ಧನಂಜಯ.ಎನ್.
ನನಗೆ
ಈ ಕವಿಗಳೆಂದರೆ
ಭಯ.
ನೋಡಿ
ಅವರು, ಆ ಭಾವದ ಆಳಕ್ಕೆ
ಎಷ್ಟೆಂದು, ಇಳಿದು
ಏಳುತ್ತಾರೆ !!
ಹಾಗೆ, ಇಳಿದೇಳುವಾಗ
ಅವರನ್ನು
ಯಾರೂ ಸಹ
ಕದಲಿಸಬಾರದು,
ಮಾತೂ ಸಹ..
ಗಿರಿ ಕಣಿವೆಗಳನ್ನು
ಕುಳಿತಲ್ಲೇ ಏರಿ
ಇಳಿದುಬಿಡುತ್ತಾರೆ,
ಕೊಂಚವೂ
ಕದಲದೇ..
ಅತ್ಯಮೂಲ್ಯ ಎನಿಸುವ
ಸ್ವಾತಿ ಮುತ್ತೂ, ಸಹ
ಇವರಿಗೆ
ಅಷ್ಟಕ್ಕಷ್ಟೇ..

ಹಾಗೆ ನೋಡಿದರೆ,
ಅವೆಲ್ಲದರ ಬೆಲೆಯನ್ನೂ
ಬದಿಗೊತ್ತಿ,
ಮಾನ ಕಳೆಯುವಲ್ಲಿ
ಇವರು, ನಿಸ್ಸೀಮರು.
ಆದರೂ, ನನ್ನ
ಆತಂಕ
ಇಷ್ಟಕ್ಕೇ ನಿಲ್ಲುವುದಿಲ್ಲ.
ಬಹುಕಾಲದಲ್ಲಿ
ಪಡೆದು ಗೆಲ್ಲಬೇಕಾದ
ಬದುಕನ್ನ
ಇವರೆಲ್ಲರೂ, ಕುಳಿತಲ್ಲೇ
ಕಳೆದುಬಿಡುತ್ತಾರೆ.
ಕೇಳಿದರೆ, ಅದೆಲ್ಲವೂ
ಭ್ರಮೆ
ಎನ್ನುವ ಸಬೂಬು ಬೇರೆ.
ಕಲ್ಪನೆಯಲಿ ಅರಳಿದ
ಹೂವು
ಅದೆಂಥಾ ಸುವಾಸನೆಯನ್ನು ತಾನೇ
ಬೀರೀತು ??
ಇನ್ನಾದರೂ ಏಳಿ
ಬಯಸಿದೆಲ್ಲವನ್ನೂ
ಬಯಲಲ್ಲಿ ಪಡೆಯಿರಿ,
ಬದುಕು
ಬದುಕಿದಷ್ಟೇ ದಕ್ಕೀತು..!
ಕವಿಗಳೆಂದ್ರೆ ಭಯ ಎನಗೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments