‘ಕವಿತೆ ಬಂಚ್‌’ನಲ್ಲಿ ಸತೀಶ ಕುಲಕರ್ಣಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಸತೀಶ ಕುಲಕರ್ಣಿ

ಸತೀಶ ಕುಲಕರ್ಣಿ, ದಲಿತ ಬಂಡಾಯ ಚಳವಳಿಯ ಮುಖ್ಯ ಕವಿಗಳಲ್ಲೊಬ್ಬರು. ನಿವೃತ್ತ ಹೆಸ್ಕಾಂ ಉದ್ಯೋಗಿ. ಸದ್ಯ ಹಾವೇರಿಯಲ್ಲಿ ವಾಸ. ಒಡಲಾಳ ಕಿಚ್ಚು, ವಿಷಾದಯೋಗ, ಗಾಂಧಿ ಗಿಡ, ಕಂಪನಿ ಸವಾಲ್ ಹಾಗೂ ಸಮಯಾಂತರ ಇವರ ಕವನ ಸಂಕಲನಗಳು.

ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಇಂಗಳೆ ಮಾರ್ಗ, ಜುಲೈ ೨೨, ೧೯೪೭, ಸಾವಿತ್ರಿ ಬಾಯಿ ಫುಲೆ ಹಾಗೂ ದಂತ ಪುರಾಣ ವೈಚಾರಿಕ ಚಲನಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ.

1. ನಾನು ನನ್ನ ತೋಟ

ಚಂಡು ಗೌರಿ ಗುಲಾಬಿ ಹೂ
ನಾಲಿಗೆ ಚಾಚಿದೆ ದಾಸವಾಳ

ನನ್ನ ಕಾಂಕ್ರೆಟ್ಟು ಮನೆಯ
ಇಕ್ಕೆಲು ಕಿರು ಅಂಗಳದಲ್ಲಿ
ಬಳ್ಳಿ ಬಾಲ ಏರಿ ಇಣುಕುತಿದೆ

ಪೇಪರ ಪಾತರಗಿತ್ತಿ
ಈಟು ತೋಟದಲಿ ಈಜುತಿದೆ
ಪುಟ್ಟ ಪಕ್ಕಗಳಲಿ ಹುಟ್ಟು ಹಾಕಿ

ಆಗಾಗ ಕೀಳುತ್ತೇನೆ
ಕರಕಿ ಕಸ ತೆಗೆದು, ಹಸನ ಮಾಡುತ್ತೇನೆ
ಹನಿಸುತ್ತೇನೆ ಚೊಂಬು ನೀರು

ಕಾವಲಿಗೆ ಕಂಪೌಂಡು
ಮುಚ್ಚಿ ತೆರವ ಉಕ್ಕುಗೇಟು
ದನಕರುಗಳ ಭಯವಿಲ್ಲ
ಕಾಯಲಂಥ ಫಸಲೂ ಇಲ್ಲ

ನನ್ನ ಹಾಗೆ ನನ್ನ ತೋಟ
ಇದು ನನ್ನ ಸಣ್ಣ ಲೋಕ

2. ಅಡ್ಡ ಗೋಡೆಯ ಮೇಲಿನ ಬೆಕ್ಕು

ಅತ್ತ ಇತ್ತ
ಎತ್ತ ಜಿಗಿಯುವುದೊ ಬೆಕ್ಕೊಂದು
ಅಡ್ಡ ಗೋಡೆಯ ಮೇಲೆ

ಹೂ ಹೆಜ್ಜೆ, ಮೃದು ಕೊರಳು
ನಿಂತು ನಡೆವ ಹೊರಳು ನೋಟ
ಬಡವಾರಿಯ ನಡಿಗೆ
ಗೋಡೆಗೂ ಪುಲಕ

ನಿದಿರೆ ಬಿಟ್ಟು
ಅಂಡೆಲೆವ
ಕಿಡಕಿ ಫಡಕು ಕಳ್ಳದಾರಿಯಲಿ
ನಿತ್ಯ ಕಳ್ಳಾಟ
ಬಿಟ್ಟು ಬಿಡದ ನೂರು ತೊಡಕು

ಹಾಲು ಜೀವಧಾರೆ,
ಅರೆ, ಇದು ನಿತ್ಯ ಮಾಂಸಹಾರಿ
ಈ ಮಾಟ ಮಾರಿ
ಗೋಡೆಗಳ ಮೇಲೆ
ಸದಾ ನಡಿಗೆ
ಎತ್ತ ಬೇಕತ್ತ ಹಾರುವ ತುಡಿಗಿ

ಕರಿ ಬಿಳಿ ಕಂದು
ನಾನಾ ಬಣ್ಣ ಕುರುಜು
ಕದ್ದು ಕೇಳುವ ಸಿದ್ಧ ಕಿವಿ
ತೀಡಿದಷ್ಟು ನಿಮಿರು ನಿಗುರು ಬಾಲ

ಒಂದೇ ನಾ ಮನೆ
ಒಂದೇ ನಾ ಸಂಸಾರ
ಏಳೇಳು ಗೃಹ ಸಂಚಾರಿ
ಬೇಕೆಂದರೆ ಎಲ್ಲ ಬಿಟ್ಟು ಪರಾರಿ

ಎತ್ತಿ ಎತ್ತೊಗೆದರು
ಗಿರಕಿ ಸುತ್ತಿ ನೆಲಕೆ ಮತ್ತೆ ನಾಲ್ಕೂ ಕಾಲು
ಮತ್ತೆ ನಡೆಯಲು ಸಿದ್ದ ಜಿಗಟು ಜೀವ

3. ಯುದ್ಧ ಮುಗಿದ ಮೇಲೆ

ಯಾರು ಗೆದ್ದರು
ಯಾರು ಸೋತರು
ಕೊನೆಗೆ ಸೋಲುವವ ಮನುಷ್ಯನೇ

ಖಡ್ಗ, ಬಾಂಬು ಗ್ರೆನೆಡೂ
ಯಾವುದೂ ಗೆಲ್ಲದು
ಕೊಲ್ಲುವವ ಕೂಡ

ಹಚ್ಚಿದ ದೀಪಗಳೆಲ್ಲ
ಆರಿ ಹೋದ ನಂತರ ಉಳಿವುದು ಕತ್ತಲು.
ದೂರ ಅನಂತದಾಚೆ ಒಂದಿಷ್ಟು ಬೆಳಕು
ಉಳಿವ ಹಗಲು ರಾತ್ರಿ ಲೋಕದೆರಡು
ಪರದೆಗಳು ನೋಡಾ

ದೀಪ ಬೆಂಕಿ
ಎರಡೂ ಒಂದೇ ಅಲ್ಲ
ಒಂದು ಬೆಳಕು
ಇನ್ನೊಂದು ಸುಡತಿ

ಶಿರಿಯಾ ಲೆಬನಾನ್
ಇರಾನ್ ಇರಾಕ
ನಮ್ಮ ಇಂಡಿಯಾ ಪಾಕಿಸ್ತಾನ
ಎಲ್ಲ ಯುದ್ಧ ಅಖಾಡಾಗಳು

ಯುದ್ಧ ಮುಗಿದ ಮೇಲೆ
ಕಾದಿದ ನೆಲ, ಕವಿವ ಪಶ್ಚಾತಾಪ
ದಗ್ಧನಾಶ
ಮರಣ ಮಹಾಶಾಲೆ ಸೂತಕ
ಇವಂತೂ ಅಂತಿಮ ಸತ್ಯ

4. ರೂಪ ರೂಪಗಳನು ದಾಟಿ

ಆಕಾಶದೆತ್ತರಗಳು
ನೆಲಕಚ್ಚಿ
ಅಬ್ಜ ಕೋಟಿಗಳೆಲ್ಲ
ಕುಬ್ಜವಾಗುವ ಕಾಲವಿದು

ಕರುಣೆ ದಯೆ
ಹರಗಿ ಹಾಲಾಗಿ
ಸಂಬಂಧಗಳು ಸೂತಕದ
ಸರಕಾಗುವ ಹೊತ್ತಿದು

ದಿಕ್ಕು ದಿಕ್ಕುಗೆಳಲ್ಲ ಉರುಳಿ
ಕಾಲದ ಕಣ್ಕಿತ್ತು
ಮಣ್ಣು ಪಾಲಾದ ಹೊತ್ತಿದು

ಕೂಡಿ ಕಳೆದು
ಅಳೆದು ತೂಗುವುದು
ಕಾಲ ತಕ್ಕಡಿಯ ದಿನಗಳಿವು

ರೂಪ ರೂಪಗಳು ದಾಟಿ
ಕುರೂಪವೇ
ಹೊಸರೂಪ ತಾಳುವ ಹೊತ್ತಿದು

ಕತ್ತಲೆಯು ಹರಗಿ
ಬೆಳಕು ಬರುವ ಬೆರಗಿನ ಕಾಲವಿದು

5. ಎದೆಗೆ ತಾಕಿದ ಮಾತು

ಈ ಬಾರಿಯೂ
ದೆಹಲಿಯಲಿ ರಾಜಘಾಟಕ್ಕೆ ಹೋದಾಗ

ಮಂಜು ಹೊದ್ದು
ಮಲಗಿತ್ತು ದೇಶದ ರಾಜಧಾನಿ
ಹೆದ್ದಾರಿಗಳೆಲ್ಲ ಖಾಲಿ ಖಾಲಿ

ಮಿರಿ ಮಿರಿ ಕರಿಗಲ್ಲು ಗದ್ದಿಗೆ
ಹುಲ್ಲು ಹಾಸಿಗೆ ಹೊಚ್ಚು ಸುತ್ತ ಮುತ್ತ
ನಡುವೆ ಪಾವಟೆಯ ದಾರಿ
ಮೇಲೆ ಉರಿವ ಮಂದ ದೀಪ

ಲೋಕ ದಣಿದಿತ್ತು
ಜಗ ಜೀವ ಮಲಗಿತ್ತು

ತುಸು ದೂರ
ಗಾಂಧಿ ಪುಸ್ತಕಗಳ ಗೂಡಂಗಡಿಗೆ
ನೆನಪಿರಲೆಂದು
ಕೊಂಡೆ ಒಂದು ಪುಸ್ತಕವ

ಹಣ್ಣಾದ ಕಣ್ಣು
ಮುಕ್ಕಾಗದ ಮಗು ನಗು
ಸಮುದ್ರ ಬೀಸು ಭಾವದಂತೆ
ಕಂಡ ತಾತ ಗಾಂಧಿ !

ತಪ್ಪನೆ ಕೈ ತಪ್ಪಿ
ಬಿತ್ತು ನೆಲಕೆ ಪುಸ್ತಕ

ಬಾಗಿ ಸವರಿ ನವರಿ
ಎದೆಗಪ್ಪಿದೆ
ನಗುವ ಮಹಾತ್ಮನ

‘ಎತ್ತು ಸದಾ ಬಿದ್ದವರ’
ಎಂದಿತು ಎದೆಗೆ ತಾಕಿದ ಗಾಂಧಿ ಮಾತು

‍ಲೇಖಕರು Avadhi

May 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: