‘ಕವಿತೆ ಬಂಚ್‌’ನಲ್ಲಿ ಶಾರದಾ ಮುಳ್ಳೂರ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಡಾ ಶಾರದಾ ಮುಳ್ಳೂರ

ಡಾ. ಶಾರದಾ ಮುಳ್ಳೂರ ಈಗಾಗಲೆ ಕಾವ್ಯ ಕ್ಷೇತ್ರದಲ್ಲಿ ಹೆಜ್ಜೆ ಮೂಡಿಸಿದ ಹೆಸರು. ಜಪಾನಿ ಹಾಯ್ಕುಗಳು, ಕನ್ನಡ ಗಜಲ್‌ಗಳು, ಸಣ್ಣ ಕಥೆಯ ಬರವಣಿಗೆಯೊಂದಿಗೆ ಸಂಘಟನೆಯಲ್ಲೂ ಗುರ್ತಿಸಿಕೊಂಡವರು. ಲೇಖಕಿ, ಪ್ರಕಾಶಕಿ, ಉಪನ್ಯಾಸಕಿಯಾಗುವುದರೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯೆಯಾಗಿ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟವರು.

ಏಕಾಂಗಿ, ಮಂದಹಾಸ, ನೀರಜ, ಕನ್ನಡಿ ಮುಂತಾದ ಕವನ ಸಂಕಲನಗಳು, ಮೈಲಾರ ಮಹಾದೇವಪ್ಪನವರು (ಲಾವಣಿ), ಆರೂಢ ಪರಂಪರೆ (ಗದ್ಯ) ಅಲ್ಲದೇ ಅನೇಕ ಸಂಪಾದನಾ ಗ್ರಂಥ ಹೊರತಂದಿದ್ದಾರೆ. ಸದ್ಯ ಜಮಖಂಡಿ ತಾಲೂಕಿನ ಹನಗಂಡಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

೧) ನೀನೊಂದು ಗಜಲ್

ಮುಟ್ಟಬಿಟ್ಟ ಮೇಲು ಬಹುಕಾಲ ಲಯಗಾರಿಕೆಯಲಿ ಕಾಡಿದವಳು.
ಶಕ್ತಬಾಹು ಬಳಸಿ ಸುಕೋಮಲವಾಗಿ ಬೆಳದಿಂಗಳಲಿ ತೀಡಿದವಳು.

ಪ್ರೀತಿ ಚಿತ್ತಾರದ ಸೀರೆಯಂಚಿಗೆ ಸಂಗೀತದ ಸೆರಗ ಹೊದ್ದವಳು.
ಗುಪ್ತಗಾಮಿನಿ ಯಾವ ಕ್ಷಣದಲೊ ಟಿಸಿಲೊಡೆದ ಮಿಂಚಿವಳು.

ನೋವು-ವಿಷಾದದ ಸೋತ ತಂತಿಗೆ ಮತ್ತೆ ಮಧುಸವರಿ ಮೀಟಿದವಳು.
ಪ್ರೀತಿ ತೋಟಕೆ ಕರೆದು ಆಳ-ನಿರಾಳದ ಒಳಸುಳಿಯ ತೋರಿದವಳು.

ಅಂಬೆಗಾವಲಿಡುತ ಹೊಸಿಲು ದಾಟಿ ಬಂದ ನೆರೆಮನೆ ಮಗುವಿನಂತವಳು.
ಪ್ರತಿಮೆ-ರೂಪಕ-ಸಂಕೇತದ ಹೆಜ್ಜೆಗೆ ಗೆಜ್ಜೆ ಕಟ್ಟಿ ನುಡಿಸಿದವಳು.

ಕಣ್ಣ ಬಾಣದಿ ವಿಸ್ಮಯದ ಹೂ ಬಿಟ್ಟು ಗಾಯ ಕೊರೆದವಳು.
ರಸ ತುಂಬಿದ ಕಳಶದೆದೆಗೆ ‘ಶಾಮು’ ಅನೂಹ್ಯ ಭಾವಗಳ ಗಜಲ್ ಇವಳು.

೨) ಸತ್ತೇ ಹೋಗುತ್ತೇನೆ

ಮಾತು ಕೇಳಲು ಅವನ ಸನಿಹ ಹೋಗುತ್ತೇನೆ.
ಶಬ್ದಮಂತ್ರವಾದಂತೆ ತಕ್ಷಣ ಕರಗಿ ಹೋಗುತ್ತೇನೆ.

ನೋಟ ಬೀಳಲಿ ಎಂದು ಎದುರು ಹೋಗುತ್ತೇನೆ.
ನೆರಳುಗಳು ಹಾಯ್ದರೂ ಸಾಕು ಕಂಪಿಸಿ ಹೋಗುತ್ತೇನೆ.

ಸುರಿವ ಪರಿಮಳಕ್ಕೆ ಹಿಂಬಾಲಿಸಿ ಹೋಗುತ್ತೇನೆ.
ಸುಗಂಧದ ಗುಂಗಿನಲ್ಲೇ ನಾ ಮುದುಡಿ ಹೋಗುತ್ತೇನೆ.

ಮೈಯೆಲ್ಲ ಕಣ್ಣಾಗಿ ಚೆಲುವ ನೋಡ ಹೋಗುತ್ತೇನೆ.
ಜಗವೆಲ್ಲವೂ ಅವನಲ್ಲೇ ಕಂಡು ಕದಡಿ ಹೋಗುತ್ತೇನೆ.

ಅವನಾಟದ ಸೂತ್ರ ತಿಳಿಯದೆ ಸೋತು ಹೋಗುತ್ತೇನೆ.
ಹಲವು ಪರಿ ಕಾಡಿದಾಗ ‘ಶಾಮು’ ಕಳೆದೇ ಹೋಗುತ್ತೇನೆ.

೩) ಮುಟ್ಟಿ ಬಿಟ್ಟರೆ

ಎಷ್ಟೋ ದಿನಗಳಿಂದ ನೋಡುತ್ತಲೇ ಬಂದಿದ್ದೇನೆ
ಮುಟ್ಟಿ ಬಿಟ್ಟರೆ ಇಬ್ಬನಿ ಒಡೆದು ಹೋಗುವದೆಂದು

ಎಷ್ಟೋ ದಿನಗಳಿಂದ ಹೇಳದೇ ಕಾಯ್ದುಕೊಂಡಿದ್ದೇನೆ
ಗುಟ್ಟು ಹೇಳಿ ಬಿಟ್ಟರೆ ಹಾಗೇ ಗುಲ್ಲಾಗುವದೆಂದು

ಎಷ್ಟೋ ದಿನಗಳಿಂದ ಅಂತರ ಅಳೆದುಕೊಂಡಿದ್ದೇನೆ
ಗೊತ್ತಾಗಿ ಬಿಟ್ಟರೆ ಕನಸುಗಳಿಗೆ ಚ್ಯುತಿ ಬಂದೀತೆಂದು

ಎಷ್ಟೋ ದಿನಗಳಿಂದ ಚಿಕ್ಕ ಸ್ಪರ್ಶ ಉಳಿಸಿಕೊಂಡಿದ್ದೇನೆ
ಅವುಗಳನ್ನು ತೊರೆದೆರ ಜೀವಕೆ ಇನ್ನೇನಿದೆಯೆಂದು

ಎಷ್ಟೋ ದಿನಗಳಿಂದ ನಿನ್ನಂತರಂಗದ ಆಳ ತಿಳಿದುಕೊಂಡಿದ್ದೇನೆ
ಹೇಳಿಬಿಟ್ಟರೇ ‘ಶಾಮು’ ಹೊರಬಿದ್ದು ಎಲ್ಲ ಧೂಳಾಗಬಹುದೆಂದು.

೪) ಕೊರಳಗುಂಟ
ದಟ್ಟವಾಗುವ ಇರುಳಿಗೆ ಕಾಯುತ್ತ ನಿಂತಿದ್ದು ನೆನಪಿದೆಯೇ?
ಎದುರು ಬಂದಾಗ ಎದೆ ಬಡಿತ ನಿಂತದ್ದು ನೆನಪಿದೆಯೇ?

ಎಲ್ಲ ಗೊತ್ತಿದ್ದರೂ ಅರಿಯದಂತೆ ನಟಿಸಿದ್ದು ನೆನಪಿದೆಯೇ?
ಬದುಕಿನ ಸತ್ಯ ತೆಕ್ಕೆಯಲ್ಲಿ ಬಿಗಿಹಿಡಿದದ್ದು ನೆನಪಿದೆಯೇ?

ಭ್ರಮೆಯ ಪೊರೆ ಕಳಚಿ, ಹೊಸ ಜೀವ ತಳೆದದ್ದು ನೆನಪಿದೆಯೇ?
ರಾತ್ರಿ ಸುರಿದ ಜೇನಮಳೆಗೆ ತೊಯ್ದು ನಕ್ಕಿದ್ದು ನೆನಪಿದೆಯೆ?

ಕೊರಳ ಹಿಂಭಾಗದಗುಂಟ ಹೂ ರಾಶಿ ಹರವಿದ್ದು ನೆನಪಿದೆಯೇ?
ಇಡಿ ದೇಹವನೆ ಹೂ ಮಾಡಿ ಎತ್ತಿ ಆಡಿದ್ದು ನೆನಪಿದೆಯೇ ?

ಬೇಕು ಬೇಕೆಂಬಾಟಕೆ ಸಾಕುಪದ ಮರೆತದ್ದು ನೆನಪಿದೆಯೇ ?
‘ಶಾಮು’ವಿನ ಪಿಸುಮಾತಿಗೆ ಜಗವೆದ್ದು ಕುಳಿತಿದ್ದು ನೆನಪಿದೆಯೇ?

‍ಲೇಖಕರು Admin

July 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: