ಸ್ಮಿತಾ ಅಮೃತರಾಜ್
ಕಾಲೇಜಿನ ಕೊನೇಯ ವರ್ಷ ಡಿಗ್ರಿಯೊಂದನ್ನ ಹೆಸರಿನ ಮುಂದೆ ಅಂಟಿಸಿಕೊಳ್ಳುತ್ತೇವೆಂಬ ಹಮ್ಮನ್ನು ಎದೆಯಲ್ಲಿ ತುಂಬ್ಕೊಳ್ಳುವುದರ ಜೊತೆಗೆ ವರುಷಗಳು ಹೇಗೆ ಸದ್ದಿಲ್ಲದೆ ಸರಿದು ಹೋದವಲ್ಲಾ ಅನ್ನೋ ಹತಾಶೆ ಬೇರೆ.ಈ ನಗು, ಈ ಸಂತಸ, ಉಲ್ಲಾಸ, ಹುರುಪು ಎಲ್ಲವೂ ಕೂಡ ಈ ಕ್ಯಾಂಪಸ್ಸಿನೊಳಗಷ್ಟೇ ಸೀಮಿತ.ಕಾಲೇಜು ಗೇಟು ದಾಟಿದ ನಂತರ ಎಲ್ಲವೂ ಬಂಧಿ ಅನ್ನೋ ಅವ್ಯಕ್ತ ತಳಮಳ ಒಂದು ಕಡೆಯಾದರೆ,ಇನ್ನು ಇಲ್ಲದ ಪ್ರಬುದ್ಧತೆಯನ್ನೆಲ್ಲಾ ತಮ್ಮ ಮೇಲೆ ಆವಾಹಿಸಿಕೊಳ್ಳಬೇಕಾಗುವುದಲ್ಲಾ…ಅನ್ನೋ ಹೇಳಿಕೊಳ್ಳಲಾಗದ ಚಡಪಡಿಕೆಗಳ ಜೊತೆಗೆ ಕಾಲೇಜು ಜೀವನದ ಕೋನೇಯ ದಿನಗಳನ್ನು ಎಣಿಸುತ್ತಿರಬೇಕಾದರೆ ಕಾಲದ ಮುಂದೆ ನಾವೆಷ್ಟು ಅಸಹಾಯಕರು ?ಎಂಬ ವೇದಾಂತ ನಮ್ಮೊಳಗೆ ಅರಿವಿಲ್ಲದೇ ಕೊರೆಯಲು ಶುರು ಮಾಡತೊಡಗಿದಾಗ, ನಮ್ಮಲ್ಲಿ ಮತ್ತೆ ಮನೋಸ್ಥೈರ್ಯ ಮತ್ತು ಜೀವಂತಿಕೆಯನ್ನು ತುಂಬಲೆಂಬಂತೆ ಕಾಲೇಜ್ ಡೇ ಹಾಜರಾಗಿ ಬಿಟ್ಟಿತ್ತು.ಹೊಸ ಧಿರಿಸು, ಸಂಗೀತ, ನೃತ್ಯ ತಾಲೀಮುಗಳ ನಡುವೆ ಕಾಲೇಜು ಡೇ ಪ್ರಯುಕ್ತ ಆಯೋಜಿಸಿದ್ದ ಕವಿತೆ ಸ್ಪರ್ಧೆಯಲ್ಲಿ ಯಾಕೋ ಈ ಸಲ ಭಾಗವಹಿಸಿಯೇ ತೀರಬೇಕೆಂಬ ಆಸೆ ಬಲವಾಗಿ ಬಿಟ್ಟಿತ್ತು.
ಸಂದರ್ಭಕ್ಕೆ ತಕ್ಕ ಹಾಗೆ, ನನ್ನನ್ನ ಬಹುವಾಗಿ ಕಾಡುವ ಕಾಲ ಕಾಯುವುದಿಲ್ಲ ಅನ್ನೋ ಶೀರ್ಷಿಕೆ ಬೇರೆ ಕೊಟ್ಟು ಬಿಟ್ಟಿದ್ದರು. ಏನು ಬರೆಯಬಹುದಪ್ಪಾ..ಅಂತ ತಲೆಕೆಡಿಸಿಲೊಳ್ಳುವ ಪ್ರಮೇಯವೇ ಇಲ್ಲ. ಶಿರೋನಾಮೆಗೆ ಹೊಂದುವಂತೆ ಒಪ್ಪವಾಗಿ ನಾಲ್ಕು ಸಾಲು ಹೆಣೆದು ಕೊಟ್ಟರಾಯಿತಷ್ಟೆ. ಈ ಹಿಂದೆ ಒಂದಕ್ಷರ ಕಥೆ ಕವಿತೆ ಅಂತ ತಲೆಕೆಡಿಸಿಕೊಳ್ಳದವಳು, ಕವಿತೆಯ ಹಿಂದೆ ಸುತ್ತದವಳು ಯಾವುದೋ ಹುಚ್ಚು ಹುಮ್ಮಸ್ಸಿನಿಂದ ಕವಿತೆ ಸ್ಪರ್ಧೆಗೆ ಹೆಸರು ನೋಂದಾಯಿಸಿಬಿಟ್ಟೆ. ತಮಾಷೆಯೆಂದರೆ, ಕವಿತೆ ಅನ್ನೋದು ಎದೆಯಾಳದಿಂದ ಒಸರುವಂತದ್ದು, ತನ್ನಿಂತಾನೆ ಭಾವಗಳು ರೆಕ್ಕೆ ಬಿಚ್ಚಿ ಹಾರಬೇಕಾದದ್ದು ಎಂಬ ಸರಳ ಸತ್ಯವೂ ಕೂಡ ಗೊತ್ತಿಲ್ಲದ ಕಾಲ.ಕವಿತೆ ಬರೆಯ ಬೇಕೆಂಬ ಲಹರಿ ಮನದೊಳಗೆ ಹೊಕ್ಕಿದ್ದೇ ತಡ , ಬಿಡದೇ ಕಾಲೇಜು ಲೈಬ್ರೆರಿಗೆ ಹೋಗಿ ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸುವ ಹಾಗೆ, ಬೇತಾಳನಂತೆ ಬೆನ್ನು ಬಿದ್ದು ಎಲ್ಲಾ ಪತ್ರಿಕೆಗಳನ್ನೊಮ್ಮೆ ತಿರುವಿ ಹಾಕಿ ಕವಿತೆ ಮೇಲೆ ಕಣ್ಣು ಹಾಯಿಸಿದ್ದೂ ಆಯಿತು.ಒಂದೂ ಅರ್ಥವಾಗದೆ ತಲೆಕೆಡಿಸಿಕೊಂಡದ್ದೂ ಆಯಿತು.
ಎಷ್ಟೊಂದು ಉತ್ತರವೇ ಇಲ್ಲದ ಪ್ರಶ್ನೆಗಳು? ಕವಿತೆ ಬರೆಯೋದು ಹೇಗೆ? ಪ್ರಾಸ ಬದ್ಧವಾಗಿದ್ದರೆ ಮಾತ್ರ ಕವಿತೆನಾ? ನಾನು ಬರೆದದ್ದು ಕವಿತೆಯಾಗಬಹುದೇ?ಅಸಲಿಗೆ ಕವಿತೆ ಅಂದರೆ ಏನು? ಒಂದೂ ತರ್ಕಕ್ಕೂ ಸಿಗದೆ ,ನನ್ನ ವ್ಯಾಪ್ತಿಯೊಳಗೂ ದಕ್ಕದೆ ಜಗ್ಗುತ್ತಲೇ ಇತ್ತು. ಅಂತೂ ಇಂತೂ ಹೆಸರು ನೋಂದಾಯಿಸಿಯಾಗಿದೆಯಲ್ಲಾ,ತೋಚಿದ್ದು ಗೀಚಿ ಬರುವುದು. ಆಮೇಲೆ ಕವಿತೆ ಸಹವಾಸವೇ ಬೇಡ ಅಂತ ತೀರ್ಮಾನಿಸಿಕೊಂಡ ಮೇಲೆ, ಎದೆ ಹಗುರವಾಗಿ ಇದೇ ಕವಿತೆ ಅನ್ನೋ ಹಾಗೆ ಸಹಜವಾಗಿ ಉಸಿರಾಡತೊಡಗಿದೆ. ಕಾಲ ಕಾಯುವುದಿಲ್ಲ ಅನ್ನೋ ಶಿರೋನಾಮೆಗೆ ಒಪ್ಪುವ ಹಾಗೆ, ಏನೋ ಅದೂ ಇದೂ ವೇದಾಂತ, ಹರಟೆ, ವಾಚ್ಯ ಎಲ್ಲವನ್ನೂ ಸೇರಿಸಿ, ಅದೇ ತಿರುಳಿಗೆ ಒಗ್ಗುವಂತೆ ಒಂದಷ್ಟು ಹೆಚ್ಚಿಗೇ ಉದ್ದುದ್ದ ಸಾಲು ಬರೆದು, ಅದರ ಕೆಳಗೆ ನೀಟಾಗಿ ನನ್ನ ಹೆಸರು ಬರೆದು,ಪಲಿತಾಂಶದ ಬಗ್ಗೆ ಯಾವ ನಿರೀಕ್ಷೆಯೂ ಇಟ್ಟುಕೊಳ್ಳದೆ ಬಿಡುಗಡೆಯ ಉಸಿರು ಬಿಟ್ಟು ಹೊರಬಂದಿದ್ದೆ.ನನಗಿದ್ದದ್ದು ಒಂದೇ ಅಳುಕು. ನನ್ನ ಕವಿತೆ ಓದಿ ಕನ್ನಡ ಮೇಷ್ಟ್ರು ಎಷ್ಟು ಮುಸಿ ಮುಸಿ ನಗ್ತಾರೋ ಏನೋ ಅಂತ.ಅವರು ಎದುರಿಗೆ ಸಿಕ್ಕಾಗಲೆಲ್ಲಾ ಕಣ್ಣು ತಪ್ಪಿಸಿ ಮರೆಯಲ್ಲಿ ನಡೆದಾಡುವಷ್ಟು ಮನಸ್ಸು ಹಿಂಜರಿಯುತ್ತಿತ್ತು.ಸುಮ್ಮಗೆ ಸುಮ್ಮಗೆ ನಮ್ಮದೇ ಅತಿರೇಕದ ಕಲ್ಪನೆಯಲ್ಲಿ ನಮ್ಮದೇ ಸಂತೋಷವನ್ನ ನಾವು ಹೇಗೆ ಕೊಂದುಕೊಂಡು ಬಿಡುತ್ತೇವೆ.ಕೀಳರಿಮೆಯಿಂದ ನರಳಿಬಿಡುತ್ತೇವೆ?

ಅಚ್ಚರಿ ಎಂದರೆ ಕೆಲ ದಿನ ಕಳೆದು ನೋಡಿದರೆ,ನನ್ನ ಕವಿತೆಗೆ 2ನೇ ಬಹುಮಾನ ದಕ್ಕಿ ಬಿಟ್ಟಿದೆ. ನೋಟೀಸ್ ಬೋರ್ಡಿನ ಮೇಲೆ ನನ್ನ ಹೆಸರು ಕೂಡ ಅಚ್ಚಾಗಿಬಿಟ್ಟಿದೆ.ನಮ್ಮದೇ ಹೆಸರನ್ನ ಈ ರೀತಿಯಾಗಿ ನೋಡುವುದರಲ್ಲಿ ಎಷ್ಟು ಸುಖವಿದೆ ಅಂತ ಮೊದಲ ಭಾರಿಗೆ ಅನುಭವಿಸುವ ಸಂಭ್ರಮ ನನ್ನದು.ವಿಶೇಷ ಎಂದರೆ ಈ ಹಿಂದೆ ಕವಿತೆ ಬರೆದು ಮರಿ ಕವಿಗಳೆಂದು ಹೆಸರು ಗಿಟ್ಟಿಸಿಕೊಂಡವರಿಗೂ ಕೂಡ ಬಹುಮಾನ ಬಂದಿರಲಿಲ್ಲ.ಪದವಿ ಗಿಟ್ಟಿಸಿಕೊಳ್ಳುವ ಮುನ್ನ ಏಕಾ ಏಕಿ ಒಮ್ಮೆಗೇ ಕಾಲೇಜಿನಲ್ಲಿ ನಾ ಕವಿಯೆಂಬ ಪಟ್ಟ ಅನಾಯಾಸವಾಗಿ ಕಟ್ಟಿಕೊಂಡೆ.ನಂಟು ಕಳಚಿಕೊಂಡು ಬಂದವಳು ಮತ್ತೆ ಓಡಿ ಹೋಗಿ ಕವಿತೆಯ ಬಗಲಿಗೆ ಜೋತು ಬಿದ್ದು ಬಿಟ್ಟೆ.
ಈಗ ನೋಡಿದರೆ, ನನ್ನ ನೆರಳಿನಂತೆ ಸದಾ ಅಂಟಿಕೊಂಡು ಹಿಂದೂ ಮುಂದೂ ಬಿಡದೇ ಸುಳಿಯುತ್ತಿದ್ದ ಕವಿತೆ,ಮುನಿಸಿಕೊಂಡಂತೆ ಮೆಲ್ಲಗೆ ಜಾರಿಕೊಂಡು,ನುಣುಚಿಕೊಂಡು ದೂರ ಸರಿಯುವುದ ಕಂಡಾಗಲೆಲ್ಲಾ ನಗುವೂ ದಿಗಿಲೂ ಏಕಕಾಲದಲ್ಲಿ ಹೊಮ್ಮಿ ಒಡಲೊಳಗೊಂದು ನೋವಿನ ಛಳಕು.ಮಡಿಲೊಳಗೆ ಬಂದು ಬಿದ್ದು ಕೊಂಡಾಗಲೆಲ್ಲಾ ,ತೆಕ್ಕೆಗೆ ತೆಗೆದು ,ತಲೆ ನೇವರಿಸಿ ಸರಿಯಾಗಿ ನಡೆಸಿಕೊಳ್ಳದ ನಾನು, ಈಗ ನಿರ್ಲಿಪ್ತವಾಗಿ ನಡೆದುಕೊಂಡು ಹೋಗುತ್ತಿರುವ ಕವಿತೆಯನ್ನ ಓಲೈಸಿ ಬಾ ಎಂದು ಕರೆದರೂ ಒಲ್ಲೆ ಎನ್ನುತ್ತಿದೆ.ಕರೆದೂ,ರಮಿಸಿ ನನಗೂ ಬೇಜಾರು ಹೊಡೆಸುತ್ತಿದೆ.ಈ ಕತೆ,ಕವಿತೆ, ಏಕಾಂತ, ಆಲಾಪ,ದು:ಖ,ವ್ಯಥೆ ಯಾವುದೂ ಶಾಶ್ವತವೂ ಅಲ್ಲ, ಪೂತರ್ಿ ಅಸತ್ಯವೂ ಅಲ್ಲ ಅಂತ ಗೊಂದಲಕ್ಕೆ ಬೀಳುವಾಗ,ಯಾವುದನ್ನೂ ತೀರ ಎಳೆದುಕೊಳ್ಳದೆ ತನ್ನಷ್ಟಕ್ಕೆ ತಾನೇ ಏನೋ ಧೇನಿಸುತ್ತಾ,ಗುನುಗಿಕೊಳ್ಳುತ್ತಾ ಇರಬೇಕು ಅಂತ ಅಂದುಕೊಳ್ಳುತ್ತಿರುವುದೆಲ್ಲಾ ಪ್ರತೀ ಭಾರಿ ಸುಳ್ಳಾಗುತ್ತದೆ.ಈ ಹೂ ಬೆಳಕು,ನವಿರು ಹಗಲು,ನಿಶಾಂತ ಇರುಳು ಹೀಗೇ ಪದರು ಪದರುಗಳಾಗಿ ಬಂದು ಎದೆಯನ್ನು ತೋಯಿಸುತ್ತಿರುವಾಗ ಕವಿತೆಯನ್ನ ಧ್ಯಾನಿಸದೆ ಹೇಗೆ ಇರಲಿ?.ಬಂಧು ಭಾಂದವರ ಯಾರ ಸಾಂಗತ್ಯವೂ ಕವಿತೆಯಷ್ಟು ನಿಖರವೂ ಸಹಜವೂ ಅಲ್ಲ ಅಂತ ಅನ್ನಿಸುವಾಗಲೆಲ್ಲಾ ನಾ ಕವಿತೆಗೆ ದುಂಬಾಲು ಬೀಳುತ್ತೇನೆ.ಹಠಮಾರಿ ಕವಿತೆ ನನಗಿಂತಲೂ ಜಿದ್ದು.ಒತ್ತಾಯ ಬಲವಂತ ಯಾವುದೂ ನನಗೆ ಒಗ್ಗದ ಮಾತು ಅಂತ ಎದೆ ಸೆಟೆಸಿ ನಿಷ್ಠುರವಾಗಿ ನುಡಿದ ಮೇಲೆ ನಾ ತೆಪ್ಪಗಾಗಿ ಮಂಕು ಕವಿದಂತೆ ತಟಸ್ಥಳಾಗಿ ಕುಳಿತಿರುವೆ.ಸುಖವೋ, ದು:ಖವೋ,ತಮಾಷೆಯೋ. ಹತಾಶೆಯೋ ಜೊತೆಗೆ ಕವಿತೆ ಇದ್ದರೆ ಮಾತ್ರ ಬದುಕು ಪ್ರಿಯ ಅಂತನ್ನಿಸುತ್ತಿದೆ.
ಕವಿತೆಗೂ ಅಷ್ಟೆ ,ನಾನೂ ಕವಿತೆಯೂ ಬೇರೆ ಬೇರೆಯಲ್ಲ ಅಂತ ಒಂದೊಮ್ಮೆ ಖಂಡಿತಾ ಅನ್ನಿಸಲೂ ಬಹುದು .ಆಗ ಪದ ಪದಗಳೆಲ್ಲಾ ಹಾದು ಬಂದು ಮೃದುವಾಗಿ ಎದೆಯ ಹೊಸಿಲ ಬಳಿ ನಿಂದಾವು.ಅನ್ಯಮನಸ್ಕತೆಯನ್ನ ನೀಗಲಾದರು ಕವಿತೆ ಬಳಿಸಾರಿ ಬಂದೇ ಬರುವುದೆಂಬ ನಿರೀಕ್ಷೆ. ಬ ಂದಾಕ್ಷಣ ತಡಮಾಡದೆ ಪೋಣಿಸಿ ಹಾಳೆಯ ಹೆರಳಿಗೆ ಜತನದಲಿ ಮುಡಿಸುವ ಹಿಗ್ಗು ನನ್ನದು.







Sanna avadhili Dodda hesaru madida kavi neeve agirbeku smithakka
Smitha avara ee baraha ottu sthree kavyada anubhava, anubhoothi elladara praathinidhika annisuvanthide.
Kavitheye thaanada ee thanmayathe, saadhyathe maththu saathathya. . . . ananya.
“ಕವಿತೆ ಅನ್ನೋದು ಎದೆಯಾಳದಿಂದ ಒಸರುವಂತದ್ದು, ತನ್ನಿಂತಾನೆ ಭಾವಗಳು ರೆಕ್ಕೆ ಬಿಚ್ಚಿ ಹಾರಬೇಕಾದದ್ದು”-ಸುಂದರ ಸಾಲುಗಳ ಈ ಬರಹ ಕವಿತೆಯಂತೆ ಮುದ ನೀಡಿತು.
Nimma bhashege nijakku ondu aakarshane ide smitha! naviraada baraha!
well