ಕವಿತೆಯ ಕಣ್ಣಲ್ಲಿ ಕೆಂಡದ ಮಳೆ..

ಶ್ರೀದೇವಿ ಕೆರೆಮನೆ

ಅದೆಲ್ಲಿತ್ತೋ ಆ ಸಾಲು..
ಹತ್ತನೇ ತರಗತಿಯ ವ್ಯಾಕರಣ ಪಾಠದ ಮಧ್ಯೆ
ತಣ್ಣಗೆ ತಲೆಯೊಳಗೆ ಕುಳಿತು ಜಗ್ಗತೊಡಗಿತು

ತರತಮ ಬದಲಾವಣೆಯನ್ನು
ಈ ಮಕ್ಕಳಿಗೆ ಇಂಗ್ಲೀಷ್‌ನಲ್ಲಿ
ಹೇಳಿಕೊಡುವುದು ಅಷ್ಟೊಂದು ಸುಲಭ ಎಂದುಕೊಂಡಿರೋ
ನೀವಲ್ಲೇ ಎಡುವುತ್ತಿರುವುದು, ತಿಳಿದಿರಲಿ
ಕನ್ನಡದ ತರತಮ ಬದಲಾವಣೆಯೇ
ಜಗತ್ತಿನ ಅತಿಕಷ್ಟದ ಕೆಲಸವೆಂದು ಇವರೆಲ್ಲ ತಿಳಿದಿರುವಾಗ
ಇಂಗ್ಲೀಷ್‌ನ ತರತಮ ಬದಲಾವಣೆಯನ್ನು
ಹೇಳಿಕೊಡುವುದಾದರೂ ಹೇಗೆ
ಎಂಬ ಮೂಲ ಪ್ರಶ್ನೆಯನ್ನೂ ಹಿಮ್ಮೆಟ್ಟಿಸಿ
ಇನ್ನೊಂದು ಸಾಲು ತಲೆಯೊಳಗಿನ ಕಪಾಟಿನಿಂದ
ಹೊರನೆಗೆದು ಮುನ್ನೆಲೆಗೆ ಬಂದು ನಿಲ್ಲುತ್ತದೆ.

ಕರ್ತೃ, ಕರ್ಮ ಮತ್ತು ಕೊನೆಯಲ್ಲಿ ಕ್ರಿಯಾಪದವನ್ನಿಡುವ
ಕನ್ನಡದಂತೆ ಸಲೀಸಲ್ಲ ಇಂಗ್ಲೀಷು
ಇಲ್ಲಿ ಕರ್ತೃ ಆದ ಮೇಲೆ ಕ್ರಿಯಾಪದವೇ
ಕರ್ಮದ್ದೇನಿದ್ದರೂ  ನಂತರದ ಸ್ಥಾನ
ಎಂದೆಲ್ಲ ಮಕ್ಕಳ ತಲೆಯೊಳಗೆ ವ್ಯಾಕರಣವನ್ನು
ಬಲವಂತವಾಗಿ ನುಗ್ಗಿಸಿ
‘ಕರ್ಮಣ್ಯೇ ವಾಧಿಕಾರಸ್ತೇ’ ಎನ್ನುತ್ತ
ಫಲಾಫಲಗಳನ್ನೆಲ್ಲ ಬದಿಗೊತ್ತಿ
ಬರಿದೇ ಕೆಲಸವನ್ನಷ್ಟೇ ಮಾಡಲು ಬೋಧಿಸುವ
ಕರ್ಮಸಿದ್ಧಾಂತದ ಈ ನಾಡಿಗೆ
ಇಂಗ್ಲೀಷ್ ಅಲ್ಲವೇ ಅಲ್ಲ ಎನ್ನಿಸಿ
ಎಂತಹುದ್ದೋ ಕಿರಿಕಿರಿ ಮನಸ್ಸಿಗೆ
ಇತ್ತ ಈ ಸಾಲು ಅದೇಕೋ  ಕಾದು ನೋಡುವ
ತಂತ್ರ ಅನುಸರಿಸುತ್ತ ಸುಮ್ಮನಾಗಿದೆ

ಕರ್ತೃವನ್ನು ಕರ್ಮವನ್ನಾಗಿಸಿ
ಕರ್ಮವನ್ನು ಕರ್ತೃವಿನ ಸ್ಥಾನಕ್ಕೆ ತರುವ
ನನ್ನ ಮಾತು ನನಗೇ ಹಾಸ್ಯಾಸ್ಪದ ಎನ್ನಿಸಿ
ಕರ್ಮಕ್ಕೆ  ಕರ್ತೃವಿನ ಮಹತ್ವ ನೀಡಿದ
ನಮ್ಮ ಬೇಜವಾಬ್ಧಾರಿ ವರ್ತನೆಗೆ
ನನ್ನೊಳಗೇ ಹುಟ್ಟಿಕೊಳ್ಳುತ್ತಿರುವ ನರಕ ಯಾತನೆಗೆ
ಫಲದ ನಿರೀಕ್ಷೆಯೇ ಬೇಡ ಎಂದ
ಕೃಷ್ಣನ ಮಾತನ್ನು ನಂಬಿ
ಕರ್ಮದ ಬೀಜ ಬಿತ್ತಿದವರೆಲ್ಲ ಈಗ
ಫಲವನ್ನುಣ್ಣುತ್ತಿರುವುದು ನೆನಪಾಗಿ
ಆ ಕರ್ಮದ ಫಲವೂ ವಿಷವಾದ ಸ್ಥಿತಿಗೆ
ಮನದ ತುಂಬ ಕೊರೆವ ವಿಷಣ್ಣತೆ
ಕವಿತೆಯಂತೂ ಕರ್ತೃವಿನ ನುಣಿಚಿಕೊಳ್ಳುವ,
ಎಲ್ಲವನ್ನೂ ಆಕ್ರಮಿಸಿಕೊಳ್ಳುವ ಕರ್ಮದ
ಗೋಸುಂಬೆತನಕ್ಕೆ ಮುದುಡಿ ಮೂಕ ಮೂಕ

ಕರ್ತೃ, ಕರ್ಮದ ಸ್ಥಾನ ಬದಲಿಸಿದ ಮೇಲೆ
ಜೊತೆಗಿರುವ ಕ್ರೀಯಾಪದ ಹಿಂದಿನದ್ದನ್ನು
ಮುಂದುವರಿಸಲಾಗದೇ ಮೊಂಡು ಹಿಡಿದು ನಿಂತು
ಸಹಾಯಕ್ಕೆ ಇನ್ನೊಂದು ಕ್ರಿಯಾಪದ ಬೇಕೇ ಬೇಕೆನ್ನುತ್ತ
ಸಹಾಯಕ ಕ್ರಿಯೆಗೊಂದು ಪದ ಬಂದ ಮೇಲೆ
ಆ ಕ್ರಿಯೆ ನಡೆದದ್ದು ಯಾರಿಂದ ಎಂಬುದನ್ನು
ಜಗತ್ತಿಗೇ ಬೊಬ್ಬಿರಿದು ಹೇಳಿದ ಮಾತಿಗೆ ಮರುಳಾಗಿ
ಮುಂದಿನ ಕರ್ಮಗಳೆಲ್ಲ ಸುಸೂತ್ರವಾಗಿ ಗದ್ದುಗೆಯೇರಿ…..

ಅರೆ, ಇದೇನಿದು?
ಯಾರೋ ಎದ್ದು ಹೊರ ನಡೆದಂತೆ
ಮೈಯ್ಯೊಳಗೆ ಹೊಕ್ಕಿದ ದೆವ್ವವೊಂದು ಉಚ್ಛಾಟನೆಯಾದಂತೆ
ಕರ್ತೃವನ್ನೇ ಕರ್ಮಕಾಂಡವನ್ನಾಗಿಸಿದ ನಿಮ್ಮ
ಕರ್ಮ ಸಿದ್ಧಾಂತವನ್ನು ನೀವೇ ಬೈತಿಟ್ಟುಕೊಳ್ಳಿ ಎನ್ನುತ್ತ
ಹೊರನಡೆದ ಕವಿತೆಯ ಕಣ್ಣಲ್ಲಿ ಕೆಂಡದ ಮಳೆ
ಅದೋ ಆ ತಿರುವಿನಲ್ಲಿ ಧುಮುಗುಡುತ್ತಿರುವ
ಕವಿತೆಯ ಕಾಲಿಗೆ ಬಿರುಗಾಳಿಯ ಶಕ್ತಿ
ನಾನು ಕರ್ಮವೋ, ಕರ್ತೃವೋ, ಕ್ರೀಯೆಯೋ
ಯಾವುದನ್ನೂ ತೀರ್ಮಾನಿಸಲಾಗದೆ ಹಿಂದುಳಿದ ಅಶಕ್ತೆ

‍ಲೇಖಕರು avadhi

December 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: