ಉಮಾ ಕವಿತೆಯ ಮೋಹಕ್ಕೆ ನೀವು ಸಿಲುಕಿದರೆ ಮತ್ತೆ ಹೊರಬರಲಾರಿರಿ ಹುಷಾರು! 

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಉಮಾ ಮುಕುಂದ್ ಅವರ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ಶಿವಕುಮಾರ ಮಾವಲಿ. ಕಾದು ಓದಿ 

 

ಕವಿತೆ ಹೊತ್ತು ಗೊತ್ತು ವಯಸ್ಸು ಎಲ್ಲಾ ಕೇಳಿ ಬರುತ್ತದೆಯೇ?

ಬರುತ್ತದೆ ಅಷ್ಟೇ

ಬದುಕನ್ನು ಗಾಢವಾಗಿ ಹೊದ್ದಿದ್ದರೆ ಮನಸ್ಸು ಕಲಕಿ ಹಾಕುವಂತೆ

ಕಳ್ಳ ಹೆಜ್ಜೆ ಹಾಕಿ ಬಂದುಬಿಡುತ್ತದೆ.

ಹಾಗೆ ರಾತ್ರೋರಾತ್ರಿ ಸದ್ದಿಲ್ಲದಂತೆ ಕವಿತೆ ಹೆಜ್ಜೆ ಹಾಕಿದ್ದು ಉಮಾ ಅವರೊಳಗೆ.

ಮುಕುಂದ್ ಹಿಡಿದ ಕ್ಯಾಮೆರಾ ಮುಂದೆ ರೂಪದರ್ಶಿಯಾಗಿ, ರೂಪದರ್ಶಿಯಾಗಿ ಕುಳಿತವರ ಜೊತೆ ಮಾತುಗಾತಿಯಾಗಿ, ಮುಕುಂದ್ ಸೆರೆ ಹಿಡಿದ ಚಿತ್ರಗಳ ಮೊದಲ ಕಣ್ಣಾಗಿ ಇದ್ದವರು ಉಮಾ. ಮನೆಯಲ್ಲಿ ಗಂಡ ಮುಕುಂದ್, ಮಗ ಪ್ರತೀಕ್ ಇಬ್ಬರೂ ಸೃಜನಶೀಲ ಬೆಳಕಿನ ಹಿಂದೆ ಹೆಜ್ಜೆ ಹಾಕಿದರೋ ಆಗ ತಾನೂ ಸರಸರನೆ ನಡೆದು ಅವರನ್ನು ಸೇರಿಕೊಂಡರು.. ಆದರೆ ಕವಿತೆಯ ಮೂಲಕ.

ಕವಿತೆಯ ಒಳಗೆ ಉಮಾ ಇದ್ದಾರೋ.. ಉಮಾ ಒಳಗೆ ಕವಿತೆಯೋ ಎನ್ನುವಷ್ಟು ಅಪಾರ ಕವಿತೆಗಳನ್ನು ನಮ್ಮ ಮುಂದಿಟ್ಟಿರುವ ಉಮಾ ಕವಿತೆಯ ಮೋಹಕ್ಕೆ ನೀವು ಸಿಲುಕಿದರೆ ಮತ್ತೆ ಹೊರಬರಲಾರಿರಿ ಹುಷಾರು!

ಕಡೇ ನಾಲ್ಕು ಸಾಲು

 

ಸುಡು ಬಿಸಿಲ ಹೊತ್ತು

ಕರೆಗಂಟೆಯ ಸದ್ದು

ಕಥೆ ಮುಗಿಯಲು ಇನ್ನು ನಾಲ್ಕೇ ಸಾಲು

ಮುಗಿಸಿಯೇ ತೆರೆದು ಬಾಗಿಲು

ನೋಡಿದರೆ ಬಂದವರು ತಿರುಗಿ

ನಡೆದಾಯ್ತು.

ನೆರೆ ಮನೆಯವರಂತೆಯೇ

ಇರುವ ಅಪರಿಚಿತರು

ಮರೆಯಾಗುವವರೆಗೆ

ನೋಡುತ್ತಾ ನಿಂತೆ

ಬಂದವರು ಯಾರು ?

ಯಾಕಾಗಿ  ಬಂದರು ?

ಪೋರ್ಚ್ನಲ್ಲಿ ನಿಂತ ಕಾರು

ತೆರೆಯದ  ಬಾಗಿಲು

ಏನೆಂದುಕೊಂಡರವರು ?

..ಕೂಗಬೇಕಿತ್ತು

ಕರೆಯಬೇಕಿತ್ತು

ಆಸರಿಕೆಗೆ ಕೊಟ್ಟು

ಕೂತು ಮಾತು

ಕೇಳಬೇಕಿತ್ತು

ಬಾಗಿಲು ಬಂದು

ಮಾಡಿ ಕಥೆ ತೆರೆದರೆ

ಕಡೇ ನಾಲ್ಕು ಸಾಲು

ನಾಪತ್ತೆಯಾಗಿತ್ತು.

 

ಆ..ನಂತರ

 

ಘಮ ಘಮ ಸಾರಿನ ವಾಸನೆ

ಸೊರ ಸೊರ ಉಣ್ಣುವ ಸದ್ದು

ಇದೊಂದು ದಿನ ಕಳೆದರೆ ಗೆದ್ದೆವು

  • ಮನೆಯವರ ಮಾತು

ನೆನ್ನೆ ಅಡಿಗೆ ಸುಮಾ..ರು

ಇವತ್ತು ಸಾರು ಸೂ..ಪರ್

-ಯಾರು ಹೇಳಿದ್ದು ?

ಮೊನ್ನೆಯಷ್ಟೇ ಡಿಮಾನಿಟೈಸೇಷನ್ ಆಯ್ತು

ಈಗ ಜಿಎಸ್ಟಿ ತಲೆನೋವು

-ಯಾರದೋ ಮಾತು

ಸುಬ್ಬಮ್ಮನ ಅಂಗಡಿ ಸಾರಿನ ಪುಡಿ ಬಿಟ್ಟರೆ ಇಲ್ಲ

– ಯಾರು ಹೇಳಿದ್ದು ?

ಇನ್ನೊಂದು ತಿಂಗಳಿಗೆ ಹೊಸಮನೆ ಒಕ್ಕಲು

ನೀವು ಬರಲೇ ಬೇಕು

-ಯಾರಿಗೆ ಆಹ್ವಾನ ?

ಓ.. ಅದಾ ಅದನ್ನು ಮಾರಿ ಹುಂಡಯ್

ತಗೊಂಡು ವರ್ಷವಾಯ್ತಲ್ಲಾ.. ಹಹಹ…

-ಯಾರ ನಗು ?

ಅವರ ಹತ್ತಿರ ಅಷ್ಟೊಂದು ಪುಸ್ತಕ ಇತ್ತಲ್ಲ..

ಎಲ್ಲ ಎನಾಯ್ತೋ ?

-ಯಾರು ಕೇಳಿದ್ದು ?

ಮೈಸೂರಿನ ಸೈಟು ಮಗನಿಗೊ

ಮತ್ತೆ ಈ ಮನೆ ?

-ಯಾರ ಪ್ರಶ್ನೆ ?

ಮೊನ್ನೆ ಮೊನ್ನೆ ಇನ್ನೂ

ಮನೆಗೆ ಬಂದವರನ್ನು

ಓಹೋಹೋ ಬನ್ನಿ ಬನ್ನಿ ಎನ್ನುತ್ತಿದ್ದ

ಆ…ಅವರು

ತಮ್ಮ ಮೆಚ್ಹಿನ ಮೋಹನವನ್ನು

ಮತ್ತೆ ಮತ್ತೆ ಸಾಭಿನಯ ಕೇಳಿ ಸವಿಯುತ್ತಿದ್ದ

ಆ…ಅವರು

ಈ..ಇದೇ ಟೀವಿಯಲ್ಲಿ ಕ್ರಿಕೆಟ್ ನೋಡುತ್ತಾ

ನೀರು ನಿದ್ರೆ ಮರೆಯುತ್ತಿದ್ದ

ಆ…ಅವರು

ಸೀರಿಯಲ್ ಹುಚ್ಹಿನ ಮುದ್ದಿನ ಮಡದಿಗೆ

ಸೀರಿಯಲ್ ಕಿಲ್ಲರ್ ಎಂದು ಕಿಚಾಯಿಸುತ್ತಿದ್ದ

ಆ…ಅವರು

ಓದಲಿಕ್ಕೆ ದೂರ ದೇಶಕ್ಕೆ ಹೋಗಿ

ಅಲ್ಲೇ ನೆಲೆಗೊಂಡ ಮಗಳ

ಬರುವಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದ

ಆ…ಅವರು

ಸಾರು ಒಂದಿದ್ದರೆ ಸಾಕು ಮೈಯೆಲ್ಲಾ

ಬಾಯಾಗಿ ಸೊರ ಸೊರ ಉಣ್ಣುತ್ತಿದ್ದ

ಆ…ಅವರು

ಕಾಲವಾಗಿ

ಇಂದಿಗೆ ಹನ್ನೆರಡು ದಿನ

ವಡೆ ಪಾಯಸ ಬರುತ್ತಿದೆ

ಇನ್ನೂ ಸಾರನ್ನವೇ ಮುಗಿದಿಲ್ಲವಲ್ಲಾ

-ಯಾರ ಧ್ವನಿ ?

ಒಳಗಿನಿಂದ ಉಮ್ಮಳಿಸಿದ

ಬಿಕ್ಕು ಯಾರದೋ

ಅಬ್ಬರದ ನಗುವಿನಲ್ಲಿ

ಅಡಗಿ ಹೋಗುತ್ತದೆ

 

ಬದಲಾಗುವುದೆಂದರೆ….

 

ಸಂಜೆ ಮನೆಯಿಂದ ಹೊರಬಂದು

ನಡೆಯುತ್ತಾ ನಡೆಯುತ್ತಾ ನೋಡುತ್ತೇನೆ

ಅದೆಷ್ಟು ಜನ ಕಾಣಿಸುತ್ತಾರೆ

             ಥೇಟ್ ನನ್ನಂತೆಯೇ !

ಹೆಗಲಿಗೊಂದು ಚೀಲ ತಗುಲಿಸಿಕೊಂಡ

ಓಡು ನಡಿಗೆಯ ಅವಳು

ಮೇಲುದೆಯನ್ನು ಜಗ್ಗಿ ಜಗ್ಗಿ

ಸರಿಪಡಿಸಿಕೊಳ್ಳುತ್ತಿದ್ದಾಳೆ

             ಥೇಟ್ ನನ್ನಂತೆಯೇ…

ಬೀದಿಗೆ ಮುಖ ಮಾಡಿದ ಶಿವನ

ಗುಡಿಯೆದುರು ನಿಂತವಳು

ಬಿರಬಿರನೆ ಪ್ರದಕ್ಷಿಣೆ ಹಾಕಿ

ಕಣ್ಮುಚ್ಹಿ ಕೈ ಮುಗಿಯುತ್ತಿದ್ದಾಳೆ

           ಥೇಟ್ ನನ್ನಂತೆಯೇ…

ಸೊಪ್ಪಿನ ಗಾಡಿಯೆದುರು ನಿಂತವಳು

ಒಂದೇ ಒಂದು ದಪ್ಪ ಕಟ್ಟಿನ ಸೊಪ್ಪಿಗೆ

ಗುಡ್ಡೆಯೆಲ್ಲಾ ಕೆದಕಿ ಕಲ್ಲಾಬಿಲ್ಲಿ

ಮಾಡುತ್ತಿದ್ದಾಳೆ

           ಥೇಟ್ ನನ್ನಂತೆಯೇ…

ಹತ್ತು ರುಪಾಯಿಗೆ ಮೂರು

ನಿಂಬೆ ಕೊಳ್ಳಲು ಇವಳು

ಕುಕ್ಕುರುಗಾಲಲ್ಲಿ ಕೂತು

ಬುಟ್ಟಿಯೆಲ್ಲಾ ಬೆದಕುತ್ತಿದ್ದಾಳೆ

            ಥೇಟ್ ನನ್ನಂತೆಯೇ…

ಕೊಂಡ ಅರ್ಧ ಕೇಜಿ ಟೊಮ್ಯಾಟೊ

ಇನ್ನೇನು ಚೀಲಕ್ಕೆ ಬೀಳುವಷ್ಟರಲ್ಲಿ

ಟಪಕ್ಕನೆ ಇನ್ನೊಂದನ್ನು

ಸೇರಿಸಿ ಬೀಗುತ್ತಾಳೆ

            ಥೇಟ್ ನನ್ನಂತೆಯೇ…

ಮಾವಿನಹಣ್ಣ ಗೋಪುರದಲ್ಲಿ

ಚೆಂದ ಕಂಡ ಕಡೇ ಸಾಲಿಗೆ

ಕೈ ಹಾಕಿ ತುಪು ತುಪು ಬೀಳಿಸಿ

ಕಣ್ ಕಣ್ ಬಿಡುತ್ತಾಳೆ

           ಥೇಟ್ ನನ್ನಂತೆಯೇ…

ನಾಳೆಯ ಲಕ್ಷ್ಮೀ ಪೂಜೆಗೆ ಎರಡು

ಮೊಳ ಮಲ್ಲಿಗೆ ಕೊಳ್ಳುವವಳು

ಹೂವಿನವಳ ಮೊಣಕೈಯನ್ನೇ

ಬಿಟ್ಟ ಕಣ್ಣಿಂದ ದಿಟ್ಟಿಸುತ್ತಿದ್ದಾಳೆ

          ಥೇಟ್ ನನ್ನಂತೆಯೇ…

ಪಕ್ಕದ ರಸ್ತೆಗೆ ಹೊರಳಿ ಮಾಲ್ ಬಳಿ ಬಂದರೆ

ಜೀನ್ಸ್ ಚೆಡ್ಡಿ ಸ್ಲೀವ್ಲೆಸ್ ಟಾಪಿನ ಧಡೂತಿ ಹೆಂಗಸು

ಬಿಂದಾಸಾಗಿ ಸಿಗರೇಟ್ ಎಳೆಯುತ್ತಾ

ಮೊಬೈಲ್ನಲ್ಲಿ ಮುಳುಗಿ ಜಗವನ್ನೇ ಮರೆತಿದ್ದಾಳೆ

ಎಂಥದೋ ಗಾಳಿಯೊಂದು

ಮೈ ಹೊಕ್ಕಂತಾಗಿ ಒಬ್ಬಳೇ

ಮೊದಲ ಬಾರಿಗೆ ಪಕ್ಕದ

ಕಾಫಿ ಕೆಫೆಗೆ ನುಗ್ಗಿ

ಕುರ್ಚಿ ಎಳೆದು ಕೂತು

ಕೆಪುಚಿನೊ ತರಹೇಳುತ್ತೇನೆ

ಎರಡೇ ನಿಮಿಷಕ್ಕೆ ಮತ್ತೆ

ಕರೆದು ನನ್ನ ನೆಚ್ಹಿನ

ಫಿಲ್ಟರ್ ಕಾಫಿಗೆ ಆರ್ಡರ್

ಬದಲಾಯಿಸುತ್ತೇನೆ.

 

 

ಸೊಪ್ಪಿನವಳು

 

ನಟ್ಟ ನಡು ಹಗಲು

ಹೊತ್ತು ಮಾರುವ ಸೊಪ್ಪಿನವಳು

ಎದೆಯ ನೋವೆಲ್ಲ ಗಂಟಲಿಗೆ ಬಂದಂತೆ

ಕೂಗೇ ಕೂಗುವಳು ಸೊಪ್ಪಮ್ಮೋ… ಸೊಪ್ಪು..

ಶಭ್ದಗಳ ನಡುವೊಂದು ನಿಶ್ಯಬ್ದ

ಮತ್ತೆ ಒತ್ತರಿಸಿ ಬರುವ ಕೂಗು

ಸೊಪ್ಪಮ್ಮೋ… ಸೊಪ್ಪು..

ನನ್ನೇ ಕರೆದಂತಾಗಿ ಹೊರ ಬಂದು ನೋಡಿದೆ

ಬೆವರಿದ ಮೈ ಕೆದರಿದ ಕೂದಲು

ಹಣೆಯ ಮೇಲೊಂದು ಹಸಿ ಗಾಯ

ಕೈಕೊಟ್ಟು ಬುಟ್ಟಿ ಇಳಿಸುವಾಗ

ಕೇಳಿದ್ದು ಬಳೆಯ ಒಡಕು ನಾದ

ಕೊಟ್ಟ ಕಾಸು ಪಡೆದು

ಗಟಗಟನೆ ನೀರು ಕುಡಿದು

ಕಟ್ಟು ಸೊಪ್ಪು ಮಡಿಲಲಿಟ್ಟು

ಪ್ರಶ್ನೆಗಳ ಉಳಿಸಿ ನನ್ನಲ್ಲೇ

ನಡೆದೇ ಬಿಟ್ಟಳು ನಗುನಗುತ…

ಪೆಚ್ಚಾಗಿ ನಿಂತವಳು ಎಚ್ಚರಾಗಿ

ಒಳಗೆ ಬಂದು ಬಾಗಿಲು ಹಾಕಿದರೆ

ಅವಳ ನಗೆಯ ಘಮಲು ಹೊದ್ದ

ಸೊಪ್ಪಿಗೆ ದಟ್ಟ ನೋವಿನ ವಾಸನೆ.

 

 

ಕಾಫಿ  ಗೀಫಿ

 

ಅಂದು –

ಮದುವೆಗಿನ್ನೂ ತಿಂಗಳು ಕಾಯಬೇಕು

ಭೇಟಿ ಮಾಡಲು ನಮಗೆ ನೆಪ ಬೇಕು

ಕರಿಮಣಿ ಸರಕ್ಕೆ ಹವಳ ಹೊಂದಿಸಬೇಕು

ಪಂಚೆ ಸೀರೆ ಉಡುಗೊರೆ ಕೊಳ್ಳಬೇಕು

ಕರೆಯೋಲೆಯ ಒಪ್ಪ ನೋಡಬೇಕು

ಮದುವೆಗಿನ್ನೂ ತಿಂಗಳು ಕಾಯಬೇಕು

ಚಿಕ್ಕಪೇಟೆಯ ಚಿಕ್ಕ ಹೋಟೆಲಿನಲ್ಲಿ

ಎದುರುಬದುರು ಕೂತು

ಕಾಫಿಗೆ ಹೇಳಿ

ಕಣ್ಣಲ್ಲಿ ಕಣ್ಣಿಟ್ಟು

ಕಾಯಬೇಕು

ಚಪ್ಪರಿಸಿ ಒಬ್ಬರು

ಕಾಫಿ ಹೀರಿದ ಮೇಲೆ

ಕಪ್ಪಿಗಂಟಿದ ಗೀಫಿ

ಜಾರಿ ಹೋಗುವ ಮುನ್ನ

ಇನ್ನೊಬ್ಬರ ತುಟಿಗದು ಸೇರಬೇಕು

ಕಾಫಿಗಿಂತ ನಮಗೆ ಗೀಫಿ ಬೇಕು

ಗೀಫಿಗಾಗಿ ನಮಗೆ ಕಾಫಿ ಬೇಕು

ಇಂದು –

ಮೂರು ದಶಕಗಳು ಕಳೆದರೂ

ಕಾಫಿಯೂ ಇದೆ ಗೀಫಿಯೂ ಇದೆ

ಈಗ ನಮ್ಮ ಕಾಫಿ ಗೀಫಿಗಳು ಬದಲಾಗಿವೆ.

‍ಲೇಖಕರು avadhi

December 8, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Vijayaraghavan Ramakumar

    ಮೋಹನ್ ನೀವು simply terrible. Where do you find them?

    ಪ್ರತಿಕ್ರಿಯೆ
  2. Sudha ChidanandGowd

    ಉಮಾ ಕವಿತೆಗಳು ನಿಜಕ್ಕೂ ಮರುಳುಮಾಡಿದವು.
    ಅಚ್ಚರಿಯನ್ನೂ ಹುಟ್ಟಿಸಿದವು. ಕವಿತೆಗಳು ಇಷ್ಟು simplified ಆಗಿರಲು ಸಾಧ್ಯವೇ.? ಎಂದು. ಸರಳತೆಯೇ ಸೌಂದರ್ಯ ಎಂಬಂತೆ ಸಾರು, ಸೊಪ್ಪು, ನೋವು, ಸಾವುಗಳು ತಳುಕು ಹಾಕಿಕೊಂಡು ಮಿಂಚುತ್ತಿವೆ ಇಲ್ಲ.

    ಕಾವ್ಯದ ಹೊಸ ಪ್ರಯೋಗ ಚೆನ್ನಾಗಿದೆ.

    ಪ್ರತಿಕ್ರಿಯೆ
  3. Girijashastry

    ತುಂಬಾ ಚೆಂದದ ಕವಿತೆಗಳು. ನಮ್ಮ ದೈನಿಕಗಳಂತೆಯೇ ಸರಳ. ಈ ಸರಳತೆಯೇ ನಮ್ಮನ್ನು ತಟ್ಟುತ್ತದೆ. ಕಾಫಿಗಾಗಿ ಹಪಹಪಿಸುವಾಗ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಕುಡಿದ ತೃಪ್ತ ಅನುಭವವಾಗುತ್ತದೆ. ಅಭಿನಂದನೆಗಳು ಉಮಾ.

    ಪ್ರತಿಕ್ರಿಯೆ
  4. ಭಾರತಿ ಬಿ ವಿ

    ವಾಹ್! ಎಂಥ ಚೆಂದದ ಕವಿತೆಗಳು!
    ಮೊದಲನೆಯದರ ಗುಂಗು ಸಧ್ಯಕ್ಕೆ ಇಳಿಯುವುದಿಲ್ಲ
    ಅವಧಿ ಇಂಥ ಐಡಿಯಾಗೆ ನಿಮಗೊಂದು ಥ್ಯಾಂಕ್ಸ್

    ಪ್ರತಿಕ್ರಿಯೆ
  5. ನೂತನ ದೋಶೆಟ್ಟಿ

    ಉಮಾ ಅವರ ಕವಿತೆಗಳು ಸಣ್ಣಗೆ ತಟ್ಟಿ ..ತಣ್ಣಗೆ ಕಳಕಳಿಸುತ್ವವೆ
    ..ಸೊಪ್ಪಿನ ವಾಸನೆಯಲ್ಲಿ ಆಕೆಯ ನೋವು…
    ಥೇಟ್ ನಿನ್ನಂತೆಯೇ…ಬಹುಶ್ಹ ಎಲ್ಲರನ್ನೂ ಕಾಡುತ್ತವೆ..

    ..ನೂತನ ದೋಶೆಟ್ಟಿ

    ಪ್ರತಿಕ್ರಿಯೆ
  6. Pavana Bhoomi

    Wonderful lines ಒಂದಕ್ಕಿಂತ ಒಂದು ಸಾಲು ಎತ್ತಲೋ ಕರೆದೂ ತೂಗಿ ಕಡೆಗೆ ಸಾಲುಗಳಲ್ಲೇ ಕಳೆದುಹೋಗುವಂತೆ ಮಾಡುತ್ತವೆ

    ಪ್ರತಿಕ್ರಿಯೆ
  7. Sindhuchandra hegde

    Kavithegala gucchadinda hecchinadannu ariyabahudhu….Sarala kavithegalu ishtavaadhavu

    ಪ್ರತಿಕ್ರಿಯೆ
  8. Lalitha siddabasavayya

    ಉಮಾ ನಿಮ್ಮ ಕವಿತೆಗಳು ಬಹಳ ಇಷ್ಟವಾದವು

    ಪ್ರತಿಕ್ರಿಯೆ
  9. Renuka manjunath

    ಉಮಾ ನಿಮ್ಮ ಕವಿತೆಗಳು ನನಗೆ ಸದಾ ಮುದ ನೀಡುತ್ತವೆ…..
    ಇಲ್ಲಿ ಹೀಗೆ ಒಂದೇ ಗುಕ್ಕಿಗೆ ಸಿಕ್ಕು ಖುಷಿ , ಬೆರಗು ಮೂಡಿಸಿವೆ….
    ಪುಟ್ಟಕ್ಕನ ಓಲೆ ಯಂತಹ ಮತ್ತಷ್ಟು ಕವಿತೆಗಳನ್ನು ಮರೆಯಲಾರೆ…
    ಹೀಗೇ ಬರೆಯುತ್ತಿರಿ….
    ಅವಧಿಗೆ ಧನ್ಯವಾದಗಳು….

    ಪ್ರತಿಕ್ರಿಯೆ
  10. Asha Hegde

    ಸಣ್ಣ ಪುಟ್ಟ ವಿಷಯಗಳಲ್ಲೂ ಮಾನವೀಯತೆಯನ್ನು ಕಾಣುವ ನಮ್ಮೊಳಗನ್ನು ಚುಚ್ಚು ವ ಉಮಾ ಕವಿತೆಗಳು ನೆನಪಿನಲ್ಲಿ ಉಳಿಯುತ್ತವೆ

    ಪ್ರತಿಕ್ರಿಯೆ
  11. raghav

    ಇದನ್ನು ಓದಿ
    ನಮ್ಮ ಕಥೆಯ ಮೊದಲ ನಾಲ್ಕು ಸಾಲುಗಳೇ ಕಳೆದುಹೋದ ಅರಿವಾಗಿ ಬಾಗಿಲು ತೆರೆದಂತಾಯ್ತು….

    ಪ್ರತಿಕ್ರಿಯೆ
  12. ಶುಭಾ

    ಇಷ್ಟು ಸರಳವಾಗಿ ಪದಗಳನ್ನ ಒಪ್ಪವಾಗಿ ಜೋಡಿಸಿ.. ಒಂದು ಅದ್ಭುತ ಕವಿತಾಮಾಲೆಯನ್ನ ಕೊಟ್ಟಿದ್ದೀರಾ..ಉಮಾ. ‌ನಿಜಕ್ಕೂ..ಮನವನ್ನ ಆಪ್ತವಾಗಿ ಅಪ್ಪುತ್ತವೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: