್ಲ?

ದಡದಲ್ಲಿ ಕೂತು
ಬೊಗಸೆಯಲ್ಲಿ ಎತ್ತಿ ಎತ್ತಿ
ನೀರಿಗೆ ಎಸೆಯುತ್ತೇನೆ
ಮನೆಗೆ ಬಂದು ನಲ್ಲಿ
ತಿರುವಿದರೆ ನಳದಿಂದ
ಅದೇ ನೆನಪುಗಳ ಸುರಿತ

ಸುರಿದು ಹರಿದು
ಮನೆಯ ಮುಂದಿನ
ಹೂವಿನ ಗಿಡದ ಪಾದ ಮುಟ್ಟುತ್ತವೆ
ಓ ಎಲ್ಲಾ ಮುಗೀತು ಎಂದು
ಎರಡು ದಿನ ನಿರಮ್ಮಳವಾಗುವ
ಹೊತ್ತಿಗೆ
ಗಿಡ ಬಿಟ್ಟ ಹೂವಿನಲ್ಲಿ
ನೆನಪುಗಳು ಹಲ್ಲುಕಿರಿಯುತ್ತವೆ

ಸಿಟ್ಟು ನೆತ್ತಿ ಮುಟ್ಟುತ್ತದೆ
ಹೂವನ್ನು ಕಿತ್ತು
ಚಾಕುವಿನಿಂದ ತುಂಡು ತುಂಡು
ಮಾಡಿ ಎಸೆಯುತ್ತೇನೆ
ಹತ್ತು ನೆನಪುಗಳು ಈಗ ನೂರಾಗಿ
ಅಣಕಿಸುತ್ತಿವೆ

ನಾನು ಮತ್ತೇನು ಮಾಡಬಹುದು
ಎಸೆಯಬಹುದು ಸುಡಬಹುದು
ಜಜ್ಜಿ ಹಾಕಬಹುದು ಇಲ್ಲವೆ
ಮತ್ತಷ್ಟು ಸಣ್ಣ ತುಂಡುಗಳನ್ನು ಮಾಡಿ
ಹೂಳಬಹುದು!

ನೆನಪುಗಳನ್ನು ಕೊಲ್ಲಬಹುದೇ
ಕೇಸುಗಳು ದಾಖಲಾಗುತ್ತವೆಯೇ?
ದೂರು ಕೊಡಬೇಕಾದ ಅವಳೇ
ಮತ್ಯಾರದೊ ಕೈಹಿಡಿದು
ನಡೆದಿರಬಹುದು ಇಲ್ಲವೇ
ಇಂಥದ್ದೆ ಒಂದು ಕವನ ಬರೆದುಕೊಂಡು
ಹಗುರಾಗಿರಬಹುದು..

ಒಂದು ಕೊಂದರೆ ನೂರು ಹುಟ್ಟುತ್ತವೆ
ರಾಜಿಯಾಗದೇ ಮತ್ತೆ ಮತ್ತೆ ಉಳಿಯುತ್ತವೆ..

7. ಹೆಜ್ಜೆಗಳು

ಜೇಬಿನಲ್ಲಿ ಕದ್ದ ಬೆಲ್ಲ
ಆಗಾಗ ಕೇಳುವ-
ಹೆಂಚು ಹೊದ್ದ ಶಾಲೆ ಗಂಟೆ ಸದ್ದು,

ಕಡು ಕಪ್ಪಲ್ಲಿ ಬೆದರಿ
ಅವಿತು ಮಲಗಿದ್ದಾಗಲೇ
ಕಿಟಕಿಯಲಿ‌ ಕದ್ದು ನೋಡುವ ಹಗಲು,

ರಾತ್ರಿ ಹೊಸಕಿ ಹಾಕೆಂದು
ಆಕೆ ದುಂಬಾಲು ಬೀಳುತ್ತಾಳೆ
ನಸುಕಿನ ಪೇಟೆಗೆ ಹಠವಿಡಿದು,

ಎಂದೋ ಬಿದ್ದು‌ ಹೋದ ಮಳೆ
ಈಗ ಗೀಚಿದೆ ಕುಂಟಲಿಪಿ
ಓದುವುದೊ ಮರೆಯುವುದೊ ಗೊತ್ತಿಲ್ಲ,

ಅದೀಗ ಎಲ್ಹೊಯ್ತು ಏನಾಯ್ತು!?
ಹುಡುಕುವವನ ಗಡ್ಡದಲಿ ಬಿಳಿ ಕೂದಲು!

‍ಲೇಖಕರು Admin

November 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: